ಸ್ವಮಗ್ನತೆ (ಆಟಿಜಮ್) ಒಗಟಾಗಿರುವ ವ್ಯಾಧಿಯೊಂದರ ಕಷ್ಟಗಳನ್ನು ನಿಭಾಯಿಸುವುದು
ಕ್ರಿಸ್ಟಫರ್ ಒಬ್ಬ ಸುಂದರನಾದ, ಸ್ವದರ್ತನೆಯ ಚಿಕ್ಕ ಹುಡುಗ. ತನ್ನ ಹೆಸರನ್ನು ಕರೆದಾಗ ಅವನು ಪ್ರತಿವರ್ತನೆದೋರಲು ನಿಲ್ಲಿಸಿದ್ದು ಹದಿನೆಂಟು ತಿಂಗಳ ಪ್ರಾಯದಲ್ಲಿ. ಮೊದಮೊದಲು ಅವನು ಕಿವುಡನೊ ಎಂಬಂತೆ ತೋರಿತು, ಅದರೂ ಅವನು ಮಿಠಾಯಿಯ ಹೊದಿಕೆಯ ಮರ್ಮರ ಶಬ್ದವನ್ನು ಯಾವಾಗಲೂ ಗಮನಿಸಿದನು.
ಸಕಾಲದಲ್ಲಿ, ಇತರ ತಬ್ಬಿಬ್ಬುಗೊಳಿಸುವ ವರ್ತನೆಗಳೂ ತಮ್ಮನ್ನು ತೋರ್ಪಡಿಸಿಕೊಂಡವು. ಕಾರುಗಳಂತಹ ಚಕ್ರಗಳುಳ್ಳ ತನ್ನ ಆಟಿಕೆಗಳೊಂದಿಗೆ ಸಾಮಾನ್ಯ ರೀತಿಯಲ್ಲಿ ಆಡುವ ಬದಲಾಗಿ, ಕೇವಲ ಚಕ್ರಗಳನ್ನೆ ಪದೇ ಪದೇ ಅವನು ತಿರುಗಿಸುತ್ತಾ ಇರುತ್ತಿದ್ದನು. ದ್ರವಗಳಲ್ಲಿ ಅಸಾಮಾನ್ಯ ಆಸಕ್ತಿಯನ್ನು ಅವನು ವಿಕಸಿಸಿಕೊಂಡು, ಪ್ರತಿಯೊಂದು ಸಂದರ್ಭದಲ್ಲಿ ಅದನ್ನು ಹೊರಚೆಲ್ಲುತ್ತಿದ್ದನು. ಇದು, ಮತ್ತು ಮೇಲೆ ಹತ್ತುವುದರಲ್ಲಿ ಅವನಿಗಿದ್ದ ಪ್ರೀತಿಯು ಅನೇಕ ಅಪಾಯಕರ ಸನ್ನಿವೇಶಗಳಿಗೆ ಮತ್ತು ಅವನ ತಾಯಿಯನ್ನು ಬಹಳಷ್ಟು ವ್ಯಾಕುಲಕ್ಕೆ ನಡಿಸಿತು.
ಎಲ್ಲದಕ್ಕಿಂತ ಅತಿ ಹೆಚ್ಚಿನ ತೊಂದರೆಯು, ಜನರೆಡೆಗೆ ಅವನು ವಿಸ್ಮೃತಿಯಿಂದಿದುದ್ದೇ, ಅವರು ಅಲ್ಲಿ ಇಲ್ಲವೊ ಎಂಬಂತೆ ಅವರ ಉಪಸ್ಥಿತಿಯೆಡೆಗೆ ಅವನು ಪೂರಾ ಅರಿವಿಲ್ಲದೆ ಇರುತ್ತಿದ್ದನು. ಎರಡು ವರ್ಷ ಪ್ರಾಯದೊಳಗೆ ಅವನು ಮಾತನಾಡುವುದನ್ನು ಪೂರ್ತಿಯಾಗಿ ನಿಲ್ಲಿಸಿದ್ದನು. ತನ್ನನ್ನು ಹಿಂದಕ್ಕೆ ಮತ್ತು ಮುಂದಕ್ಕೆ ತೂಗಿಸುತ್ತಾ ಅವನು ತನ್ನ ಹೆಚ್ಚಿನ ಸಮಯವನ್ನು ಕಳೆದನು, ಮತ್ತು ಅವನ ಹೆತ್ತವರಿಗೆ ಕೆಲವೊಮ್ಮೆ ಗ್ರಹಿಸಲಶಕ್ಯವಾದ ಕಾರಣಗಳಿಗಾಗಿ ಉಗ್ರ ಕೋಪೋದ್ರೇಕಗಳನ್ನು ತೋರಿಸತೊಡಗಿದನು. ಅವರು ದಿಕ್ಕುತೋರದೆ ಪರಿಹಾರಗಳಿಗಾಗಿ ಹುಡುಕಲು ತೊಡಗಿದರು.
ಕ್ರಿಸ್ಟಫರನ ಸಮಸ್ಯೆ ಏನಾಗಿತ್ತು? ಬಹಳ ಮುದ್ದಿನಿಂದಾಗಿ ಅವನು ಕೆಟ್ಟನೊ, ಅಲಕ್ಷಿಸಲ್ಪಟ್ಟನೊ, ಬುದ್ಧಿ ಮಾಂದ್ಯತೆ ಅವನಿಗಿತ್ತೊ, ಅಥವಾ ಮನೋವ್ಯಾಧಿಯೊ? ಇಲ್ಲ. ಅಮೆರಿಕದಲ್ಲಿ ಸ್ವಮಗ್ನತೆ ಎಂಬ ವ್ಯಾಧಿ ಪೀಡಿತರಾದ ಕಡಿಮೆಪಕ್ಷ 3,60,000 ಜನರಲ್ಲಿ ಕ್ರಿಸ್ಟಫರ್ ಒಬ್ಬನು. ಈ ತಬ್ಬಿಬ್ಬುಗೊಳಿಸುವ ಅಸ್ವಸ್ಥವು ಜಗದ್ವ್ಯಾಪಕವಾಗಿ ಪ್ರತಿ 10,000 ಮಕ್ಕಳಲ್ಲಿ 4 ಅಥವಾ 5 ಮಂದಿಗೆ ಸಂಭವಿಸಿ, ಜೀವಮಾನವಿಡಿ ಕಷ್ಟಗಳನ್ನೊಡ್ಡುತ್ತದೆ.
ಸ್ವಮಗ್ನತೆ ಎಂದರೇನು?
ಸ್ವಮಗ್ನತೆ ಒಂದು ಮಿದುಳಿನ ರೋಗವಾಗಿದ್ದು ಅದರಲ್ಲಿ ಸಾಮಾಜಿಕ ವರ್ತನೆ, ಸಂಸರ್ಗ ಕೌಶಲಗಳು, ಮತ್ತು ಯೋಚಿಸುವ ಸಾಮರ್ಥ್ಯವು ಯಥಾಸ್ಥಿತಿಯಲ್ಲಿ ಬೆಳೆಯಲು ತಪ್ಪುತ್ತವೆ. ಅದು ಕಣ್ಣು ಮತ್ತು ಕಿವಿಗಳಂತಹ ಜ್ಞಾನೇಂದ್ರಿಯದ ಮೂಲಕ ಪಡೆಯುವ ಹೊರ ಜಗತ್ತಿನ ಕುರಿತ ಮಾಹಿತಿಯ ಸಾಗಣೆಯ ಮೇಲೆ ಪ್ರಭಾವಿಸಿ, ಸ್ವಮಗ್ನತೆ ಪೀಡಿತ ಜನರು ಕೆಲವು ಸಂವೇದನೆ (ದೃಶ್ಯ, ಶಬ್ದ, ವಾಸನೆ ಮುಂತಾದವುಗಳು)ಗಳಿಗೆ ಅತಿರೇಕವಾಗಿ ಮತ್ತು ಬೇರೆಯವುಗಳಿಗೆ ಅತಿಕಡಿಮೆಯಾಗಿ ಪ್ರಕ್ರಿಯೆ ತೋರಿಸುವಂತೆ ಮಾಡುತ್ತದೆ. ಸ್ವಮಗ್ನತೆ ದೌರ್ಬಲ್ಯಗಳು ಅಸಾಮಾನ್ಯವಾದ ವರ್ತನಾ ಪ್ರವೃತ್ತಿಗಳ ವಿನ್ಯಾಸವನ್ನೆ ಉಂಟುಮಾಡುತ್ತವೆ. ಸಾಮಾನ್ಯವಾಗಿ ಮೂರು ವರ್ಷಗಳ ಮುಂಚೆ ತೋರಿಬರುವ ರೋಗಲಕ್ಷಣಗಳು, ಮಗುವಿಂದ ಮಗುವಿಗೆ ಬಹಳ ವೈವಿಧ್ಯವುಳ್ಳವುಗಳಾಗಿರಬಲ್ಲವು. ಕೆಳಗಿನ ಉದಾಹರಣೆಗಳನ್ನು ಗಮನಿಸಿರಿ.
ನಿಮ್ಮ ಸ್ವಂತ ಸುಂದರವಾದ ಮಗುವಿನೆಡೆಗೆ ಪರಸ್ಪರ ಕ್ರಿಯೆಗಾಗಿ ಪ್ರೀತಿಯಿಂದ ಕೈಚಾಚುವುದನ್ನು ಮತ್ತು ಯಾವ ಪ್ರತಿಕ್ರಿಯೆಯೂ ದೊರೆಯದಿರುವುದನ್ನು ಊಹಿಸಿಕೊಳ್ಳಿರಿ. ಒಂದು ಮಗುವಿಗೆ ಸ್ವಮಗ್ನತೆ ಇರುವಾಗ ಅನೇಕವೇಳೆ ಹೀಗಾಗುತ್ತದೆ. ಜನರೊಂದಿಗೆ ಪರಸ್ಪರ ಕಲೆಯುವ ಬದಲಾಗಿ ಸ್ವಮಗ್ನತೆ ಇರುವ ಮಕ್ಕಳಲ್ಲಿ ಹೆಚ್ಚಿನವರು ಒಂಟಿಗರಾಗಿ ಇರಲು ಇಷ್ಟಪಡುತ್ತಾರೆ. ಮುದ್ದಿಸಲ್ಪಡುವುದು ಅವರಿಗೆ ಇಷ್ಟವಿಲ್ಲದಿರಬಹುದು, ನೇತ್ರ ಸಂಪರ್ಕವನ್ನು ವರ್ಜಿಸಾರು, ಮತ್ತು ಇತರರ ಅನಿಸಿಕೆಗಳೆಡೆಗೆ ಕೊಂಚವೆ ಅರಿವನ್ನು ತೋರಿಸುತ್ತಾ—ಉಪಕರಣಗಳನ್ನು ಬಳಸುವ ಹಾಗೆ ಜನರನ್ನು ಬಳಸುವರು. ತೀವ್ರ ರೋಗ ಸ್ಥಿತಿಗಳಲ್ಲಿ ಕೆಲವರು ಕುಟುಂಬ ಸದಸ್ಯರ ಮತ್ತು ಅಪರಿಚಿತರ ನಡುವೆ ಯಾವುದೆ ವ್ಯತ್ಯಾಸವನ್ನು ಮಾಡುವಂತೆ ಕಾಣುವುದಿಲ್ಲ. ತಮ್ಮ ಸುತ್ತಲಿನ ಜನರು ಮತ್ತು ಘಟನೆಗಳ ಅರಿವಿಲ್ಲದವರಾಗಿ, ತಮ್ಮದೆ ಆದ ಲೋಕದಲ್ಲಿ ಜೀವಿಸುವಂತೆ ಅವರು ತೋರುತ್ತಾರೆ. “ಸ್ವಮಗ್ನತೆ” ಎಂಬ ಹೆಸರು, “ಸ್ವಯಂ” ಎಂಬರ್ಥವುಳ್ಳ ಗ್ರೀಕ್ ಪದ ಆ.ಟೊಸ್‘ನಿಂದ ಬಂದಿದ್ದು ಈ ಸ್ವಯಂ ತಲ್ಲೀನತೆಯ ಗುಣಕ್ಕೆ ನಿರ್ದೇಶಿಸುತ್ತದೆ.
ಜನರೆಡೆಗೆ ಅವರ ಉದಾಸೀನತೆಗೆ ಹೋಲಿಕೆಯಲ್ಲಿ, ಸ್ವಮಗ್ನತೆ ಪೀಡಿತ ಮಕ್ಕಳು ಒಂದು ನಿರ್ದಿಷ್ಟ ವಸ್ತು ಅಥವಾ ಚಟುವಟಿಕೆಯಲ್ಲಿ ತಲ್ಲೀನರಾಗಿ ಹೋಗಿ, ಅದನ್ನು ಒಮ್ಮೆಗೆ ಹಲವಾರು ತಾಸುಗಳ ತನಕ ಒಂದು ವಿಲಕ್ಷಣವಾದ, ಪುನರಾವೃತ್ತಿತ ರೀತಿಯಲ್ಲಿ ಬೆನ್ನಟ್ಟಬಹುದು. ಉದಾಹರಣೆಗಾಗಿ, ಕಾರ್ ಆಟಿಕೆಗಳು ನಿಜವೆಂದು ನಟಿಸುವ ಬದಲಾಗಿ, ಅವರು ಕಾರುಗಳನ್ನು ನೀಟಾಗಿ, ನೇರ ಸಾಲುಗಳಲ್ಲಿ ನಿಲ್ಲಿಸಬಹುದು ಅಥವಾ ಸತತವಾಗಿ ಅವುಗಳ ಚಕ್ರಗಳನ್ನು ತಿರುಗಿಸುತ್ತಿರಬಹುದು. ಬೇರೆ ವಿಧಗಳಲ್ಲಿ ಕೂಡ ಅವರು ಪುನರಾವೃತ್ತಿಯನ್ನು ಪ್ರದರ್ಶಿಸುತ್ತಾರೆ. ಅನೇಕರು ತಮ್ಮ ನಿತ್ಯದ ರೂಢಿಗಳಲ್ಲಿ ಬದಲಾವಣೆಯನ್ನು ಸಹಿಸುವುದಿಲ್ಲ, ಪ್ರತಿ ಸಲ ವಿಷಯಗಳನ್ನು ನಿಖರವಾಗಿ ಅದೇ ರೀತಿ ಮಾಡಲು ಪಟ್ಟುಹಿಡಿಯುತ್ತಾರೆ.
ಸ್ವಮಗ್ನತೆ ಪೀಡಿತ ಮಕ್ಕಳು ತಾವು ಎದುರಿಸುವ ಘಟನೆಗಳಿಗೆ ಮತ್ತು ಸನ್ನಿವೇಶಗಳಿಗೆ ವಿಚಿತ್ರ ರೀತಿಗಳಲ್ಲಿ ಪ್ರತಿಕ್ರಿಯೆ ತೋರಿಸಬಹುದು ಸಹ. ಅವರ ಪ್ರತಿಕ್ರಿಯೆಗಳು ತಬ್ಬಿಬ್ಬುಗೊಳಿಸಬಲ್ಲವು, ಯಾಕಂದರೆ ತಾವೇನನ್ನು ಅನುಭವಿಸುತ್ತೇವೆಂದು ವಿವರಿಸಲು ಅವರಲ್ಲಿ ಹೆಚ್ಚಿನವರು ಶಕ್ತರಲ್ಲ. ಅವರಲ್ಲಿ ಸುಮಾರು 50 ಪ್ರತಿಶತ ಮಕ್ಕಳು ಮೂಕರು; ಅನೇಕವೇಳೆ ಮಾತಾಡಬಲ್ಲವರು ಶಬ್ದಗಳನ್ನು ಅಸಾಮಾನ್ಯ ವಿಧಗಳಲ್ಲಿ ಬಳಸುತ್ತಾರೆ. ಹೌದೆಂದು ಹೇಳುವ ಮೂಲಕ ಒಂದು ಪ್ರಶ್ನೆಯನ್ನು ಉತ್ತರಿಸುವ ಬದಲಾಗಿ ಅವರು ಬರೇ ಪ್ರಶ್ನೆಯನ್ನು ಪುನರುಚ್ಚರಿಸಲೂ (ಎಕೊಲೇಲಿಯ ಎಂಬ ವಿಚಿತ್ರ ಸ್ವಭಾವ)ಬಹುದು. ಕೆಲವರು ವಿಲಕ್ಷಣವಾಗಿ ತೋರುವ ಅಭಿವ್ಯಕ್ತಿಗಳನ್ನು ಬಳಸುತ್ತಾರೆ ಮತ್ತು ಅವರ “ಸಂಕೇತ ಭಾಷೆ” ಬಲ್ಲವರಿಂದ ಮಾತ್ರ ಅದನ್ನು ತಿಳಿದುಕೊಳ್ಳಸಾಧ್ಯವಿದೆ. ಉದಾಹರಣೆಗೆ, ಒಂದು ಮಗು “ಕಿಟಿಕಿ”ಗಾಗಿ ತನ್ನ ಅಭಿವ್ಯಕ್ತಿಯಾಗಿ “ಹೊರಗೆಲ್ಲಾ ಕತ್ತಲೆ” ಎಂಬ ವಾಕ್ಸರಣಿಯನ್ನು ಉಪಯೋಗಿಸಿತು. ಅನೇಕರಿಗೆ ಸನ್ನೆಗಳನ್ನುಪಯೋಗಿಸಲು ಸಹ ಕಷ್ಟವಾಗುತ್ತದೆ ಮತ್ತು ಒಂದು ಅಗತ್ಯವನ್ನು ಸೂಚಿಸಲು ಅವರು ಕಿರಿಚಾಡಬಹುದು ಯಾ ಕೋಪೋದ್ರೇಕವನ್ನು ತೋರಿಸಬಹುದು.
ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು
40’, 50’, ಮತ್ತು 60’ಗಳ ಸಮಯದಲ್ಲಿ, ಸ್ವಮಗ್ನತೆ, ಬೇರೆಲ್ಲಾ ವಿಷಯಗಳಲ್ಲಿ ಯಥಾಸ್ಧಿತಿಯಲ್ಲಿರುವ ಒಂದು ಮಗುವಿನ ಮಾನಸಿಕ ಹಿಂಚಲಿಸುವಿಕೆಯಾಗಿ ಅನೇಕ ಪಂಡಿತರಿಂದ ಪರಿಗಣಿಸಲ್ಪಟ್ಟಿತ್ತು. ಅವರ ಮಕ್ಕಳ ಸಮಸ್ಯೆಗಳಿಗಾಗಿ ಹೆಚ್ಚಿನ ದೋಷವು ಹೆತ್ತವರ ಮೇಲೆ, ವಿಶೇಷವಾಗಿ ತಾಯಂದಿರ ಮೇಲೆ ಹೊರಿಸಲ್ಪಟ್ಟಿತ್ತು. 1960ಗಳಲ್ಲಿ ಸ್ವಮಗ್ನತೆ ಒಂದು ಸೂಕ್ಷ್ಮ ವಿಧಾನದ ಮಿದುಳು ಹಾನಿಯಿಂದ (ಆದರೆ ಇದು ನಿಖರವಾಗಿ ಏನೆಂದು ಇನ್ನೂ ತಿಳಿದಿಲ್ಲ) ಉಂಟಾಗುತ್ತದೆಂದು ಬಲವಾಗಿ ಸೂಚಿಸುವ ಪುರಾವೆಯು ಕೊಡತೊಡಗಿತು. ಇದು ಸ್ವಮಗ್ನತೆಯ ಚಿಕಿತ್ಸೆಯಲ್ಲಿ ಪ್ರಾಧಾನ್ಯವನ್ನು ಮನೋವ್ಯಾಧಿ ಚಿಕಿತ್ಸೆಯಿಂದ ಶಿಕ್ಷಣಕ್ಕೆ ಬದಲಾಯಿಸುವಂತೆ ನಡಿಸಿತು. ವರ್ತನಾ ಸಮಸ್ಯೆಗಳನ್ನು ಕಡಿಮೆಗೊಳಿಸುವುದರಲ್ಲಿ ಮತ್ತು ಬೇಕಾದ ಕುಶಲತೆಗಳನ್ನು ಕಲಿಸುವುದರಲ್ಲಿ ಪರಿಣಾಮಕಾರಿಯಾಗಿ ಪರಿಣಮಿಸಿರುವ ವಿಶೇಷ ಶೈಕ್ಷಣಿಕ ಪ್ರಯೋಗ ತಂತ್ರಗಳು ವಿಕಸಿಸಲ್ಪಟ್ಟವು. ಈ ಪ್ರಗತಿಗಳ ಮತ್ತು ಬೇರೆಯವುಗಳ ಫಲಿತಾಂಶವಾಗಿ, ಸ್ವಮಗ್ನತೆ ಇದ್ದ ಅನೇಕರು ಉತ್ತಮ ಪ್ರಗತಿ ಮಾಡಿದ್ದಾರೆ, ಮತ್ತು ತಕ್ಕದಾದ ಸಹಾಯ ಮತ್ತು ಬೆಂಬಲದಿಂದಾಗಿ ಕೆಲವರು ಉದ್ಯೋಗಗಳನ್ನು ಮಾಡಲು ಮತ್ತು ಅರೆ-ಸ್ವತಂತ್ರ ಜೀವನಗಳನ್ನು ನಡಿಸಲು ಶಕ್ತರಾಗಿದ್ದಾರೆ.
ಆದರೂ ಸ್ವಮಗ್ನತೆ ಇರುವ ಮಗುವಿಗಾಗಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಂದು ಹೆಣಗಾಟವಾಗಿರಬಲ್ಲದು. ವಿವಿಧ ಕಾರಣಗಳಿಂದಾಗಿ, ಸ್ವಮಗ್ನತೆ ಹಲವಾರು ತಿಂಗಳ ತನಕ ಅಥವಾ ಕೆಲವು ಸಂದರ್ಭಗಳಲ್ಲಿ ವರ್ಷಗಳ ತನಕವೂ ಗುರುತಿಸಲ್ಪಡದೆ ಅಥವಾ ಸರಿಯಾಗಿ ರೋಗನಿರ್ಣಯಿಸಲ್ಪಡದೆ ಹೋಗಬಹುದು. ಬೇರೆ ದೌರ್ಬಲ್ಯಗಳಿಗಾಗಿ ರಚಿಸಲಾದ ಶೈಕ್ಷಣಿಕ ಕಾರ್ಯಕ್ರಮಗಳು ಸ್ವಮಗ್ನತೆ ಇರುವ ಮಕ್ಕಳ ವಿಶೇಷ ಅಗತ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲಿಕ್ಕಿಲ್ಲ. ಹೀಗೆ, ತಮ್ಮ ಮಗುವಿಗೆ ಬೇಕಾದ ಔಷಧೋಪಚಾರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ಅನೇಕ ಹೆತ್ತವರು ವೈದ್ಯರ, ಶಿಕ್ಷಕರ, ಮತ್ತು ಸಾಮಾಜಿಕ ಕಾರ್ಯಕರ್ತರ ಅಪರಿಚಿತ ಜಗತ್ತಿನೊಳಗೆ ತಮ್ಮನ್ನು ಪದೇ ಪದೇ ತಲೆಯೊಡ್ಡುವವರಾಗಿ ಕಂಡುಕೊಳ್ಳುತ್ತಾರೆ.
ದೈನಂದಿನ ಜೀವನ
ಹೆಚ್ಚಿನ ಎಳೆಯರಿಗಿಂತ ಬೇರೆಯಾಗಿ ಸ್ವಮಗ್ನತೆ ಇರುವ ಮಕ್ಕಳಾದರೊ ತಮ್ಮ ಸುತ್ತಮುತ್ತಲಿಂದ ಮಾಹಿತಿಯನ್ನು ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಮನೆಯಲ್ಲಿ ಅಥವಾ ಸಮಾಜದಲ್ಲಿ ಬೇಕಾದ ಮೂಲಭೂತ ಕೌಶಲಗಳನ್ನು ಅವರಿಗೆ ಕಲಿಸುವುದು ಒಂದು ಕಷ್ಟದ ಮತ್ತು ನಿಧಾನವಾದ ಹಂತ-ಹಂತದ ಕಾರ್ಯಗತಿಯಾಗಿದೆ. ದಿನದ ರೂಢಿಯು ಒಬ್ಬ ಹೆತ್ತವರನ್ನು ಬಟ್ಟೆತೊಡಿಸುವಿಕೆ, ಉಣಿಸುವಿಕೆ, ಮತ್ತು ಶೌಚಕ್ರಿಯೆಗಳಲ್ಲಿ ಸಹಾಯಿಸುವವರಾಗಿ, ಭಂಗಕಾರಕ ಅಥವಾ ಅಯುಕ್ತ ವರ್ತನೆಗಳನ್ನು ಪುನಃಸರಿಪಡಿಸುತ್ತಾ ಮತ್ತು ಆಕಸ್ಮಿಕಗಳಾದ ಬಳಿಕ ತೊಳೆಯುತ್ತಾ—ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಧಾವಿಸುವಂತೆ ಮಾಡಬಲ್ಲದು. ಹೆತ್ತವರೊಬ್ಬರು ಸ್ಮರಿಸಿಕೊಳ್ಳುವುದು: “[ನನ್ನ ಮಗನು] ಹತ್ತು ವರ್ಷ ಪ್ರಾಯದವನಾಗುವ ತನಕ, ನಾನು ಪ್ರತಿಯೊಂದು ಪ್ರಯಾಸಕರ ದಿನವನ್ನು ಸಫಲವಾಗಿ ದೂಡುವಂತೆ ಪ್ರಯತ್ನಿಸುತ್ತಿದ್ದೆ ಅಷ್ಟೆ.”
ಸದಾ ಮೇಲ್ವಿಚಾರಣೆಯ ಮಗುವಿನ ಅಗತ್ಯವು ಪ್ರಯಾಸಕ್ಕೆ ಇನ್ನಷ್ಟನ್ನು ಕೂಡಿಸುತ್ತದೆ. “ಟಾಮಿಯನ್ನು ಸದಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ” ಎನ್ನುತ್ತಾಳೆ ಅವನ ತಾಯಿ ರೀಟ, “ಯಾಕಂದರೆ ಅವನಿಗೆ ಅಪಾಯದ ಯಾವ ಸಂವೇದನೆಯೂ ಇಲ್ಲ.” ಹೆಚ್ಚಿನ ಸ್ವಮಗ್ನತೆ ಪೀಡಿತ ಮಕ್ಕಳಿಗೆ ಅಕ್ರಮವಾಗಿ ಮಲಗುವ ಹವ್ಯಾಸಗಳಿರುವುದರಿಂದ, ಜಾಗರಣೆ ಕೆಲವು ಸಾರಿ ರಾತ್ರಿಯ ಜಾವಕ್ಕೂ ವಿಸ್ತರಿಸುತ್ತದೆ. ಯಾರ ಮಗ ಕ್ರಿಸ್ಟಫರ್ ಈ ಲೇಖನದ ಪ್ರಾರಂಭದಲ್ಲಿ ವರ್ಣಿಸಲ್ಪಟ್ಟಿದ್ದನೊ ಅವನ ತಾಯಿ ಫ್ಲಾರೆನ್ಸ್ ಹೇಳುವುದು: “ಅವನ ಚಲನೆಗಳ ಕಡೆಗೆ ಎಚ್ಚರದಿಂದಿರಲು ನಾನು ಲಘುವಾಗಿಯೆ ಮಲಗುತ್ತಿದ್ದೆನು.”
ಮಕ್ಕಳು ಹೆಚ್ಚು ದೊಡ್ಡವರಾದಂತೆ ಈ ತಗಾದೆಗಳಲ್ಲಿ ಕೆಲವು ಕಡಿಮೆಯಾಗುತ್ತವೆ ಆದರೂ ಬೇರೆಯವುಗಳು ಅತಿಶಯಿಸಬಹುದು. ಪ್ರಗತಿಯು ಮಾಡಲ್ಪಟ್ಟಾಗಲೂ, ಸ್ವಮಗ್ನತೆ ಪೀಡಿತರಲ್ಲಿ ಬಹಳಮಟ್ಟಿಗೆ ಎಲ್ಲರಿಗೂ ಅವರ ಜೀವಮಾನವಿಡಿ ಮೇಲ್ವಿಚಾರಣೆಯು ಸ್ವಲ್ಪಮಟ್ಟಿಗಾದರೂ ಬೇಕಾಗುತ್ತದೆ. ಸ್ವಮಗ್ನತೆ ಪೀಡಿತ ಪ್ರೌಢರಿಗೆ ತಕ್ಕ ನಿಲಯ ಸೌಲಭ್ಯಗಳ ಅಭಾವವಿರುವುದರಿಂದ, ಸ್ವಮಗ್ನತೆ ಇರುವ ಮಕ್ಕಳ ಹೆತ್ತವರು, ಅದರ ಆಯುಷ್ಯವಿಡಿ ಮನೆಯಲ್ಲಿ ಉಪಚಾರಕೊಡುವ ಇಲ್ಲವೆ ಅದು ಅಶಕ್ಯವಾಗುವುದಾದರೆ, ತಮ್ಮ ಬೆಳೆದ ಮಕ್ಕಳನ್ನು ಆಸ್ಪತ್ರೆಗಳಲ್ಲಿ ಹಾಕುವ ಪ್ರತೀಕ್ಷೆಯನ್ನು ಎದುರಿಸುತ್ತಾರೆ.
ಸಾರ್ವಜನಿಕರನ್ನು ಎದುರಿಸುವುದು
ರೋಸ್ಮಾರಿ ಅವಲೋಕಿಸುವುದು: “ಈಗ ಜೋಯಿಗೆ 18 ವರ್ಷ ಪ್ರಾಯವಾಗಿರಲಾಗಿ ನಮಗಿರುವ ಅತಿ ಕಷ್ಟದ ಕೆಲಸವು ಅವನನ್ನು ಸಾರ್ವಜನಿಕರ ಮುಂದೆ ಒಯ್ಯುವುದಾಗಿದೆ. ಸ್ವಮಗ್ನತೆ ಪೀಡಿತರಾದ ಹೆಚ್ಚಿನ ಮಕ್ಕಳಂತೆ ಅವನ ತೋರಿಕೆ ಯಥಾಸ್ಥಿತಿಯಲ್ಲಿದೆಯಾದರೂ ಅವನ ವರ್ತನೆಯ ಕಾರಣ, ಜನರು ದಿಟ್ಟಿಸು ನೋಡುತ್ತಾರೆ, ನಗಾಡುತ್ತಾರೆ, ಮತ್ತು ಮಾತಾಡುತ್ತಾರೆ. ಕೆಲವೊಮ್ಮೆ ಅವನು ನೇರವಾಗಿ ಬೀದಿಯ ಮಧ್ಯೆ ನಿಂತು, ತನ್ನ ಬೆರಳಿನಿಂದ ಗಾಳಿಯಲ್ಲಿ ಬರೆಯತೊಡಗುತ್ತಾನೆ. ಕಾರ್ ಹಾರ್ನ್ಗಳ ಅಥವಾ ಜನರು ಕೆಮ್ಮುವಂತಹ ಗಟ್ಟಿ ಶಬ್ದಗಳನ್ನು ಅವನು ಕೇಳುವಲ್ಲಿ, ಅತಿ ಉದ್ರೇಕಗೊಂಡು ‘ಇಲ್ಲ! ಇಲ್ಲ! ಇಲ್ಲ!’ ಎಂದು ಬೊಬ್ಬಿಡುವನು. ಅದು ನಿಜವಾಗಿ ನಮ್ಮನ್ನು ಉದ್ವೇಗಗೊಳಿಸುತ್ತದೆ ಯಾಕಂದರೆ ಅದು ಯಾವುದೆ ಸಮಯದಲ್ಲಿ ಸಂಭವಿಸಸಾಧ್ಯವಿದೆ.” ಇನ್ನೊಬ್ಬ ಹೆತ್ತವರು ಕೂಡಿಸುವುದು: “ಅದನ್ನು ಜನರಿಗೆ ವಿವರಿಸುವುದು ಕಷ್ಟದ ಸಂಗತಿ. ‘ಅವನು ಸ್ವಮಗ್ನತೆ ಪೀಡಿತನು’ ಎಂದರೆ ಅವರಿಗೆ ಅರ್ಥವಾಗುವುದೂ ಇಲ್ಲ.”
ಈ ಕಷ್ಟಗಳ ಕಾರಣದಿಂದಾಗಿ ಮುಖ್ಯ-ಆರೈಕೆಯ ಹೆತ್ತವರೊಬ್ಬರು (ಸಾಮಾನ್ಯವಾಗಿ ತಾಯಿ) ಸುಲಭವಾಗಿಯೆ ಬೇರ್ಪಟ್ಟವರಾಗಿರಬಲ್ಲರು. ಮರೀ ಆ್ಯನ್ ಹೇಳುವುದು: “ನಾನು ಮೂಲತಃ ಸಂಕೋಚ ಪ್ರಕೃತಿಯವಳು ಮತ್ತು ಸಾರ್ವಜನಿಕ ತಮಾಷೆಯಾಗಿರುವುದು ನನಗಿಷ್ಟವಿಲ್ಲ. ಆದುದರಿಂದ ನಾನು ಜಿಮಿಯನ್ನು ಆಟದ ಬಯಲಿಗೆ, ಜನರು ಸಾಮಾನ್ಯವಾಗಿ ಅಲ್ಲಿರದ ಸಮಯಗಳಲ್ಲಿ, ಬೆಳಿಗ್ಗೆ ಬೇಗ ಅಥವಾ ಊಟದ ಸಮಯಗಳಲ್ಲಿ ಒಯ್ಯುತ್ತಿದ್ದೆ.” (ಹೋಲಿಸಿ ಕೀರ್ತನೆ 22:6, 7.) ಬೇರೆ ಹೆತ್ತವರಿಗಾದರೊ ಮನೆಯಿಂದ ಹೊರಗೆ ಹೋಗುವುದೆ ಬಲು ಕಷ್ಟ. ಶೀಲ ಹೇಳುವುದು: “ಕೆಲವೊಮ್ಮೆ ನನ್ನ ಸ್ವಂತ ಮನೆಯಲ್ಲಿ ನಾನು ಕೈದಿಯಾಗಿರುವಂತಹ ಅನುಭವ ನನಗಾಯಿತು.”
ಕುಟುಂಬವನ್ನು ಒಂದಾಗಿಡುವುದು
ಚಿಲ್ಡ್ರನ್ ವಿತ್ ಆಟಿಸಂ (ಸ್ವಮಗ್ನತೆ ಪೀಡಿತ ಮಕ್ಕಳು) ಪುಸ್ತಕದಲ್ಲಿ ಮೈಕಲ್ ಡಿ. ಪವರ್ಸ್ ಬರೆಯುವುದು: “ಸ್ವಮಗ್ನತೆ ಪೀಡಿತ ಮಗುವಿಗೆ ಒಂದು ಅತಿ ಪ್ರಾಮುಖ್ಯ ವಿಷಯವು . . . ಅದರ ಕುಟುಂಬವು ಒಂದುಗೂಡಿ ಇರುವುದೆ.” ಇದು ಒಂದು ದುಸ್ಸಾಧ್ಯ ಪಂಥಾಹ್ವಾನ. ಸ್ವಮಗ್ನತೆ ಪೀಡಿತ ಮಗುವನ್ನು ಬೆಳೆಸುವುದರ ಕಷ್ಟಗಳು, ಒಂದು ಅಕಲ್ಪನೀಯ ಮಾನಸಿಕ ಪೆಟ್ಟಿನ ಮೇಲೆ ಹೇರಲ್ಪಡುತ್ತವೆ. ವಿವಾಹ ಜೊತೆಗಳ ನಡುವಣ ಸಂಪರ್ಕವನ್ನು ತಡೆಯಬಲ್ಲ ತೀಕ್ಷೈವಾದ, ವೇದನಾಮಯ, ಗಾಬರಿಪಡಿಸುವ ಅನಿಸಿಕೆಗಳು ಏಳುತ್ತವೆ. ಅವರಿಬ್ಬರಿಗೂ ಅಧಿಕ ಪ್ರೀತಿ ಮತ್ತು ಬೆಂಬಲದ ಅಗತ್ಯವು ಇರುವ ಸಮಯದಲ್ಲಿ, ಕೊಡಲಿಕ್ಕಾಗಿ ಇಬ್ಬರಲ್ಲೂ ಹೆಚ್ಚೇನೂ ಇರಲಿಕ್ಕಿಲ್ಲ. ಈ ಅಸಾಮಾನ್ಯ ಒತ್ತಡಗಳ ಹೊರತೂ, ಸಾವಿರಾರು ದಂಪತಿಗಳು ಈ ಪಂಥಾಹ್ವಾನವನ್ನು ಸಾಫಲ್ಯದಿಂದ ಎದುರಿಸಿರುತ್ತಾರೆ.
ಅಂತಹ ಸಫಲವಾದ ದಂಪತಿಗಳ ಅನುಭವಗಳಿಂದ, ರಾಬಿನ್ ಸೈಮನ್ಸ್, ಆಫ್ಟರ್ ಟೀಅರ್ಸ್ (ಅತ್ತ ಮೇಲೆ) ಎಂಬ ತನ್ನ ಪುಸ್ತಕದಲ್ಲಿ, ಕೆಳಗಿನ ಮೂರು ಸಲಹೆಗಳನ್ನು ಹೊರಪಡಿಸುತ್ತಾರೆ. ಪ್ರಥಮವಾಗಿ, “ಅತ್ಯಂತ ವೇದನಾಮಯ ಅನಿಸಿಕೆಗಳನ್ನು ಕೂಡ ಪರಿಶೀಲಿಸಲು ಮತ್ತು ಅವನ್ನು ಪಾಲಿಗರಾಗಲು” ದಾರಿಮಾಡಿರಿ. ಎರಡನೆಯದು, ಮನೆಯ ಪಾತ್ರಗಳನ್ನು ಮತ್ತು ಏರ್ಪಾಡುಗಳನ್ನು ಪುನಃ ಪರೀಕ್ಷಿಸಿಕೊಂಡು, ಕೆಲಸದ ಹೊರೆಯು ಯುಕ್ತವಾಗಿ ಹಂಚಲ್ಪಡುವಂತೆ ಅಳವಡಿಸುವಿಕೆಗಳನ್ನು ಮಾಡಿರಿ. ಮೂರನೆಯದು, ಕೇವಲ ನೀವಿಬ್ಬರೆ, ಒಂದುಗೂಡಿ ವಿಷಯಗಳನ್ನು ಮಾಡಲು ಕ್ರಮದ ಸಮಯಗಳನ್ನು ಏರ್ಪಡಿಸಿಕೊಳ್ಳಿರಿ. ಡಾ. ಪವರ್ಸ್ ಮತ್ತೂ ಹೇಳುವುದು: “ನಿಮ್ಮ ಪ್ರಥಮತೆಗಳನ್ನು ಇಡುವುದರಲ್ಲಿ, ನಿಮ್ಮ ಸಮಯವನ್ನು ಪ್ರತ್ಯೇಕಿಸುವುದರಲ್ಲಿ, ಪ್ರತಿಯೊಬ್ಬರ ಆವಶ್ಯಕತೆಗಳನ್ನು ಸಮತೂಗಿಸಿ ನೀವೆಷ್ಟು ಸಮಯವನ್ನು ತೆಗೆದುಕೊಳ್ಳಬಲ್ಲಿರಿ ಎಂದು ನಿರ್ಣಯಿಸುವಲ್ಲಿ, ನಿಮ್ಮ ಮಗುವಿನ ಅಗತ್ಯಗಳಾಗಲಿ ಮತ್ತು ಅದಕ್ಕೆ ನಿಮ್ಮ ಅನುರಕ್ತಿಯಾಗಲಿ ನಿಮ್ಮ ಕುಟುಂಬ ಜೀವನವನ್ನು ಅಪಾಯಕ್ಕೆ ಸಿಕ್ಕಿಸುವಂತೆ ಬಿಡಬೇಡಿರಿ.”—ಹೋಲಿಸಿ ಫಿಲಿಪ್ಪಿ 1:10; 4:5.
ಸ್ವಮಗ್ನತೆಯ ಪರಿಣಾಮಗಳು ಅಪಾರವಾದರೂ, ಅದರಿಂದ ಬಾಧಿತರಾದ ವ್ಯಕ್ತಿಗಳು ಸಹಾಯ ಹೊಂದಶಕ್ತರು. ಒಂದು ಪ್ರಾಮುಖ್ಯ ಸಂಗತಿ ಏನಂದರೆ ಸೂಕ್ತವಾದ ಚಿಕಿತ್ಸೆಗೆ ನಡಿಸುವ ಕ್ಷಿಪ್ರ ರೋಗನಿರ್ಣಯ. ಆ ಬಳಿಕ ಪ್ರಯತ್ನಗಳನ್ನು ಫಲಕಾರಿ ವಾಹಕಗಳಿಗೆ ಮಾರ್ಗದರ್ಶಿಸಸಾಧ್ಯವಿದೆ. ಒಳ್ಳೆಯ ಸಂಸರ್ಗ ಮತ್ತು ಸಂಪನ್ಮೂಲಗಳ ಸಮತೂಕದ ಬಳಸುವಿಕೆ ಇದ್ದಲ್ಲಿ, ಕುಟುಂಬವು ಅನಾವಶ್ಯಕವಾಗಿ ಬಳಲಿಸಲ್ಪಡದು. (ಹೋಲಿಸಿ ಜ್ಞಾನೋಕ್ತಿ 15:22.) ಸಂಬಂಧಿಕರ ಮತ್ತು ಸ್ನೇಹಿತರ ತಿಳಿವಳಿಕೆ ಮತ್ತು ಅವರ ಕ್ರಿಯಾಶೀಲ ಸಹಾಯವು ಹೆತ್ತವರಿಗೆ ಅಗತ್ಯಕ್ಕಿಂತ ಹೆಚ್ಚಾದ ಬೆಂಬಲವನ್ನು ಕೊಡುತ್ತದೆ. ಜನರ ಸ್ವಮಗ್ನತೆಯ ಕುರಿತ ಜಾಗೃತಿ, ಹಾಗೂ ಸಮಾಜದಲ್ಲಿ ಸ್ವಮಗ್ನತೆ ಪೀಡಿತ ವ್ಯಕ್ತಿಗಳ ಬಗೆಗೆ ಅವರ ಗ್ರಾಹ್ಯವು, ಈ ಕುಟುಂಬಗಳ ಹೊರೆಗಳಿಗೆ ಅವಿಚಾರದಿಂದ ಇನ್ನಷ್ಟು ಕೂಡಿಸುವುದನ್ನು ತಡೆಯುತ್ತದೆ. ಹೀಗೆ ಸ್ವಮಗ್ನತೆಯ ಪಂಥಾಹ್ವಾನಗಳನ್ನು ಎದುರಿಸಲು ಎಲ್ಲರೂ ಒಂದು ಪಾತ್ರವನ್ನು ವಹಿಸಬಲ್ಲರು. —ಹೋಲಿಸಿ 1 ಥೆಸಲೋನಿಕ 5:14.
[ಪುಟ 34 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹೆತ್ತವರೊಬ್ಬರು ಸ್ಮರಿಸಿಕೊಳ್ಳುವುದು: “[ನನ್ನ ಮಗನು] ಹತ್ತು ವರ್ಷದವನಾಗುವ ತನಕ ನಾನು ಪ್ರತಿಯೊಂದು ಪ್ರಯಾಸಕರ ದಿನವನ್ನು ಸಫಲವಾಗಿ ದೂಡುವಂತೆ ಪ್ರಯತ್ನಿಸುತಿದ್ದೆ ಅಷ್ಟೆ.”
[ಪುಟ 35 ರಲ್ಲಿರುವ ಚೌಕ]
ವಿಶೇಷ ಸಾಮರ್ಥ್ಯಗಳು
ಸ್ವಮಗ್ನತೆ ಪೀಡಿತ ಮಕ್ಕಳು ಕೆಲವೊಮ್ಮೆ ವಿವರಗಳ ಮತ್ತು ಕ್ಷುಲ್ಲಕಗಳ ಬಗೆಗೆ ಆಶ್ಚರ್ಯಕರವಾದ ಸ್ಮರಣಶಕ್ತಿಯಂತಹ ವಿಶೇಷ ಸಾಮರ್ಥ್ಯಗಳನ್ನು ತೋರಿಸುತ್ತಾರೆ. ಕೆಲವರಲ್ಲಿ ಮುಂಬರಿದ ಸಂಗೀತ ಕುಶಲತೆಯಿದೆ ಮತ್ತು ಅವರು ಸಂಗೀತ ಓದಲಶಕ್ತರಾದರೂ ಜಟಿಲವಾದ ಸಂಗೀತ ವಾಕ್ಯವೃಂದವನ್ನು ನುಡಿಸಬಲ್ಲರು. ಕೆಲವರು ಗತಕಾಲದ ಯಾ ಭವಿಷ್ಯದ ಯಾವುದೆ ತಾರೀಖಿಗೆ ಅನುರೂಪವಾದ ವಾರದ ದಿನವನ್ನು ಆ ಕೂಡಲೆ ನಿಮಗೆ ತಿಳಿಸಬಲ್ಲರು. ಕೆಲವರಿಗೆ ಗಣಿತದ ವರವಿದೆ.
[ಪುಟ 36 ರಲ್ಲಿರುವ ಚೌಕ]
ಇತರರು ಸಹಾಯ ಮಾಡಬಲ್ಲ ವಿಧ
ಸಂಪರ್ಕವನ್ನು ಇಟ್ಟುಕೊಳ್ಳಿರಿ: ಆರಂಭಿಕವಾಗಿ, ಕುಟುಂಬವು ತಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಶಕ್ತರಾಗದಿರುವಷ್ಟು ಭಾವಪರವಶರಾಗಿರಬಹುದು. ತಾಳ್ಮೆ, ವಿವೇಚನೆ, ಮತ್ತು ಪಟ್ಟುಹಿಡಿಯುವಿಕೆಯೊಂದಿಗೆ ಅವರಿಗೆ ನೆರವಾಗಲು ನಿಮ್ಮನ್ನು ದೊರಕಿಸಿಕೊಳ್ಳಿರಿ. ಅದರ ಕುರಿತು ಮಾತನಾಡಲು ಅವರು ಸಿದ್ಧರಾದಾಗ, ಒತ್ತಡಹಾಕದೆ ಕಿವಿಗೊಡಿರಿ.
ಸಲಹೆ ನೀಡಲು ನಿಧಾನಿಸಿರಿ: ಸ್ವಮಗ್ನತೆ ಪೀಡಿತ ಮಕ್ಕಳು ಬಲುಮುದ್ದಿನಿಂದಾಗಿ ಕೆಟ್ಟವರಾಗಿರುವಂತೆ ಮತ್ತು ಕೇವಲ ಹೆಚ್ಚು ಪರಿಣಾಮಕಾರಿ ಶಿಸ್ತಿನ ಆವಶ್ಯವಿರುವವರಂತೆ ತೋರಬಹುದು. ಹೆತ್ತವರು ಹೆಚ್ಚಾಗಿ ತಾವು ಬೇರೆಯವರಿಂದ ಸದುದ್ದೇಶದ ಆದರೆ ತಿಳಿವಳಿಕೆಯಿಲದ್ಲ ಸಲಹೆಯನ್ನು ಪಡೆಯುತ್ತಿರುವುದನ್ನು ಕಂಡುಕೊಳ್ಳುತ್ತಾರೆ. ಅಂತಹ ‘ಸಾದಾ ಪರಿಹಾರಕಗಳು’ ಹೆಣಗಾಡುವ ಹೆತ್ತವರನ್ನು ಕುಗ್ಗುಬಡಿದು, ತಮ್ಮನ್ನು ಯಾರೂ ತಿಳಿದುಕೊಳ್ಳುವುದಿಲ್ಲವೆಂಬ ಅನಿಸಿಕೆಯಲ್ಲಿ ಬಿಟ್ಟುಹೋಗಬಲ್ಲವು.
ಕುಟುಂಬವನ್ನು ಚಟುವಟಿಕೆಗಳಲ್ಲಿ ಸೇರಿಸಿರಿ: ಸ್ವಮಗ್ನತೆ ಇರುವ ಮಕ್ಕಳ ಕುಟುಂಬಗಳು ಹೆಚ್ಚಾಗಿ, ಇತರ ಕುಟುಂಬಗಳಿಂದ ಆನಂದಿಸಲ್ಪಡುವ ಸಾಮಾಜಿಕ ಮತ್ತು ಮನೋರಂಜನಾ ಚಟುವಟಿಕೆಗಳಿಂದ ಬಹಿಷ್ಕರಿಸಲ್ಪಟ್ಟ ಅನಿಸಿಕೆಯನ್ನು ತಾಳುತ್ತವೆ. ನಿಮ್ಮ ಕುಟುಂಬದೊಂದಿಗೆ ಸಾಹಚರ್ಯ ಮಾಡಲು ಅವರನ್ನು ಆಮಂತ್ರಿಸಿರಿ. ವಿಶೇಷ ಪರಿಗಣನೆಯನ್ನು ಅವಶ್ಯಪಡಿಸುವ ಅಗತ್ಯಗಳಿರುವಲ್ಲಿ, ಅವನ್ನು ಒದಗಿಸಿಕೊಡಲು ಪ್ರಯತ್ನಿಸಿರಿ. ಕುಟುಂಬವು ಒಂದು ನಿರ್ದಿಷ್ಟ ಆಮಂತ್ರಣವನ್ನು ಸ್ವೀಕರಿಸಲು ಶಕವ್ತಾಗದಿದ್ದರೂ, ನೀವು ಅವರನ್ನು ಆಮಂತ್ರಿಸಿದ್ದೀರೆಂಬುದನ್ನು ಅವರು ಗಣನೆಗೆ ತರುವರು.
ಮಗುವನ್ನು ನೋಡಿಕೊಳ್ಳಲು ನೀಡಿಕೊಳ್ಳಿ: ಸ್ವಮಗ್ನತೆಯ ಪಟ್ಟುಸಡಿಲಿಸದ ತಗಾದೆಗಳಿಂದ ಬಿಡುವು ಹೊಂದುವುದು ಕುಟುಂಬದ ಅತಿ ಮಹಾ ಆವಶ್ಯಕತೆಗಳಲ್ಲಿ ಒಂದು. ಒಮ್ಮೆಗೆ ಕೇವಲ ಕೆಲವು ನಿಮಿಷಗಳಿಗಾದರೂ ಮಗುವನ್ನು ನೋಡಿಕೊಳ್ಳಲು ನೀಡಿಕೊಳ್ಳುವ ಮೂಲಕ ಪ್ರಾರಂಭಿಸಿರಿ. ಕಟ್ಟಕಡೆಗೆ ಕುಟುಂಬವನ್ನು ಒಂದು ಸಂಜೆಗೆ ಹೊರಗೆ ಅಡ್ಡಾಡಲು ಹೋಗುವಂತೆ ಅಥವಾ ವಾರಾಂತ್ಯದ ರಜೆಯಲ್ಲಿ ಹೋಗುವಂತೆಯೂ ನೀವು ಮಾಡಶಕ್ತರಾಗಬಹುದು. ಇಂತಹ ಬಿಡುವುಗಳು ತಮ್ಮ ಶಕ್ತಿಯನ್ನು ನವೀಕರಿಸಿಕೊಳ್ಳಲು ಕುಟುಂಬಗಳಿಗೆ ನೆರವಾಗುವುದರಲ್ಲಿ ಹೆಚ್ಚನ್ನು ಮಾಡಬಲ್ಲವು.
ಕುಟುಂಬವು ಹೊಂದುವ ವಿಶಿಷ್ಟ ಸೇವೆಗಳಿಗಿಂತ ಹೆಚ್ಚು ಪ್ರಾಮುಖ್ಯವಾದದ್ದು ಇತರರಿಂದ ಪ್ರೀತಿಸಲ್ಪಡುವ ಮತ್ತು ಮೌಲ್ಯವಾಗಿ ಎಣಿಸಲ್ಪಡುವ ಭಾವನೆಯೆ. ಸಂಕ್ಷೇಪವಾಗಿ, ಸ್ವಮಗ್ನತೆ ಪೀಡಿತ ಮಗುವಿರುವ ಕುಟುಂಬಕ್ಕಾಗಿ ನೀವು ಮಾಡಬಲ್ಲ ಅತ್ಯುತ್ತಮ ವಿಷಯವು ಅವರ ಸ್ನೇಹಿತರಾಗಿ ಮುಂದುವರಿಯುವುದೆ ಆಗಿದೆ.