ನಮ್ಮ ಭೂಗ್ರಹವನ್ನು ಸಂರಕ್ಷಿಸಲಿಕ್ಕಾಗಿ ಹೋರಾಟ
ಸ್ಪೆಯ್ನ್ನ ಎಚ್ಚರ! ಸುದ್ದಿಗಾರರಿಂದ
ರಷ್ಯನ್ ನಗರವಾದ ಕಾರಾಬಾಶ್ನಲ್ಲಿ ಜೀವಿಸುವ ಯೂರೀಗೆ ಇಬ್ಬರು ಮಕ್ಕಳಿದ್ದಾರೆ, ಮತ್ತು ಅವರಿಬ್ಬರೂ ಅಸ್ವಸ್ಥರಾಗಿದ್ದಾರೆ. ಅವನು ಚಿಂತಿತನಾಗಿದ್ದಾನೆ, ಆದರೆ ಆಶ್ಚರ್ಯಗೊಂಡಿಲ್ಲ. “ಇಲ್ಲಿ ಆರೋಗ್ಯವಂತರಾದ ಮಕ್ಕಳಿಲ್ಲ” ಎಂದು ಅವನು ವಿವರಿಸುತ್ತಾನೆ. ಕಾರಾಬಾಶ್ನ ಜನರು ವಿಷಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ. ಸ್ಥಳಿಕ ಕಾರ್ಖಾನೆಯೊಂದು ಪ್ರತಿ ವರ್ಷ 1,62,000 ಟನ್ನುಗಳಷ್ಟು—ಅಲ್ಲಿ ಜೀವಿಸುತ್ತಿರುವ ಪ್ರತಿ ಪುರುಷ, ಸ್ತ್ರೀ, ಮತ್ತು ಮಗುವಿಗೆ ಸರಾಸರಿ 9 ಟನ್ನುಗಳು—ಮಲಿನಕಾರಕ ವಸ್ತುಗಳನ್ನು ಗಾಳಿಯಲ್ಲಿ ಹೊರಸೂಸುತ್ತದೆ. ಸಮಭಾಜಕ ವೃತ್ತದಿಂದ ಉತ್ತರಕ್ಕೆ, ಕೋಲ ದ್ವೀಪಕಲ್ಪದಲ್ಲಿರುವ ನೀಕೆಲ್ ನಗರ ಮತ್ತು ಮಾಂಚಗಾರ್ಸ್ಕ್ ಪಟ್ಟಣದಲ್ಲಿ, “ಲೋಕದ ಅತ್ಯಂತ ದೊಡ್ಡ ಮತ್ತು ಅತ್ಯಂತ ಪುರಾತನ ನಿಕಲ್ ಲೋಹ ಶೋಧಕಗಳಲ್ಲಿ ಎರಡು, . . . ರಷ್ಯಾದಲ್ಲಿರುವ ಅಂತಹ ಇತರ ಯಾವುದೇ ಕಾರ್ಖಾನೆಗಳಿಗಿಂತ ಹೆಚ್ಚಾಗಿ, ಪ್ರತಿ ವರ್ಷ ಭಾರಿ ಲೋಹಗಳನ್ನು ಹಾಗೂ ಗಂಧಕದ ಡೈಆಕ್ಸೈಡನ್ನು ಗಾಳಿಯಲ್ಲಿ ಹೊರಸೂಸುತ್ತವೆ.”—ದ ನ್ಯೂ ಯಾರ್ಕ್ ಟೈಮ್ಸ್.
ಮೆಕ್ಸಿಕೊ ನಗರದಲ್ಲಿ ಗಾಳಿಯು ಹೆಚ್ಚು ಆರೋಗ್ಯಕರವಾಗಿಲ್ಲ. ನಗರದ ಧನಿಕ ಕ್ಷೇತ್ರವೊಂದರಲ್ಲಿ ಸಹ, ಮಕ್ಕಳು 5ರಲ್ಲಿ 4 ದಿನಗಳು ಅಸ್ವಸ್ಥರಾಗಿದ್ದರೆಂದು, ಡಾ. ಮಾರ್ಗಾರೀಟ ಕಾಸ್ಟೀಯೆಹಾಸ್ರಿಂದ ನಡೆಸಲ್ಪಟ್ಟ ಸಮೀಕ್ಷೆಯೊಂದು ಕಂಡುಕೊಂಡಿತು. “ಅಸ್ವಸ್ಥರಾಗಿರುವುದು ಅವರಿಗೆ ಸಾಮಾನ್ಯವಾಗಿ ಹೋಗಿದೆ” ಎಂದು ಅವರು ಗಮನಿಸಿದರು. ಪ್ರಮುಖ ದೋಷಗಳಲ್ಲಿ ಒಂದು, ನಗರದ ಬೀದಿಗಳನ್ನು ಪ್ರತಿಬಂಧಿಸುವ ಸಾವಿರಾರು ವಾಹನಗಳಿಂದ ಉತ್ಪಾದಿಸಲ್ಪಡುವ, ಪೂರ್ತಿವ್ಯಾಪಕವಾದ ಹೊಗೆಮಂಜಾಗಿದೆ ಎಂದು ಅವರು ಹೇಳುತ್ತಾರೆ. ಓಸೋನ್ ಸಾಂದ್ರೀಕರಣಗಳು, ಲೋಕಾರೋಗ್ಯ ಸಂಸ್ಥೆಯ ಮಾರ್ಗದರ್ಶನದ ಗರಿಷ್ಠ ಪ್ರಮಾಣಕ್ಕಿಂತಲೂ ನಾಲ್ಕು ಪಟ್ಟು ಇವೆ.
ಆಸ್ಟ್ರೇಲಿಯದಲ್ಲಿ ಅಪಾಯವು ಅಗೋಚರವಾಗಿದೆ—ಆದರೆ ಅಷ್ಟೇ ಮಾರಕವಾಗಿದೆ. ಈಗ ಮಕ್ಕಳು ಶಾಲೆಯ ಆಟದ ಮೈದಾನದಲ್ಲಿ ಆಟವಾಡುವಾಗ ಟೋಪಿಗಳನ್ನು ಧರಿಸಬೇಕಾಗಿದೆ. ದಕ್ಷಿಣಾರ್ಧಗೋಳದಲ್ಲಿನ ಓಸೋನ್ನ ಸಂರಕ್ಷಕ ಕವಚದ ಭಾರಿ ನಷ್ಟವು, ಆಸ್ಟ್ರೇಲಿಯದವರು ಸೂರ್ಯನನ್ನು ಒಬ್ಬ ಮಿತ್ರನಾಗಿ ವೀಕ್ಷಿಸುವುದಕ್ಕೆ ಬದಲಾಗಿ ಶತ್ರುವಾಗಿ ವೀಕ್ಷಿಸಲಾರಂಭಿಸುವಂತೆ ಮಾಡಿದೆ. ಅವರು ಈಗಾಗಲೇ ಚರ್ಮದ ಕ್ಯಾನ್ಸರ್ಗಳಲ್ಲಿ ಮೂರು ಪಟ್ಟು ಹೆಚ್ಚಳವನ್ನು ಕಂಡಿದ್ದಾರೆ.
ಲೋಕದ ಇತರ ಭಾಗಗಳಲ್ಲಿ, ಸಾಕಷ್ಟು ಪ್ರಮಾಣದ ನೀರನ್ನು ಕಂಡುಕೊಳ್ಳುವುದು ದೈನಂದಿನ ಹೋರಾಟವಾಗಿದೆ. ಆಮಾಲ್ಯಾ 13 ವರ್ಷ ಪ್ರಾಯದವಳಾಗಿದ್ದಾಗ, ಮೊಸಾಂಬೀಕ್ಗೆ ಬರ ಬಂತು. ಮೊದಲ ವರ್ಷದಲ್ಲಿ ನೀರು ಸಾಕಷ್ಟಿರಲಿಲ್ಲ ಮತ್ತು ತದನಂತರದ ವರ್ಷದಲ್ಲಿ ನೀರೇ ಇರಲಿಲ್ಲ. ಕಾಯಿಪಲ್ಯದ ಬೆಳೆಗಳು ಒಣಗಿ, ನಶಿಸಿಹೋದವು. ಆಮಾಲ್ಯಾ ಮತ್ತು ಅವಳ ಕುಟುಂಬವು, ಕಾಡು ಹಣ್ಣುಗಳನ್ನು ತಿನ್ನುವಂತೆ ಹಾಗೂ ಅವರು ಕಂಡುಕೊಳ್ಳಸಾಧ್ಯವಿದ್ದ ಯಾವುದೇ ಅಮೂಲ್ಯ ನೀರಿಗಾಗಿ ನದಿಯ ಮರಳ ಪದರಗಳಲ್ಲಿ ಅಗೆಯುವಂತೆ ಒತ್ತಾಯಿಸಲ್ಪಟ್ಟಿತು.
ಭಾರತದ ರಾಜಸ್ಥಾನ ಎಂಬ ರಾಜ್ಯದಲ್ಲಿ, ವೇಗವಾಗಿ ಕಣ್ಮರೆಯಾಗುತ್ತಿರುವುದು ಹುಲ್ಲುಗಾವಲು ಪ್ರದೇಶವಾಗಿದೆ. ಅಲೆಮಾರಿ ಬುಡಕಟ್ಟಿನವನಾದ ಫಾಗೂ, ಆಗಿಂದಾಗ್ಗೆ ಸ್ಥಳಿಕ ರೈತರೊಂದಿಗೆ ವಾಗ್ವಾದಗಳನ್ನು ಮಾಡುತ್ತಾನೆ. ಅವನಿಗೆ ತನ್ನ ಕುರಿಗಳು ಮತ್ತು ಆಡುಗಳ ಮಂದೆಗಾಗಿ ಮೇವನ್ನು ಕಂಡುಕೊಳ್ಳುವುದು ಅಸಾಧ್ಯವಾಗಿದೆ. ಫಲವತ್ಭರಿತವಾದ ಜಮೀನಿನ ತೀವ್ರ ಕೊರತೆಯ ಕಾರಣದಿಂದಾಗಿ, ರೈತರು ಹಾಗೂ ಅಲೆಮಾರಿಗಳ ನಡುವಿನ—ಶತಮಾನಗಳುದ್ದಕ್ಕೂ ಅಸ್ತಿತ್ವದಲ್ಲಿದ್ದ—ಶಾಂತಿಭರಿತ ಸಹಬಾಳ್ವೆಯು ಕುಸಿದುಬಿದ್ದಿದೆ.
ಆಫ್ರಿಕದಲ್ಲಿನ ಸಹಾರಾ ಮರುಭೂಮಿಯ ದಕ್ಷಿಣ ತುದಿಯಲ್ಲಿರುವ, ಅರೆಬಂಜರು ಪ್ರದೇಶದ ವಿಸ್ತಾರ ವಲಯವಾದ ಸಾಹೆಲ್ನಲ್ಲಿ ಸನ್ನಿವೇಶವು ಇನ್ನೂ ಕೆಟ್ಟದ್ದಾಗಿದೆ. ಅರಣ್ಯನಾಶ ಮತ್ತು ತರುವಾಯದ ಬರದ ಫಲಿತಾಂಶವಾಗಿ, ಇಡೀ ಮಂದೆಗಳು ನಾಶವಾಗಿವೆ ಮತ್ತು ಅಸಂಖ್ಯಾತ ಸಣ್ಣ ಹಿಡುವಳಿಯ ಜಮೀನುಗಳು, ಮುಂದುವರಿಯುತ್ತಿರುವ ಮರುಭೂಮಿಯ ಮರಳುಗಳಲ್ಲಿ ಹೂಳಲ್ಪಟ್ಟಿವೆ. ಅವನ ಧಾನ್ಯ (ಮಿಲೆಟ್)ಗಳ ಬೆಳೆಯು ಏಳನೆಯ ಬಾರಿ ಹಾಳಾದುದನ್ನು ನೋಡಿದ ಬಳಿಕ, ನೈಜರ್ನ ಫುಲಾನಿ ರೈತನು “ನಾನು ಪುನಃ ಬೇಸಾಯ ಮಾಡುವುದಿಲ್ಲ” ಎಂದು ಪ್ರತಿಜ್ಞೆಮಾಡಿದನು. ಈಗಾಗಲೇ ಅವನ ದನಕರುಗಳು ಮೇವಿನ ಕೊರತೆಯಿಂದ ಸತ್ತುಹೋಗಿದ್ದವು.
ಬೆಳೆಯುತ್ತಿರುವ ಅಪಾಯ
ಇತ್ತೀಚಿನ ಬರಗಳು, ನಷ್ಟಗೊಂಡ ಕ್ಲೊಯುಗಳು, ಮತ್ತು ಒಂದರ ಮೇಲೊಂದು ನಗರವನ್ನು ಉಸಿರುಕಟ್ಟಿಸುವ ಮಲಿನಗೊಂಡ ಗಾಳಿಯ ಹಿಂದೆ ತದ್ರೀತಿಯ ಭಯಸೂಚಕ ಅಂಶಗಳು ಇವೆ. ಅವು ಅಸ್ವಸ್ಥವಾದ ಒಂದು ಭೂಗ್ರಹ, ಮನುಷ್ಯನು ತನ್ನ ಮೇಲೆ ಹೇರುತ್ತಿರುವ ಎಲ್ಲಾ ತಗಾದೆಗಳನ್ನು ಇನ್ನುಮುಂದೆ ನಿಭಾಯಿಸಲಸಾಧ್ಯವಾದ ಒಂದು ಭೂಗ್ರಹದ ರೋಗಲಕ್ಷಣಗಳಾಗಿವೆ.
ನಾವು ಉಸಿರಾಡುವ ಗಾಳಿ, ನಾವು ತಿನ್ನುವ ಆಹಾರ, ಮತ್ತು ನಾವು ಕುಡಿಯುವ ನೀರಿನ ಹೊರತಾಗಿ, ಭೂಮಿಯಲ್ಲಿರುವ ಯಾವುದೂ ನಮ್ಮ ಬದುಕಿ ಉಳಿಯುವಿಕೆಗೆ ಹೆಚ್ಚು ಪ್ರಾಮುಖ್ಯವಾದದ್ದಾಗಿಲ್ಲ. ನಿಷ್ಕಾರುಣ್ಯವಾಗಿ, ಈ ಜೀವಸಂರಕ್ಷಕ ಅಗತ್ಯಗಳು, ಮನುಷ್ಯನಿಂದಲೇ ಕಲುಷಿತಗೊಳಿಸಲ್ಪಡುತ್ತಿವೆ ಅಥವಾ ಕುಗ್ಗಿಸಲ್ಪಡುತ್ತಿವೆ. ಕೆಲವು ದೇಶಗಳಲ್ಲಿ ಪರಿಸರದ ಸ್ಥಿತಿಯು ಈಗಾಗಲೇ ಜೀವಕ್ಕೆ ಅಪಾಯವನ್ನುಂಟುಮಾಡುವಂತಹದ್ದಾಗಿದೆ. ಸೋವಿಯೆಟ್ನ ಮಾಜಿ ಅಧ್ಯಕ್ಷರಾದ ಮಿಕಾಯೆಲ್ ಗೊರ್ಬಚವ್ ಇದನ್ನು, “ಜೀವಿಪರಿಸ್ಥಿತಿ ಶಾಸ್ತ್ರದೊಂದಿಗಿನ ಸಮಸ್ಯೆಗಳು, ನಮ್ಮ ಅಸ್ತಿತ್ವಕ್ಕೆ ಗಂಭೀರವಾದ ಅಪಾಯವನ್ನುಂಟುಮಾಡುತ್ತಿವೆ” ಎಂದು ಸುಸ್ಪಷ್ಟವಾಗಿ ವ್ಯಕ್ತಪಡಿಸಿದರು.
ಆ ಅಪಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ಲೋಕದ ಜನಸಂಖ್ಯೆಯು ಏಕಪ್ರಕಾರವಾಗಿ ಅಧಿಕಗೊಳ್ಳುತ್ತಿದೆ, ಮತ್ತು ಪರಿಮಿತ ಸಂಪನ್ಮೂಲಗಳ ಮೇಲಿನ ಬೇಡಿಕೆಗಳು ವರ್ಧಿಸುತ್ತಿವೆ. ವರ್ಲ್ಡ್ವಾಚ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷರಾದ ಲೆಸ್ಟರ್ ಬ್ರೌನ್ ಇತ್ತೀಚೆಗೆ ಹೇಳಿದ್ದು: “ನಮ್ಮ ಭವಿಷ್ಯತ್ತಿಗಿರುವ ತಡೆಯಲಸಾಧ್ಯವಾದ ಅಪಾಯವು ಮಿಲಿಟರಿ ಆಕ್ರಮಣಶೀಲತೆಯಲ್ಲ, ಬದಲಾಗಿ ಭೂಗ್ರಹದ ಪರಿಸರೀಯ ಅವನತಿಯೇ ಆಗಿದೆ.” ಒಂದು ದುರಂತವನ್ನು ತಪ್ಪಿಸಲಿಕ್ಕಾಗಿ ಸಾಕಷ್ಟು ಕಾರ್ಯವು ಮಾಡಲ್ಪಡುತ್ತಿದೆಯೊ?
ಭೂಗ್ರಹವನ್ನು ಸಂರಕ್ಷಿಸಲಿಕ್ಕಾಗಿ ಹೋರಾಟ
ತನಗೆ ಕುಡಿತದ ಸಮಸ್ಯೆಯಿಲ್ಲ ಎಂದು ಮನಗಂಡಿರುವ ಮದ್ಯವ್ಯಸನಿಯೊಬ್ಬನಿಗೆ ಸಹಾಯ ಮಾಡುವುದು ಕಷ್ಟಕರವಾಗಿದೆ. ತದ್ರೀತಿಯಲ್ಲಿ, ಭೂಗ್ರಹದ ಆರೋಗ್ಯವನ್ನು ಉತ್ತಮಗೊಳಿಸುವುದರಲ್ಲಿನ ಪ್ರಥಮ ಹೆಜ್ಜೆಯು, ವ್ಯಾಧಿಯ ವ್ಯಾಪಕತೆಯನ್ನು ಗ್ರಹಿಸುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಶಿಕ್ಷಣವು ಪ್ರಮುಖವಾದ ಪರಿಸರೀಯ ಯಶಸ್ಸು ಆಗಿರಬಹುದು. ಇಂದಿನ ಹೆಚ್ಚಿನ ಜನರು, ನಮ್ಮ ಭೂಮಿಯು ಬಡತನಕ್ಕೆ ತರಲ್ಪಡುತ್ತಿದೆ ಮತ್ತು ಮಲಿನಗೊಳಿಸಲ್ಪಡುತ್ತಿದೆ ಹಾಗೂ ಇದರ ಕುರಿತು ಏನಾದರೂ ಮಾಡಲ್ಪಡಬೇಕು ಎಂಬುದರ ಕುರಿತಾಗಿ ತೀಕ್ಷ್ಣವಾದ ಅರಿವುಳ್ಳವರಾಗಿದ್ದಾರೆ. ಪರಿಸರೀಯ ಅವನತಿಯ ಅಪಾಯವು, ಈಗ ನ್ಯೂಕ್ಲಿಯರ್ ಯುದ್ಧದ ಅಪಾಯಕ್ಕಿಂತಲೂ ಭಾರಿ ಹೆಚ್ಚು ಭಯಹುಟ್ಟಿಸುವಂತಹದ್ದಾಗಿ ಕಾಣಿಸಿಕೊಳ್ಳುತ್ತದೆ.
ಲೋಕನಾಯಕರು ಈ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. 1992ರಲ್ಲಿ ಸುಮಾರು 118 ದೇಶನಾಯಕರು, ಅರ್ತ್ ಸಮಿಟ್ ಸಮ್ಮೇಳನವನ್ನು ಹಾಜರಾದರು; ಅಲ್ಲಿ ವಾಯುಮಂಡಲವನ್ನು ಹಾಗೂ ಭೂಮಿಯ ನಶಿಸಿಹೋಗುತ್ತಿರುವ ಸಂಪನ್ಮೂಲಗಳನ್ನು ಸಂರಕ್ಷಿಸುವುದರ ಸಂಬಂಧವಾಗಿ ಕೆಲವು ಸೂಕ್ತಕ್ರಮಗಳು ತೆಗೆದುಕೊಳ್ಳಲ್ಪಟ್ಟವು. ಸಮೀಪ ಭವಿಷ್ಯತ್ತಿನಲ್ಲಿ ಒಟ್ಟು ಉತ್ಪನ್ನವನ್ನು ಸ್ಥಿರೀಕರಿಸುವ ಉದ್ದೇಶದಿಂದ, ಕಾರ್ಬನ್ನ ಹೊರಸೂಸುವಿಕೆಗಳಲ್ಲಿನ ಬದಲಾವಣೆಗಳನ್ನು ವರದಿಸಲಿಕ್ಕಾಗಿರುವ ಒಂದು ವ್ಯವಸ್ಥೆಯನ್ನು ಸ್ಥಾಪಿಸಲು, ಅವು ಅಂಗೀಕಾರವನ್ನು ಸೂಚಿಸಿದಂತಹ ಒಂದು ಹವಾಮಾನ ಒಪ್ಪಂದಕ್ಕೆ ಅಧಿಕಾಂಶ ದೇಶಗಳು ಸಹಿಮಾಡಿದವು. ನಮ್ಮ ಭೂಗ್ರಹದ ಜೈವಿಕಭಿನ್ನತೆ—ಸಸ್ಯ ಮತ್ತು ಪ್ರಾಣಿ ಜಾತಿಗಳ ಒಟ್ಟು ಸಂಖ್ಯೆ—ಯನ್ನು ಕಾಪಾಡುವುದರ ಕುರಿತಾದ ಮಾರ್ಗಗಳನ್ನು ಸಹ ಅವು ಪರಿಗಣಿಸಿದವು. ಲೋಕದ ಕಾಡುಗಳನ್ನು ಸಂರಕ್ಷಿಸುವುದರ ಕುರಿತು ಒಪ್ಪಂದವನ್ನು ಮಾಡಲಾಗಲಿಲ್ಲವಾದರೂ, ಆ ಸಮಿಟ್ ಎರಡು ದಾಖಲೆಗಳನ್ನು ಖಂಡಿತವಾಗಿ ತಯಾರಿಸಿತು—“ರೀಯೊ ಘೋಷಣೆ” ಮತ್ತು “ಅಜೆಂಡ 21,” ಅವುಗಳಲ್ಲಿ ದೇಶಗಳು “ಪೋಷಕ ವಿಕಸನ”ವನ್ನು ಹೇಗೆ ಸಾಧಿಸಸಾಧ್ಯವಿದೆ ಎಂಬುದರ ಕುರಿತಾದ ಮಾರ್ಗದರ್ಶನಗಳು ಒಳಗೊಂಡಿದ್ದವು.
ಪರಿಸರವಾದಿಯಾದ ಆ್ಯಲನ್ ಹ್ಯಾಮಂಡ್ ಸೂಚಿಸುವಂತೆ, “ರೀಯೊದಲ್ಲಿ ಮಾಡಲ್ಪಟ್ಟ ಬದ್ಧತೆಗಳು ಅನುಸರಿಸಲ್ಪಡುತ್ತವೊ ಇಲ್ಲವೊ ಎಂಬುದು ನಿರ್ಣಾಯಕ ಪರೀಕ್ಷೆಯಾಗಿರುವುದು—ಮುಂದಿನ ತಿಂಗಳುಗಳಲ್ಲಿ ಹಾಗೂ ವರ್ಷಗಳಲ್ಲಿ ಆ ಧೀರ ನುಡಿಗಳು ಕ್ರಿಯೆಗಳಿಗೆ ನಡೆಸುವವೊ ಇಲ್ಲವೊ ತಿಳಿಯದು.”
ಆದರೂ, ನಿಗದಿಸಲ್ಪಟ್ಟ ಪರಿಮಿತ ಸಮಯದೊಳಗೆ ಕ್ಲೋರೋಫ್ಲುಅರೋಕಾರ್ಬನ್ಸ್ (CFCs)ನ ಉತ್ಪಾದನೆಯನ್ನು ಪರ್ಯಾಯ ಕ್ರಮದಿಂದ ನಿಲ್ಲಿಸಲಿಕ್ಕಾಗಿರುವ ಅಂತಾರಾಷ್ಟ್ರೀಯ ಒಪ್ಪಂದವನ್ನು ಒಳಗೊಂಡಿದ್ದ, 1987 ಮಾಂಟ್ರಿಯಲ್ ಪ್ರೋಟೋಕಾಲ್, ಒಂದು ಗಮನಾರ್ಹವಾದ ಮುನ್ನೆಜ್ಜೆಯಾಗಿತ್ತು.a ಈ ಚಿಂತೆ ಏಕೆ? ಸಿಎಫ್ಸೀಸ್ ಭೂಮಿಯ ಸಂರಕ್ಷಕ ಓಸೋನ್ ಪದರದ ತೀವ್ರಗತಿಯ ವಿರೇಚನಕ್ಕೆ ನೆರವನ್ನೀಯುತ್ತವೆಂದು ಹೇಳಲಾಗಿರುವುದರಿಂದಲೇ. ಚರ್ಮದ ಕ್ಯಾನ್ಸರ್ ಮತ್ತು ಕ್ಯಾಟರ್ಯಾಕ್ಟ್ ರೋಗಗಳನ್ನು ಉಂಟುಮಾಡಸಾಧ್ಯವಿರುವ ಸೂರ್ಯನ ನೀಲಲೋಹಿತಾತೀತ ಕಿರಣಗಳನ್ನು ಶೋಧಿಸುವುದರಲ್ಲಿ, ಭೂಮಿಯ ಮೇಲ್ವಾಯುಮಂಡಲದಲ್ಲಿರುವ ಓಸೋನ್, ಅತಿ ಮುಖ್ಯವಾದ ಒಂದು ಪಾತ್ರವನ್ನು ವಹಿಸುತ್ತದೆ. ಇದು ಕೇವಲ ಆಸ್ಟ್ರೇಲಿಯದಲ್ಲಿರುವ ಒಂದು ಸಮಸ್ಯೆಯಾಗಿಲ್ಲ. ಇತ್ತೀಚೆಗೆ, ಉತ್ತರಾರ್ಧಗೋಳದ ಕೆಲವು ಉಷ್ಣ ವಲಯಗಳ ಮೇಲಿನ, ಚಳಿಗಾಲದ ಓಸೋನ್ ಸಾಂದ್ರೀಕರಣದಲ್ಲಿ 8 ಪ್ರತಿಶತ ಇಳಿತವನ್ನು ವಿಜ್ಞಾನಿಗಳು ಪತ್ತೆಮಾಡಿದ್ದಾರೆ. ಎರಡು ಕೋಟಿ ಟನ್ನುಗಳಷ್ಟು ಸಿಎಫ್ಸೀಸ್ ಈಗಾಗಲೇ ವಾಯುಮಂಡಲ ಸ್ತರದ ಕಡೆಗೆ ಕೊಚ್ಚಿಹೋಗಿದೆ.
ವಾಯುಮಂಡಲದ ಈ ವಿಪತ್ಕಾರಕ ಕಲುಷಿತಗೊಳಿಸುವಿಕೆಯಿಂದ ಎದುರಿಸಲ್ಪಡುತ್ತಿದ್ದು, ಲೋಕದ ರಾಷ್ಟ್ರಗಳು ತಮ್ಮ ಭಿನ್ನತೆಗಳನ್ನು ಬದಿಗಿರಿಸಿ, ನಿರ್ಣಾಯಕ ಕ್ರಿಯೆಯನ್ನು ಕೈಗೊಂಡವು. ವಿಪತ್ತಿಗೊಳಗಾಗಿರುವ ಜಾತಿಗಳನ್ನು ಸಂರಕ್ಷಿಸಲು, ಅಂಟಾರ್ಕ್ಟಿಕವನ್ನು ಕಾಪಾಡಲು, ಮತ್ತು ವಿಷಮಯ ಕಸಗಳ ಸಾಗಣೆಯನ್ನು ನಿಯಂತ್ರಿಸಲಿಕ್ಕಾಗಿ, ಇತರ ಅಂತಾರಾಷ್ಟ್ರೀಯ ಕ್ರಮಗಳು ಸಹ ಮುಂದಕ್ಕೆ ತರಲ್ಪಡುತ್ತಿವೆ.
ಅನೇಕ ದೇಶಗಳು, ತಮ್ಮ ನದಿಗಳನ್ನು ಸ್ವಚ್ಛಗೊಳಿಸಲು (ಸ್ಯಾಮನ್ ಮೀನುಗಳು ಈಗ ಇಂಗ್ಲೆಂಡ್ನ ಥೇಮ್ಸ್ ನದಿಗೆ ಹಿಂದಿರುಗಿವೆ), ವಾಯು ಮಾಲಿನ್ಯವನ್ನು ನಿಯಂತ್ರಿಸಲು (ಅತ್ಯಂತ ಕೆಟ್ಟ ಹೊಗೆಮಂಜಿರುವ, ಅಮೆರಿಕದ ನಗರಗಳಲ್ಲಿ ಇದು 10 ಪ್ರತಿಶತ ಇಳಿದಿದೆ), ಪರಿಸರ ಮೈತ್ರಿಯ ಶಕ್ತಿ ಸಂಪನ್ಮೂಲಗಳನ್ನು ತೆಗೆಯಲು (ಐಸ್ಲೆಂಡ್ನಲ್ಲಿರುವ 80 ಪ್ರತಿಶತ ಮನೆಗಳು ಭೂಉಷ್ಣ ಶಕ್ತಿಯಿಂದ ಕಾಯಿಸಲ್ಪಡುತ್ತವೆ), ಮತ್ತು ತಮ್ಮ ನೈಸರ್ಗಿಕ ಸ್ವತ್ತನ್ನು ಕಾಪಾಡಿಕೊಳ್ಳಲು (ಕಾಸ್ಟರೀಕ ಮತ್ತು ನಮಿಬೀಯಗಳು, ತಮ್ಮ ಒಟ್ಟು ಜಮೀನು ಕ್ಷೇತ್ರದ 12 ಪ್ರತಿಶತ ಭಾಗವನ್ನು ರಾಷ್ಟ್ರೀಯ ಉದ್ಯಾನವನಗಳಾಗಿ ಮಾರ್ಪಡಿಸಿವೆ) ಸೂಕ್ತಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಮಾನವಕುಲವು ಅಪಾಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಎಂಬುದಕ್ಕೆ ಇವು ಸಕಾರಾತ್ಮಕವಾದ ಸೂಚನೆಗಳಾಗಿವೆಯೊ? ನಮ್ಮ ಭೂಗ್ರಹವು ಪುನಃ ಆರೋಗ್ಯಕ್ಕೆ ಹಿಂದಿರುಗುವುದು ಇನ್ನೇನು ಸಮಯದ ಪ್ರಶ್ನೆಯಾಗಿದೆಯೆ? ಮುಂದಿನ ಲೇಖನಗಳು ಆ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುವವು.
[ಪಾದಟಿಪ್ಪಣಿ]
a ಸಿಎಫ್ಸೀಸ್, ವಾಯುದ್ರವ ಸಿಂಪಡಿಸುವ ಯಂತ್ರಗಳಲ್ಲಿ, ಶೀತಕಗಳಲ್ಲಿ, ಹವಾನಿಯಂತ್ರಕ ಯೂನಿಟ್ಗಳಲ್ಲಿ, ಚೊಕ್ಕಟಗೊಳಿಸುವ ಸಾಧನಗಳಲ್ಲಿ, ಮತ್ತು ಫೋಮ್ ನಿರೋಧಕದ ತಯಾರಿಕೆಯಲ್ಲಿ ವ್ಯಾಪಕವಾಗಿ ಉಪಯೋಗಿಸಲ್ಪಟ್ಟಿವೆ. ಜನವರಿ 8, 1995ರ ಎಚ್ಚರ! ಪತ್ರಿಕೆಯಲ್ಲಿನ “ನಮ್ಮ ವಾಯುಮಂಡಲವು ಹಾನಿಗೊಳಿಸಲ್ಪಡುವಾಗ” ಎಂಬ ಲೇಖನವನ್ನು ನೋಡಿರಿ.