ನೀವು ಸಹಾನುಭೂತಿಯುಳ್ಳ ಕೇಳುಗರಾಗಿದ್ದೀರೊ?
ನಿಮ್ಮ ಜೀವಿತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ದುಬಾರಿ ವೆಚ್ಚದ ಕೊಡುಗೆಯನ್ನು ಕೊಡಲಿಕ್ಕಾಗಿ ಹಣಕಾಸಿನ ಸಾಧನ ಸಂಪತ್ತನ್ನು ನೀವು ಹೊಂದಿದ್ದೀರೆಂದು ಊಹಿಸಿಕೊಳ್ಳಿ. ಅವರೆಷ್ಟು ಸಂತೋಷಿಗಳೂ ಕೃತಜ್ಞತೆಯುಳ್ಳವರೂ ಆಗಿರುವರು! ವಾಸ್ತವವಾಗಿ, ಅವರಿಗೆ ನಿಜವಾಗಿಯೂ ಅಗತ್ಯವಾದ ಏನನ್ನೋ, ವಿಶೇಷವಾದ ಕೊಡುಗೆಯೊಂದನ್ನು ನೀವು ಇತರರಿಗೆ ಕೊಡಬಲ್ಲಿರಿ. ಅದಕ್ಕೆ ಯಾವುದೇ ಹಣದ ವೆಚ್ಚವಾಗುವುದಿಲ್ಲ. ಅದೇನಾಗಿದೆ? ಅದು ನಿಮ್ಮ ಗಮನವಾಗಿದೆ. ಅಧಿಕಾಂಶ ಜನರು ಗಮನವನ್ನು ಬಯಸುತ್ತಾರೆ ಮತ್ತು ಅವರು ಅದನ್ನು ಪಡೆದುಕೊಂಡಾಗ ಮೆಚ್ಚುಗೆಯಿಂದ ಪ್ರತಿಕ್ರಿಯಿಸುತ್ತಾರೆ. ಆದಾಗ್ಯೂ, ಉತ್ಕೃಷ್ಟವಾದ ಗಮನವನ್ನು ಕೊಡಲಿಕ್ಕಾಗಿ ನೀವು ಸಹಾನುಭೂತಿಯುಳ್ಳ ಕೇಳುಗರಾಗಿರಬೇಕು.
ನೀವು ಒಬ್ಬ ಹೆತ್ತವರಾಗಿರಲಿ ಅಥವಾ ಯಜಮಾನನಾಗಿರಲಿ ಅಥವಾ ಸಲಹೆ ಮತ್ತು ಮಾರ್ಗದರ್ಶನೆಗಾಗಿ ಜನರು ನಿಮ್ಮ ಕಡೆಗೆ ಬರುವಂತಹ ಯಾವುದೇ ಸ್ಥಾನದಲ್ಲಿ ಕಾರ್ಯ ನಡಿಸುತ್ತಿರಲಿ, ನೀವು ಸಹಾನುಭೂತಿಯುಳ್ಳವರಾಗಿ ಆಲಿಸುವ ಆವಶ್ಯಕತೆಯಿದೆ. ನೀವು ಹಾಗೆ ಮಾಡದಿರುವಲ್ಲಿ, ನಿಮ್ಮ ಸಹಾನುಭೂತಿಯ ಕೊರತೆಯನ್ನು ಜನರು ಕಂಡುಹಿಡಿಯುತ್ತಾರೆ ಮತ್ತು ನಿಮ್ಮ ವಿಶ್ವಾಸಾರ್ಹತೆಯು ದುರ್ಬಲಗೊಳ್ಳುವುದು.
ಸಲಹೆಯನ್ನು ಕೊಡುವಂತೆ ನೀವು ಅನೇಕಾವರ್ತಿ ಕೇಳಲ್ಪಡದಿರುವಾಗಲೂ, ಸ್ನೇಹಿತನೊಬ್ಬನು ಸಂತೈಸುವಿಕೆಗಾಗಿ ನಿಮ್ಮ ಬಳಿಗೆ ಬರುವಾಗ ಹೇಗೊ ಹಾಗೆಯೇ, ನೀವು ಇನ್ನೂ ಜನರಿಗೆ ಸಹಾನುಭೂತಿಯುಳ್ಳವರಾಗಿ ಕಿವಿಗೊಡುವ ಅಗತ್ಯವಿದೆ. ಬೈಬಲಿನ ಜ್ಞಾನೋಕ್ತಿಯು ಹೇಳುವಂತೆ, ಮಾತಾಡುವುದಕ್ಕೆ ಮುನ್ನ ಆಲಿಸುವುದಕ್ಕೆ ತಪ್ಪಿಹೋಗುವುದು ಅಪಮಾನದಲ್ಲಿ ಫಲಿಸಬಲ್ಲದು. (ಜ್ಞಾನೋಕ್ತಿ 18:13) ಹಾಗಾದರೆ, ನೀವು ಸಹಾನುಭೂತಿಯುಳ್ಳ ಕೇಳುಗರಾಗಿದ್ದೀರೆಂದು ನೀವು ಸ್ವತಃ ತೋರಿಸಬಲ್ಲ ವಿಧಾನಗಳಲ್ಲಿ ಕೆಲವು ಯಾವುವು?
ತಲ್ಲೀನರಾಗಿರ್ರಿ
ಸಹಾನುಭೂತಿಯುಳ್ಳ ಕೇಳುಗರೆಂದರೇನು? ವೆಬ್ಸ್ಟರ್ಸ್ ನ್ಯೂ ಕಲೀಜಿಅಟ್ ಡಿಕ್ಷನರಿಯು “ಸಹಾನುಭೂತಿ”ಯನ್ನು ಈ ರೀತಿ ವಿವರಿಸುತ್ತದೆ: “ಬೇರೊಬ್ಬನ ಭಾವನೆಗಳು ಅಥವಾ ಕಲ್ಪನೆಗಳಲ್ಲಿ ಭಾಗವಹಿಸಲಿಕ್ಕಾಗಿರುವ ಸಾಮರ್ಥ್ಯ.” ಅದೇ ಡಿಕ್ಷನರಿಯು “ಆಲಿಸುವಿಕೆ”ಯನ್ನು ಈ ರೀತಿ ವಿವರಿಸುತ್ತದೆ: “ಆಲೋಚನಾಸಕ್ತ ಗಮನದಿಂದ ಕೇಳುವುದು.” ಆದುದರಿಂದ ಸಹಾನುಭೂತಿಯುಳ್ಳ ಕೇಳುಗನು ಯಾರಾದರೊಬ್ಬರು ಹೇಳುವುದನ್ನು ಕೇಳುವುದಕ್ಕಿಂತಲು ಹೆಚ್ಚಿನದನ್ನು ಮಾಡುತ್ತಾನೆ. ಅವನು ಗಮನಹರಿಸುತ್ತಾನೆ ಮತ್ತು ಆ ವ್ಯಕ್ತಿಯ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ಪಾಲಿಗನಾಗುತ್ತಾನೆ.
ನಿಮ್ಮ ಮನಸ್ಸನ್ನು ಅಲೆಯಲು ಬಿಡದೆ, ನೀವು ಏನನ್ನು ಆಲಿಸುತ್ತಿದ್ದೀರೊ ಅದರಲ್ಲಿ ಪೂರ್ಣವಾಗಿ ತಲ್ಲೀನರಾಗಿರುವುದನ್ನು ಇದು ಅಗತ್ಯಪಡಿಸುತ್ತದೆ. ನೀವು ಹೇಗೆ ಪ್ರತ್ಯುತ್ತರಿಸುವಿರೆಂಬುದನ್ನು ಆಲೋಚಿಸುವುದು ಸಹ ಆಲಿಸುವುದರಿಂದ ನಿಮ್ಮನ್ನು ಅಪಕರ್ಷಿಸುತ್ತದೆ. ಇನ್ನೊಬ್ಬ ವ್ಯಕ್ತಿಯು ಏನನ್ನು ಹೇಳುತ್ತಿದ್ದಾನೊ ಆ ವಿಷಯದ ಮೇಲೆ ಕೇಂದ್ರೀಕರಿಸುವಂತೆ ಸ್ವತಃ ನಿಮ್ಮನ್ನು ಶಿಸ್ತುಗೊಳಿಸಿಕೊಳ್ಳಿರಿ.
ನಿಮ್ಮೊಂದಿಗೆ ಮಾತಾಡುತ್ತಿರುವ ವ್ಯಕ್ತಿಯ ಕಡೆಗೆ ನೇರವಾಗಿ ನೋಡಿರಿ. ನೀವು ಬೇರೆ ಕಡೆಗಳಲ್ಲಿ ನೋಡುತ್ತಿರುವುದಾದರೆ, ನೀವು ಅನಾಸಕ್ತಿಯುಳ್ಳವರಾಗಿ ತೋರುವಿರಿ. ಅವನ ಭಾವಾಭಿನಯಗಳನ್ನು ಮತ್ತು ನಡೆನುಡಿಗಳನ್ನು ಗಮನಿಸಿರಿ. ಅವನು ನಗುತ್ತಿದ್ದಾನೊ ಯಾ ಅಸಂತೋಷದ ಮುಖಭಾವವುಳ್ಳವನಾಗಿದ್ದಾನೊ? ಅವನ ಕಣ್ಣುಗಳು ಹಾಸ್ಯವನ್ನು, ದುಃಖವನ್ನು, ಅಥವಾ ತಿಳಿಮೆಯನ್ನು ಪ್ರತಿಬಿಂಬಿಸುತ್ತವೊ? ಅವನು ಹೇಳಿಲ್ಲದೆ ಬಿಟ್ಟಿರುವುದು ಅರ್ಥಗರ್ಭಿತವಾಗಿದೆಯೆ? ನಿಮ್ಮ ಪ್ರತಿಕ್ರಿಯೆಯ ಕುರಿತು ಚಿಂತಿಸದಿರಿ; ನಿಮ್ಮ ಕೇಂದ್ರೀಕೃತ ಆಲಿಸುವಿಕೆಯ ಸಹಜ ಫಲಿತಾಂಶವಾಗಿ ಅದು ಬರುವುದು.
ಆಲಿಸುತ್ತಿರುವಾಗ, ನೀವು ನಿಮ್ಮ ತಲೆ ತೂಗುವ ಮತ್ತು ‘ನನಗೆ ತಿಳಿಯಿತು’ ಹಾಗೂ ‘ನನಗೆ ಗೊತ್ತಾಯಿತು’ ಎಂಬಂತಹ ದೃಢೀಕರಣದ ಅಭಿವ್ಯಕ್ತಿಗಳನ್ನು ಉಪಯೋಗಿಸುವಿರೆಂಬುದು ಸಂಭವನೀಯ. ನೀವು ಮನಸ್ಸನ್ನು ಕೇಂದ್ರೀಕರಿಸುತ್ತಿದ್ದೀರೆಂಬುದನ್ನು ಇದು ತೋರಿಸಬಲ್ಲದು. ಆದರೂ, ನೀವು ನಿಜವಾಗಿ ಆಲಿಸದಿರುವಾಗ, ತಲೆ ತೂಗುವಿಕೆ ಮತ್ತು ದೃಢೀಕರಣಗಳು ಜನರು ನೀವು ಆಲಿಸುತ್ತಾ ಇದ್ದೀರಿ ಎಂದು ತಿಳಿಯುವಂತೆ ಮಾಡುವವೆಂದು ಅಭಿಪ್ರಯಿಸದಿರಿ. ವಾಸ್ತವವಾಗಿ, ಸತತವಾದ ತೀವ್ರಗತಿಯ ತಲೆ ತೂಗುವಿಕೆಯು ಅಸಹನೆಯನ್ನು ಪ್ರಕಟಿಸಬಲ್ಲದು. ಅದು ‘ನೀನು ಏನನ್ನು ಹೇಳಲು ಅಪೇಕ್ಷಿಸುತ್ತೀಯೊ ಅದನ್ನು ಸಾಧ್ಯವಾದಷ್ಟು ಬೇಗನೆ ಹೇಳಿ ಮುಗಿಸು’ ಎಂದು ನೀವು ಹೇಳುತ್ತಿದ್ದೀರೋ ಎಂಬಂತೆ ಇರುತ್ತದೆ.
ಯಾವುದೇ ವಿದ್ಯಮಾನದಲ್ಲಿ, ಆಲಿಸುವಿಕೆಯ ಕಾರ್ಯ ವಿಧಾನದ ಕುರಿತು ನೀವು ಅತಿಯಾಗಿ ಚಿಂತಿತರಾಗಿರಬೇಕಾದ ಅಗತ್ಯವಿಲ್ಲ. ಕೇವಲ ನಿಮ್ಮ ಆಲಿಸುವಿಕೆಯನ್ನು ನೈಜವಾದದ್ದಾಗಿ ಮಾಡಿರಿ, ಮತ್ತು ನಿಮ್ಮ ಪ್ರತಿಕ್ರಿಯೆಗಳು ನಿಮ್ಮ ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುವುವು.
ಒಳ್ಳೆಯ ಪ್ರಶ್ನೆಗಳು ಸಹ ನೀವು ತಲ್ಲೀನರಾಗಿದ್ದೀರಿ ಮತ್ತು ಮನಸ್ಸನ್ನು ಕೇಂದ್ರೀಕರಿಸುತ್ತಿದ್ದೀರಿ ಎಂಬುದನ್ನು ತೋರಿಸುತ್ತವೆ. ನೀವು ಆಸಕ್ತರಿದ್ದೀರಿ ಎಂಬುದನ್ನು ಅವು ತೋರಿಸುತ್ತವೆ. ಹೇಳಿಲ್ಲದ ಅಥವಾ ಅಸ್ಪಷ್ಟವಾಗಿಗಿರುವ ಅಂಶಗಳ ಸ್ಪಷ್ಟೀಕರಣಕ್ಕಾಗಿ ಕೇಳಿರಿ. ಇತರ ವ್ಯಕ್ತಿಯನ್ನು ಅವನು ವಿಶದವಾಗಿ ಮತ್ತು ತನ್ನನ್ನು ಇನ್ನೂ ಅಧಿಕವಾಗಿ ವ್ಯಕ್ತಪಡಿಸಿಕೊಳ್ಳಲು ಆಮಂತ್ರಿಸುವ ಪ್ರಶ್ನೆಗಳನ್ನು ಕೇಳಿರಿ. ಸಾಂದರ್ಭಿಕವಾದ ಅಡಿಪ್ಡಡಿಸುವಿಕೆಗಳು ಬಹುಶಃ ಅಗತ್ಯ, ಆದರೆ ಅದನ್ನು ಅತಿಯಾಗಿ ಮಾಡದಿರಿ. ವಿಷಯಗಳನ್ನು ಸ್ಪಷ್ಟವಾಗಿಗಿ ಗ್ರಹಿಸುವುದು, ಆಲಿಸುವ ಕಾರ್ಯವಿಧಾನದ ಒಂದು ಭಾಗವಾಗಿದೆ. ಅಡಯಿಸ್ಡುವಿಕೆಯು ಅತಿಯಾಗಿ ಮಾಡಲ್ಪಡದಿರುವಲ್ಲಿ, ತಾನು ಹೇಳುತ್ತಿರುವ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲಿಕ್ಕಾಗಿರುವ ನಿಮ್ಮ ಬಯಕೆಯನ್ನು ಬೇರೆ ವ್ಯಕ್ತಿಯು ಗಣ್ಯಮಾಡುವನು.
ವಿವೇಚನೆಯನ್ನು ತೋರಿಸಿರಿ
ನಿಮ್ಮೊಂದಿಗೆ ಮಾತಾಡುತ್ತಿರುವ ವ್ಯಕ್ತಿಗಾಗಿ ನೀವು ನಿಜವಾಗಿ ಸಹಾನುಭೂತಿಯುಳ್ಳವರಾಗಿದ್ದಾಗಲೂ ಇದು ಅತ್ಯಂತ ಕ್ಲಿಷ್ಟವಾದ ಭಾಗವಾಗಿರಸಾಧ್ಯವಿದೆ. ದುಃಖಿತರಾದ ಯಾರಾದರೊಬ್ಬರು ನಿಮ್ಮ ಬಳಿಗೆ ಬರುವಾಗ, ನೀವು ಆ ಕೂಡಲೆ ಆಶಾವಾದಿತದ್ವ ಸಲಹೆಗಳನ್ನು ಮತ್ತು ಪರಿಹಾರಗಳನ್ನು ಕೊಡುತ್ತೀರೊ? ಬೇರೊಬ್ಬರ ಕಷ್ಟಾನುಭವದೊಂದಿಗೆ ಹೋಲಿಸುವಾಗ ಈ ಸನ್ನಿವೇಶವು ಅಷ್ಟು ಕೆಟ್ಟದ್ದಾಗಿಲ್ಲವೆಂದು ನೀವು ಕೂಡಲೆ ಆ ವ್ಯಕ್ತಿಗೆ ನಿರ್ದೇಶಿಸುತ್ತೀರೊ? ಇದು ಸಹಾಯಕಾರಿಯಾಗಿ ತೋರಬಹುದು, ಆದರೆ ಅದು ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲದು.
ನೀವು ಆಲಿಸುವುದನ್ನು ನಿಲ್ಲಿಸಿ, ಬಗೆಹರಿಸಲು ಆರಂಭಿಸುವ ಪ್ರವೃತ್ತಿಯುಳ್ಳವರಾಗಿರಬಹುದು ಎಂಬುದಕ್ಕೆ ಅನೇಕ ಕಾರಣಗಳಿವೆ. ವ್ಯಕ್ತಿಗೆ ಹೆಚ್ಚು ಉತ್ತಮವಾದ ಭಾವನೆಯು ಉಂಟಾಗುವಂತೆ ಮಾಡಲು ನಿಮ್ಮ ಉತ್ಸಾಹಭರಿತ ಸಲಹೆಗಳು ತಾನೇ ಅಗತ್ಯವಾದವುಗಳಾಗಿವೆ ಎಂದು ನೀವು ಆಲೋಚಿಸಬಹುದು. ಯಾವುದು “ತಪ್ಪು” ಆಗಿದೆಯೊ ಅದನ್ನು “ಬಗೆಹರಿಸುವುದು” ನಿಮ್ಮ ಕರ್ತವ್ಯವಾಗಿದೆ ಮತ್ತು ಅದನ್ನು ನೀವು ಮಾಡದಿರುವುದಾದರೆ, ನೀವು ಸಹಾಯಕರಾಗಿರುವುದಿಲ್ಲ ಅಥವಾ “ನಿಮ್ಮ ಕೆಲಸವನ್ನು ನೀವು ಮಾಡುತ್ತಿಲ್ಲ” ಎಂದು ನೀವು ಭಾವಿಸಸಾಧ್ಯವಿದೆ.
ಆದರೂ, ಪರಿಹಾರಗಳ ಶೀಘ್ರವಾದ ಸುರಿಮಳೆಯು ಸಾಮಾನ್ಯವಾಗಿ ಇಂತಹ ನಿರುತ್ಸಾಹಗೊಳಿಸುವ ಸಂದೇಶಗಳನ್ನು ಹೊರಪಡಿಸುತ್ತದೆ, ‘ನೀವು ಸಮರ್ಥಿಸುತ್ತಿರುವುದಕ್ಕಿಂತಲೂ ನಿಮ್ಮ ಸಮಸ್ಯೆಯು ಹೆಚ್ಚು ಸರಳವಾದದ್ದಾಗಿದೆಯೆಂದು ನಾನು ಗ್ರಹಿಸುತ್ತೇನೆ.’ ಅಥವಾ, ‘ನಿಮ್ಮ ಕ್ಷೇಮಕ್ಕಿಂತಲೂ ಸಮಸ್ಯೆಯನ್ನು ಬಗೆಹರಿಸುವವನೋಪಾದಿ ನಾನು ನನ್ನ ಸ್ವಂತ ಯಶಸ್ಸಿನಲ್ಲಿ ಹೆಚ್ಚು ಆಸಕ್ತನಾಗಿದ್ದೇನೆ.’ ಅಥವಾ, ಬಹುಶಃ, ‘ನನಗೆ ಸ್ಪಲ್ಪವೂ ಅರ್ಥವಾಗುವುದಿಲ್ಲ—ಮತ್ತು ಅರ್ಥಮಾಡಿಕೊಳ್ಳಲೂ ನಾನು ಬಯಸುವುದಿಲ್ಲ.’ ಇತರರ ಸಮಸ್ಯೆಗಳೊಂದಿಗೆ ಕಷ್ಟಾನುಭವಿಸುವವನ ಸಮಸ್ಯೆಗಳನ್ನು ಹೋಲಿಸುವುದು ಸಾಮಾನ್ಯವಾಗಿ, ‘ಬೇರೆ ಜನರು ನಿಮಗಿಂತಲೂ ಹೆಚ್ಚಾಗಿ ಕಷ್ಟಾನುಭವಿಸುತ್ತಿರುವಾಗ, ತೊಂದರೆಗೊಳಿಸಲ್ಪಟ್ಟೆವೆಂದು ಭಾವಿಸಿದ್ದಕ್ಕಾಗಿ ಸ್ವತಃ ನೀವು ನಾಚಿಕೆಪಡಬೇಕು’ ಎಂಬುದನ್ನು ಅರುಹುತ್ತದೆ.
ಅಂತಹ ನಿರುತ್ಸಾಹಗೊಳಿಸುವ ಸಂದೇಶಗಳನ್ನು ನೀವು ಉದ್ದೇಶಪೂರ್ವಕವಲ್ಲದೆ ಹೊರಪಡಿಸುವುದಾದರೆ, ನೀವು ಅವನಿಗೆ ನಿಜವಾಗಿ ಕಿವಿಗೊಡಲಿಲ್ಲವೆಂದು ಮತ್ತು ಅವನು ಹೇಳಿದುದರ ಅರ್ಥ ನಿಮಗಾಗುತ್ತಿಲ್ಲವೆಂದು ನಿಮ್ಮ ಗೆಳೆಯನು ಭಾವಿಸುವನು. ನೀವು ಅವನಿಗಿಂತ ಉತ್ಕೃಷ್ಟರೆಂದು ಭಾವಿಸುತ್ತೀರೆಂಬ ನಿರ್ಣಯಕ್ಕೂ ಅವನು ಬರಬಹುದು. ಮುಂದಿನ ಬಾರಿ, ಸಂತೈಸುವಿಕೆಗಾಗಿ ಅವನು ತನ್ನ ಗಮನವನ್ನು ಬೇರೊಬ್ಬರ ಕಡೆಗೆ ತಿರುಗಿಸುವನು.—ಫಿಲಿಪ್ಪಿ 2:3, 4.
ನಿಮ್ಮ ಸ್ನೇಹಿತನು ಅನಾವಶ್ಯಕವಾಗಿ ತೊಂದರೆಪಡುತ್ತಿರುವುದಾದರೆ ಆಗೇನು? ಉದಾಹರಣೆಗೆ, ಸಮಂಜಸವಾದ ಕಾರಣವಿಲ್ಲದೆ ಅವನು ದೋಷಿಯೆಂದು ಭಾವಿಸಬಹುದು. ಅವನಿಗೆ ಒಳ್ಳೆಯ ಭಾವನೆಯುಂಟಾಗುವಂತೆ ಮಾಡಲಿಕ್ಕಾಗಿ ಅದನ್ನು ಅವನಿಗೆ ಹೇಳಲು ನೀವು ತರ್ವೆಪಡಬೇಕೊ? ಇಲ್ಲ, ಯಾಕೆಂದರೆ ನೀವು ಪ್ರಥಮವಾಗಿ ಅವನಿಗೆ ಕಿವಿಗೊಡದಿರುವುದಾದರೆ, ನಿಮ್ಮ ಪುನರ್ಭರವಸೆಗಳು ಕಡಿಮೆ ಸಂತೈಸುವಿಕೆಗಳಾಗುವುವು. ನೆಮ್ಮದಿಯ ಅನಿಸಿಕೆಗೆ ಬದಲಾಗಿ, ತಾನು ಸ್ವತಃ ಹೃದಯದ ಭಾರವನ್ನು ಇನ್ನೂ ಇಳಿಸಿಕೊಂಡಿಲ್ಲವೆಂದು ಅವನು ಭಾವಿಸುವನು, ಇದರಿಂದ ಅವನು ಇನ್ನೂ ತನ್ನ ದೋಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾನೆ. 19ನೆಯ ಶತಮಾನದ ತತ್ವಜ್ಞಾನಿಯಾದ ಹೆನ್ರಿ ಡೇವಿಡ್ ಥರೋ ಇದನ್ನು ಸೂಚಿಸುವಂತೆ, “ಸತ್ಯವನ್ನು ಹೇಳಲು ಇಬ್ಬರು ಬೇಕು: ಒಬ್ಬನು ಅದನ್ನು ಹೇಳಲು ಮತ್ತು ಇನ್ನೊಬ್ಬನು ಅದನ್ನು ಕೇಳಲು.”
ಬೈಬಲಿನ ಮಾರ್ಗದರ್ಶನವು ಎಷ್ಟು ಸೂಕ್ತವಾಗಿದೆ: “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಿ. (ಯಾಕೋಬ 1:19) ಮತ್ತು ಸಹಾನುಭೂತಿಯಿಂದ ಆಲಿಸುವುದು ಸಹ ಬಹಳ ಪ್ರಾಮುಖ್ಯವಾದದ್ದಾಗಿದೆ! ನಿಮ್ಮಲ್ಲಿ ಹೇಳಿಕೊಳ್ಳುತ್ತಿರುವವನ ಭಾವನೆಗಳಲ್ಲಿ ಪಾಲ್ಗೊಳ್ಳಿರಿ. ಅವನ ಸಮಸ್ಯೆಯ ಕ್ಲಿಷ್ಟತೆಯನ್ನು, ಅವನ ಸಂಕಟದ ಆಳವನ್ನು ಅಂಗೀಕರಿಸಿರಿ. ‘ಓ, ನಿನ್ನ ಸಮಸ್ಯೆಯು ಬಹಳ ಕ್ಷಣಿಕವಾದದ್ದು’ ಅಥವಾ, ‘ವಿಷಯಗಳು ವಾಸ್ತವವಾಗಿ ಅಷ್ಟೊಂದು ಕೆಟ್ಟವುಗಳಾಗಿಲ್ಲ’ ಎಂಬಂತಹ ಹೇಳಿಕೆಗಳಿಂದ ಅವನ ಸಮಸ್ಯೆಯನ್ನು ನಿಕೃಷ್ಟ ಮಾಡದಿರಿ. ಹಾಸ್ಯವ್ಯಂಗ್ಯವಾಗಿ, ಅಂತಹ ನಿಕೃಷ್ಟ ಮಾಡುವಿಕೆಯು ತೊಂದರೆಗೊಳಗಾದ ಅವನ ಭಾವನೆಗಳನ್ನು ಇನ್ನೂ ತೀವ್ರಗೊಳಿಸಬಹುದು. ಅವನ ಸಂದೇಶವನ್ನು ನೀವು ಗಂಭೀರವಾಗಿ ಪರಿಗಣಿಸದ ಕಾರಣ ಅವನು ಆಶಾಭಂಗಗೊಳ್ಳುವನು. ಆದುದರಿಂದ ಏನು ಹೇಳಲ್ಪಡುತ್ತದೊ ಅದನ್ನು ನೀವು ಕೇಳುತ್ತೀರಿ ಮತ್ತು ಸದ್ಯಕ್ಕೆ ವಿಷಯಗಳ ಕುರಿತು ಅವನು ಭಾವಿಸುವುದು ಹೀಗೆಯೇ ಎಂದು ನೀವು ಒಪ್ಪಿಕೊಳ್ಳುತ್ತೀರಿ ಎಂಬುದನ್ನು ನಿಮ್ಮ ಪ್ರತಿಕ್ರಿಯೆಗಳು ತೋರಿಸಲಿ.
ನಿಮ್ಮಲ್ಲಿ ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಂದಿಗೆ ನೀವು ಒಪ್ಪಬೇಕೆಂದು ಸಹಾನುಭೂತಿಯುಳ್ಳ ಆಲಿಸುವಿಕೆಯು ಅಗತ್ಯಪಡಿಸುವುದಿಲ್ಲ. “ನನ್ನ ಉದ್ಯೋಗವನ್ನು ನಾನು ದ್ವೇಷಿಸುತ್ತೇನೆ!” ಎಂದು ವ್ಯಕ್ತಿಯೊಬ್ಬನು ಉದ್ಗರಿಸುವುದರಲ್ಲಿ ನ್ಯಾಯವಿಲ್ಲವೆಂದು ನೀವು ನಂಬಬಹುದು. ಆದರೆ ನೀವು ಅಸಮ್ಮತಿ (‘ನೀನು ಆ ರೀತಿ ಭಾವಿಸಬಾರದು’) ಅಥವಾ ನಿರಾಕರಣೆಯಿಂದ (‘ವಾಸ್ತವವಾಗಿ ನೀನು ಅದನ್ನು ಅರ್ಥೈಸಿಕೊಂಡಿಲ್ಲ’) ಪ್ರತಿಕ್ರಿಯಿಸುವಲ್ಲಿ, ನೀವು ಅರ್ಥಮಾಡಿಕೊಳ್ಳುವುದಿಲ್ಲವೆಂದು ಅವನು ತೀರ್ಮಾನಿಸಬಹುದು. ನಿಮ್ಮ ಹೇಳಿಕೆಗಳು ನಿಮ್ಮ ತಿಳಿವಳಿಕೆಯನ್ನು ಪ್ರತಿಬಿಂಬಿಸಬೇಕು. ತನ್ನ ಉದ್ಯೋಗವನ್ನು ದ್ವೇಷಿಸುವ ವ್ಯಕ್ತಿಗೆ, ನೀವು ಹೀಗೆ ಹೇಳಬಹುದು, ‘ಅದು ಒತ್ತಡಭರಿತವಾಗಿರಲೇಬೇಕು.’ ಬಳಿಕ ಸ್ಪಷ್ಟೀಕರಿಸುವ ವಿವರಣೆಗಳಿಗಾಗಿ ಕೇಳಿಕೊಳ್ಳಿರಿ. ಹೀಗೆ ಅವನು ತನ್ನ ಉದ್ಯೋಗವನ್ನು ದ್ವೇಷಿಸಬೇಕು ಎಂದು ನೀವು ಅಗತ್ಯವಾಗಿ ಒಪ್ಪುತ್ತಿಲ್ಲವಾದರೂ, ಪ್ರಸ್ತುತ ಅವನಿಗೆ ಅನಿಸಿಕೆಯಾಗುತ್ತಿರುವುದು ಹೀಗೆಯೇ ಎಂಬುದನ್ನು ಮಾತ್ರ ಒಪ್ಪಿಕೊಳ್ಳುತ್ತೀರಿ. ಅದರಿಂದ ಕೇಳಲ್ಪಟ್ಟಿರುವ, ತನ್ನ ಭಾವನೆಗಳನ್ನು ಪೂರ್ಣವಾಗಿ ಹಂಚಿಕೊಂಡಿರುವ ಸಂತೃಪ್ತಿಯನ್ನು ಅವನಿಗೆ ಕೊಡುತ್ತೀರಿ. ಅನೇಕವೇಳೆ, ಸಮಸ್ಯೆಯಲ್ಲಿ ಭಾಗಿಯಾಗುವುದು ಅದನ್ನು ಕಡಿಮೆ ಮಾಡುತ್ತದೆ.
ತದ್ರೀತಿಯಲ್ಲಿ, “ನನ್ನ ಹೆಂಡತಿಗೆ ಇಂದು ವೈದ್ಯಕೀಯ ಪರೀಕ್ಷೆ ಇದೆ” ಎಂದು ಹೇಳುವ ವ್ಯಕ್ತಿ, “ನಾನು ಚಿಂತಿತನಾಗಿದ್ದೇನೆ” ಎಂದು ಅರ್ಥೈಸಸಾಧ್ಯವಿದೆ. ನಿಮ್ಮ ಪ್ರತಿಕ್ರಿಯೆಯು ಇದನ್ನು ಅಂಗೀಕರಿಸಲಿ. ನೀವು ಅವನ ಮಾತುಗಳ ಸೂಚಿತಾರ್ಥಕ್ಕೆ ಕಿವಿಗೊಟ್ಟಿದ್ದೀರೆಂದು ಇದು ತೋರಿಸುತ್ತದೆ, ಇದು, ನೀವು ಅವನ ಅರ್ಥವನ್ನು ತಿರಸ್ಕರಿಸಿದ್ದೀರಿ, ಅಲ್ಲಗಳೆದಿದ್ದೀರಿ ಅಥವಾ ಅವನು ಚಿಂತಿಸಬಾರದೆಂದು ಹೇಳುವ ಮೂಲಕ ಅವನನ್ನು ಸರಿಹೊಂದಿಸಲು ಪ್ರಯತ್ನಿಸಿದ್ದೀರಿ ಎಂಬುದಕ್ಕಿಂತ ಹೆಚ್ಚು ಸಾಂತ್ವನದಾಯಕವಾಗಿದೆ.—ರೋಮಾಪುರ 12:15.
ಒಳ್ಳೆಯ ಕೇಳುಗರು ಮಾತನ್ನೂ ಆಡುತ್ತಾರೆ!
ಆಲಿಸುವ ಆದರೆ “ಪ್ರತಿಷ್ಠಿತ ಗಾಂಭೀರ್ಯದ ಭಾವವನ್ನು ಅದು ತಮಗೆ ಕೊಡುತ್ತದೆಂದು ಆಲೋಚಿಸುತ್ತಾ” ತೀರ ಕಡಿಮೆ ಮಾತಾಡುವವರ ಕುರಿತು ದಿ ಆರ್ಟ್ ಆಫ್ ಕಾನರ್ಸ್ವೇಷನ್ ಮಾತಾಡುತ್ತದೆ. ಇದು ಬೇರೆ ವ್ಯಕ್ತಿಯನ್ನು ಅವನು ಎಲ್ಲಾ ಮಾತುಕತೆಯನ್ನು ನಡೆಸುವಂತೆ ಬಲಾತ್ಕರಿಸುತ್ತದೆ. ಇದು ಅಸಭ್ಯವಾಗಿದೆ. ಮತ್ತೊಂದು ಕಡೆಯಲ್ಲಿ ನೀವು ಸ್ವತಃ ವ್ಯಕ್ತಪಡಿಸಿಕೊಳ್ಳುವಂತೆ ನಿಮ್ಮನ್ನು ಅನುಮತಿಸದೆ, ನೀವು ಕಿವಿಗೊಡುತ್ತಿರುವ ವ್ಯಕ್ತಿಯು ತಡೆರಹಿತನಾಗಿ ಮಾತಾಡುತ್ತಾ ಮುಂದುವರಿಯುವುದಾದರೆ ಅದು ಸಹ ಅಸಭ್ಯವಾಗಿದೆ ಮತ್ತು ಬೇಸರಗೊಳಿಸುವಂತಹದ್ದಾಗಿದೆ. ಆದುದರಿಂದ, ನೀವು ಒಬ್ಬ ಒಳ್ಳೆಯ ಕೇಳುಗರಾಗಿರಬೇಕಾದ ಅಗತ್ಯವಿದ್ದರೂ, ಹೇಳಲಿಕ್ಕಾಗಿ ಸಹಾಯಕಾರಿಯಾದ ಯಾವುದೋ ವಿಷಯವು ನಿಮ್ಮಲ್ಲಿದೆಯೆಂಬುದನ್ನು ಬೇರೆ ವ್ಯಕ್ತಿಯು ತಿಳಿಯುವಂತೆ ಸಹ ನೀವು ಬಯಸಬಹುದು.
ನೀವು ಏನು ಹೇಳಬಹುದು? ನಿಮ್ಮ ಮಿತ್ರನ ಅಭಿವ್ಯಕ್ತಿಗಳಿಗೆ ಗೌರವಪೂರ್ಣವಾಗಿ ಕಿವಿಗೊಟ್ಟವರಾಗಿ, ಈಗ ನೀವು ಸಲಹೆಯನ್ನು ಕೊಡಬೇಕೊ? ಅದನ್ನು ಕೊಡಲು ನೀವು ಅರ್ಹರಾಗಿರುವಲ್ಲಿ, ಬಹುಶಃ ಕೊಡಬಹುದು. ನಿಮ್ಮ ಸ್ನೇಹಿತನ ಸಮಸ್ಯೆಗೆ ನಿಮ್ಮಲ್ಲಿ ಒಂದು ಪರಿಹಾರವಿರುವುದಾದರೆ, ನಿಶ್ಚಯವಾಗಿ ನೀವು ಅದನ್ನು ಅವನೊಂದಿಗೆ ಹಂಚಿಕೊಳ್ಳಿರಿ. ಪ್ರಥಮವಾಗಿ ನೀವು ಆಲಿಸುವುದರಲ್ಲಿ ಸಮಯವನ್ನು ಉಪಯೋಗಿಸಿರುವುದರಿಂದ ನಿಮ್ಮ ಮಾತುಗಳು ಕೊಂಚಮಟ್ಟಿಗೆ ಪ್ರಭಾವಕಾರಿಯಾಗಿರುವುವು. ಅವನಿಗೆ ಅಗತ್ಯವಾಗಿರುವ ರೀತಿಯ ಮಾರ್ಗದರ್ಶನೆ ಯಾ ಸಹಾಯವನ್ನು ನಿಮ್ಮ ಸ್ನೇಹಿತನಿಗೆ ಕೊಡಲಿಕ್ಕಾಗಿ ಅಗತ್ಯವಿರುವ ರುಜುವಾತುಗಳು ನಿಮ್ಮಲ್ಲಿ ಇಲ್ಲದಿರುವಲ್ಲಿ, ಅದನ್ನು ಕೊಡುವ ಸ್ಥಾನದಲ್ಲಿರುವ ಯಾರಾದರೊಬ್ಬರನ್ನು ಸಂಪರ್ಕಿಸುವಂತೆ ಅವನಿಗೆ ಸಹಾಯ ಮಾಡಿರಿ.
ಆದರೂ, ಕೆಲವು ವಿದ್ಯಮಾನಗಳಲ್ಲಿ, ಸಲಹೆಯ ಆವಶ್ಯಕತೆಯಿರುವುದಿಲ್ಲ ಯಾ ಸಲಹೆಯು ಕೇಳಿಕೊಳ್ಳಲ್ಪಡುವುದಿಲ್ಲ. ಆದುದರಿಂದ ಅನೇಕ ಮಾತುಗಳನ್ನು ಕೂಡಿಸುವ ಮೂಲಕ ನಿಮ್ಮ ಆಲಿಸುವಿಕೆಯ ಒಳ್ಳೆಯ ಪರಿಣಾಮಗಳನ್ನು ದುರ್ಬಲಗೊಳಿಸುವ ಕುರಿತು ಎಚ್ಚರಿಕೆಯಿಂದಿರಿ. ನಿಮ್ಮ ಸ್ನೇಹಿತನು ನಿಯಂತ್ರಿಸಲು ಸಾಧ್ಯವಿಲ್ಲದ ಒಂದು ಸನ್ನಿವೇಶವನ್ನು ತಾಳಿಕೊಳ್ಳಲೇಬೇಕಾಗಬಹುದು ಅಥವಾ ಕ್ರಮೇಣವಾಗಿ ತನ್ನ ನಕಾರಾತ್ಮಕ ಭಾವನೆಗಳನ್ನು ಜಯಿಸಬಹುದು. ಅವನು ತನ್ನ ತೊಂದರೆಯನ್ನು ಹೇಳಿಕೊಳ್ಳಲು ನಿಮ್ಮ ಬಳಿಗೆ ಬಂದನು. ನೀವು ಆಲಿಸಿದಿರಿ. ಅವನ ಭಾವನೆಗಳಲ್ಲಿ ನೀವು ಭಾಗಿಗಳಾದಿರಿ, ನೀವು ಚಿಂತಿತರಾಗಿದ್ದೀರಿ ಮತ್ತು ಅವನ ಕುರಿತು ನೀವು ಆಲೋಚಿಸುವಿರಿ ಹಾಗೂ ಅವನಿಗಾಗಿ ಪ್ರಾರ್ಥಿಸುವಿರೆಂದು ಅವನಿಗೆ ಭರವಸೆ ಕೊಡುತ್ತೀರಿ. ಅವನು ಪುನಃ ನಿಮ್ಮ ಬಳಿಗೆ ಬರಲು ಅವನಿಗೆ ಸ್ವಾಗತವಿದೆ ಮತ್ತು ಅವನ ಸಮಸ್ಯೆಗಳ ರಹಸ್ಯ ಪ್ರಕೃತಿಯನ್ನು ನೀವು ಗೌರವಿಸುವಿರೆಂದು ಅವನಿಗೆ ತಿಳಿದಿರಲಿ. ಅವನ ಸಮಸ್ಯೆಯನ್ನು ನೀವು ಪರಿಹರಿಸುವುದಕ್ಕೆ ಪ್ರಯತ್ನಿಸುವುದಕ್ಕಿಂತಲೂ ಹೆಚ್ಚಾಗಿ ಅಂತಹ ಸಂತೈಸುವಿಕೆಯು ಅವನಿಗೆ ಅಗತ್ಯವಾಗಿರುವುದು ಸಂಭವನೀಯ.—ಜ್ಞಾನೋಕ್ತಿ 10:19; 17:17; 1 ಥೆಸಲೊನೀಕ 5:14.
ಆಲಿಸುವಿಕೆಯು ಸಲಹೆಯಿಂದ ಜೊತೆಗೂಡಿರಲಿ ಇಲ್ಲದಿರಲಿ, ಒಳಗೂಡಿರುವ ಎರಡೂ ಪಕ್ಷಗಳಿಗೆ ಅದು ಪ್ರಯೋಜನಗಳನ್ನು ತರುತ್ತದೆ. ಮಾತಾಡುತ್ತಿರುವ ಒಬ್ಬನು ಕೇಳಲ್ಪಟ್ಟಿರುವ ಮತ್ತು ಗ್ರಹಿಸಲ್ಪಟ್ಟಿರುವ ಸಂತೃಪ್ತಿಯನ್ನು ಹೊಂದಿರುತ್ತಾನೆ. ಅವನು ಹೇಳಲು ಬಯಸುವ ವಿಷಯವೆಲ್ಲವನ್ನು ಆಲಿಸಲು ಯಾರಾದರೊಬ್ಬರು ಆಸಕ್ತಿ ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಅವನು ಸಂತೈಸಲ್ಪಡುತ್ತಾನೆ. ಆಲಿಸುವವನು ಸಹ ಪ್ರತಿಫಲವನ್ನು ಹೊಂದುತ್ತಾನೆ. ಇತರರು ಅವನ ಆಸಕ್ತಿಯನ್ನು ಮೆಚ್ಚುತ್ತಾರೆ. ಅವನು ಸಲಹೆಯನ್ನು ಕೊಡುವುದಾದರೆ ಅವನ ಗಮನಕ್ಕೆ ತರಲ್ಪಟ್ಟ ಸನ್ನಿವೇಶವನ್ನು ತಾನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ವರೆಗೆ ಅವನು ಮಾತಾಡದಿರುವ ಕಾರಣದಿಂದ ಅದು ಇನ್ನೂ ಹೆಚ್ಚು ವಿಶ್ವಾಸಾರ್ಹವಾದದ್ದಾಗಿದೆ. ಸಹಾನುಭೂತಿಯುಳ್ಳ ಆಲಿಸುವಿಕೆಯು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದು ಸತ್ಯ. ಆದರೆ ಎಂತಹ ಉಪಯುಕ್ತವಾದ ಒಂದು ಬಂಡವಾಳ! ವಾಸ್ತವವಾಗಿ, ನಿಮ್ಮ ಆಲೋಚನಾಸಕ್ತ ಗಮನವನ್ನು ಜನರಿಗೆ ಕೊಡುವ ಮೂಲಕ ನೀವು ಅವರಿಗೆ ವಿಶೇಷವಾದೊಂದು ಕೊಡುಗೆಯನ್ನು ಕೊಡುತ್ತೀರಿ.