ನೀವು ಎಷ್ಟು ದೀರ್ಘಕಾಲ ಜೀವಿಸಬಲ್ಲಿರಿ?
ಜೀವಿತದ ಹಾದಿಯುದ್ದಕ್ಕೂ ಸಮಸ್ಯೆಗಳು ಇವೆ ಎಂಬುದನ್ನು ನಮ್ಮಲ್ಲಿ ಅಧಿಕಾಂಶ ಮಂದಿ ಸುಲಭವಾಗಿಯೇ ಒಪ್ಪಿಕೊಳ್ಳುತ್ತೇವೆ. ಆದರೂ, ಜೀವಂತವಾಗಿರಲು ನಾವು ಸಂತೋಷ ಪಡುತ್ತೇವೆ. ಕೇವಲ ನಮ್ಮ ಬಾಲ್ಯಾವಸ್ಥೆ ಅಥವಾ ಅಲ್ಪಾಯುಷ್ಯದೊಂದಿಗೆ ನಾವು ಸಂತೃಪ್ತರಾಗುವುದಿಲ್ಲ; ಅನೇಕ ವರ್ಷಗಳ ವರೆಗೆ ಜೀವಿಸಲು ನಾವು ಬಯಸುತ್ತೇವೆ. ಆದಾಗ್ಯೂ, ಮರಣವು ಅನಿವಾರ್ಯವಾದದ್ದಾಗಿ ತೋರುತ್ತದೆ. ಅದು ಅನಿವಾರ್ಯವೇ?
ಮರಣವನ್ನು ವಿಳಂಬಿಸಲು ಸಾಧ್ಯವಿದೆಯೊ? ನಮ್ಮ ಆಯುಷ್ಕಾಲವನ್ನು ವಿಸ್ತರಿಸಲು ಸಾಧ್ಯವಿದೆಯೊ?
ವಿಸ್ತರಿಸಲ್ಪಟ್ಟ ಆಯುಷ್ಕಾಲ?
ಇಸವಿ 1990 ರಲ್ಲಿ, ಮನುಷ್ಯನ ಆಯುಷ್ಕಾಲವನ್ನು “ನೂರಹತ್ತು ವರುಷಗಳ” ವರೆಗೆ ವಿಸ್ತರಿಸುವ ಸಂಭವನೀಯತೆಯಿದೆ ಎಂದು ಒಂದು ವಾರ್ತಾ ವರದಿಯು ಪ್ರಕಟಿಸಿತು. ಇದು ಬೈಬಲಿನ ಕೀರ್ತನೆಗಾರನಾದ ಮೋಶೆಯ ಈ ಮಾತುಗಳ ಒಂದು ಪರೋಕ್ಷವಾದ ಪರಾಮರ್ಶೆಯಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10, ಕಿಂಗ್ ಜೇಮ್ಸ್ ವರ್ಷನ್) ಆದುದರಿಂದ ಮನುಷ್ಯನ ಆಯುಷ್ಕಾಲವು ಸರಾಸರಿ 70 ಅಥವಾ 80 ವರುಷಗಳೆಂದು ಬೈಬಲು ಗೊತ್ತುಮಾಡುತ್ತದೆ. ಆದರೆ ಇಂದು ವ್ಯಕ್ತಿಯೊಬ್ಬನು ಜೀವಿಸಲು ನಿರೀಕ್ಷಿಸಬಹುದಾದ ಸಂಭವನೀಯ ವರ್ಷಗಳು ಎಷ್ಟು?
ಇಸವಿ 1992 ರಲ್ಲಿ ಲೋಕಾರೋಗ್ಯ ಸಂಘದಿಂದ ಪ್ರಕಾಶಿಸಲ್ಪಟ್ಟ ವರದಿಯೊಂದು, ಲೋಕವ್ಯಾಪಕವಾಗಿ ಮನುಷ್ಯನ ಜೀವ ನಿರೀಕ್ಷಣೆಯನ್ನು 65 ವರುಷಗಳಿಗೆ ನಿಗದಿಪಡಿಸಿತ್ತು. ಲೋಕಾರೋಗ್ಯ ಸಂಘಕ್ಕನುಸಾರವಾಗಿ, ಇದು “ಮುಂದಿನ ಐದು ವರ್ಷಗಳ ವರೆಗೆ, ವರ್ಷ ಒಂದಕ್ಕೆ ಸುಮಾರು ನಾಲ್ಕು ತಿಂಗಳು ಹೆಚ್ಚಾಗಿ ವಿಸ್ತರಿಸಲ್ಪಡುತ್ತದೆ, ಶಿಶು ಮರಣವು ಕಡಿಮೆಗೊಳ್ಳುತ್ತಿರುವುದೇ ಇದಕ್ಕೆ ಮುಖ್ಯವಾದ ಕಾರಣವಾಗಿದೆ.” ಒಂದು ವೈದ್ಯಕೀಯ ಅದ್ಭುತವು ಯಾವುದೇ ವ್ಯಕ್ತಿಯನ್ನು 50 ವರ್ಷ ಪ್ರಾಯಕ್ಕಿಂತ ಮೊದಲು ಸಾಯದಂತೆ ತಡೆದರೂ, ಅಮೆರಿಕದಲ್ಲಿ, “ಸರಾಸರಿ ಜೀವ ನಿರೀಕ್ಷಣೆಯಲ್ಲಿ ಉನ್ನತಿಯು ಕೇವಲ ಮೂರುವರೆ ವರುಷಗಳೇ ಆಗಿರುವುವು” ಎಂದು ಟೈಮ್ ಪತ್ರಿಕೆ ಹೇಳುತ್ತದೆ.
ಜೀವಿತವು ಅಷ್ಟೊಂದು ಅಲ್ಪಕಾಲದ್ದಾಗಿದೆ ಯಾಕೆ?
ನೆದರ್ಲೆಂಡಿನ ಮುಪ್ಪು ಶಾಸ್ತ್ರದ ಪ್ರಾಯೋಗಿಕ ಸಂಸ್ಥೆಯ ಡಾ. ಯಾನ್ ಫೇಕ್ ತರ್ಕಿಸುವುದೇನೆಂದರೆ ಮಾನವನ ಶರೀರದ ಜೀವಕೋಶಗಳ ಸ್ವರೂಪದಲ್ಲಾಗುವ ದೋಷಗಳು ನಿರ್ದಿಷ್ಟವಾದ ರೋಗಗಳೊಂದಿಗೆ ಹೇಗೆ ಸಂಬಂಧಕವಾಗಿವೆಯೊ ಹಾಗೆಯೆ ಮುಪ್ಪಾಗುವ ವಿಧಾನವು ಅನುವಂಶೀಯ ಅಂಶಗಳಿಂದ ಪ್ರಭಾವಿಸಲ್ಪಟ್ಟಿರುವಂತೆ ತೋರುತ್ತದೆ. ನಾವು ವೃದ್ಧರಾದಂತೆ ಒಂದು “ಹಿಡಿ ಕುಶಲ ವಂಶವಾಹಿಗಳು” ಪುನಃಸ್ಥಾಪಿಸಲ್ಪಡುವುದಾದರೆ ನಾವು ದೀರ್ಘಕಾಲ ಜೀವಿಸಬಹುದೆಂದು ಕೆಲವು ಸಂಶೋಧಕರು ನಂಬುತ್ತಾರೆ. ಅಂತಹ ಒಂದು ಪ್ರಸ್ತಾಪವು “ಸರಳತೆಯ ಸೋಗುಳ್ಳದ್ದು” ಎಂದು ಇತರರು ವರ್ಗೀಕರಿಸುತ್ತಾರೆ.
ಏನೇ ಇರಲಿ, “ಮಾನವ ಶರೀರದ ಜೀವಕೋಶಗಳೊಳಗೆ ಒಂದು ಬಗೆಯ ಜೀವವಿಜ್ಞಾನದ ಸಹಜವಾದ ಪರಿಮಿತಿಯ ಕಾರ್ಯ ಯೋಜನೆಯು ಅಲ್ಲಿರುವಂತೆ ಭಾಸವಾಗುತ್ತದೆಂದು,” ವಿಜ್ಞಾನಿಗಳು ಅಂಗೀಕರಿಸುತ್ತಾರೆಂದು ಟೈಮ್ ಪತ್ರಿಕೆಯು ವರದಿಸುತ್ತದೆ. ನಾವು “ಬದುಕಿರಲಿಕ್ಕಾಗಿ ನಿಯೋಜಿಸಲ್ಪಟ್ಟಿದ್ದೇವೆ” ಎಂದು ವಾದಿಸುವವರೂ ಸಹ “ಏನಾದರೂ ದೋಷವು ಸಂಭವಿಸುತ್ತದೆ” ಎಂದು ಸೋಲೊಪ್ಪಿಕೊಳ್ಳುತ್ತಾರೆ. ನಿಶ್ಚಯವಾಗಿ, ಬೈಬಲು ಹೇಳುವಂತೆ, 65, 70, ಅಥವಾ 80 ಅಥವಾ ಇನ್ನೂ ಸ್ಪಲ್ಪ ಹೆಚ್ಚು ವರುಷಗಳಲ್ಲಿ, ನಮ್ಮ ಜೀವಿತವು ಮರಣದಿಂದ “ಬೇಗನೆ ಗತಿಸಿಹೋಗುತ್ತದೆ.”
ಆದರೂ, ಪ್ರಥಮ ಶತಮಾನದ ಕ್ರೈಸ್ತ ಅಪೊಸ್ತಲ ಪೌಲನು ದೃಢವಿಶ್ವಾಸದಿಂದ ಮುನ್ನುಡಿದದ್ದು: “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:26) ಮರಣವನ್ನು ಹೇಗೆ ಅಂತ್ಯಗೊಳಿಸಸಾಧ್ಯವಿದೆ? ಅದು ಸಾಧ್ಯವಿರುವುದಾದರೂ, ಪ್ರಿಯರಾಗಿರುವವರ ಮರಣವನ್ನು ನೀವು ಇಂದು ಹೇಗೆ ನಿಭಾಯಿಸಬಲ್ಲಿರಿ?