ಬೈಬಲಿನ ದೃಷ್ಟಿಕೋನ
ನಾವು ಕಷ್ಟಾನುಭವಿಸುವುದನ್ನು ನೋಡಲು ದೇವರು ಇಷ್ಟಪಡುತ್ತಾನೊ?
ಒಂದು ದೊಡ್ಡ ಮರದ ಶಿಲುಬೆಯ ಭಾರದ ಕೆಳಗೆ ಕಷ್ಟಪಡುತ್ತಾ, ಒಬ್ಬ ಮನುಷ್ಯನು ಗುಂಪುಗಳ ಮಧ್ಯದಿಂದ ಮುಗ್ಗರಿಸಿಕೊಂಡು ಹೋಗುವಾಗ ಅವನ ತಲೆಯ ಮೇಲಿನ ಮುಳ್ಳಿನ ಕಿರೀಟದಿಂದ ರಕ್ತವು ತೊಟ್ಟಿಕ್ಕುತ್ತದೆ. “ವಧಾ” ಸ್ಥಳಕ್ಕೆ ಆಗಮಿಸಿದ ಬಳಿಕ, ಶಿಲುಬೆಯ ಮೇಲೆ ಅವನನ್ನು ಚಾಚಗೆಡವಲಾಗುತ್ತದೆ; ಅವನ ಕೈಗಳೊಳಗೆ ದೊಡ್ಡ ಮೊಳೆಗಳು ಜಡಿಯಲ್ಪಡುತ್ತವೆ. ಮೊಳೆಗಳು ಶರೀರವನ್ನು ಚುಚ್ಚಿ ಒಳಗೆಹೋದಂತೆ ಅವನು ನೋವಿನಿಂದ ಯಾತನೆ ಪಡುತ್ತಾನೆ. ಶಿಲುಬೆಯು ನೇರವಾಗಿ ನಿಲ್ಲಿಸಲ್ಪಟ್ಟಾಗ ನೋವು ಅತಿ ಯಾತನೆ ಕೊಡುತ್ತದೆ. ಒಂದು ಫಿಲಿಪ್ಪೀನ್ ಪತ್ರಿಕೆಯಾದ ಪ್ಯಾನೊರಾಮಕ್ಕನುಸಾರವಾಗಿ, ಫಿಲಿಪ್ಪೀನ್ಸ್ನಲ್ಲಿ ಪವಿತ್ರ ವಾರದ ಆಚರಣೆಗಳ ಸಮಯದಲ್ಲಿ ಅಂತಹ ವೇದನೆಭರಿತ ಸಂಸ್ಕಾರಗಳು ಕ್ರಮವಾಗಿ ಪ್ರದರ್ಶಿಸಲ್ಪಡುತ್ತವೆ.
ಈಗ ವಿವರಿಸಲ್ಪಟ್ಟಿರುವ ವಿಷಯವು ಯೇಸುವಿನ ಕಷ್ಟಾನುಭವಗಳ ಕುರಿತಾದ ಆಧುನಿಕ ದಿನದ ಒಂದು ಅರ್ಥವಿವರಣೆಯಷ್ಟೇ. ಆದರೆ ಈ ಮನುಷ್ಯನು ನಾಟಕವೊಂದರ ಒಂದು ದೃಶ್ಯವನ್ನು ಕೇವಲ ಅಭಿನಯಿಸುತ್ತಿಲ್ಲ. ಮೊಳೆಗಳು, ರಕ್ತ, ನೋವು ಎಲ್ಲವೂ ಅತಿ ನೈಜ.
ಮತ್ತೊಂದು ಸ್ಥಳದಲ್ಲಿ, ಕ್ರಿಸ್ತನ ಕಷ್ಟಾನುಭವಗಳನ್ನು ಅನುಭವಿಸಲಿಕ್ಕಾಗಿರುವ ಅವರ ಅಪೇಕ್ಷೆಯಿಂದಾಗಿ ರೋಮನ್ ಕ್ಯಾತೊಲಿಕ್ ಭಕ್ತರು ಸಾರ್ವಜನಿಕವಾಗಿ ತಮ್ಮನ್ನು ಹೊಡೆದುಕೊಳ್ಳುವುದನ್ನು ಕಾಣಸಾಧ್ಯವಿದೆ. ಏಕೆ? ಅಸ್ವಸ್ಥರಾಗಿರುವ ಅವರ ಪ್ರಿಯರ ವಾಸಿಯಾಗುವಿಕೆಯಂತಹ ಅದ್ಭುತಗಳನ್ನು ಅವರ ಕಷ್ಟಾನುಭವಗಳು ಉತ್ಪಾದಿಸುವುವು ಎಂಬ ನಂಬಿಕೆಯಿಂದ ಕೆಲವರು ಇದನ್ನು ಮಾಡುತ್ತಾರೆ. ಇತರರು, ಅವರ ಸ್ವಂತ ರಕ್ತವು ಸುರಿಸಲ್ಪಡುವ ಹೊರತು ಕ್ಷಮಾಪಣೆಯಿಲ್ಲವೆಂದು ಅವರು ಭಯಪಡುವ ಪಾಪಗಳ ಪರಿಹಾರ ಮಾಡಿಕೊಳ್ಳಲಿಕ್ಕಾಗಿ ಅದನ್ನು ಮಾಡುತ್ತಾರೆ. ದ ಫಿಲಿಪಿನೋಸ್ ಎಂಬ ಪುಸ್ತಕವು ವಿವರಿಸುವುದು: “ವೇದನೆಯು ಮನಸ್ಸು ಮತ್ತು ಆತ್ಮದ ಒಂದು ಒಳ್ಳೆಯ ಸ್ವಚ್ಛಕವಾಗಿದೆ. . . . ಪಾಪಿಯು ವೇದನೆಯಿಂದಾಗಿ ಪಾಪದಿಂದ ಶುದ್ಧಿಯನ್ನು ಮತ್ತು ಹೊರೆಗಳಿಂದ ವಿಮುಕ್ತಿಯನ್ನು ಹೊಂದುತ್ತಾನೆಂದು ಎಣಿಸಲಾಗುತ್ತದೆ.”
ಆದರೂ, ಸ್ವಯಂಕೃತ ವೇದನೆಯು ಯಾವುದೇ ರೀತಿಯಲ್ಲಿ ಫಿಲಿಪ್ಪೀನ್ಸ್ನ ಕ್ಯಾತೊಲಿಕರಿಗೆ ಮಾತ್ರ ಸೀಮಿತವಲ್ಲ. ಸ್ವಯಂಕೃತ ಕಷ್ಟಾನುಭವಗಳು ದೇವರ ದಯೆಗೆ ಪಾತ್ರಮಾಡುತ್ತವೆ ಎಂದು ಬೇರೆ ಬೇರೆ ದೇಶಗಳಲ್ಲಿ, ವಿವಿಧ ಧರ್ಮಗಳಿಂದ ಬಂದ ಜನರು ನಂಬುತ್ತಾರೆ.
ಉದಾಹರಣೆಗೆ, ಸತ್ಯಾನ್ವೇಷಣೆಯಲ್ಲಿ ಬುದ್ಧನಾದ ಸಿದ್ಧಾರ್ಥ ಗೌತಮನು ತನ್ನ ಹೆಂಡತಿ ಮತ್ತು ಮಗನನ್ನು ಬಿಟ್ಟು ಮರಳುಗಾಡಿಗೆ ಪಲಾಯನ ಮಾಡಿದನು, ಅಲ್ಲಿ ಅವನು ಆರು ವರ್ಷಗಳ ವರೆಗೆ ಸಂನ್ಯಾಸಿಯ ಜೀವನವನ್ನು ನಡೆಸಿದನು. ತೊಡಕಾದ ಮತ್ತು ವೇದನೆಭರಿತ ಭಂಗಿಗಳನ್ನು ಅವನು ಅನೇಕ ತಾಸುಗಳ ವರೆಗೆ ಕೈಗೊಂಡನು ಹಾಗೂ ತದನಂತರ ದಿನವೊಂದಕ್ಕೆ ಕೇವಲ ಒಂದು ಅಕ್ಕಿ ಕಾಳನ್ನು ತಿನ್ನುತ್ತಾ ದೀರ್ಘಾವಧಿಯ ವರೆಗೆ ಜೀವಿಸಿದನೆಂದು ಸಮರ್ಥಿಸಿದನು. ಅವನು ಎಷ್ಟು ಕೃಶನಾಗಿದ್ದನೆಂದರೆ, ಅವನು ಹೇಳಿದ್ದು: “ನನ್ನ ಹೊಟ್ಟೆಯ ಚರ್ಮವು ನನ್ನ ಬೆನ್ನೆಲುಬಿಗೆ ಅಂಟಿಕೊಂಡದ್ದಾಗಿ ಪರಿಣಮಿಸಿತು.” ಆದರೆ ಯಾವುದೇ ಪ್ರಮಾಣದ ಸ್ವಯಂಕೃತ ಹಿಂಸೆಯು ಅವನು ಪಡೆಯಲು ಪ್ರಯತ್ನಿಸಿದ್ದಂತಹ ಜ್ಞಾನೋದಯವನ್ನು ತರಲು ಶಕವ್ತಾಗಲಿಲ್ಲ.
ಹಾಗೆಯೇ, ಕೆಲವೊಮ್ಮೆ ಬೆಂಕಿಗಳ ಮಧ್ಯೆ ಮಲಗುವುದು, ಕುರುಡರಾಗುವ ತನಕ ಸೂರ್ಯನನ್ನು ದಿಟ್ಟಿಸುವುದು, ದೀರ್ಘ ಕಾಲಾವಧಿಯ ವರೆಗೆ ಒಂಟಿ ಕಾಲಿನಲ್ಲಿ ಅಥವಾ ಇನ್ನಿತರ ತೊಡಕಾದ ಭಂಗಿಗಳಲ್ಲಿ ನಿಂತಿರುವುದು, ಇಂತಹ ವಿಪರೀತ ಘೋರವಾದ ವಿವಿಧ ಪಾಪನಿವೇದನ ಸಂಸ್ಕಾರಗಳನ್ನು ಭಾರತದ ಹಿಂದೂ ಫಕೀರರು ಕೈಗೊಂಡರು. ಕೆಲವು ಸಂನ್ಯಾಸಿಗಳ ಸದ್ಗುಣವು, ಒಂದು ನಗರವನ್ನು ವೈರಿಯ ಆಕ್ರಮಣದಿಂದ ರಕ್ಷಿಸಸಾಧ್ಯವಿರುವಷ್ಟು ಅಧಿಕ ಮಹತ್ವವುಳ್ಳದ್ದಾಗಿದ್ದವೆಂದು ಅಭಿಪ್ರಯಿಸಲಾಗಿತ್ತು.
ತದ್ರೀತಿಯಲ್ಲಿ, ತಮ್ಮ ದೇವರ ಗಮನವನ್ನು ಸೆಳೆಯುವ ವ್ಯರ್ಥ ಪ್ರಯತ್ನವೊಂದರಲ್ಲಿ ಸ್ವತಃ “ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡ” ಬಾಳನ ಆರಾಧಕರ ಕುರಿತು ಬೈಬಲು ಮಾತಾಡುತ್ತದೆ.—1 ಅರಸುಗಳು 18:28.
“ನಿಮ್ಮ ಆತ್ಮಗಳನ್ನು ನೀವು ಬಾಧಿಸಿಕೊಳ್ಳಬೇಕು”
ತನ್ನ ಆಯ್ದುಕೊಂಡ ಜನಾಂಗಕ್ಕೆ ಯೆಹೋವನು “ನಿಮ್ಮ ಆತ್ಮಗಳನ್ನು ನೀವು ಬಾಧಿಸಿಕೊಳ್ಳಬೇಕು” ಎಂದು ಆಜ್ಞಾಪಿಸಿದ್ದು ಸತ್ಯವಾಗಿರುವಾಗ್ಯೂ, ಇದು ಸಾಮಾನ್ಯವಾಗಿ ಉಪವಾಸ ಮಾಡಬೇಕೆಂಬುದನ್ನು ಅರ್ಥೈಸಲಿಕ್ಕಾಗದೆ. (ಯಾಜಕಕಾಂಡ 16:31, NW) ಅಂತಹ ಉಪವಾಸ ಮಾಡುವಿಕೆಯು, ಪಾಪಗಳಿಗಾಗಿ ವ್ಯಥೆ ಮತ್ತು ಪಶ್ಚಾತ್ತಾಪದ ಅಭಿವ್ಯಕ್ತಿಯಾಗಿತ್ತು ಅಥವಾ ದುಃಖಕರವಾದ ಸನ್ನಿವೇಶಗಳ ಕೆಳಗಿರುವಾಗ ಆಚರಿಸಲಾಗುತ್ತಿತ್ತು. ಹೀಗೆ, ಉಪವಾಸ ಮಾಡುವಿಕೆಯು ಶಿಕ್ಷೆಯ ಒಂದು ಸ್ವಯಂಕೃತ ರೂಪವಾಗಿರಲಿಲ್ಲ, ಬದಲಾಗಿ ಒಬ್ಬನು ದೇವರ ಮುಂದೆ ಸ್ವತಃ ನಮ್ರನನ್ನಾಗಿ ಮಾಡಿಕೊಳ್ಳುವುದನ್ನು ಪ್ರತಿನಿಧೀಕರಿಸಿತು.—ಎಜ್ರನು 8:21.
ಆದಾಗಲೂ, ಆತ್ಮವನ್ನು ಬಾಧಿಸಿಕೊಳ್ಳುವುದರಲ್ಲಿ ಒಳಗೂಡಿರುವ ಕಷ್ಟವು ತಾನೇ ದೇವರ ದಯೆಗೆ ಪಾತ್ರರನ್ನಾಗಿ ಮಾಡುತ್ತದೆ ಮತ್ತು ಅದಕ್ಕೆ ಪ್ರತಿಯಾಗಿ ಅವರಿಗೆ ಏನನ್ನಾದರೂ ಕೊಡುವಂತಹ ಹಂಗಿಗೆ ಆತನನ್ನು ಒಳಪಡಿಸುತ್ತದೆ ಎಂದು ತಪ್ಪಾಗಿ ಅಭಿಪ್ರಯಿಸಿದ್ದ ಕೆಲವು ಯೆಹೂದ್ಯರಿದ್ದರು. ಅಂತಹ ಯಾವುದೇ ಪ್ರತಿಫಲವು ಬರದಿದ್ದಾಗ, ತಾವು ಅರ್ಹರಾಗಿದ್ದೇವೆಂದು ಅವರು ಅಭಿಪ್ರಯಿಸಿದ್ದ ಪ್ರತಿಫಲದ ಕುರಿತು ಅವರು ದೇವರಿಗೆ ದುರಹಂಕಾರದಿಂದ ಕೇಳಿದ್ದು: ‘ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವದಿಲ್ಲ; ನಮ್ಮ ಆತ್ಮವನ್ನು ಬಾಧಿಸಿಕೊಂಡಿದ್ದೇವೆ, ನೀನು ಗಮನಿಸದಿರುವದೇಕೆ?’—ಯೆಶಾಯ 58:3.
ಆದರೆ ಅವರ ಅಭಿಪ್ರಾಯ ತಪ್ಪಾಗಿತ್ತು. ಸೂಕ್ತವಾದ ಧಾರ್ಮಿಕ ಉಪವಾಸದಲ್ಲಿ ಸಂನ್ಯಾಸ, ದೈಹಿಕ ವೇದನೆ ಅಥವಾ ಕಷ್ಟವು ತನ್ನಲ್ಲೇ ಯಾವುದೋ ಶ್ರೇಷ್ಠತೆಯನ್ನು ಹೊಂದಿದೆಯೋ ಎಂಬಂತೆ ದೇಹವನ್ನು ಹಸಿವೆಯಿಂದ ಬಾಧಿಸಿಕೊಳ್ಳುವುದು ಒಳಗೊಂಡಿರಲಿಲ್ಲ. ಬಲವಾದ ಆವೇಗವು ಅವರ ಹಸಿವೆಯನ್ನು ಕಡಿಮೆ ಮಾಡಿದಿರ್ದಬಹುದು. ಜರೂರಾದ ಸಮಸ್ಯೆಗಳಿಂದ ಮನಸ್ಸು ಬಲವಾಗಿ ಆವರಿಸಲ್ಪಡುವುದಾದರೆ, ದೇಹವು ಆಹಾರಕ್ಕಾಗಿ ಹಂಬಲಿಸದಿರಬಹುದು. ಇದು ಉಪವಾಸ ಮಾಡುತ್ತಿರುವವನೊಬ್ಬನ ಆಳವಾದ ಭಾವನೆಗಳನ್ನು ದೇವರಿಗೆ ಸೂಚಿಸುತ್ತದೆ.
ಸ್ವಯಂಕೃತ ವೇದನೆಯಿಂದ ದೇವರು ಸಂತೋಷಪಡುತ್ತಾನೊ?
ಪ್ರೀತಿಯ ಸೃಷ್ಟಿಕರ್ತನು ಜನರು ತಮ್ಮನ್ನು ಚಿತ್ರಹಿಂಸೆಪಡಿಸಿಕೊಳ್ಳುವುದನ್ನು ವೀಕ್ಷಿಸುವುದರಿಂದ ಯಾವುದೇ ರೀತಿಯ ಸಂತೋಷವನ್ನು ಕಂಡುಕೊಳ್ಳುತ್ತಾನೊ? ಆಗಾಗ ಕ್ರೈಸ್ತರು “ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರ”ರಾಗುವಂತೆ ಒತ್ತಾಯಿಸಲ್ಪಡಬಹುದೆಂಬುದು ಸತ್ಯವಾಗಿರುವಾಗ್ಯೂ, ಅವರು ತೊಂದರೆಯನ್ನು ಅನುಭವಿಸುವ ಸಂಭವನೀಯತೆಯನ್ನು ಅಧಿಕಗೊಳಿಸುವಂತೆ ಅಥವಾ ಹುತಾತ್ಮರ ಸ್ಥಾನವನ್ನು ಪಡೆದುಕೊಳ್ಳುವಂತೆ ಕಾರ್ಯನಡಿಸುತ್ತಾರೆ ಎಂದು ಇದು ಅರ್ಥೈಸುವುದಿಲ್ಲ.—1 ಪೇತ್ರ 4:13.
ಯೇಸು ಒಬ್ಬ ಸಂನ್ಯಾಸಿಯಾಗಿರಲಿಲ್ಲ ನಿಶ್ಚಯ. ಆತನ ಶಿಷ್ಯರು ಉಪವಾಸ ಮಾಡದೆ ಇದ್ದ ಕಾರಣದಿಂದ ಧಾರ್ಮಿಕ ಮುಖಂಡರು ದೂರುಹೊರಿಸಿದರು, ಮತ್ತು “ಇವನು ಹೊಟ್ಟೆಬಾಕನು, ಕುಡುಕನು” ಎಂದೂ ಅವನನ್ನು ತೆಗಳಿದರು. (ಮತ್ತಾಯ 9:14; 11:19) ಯೇಸು ಎಲ್ಲ ವಿಷಯಗಳಲ್ಲಿ ಮಿತಸ್ವಭಾವವನ್ನು ತೋರಿಸಿದನು ಮತ್ತು ತನ್ನಿಂದಾಗಲಿ ಅಥವಾ ಇತರರಿಂದಾಗಲಿ ನ್ಯಾಯಸಮ್ಮತವಾದುದಕ್ಕಿಂತಲೂ ಹೆಚ್ಚಿನದನ್ನು ಕೇಳಿಕೊಳ್ಳಲಿಲ್ಲ.—ಮಾರ್ಕ 6:31; ಯೋಹಾನ 4:6.
ಜೀವನಾವಶ್ಯಕತೆಗಳನ್ನು ಅಥವಾ ಸೌಕರ್ಯಗಳನ್ನು ಸಹ ನಾವು ಅಲ್ಲಗಳೆಯುವುದು ದೇವರಿಂದ ಅನುಗ್ರಹವನ್ನು ತರುತ್ತದೋ ಎಂಬಂತೆ, ಸಂನ್ಯಾಸಕ್ಕೆ ಯಾವುದೇ ಆಧಾರವನ್ನು ನಾವು ಶಾಸ್ತ್ರವಚನಗಳಲ್ಲಿ ಎಲ್ಲಿಯೂ ಕಂಡುಕೊಳ್ಳುವುದಿಲ್ಲ. ಅಂತಹ ವೇದನೆಭರಿತ ಆಚರಣೆಗಳ ಕುರಿತಾದ ಅಪೊಸ್ತಲ ಪೌಲನ ಮಾತುಗಳನ್ನು ಗಮನಿಸಿ: “ಅಂಥ ಉಪದೇಶಗಳು ಸಕ್ವಲ್ಪಿತಾಚಾರವನ್ನೂ ಅತಿವಿನಯವನ್ನೂ ದೇಹದಂಡನೆಯನ್ನೂ ಬೋಧಿಸುತ್ತಾ ಹೆಸರಿಗೆ ಮಾತ್ರ ಜ್ಞಾನವೆನಿಸಿಕೊಳ್ಳುತ್ತವೆಯಲ್ಲದೆ ಶಾರೀರಿಕ ಇಚ್ಛೆಗಳನ್ನು ನಿಗ್ರಹಿಸುವದರಲ್ಲಿ ಯಾವ ಪ್ರಯೋಜನಕ್ಕೂ ಬರುವದಿಲ್ಲ.”—ಕೊಲೊಸ್ಸೆ 2:23.
ಸಂನ್ಯಾಸಿಯಾಗಿದ್ದಾಗ, ಮಾರ್ಟಿನ್ ಲೂಥರ್ ತನ್ನನ್ನು ಅಕ್ಷರಶಃ ಹಿಂಸಿಸಿಕೊಂಡಿದ್ದನು. ಆದರೆ ತದನಂತರ, ಅವು ದೇವರ ಕಡೆಗಿನ ಎರಡು ರಸ್ತೆಗಳ ಕುರಿತ ಕಲ್ಪನೆಯನ್ನು—ಒಂದು ಹೆಚ್ಚು ಉತ್ಕೃಷ್ಟವಾದದ್ದು ಮತ್ತು ಒಂದು ತೀರ ಕೆಳ ದರ್ಜೆಯದ್ದು—ಉತ್ತೇಜಿಸಿದವು, ಆದರೆ ರಕ್ಷಣೆಗೆ ಒಂದೇ ಒಂದು ಮಾರ್ಗವು, ಯೇಸು ಕ್ರಿಸ್ತನಲ್ಲಿ ಮತ್ತು ಆತನ ತಂದೆಯಾದ ಯೆಹೋವನಲ್ಲಿ ನಂಬಿಕೆಯನ್ನು ಅಭ್ಯಸಿಸುವ ಮೂಲಕ ಎಂದು ಶಾಸ್ತ್ರವಚನಗಳು ಕಲಿಸುತ್ತವೆ ಎಂದು ಹೇಳುತ್ತಾ, ಅಂತಹ ಆಚರಣೆಗಳನ್ನು ಅವನು ತಿರಸ್ಕರಿಸಿದನು. (ಯೋಹಾನ 17:3) ಇನ್ನೊಂದು ಕಡೆಯಲ್ಲಿ, ವೇದನೆಭರಿತ ಸಂಸ್ಕಾರಗಳು ಸ್ವರಕ್ಷಣೆಯ ಒಂದು ವಿಧದೋಪಾದಿ ಕೆಲವರಿಂದ ವೀಕ್ಷಿಸಲ್ಪಟ್ಟಿವೆ.
ಚರ್ಚ್ ಹಿಸ್ಟೊರಿ ಇನ್ ಪ್ಲೇನ್ ಲ್ಯಾಂಗ್ವೇಜ್ ಎಂಬ ಪುಸ್ತಕವು ಸಂನ್ಯಾಸದ ಮೇಲೆ ಹೇಳಿಕೆಯನ್ನೀಯುವುದು: “ಮನುಷ್ಯನ ಕುರಿತಾದ ತಪ್ಪಭಿಪ್ರಾಯ ಇಡೀ ಸಂನ್ಯಾಸವನ್ನು ಬೆಂಬಲಿಸುತ್ತಿತ್ತು. ಒಬ್ಬ ಕೈದಿಯನ್ನು ಒಂದು ಹೆಣಕ್ಕೆ ಸರಪಣಿಯಿಂದ ಬಿಗಿದ ಹಾಗೆ, ಆತ್ಮವು ಶರೀರಕ್ಕೆ ಬಿಗಿಯಲ್ಪಟ್ಟಿರುತ್ತದೆ ಎಂಬುದು ಸಂನ್ಯಾಸಿಗಳ ಅಭಿಪ್ರಾಯವಾಗಿದೆ. ಮಾನವ ಜೀವದ ಕುರಿತಾಗಿ ಬೈಬಲಿನ ನೋಟವು ಅದಾಗಿರುವುದಿಲ್ಲ.” ಹೌದು, ಸ್ವಯಂಕೃತ ವೇದನೆಯು ದೇವರ ಮೆಚ್ಚಿಗೆಯನ್ನು ಗಳಿಸಬಲ್ಲದೆಂಬ ಕಲ್ಪನೆಯು ತಾನೇ ಶಾಸ್ತ್ರವಚನಗಳಿಗೆ ಸಂಬಂಧವಿಲ್ಲದ್ದಾಗಿದೆ. ಇದು, ಶರೀರಕ್ಕೆ ಸಂಬಂಧಿಸಿದ್ದೆಲ್ಲವೂ ಕೆಟ್ಟದ್ದು ಮತ್ತು ಒಬ್ಬನು ರಕ್ಷಣೆಯನ್ನು ಪಡೆಯಲಿಕ್ಕಾಗಿ ಅದನ್ನು ಸಾಧ್ಯವಾದಷ್ಟು ಅಪಪ್ರಯೋಗಿಸಬೇಕಾಗಿದೆ ಎಂಬ ಅಧ್ಯಾತ್ಮ ರಹಸ್ಯ ಜ್ಞಾನ ವಾದದಲ್ಲಿ ಅದರ ಆಧಾರವನ್ನು ಕಂಡುಕೊಳ್ಳುತ್ತದೆ.
ನಾವು ಸಂತೋಷದಿಂದಿರುವಂತೆ ಯೆಹೋವನು ಅಪೇಕ್ಷಿಸುತ್ತಾನಾದುದರಿಂದ, ಅಂತಹ ಸಂತೋಷಭರಿತ ದೇವರನ್ನು ಸೇವಿಸುವುದು ಒಬ್ಬ ಸಂನ್ಯಾಸಿಯಾಗಿ ಪರಿಣಮಿಸುವ ಒಂದು ಸಂಗತಿಯಲ್ಲ. (ಪ್ರಸಂಗಿ 7:16) ಹೀಗೆ, ಅಂತಹ ಸ್ವಯಂ ಪ್ರೇರಿತ ಕಷ್ಟಾನುಭವಗಳು ರಕ್ಷಣೆಗೆ ಮಾರ್ಗವೆಂದು ಶಾಸ್ತ್ರವಚನಗಳಲ್ಲಿ ಎಲ್ಲಿಯೂ ನಮಗೆ ಹೇಳಲ್ಪಟ್ಟಿರುವುದಿಲ್ಲ. ಅದಕ್ಕೆ ಬದಲಾಗಿ, ಕ್ರಿಸ್ತನ ರಕ್ತ, ಇದರೊಂದಿಗೆ ಅದರಲ್ಲಿ ನಮ್ಮ ನಂಬಿಕೆಯು ನಮ್ಮನ್ನು ಎಲ್ಲ ಪಾಪಗಳಿಂದ ಶುದ್ಧಿಮಾಡುತ್ತದೆ ಎಂದು ದೇವರ ವಾಕ್ಯವು ಸ್ಪಷ್ಟಪಡಿಸುತ್ತದೆ.—ರೋಮಾಪುರ 5:1; 1 ಯೋಹಾನ 1:7.