ಆ ಬೆಲೆಬಾಳುವ ಕೊಂಬುಗಳ ಕೆಳಗಿರುವ ಪ್ರಾಣಿ
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಹಠಾತ್ತಾಗಿ, ಖಡ್ಗಮೃಗವು ಪೂರ್ಣ ವೇಗದಲ್ಲಿ ರಭಸದಿಂದ ಮುನ್ನುಗ್ಗುತ್ತಿತ್ತು. ಆ ಮನುಷ್ಯನು ಒಂದು ಪಕ್ಕಕ್ಕೆ ಹಾರಿ, ಹತ್ತಿರದಲ್ಲಿದ್ದ ಒಂದು ಚಿಕ್ಕ ಮರದ ಕಡೆಗೆ ವೇಗವಾಗಿ ಓಡಿದನು. ಆದರೆ, ಸುರಕ್ಷೆಗೆ ತೆವಳಿಕೊಂಡು ಹೋಗಲು ಅವನಿಗೆ ಸಮಯವನ್ನು ಕೊಡದೆ ಖಡ್ಗಮೃಗವು ಆಶ್ಚರ್ಯಗೊಳಿಸುವ ಚುರುಕುತನದಿಂದ ಸುತ್ತ ತಿರುಗಿತು. ಅವನನ್ನು ಅದರ ಕೊಂಬಿನಿಂದ ಸಿಕ್ಕಿಸಿ ಗಾಳಿಯಲ್ಲಿ ಎಸೆಯುವ ಮುನ್ನ, ಅವನನ್ನು ಹಲವಾರು ಬಾರಿ ಮರದ ಸುತ್ತ ಓಡಿಸಿತು. ಆ ಬಡಪಾಯಿ ಮನುಷ್ಯನು ನೆಲವನ್ನು ತಲಪುವ ಮುಂಚೆ, ಮೊದಲು ಖಡ್ಗಮೃಗದ ಭುಜಗಳ ಮೇಲೆ ಪುಟನೆಗೆದು ಕೆಳಗೆ ಬಿದ್ದನು. ಮರಣಕ್ಕೆ ತುಳಿಯಲ್ಪಡುವುದನ್ನು ಅಥವಾ ತಿವಿಯಲ್ಪಡುವುದನ್ನು ನಿರೀಕ್ಷಿಸುತ್ತಾ, ಅವನು ಅಲ್ಲಿ ಬಿದ್ದುಕೊಂಡಿದ್ದನು. ಖಡ್ಗಮೃಗವು ಹೆಜ್ಜೆಯನ್ನು ಮುಂದಿಟ್ಟಂತೆಯೇ, ಆ ಮನುಷ್ಯನು ತನ್ನ ಕಾಲನ್ನು ಎತ್ತಿದನು, ಆದರೆ ಖಡ್ಗಮೃಗವು ಅದನ್ನು ಕೇವಲ ಮೂಸಿ ಕುಕ್ಕುಲೋಟದಲ್ಲಿ ಓಡಿಹೋಯಿತು!
ಇದು—ಕುತೂಹಲಿ, ಜಗಳಗಂಟಿ, ಸುಲಭವಾಗಿ ದಿಗಿಲುಗೊಳ್ಳುವ—ಆಫ್ರಿಕದ ಕಪ್ಪು ಖಡ್ಗಮೃಗವಾಗಿದೆ. ಅದು ನೋಡಲಸಾಧ್ಯವಾದ (ಅದರ ದೃಷ್ಟಿಯು ನ್ಯೂನವಾಗಿರುವುದರಿಂದ) ಒಂದು ವಿಷಯಕ್ಕೆ, ಖಡ್ಗಮೃಗದ ಉತ್ಕೃಷ್ಟವಾದ ಘ್ರಾಣ ಅಥವಾ ಕಿವಿಗೊಡುವ ಶಕ್ತಿಯು ಅದನ್ನು ಎಚ್ಚರಿಸುವಲ್ಲಿ, ಅದು ಆ ಮೂಲದ ಕಡೆಗೆ, ಅದು ಏನೇ—ಒಂದು ಟ್ರೈನ್ನಿಂದ ಹಿಡಿದು ಒಂದು ಚಿಟ್ಟೆಯ ವರೆಗೆ—ಆಗಿರಲಿ ಅದರ ಕಡೆಗೆ ಪೂರ್ಣ ವೇಗದಲ್ಲಿ ನುಗ್ಗುವುದು. ಭುಜಗಳ ತನಕ ಒಂದೂವರೆ ಮೀಟರ್ ಎತ್ತರ ಮತ್ತು 1,000 ಕಿಲೋಗ್ರಾಮ್ಗಳಷ್ಟು ತೂಕವುಳ್ಳದ್ದಾಗಿದ್ದರೂ, ಅದು ಒಂದು ತಾಸಿಗೆ ಸುಮಾರು 55 ಕಿಲೋಮೀಟರ್ಗಳ ದೌಡಿನಲ್ಲಿ ಓಡಿ 180 ಡಿಗ್ರಿ ಕೋನದಲ್ಲಿ ಹಠಾತ್ತಾಗಿ ತಿರುಗಬಲ್ಲದು!
ಕೆಲವೊಮ್ಮೆ ಅದರ ರಭಸದ ನುಗ್ಗುವಿಕೆಯು ಕೇವಲ ಗೊಡ್ಡು ಬೆದರಿಕೆ ಅಥವಾ ಬರಿಯ ವಿನೋದವೂ ಆಗಿರುತ್ತದೆ. ಒಂದು ಸಮಯದಲ್ಲಿ, ರೂಫಸ್ ಎಂದು ಕರೆಯಲ್ಪಟ್ಟ ಒಂದು ಎಳೆಯ ಕಪ್ಪು ಖಡ್ಗಮೃಗದ ಒಡತಿಯಾಗಿದ್ದ ಯುಲೀನ್ ಕಾರ್ನಿ ತಿಳಿಸಿದ್ದೇನೆಂದರೆ “ಎಷ್ಟು ಹೆಚ್ಚು ಧೂಳು ಹಾರಾಡುತ್ತಿತ್ತೊ, ರೂಫಸನಿಗೆ ಅಷ್ಟೇ ಹೆಚ್ಚು ಸಂತೋಷವಾಗುತ್ತಿತ್ತು.” ರೂಫಸನು ಪೊದರಿನ ಮಧ್ಯದಿಂದ “ಘೂಂಕರಿಸುತ್ತಾ, ಏದುಸಿರು ಬಿಡುತ್ತಾ, ನುಗ್ಗುತ್ತಾ” ಬಂದು, “ತೋಟವನ್ನು ರಭಸವಾಗಿ ಸುತ್ತುತ್ತಾ ಬಂದು, ಮೊಗಸಾಲೆಯ ಮುಂದೆ ಥಟ್ಟನೆ ನಿಂತು, ಮೆಟ್ಟಿಲುಗಳ ಮೇಲೆ ಗಂಭೀರವಾಗಿ ನಡೆದುಕೊಂಡು ಬರುತ್ತಾ [ಅವಳ] ಆರಾಮಕುರ್ಚಿಯ ಬದಿಯಲ್ಲಿ ಮಲಗಿದ” ಒಂದು ಸಂದರ್ಭವನ್ನು ಅವರು ಅಕ್ಕರೆಯಿಂದ ಮರುಜ್ಞಾಪಿಸಿಕೊಳ್ಳುತ್ತಾರೆ.
ಕಪ್ಪು ಖಡ್ಗಮೃಗಕ್ಕಾಗಿರುವ ಈ ವಾತ್ಸಲ್ಯದಲ್ಲಿ, ಅದರ ಅಧ್ಯಯನವನ್ನು ಮಾಡಿರುವ ಅನೇಕರು ಪಾಲಿಗರಾಗುತ್ತಾರೆ. ಆದರೂ, ಮಾನವರಲ್ಲಿರುವಂತೆ ಖಡ್ಗಮೃಗಗಳೊಳಗೂ ವ್ಯಕ್ತಿತ್ವಗಳು ಭಿನ್ನವಾಗಿರುತ್ತವೆಂದು ಅವರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಆದುದರಿಂದ, ನಿಜವಾಗಿಯೂ ಸಿಟ್ಟಿನ ಸ್ವಭಾವದ ಪ್ರಾಣಿಯ ಕುರಿತಾಗಿ ಎಚ್ಚರವಾಗಿರ್ರಿ! ಆಫ್ರಿಕದ ದಕ್ಷಿಣಭಾಗದ ಪ್ರಾಣಿಗಳಿಗಿರುವ ಒಂದು ಜನಪ್ರಿಯ ಕೈಪಿಡಿಯು ಎಚ್ಚರಿಸುವುದೇನಂದರೆ, ಕಪ್ಪು ಖಡ್ಗಮೃಗವನ್ನು “ಎಂದೂ ಪೂರ್ತಿಯಾಗಿ ನಂಬಬಾರದು, ಮತ್ತು ವಿವೇಕಸಮ್ಮತವಾದಷ್ಟು ದೂರ ಇರಿಸಬೇಕು.” ವಿಷಾದಕರವಾಗಿ, ಹೆಚ್ಚಾಗಿ ಮಾನವ ಕಿರುಕುಳವೇ ಅದರ ಮೇಲೆರಗುವಿಕೆಗೆ ಕಾರಣವಾಗಿರುತ್ತದೆ. ಮನುಷ್ಯನು ತನ್ನನ್ನು ಖಡ್ಗಮೃಗಕ್ಕೆ ಇರುವಂತಹ ಏಕೈಕ ವೈರಿಯನ್ನಾಗಿ ಮಾಡಿಕೊಂಡಿರುವ ವಾಸ್ತವಾಂಶದ ಕುರಿತಾಗಿ, ಈ ಮುಂಚೆ ವರ್ಣಿಸಲ್ಪಟ್ಟ ಖಡ್ಗಮೃಗದ ಆಕ್ರಮಣವನ್ನು ಬದುಕುಳಿದ, ಪ್ರೊಫೆಸರ್ ರೂಡಾಲ್ಫ್ ಶೆಂಕಲ್ ಪ್ರಲಾಪಿಸುತ್ತಾರೆ.
ಆಫ್ರಿಕದ ಇನ್ನೊಂದು ಖಡ್ಗಮೃಗವಾದ, ಬಿಳಿ ಖಡ್ಗಮೃಗದ ಕುರಿತಾಗಿ ಏನು? ಅದರ ಸಾಮಾನ್ಯವಾದ ಪ್ರಶಾಂತ ಸ್ವಭಾವವು ಅದನ್ನು ತನ್ನ ಅಬ್ಬರದ ರಕ್ತಸಂಬಂಧಿಗೆ ತುಂಬ ವೈದೃಶ್ಯದ್ದಾಗಿ ಮಾಡುತ್ತದೆ. ಇದು ಕಪ್ಪು ಖಡ್ಗಮೃಗಕ್ಕಿಂತ ಸರಿಸುಮಾರು ಎರಡು ಪಟ್ಟು ದೊಡ್ಡದೂ ಆಗಿದ್ದು, ಅದನ್ನು ಲೋಕದಲ್ಲಿರುವ ಅತಿದೊಡ್ಡ ಪ್ರಾಣಿಗಳಲ್ಲಿ ಮೂರನೆಯದ್ದಾಗಿ ಮಾಡುತ್ತದೆ. ಅದರ ದೊಡ್ಡ ತಲೆಯು ಎಷ್ಟು ಭಾರವುಳ್ಳದ್ದಾಗಿದೆ ಎಂದರೆ, ಅದನ್ನು ಎತ್ತಲು ನಾಲ್ಕು ಮನುಷ್ಯರು ಬೇಕಾಗುತ್ತದೆ! ಆದರೂ, ಅದು ತನ್ನ ಕಪ್ಪು ರಕ್ತಸಂಬಂಧಿಯಷ್ಟೇ ಚುರುಕಾಗಿದೆ.
ಕಾಡಿನಲ್ಲಿ ಮನುಷ್ಯನಿಂದ ಎದುರಿಸಲ್ಪಟ್ಟಾಗ, ಸಾಮಾನ್ಯವಾಗಿ ಬಿಳಿ ಖಡ್ಗಮೃಗವು ಒಬ್ಬ ಮನುಷ್ಯನ ನೋಟ, ಧ್ವನಿ ಅಥವಾ ವಾಸನೆಯಿಂದಲೇ ಗಾಬರಿಯಾಗಿ ಓಡಿಹೋಗುವುದು. ಆದಾಗಲೂ, ಇದು ಹೀಗೆಯೇ ವರ್ತಿಸುವುದೆಂದು ಭಾವಿಸಿಕೊಳ್ಳುವುದರ ವಿರುದ್ಧ ಡಾರಿಲ್ ಮತ್ತು ಶಾರ್ನ ಬ್ಯಾಲ್ಫೊರ್, ರೈನೊ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಎಚ್ಚರಿಸುತ್ತಾರೆ. “ಇತ್ತೀಚಿನ ವರ್ಷಗಳಲ್ಲಿ ಕಪ್ಪು ಖಡ್ಗಮೃಗಕ್ಕಿಂತ ಬಿಳಿ ಖಡ್ಗಮೃಗದಿಂದ ಹೆಚ್ಚಿನ ಹಾನಿಗಳು ಉಂಟುಮಾಡಲ್ಪಟ್ಟಿವೆ” ಎಂದು ಅವರು ಬರೆಯುತ್ತಾರೆ. ಇದು ಪ್ರಾಯಶಃ, ಅದಕ್ಕಾಗಿ ಮಾನವನಿಗಿರುವ “ಗೌರವದ ಕೊರತೆ”ಯಿಂದಾಗಿದೆ ಎಂದು ಅವರು ಕೂಡಿಸಿದರು.
ಅಚ್ಚುಮೆಚ್ಚಿನ ಕಾಲಕ್ಷೇಪ
ಆಫ್ರಿಕದ ಖಡ್ಗಮೃಗಗಳು ಪಾಲಿಗರಾಗುವ ಒಂದು ನಿರ್ದಿಷ್ಟ ಪ್ರೀತಿಯಿದೆ. ಅದು ಕೆಸರುಮಣ್ಣಿನ ಪ್ರೀತಿ—ತುಂಬ ಕೆಸರುಮಣ್ಣು! ಅನೇಕ ಖಡ್ಗಮೃಗಗಳು ತಮ್ಮ ಅಚ್ಚುಮೆಚ್ಚಿನ ಕೆಸರುಮಣ್ಣಿನ ಗುಂಡಿಯನ್ನು ಸಮೀಪಿಸುತ್ತಿರುವಾಗ ತಮ್ಮ ಗತಿಯನ್ನು ಹೆಚ್ಚಿಸುವವು, ಮತ್ತು ಮುಂದಿರುವಂತಹದರ್ದ ಪ್ರತೀಕ್ಷೆಯಲ್ಲಿ ಹರ್ಷದಿಂದ ಕಿರುಚುವುವು. ಇದನ್ನು ಹಲವಾರು ಸಲ ಗಮನಿಸಿರುವ ಬ್ಯಾಲ್ಫೊರ್ ದಂಪತಿಗಳು ತಿಳಿಸುವುದೇನೆಂದರೆ, ಖಡ್ಗಮೃಗವು ಮಣ್ಣಿನಲ್ಲಿ ನಿಧಾನವಾಗಿ ಮುಳುಗುತ್ತಿರುವಾಗ, “ಒಂದು ನಿಟ್ಟುಸಿರು ಕೇಳಿಬರುತ್ತಿತ್ತು, ಮತ್ತು ಆ ತೃಪ್ತ ಪ್ರಾಣಿಯು . . . ತನ್ನ ಸಮಾರ್ಜನೆಗಳನ್ನು ಮುಂದುವರಿಸುವ ಮುಂಚೆ ಕೆಲವು ನಿಮಿಷಗಳಿಗೆ ಒಂದು ಬದಿಯಲ್ಲಿ ಮಲಗುತ್ತಿತ್ತು, ಅನೇಕಸಲ ತನ್ನ ಬೆನ್ನಿನ ಮೇಲೆ ಉರುಳಿ ಓಲಾಡುತ್ತಾ, ಅದರ ಕಾಲುಗಳನ್ನು ಆಕಾಶದ ಕಡೆಗೆ ಒದೆಯುತ್ತಿತ್ತು.”
ಎರಡೂ ಜಾತಿಯ ಖಡ್ಗಮೃಗಗಳು ಕೆಲವೊಮ್ಮೆ ಒಂದೇ ಹೊಂಡದಲ್ಲಿ ಭಾಗಿಗಳಾಗಿ, ಕೆಸರಿನಲ್ಲಿ ಕೊಚ ಕೊಚ ಕಾಲಕ್ಷೇಪವನ್ನು ಮಾಡುವ ಅವುಗಳ ಪ್ರೀತಿಯಲ್ಲಿ ಎಲ್ಲಾ ಘನತೆಯನ್ನು ತೊರೆಯುವವು. ಮೇಲೆ ತಿಳಿಸಲ್ಪಟ್ಟ, ಎಳೆಯ ರೂಫಸನು, ತನ್ನ ಮಣ್ಣಿನ ಸ್ನಾನದ ಕುರಿತಾಗಿ ಎಷ್ಟು ಉತ್ಸಾಹಿಯಾಗಿರುತ್ತಿದ್ದನೆಂದರೆ “ಕೆಲವೊಮ್ಮೆ ಅದು ಮುಗಿಯುವ ಮುಂಚೆಯೇ ಮೇಲೆ ಜಿಗಿದು, ತೋಟದ ಸುತ್ತಲೂ ಓಡುತ್ತಾ, ಒಂದು ಕಾಡುಕುದುರೆಯಂತೆ ಜಿಗಿಯುತ್ತಾ, ಪುನಃ ಒಮ್ಮೆ ಆ ಹರ್ಷದಲ್ಲಿ ಆನಂದಿಸಲಿಕ್ಕಾಗಿ ಆ ಹೊಂಡಕ್ಕೆ ಪುನಃ ಹಿಂದಿರುಗುತ್ತಿದ್ದನು.”
ಆದಾಗಲೂ, ಆ ಕೆಸರುಮಣ್ಣು ಆನಂದಮಯ ಲೋಲುಪತೆಗಿಂತಲೂ ಇತರ ಹೆಚ್ಚಿನ ವಿಷಯಗಳಿಗಾಗಿ ಉಪಯೋಗಕ್ಕೆ ಬರುತ್ತದೆ. ಜೊತೆ ಖಡ್ಗಮೃಗಗಳೊಂದಿಗೆ ಮತ್ತು ಮಣ್ಣನ್ನು ಪ್ರೀತಿಸುವ ಇತರ ಪ್ರಾಣಿಗಳೊಂದಿಗೆ ಸಾಮಾಜಿಕ ಗೋಷ್ಠಿಗಳಿಗಾಗಿ ಅದು ಒಂದು ಗೊತ್ತಾದ ಸ್ಥಳವನ್ನು ಒದಗಿಸುತ್ತದೆ, ಕಿರುಕುಳಗೊಳಿಸುವ ನೊಣದ ಕಡಿಯುವಿಕೆಗಳಿಂದ ಖಡ್ಗಮೃಗಗಳಿಗೆ ಸಾಧಾರಣವಾಗಿ ಉಪಶಮನ ನೀಡುತ್ತದೆ, ಮತ್ತು ಸೂರ್ಯನ ತಾಪದಿಂದ ಅವುಗಳ ದೇಹಗಳನ್ನು ತಣ್ಣಗಾಗಿಸುತ್ತದೆ. ಆದುದರಿಂದ ಖಡ್ಗಮೃಗಗಳು ತಮ್ಮ ಉಸುಬಿನ ಹಾಸಿಗೆಯಲ್ಲಿ ತಾಸುಗಟ್ಟಲೆ ಸಮಯ ಬಳಸಾಡುವುದನ್ನು ಕಾಣುವುದು ಆಶ್ಚರ್ಯಕರವಾಗಿರುವುದಿಲ್ಲ.
ಯಾವುದು ಯಾವುದಾಗಿದೆ?
ಯಾವ ಖಡ್ಗಮೃಗವು ಯಾವುದಾಗಿದೆಯೆಂದು ಒಬ್ಬ ವ್ಯಕ್ತಿ ಹೇಗೆ ಹೇಳಬಲ್ಲನು? ನಿಜವಾಗಿಯೂ ಒಂದು ಕಪ್ಪು ಮತ್ತು ಇನ್ನೊಂದು ಬಿಳಿಯದಾಗಿರುತ್ತದೋ? ಇಲ್ಲ. ಅವೆರಡೂ ಬೂದುಬಣ್ಣದವುಗಳಾಗಿವೆ. ನೀವು ಎಂದಾದರೂ ಆ ಬೂದುಬಣ್ಣವನ್ನು ನೋಡಸಾಧ್ಯವಿರುವಲ್ಲಿ, ಅವು ಬೂದುಬಣ್ಣದ ಭಿನ್ನ ಛಾಯೆಗಳಾಗಿವೆ. ನೀವು ನಿಜವಾಗಿಯೂ ಏನನ್ನು ನೋಡುವಿರೋ, ಅದು ಈಗ ಚರ್ಮದ ಮೇಲೆ ತೊಡೆದುಕೊಂಡಿರುವ, ಅವುಗಳ ಹಿಂದಿನ ಉರುಳಾಡುವಿಕೆಯಿಂದಾದ ಮಣ್ಣಿನ ಬಣ್ಣವಾಗಿದೆ.
ಆದರೆ ಬಾಯಿಯ ಆಕಾರವು ಯಾವುದು ಯಾವುದಾಗಿದೆಯೆಂದು ನಿಮಗೆ ತತ್ಕ್ಷಣ ತಿಳಿಸುವುದು. ಕಪ್ಪು ಖಡ್ಗಮೃಗವು ಚಿಗುರು, ಕೊಂಬೆಗಳು ಮತ್ತು ಮರಗಳ ಎಲೆಗಳನ್ನು ತಿನ್ನುವಂತಹದ್ದಾಗಿರುವುದರಿಂದ, ಎಲೆಗಳ ಮತ್ತು ಪೊದೆಗಳ ಕೊಂಬೆಗಳ ಸುತ್ತ ತಿರಿಚಲು ಅಥವಾ ಕೊಕ್ಕೆಹಾಕಲು ಉಪಯೋಗಿಸುವ ಒಂದು ಚೂಪಾದ ಮೇಲ್ತುಟಿ ಅದಕ್ಕಿದೆ. ಆದುದರಿಂದ ಅದರ ಹೆಚ್ಚು ನಿಷ್ಕೃಷ್ಟ ಹೆಸರು, ಕೊಕ್ಕೆ-ತುಟಿಗಳ ಖಡ್ಗಮೃಗ ಎಂದಾಗಿದೆ. ಇನ್ನೊಂದು ಕಡೆ, ಬಿಳಿ ಖಡ್ಗಮೃಗವು ಸೊಪ್ಪುಸದೆಗಳನ್ನು ತಿನ್ನುವಂತಹದ್ದಾಗಿದೆ. ಈ ಕಾರಣದಿಂದ, ಅದರ ಮೂತಿ ನೇರವಾಗಿದೆ, ಹೀಗಿರುವದರಿಂದ ಅದು ಒಂದು ಹುಲ್ಲು ಕತ್ತರಿಸುವ ಯಂತ್ರದಂತೆ ಹುಲ್ಲನ್ನು ಕಡಿದು ತಿನ್ನುತ್ತದೆ. ಅದರ ಹೆಚ್ಚು ನಿಷ್ಕೃಷ್ಟ ಹೆಸರು ಚಚ್ಚೌಕ-ತುಟಿಗಳ ಖಡ್ಗಮೃಗವಾಗಿರುವುದು ಆಶ್ಚರ್ಯಕರವಲ್ಲ. ಆದರೆ ಯಾವುದೊ ಕಾರಣಕ್ಕಾಗಿ, ದಕ್ಷಿಣ ಆಫ್ರಿಕದಲ್ಲಿನ ಪ್ರಥಮ ಡಚ್ ನೆಲೆಸಿಗರಿಂದ ಆರಂಭವಾದ, ಆ ಕಪ್ಪು ಅಥವಾ ಬಿಳಿ ಭೇದವು ಅಂಟಿಕೊಂಡಿದೆ.
ಆ ಬೆಲೆಬಾಳುವ ಕೊಂಬುಗಳು
ಖಡ್ಗಮೃಗ (ರೈನಾಸರಸ್) ಎಂಬ ಹೆಸರು, “ಮೂಗು ಕೊಂಬುಳ್ಳದ್ದು” ಎಂಬ ಅರ್ಥವಿರುವ ಎರಡು ಗ್ರೀಕ್ ಶಬ್ದಗಳಿಂದ ಬಂದದ್ದಾಗಿದೆ. ಮತ್ತು ಖಡ್ಗಮೃಗದ ಕೊಂಬುಗಳು ಯಾವುದರಿಂದ ಮಾಡಲ್ಪಟ್ಟಿವೆ? ಅವು ತಳದಲ್ಲಿ ಸವೆದು ಹೋಗಿರುವಂತೆ ತೋರುವುದರಿಂದ, ಕೆಲವು ಜನರು ಅವುಗಳನ್ನು ಸಂಶ್ಲೇಷಿಸಲ್ಪಟ್ಟ ಕೂದಲಾಗಿ ವರ್ಣಿಸುತ್ತಾರೆ. ಆದಾಗಲೂ, ಅವು ನಿಜವಾದ ಕೂದಲಾಗಿರುವುದಿಲ್ಲ, ಬದಲಾಗಿ ಅವು “ಗೊರಸುಳ್ಳ ಪ್ರಾಣಿಗಳ ಗೊರಸುಗಳಿಗೆ ಸೂಕ್ಷ್ಮದರ್ಶಕೀಯವಾಗಿ ಸಮಾನವಾಗಿವೆ” ಎಂದು ಸೌತ್ ಆಫ್ರಿಕಾಸ್ ನ್ಯಾಷನಲ್ ಪಾರ್ಕ್ಸ್ ಬೋರ್ಡ್ನಲ್ಲಿ ವೈಜ್ಞಾನಿಕ ಸಲಹೆಗಾರರಾಗಿರುವ ಡಾ. ಕೆರಿ ಡ ಕ್ರಾಫ್ ಹೇಳುತ್ತಾರೆ.
ಬೆರಳಿನ ಉಗುರುಗಳು ಬೆಳೆಯುವಂತೆಯೇ ಕೊಂಬುಗಳು ಬೆಳೆಯುತ್ತಾ ಇರುತ್ತವೆ. ಗರ್ಟಿ ಎಂಬ ಹೆಸರುಳ್ಳ ಒಂದು ಪ್ರಸಿದ್ಧ ಕಪ್ಪು ಖಡ್ಗಮೃಗವು 1.4 ಮೀಟರ್ಗಿಂತಲೂ ಉದ್ದವಾದ ಒಂದು ಕೊಂಬನ್ನು ಬೆಳೆಸಿತು, ಮತ್ತು ಒಂದು ಬಿಳಿ ಖಡ್ಗಮೃಗದ ಕೊಂಬು ಎರಡು ಮೀಟರ್ ಉದ್ದ ಬೆಳೆಯಿತು! ಮತ್ತು ಕೆಲವೊಮ್ಮೆ ಸಂಭವಿಸುವಂತೆ ಕೊಂಬು ತುಂಡಾಗುವಲ್ಲಿ, ಒಂದು ವರ್ಷಕ್ಕೆ ಸುಮಾರು ಎಂಟು ಸೆಂಟಿಮೀಟರಿನ ಪ್ರಮಾಣದಲ್ಲಿ ಅದು ತಾನೇ ಸ್ಥಾನ ಭರ್ತಿಮಾಡಿಕೊಳ್ಳುವುದು.
ಖಡ್ಗಮೃಗಗಳ ಕೊಂಬುಗಳು ಯಾಕಿಷ್ಟು ಬೆಲೆಯುಳ್ಳವುಗಳಾಗಿವೆ? ಅನೇಕ ಜನರು ಅವುಗಳನ್ನು ಔಷಧಗಳಿಗಾಗಿ ಉಪಯೋಗಿಸುತ್ತಾರೆ, ಮತ್ತು ಇತರರು ಒಂದು ಖಡ್ಗಮೃಗದ ಕೊಂಬಿನ ಹಿಡಿಯಿರುವ ಒಂದು ಕತ್ತಿಯನ್ನು ಹೊಂದಿರುವ ಪ್ರತಿಷ್ಠೆಯನ್ನು ಅನುಭೋಗಿಸುತ್ತಾರೆ. ಬೇಡಿಕೆಯು ಎಷ್ಟು ಮಹತ್ತಾಗಿದೆ ಮತ್ತು ವ್ಯಾಪಾರವು ಎಷ್ಟು ಲಾಭಕರವಾಗಿದೆಯೆಂದರೆ, ಲಾಭಕ್ಕಾಗಿ ಲೋಭಿಗಳಾಗಿರುವವರಿಂದ ಸಾವಿರಾರು ಖಡ್ಗಮೃಗಗಳು ಹತಿಸಲ್ಪಟ್ಟಿವೆ.
ಒಂದು ಕಾಲದಲ್ಲಿ ಅಳಿವಿನ ಅಂಚಿನಲ್ಲಿದ್ದ ಬಿಳಿ ಖಡ್ಗಮೃಗವು, ಸಂರಕ್ಷಕರ ಕಠಿಣತಮ ಪ್ರಯತ್ನಗಳಿಂದಾಗಿ ಈಗ ಸಮಂಜಸವಾಗಿ ಚೇತರಿಸಿಕೊಂಡಿದೆ. ಆದರೆ ಅದರ ಕಪ್ಪು ರಕ್ತಸಂಬಂಧಿಗೆ ಹೀಗೆ ಸಂಭವಿಸಿಲ್ಲ. ಕಳ್ಳತನದ ಬೇಟೆಯ ಪ್ರವಾಹವನ್ನು ಕುಗ್ಗಿಸಲು ನಡೆಯುತ್ತಿರುವ ವಿವಿಧ ವಿಧಾನಗಳಲ್ಲಿ, ಪ್ರಾಣಿಯ ಕೊಂಬನ್ನು ಕತ್ತರಿಸಿಹಾಕುವುದೂ ಸೇರಿದೆ. ಆದರೆ ಈ ವಿಪರೀತವಾಗಿ ದೊಡ್ಡದಾಗಿರುವ ಕೆಲಸವು ಸೀಮಿತ ಮೌಲ್ಯವುಳ್ಳದ್ದಾಗಿರುವಂತೆ ಪರಿಣಮಿಸುತ್ತಿದೆ. ಖಡ್ಗಮೃಗದ ಕೊಂಬುಗಳ ಒಂದು ಕಿಲೋಗ್ರಾಮ್ಗೆ 2,000 ಡಾಲರುಗಳಷ್ಟು ಬೆಲೆಯಿಂದಾಗಿ, ಕೊಂಬುತೆಗೆಯಿಸಲ್ಪಟ್ಟ ಒಂದು ಖಡ್ಗಮೃಗದ ಮುರಿದಂತಹ ಕೊಂಬನ್ನೂ ತೋಡಿ ತೆಗೆಯುವುದು ಯೋಗ್ಯವಾಗಿದೆಯೆಂದು ಕಳ್ಳಬೇಟೆಗಾರರಿಗೆ ಅನಿಸುತ್ತದೆ. ಆದರೆ, ನಿರೀಕ್ಷಾಜನಕವಾಗಿ, ಮನುಷ್ಯನ ಲೋಭವು ಯಶಸ್ವಿಗೊಳ್ಳದು, ಹೀಗೆ ಭವಿಷ್ಯತ್ತಿನ ಸಂತತಿಗಳೂ ಈ ಅದ್ಭುತಕರವಾದ ಪ್ರಾಣಿಯೊಂದಿಗೆ ಪರಿಚಿತರಾಗುವುದರಲ್ಲಿ ಹರ್ಷವನ್ನು ಕಂಡುಕೊಳ್ಳಲು ಶಕ್ತರಾಗುವವು.
[ಪುಟ 37 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅವೆರಡೂ ಬೂದುಬಣ್ಣದವುಗಳಾಗಿರುವುದರಿಂದ ಕಪ್ಪು ಖಡ್ಗಮೃಗ ಮತ್ತು ಬಿಳಿ ಖಡ್ಗಮೃಗದ ನಡುವಿನ ವ್ಯತ್ಯಾಸವನ್ನು ನೀವು ಹೇಗೆ ಹೇಳಬಲ್ಲಿರಿ?
[ಪುಟ 36 ರಲ್ಲಿರುವ ಚಿತ್ರ]
ಬಿಳಿ ಖಡ್ಗಮೃಗ ಮತ್ತು ಅದರ ಮರಿ
[ಕೃಪೆ]
National Parks Board of South Africa