ನಮ್ಮ ವಾಯುಮಂಡಲವು ಸಂರಕ್ಷಿಸಲ್ಪಡುವ ವಿಧ
ಮಾನವರು ನಮ್ಮ ಆಕಾಶಗಳನ್ನು ಕಲ್ಮಷದಿಂದ ತುಂಬಿಸುವುದನ್ನು ಮನಃಪೂರ್ವಕವಾಗಿ ನಿಲ್ಲಿಸುವರೊ? ನಮ್ಮ ವಾಯುಮಂಡಲವು ಸಂರಕ್ಷಿಸಲ್ಪಡಲಿರುವುದು ಈ ವಿಧದಿಂದಲೊ?
ಇಲ್ಲ. ನಮ್ಮ ಅಮೂಲ್ಯವಾದ ವಾಯುಮಂಡಲವನ್ನು ರಕ್ಷಿಸುವುದು, ಮಾಲಿನ್ಯವನ್ನು ತಡೆಗಟ್ಟುವ ಆವಶ್ಯಕತೆಗಳೊಂದಿಗೆ ಮಾನವ ಅನುವರ್ತನೆಯ ಮೇಲೆ ಅವಲಂಬಿಸಿರುವುದಿಲ್ಲ. ಬದಲಾಗಿ, ಶ್ರೇಷ್ಠ ಅಧಿಕಾರವುಳ್ಳ ಒಬ್ಬಾತನಿಂದ ಅಡಬ್ಡರುವಿಕೆಯು ತಾನೇ, ಶುದ್ಧಗೊಳಿಸಲ್ಪಟ್ಟ ವಾಯುಮಂಡಲವನ್ನು ಮಾತ್ರವಲ್ಲ, ನಿರ್ಮಲವಾದ ಭೂಮಿಯನ್ನೂ ತರುವುದು.
ಸೃಷ್ಟಿಕರ್ತನು ನಮ್ಮ ಭೂಮಿಗಾಗಿ ಹಾಗೂ ಅದರ ಮೇಲಿರುವ ಜೀವಕ್ಕಾಗಿ ಕಾಳಜಿ ವಹಿಸುತ್ತಾನೆ ಎಂಬುದು, ಆತನು ಅದನ್ನು ವಿನ್ಯಾಸಿಸಿರುವ ಅದ್ಭುತಕರವಾದ ವಿಧಾನದಿಂದ ತೋರಿಸಲ್ಪಟ್ಟಿದೆ. ಅದು ಯುಗಯುಗಾಂತರಕ್ಕೂ, ಸದಾಕಾಲಕ್ಕೂ ಬಾಳಿಕೆ ಬರುವಂತೆ ಆತನು ಅದನ್ನು ಮಾಡಿದನು.—ಕೀರ್ತನೆ 104:5, 24.
ದುರಸ್ತಿಗೆ ಒದಗಿಸುವಿಕೆಗಳು
ಉದಾಹರಣೆಗೆ, ಅದು ಸ್ವತಃ ರಿಪೇರಿ ಮಾಡಿಕೊಳ್ಳುವಂತಹ ಮತ್ತು ಶುದ್ಧಪಡಿಸಿಕೊಳ್ಳುವಂತಹ ಒಂದು ರೀತಿಯಲ್ಲಿ ವಾಯುಮಂಡಲವು ಸೃಷ್ಟಿಸಲ್ಪಟ್ಟಿತ್ತು. ಮೇಲ್ವಾಯುಮಂಡಲದಲ್ಲಿರುವ ಓಜೋನನ್ನು ಪರಿಗಣಿಸಿರಿ. ಭೂಮಿಯಲ್ಲಿರುವ ಮಾನವರಿಗೆ ಮಾರಕವಾಗಿರಬಹುದಾದ ನೀಲಲೋಹಿತಾತೀತ ವಿಕಿರಣವನ್ನು ಅದು ಹೀರಿಕೊಳ್ಳುವಂತೆ ಓಜೋನ್ ಕವಚವು ಚಾತುರ್ಯದಿಂದ ಮಾಡಲ್ಪಟ್ಟಿತು. ಅದೇ ಸಮಯದಲ್ಲಿ, ಭೂಮಿಯ ಜೀವವು ಅನುಭವಿಸಲು ಅಗತ್ಯವಾಗಿರುವ ಸುರಕ್ಷಿತ ಬೆಳಕನ್ನು ಅದು ಹಾದುಹೋಗಲು ಅನುಮತಿಸುತ್ತದೆ.
ಮೇಲ್ವಾಯುಮಂಡಲದೊಳಗೆ ಏರಿಹೋಗುವ ಮನುಷ್ಯ ನಿರ್ಮಿತ ಕ್ಲೋರೋಫ್ಲುಅರೋಕಾರ್ಬನ್ಸ್ಗಳಿಂದ ಓಜೋನ್ ಕವಚವು ತೀವ್ರವಾಗಿ ಹಾನಿಗೊಳಿಸಲ್ಪಟ್ಟಿದೆ ಎಂಬುದನ್ನು ನಾವು ಈ ಮುಂಚೆಯೇ ಕಲಿತೆವು. ಓಜೋನಿನ ಸಂರಕ್ಷಕ ಕವಚವು ಮತ್ತೆ ಹೇಗೆ ಭರ್ತಿಮಾಡಲ್ಪಡುವುದು? ಅದ್ಭುತಕರವಾಗಿ, ಅದು ಸ್ವತಃ ಸರಿಪಡಿಸಿಕೊಳ್ಳುವಂತೆ ಸೃಷ್ಟಿಕರ್ತನು ಅದನ್ನು ವಿನ್ಯಾಸಿಸಿದನು. ಹೌದು, ಮೇಲ್ವಾಯುಮಂಡಲದಲ್ಲಿ ಓಜೋನ್ ಸತತವಾಗಿ ನಿರ್ಮಿಸಲ್ಪಡುತ್ತಿದೆ—ವಾಸ್ತವವಾಗಿ, ಓಜೋನ್ ಶೋಧಿಸಿ ತೆಗೆಯುವಂತಹ ಅಪಾಯಕರ ಕಿರಣಗಳಿಂದಲೇ! ಹೀಗೆ ಮಾನವನ ಮಾಲಿನ್ಯವು ಓಜೋನನ್ನು ತೀವ್ರಗತಿಯಿಂದ ನಾಶಪಡಿಸುತ್ತಿರುವ ಸಮಯದಲ್ಲಿಯೇ, ಸ್ವಲ್ಪ ಓಜೋನ್ ಮತ್ತೆ ಭರ್ತಿಮಾಡಲ್ಪಡುತ್ತಿದೆ.
50ಕೋಟಿ ಕೋಟಿ ಟನ್ನುಗಳಿಗಿಂತ ಹೆಚ್ಚು ಗಾಳಿಯಲ್ಲಿ ಅಧಿಕಾಂಶ ಎಲ್ಲಿ ಕಂಡುಬರುತ್ತದೋ ಆ ಕೆಳಗಿನ ವಾಯುಮಂಡಲದಲ್ಲಿ ಸನ್ನಿವೇಶವು ತದ್ರೀತಿಯದ್ದಾಗಿದೆ. ಗಮನಾರ್ಹವಾದ ವಿಧಗಳಲ್ಲಿ ಕಶ್ಮಲಕಾರಕಗಳ ಈ ಗಾಳಿಯನ್ನು ನೈಸರ್ಗಿಕ ಆವರ್ತಗಳು ತೀವ್ರಗತಿಯಿಂದ ಶುದ್ಧ ಮಾಡುತ್ತವೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳಿಕೆ ನೀಡುವುದು: “ಮಲಿನಕಾರಕ ವಸ್ತುಗಳನ್ನು ಗಾಳಿಯು ಚೆದರಿಸುತ್ತದೆ, ಮತ್ತು ಮಳೆ ಹಾಗೂ ಹಿಮವು ಅವುಗಳನ್ನು ನೆಲದೊಳಕ್ಕೆ ತೊಳೆಯುತ್ತವೆ.”
ಹಾಗಾದರೆ, ಸ್ಪಷ್ಟವಾಗಿಗಿ, ಮಾನವರು ವಾಯುವನ್ನು ಮಲಿನಗೊಳಿಸುವುದನ್ನು ನಿಲ್ಲಿಸಿದರೆ, ಅಥವಾ ಅಂತಹ ಮಾಲಿನ್ಯವನ್ನು ಮಹತ್ತರವಾಗಿ ಪರಿಮಿತಗೊಳಿಸುವುದಾದರೆ, ಬೇಗನೆ ಎಲ್ಲೆಡೆಯಿರುವ ವಾಯುವು ಹಿತಕರವೂ ಪರಿಮಳವೂ ಆಗಸಾಧ್ಯವಿದೆ. “ಅನೇಕ ಕ್ಷೇತ್ರಗಳಲ್ಲಿ, ವಾತಾವರಣದ ಪರಿಸ್ಥಿತಿಗಳು ಅವುಗಳನ್ನು ತೆಗೆದುಹಾಕುವುದಕ್ಕಿಂತ ಹೆಚ್ಚು ವೇಗವಾಗಿ ಮಲಿನಕಾರಕ ವಸ್ತುಗಳು ಗಾಳಿಯೊಳಗೆ ಸೇರಿಸಲ್ಪಡುತ್ತವೆ” ಎಂದು ವಿವರಿಸುವ ಮೂಲಕ ಮೇಲಿನ ಆಧಾರ ಗ್ರಂಥವು ಸಮಸ್ಯೆಯನ್ನು ಗುರುತಿಸುತ್ತದೆ.
ಹಾಗಾದರೆ, ವಾಯುಮಂಡಲವನ್ನು ಮಲಿನಗೊಳಿಸುವುದರ ಕುರಿತಾದ ಮಾನವನ ಸ್ವಾರ್ಥವು ಹೇಗೆ ನಿಲ್ಲಿಸಲ್ಪಡುವುದು?
ಶುದ್ಧಗೊಳಿಸಲ್ಪಟ್ಟ ಒಂದು ಭೂಮಿಯು ಸಮೀಪವಿದೆ
ದೇವರು ಅಡಬ್ಡರುವಾಗ, ಕೇವಲ ಆತನಿಂದ ಮಾತ್ರವೇ ಮಾಲಿನ್ಯವು ನಿಲ್ಲಿಸಲ್ಪಡುವುದು. “ಭೂಮಿಯನ್ನು ವಿನಾಶಗೊಳಿಸುತ್ತಿರುವವರನ್ನು ಆತನು ನಾಶಗೊಳಿಸುವನು” ಎಂದು ಬೈಬಲು ಮುಂತಿಳಿಸುತ್ತದೆ. (ಪ್ರಕಟನೆ 11:18, NW) ಸುಂದರವಾದ ಈ ಭೂಮಿಯನ್ನು ಮತ್ತು ಅದರ ಜೀವ ಸಂರಕ್ಷಕ ವಾಯುಮಂಡಲವನ್ನು ಲೋಭಿ ಮಾನವರು ಅನಿಶ್ಚಿತ ಸಮಯದ ವರೆಗೆ ಮಲಿನಗೊಳಿಸುತ್ತಾ ಮುಂದುವರಿಯುವಂತೆ ಆತನು ಅನುಮತಿಸುವುದಿಲ್ಲ. ಆತನು ವಾಗ್ದಾನಿಸುವುದು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.”—ಕೀರ್ತನೆ 37:9.
ಎಲ್ಲಾ ಕೆಡುಕರಿಗೆ ಅಂತ್ಯವು ಹೇಗೆ ತರಲ್ಪಡಲಿರುವುದು? ಮಾನವರ ಕೊರತೆಯುಳ್ಳ ಸರಕಾರಗಳನ್ನು ಸ್ಥಾನಭರ್ತಿಮಾಡುವ, ಆತನ ರಾಜ್ಯ, ದೇವರ ಸ್ವರ್ಗೀಯ ಸರಕಾರದ ಮೂಲಕವಾಗಿ ಅದು ತರಲ್ಪಡಲಿರುವುದು. ಬೈಬಲು ವಾಗ್ದಾನಿಸುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ದೇವರ ಈ ರಾಜ್ಯ ಸರಕಾರವು, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಯಾವುದರ ಕುರಿತು ಪ್ರಾರ್ಥಿಸಲು ಕಲಿಸಿದನೋ ಅದಾಗಿದೆ.—ಮತ್ತಾಯ 6:10.
ಮಾನವರು ತನ್ನ ರಾಜ್ಯದ ಮೂಲಕ ಆಳಲ್ಪಡಬೇಕು ಮತ್ತು ಇದರಿಂದಾಗಿ ಮಾಲಿನ್ಯರಹಿತ ಪರಿಸರದಲ್ಲಿ ಜೀವನವನ್ನು ಆನಂದಿಸಬೇಕು ಎಂಬುದು ನಮ್ಮ ಭೂಮಿಯ ಕಡೆಗಿರುವ ದೇವರ ಇಚ್ಛೆಯಾಗಿದೆ. ಇದರಿಂದಾಗಿಯೇ ದೇವರು “ಭೂಮಿಯನ್ನು ವಿನಾಶಗೊಳಿಸುತ್ತಿರುವವರನ್ನು ನಾಶಗೊಳಿ”ಸಲು ನಿರ್ಧರಿಸಿದ್ದಾನೆ. (ಪ್ರಕಟನೆ 11:18, NW) ಬಿಡುಗಡೆಯ ಎಂಥ ಒಂದು ಬಲಿಷ್ಠ ಕೃತ್ಯವು ಅದಾಗಲಿರುವುದು!
ಸ್ವಾರ್ಥಿಗಳಾದ ಮಾನವರು ಅದರ ಮೇಲೆ ಹೇರಿರುವ ಎಲ್ಲಾ ಮಾಲಿನ್ಯದಿಂದ ಸ್ವತಂತ್ರವಾಗಿರುವ ಭೂಮಿಯ ಮೇಲೆ ಜೀವಿಸುವುದನ್ನು ಊಹಿಸಿಕೊಳ್ಳಿರಿ! ಆ ಸಮಯದಲ್ಲಿ ನಮ್ಮ ಅಮೂಲ್ಯವಾದ ವಾಯುಮಂಡಲವು ಆರೋಗ್ಯಕರ ಸ್ಥಿತಿಗೆ ಮತ್ತೆ ತರಲ್ಪಡುವುದು. ಬೈಬಲ್ ವಾಗ್ದಾನವು ನೆರವೇರಿಸಲ್ಪಡುವಾಗ ಇದು ಸಂಭವಿಸುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4; 2 ಪೇತ್ರ 3:13.
ದೇವರು ವಾಗ್ದಾನಿಸುವ ನೀತಿಯ ಹೊಸ ಲೋಕದೊಳಗೆ ಪಾರಾಗಲಿಕ್ಕಾಗಿ ನೀವು ಏನು ಮಾಡಬೇಕು? ದೇವರು ತನ್ನ ಪ್ರತಿನಿಧಿಯೋಪಾದಿ ಯಾರನ್ನು ಭೂಮಿಗೆ ಕಳುಹಿಸಿದ್ದಾನೊ ಅವನ ಬೋಧನೆಗಳನ್ನು ನೀವು ಕಲಿಯುವ ಮತ್ತು ಹಿಂಬಾಲಿಸುವ ಅಗತ್ಯವಿದೆ. (ಯೋಹಾನ 3:16; 7:29) ಈತನು—ಯೇಸು ಕ್ರಿಸ್ತನು—ದೇವರಿಗೆ ಪ್ರಾರ್ಥನೆಯಲ್ಲಿ ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.”—ಯೋಹಾನ 17:3.
[ಪುಟ 21 ರಲ್ಲಿರುವ ಚಿತ್ರ]
ಒಂದು ಶುದ್ಧವಾದ, ಮಾಲಿನ್ಯರಹಿತ ಪ್ರಮೋದವನ ಭೂಮಿಯು ಸಮೀಪವಿದೆ