ಸಮ್ರಾಟನ ಆರಾಧನೆಯಿಂದ ಸತ್ಯಾರಾಧನೆಗೆ
ಈಸಾಮೂ ಸೂಗೀಯೂರ ಅವರು ಹೇಳಿದಂತೆ
ಇಸವಿ 1945ರಲ್ಲಿ ಜಪಾನ್ ಎರಡನೆಯ ಜಾಗತಿಕ ಯುದ್ಧದಲ್ಲಿ ಸೋಲನ್ನಪ್ಪುತ್ತಿರುವುದು ಸ್ಪಷ್ಟವಾಗಿ ತೋರಿಬಂದರೂ, ಕಾಮಿಕಾಸೀ (“ದೈವಿಕ ಗಾಳಿ”)ಯು ಬೀಸಿ, ವೈರಿಯನ್ನು ಸೋಲಿಸುವುದೆಂಬ ದೃಢ ಭರವಸೆ ನಮಗಿತ್ತು. ಕಾಮಿಕಾಸೀ 1274 ಮತ್ತು 1281ರಲ್ಲಿ ಬೀಸಿದ ಬಿರುಗಾಳಿಯನ್ನು ಸೂಚಿಸುತ್ತದೆ. ಅದು ಬಿರುಸಾಗಿ ಬೀಸಿದ ಕಾರಣ, ಆಕ್ರಮಿಸುತ್ತಿದ್ದ ಮಂಗೋಲದ ನೌಕಾಸೇನೆಯು ಎರಡು ಬಾರಿ ನಾಶಗೊಂಡು, ಹಿಮ್ಮೆಟ್ಟುವಂತೆ ಅದು ಮಾಡಿತು.
ಆದುದರಿಂದ, ಒಟ್ಟುಗೂಡಿದ ಸೇನೆಗಳಿಗೆ (ಅಲೈಡ್ ಫೋರ್ಸಸ್) ಜಪಾನ್ ಶರಣಾಯಿತೆಂದು, ಸಮ್ರಾಟನಾದ ಹಿರೊಹಿಟೊ ಆಗಸ್ಟ್ 15, 1945ರಂದು ಪ್ರಕಟಿಸಿದಾಗ, ಅವನನ್ನು ಪೂಜಿಸುತ್ತಿದ್ದ ಹತ್ತು ಕೋಟಿಯಷ್ಟು ಜನರ ನಿರೀಕ್ಷೆಗಳು ನುಚ್ಚುನೂರಾದವು. ಆಗ ನಾನು ಶಾಲೆಗೆ ಹೋಗುತ್ತಿದ್ದ ಬಾಲಕನಾಗಿದ್ದೆ. ನನ್ನ ನಿರೀಕ್ಷೆಗಳು ಕೂಡ ನುಚ್ಚುನೂರಾದವು. ‘ಸಮ್ರಾಟನಲ್ಲದೆ ಮತ್ತಾರು ಜೀವಂತ ದೇವರಾಗಿದ್ದಾನೆ? ನಾನು ಯಾರಲ್ಲಿ ಭರವಸೆಯಿಡಬೇಕು?’ ಎಂಬುದಾಗಿ ನಾನು ಯೋಚಿಸತೊಡಗಿದೆ.
ಆದರೆ, ಎರಡನೆಯ ಜಾಗತಿಕ ಯುದ್ಧದಲ್ಲಿ ಜಪಾನಿಗಾದ ಸೋಲು, ಸತ್ಯ ದೇವರಾದ ಯೆಹೋವನ ಕುರಿತು ಕಲಿತುಕೊಳ್ಳಲು ನನಗೂ, ಸಾವಿರಾರು ಇತರ ಜಪಾನಿಯರಿಗೂ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿತು. ನಾನು ಮಾಡಬೇಕಾದ ಬದಲಾವಣೆಗಳ ಕುರಿತು ಹೇಳುವ ಮುಂಚೆ, ನನ್ನ ಧಾರ್ಮಿಕ ಬೆಳವಣಿಗೆಯ ಪರಿಚಯವನ್ನು ನಿಮಗೆ ಮಾಡಿಸುತ್ತೇನೆ.
ಆದಿಯ ಧಾರ್ಮಿಕ ಪ್ರಭಾವಗಳು
ನಾನು ನಗೊಯಾ ನಗರದಲ್ಲಿ ಜೂನ್ 16, 1932ರಂದು ಜನಿಸಿದೆ. ನಾಲ್ವರು ಹುಡುಗರ ಕುಟುಂಬದಲ್ಲಿ ನಾನೇ ಕೊನೆಯವನು. ನನ್ನ ತಂದೆಯು ಆ ನಗರದ ಪರೀಕ್ಷಾಧಿಕಾರಿಯಾಗಿದ್ದರು. ನನ್ನ ತಾಯಿಯು ಶಿಂಟೊ ಧರ್ಮದ ಒಂದು ಪಂಥವಾದ ಟೆನ್ರಿಕ್ಯೋದ ಧರ್ಮನಿಷ್ಠ ವಿಶ್ವಾಸಿಯಾಗಿದ್ದರು. ಮತ್ತು ಒಬ್ಬ ಟೆನ್ರಿಕ್ಯೋ ಶಿಕ್ಷಕನಾಗಿರುವಂತೆ ನನ್ನ ಹಿರಿಯಣ್ಣನು ಧಾರ್ಮಿಕ ತರಬೇತಿಯನ್ನು ಪಡೆದುಕೊಂಡಿದ್ದನು. ನನ್ನ ತಾಯಿ ಮತ್ತು ನಾನು ಬಹಳ ಅನ್ಯೋನ್ಯವಾಗಿದ್ದೆವು, ಮತ್ತು ಅವರು ನನ್ನನ್ನು ಆರಾಧನಾ ಕೂಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
ತಲೆಬಾಗಿಸಿ ಪ್ರಾರ್ಥಿಸುವಂತೆ ನನಗೆ ಕಲಿಸಲಾಯಿತು. ಟೆನ್ರಿ ಓ ನೋ ಮೀಕೊಟೊ ಎಂಬ ಸೃಷ್ಟಿಕರ್ತನಲ್ಲಿ ಮತ್ತು ಕೆಳದರ್ಜೆಯ ಹತ್ತು ದೇವತೆಗಳಲ್ಲಿ ನಂಬಿಕೆಯಿಡುವಂತೆ ಟೆನ್ರಿಕ್ಯೋ ಧರ್ಮವು ಕಲಿಸಿತು. ಅದರ ಸದಸ್ಯರು ಭಕ್ತಿಚಿಕಿತ್ಸೆಯನ್ನು ಪಾಲಿಸಿದರು, ಮತ್ತು ಇತರರಿಗೆ ಸೇವೆಸಲ್ಲಿಸುವುದನ್ನು ಹಾಗೂ ಟೆನ್ರಿಕ್ಯೋ ಧರ್ಮದ ನಂಬಿಕೆಗಳನ್ನು ಪ್ರಚುರಪಡಿಸುವುದನ್ನು ಒತ್ತಿಹೇಳಿದರು.
ಒಬ್ಬ ಹುಡುಗನೋಪಾದಿ, ನಾನು ತುಂಬ ಕುತೂಹಲ ಪ್ರವೃತ್ತಿಯುಳ್ಳವನಾಗಿದ್ದೆ. ರಾತ್ರಿಯ ವೇಳೆ ನಾನು ನೋಡುತ್ತಿದ್ದ ಚಂದ್ರ ಮತ್ತು ಅಗಣಿತ ನಕ್ಷತ್ರಗಳಿಂದ ಬೆರಗುಗೊಂಡು, ಆಕಾಶದ ಆಚೆ ಅಂತರಿಕ್ಷವು ಎಷ್ಟು ದೂರದ ವರೆಗೆ ವ್ಯಾಪಿಸಿದೆ ಎಂದು ಕುತೂಹಲಪಟ್ಟೆ. ಹಿತ್ತಲಿನ ಒಂದು ಸಣ್ಣ ಜಾಗದಲ್ಲಿ ನಾನು ನೆಟ್ಟಿದ್ದ ಬದನೆಕಾಯಿ ಹಾಗೂ ಸೌತೆಕಾಯಿ ಗಿಡಗಳ ಬೆಳವಣಿಗೆಯನ್ನು ಗಮನಿಸುವುದು ಆಶ್ಚರ್ಯಕರವಾಗಿತ್ತು. ನಿಸರ್ಗದ ವೀಕ್ಷಣೆಯು, ದೇವರಲ್ಲಿನ ನನ್ನ ನಂಬಿಕೆಯನ್ನು ಬಲಪಡಿಸಿತು.
ಯುದ್ಧದ ವರ್ಷಗಳು
ನನ್ನ ಪ್ರಾಥಮಿಕ ಶಾಲಾಭ್ಯಾಸವು ಮತ್ತು ಎರಡನೆಯ ಜಾಗತಿಕ ಯುದ್ಧವು ಒಂದೇ ಸಮಯಾವಧಿಯಲ್ಲಿ, ಅಂದರೆ, 1939ರಿಂದ 1945ರ ಅವಧಿಯಲ್ಲಿ ನಡೆಯಿತು. ಶಿಂಟೊ ಧರ್ಮದ ಒಂದು ಪ್ರಮುಖ ಭಾಗವಾಗಿದ್ದ ಸಮ್ರಾಟನ ಆರಾಧನೆಗೆ ನಮ್ಮ ಶಾಲಾ ಶಿಕ್ಷಣದಲ್ಲಿ ಅತ್ಯುನ್ನತ ಸ್ಥಾನವಿತ್ತು. ನಮಗೆ ಶೂಸೀನ್ನಲ್ಲಿ ಉಪದೇಶ ನೀಡಲಾಯಿತು. ಇದು, ರಾಷ್ಟ್ರೀಯ ಹಾಗೂ ಮಿಲಿಟರಿ ವಿಷಯಗಳನ್ನೊಳಗೊಂಡ ನೀತಿಶಾಸ್ತ್ರದ ಬೋಧನೆಯಾಗಿತ್ತು. ಧ್ವಜಾರೋಹಣದ ಸಮಾರಂಭಗಳು, ರಾಷ್ಟ್ರ ಗೀತೆಯ ಹಾಡುವಿಕೆ, ಚಕ್ರಾಧಿಪತ್ಯದ ಕಟ್ಟಳೆಯ ಅಧ್ಯಯನ, ಸಮ್ರಾಟನ ಚಿತ್ರಪಟಕ್ಕೆ ಗೌರವಸಲ್ಲಿಸುವುದು, ನಮ್ಮ ಶಾಲಾ ದಿನಚರಿಯ ಭಾಗವಾಗಿತ್ತು.
ಚಕ್ರಾಧಿಪತ್ಯದ ಸೇನೆಯ ಗೆಲುವಿಗಾಗಿ ದೇವರಲ್ಲಿ ಬೇಡಿಕೊಳ್ಳಲು ನಾವು ಸ್ಥಾನೀಯ ಶಿಂಟೊ ದೇವಸ್ಥಾನಕ್ಕೂ ಹೋಗುತ್ತಿದ್ದೆವು. ನನ್ನ ಅಣ್ಣಂದಿರಲ್ಲಿ ಇಬ್ಬರು ಮಿಲಿಟರಿಯಲ್ಲಿ ಸೇವೆಸಲ್ಲಿಸುತ್ತಿದ್ದರು. ನನ್ನ ರಾಷ್ಟ್ರೀಯ-ಧಾರ್ಮಿಕ ಶಿಕ್ಷಣದ ಕಾರಣ, ಜಪಾನಿನ ಸೇನೆಯ ಗೆಲುವುಗಳಲ್ಲಿ ನಾನು ಆನಂದಿಸಿದೆ.
ಜಪಾನಿನ ವಿಮಾನ ಉದ್ಯಮದ ಕೇಂದ್ರಸ್ಥಾನ ನಗೊಯಾ ಆಗಿತ್ತು. ಆದಕಾರಣ, ಅದು ಅಮೆರಿಕದ ವಾಯುದಳದ ಭಾರಿ ದಾಳಿಗಳ ಮುಖ್ಯ ಸ್ಥಾನವಾಗಿತ್ತು. ಹಗಲಿನಲ್ಲಿ, ಬಿ-29 ಸೂಪರ್ಫೋರ್ಟ್ರಸ್ ಬಾಂಬಿನ ವಿಮಾನಗಳು, ಔದ್ಯೋಗಿಕ ಕ್ಷೇತ್ರದ ಮೇಲೆ ನೂರಾರು ಟನ್ನುಗಳಷ್ಟು ಬಾಂಬುಗಳನ್ನು ಹಾಕುತ್ತಾ, ಸುಮಾರು 30,000 ಅಡಿಗಳಷ್ಟು ಎತ್ತರದಲ್ಲಿ ಹಾರಿದವು. ಆದರೆ ರಾತ್ರಿಯಲ್ಲಿ ಅವು 4,500 ಅಡಿಗಳಷ್ಟು ಕಡಿಮೆ ಎತ್ತರದಲ್ಲಿ ಹಾರಿದವೆಂದು ತಿಳಿದುಬಂದಿತು. ಸತತವಾದ ವಾಯು ದಾಳಿಗಳು, ವಾಸದ ಕ್ಷೇತ್ರಗಳನ್ನು ಬೆಂಕಿಯ ನರಕಗಳನ್ನಾಗಿ ಮಾಡಿದವು. ಯುದ್ಧದ ಕೊನೆಯ ಒಂಬತ್ತು ತಿಂಗಳುಗಳ ಅವಧಿಯಲ್ಲಿ ನಗೊಯಾ ಕ್ಷೇತ್ರದಲ್ಲಿ ಮಾತ್ರ 54 ವಾಯು ದಾಳಿಗಳು ಸಂಭವಿಸಿದ ಕಾರಣ, ಬಹಳಷ್ಟು ಕಷ್ಟಾನುಭವದ ಜೊತೆಗೆ, 7,700ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದರು.
ಆ ಸಮಯದೊಳಗಾಗಿ, ಕಡಲ ತೀರದಲ್ಲಿದ್ದ ಹತ್ತು ನಗರಗಳ ಮೇಲೆ ಯುದ್ಧದ ನೌಕೆಗಳು ದಾಳಿಮಾಡುವುದನ್ನು ಆರಂಭಿಸಿದ್ದವು. ಮತ್ತು ಟೋಕಿಯೊದ ಬಳಿ ಅಮೆರಿಕದ ಸೇನೆಗಳು ಬಂದು ನೆಲೆಸುವ ಸಾಧ್ಯತೆಯ ಕುರಿತು ಜನರು ಮಾತನಾಡಿಕೊಳ್ಳುತ್ತಿದ್ದರು. ದೇಶವನ್ನು ರಕ್ಷಿಸುವ ಸಲುವಾಗಿ, ಬಿದಿರಿನ ಈಟಿಗಳಿಂದ ಹೋರಾಡುವಂತೆ ಸ್ತ್ರೀಯರಿಗೆ ಮತ್ತು ಯುವಕರಿಗೆ ಕಲಿಸಲಾಯಿತು. ನಮ್ಮ ಧ್ಯೇಯಮಂತ್ರವು “ಈಚೀವೋಕೂ ಸೊಗ್ಯೊಕೂಸೀ” ಆಗಿತ್ತು, ಅಂದರೆ “ಶರಣಾಗತಿಗಿಂತ ಸಾವೇ ಲೇಸು.”
ಆಗಸ್ಟ್ 7, 1945ರಂದು, “ಹಿರೋಶೀಮದ ಮೇಲೆ ಹೊಸ ರೀತಿಯ ಬಾಂಬ್ ಹಾಕಲಾಗಿದೆ” ಎಂಬ ತಲೆಬರಹವನ್ನು ಒಂದು ವಾರ್ತಾಪತ್ರಿಕೆಯು ವರದಿಸಿತು. ಎರಡು ದಿನಗಳ ತರುವಾಯ, ಮತ್ತೊಂದು ಬಾಂಬ್ ಅನ್ನು ನಾಗಾಸಾಕಿಯ ಮೇಲೆ ಹಾಕಲಾಯಿತು. ಇವು ಅಣು ಬಾಂಬುಗಳಾಗಿದ್ದು, 3,00,000ಕ್ಕಿಂತಲೂ ಹೆಚ್ಚಿನ ಜೀವಗಳನ್ನು ಬಲಿಯಾಗಿ ತೆಗೆದುಕೊಂಡವೆಂದು ತದನಂತರ ನಮಗೆ ಹೇಳಲಾಯಿತು. ಆ ಬಳಿಕ, ಆಗಸ್ಟ್ 15ರಂದು, ನಮ್ಮ ಶಿಸ್ತಿನ ನಡಿಗೆಯ ಕೊನೆಯಲ್ಲಿ ನಾವು ಸಮ್ರಾಟನ ಭಾಷಣವನ್ನು ಕೇಳಿಸಿಕೊಂಡೆವು. ಅದರಲ್ಲಿ ಅವನು ಜಪಾನಿನ ಶರಣಾಗತಿಯನ್ನು ಪ್ರಕಟಿಸಿದನು. ನಾವು ಜಯಸಾಧಿಸುವೆವೆಂದು ದೃಢವಾಗಿ ನಂಬಿದ್ದೆವು, ಆದರೆ ಈಗ ನಮ್ಮ ನಿರೀಕ್ಷೆಗಳು ನುಚ್ಚುನೂರಾಗಿದ್ದವು!
ಒಂದು ನವೀನ ನಿರೀಕ್ಷೆಯು ಬೆಳೆದುಕೊಳ್ಳುತ್ತದೆ
ಅಮೆರಿಕದ ಸೈನಿಕರು ದೇಶವನ್ನು ಸ್ವಾಧೀನಪಡಿಸಿಕೊಂಡಂತೆ, ಅಮೆರಿಕವು ಯುದ್ಧದಲ್ಲಿ ಗೆಲುವನ್ನು ಪಡೆದಿತ್ತು ಎಂಬ ವಾಸ್ತವಾಂಶವನ್ನು ನಾವು ಅಂಗೀಕರಿಸಿದೆವು. ಜಪಾನಿನಲ್ಲಿ ಪ್ರಜಾಪ್ರಭುತ್ವವು ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ನೀಡಿದ ಒಂದು ಹೊಸ ಸಂವಿಧಾನವು ಜಾರಿಗೆ ಬಂದಿತು. ಪರಿಸ್ಥಿತಿಗಳು ತೀರ ಗಂಭೀರವಾಗಿದ್ದವು ಮತ್ತು ಆಹಾರದ ಅಭಾವವಿದ್ದ ಕಾರಣ 1946ರಲ್ಲಿ ನನ್ನ ತಂದೆಯವರು ನ್ಯೂನಪೋಷಣೆಯಿಂದಾಗಿ ತೀರಿಕೊಂಡರು.
ಈ ಮಧ್ಯೆ, ನಾನು ಹೋಗುತ್ತಿದ್ದ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸಲಾರಂಭಿಸಿದರು, ಮತ್ತು ಅದೇ ಸಮಯದಲ್ಲಿ ಎನ್ಏಚ್ಕೆ ರೇಡಿಯೊ ಕೇಂದ್ರವು ಇಂಗ್ಲಿಷ್ ಸಂಭಾಷಣಾ ಕಾರ್ಯಕ್ರಮವನ್ನು ಆರಂಭಿಸಿತು. ಐದು ವರ್ಷಗಳ ಕಾಲ, ನಾನು ಪ್ರತಿದಿನವೂ ಕೈಯಲ್ಲಿ ಪಠ್ಯಪುಸ್ತಕವನ್ನು ಹಿಡಿದುಕೊಂಡು ಈ ಜನಪ್ರಿಯ ಕಾರ್ಯಕ್ರಮಕ್ಕೆ ಕಿವಿಗೊಡುತ್ತಿದ್ದೆ. ಇದು ಒಂದಾನೊಂದು ದಿನ ಅಮೆರಿಕಕ್ಕೆ ಹೋಗುವ ಆಸೆಯನ್ನು ನನ್ನಲ್ಲಿ ಮೂಡಿಸಿತು. ಶಿಂಟೊ ಹಾಗೂ ಭೌದ್ಧ ಧರ್ಮದಿಂದಾದ ನಿರಾಶೆಯ ಕಾರಣ, ಪಾಶ್ಚಿಮಾತ್ಯ ಧರ್ಮಗಳಲ್ಲಿ ದೇವರ ಕುರಿತಾದ ಸತ್ಯವನ್ನು ಕಂಡುಕೊಳ್ಳಬಹುದೇನೊ ಎಂದು ನಾನು ವಿಚಾರಿಸತೊಡಗಿದೆ.
ಇಸವಿ 1951, ಏಪ್ರಿಲ್ ತಿಂಗಳಿನ ಆದಿಭಾಗದಲ್ಲಿ, ವಾಚ್ ಟವರ್ ಸೊಸೈಟಿಯ ಮಿಷನೆರಿಯಾದ ಗ್ರೇಸ್ ಗ್ರೆಗರಿಯನ್ನು ನಾನು ಸಂಧಿಸಿದೆ. ಅವರು ನಗೊಯಾ ರೈಲು ನಿಲ್ದಾಣದ ಮುಂದೆ ನಿಂತುಕೊಂಡು, ವಾಚ್ಟವರ್ ಪತ್ರಿಕೆಯ ಇಂಗ್ಲಿಷ್ ಪ್ರತಿಯನ್ನು ಮತ್ತು ಒಂದು ಬೈಬಲ್ ವಿಷಯವನ್ನು ಚರ್ಚಿಸಿದ ಜ್ಯಾಪನೀಸ್ ಪುಸ್ತಿಕೆಯನ್ನು ನೀಡುತ್ತಿದ್ದರು. ಇಂತಹ ಕೆಲಸವನ್ನು ಮಾಡಲು ಅವರಲ್ಲಿದ್ದ ದೀನಭಾವವನ್ನು ಕಂಡು ನಾನು ಪ್ರಭಾವಿತನಾದೆ. ನಾನು ಎರಡೂ ಪ್ರಕಾಶನಗಳನ್ನು ಪಡೆದುಕೊಂಡು, ಬೈಬಲ್ ಅಧ್ಯಯನದ ಅವರ ನೀಡಿಕೆಗೆ ಮನಃಪೂರ್ವಕವಾಗಿ ಒಪ್ಪಿಕೊಂಡೆ. ಕೆಲವು ದಿನಗಳ ತರುವಾಯ ಬೈಬಲ್ ಅಧ್ಯಯನಕ್ಕಾಗಿ ಅವರ ಮನೆಗೆ ಬರುತ್ತೇನೆಂದು ನಾನು ಮಾತುಕೊಟ್ಟೆ.
ನಾನು ರೈಲಿನಲ್ಲಿ ಕುಳಿತುಕೊಂಡು, ವಾಚ್ಟವರ್ ಪತ್ರಿಕೆಯನ್ನು ಓದುತ್ತಿದ್ದಂತೆಯೇ, ಆರಂಭದ ಲೇಖನದಲ್ಲಿದ್ದ “ಯೆಹೋವ” ಎಂಬ ಪ್ರಥಮ ಶಬ್ದವು ನನ್ನ ಕಣ್ಸೆಳೆಯಿತು. ಆ ಹೆಸರನ್ನು ನಾನು ಈ ಮೊದಲು ಎಲ್ಲಿಯೂ ನೋಡಿರಲಿಲ್ಲ. ನನ್ನಲ್ಲಿದ್ದ ಚಿಕ್ಕದಾದ ಇಂಗ್ಲಿಷ್-ಜ್ಯಾಪನೀಸ್ ಶಬ್ದಕೋಶದಲ್ಲಿ ಈ ಶಬ್ದವು ಇರಲಾರದೆಂದು ನಾನು ನೆನಸಿದೆನಾದರೂ, ಆ ಶಬ್ದವು ಅದರಲ್ಲಿತ್ತು! “ಯೆಹೋವ . . . , ಬೈಬಲಿನ ದೇವರು” ಎಂಬ ಅರ್ಥ ಅದಕ್ಕಿತ್ತು. ಈಗ ನಾನು ಕ್ರೈಸ್ತತ್ವದ ದೇವರ ಕುರಿತು ತಿಳಿದುಕೊಳ್ಳಲು ತೊಡಗಿದ್ದೆ!
ಆ ದಿನ ನಾನು ಪ್ರಥಮ ಬಾರಿ ಮಿಷನೆರಿ ಮನೆಗೆ ಹೋದಾಗ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಅಧ್ಯಕ್ಷರಾದ ನೇಥನ್ ಏಚ್. ನಾರ್ ಅವರಿಂದ ಕೆಲವು ವಾರಗಳ ತರುವಾಯ ನೀಡಲ್ಪಡಲಿದ್ದ ಒಂದು ಬೈಬಲ್ ಉಪನ್ಯಾಸದ ಕುರಿತು ನಾನು ತಿಳಿದುಕೊಂಡೆ. ಅವರು ತಮ್ಮ ಸೆಕ್ರಿಟರಿಯಾದ ಮಿಲ್ಟನ್ ಹೆಂಶೆಲ್ ಅವರೊಂದಿಗೆ ಜಪಾನ್ಗೆ ಭೇಟಿನೀಡುತ್ತಿದ್ದರು, ಮತ್ತು ನಗೊಯಾವನ್ನೂ ಸಂದರ್ಶಿಸಲಿದ್ದರು. ನನ್ನ ಬೈಬಲ್ ಜ್ಞಾನವು ಸೀಮಿತವಾಗಿದ್ದರೂ, ಆ ಭಾಷಣ ನನಗೆ ಬಹಳ ಇಷ್ಟವಾಯಿತು. ಮತ್ತು ಹಾಜರಾಗಿದ್ದ ಮಿಷನೆರಿಗಳು ಹಾಗೂ ಇತರರ ಸಹವಾಸದಲ್ಲಿ ನಾನು ಬಹಳವಾಗಿ ಆನಂದಿಸಿದೆ.
ಗ್ರೇಸ್ ನನ್ನೊಂದಿಗೆ ನಡೆಸುತ್ತಿದ್ದ ಅಧ್ಯಯನಗಳ ಕಾರಣ ನಾನು ಸುಮಾರು ಎರಡು ತಿಂಗಳುಗಳೊಳಗೆ, ಯೆಹೋವ, ಯೇಸು ಕ್ರಿಸ್ತನು, ಪ್ರಾಯಶ್ಚಿತ್ತ, ಪಿಶಾಚನಾದ ಸೈತಾನನು, ಅರ್ಮಗೆದೋನ್ ಮತ್ತು ಪ್ರಮೋದವನ ಭೂಮಿಯ ಕುರಿತಾದ ಮೂಲಭೂತ ಸತ್ಯಗಳನ್ನು ಕಲಿತುಕೊಂಡೆ. ನಾನು ಹುಡುಕುತ್ತಿದ್ದ ರಾಜ್ಯದ ಸುವಾರ್ತೆಯು ಅದೇ ಆಗಿತ್ತು. ನಾನು ಅಧ್ಯಯನ ಮಾಡಲು ಆರಂಭಿಸಿದ ಸಮಯದಿಂದಲೇ ಸಭಾ ಕೂಟಗಳಿಗೂ ಹಾಜರಾಗತೊಡಗಿದೆ. ಆ ಕೂಟಗಳಲ್ಲಿ ಕಂಡುಬರುವ ಸ್ನೇಹಪರ ವಾತಾವರಣ ನನಗೆ ಇಷ್ಟವಾಯಿತು. ಅಲ್ಲಿ ಮಿಷನೆರಿಗಳು ಜಪಾನಿನ ಜನರೊಂದಿಗೆ ಮುಕ್ತವಾಗಿ ಬೆರೆತು, ನಮ್ಮೊಂದಿಗೆ ಟಾಟಾಮಿ (ಹೆಣೆಯಲ್ಪಟ್ಟ ಚಾಪೆಗಳು)ಯ ಮೇಲೆ ಕುಳಿತುಕೊಳ್ಳುತ್ತಿದ್ದರು.
ಅಕ್ಟೋಬರ್ 1951ರಲ್ಲಿ, ಓಸಾಕಾ ನಗರದ ನಾಕಾನೊಶೀಮ ಸಾರ್ವಜನಿಕ ಸಭಾಂಗಣದಲ್ಲಿ ಜಪಾನಿನ ಪ್ರಪ್ರಥಮ ಸರ್ಕಿಟ್ ಸಮ್ಮೇಳನವು ನಡೆಯಿತು. ಜಪಾನಿನ ಆದ್ಯಂತ 300ಕ್ಕಿಂತಲೂ ಕಡಿಮೆ ಸಾಕ್ಷಿಗಳಿದ್ದರೂ, ಸುಮಾರು 300 ಜನರು ಸಮ್ಮೇಳನಕ್ಕೆ ಹಾಜರಾದರು. ಅವರಲ್ಲಿ 50 ಮಿಷನೆರಿಗಳಿದ್ದರು. ಕಾರ್ಯಕ್ರಮದಲ್ಲಿ ನನಗೊಂದು ಸಣ್ಣ ಭಾಗವಿತ್ತು. ನಾನು ಆಲಿಸಿದ ಮತ್ತು ನೋಡಿದ ವಿಷಯಗಳಿಂದ ಎಷ್ಟು ಪ್ರಭಾವಿತನಾದೆನೆಂದರೆ, ಸಾಯುವ ತನಕವೂ ಯೆಹೋವನಿಗೆ ಸೇವೆಸಲ್ಲಿಸಲು ನಾನು ನಿರ್ಧರಿಸಿದೆ. ಮರುದಿನ, ಹತ್ತಿರವಿದ್ದ ಸಾರ್ವಜನಿಕ ಕೊಳದ ಉಗುರುಬೆಚ್ಚನೆಯ ನೀರಿನಲ್ಲಿ ನನಗೆ ದೀಕ್ಷಾಸ್ನಾನವಾಯಿತು.
ಪಯನೀಯರ್ ಸೇವೆಯ ಆನಂದ
ನಾನೊಬ್ಬ ಪಯನೀಯರನಾಗಲು ಬಯಸಿದೆ. ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರು ಹಾಗೆಂದು ಕರೆಯಲ್ಪಡುತ್ತಾರೆ. ಆದರೆ ನನ್ನ ಕುಟುಂಬಕ್ಕೆ ಬೆಂಬಲವನ್ನು ನೀಡುವ ನನ್ನ ಕರ್ತವ್ಯದ ಭಾವನೆಯೂ ನನ್ನಲ್ಲಿ ಮೂಡಿತು. ನನ್ನ ಅಪೇಕ್ಷೆಯ ಕುರಿತು ನನ್ನ ಯಜಮಾನನಲ್ಲಿ ಹೇಳಿಕೊಳ್ಳುವ ಧೈರ್ಯಮಾಡಿದಾಗ, “ನಿನಗೆ ಅದು ಸಂತೋಷವನ್ನು ತರುವುದಾದರೆ, ಸಹಕರಿಸಲು ನಾನು ಬಯಸುವೆ” ಎಂಬುದಾಗಿ ಅವರು ಹೇಳಿದ್ದನ್ನು ಕೇಳಿ ನನಗೆ ತುಂಬ ಆಶ್ಚರ್ಯವಾಯಿತು. ನಾನು ವಾರಕ್ಕೆ ಎರಡು ದಿನಗಳು ಮಾತ್ರ ಕೆಲಸಮಾಡಿದರೂ, ಮನೆಯ ವೆಚ್ಚಗಳಿಗೆ ತಾಯಿಗೆ ಧನಸಹಾಯ ಮಾಡಲು ಆಗಲೂ ನನಗೆ ಸಾಧ್ಯವಾಯಿತು. ಪಂಜರದಿಂದ ಬಿಡುಗಡೆ ಮಾಡಲ್ಪಟ್ಟ ಹಕ್ಕಿಯಂತೆ ನನಗೆ ಭಾಸವಾಯಿತು.
ಪರಿಸ್ಥಿತಿಗಳು ಉತ್ತಮಗೊಂಡಂತೆ, ನಾನು 1954, ಆಗಸ್ಟ್ 1ರಂದು ಪಯನೀಯರ್ ಸೇವೆಯನ್ನು ಆರಂಭಿಸಿದೆ. ನನ್ನ ಟೆರಿಟೊರಿಯು, ನಾನು ಗ್ರೇಸ್ ಅವರನ್ನು ಪ್ರಥಮ ಬಾರಿ ಭೇಟಿಮಾಡಿದ್ದ ಸ್ಥಳದಿಂದ ಕೆಲವು ನಿಮಿಷಗಳ ನಡಿಗೆ, ಅಂದರೆ ನಗೊಯಾ ರೈಲು ನಿಲ್ದಾಣದ ಹಿಂಭಾಗದ ಕ್ಷೇತ್ರವಾಗಿತ್ತು. ಹಲವಾರು ತಿಂಗಳುಗಳ ತರುವಾಯ, ಕ್ಯೂಶೂವಿನ ಪಶ್ಚಿಮ ದ್ವೀಪದಲ್ಲಿನ ಒಂದು ನಗರವಾದ ಬೆಪ್ಪು ಎಂಬ ಸ್ಥಳದಲ್ಲಿ ವಿಶೇಷ ಪಯನೀಯರನೋಪಾದಿ ಸೇವೆಸಲ್ಲಿಸುವ ನೇಮಕ ನನಗೆ ಸಿಕ್ಕಿತು. ಟೂಸ್ಟೊಮೂ ಮೀಯೂರ ನನ್ನ ಪಯನೀಯರ್ ಸಂಗಾತಿ ಆಗಿದ್ದರು.a ಆ ಸಮಯದಲ್ಲಿ ಆ ದ್ವೀಪದ ಆದ್ಯಂತ ಯೆಹೋವನ ಸಾಕ್ಷಿಗಳ ಯಾವ ಸಭೆಯೂ ಇರಲಿಲ್ಲ. ಈಗ ಅಲ್ಲಿ ನೂರಾರು ಸಭೆಗಳಿದ್ದು, ಅವು 22 ಸರ್ಕಿಟ್ಗಳಾಗಿ ಪ್ರತ್ಯೇಕಿಸಲ್ಪಟ್ಟಿವೆ!
ಹೊಸ ಲೋಕದ ಪೂರ್ವಾನುಭವ
ಸಹೋದರ ನಾರ್ ಜಪಾನ್ ಅನ್ನು ಪುನಃ ಏಪ್ರಿಲ್ 1956ರಲ್ಲಿ ಸಂದರ್ಶಿಸಿದಾಗ, ಇಂಗ್ಲಿಷ್ ವಾಚ್ಟವರ್ ಪತ್ರಿಕೆಯಿಂದ ಕೆಲವೊಂದು ಪ್ಯಾರಗ್ರಾಫ್ಗಳನ್ನು ಗಟ್ಟಿಯಾಗಿ ಓದುವಂತೆ ನನ್ನನ್ನು ಕೇಳಿಕೊಂಡರು. ಯಾವ ಕಾರಣಕ್ಕಾಗಿ ಎಂಬುದನ್ನು ನನಗೆ ತಿಳಿಸಲಿಲ್ಲವಾದರೂ, ಕೆಲವು ತಿಂಗಳ ತರುವಾಯ ಗಿಲ್ಯಡ್ ಮಿಷನೆರಿ ಶಾಲೆಯ 29ನೆಯ ತರಗತಿಗೆ ಹಾಜರಾಗುವ ಆಮಂತ್ರಣಾ ಪತ್ರವು ನನಗೆ ಸಿಕ್ಕಿತು. ಆ ವರ್ಷದ ನವೆಂಬರ್ ತಿಂಗಳಿನಲ್ಲಿ, ನಾನು ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ. ನನ್ನ ದೀರ್ಫಕಾಲದ ಕನಸು ನನಸಾಯಿತು. ದೊಡ್ದದಾದ ಬ್ರೂಕ್ಲಿನ್ ಬೆತೆಲ್ ಕುಟುಂಬದವರೊಂದಿಗೆ ಇದ್ದು, ಕೆಲವು ತಿಂಗಳುಗಳ ವರೆಗೆ ಕೆಲಸಮಾಡಿದ ಕಾರಣ, ಯೆಹೋವನ ದೃಶ್ಯ ಸಂಸ್ಥೆಯಲ್ಲಿನ ನನ್ನ ನಂಬಿಕೆಯು ಬಲಗೊಂಡಿತು.
ಫೆಬ್ರವರಿ 1957ರಲ್ಲಿ, ಸಹೋದರ ನಾರ್ ನಮ್ಮಲ್ಲಿ ಮೂವರು ವಿದ್ಯಾರ್ಥಿಗಳನ್ನು, ನ್ಯೂ ಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿರುವ ಗಿಲ್ಯಡ್ ಶಾಲೆಗೆ ಕರೆದುಕೊಂಡು ಹೋದರು. ಮುಂದೆ ಗಿಲ್ಯಡ್ ಶಾಲೆಯಲ್ಲಿ ಕಳೆದ ಐದು ತಿಂಗಳುಗಳ ಕಾಲ ನಾನು ಯೆಹೋವನ ವಾಕ್ಯದಿಂದ ಉಪದೇಶವನ್ನು ಪಡೆದಂತೆ ಮತ್ತು ಜೊತೆ ವಿದ್ಯಾರ್ಥಿಗಳೊಂದಿಗೆ ಸುಂದರವಾದ ಪರಿಸರದಲ್ಲಿ ಜೀವಿಸಿದಂತೆ, ನನಗೆ ಪ್ರಮೋದವನ ಭೂಮಿಯ ಪೂರ್ವಾನುಭವವು ಆಯಿತು. ನನ್ನನ್ನೂ ಸೇರಿಸಿ, 103 ವಿದ್ಯಾರ್ಥಿಗಳಲ್ಲಿ ಹತ್ತು ಮಂದಿ ಜಪಾನಿಗೆ ನೇಮಿಸಲ್ಪಟ್ಟರು.
ನನ್ನ ನೇಮಕಾತಿಗಳ ಕಡೆಗೆ ಗಣ್ಯತೆಯನ್ನು ತೋರಿಸುವುದು
ನಾನು ಅಕ್ಟೋಬರ್ 1957ರಲ್ಲಿ ಜಪಾನಿಗೆ ಹಿಂದಿರುಗಿದಾಗ, ಸುಮಾರು 860 ಸಾಕ್ಷಿಗಳಿದ್ದರು. ಸರ್ಕಿಟ್ ಮೇಲ್ವಿಚಾರಕನ ನೇಮಕಾತಿ ನನಗೆ ಸಿಕ್ಕಿತಾದರೂ, ಮೊದಲು ಆ ಕೆಲಸಕ್ಕಾಗಿ ನಗೊಯಾದಲ್ಲಿದ್ದ ಆ್ಯಡ್ರಿಯನ್ ಥಾಂಪ್ಸನ್ ಅವರಿಂದ ಕೆಲವು ದಿನಗಳ ತರಬೇತಿಯನ್ನು ಪಡೆದುಕೊಂಡೆ. ನನ್ನ ಸರ್ಕಿಟ್ನಲ್ಲಿ, ಫ್ಯೂಜಿ ಪರ್ವತದ ಬಳಿ ಇರುವ ಶೀಮೀಸೂಯಿಂದ ಹಿಡಿದು ಶೀಕೊಕೂ ದ್ವೀಪದ ವರೆಗಿನ ಕ್ಷೇತ್ರಗಳಿದ್ದು, ಕಿಯೊಟೊ, ಓಸಾಕಾ, ಕೋಬೆ, ಮತ್ತು ಹಿರೋಶೀಮಗಳಂತಹ ದೊಡ್ಡ ನಗರಗಳಿದ್ದವು.
ಇಸವಿ 1961ರಲ್ಲಿ ನಾನೊಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆ. ಇದು ಉತ್ತರಭಾಗದಲ್ಲಿರುವ ಹಿಮಾವರಿತ ದ್ವೀಪವಾದ ಹೋಕೈಡೊದಿಂದ ಹಿಡಿದು ಉಷ್ಣವಲಯದ ದ್ವೀಪವಾದ ಓಕಿನಾವದ ವರೆಗೆ, ಅಲ್ಲಿಂದ ಟೈವಾನ್ನ ಬಳಿ ಇರುವ ಈಶೀಗಾಕಿ ದ್ವೀಪಗಳ ಆಚೆ ಸುಮಾರು 3,000 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸುವುದನ್ನು ಒಳಗೊಂಡಿತು.
ತರುವಾಯ 1963ರಲ್ಲಿ, ಬ್ರೂಕ್ಲಿನ್ ಬೆತೆಲ್ನಲ್ಲಿ ಗಿಲ್ಯಡ್ ಶಾಲೆಯ ಹತ್ತು ತಿಂಗಳುಗಳ ಕೋರ್ಸಿಗಾಗಿ ನನ್ನನ್ನು ಕರೆಯಲಾಯಿತು. ಆ ತರಬೇತಿಯಲ್ಲಿ, ಕೆಲಸದ ನೇಮಕಾತಿಗಳ ಕಡೆಗೆ ಇರಬೇಕಾದ ಸರಿಯಾದ ಮನೋಭಾವದ ಮಹತ್ವವನ್ನು ಸಹೋದರ ನಾರ್ ಒತ್ತಿಹೇಳಿದರು. ಟ್ಲಾಯೆಟ್ಗಳನ್ನು ಸ್ವಚ್ಛಗೊಳಿಸುವ ಕೆಲಸವು, ಒಂದು ಆಫೀಸಿನಲ್ಲಿ ಕೆಲಸಮಾಡುವಷ್ಟೇ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಟ್ಲಾಯೆಟ್ಗಳು ಸ್ವಚ್ಛವಾಗಿರದಿದ್ದರೆ, ಇಡೀ ಬೆತೆಲ್ ಕುಟುಂಬ ಹಾಗೂ ಅದರ ಕೆಲಸವು ಬಾಧಿಸಲ್ಪಡುವುದೆಂದು ಅವರು ಹೇಳಿದರು. ತದನಂತರ, ಜಪಾನಿನ ಬೆತೆಲ್ನಲ್ಲಿ ನನ್ನ ಕೆಲಸವು ಟ್ಲಾಯೆಟ್ಗಳನ್ನು ಸ್ವಚ್ಛಗೊಳಿಸುವುದಾಗಿತ್ತು. ಆಗ ನಾನು ಆ ಸಲಹೆಯನ್ನು ಮನಸ್ಸಿಗೆ ತಂದುಕೊಂಡೆ.
ಜಪಾನಿಗೆ ಹಿಂದಿರುಗಿದ ಬಳಿಕ, ನಾನು ಪುನಃ ಸಂಚರಣಾ ಕೆಲಸಕ್ಕೆ ನೇಮಿಸಲ್ಪಟ್ಟೆ. ಕೆಲವು ವರ್ಷಗಳ ತರುವಾಯ, ಮಾಟ್ಸೂ ನಗರದಲ್ಲಿ ವಿಶೇಷ ಪಯನೀಯರ್ ಆಗಿ ಸೇವೆಸಲ್ಲಿಸುತ್ತಿದ್ದ ಜೂನ್ಕೊ ಈವಾಸಾಕೀಯನ್ನು ನಾನು 1966ರಲ್ಲಿ ವಿವಾಹವಾದೆ. ಆಗ ಜಪಾನಿನ ಬ್ರಾಂಚ್ ಮೇಲ್ವಿಚಾರಕರಾಗಿದ್ದ ಲಾಯಡ್ ಬ್ಯಾರಿ, ವಿವಾಹದ ಭಾಷಣವನ್ನು ಅತ್ಯುತ್ಸಾಹದಿಂದ ನೀಡಿದರು. ತರುವಾಯ ಜೂನ್ಕೊ ಸಂಚರಣಾ ಕೆಲಸದಲ್ಲಿ ನನ್ನೊಂದಿಗೆ ಜೊತೆಗೂಡಿದಳು.
ನಮ್ಮ ನೇಮಕಾತಿಗಳು 1968ರಲ್ಲಿ ಬದಲಾದವು. ಭಾಷಾಂತರವನ್ನು ಮಾಡುವಂತೆ ನನ್ನನ್ನು ಟೊಕಿಯೊದ ಬ್ರಾಂಚ್ ಆಫೀಸಿಗೆ ಕರೆಸಿಕೊಳ್ಳಲಾಯಿತು. ಬೆತೆಲ್ನಲ್ಲಿ ರೂಮುಗಳ ಕೊರತೆಯಿದ್ದ ಕಾರಣ, ನಾನು ಟೊಕಿಯೊದ ಸೂಮೀಡ ಪಟ್ಟಣದಿಂದ ದಿನಾಲೂ ಬಂದು ಹೋಗುತ್ತಿದ್ದೆ, ಮತ್ತು ಜೂನ್ಕೊ ಸ್ಥಳಿಕ ಸಭೆಯಲ್ಲಿ ವಿಶೇಷ ಪಯನೀಯರಳಾಗಿದ್ದಳು. ಈ ಸಮಯದೊಳಗಾಗಿ ಭಾರಿ ಪ್ರಮಾಣದ ಬ್ರಾಂಚ್ ಸೌಕರ್ಯಗಳ ಅಗತ್ಯವಿತ್ತು. ಆದಕಾರಣ, 1970ರಲ್ಲಿ ಫ್ಯೂಜಿ ಪರ್ವತದ ಬಳಿಯೇ ನೂಮಾಸೂ ಕ್ಷೇತ್ರದಲ್ಲಿ ಒಂದು ಜಮೀನನ್ನು ಖರೀದಿಸಿ, ಮೂರು ಅಂತಸ್ತಿನ ಫ್ಯಾಕ್ಟರಿ ಹಾಗೂ ವಾಸಸ್ಥಾನಗಳನ್ನು ಕಟ್ಟಲಾಯಿತು. ನಿರ್ಮಾಣ ಕಾರ್ಯವನ್ನು ಆರಂಭಿಸುವ ಮೊದಲು, ಅಲ್ಲಿದ್ದ ಅನೇಕ ಮನೆಗಳು ರಾಜ್ಯ ಶುಶ್ರೂಷಾ ಶಾಲೆಗಾಗಿ ಬಳಸಲ್ಪಟ್ಟವು. ಈ ಶಾಲೆಯು ಸಭೆಯ ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಕಲಿಸುವ ಸುಯೋಗವು ನನ್ನದಾಗಿತ್ತು. ಮತ್ತು ಜೂನ್ಕೊ ಅವರಿಗಾಗಿ ಊಟಗಳನ್ನು ತಯಾರಿಸಿದಳು. ಶುಶ್ರೂಷೆಗಾಗಿ ನೂರಾರು ಕ್ರೈಸ್ತ ಪುರುಷರಿಗೆ ಈ ವಿಶೇಷ ತರಬೇತಿ ನೀಡಲ್ಪಡುತ್ತಿರುವುದನ್ನು ನೋಡುವುದು ರೋಮಾಂಚಕವಾಗಿತ್ತು.
ಒಂದು ಮಧ್ಯಾಹ್ನ, ನನಗೊಂದು ತುರ್ತಿನ ಟೆಲಿಗ್ರಾಮ್ ಸಿಕ್ಕಿತು. ತಾಯಿಯನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು ಮತ್ತು ಅವರು ಬಹಳ ಸಮಯ ಬದುಕುಳಿಯುವ ನಿರೀಕ್ಷೆ ಇರಲಿಲ್ಲ. ನಾನು ಬುಲೆಟ್ ಟ್ರೇನ್ ಅನ್ನು ಹಿಡಿದು ನಗೊಯಾಗೆ ಹೋಗಿ, ಅಲ್ಲಿಂದ ಆಸ್ಪತ್ರೆಗೆ ಧಾವಿಸಿದೆ. ಅವರು ಪ್ರಜ್ಞಾಹೀನರಾಗಿದ್ದರೂ, ನಾನು ಇಡೀ ರಾತ್ರಿ ಅವರ ಪಕ್ಕದಲ್ಲಿ ಕುಳಿತಿದ್ದೆ. ತಾಯಿಯು ನಸುಕಿನಲ್ಲಿ ತೀರಿಹೋದರು. ನಾನು ನೂಮಾಸೂಗೆ ಹಿಂದಿರುಗುತ್ತಿದ್ದಾಗ, ನನ್ನ ತಾಯಿಯು ಜೀವನದಲ್ಲಿ ಅನುಭವಿಸಿದ್ದ ಕಷ್ಟದ ಸಮಯಗಳನ್ನು ಮತ್ತು ನನಗಾಗಿ ಅವರು ತೋರಿಸಿದ ಮಮತೆಯನ್ನು ಜ್ಞಾಪಿಸಿಕೊಂಡು ಕಣ್ಣೀರು ಸುರಿಸಿದೆ. ಯೆಹೋವನ ಚಿತ್ತವಿರುವಲ್ಲಿ, ನಾನು ಅವರನ್ನು ಮತ್ತೊಮ್ಮೆ ಪುನರುತ್ಥಾನದಲ್ಲಿ ನೋಡುವೆ.
ನೂಮಾಸೂದಲ್ಲಿದ್ದ ಸೌಕರ್ಯಗಳು ಬೆತೆಲ್ ಕುಟುಂಬಕ್ಕೆ ಇನ್ನು ಮುಂದೆ ಸಾಲದಾದವು. ಆದುದರಿಂದ, ಎಬಿನಾ ನಗರದಲ್ಲಿ 18 ಎಕ್ರೆ ಜಮೀನನ್ನು ಖರೀದಿಸಿ, ಹೊಸ ಬ್ರಾಂಚಿನ ನಿರ್ಮಾಣವು 1978ರಲ್ಲಿ ಆರಂಭಗೊಂಡಿತು. ಈ ಜಮೀನಿನಲ್ಲಿರುವ ಎಲ್ಲ ಸ್ಥಳವೂ ಈಗ ಫ್ಯಾಕ್ಟರಿ ಮತ್ತು ವಾಸದ ಕಟ್ಟಡಗಳಿಂದ ತುಂಬಿದ್ದು, 2,800ಕ್ಕಿಂತಲೂ ಹೆಚ್ಚಿನ ಆಸನಗಳಿರುವ ಒಂದು ಸಮ್ಮೇಳನ ಸಭಾಂಗಣವೂ ಅಲ್ಲಿದೆ. ಇತ್ತೀಚಿನ ಕೂಡಿಕೆಯು, 13 ಅಂತಸ್ತಿನ ಎರಡು ವಾಸದ ಕಟ್ಟಡಗಳು ಮತ್ತು 5 ಹಂತಗಳ ಪಾರ್ಕಿಂಗ್/ಸರ್ವಿಸ್ ಕಟ್ಟಡವಾಗಿದೆ. ಇವುಗಳನ್ನು ಈ ವರ್ಷದ ಆದಿಭಾಗದಲ್ಲಿ ಪೂರ್ಣಗೊಳಿಸಲಾಯಿತು. ನಮ್ಮ ಬೆತೆಲ್ ಕುಟುಂಬದಲ್ಲಿ ಈಗ 530 ಸದಸ್ಯರಿದ್ದಾರೆ. ಆದರೆ ವಿಸ್ತೃತಗೊಳಿಸಲ್ಪಟ್ಟ ಸೌಕರ್ಯಗಳಲ್ಲಿ ನಾವು ಸುಮಾರು 900 ಮಂದಿಯನ್ನು ಸೇರಿಸಿಕೊಳ್ಳಬಹುದು.
ಹರ್ಷಿಸಲಿಕ್ಕೆ ಅನೇಕ ಕಾರಣಗಳು
ಬೈಬಲ್ ಪ್ರವಾದನೆಯು ನೆರವೇರುವುದನ್ನು ನೋಡುವುದು, ಹೌದು, ‘ಚಿಕ್ಕವನು ದೊಡ್ಡ ಜನಾಂಗವಾಗುವುದನ್ನು’ ನೋಡುವುದು ರೋಮಾಂಚಕರವಾಗಿದೆ. (ಯೆಶಾಯ 60:22) “ಜಪಾನಿನಲ್ಲಿ ಎಷ್ಟು ಮಂದಿ ಸಾಕ್ಷಿಗಳಿದ್ದಾರೆ?” ಎಂದು 1951ರಲ್ಲಿ ನನ್ನ ಅಣ್ಣನೊಬ್ಬನು ಕೇಳಿದ್ದು ನನಗೆ ಜ್ಞಾಪಕವಿದೆ.
“ಸುಮಾರು 260” ಎಂದು ನಾನು ಉತ್ತರಿಸಿದೆ.
“ಅಷ್ಟೇ ಏನು?” ಎಂದು ಅವನು ವ್ಯಂಗ್ಯವಾಗಿ ಕೇಳಿದನು.
ಆಗ ನಾನು ಮನಸ್ಸಿನಲ್ಲಿ ಯೋಚಿಸಿಕೊಂಡದ್ದು: ‘ಈ ಶಿಂಟೊ ಹಾಗೂ ಬೌದ್ಧ ಧರ್ಮಗಳುಳ್ಳ ದೇಶದಿಂದ, ಯೆಹೋವನು ಎಷ್ಟು ಮಂದಿಯನ್ನು ತನ್ನ ಆರಾಧನೆಗೆ ಸೆಳೆಯುವನೆಂದು ಸಮಯವು ತೋರಿಸಿಕೊಡುವುದು.’ ಮತ್ತು ಅದಕ್ಕೆ ತಕ್ಕ ಉತ್ತರವನ್ನು ಯೆಹೋವನು ಕೊಟ್ಟಿದ್ದಾನೆ! ಇಂದು ಜಪಾನಿನಲ್ಲಿ ಸಾರುವ ಕಾರ್ಯಕ್ಕಾಗಿ ನೇಮಿಸಲ್ಪಡದೆ ಇರುವ ಕ್ಷೇತ್ರಗಳಿಲ್ಲ. ಮತ್ತು ಸತ್ಯಾರಾಧಕರ ಸಂಖ್ಯೆಯು 2,22,000ಕ್ಕಿಂತಲೂ ಹೆಚ್ಚಾಗಿದ್ದು, ಅಲ್ಲಿ 3,800 ಸಭೆಗಳಿವೆ!
ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಾನು ಕಳೆದ 44 ವರ್ಷಗಳು—32 ವರ್ಷಗಳು ನನ್ನ ಪ್ರೀತಿಯ ಪತ್ನಿಯೊಂದಿಗೆ—ವಿಶೇಷವಾಗಿ ಸಂತೋಷಕರವಾದ ವರ್ಷಗಳಾಗಿವೆ. ಆ ವರ್ಷಗಳಲ್ಲಿ 25 ವರ್ಷಗಳನ್ನು ನಾನು ಬೆತೆಲಿನ ಭಾಷಾಂತರ ವಿಭಾಗದಲ್ಲಿ ಕಳೆದಿದ್ದೇನೆ. ಸೆಪ್ಟೆಂಬರ್ 1979ರಲ್ಲಿ, ಜಪಾನಿನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಕಮಿಟಿಯ ಒಬ್ಬ ಸದಸ್ಯನಾಗುವಂತೆಯೂ ನಾನು ಆಮಂತ್ರಿಸಲ್ಪಟ್ಟೆ.
ಪ್ರಾಮಾಣಿಕ ಹಾಗೂ ಶಾಂತಿಪ್ರಿಯ ಜನರು ಯೆಹೋವನ ಆರಾಧನೆಗೆ ಬರುವಂತೆ ಸಹಾಯ ಮಾಡುವುದರಲ್ಲಿ ಒಂದು ಸಣ್ಣ ಪಾಲನ್ನು ಪಡೆದುಕೊಂಡದ್ದು, ಒಂದು ಸುಯೋಗವೂ ಆಶೀರ್ವಾದವೂ ಆಗಿದೆ. ನಾನು ಮಾಡಿದ್ದನ್ನೇ ಅನೇಕರು ಮಾಡಿದ್ದಾರೆ, ಅಂದರೆ, ಸಮ್ರಾಟನ ಆರಾಧನೆಯನ್ನು ತೊರೆದು, ಒಬ್ಬನೇ ಸತ್ಯ ದೇವರಾದ ಯೆಹೋವನ ಆರಾಧನೆಗೆ ಕೂಡಿಬಂದಿದ್ದಾರೆ. ಇನ್ನೂ ಅನೇಕರು ಯೆಹೋವನ ವಿಜಯಿ ಪಕ್ಷದ ಕಡೆಗೆ ಬರುವಂತೆ ಮತ್ತು ಶಾಂತಿಭರಿತ ಹೊಸ ಲೋಕದಲ್ಲಿ ಅಂತ್ಯರಹಿತ ಜೀವನವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡುವುದು ನನ್ನ ಪ್ರಾಮಾಣಿಕ ಅಪೇಕ್ಷೆಯಾಗಿದೆ.—ಪ್ರಕಟನೆ 22:17.
[ಪಾದಟಿಪ್ಪಣಿ]
a ಅವರ ತಂದೆಯವರು ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದು, 1945ರಲ್ಲಿ ಹಿರೋಶೀಮದ ಮೇಲಾದ ಅಣು ಬಾಂಬ್ ಸ್ಫೋಟನದಿಂದ ಬದುಕಿ ಉಳಿದರು. ಆ ಸಮಯದಲ್ಲಿ ಅವರು ಜ್ಯಾಪನೀಸ್ ಸೆರೆಮನೆಯಲ್ಲಿದ್ದರು. ಅಕ್ಟೋಬರ್ 8, 1994ರ ಅವೇಕ್! ಪತ್ರಿಕೆಯ, 11-15ನೆಯ ಪುಟಗಳನ್ನು ನೋಡಿರಿ.
[ಪುಟ 29 ರಲ್ಲಿರುವ ಚಿತ್ರ]
ಶಾಲಾ ಶಿಕ್ಷಣವು ಸಮ್ರಾಟನ ಆರಾಧನೆಯ ಸುತ್ತಲೂ ಕೇಂದ್ರೀಕೃತವಾಗಿತ್ತು
[ಕೃಪೆ]
ಮೇನಿಚಿ ವಾರ್ತಾಪತ್ರಿಕೆಗಳು
[ಪುಟ 29 ರಲ್ಲಿರುವ ಚಿತ್ರ]
ನ್ಯೂ ಯಾರ್ಕ್ನಲ್ಲಿ ಸಹೋದರ ಫ್ರಾನ್ಸ್ ಅವರೊಂದಿಗೆ
[ಪುಟ 29 ರಲ್ಲಿರುವ ಚಿತ್ರ]
ನನ್ನ ಪತ್ನಿ ಜೂನ್ಕೊಳೊಂದಿಗೆ
[ಪುಟ 31 ರಲ್ಲಿರುವ ಚಿತ್ರ]
ಭಾಷಾಂತರ ವಿಭಾಗದಲ್ಲಿ ಕೆಲಸಮಾಡುತ್ತಿರುವಾಗ