ಸದಾಕಾಲ ಜೀವಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟವರು
ಮಾನವ ದೇಹವು ಅದ್ಭುತಕರವಾಗಿ ವಿನ್ಯಾಸಿಸಲ್ಪಟ್ಟಿದೆ. ಅದರ ವಿಕಸನ ಮತ್ತು ಬೆಳವಣಿಗೆಯು ಒಂದು ಅದ್ಭುತವೇ ಸರಿ. ಒಬ್ಬ ಪುರಾತನ ಬರಹಗಾರನು ಉದ್ಗರಿಸಿದ್ದು: “ಒಂದು ಭಯಪ್ರಚೋದನಾತ್ಮಕ ರೀತಿಯಲ್ಲಿ ನಾನು ಆಶ್ಚರ್ಯಕರವಾಗಿ ರಚಿಸಲ್ಪಟ್ಟಿದ್ದೇನೆ.” (ಕೀರ್ತನೆ 139:14, NW) ಮಾನವ ದೇಹದ ಅದ್ಭುತಗಳ ಕುರಿತು ಸಂಪೂರ್ಣವಾಗಿ ಅರಿವುಳ್ಳವರಾಗಿದ್ದು, ಕೆಲವು ಆಧುನಿಕ ವಿಜ್ಞಾನಿಗಳು ವೃದ್ಧಾಪ್ಯ ಮತ್ತು ಮರಣವನ್ನು ಒಂದು ಗೂಢ ಪ್ರಶ್ನೆಯಾಗಿ ಕಂಡುಕೊಳ್ಳುತ್ತಾರೆ. ನಿಮಗೂ ಹಾಗೆ ಅನಿಸುತ್ತದೊ?
“ವೃದ್ಧಾಪ್ಯವು ನಮ್ಮನ್ನು ಎಷ್ಟು ಅವಿರತವಾಗಿ ಎದುರಿಸುತ್ತದೆಂದರೆ, ಹೆಚ್ಚು ಜನರು ಅದನ್ನು ಜೀವಿವಿಜ್ಞಾನದ ಒಂದು ಪ್ರಮುಖ ರಹಸ್ಯದೋಪಾದಿ ಗ್ರಹಿಸದಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತದೆ” ಎಂದು ಹಾರ್ವಡ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞರಾದ ಸ್ಟೀವನ್ ಆಸ್ಟ್ಯಾಡ್ ಬರೆದರು. ಪ್ರತಿಯೊಬ್ಬರೂ ವೃದ್ಧರಾಗುತ್ತಾರೆ ಎಂಬ ವಾಸ್ತವಾಂಶವು, “[ವೃದ್ಧಾಪ್ಯ]ವನ್ನು ಕಡಿಮೆ ಗೂಢ ಪ್ರಶ್ನೆಯಾಗಿ ತೋರುವಂತೆ ಮಾಡುತ್ತದೆ” ಎಂದು ಆಸ್ಟ್ಯಾಡ್ ಗಮನಿಸಿದರು. ಆದರೂ, ನೀವು ಅದರ ಕುರಿತು ವಾಸ್ತವವಾಗಿ ಆಲೋಚಿಸುವಾಗ, ವೃದ್ಧಾಪ್ಯ ಮತ್ತು ಮರಣವು ಏನನ್ನಾದರೂ ಅರ್ಥೈಸುತ್ತವೊ?
ಕಳೆದ ವರ್ಷ, ನಾವು ವೃದ್ಧರಾಗುವ ವಿಧ ಮತ್ತು ಕಾರಣ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಡಾ. ಲೆನರ್ಡ್ ಹೇಫ್ಲಿಕ್ ಮಾನವ ಜೀವ ಮತ್ತು ಬೆಳವಣಿಗೆಯ ಅದ್ಭುತಗಳನ್ನು ಒಪ್ಪಿಕೊಂಡು ಬರೆದದ್ದು: “ಗರ್ಭಧಾರಣೆಯಿಂದ ಜನನದ ವರೆಗೆ ಮತ್ತು ತದನಂತರ ಲೈಂಗಿಕ ಪ್ರೌಢತೆ ಹಾಗೂ ಪ್ರೌಢಾವಸ್ಥೆಗೆ ನಮ್ಮನ್ನು ಕೊಂಡೊಯ್ಯುವ ಅದ್ಭುತಗಳನ್ನು ನಡೆಸಿದ ಬಳಿಕ, ವೃದ್ಧಾಪ್ಯವನ್ನು ನಿಲ್ಲಿಸುವ ಮತ್ತು ಹೀಗೆ ಆ ಅದ್ಭುತಗಳನ್ನು ಸದಾಕಾಲ ಕಾಪಾಡಿಕೊಳ್ಳುವ ಹೆಚ್ಚು ಸರಳವಾಗಿ ತೋರಬಹುದಾದ ಪ್ರಕ್ರಿಯೆಯನ್ನು ಯೋಜಿಸದಿರಲು ಪ್ರಕೃತಿಯು ಆಯ್ದುಕೊಂಡಿದೆ. ದಶಕಗಳ ವರೆಗೆ ಈ ಒಳನೋಟವು ಜೀವಿಮುಪ್ಪುಶಾಸ್ತ್ರಜ್ಞ [ವೃದ್ಧಾಪ್ಯದ ಕುರಿತ ಜೀವಿವಿಜ್ಞಾನದ ಅಂಶಗಳ ಅಧ್ಯಯನ ಮಾಡುವವರು]ರನ್ನು ತಬ್ಬಿಬ್ಬಾಗಿಸಿದೆ.”
ನೀವು ಸಹ ವೃದ್ಧಾಪ್ಯ ಮತ್ತು ಮರಣದಿಂದ ತಬ್ಬಿಬ್ಬಾಗಿದ್ದೀರೊ? ಅವುಗಳು ಯಾವ ಉದ್ದೇಶವನ್ನು ಪೂರೈಸುತ್ತವೆ? ಹೇಫ್ಲಿಕ್ ಗಮನಿಸಿದ್ದು: “ವಾಸ್ತವಪ್ರಾಯವಾಗಿ ಗರ್ಭಧಾರಣೆಯಿಂದ ಪ್ರೌಢತೆಯ ವರೆಗಿನ ಎಲ್ಲಾ ಜೀವಿವಿಜ್ಞಾನದ ಘಟನೆಗಳಿಗೆ ಒಂದು ಉದ್ದೇಶವಿರುವಂತೆ ತೋರುತ್ತದೆ, ಆದರೆ ವೃದ್ಧಾಪ್ಯಕ್ಕೆ ಉದ್ದೇಶವಿಲ್ಲ. ವೃದ್ಧಾಪ್ಯವು ಏಕೆ ಸಂಭವಿಸಬೇಕು ಎಂಬುದು ಸ್ಪಷ್ಟವಾಗಿಗಿಲ್ಲ. ವೃದ್ಧಾಪ್ಯದ ಜೀವಶಾಸ್ತ್ರದ ಕುರಿತಾಗಿ ನಾವು ಹೆಚ್ಚು ವಿಷಯಗಳನ್ನು ಕಲಿತಿರುವುದಾದರೂ . . . , ಮರಣದಿಂದ ಹಿಂಬಾಲಿಸಲ್ಪಡುವ ಉದ್ದೇಶರಹಿತ ವೃದ್ಧಾಪ್ಯದ ಅನಿವಾರ್ಯ ಪರಿಣಾಮವನ್ನು ನಾವು ಇನ್ನೂ ಎದುರಿಸಬೇಕು.”
ನಾವು ವೃದ್ಧರಾಗಿ ಸಾಯಲಿಕ್ಕಲ್ಲ, ಬದಲಾಗಿ ಭೂಮಿಯ ಮೇಲೆ ಸದಾಕಾಲ ಜೀವಿಸಲಿಕ್ಕಾಗಿ ಉದ್ದೇಶಿಸಲ್ಪಟ್ಟಿದೆವ್ದೆಂಬುದು ಸಾಧ್ಯವೊ?
ಜೀವಿಸುವ ಅಪೇಕ್ಷೆ
ವೃದ್ಧರಾಗುವುದು ಮತ್ತು ಸಾಯುವುದರ ಬಗ್ಗೆ ಬಹುಮಟ್ಟಿಗೆ ಪ್ರತಿಯೊಬ್ಬರೂ ಅಸಮಾಧಾನವನ್ನು ತೋರಿಸುತ್ತಾರೆ ಎಂಬುದರ ಅರಿವು ನಿಮಗಿದೆ ನಿಶ್ಚಯ. ವಾಸ್ತವದಲ್ಲಿ, ಈ ಪ್ರತೀಕ್ಷೆಯಿಂದಾಗಿ ಅನೇಕರು ಭಯಪಡುತ್ತಾರೆ. ನಾವು ಸಾಯುವ ವಿಧ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ವೈದ್ಯಕೀಯ ಡಾಕ್ಟರ್ ಶೆರ್ವಿನ್ ಬಿ. ನೂಲೆಂಡ್ ಬರೆದುದು: “ನಮ್ಮಲ್ಲಿ ಯಾರೂ ನಮ್ಮ ಸ್ವಂತ ಮರಣಾವಸ್ಥೆಯ ಯೋಚನೆಯನ್ನು, ಯಾವುದರಲ್ಲಿ ಶೂನ್ಯತೆಯಾಗಲಿ ನಿರ್ವಾತವಾಗಲಿ ಇಲ್ಲವೊ—ಯಾವುದರಲ್ಲಿ ಏನೂ ಇಲ್ಲವೊ, ಆ ಕಾಯಂ ಪ್ರಜ್ಞಾಹೀನತೆಯ ವಿಚಾರವನ್ನು ನಿಭಾಯಿಸಲು ಮನಶ್ಶಾಸ್ತ್ರಾನುಗುಣವಾಗಿ ಸಮರ್ಥರಲ್ಲವೆಂದು ಕಾಣುತ್ತದೆ.” ವೃದ್ಧರಾಗಲು, ಅಸ್ವಸ್ಥರಾಗಲು, ಮತ್ತು ಸಾಯಲು ಬಯಸುವ ಯಾರ ಪರಿಚಯವಾದರೂ ನಿಮಗಿದೆಯೊ?
ಆದರೂ, ವೃದ್ಧಾಪ್ಯ ಮತ್ತು ಮರಣವು ಸ್ವಾಭಾವಿಕವಾಗಿದ್ದು, ಯಾವುದೊ ಕುಶಲ ಯೋಜನೆಯ ಭಾಗವಾಗಿರುತ್ತಿದ್ದಲ್ಲಿ, ನಾವು ಅವುಗಳನ್ನು ಸ್ವಾಗತಿಸುತ್ತಿರಲಿಲ್ಲವೊ? ಆದರೆ ನಾವು ಅವುಗಳನ್ನು ಸ್ವಾಗತಿಸುವುದಿಲ್ಲ. ಏಕೆ ಸ್ವಾಗತಿಸುವುದಿಲ್ಲ? ನಾವು ಮಾಡಲ್ಪಟ್ಟಿರುವ ವಿಧದಲ್ಲಿ ಉತ್ತರವು ಕಂಡುಬರುತ್ತದೆ. ಬೈಬಲು ಹೇಳುವುದು: “ಇದಲ್ಲದೆ [ದೇವರು] [ನಮ್ಮ] ಮನಸ್ಸುಗಳೊಳಗೆ ಶಾಶ್ವತತೆಯನ್ನು ಇಟ್ಟಿದ್ದಾನೆ.” (ಪ್ರಸಂಗಿ 3:11, ಬೈಯಿಂಗನ್ಟ್) ಅಂತ್ಯರಹಿತವಾದ ಭವಿಷ್ಯತ್ತಿಗಾಗಿರುವ ಈ ಅಪೇಕ್ಷೆಯ ಕಾರಣದಿಂದ, ಜನರು ಯೌವನದ ಒರತೆಯೆಂದು ಕರೆಯಲ್ಪಡುವ ವಿಷಯಕ್ಕಾಗಿ ದೀರ್ಘಸಮಯದಿಂದಲೂ ಅನ್ವೇಷಣೆ ನಡೆಸಿದ್ದಾರೆ. ಅವರು ಸದಾಕಾಲ ಯುವ ಜನರಾಗಿ ಉಳಿಯಲು ಬಯಸುತ್ತಾರೆ. ಹೆಚ್ಚು ದೀರ್ಘವಾದ ಜೀವನದ ಸಾಮರ್ಥ್ಯವು ನಮಗಿದೆಯೊ? ಎಂಬ ಪ್ರಶ್ನೆಯನ್ನು ಇದು ಎಬ್ಬಿಸುತ್ತದೆ.
ಸ್ವತಃ ದುರಸ್ತು ಮಾಡಿಕೊಳ್ಳುವಂತೆ ವಿನ್ಯಾಸಿಸಲ್ಪಟ್ಟಿದೆ
ನೈಸರ್ಗಿಕ ಇತಿಹಾಸ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿ ಬರೆಯುತ್ತಾ, ಜೀವಶಾಸ್ತ್ರಜ್ಞರಾದ ಆಸ್ಟ್ಯಾಡ್ ಸರ್ವಸಾಮಾನ್ಯ ನೋಟವನ್ನು ಸಾದರಪಡಿಸಿದರು: “ನಾವು ಯಂತ್ರಗಳ ಕುರಿತು ಆಲೋಚಿಸುವ ರೀತಿಯಲ್ಲಿಯೇ ನಮ್ಮ ಕುರಿತು ಮತ್ತು ಇತರ ಪ್ರಾಣಿಗಳ ಕುರಿತು ಆಲೋಚಿಸುವ ಪ್ರವೃತ್ತಿಯುಳ್ಳವರಾಗಿರುತ್ತೇವೆ: ಕೃಶವಾಗಿ ಹೋಗುವುದು ಕೇವಲ ಅನಿವಾರ್ಯವಾಗಿದೆ.” ಆದರೆ ಇದು ಸತ್ಯವಲ್ಲ. “ಮೂಲಭೂತವಾಗಿ ಜೀವಿವಿಜ್ಞಾನದ ಜೀವಿಗಳು ಯಂತ್ರಗಳಿಂದ ವಿಭಿನ್ನವಾಗಿವೆ” ಎಂದು ಆಸ್ಟ್ಯಾಡ್ ಹೇಳಿದರು. “ಅವು ಸ್ವತಃ ದುರಸ್ತು ಮಾಡಿಕೊಳ್ಳುತ್ತವೆ: ಗಾಯಗಳು ವಾಸಿಯಾಗುತ್ತವೆ, ಮೂಳೆಗಳು ಸುಸ್ಥಿತಿಗೆ ಬರುತ್ತವೆ, ಅಸ್ವಸ್ಥತೆಯು ಹೊರಟುಹೋಗುತ್ತದೆ.”
ಹೀಗೆ, ನಾವು ಏಕೆ ವೃದ್ಧರಾಗುತ್ತೇವೆ? ಎಂಬುದು ಕುತೂಹಲ ಕೆರಳಿಸುವ ಪ್ರಶ್ನೆಯಾಗಿದೆ. ಆಸ್ಟ್ಯಾಡ್ ಕೇಳಿದಂತೆ, “ಹಾಗಾದರೆ, [ಜೀವಿವಿಜ್ಞಾನದ ಜೀವಿಗಳು] ಯಂತ್ರಗಳಂತಹದ್ದೇ ವಿಧಗಳ ಸವಕಲು ಹರುಕಲಿಗೆ ಒಳಗಾಗಬೇಕು ಏಕೆ?” ದೈಹಿಕ ಅಂಗಾಂಶಗಳು ಸ್ವತಃ ಸ್ಥಾನಭರ್ತಿ ಹೊಂದುವುದರಿಂದ, ಸ್ಥಾನಭರ್ತಿ ಹೊಂದುವುದನ್ನು ಅವು ಸದಾಕಾಲ ಮುಂದುವರಿಸಸಾಧ್ಯವಿಲ್ಲವೊ?
ಡಿಸ್ಕವರ್ ಎಂಬ ಪತ್ರಿಕೆಯಲ್ಲಿ, ವಿಕಾಸ ವಾದದ ಜೀವಶಾಸ್ತ್ರಜ್ಞರಾದ ಜಾರಡ್ ಡೈಮಂಡ್, ಶಾರೀರಿಕ ಜೀವಿಗಳ ಸ್ವತಃ ದುರಸ್ತು ಮಾಡಿಕೊಳ್ಳುವ ಅದ್ಭುತಕರವಾದ ಸಾಮರ್ಥ್ಯವನ್ನು ಚರ್ಚಿಸಿದರು. ಅವರು ಬರೆದುದು: “ನಮ್ಮ ದೇಹಕ್ಕೆ ಅನ್ವಯವಾಗುವ, ಹಾನಿ ನಿಯಂತ್ರಣದ ಅತ್ಯಂತ ಗೋಚರವಾದ ಉದಾಹರಣೆಯು ಗಾಯದ ವಾಸಿಯಾಗುವಿಕೆಯಾಗಿದ್ದು, ಇದರ ಮೂಲಕವಾಗಿ ನಾವು ನಮ್ಮ ಚರ್ಮದ ಹಾನಿಯನ್ನು ದುರಸ್ತು ಮಾಡಿಕೊಳ್ಳುತ್ತೇವೆ. ನಾವು ಸಾಧಿಸಸಾಧ್ಯವಿರುವುದಕ್ಕಿಂತಲೂ ಅತ್ಯಧಿಕ ಪ್ರದರ್ಶನಾತ್ಮಕ ಫಲಿತಾಂಶಗಳನ್ನು ಅನೇಕ ಪ್ರಾಣಿಗಳು ಸಾಧಿಸಬಲ್ಲವು: ಹಲ್ಲಿಗಳು ಕಡಿದುಹೋದ ಬಾಲಗಳನ್ನು ಮತ್ತೆ ಹುಟ್ಟಿಸಬಲ್ಲವು, ನಕ್ಷತ್ರ ಮೀನು ಮತ್ತು ಏಡಿಗಳು ತಮ್ಮ ಕೈಕಾಲುಗಳನ್ನು, ಸಮುದ್ರ ಸೌತೆಗಳು ತಮ್ಮ ಕರುಳುಗಳನ್ನು ಮತ್ತೆ ಉತ್ಪತ್ತಿ ಮಾಡಬಲ್ಲವು.”
ಹಲ್ಲುಗಳ ಸ್ಥಾನಭರ್ತಿಯಾಗುವಿಕೆಯ ಕುರಿತಾಗಿ ಡೈಮಂಡ್ ಹೇಳಿದ್ದು: “ತಮ್ಮ ಜೀವಿತಾವಧಿಯಲ್ಲಿ ಮಾನವರು ಎರಡು ಜೊತೆ ಹಲ್ಲುಗಳನ್ನು, ಆನೆಗಳು ಆರು ಜೊತೆ ಹಲ್ಲುಗಳನ್ನು, ಮತ್ತು ಶಾರ್ಕ್ಗಳು ಅನಿರ್ದಿಷ್ಟ ಸಂಖ್ಯೆಯಲ್ಲಿ ಹಲ್ಲುಗಳನ್ನು ಬೆಳೆಸುತ್ತವೆ.” ಅವರು ತದನಂತರ ವಿವರಿಸಿದ್ದು: “ಕ್ರಮವಾದ ಸ್ಥಾನಭರ್ತಿಯಾಗುವಿಕೆಯು ಒಂದು ಸೂಕ್ಷ್ಮದರ್ಶಕೀಯ ಮಟ್ಟದಲ್ಲಿಯೂ ಮುಂದುವರಿಯುತ್ತಿರುತ್ತದೆ. ನಮ್ಮ ಕರುಳಿನ ಒಳಾವರಣದಲ್ಲಿರುವ ಜೀವಕೋಶಗಳನ್ನು ಪ್ರತಿ ಕೆಲವು ದಿನಗಳಿಗೊಮ್ಮೆ, ಮೂತ್ರ ಚೀಲದ ಒಳಾವರಣದಲ್ಲಿರುವ ಜೀವಕೋಶಗಳನ್ನು ಪ್ರತಿ ಎರಡು ತಿಂಗಳುಗಳಿಗೊಮ್ಮೆ, ಮತ್ತು ನಮ್ಮ ಕೆಂಪು ರಕ್ತ ಕಣಗಳನ್ನು ಪ್ರತಿ ನಾಲ್ಕು ತಿಂಗಳುಗಳಿಗೊಮ್ಮೆ ನಾವು ಸ್ಥಾನಭರ್ತಿಮಾಡುತ್ತೇವೆ.
“ಅಣವ ಮಟ್ಟದಲ್ಲಿ, ನಮ್ಮ ಪ್ರೋಟೀನ್ ಅಣುಗಳು ಪ್ರತಿಯೊಂದು ನಿರ್ದಿಷ್ಟ ಪ್ರೋಟೀನ್ನ ಪ್ರಮಾಣ ವೈಲಕ್ಷಣ್ಯಕ್ಕನುಗುಣವಾಗಿ ಸತತವಾದ ವರ್ಗಾಯಿಸುವಿಕೆಗೆ ಒಳಗಾಗುತ್ತವೆ; ಇದರಿಂದಾಗಿ ನಾವು ಹಾನಿಗೊಂಡ ಅಣುಗಳ ಒಟ್ಟುಗೂಡುವಿಕೆಯನ್ನು ವರ್ಜಿಸುತ್ತೇವೆ. ಆದುದರಿಂದ ನಿಮ್ಮ ಪ್ರಿಯ ವ್ಯಕ್ತಿಯ ಇಂದಿನ ತೋರಿಕೆಯನ್ನು, ಒಂದು ತಿಂಗಳ ಹಿಂದಿನ ತೋರಿಕೆಯೊಂದಿಗೆ ನೀವು ಹೋಲಿಸುವುದಾದರೆ, ಅವನು ಅಥವಾ ಅವಳು ಒಂದೇ ರೀತಿ ಕಾಣಬಹುದಾದರೂ, ಆ ಪ್ರಿಯ ದೇಹವನ್ನು ರೂಪಿಸುವ ವೈಯಕ್ತಿಕ ಅಣುಗಳಲ್ಲಿ ಅನೇಕ ಅಣುಗಳು ವಿಭಿನ್ನವಾಗಿವೆ. ಅರಸನ ಎಲ್ಲ ಕುದುರೆಗಳು ಮತ್ತು ಪುರುಷರು ಹಂಪ್ಟಿ ಡಂಪಿಯ್ಟನ್ನು ಪುನಃ ಒಂದುಗೂಡಿಸಲು ಅಸಾಧ್ಯವಾಗಿದ್ದಾಗ, ಪ್ರಕೃತಿಯು ಪ್ರತಿ ದಿನ ನಮ್ಮನ್ನು ತುಂಡರಿಸಿ, ಒಟ್ಟಿಗೆ ನಮ್ಮನ್ನು ಸೇರಿಸುತ್ತದೆ.”
ದೇಹದ ಅಧಿಕಾಂಶ ಜೀವಕೋಶಗಳು ಹೊಸದಾಗಿ ರೂಪಿಸಲ್ಪಟ್ಟ ಜೀವಕೋಶಗಳಿಂದ ನಿಯತ ಕಾಲಿಕವಾಗಿ ಸ್ಥಾನಭರ್ತಿಮಾಡಲ್ಪಡುತ್ತವೆ. ಆದರೆ ಮಿದುಳು ನರಕಣ (ನ್ಯೂರಾನ್)ಗಳಂತಹ ಕೆಲವು ಜೀವಕೋಶಗಳು, ಎಂದೂ ಸ್ಥಾನಭರ್ತಿಯಾಗದಿರಬಹುದು. ಆದರೂ, ಹೇಫ್ಲಿಕ್ ವಿವರಿಸಿದ್ದು: “ಜೀವಕೋಶದ ಪ್ರತಿಯೊಂದು ಭಾಗವು ಸ್ಥಾನಭರ್ತಿಮಾಡಲ್ಪಟ್ಟಿರುವಲ್ಲಿ, ಅದು ಅದೇ ಹಳೆಯ ಜೀವಕೋಶವಾಗಿರುವುದಿಲ್ಲ. ಹುಟ್ಟಿನಿಂದಲೇ ನಿಮ್ಮಲ್ಲಿದ್ದ ನರಕಣಗಳು ಇಂದು ಅದೇ ರೀತಿಯ ಜೀವಕೋಶಗಳಾಗಿ ಗೋಚರಿಸಬಹುದು, ಆದರೆ ವಾಸ್ತವದಲ್ಲಿ ನೀವು ಹುಟ್ಟಿದಾಗ ನರಕಣಗಳನ್ನು ರಚಿಸಿದ ಅಣುಗಳಲ್ಲಿ ಅನೇಕ ಅಣುಗಳು . . . ಹೊಸ ಅಣುಗಳಿಂದ ಸ್ಟಾನಭರ್ತಿಮಾಡಲ್ಪಟ್ಟಿರಬಹುದು. ಆದುದರಿಂದ ಅವಿಭಜಿತ ಜೀವಕೋಶಗಳು ಹುಟ್ಟಿನಿಂದಲೇ ನಿಮ್ಮಲ್ಲಿದ್ದ ಅದೇ ಜೀವಕೋಶಗಳಾಗಿಲ್ಲದಿರಬಹುದು!” ಇದಕ್ಕೆ ಕಾರಣವೇನಂದರೆ, ಜೀವಕೋಶಗಳ ಘಟಕಗಳು ಸ್ಥಾನಭರ್ತಿಮಾಡಲ್ಪಟ್ಟಿರುತ್ತವೆ. ಹೀಗೆ, ತಾತ್ತಿಕ್ವ ರೀತಿಯಲ್ಲಿ ದೇಹದ ವಸ್ತುಗಳ ಸ್ಥಾನಭರ್ತಿಮಾಡುವಿಕೆಯು ನಮ್ಮನ್ನು ಸದಾಕಾಲ ಜೀವಂತರನ್ನಾಗಿರಿಸಸಾಧ್ಯವಿದೆ!
ಡಾ. ಹೇಫ್ಲಿಕ್ “ಗರ್ಭಧಾರಣೆಯಿಂದ ಜನನದ ವರೆಗೆ . . . ನಮ್ಮನ್ನು ಕೊಂಡೊಯ್ಯುವ ಅದ್ಭುತಗಳ” ಕುರಿತಾಗಿ ಮಾತಾಡಿದ್ದನ್ನು ಜ್ಞಾಪಿಸಿಕೊಳ್ಳಿರಿ. ಇವುಗಳಲ್ಲಿ ಕೆಲವು ಯಾವುವು? ನಾವು ಅವುಗಳನ್ನು ಸಂಕ್ಷಿಪ್ತವಾಗಿ ಪರೀಕ್ಷಿಸಿದಂತೆ, “ಆ ಅದ್ಭುತಗಳನ್ನು ಸದಾಕಾಲ ಕಾಪಾಡಿಕೊಳ್ಳುವ ಹೆಚ್ಚು ಸರಳವಾಗಿ ತೋರಬಹುದಾದ ಪ್ರಕ್ರಿಯೆ” ಎಂದು ಅವರು ಯಾವುದನ್ನು ಕರೆದರೊ, ಆ ಕಾರ್ಯನಿತ್ವಗೊಳಿಸುವ ಸಂಭವನೀಯತೆಯನ್ನು ಪರಿಗಣಿಸಿರಿ.
ಜೀವಕೋಶ
ಒಬ್ಬ ವಯಸ್ಕನು ಸುಮಾರು 1 ಕೋಟಿ ಕೋಟಿ ಜೀವಕೋಶಗಳಿಂದ ರಚಿಸಲ್ಪಟ್ಟಿದ್ದಾನೆ. ಅವುಗಳಲ್ಲಿ ಪ್ರತಿಯೊಂದು ಜೀವಕೋಶವು ಅರ್ಥಮಾಡಿಕೊಳ್ಳಲಾರದಷ್ಟು ಸಂಕೀರ್ಣವಾಗಿದೆ. ಅದರ ಸಂಕೀರ್ಣತೆಯನ್ನು ದೃಷ್ಟಾಂತಿಸಲು, ನ್ಯೂಸ್ವೀಕ್ ಪತ್ರಿಕೆಯು ಒಂದು ಜೀವಕೋಶವನ್ನು ಗೋಡೆಗಳಿಂದ ಸುರಕ್ಷಿತವಾಗಿರುವ ನಗರವೊಂದಕ್ಕೆ ಹೋಲಿಸಿತು. “ವಿದ್ಯುಚ್ಛಕ್ತ್ಯುತ್ಪತ್ತಿ ಸ್ಥಾನಗಳು ಜೀವಕೋಶಗಳ ಶಕ್ತಿಯನ್ನು ಉತ್ಪಾದಿಸುತ್ತವೆ” ಎಂದು ಪತ್ರಿಕೆಯು ಹೇಳಿತು. “ರಾಸಾಯನಿಕ ವ್ಯವಹರಿಸುವಿಕೆಗೆ ಅತ್ಯಾವಶ್ಯಕ ಅಂಶಗಳಾದ ಪ್ರೋಟೀನ್ಗಳನ್ನು ಕಾರ್ಖಾನೆಗಳು ಉತ್ಪಾದಿಸುತ್ತವೆ. ಜೀವಕೋಶದ ಒಳಗೆ ಮತ್ತು ಹೊರಗೆ ಒಂದರಿಂದ ಇನ್ನೊಂದು ಬಿಂದುವಿಗೆ ನಿರ್ದಿಷ್ಟ ರಾಸಾಯನಿಕಗಳನ್ನು, ಜಟಿಲವಾದ ಸಾಗಣೆಯ ವ್ಯವಸ್ಥೆಗಳು ಮಾರ್ಗದರ್ಶಿಸುತ್ತವೆ. ತಡೆಗಟ್ಟುಗಳಲ್ಲಿರುವ ಕಾವಲು ಸಿಪಾಯಿಗಳು, ಆಮದು ಮತ್ತು ರಫ್ತು ವಿನಿಮಯಗಳನ್ನು ನಿಯಂತ್ರಿಸುತ್ತಾರೆ, ಮತ್ತು ಅಪಾಯದ ಸೂಚನೆಗಳಿಗಾಗಿ ಜೀವಕೋಶದ ಹೊರಪ್ರಪಂಚವನ್ನು ನೋಡಿಕೊಳ್ಳುತ್ತಾರೆ. ದಾಳಿಗಾರರೊಂದಿಗೆ ಹೋರಾಡಿ ಜಯಿಸಲು ಪ್ರಯತ್ನಿಸಲಿಕ್ಕಾಗಿ, ಶಿಸ್ತುಗೊಳಿಸಲ್ಪಟ್ಟ ಜೀವಿವಿಜ್ಞಾನದ ಸೈನ್ಯಗಳು ಸಿದ್ಧವಾಗಿ ನಿಂತಿರುತ್ತವೆ. ಒಂದು ಕೇಂದ್ರೀಕೃತ ತಳಿಶಾಸ್ತ್ರೀಯ ಸರಕಾರವು ಕ್ರಮವನ್ನು ಕಾಪಾಡುತ್ತದೆ.”
ನೀವು—ನಿಮ್ಮ ಸುಮಾರು 1 ಕೋಟಿ ಕೋಟಿ ಜೀವಕೋಶಗಳು—ಹೇಗೆ ಅಸ್ತಿತ್ವಕ್ಕೆ ಬಂದಿರಿ ಎಂಬುದನ್ನು ಪರಿಗಣಿಸಿರಿ. ನಿಮ್ಮ ತಂದೆಯ ವೀರ್ಯವು ನಿಮ್ಮ ತಾಯಿಯ ಅಂಡಾಣುವಿನೊಂದಿಗೆ ಸಂಯೋಗಗೊಂಡಾಗ ರೂಪಿತವಾದ ಒಂದು ಏಕ ಜೀವಕೋಶದೋಪಾದಿ ನೀವು ಆರಂಭವಾದಿರಿ. ಆ ಸಂಯೋಗದ ಸಮಯದಲ್ಲಿ, ಕ್ರಮೇಣವಾಗಿ ಯಾವುದು ನೀವಾಗಿ—ಸಂಪೂರ್ಣವಾಗಿ ಹೊಸಬನಾದ ಮತ್ತು ಅಪೂರ್ವ ಮಾನವನಾಗಿ—ಪರಿಣಮಿಸುತ್ತದೊ ಅದನ್ನು ಉತ್ಪಾದಿಸಲಿಕ್ಕಾಗಿ, ಆ ಹೊಸದಾಗಿ ರೂಪುಗೊಂಡ ಜೀವಕೋಶದ ಡಿಎನ್ಎ (DNA, ಡೀಆಕ್ಸಿರೈಬೊನ್ಯೂಕ್ಲಿಇಕ್ ಆ್ಯಸಿಡ್ ಎಂಬುದರ ಸಂಕ್ಷಿಪ್ತ ಶಬ್ದ) ಒಳಗೆ ಯೋಜನೆಗಳು ಚಿತ್ರಿಸಲ್ಪಟ್ಟವು. ಡಿಎನ್ಎ ಒಳಗಿರುವ ಮಾಹಿತಿಗಳನ್ನು “ಪೂರ್ತಿಯಾಗಿ ಬರೆಯುವಲ್ಲಿ, ಅದು 600 ಪುಟದ ಒಂದು ಸಾವಿರ ಪುಸ್ತಕಗಳನ್ನು ಭರ್ತಿಮಾಡಸಾಧ್ಯವಿದೆ” ಎಂದು ಹೇಳಲಾಗುತ್ತದೆ.
ಸಕಾಲದಲ್ಲಿ, ಆರಂಭದ ಆ ಜೀವಕೋಶವು, ಎರಡು ಜೀವಕೋಶಗಳು, ತದನಂತರ ನಾಲ್ಕು, ಎಂಟು, ಮತ್ತು ಹೀಗೆ ವಿಭಜನೆಗೊಳ್ಳಲಾರಂಭಿಸಿತು. ಕೊನೆಯದಾಗಿ, ಸುಮಾರು 270 ದಿವಸಗಳ—ಆ ಕಾಲಾವಧಿಯಲ್ಲಿ, ಒಂದು ಶಿಶುವನ್ನು ರೂಪಿಸಲಿಕ್ಕಾಗಿ ನಿಮ್ಮ ತಾಯಿಯೊಳಗೆ ಅನೇಕ ಬೇರೆ ಬೇರೆ ವಿಧಗಳ ಸಾವಿರಾರು ಕೋಟಿಗಳಷ್ಟು ಜೀವಕೋಶಗಳು ವಿಕಸಿಸಿರುತ್ತವೆ—ಬಳಿಕ ನೀವು ಹುಟ್ಟಿದಿರಿ. ನಿಮ್ಮನ್ನು ಹೇಗೆ ಮಾಡಬೇಕು ಎಂಬುದರ ಕುರಿತಾದ ಸವಿಸ್ತಾರ ಮಾಹಿತಿಗಳ ಪುಸ್ತಕಗಳಿಂದ ಸಂಪೂರ್ಣವಾಗಿ ತುಂಬಿರುವ ಒಂದು ದೊಡ್ಡ ಕೋಣೆಯು ಆ ಪ್ರಥಮ ಜೀವಕೋಶದಲ್ಲಿತ್ತೋ ಎಂಬಂತೆ ಇದು ಇದೆ. ಆದರೆ ಅನುಸರಿಸಿ ಬರುವ ಪ್ರತಿಯೊಂದು ಜೀವಕೋಶಕ್ಕೆ ಈ ಜಟಿಲವಾದ ಮಾಹಿತಿಗಳು ದಾಟಿಸಲ್ಪಡುತ್ತವೆ ಎಂಬ ವಾಸ್ತವಾಂಶವು ಅಷ್ಟೇ ಅದ್ಭುತಕರವಾಗಿದೆ. ಹೌದು, ಆಶ್ಚರ್ಯಕರವಾಗಿ ಆರಂಭದ ಫಲವತ್ತಾದ ಅಂಡಾಣುವಿನಲ್ಲಿ ಸೇರಿದ್ದ ರೀತಿಯ ಮಾಹಿತಿಯೇ ನಿಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಕೋಶದಲ್ಲಿ ಇದೆ!
ಇದನ್ನು ಸಹ ಪರಿಗಣಿಸಿರಿ. ಎಲ್ಲಾ ವಿಧದ ಜೀವಕೋಶಗಳನ್ನು ಉತ್ಪಾದಿಸಲಿಕ್ಕಾಗಿ, ಪ್ರತಿಯೊಂದು ಜೀವಕೋಶಕ್ಕೆ ಮಾಹಿತಿಯಿರುವುದರಿಂದ, ಹೃದಯ ಜೀವಕೋಶಗಳನ್ನು ಮಾಡುವ ಸಮಯ ಬರುತ್ತದೆ ಎಂದಿಟ್ಟುಕೊಳ್ಳಿ, ಆಗ ಇತರ ಎಲ್ಲಾ ಜೀವಕೋಶಗಳನ್ನು ಮಾಡುವ ಮಾಹಿತಿಗಳು ಹೇಗೆ ನಿಗ್ರಹಿಸಲ್ಪಟ್ಟವು? ಬಹುಶಃ, ಒಂದು ಶಿಶುವನ್ನು ಮಾಡಲಿಕ್ಕಾಗಿ ನೀಲಿನಕ್ಷೆಗಳ ಇಡೀ ಕಪಾಟನ್ನು ಹೊಂದಿರುವ ಒಬ್ಬ ಗುತ್ತಿಗೆದಾರನಂತೆ ಕಾರ್ಯನಡಿಸುತ್ತಾ, ಹೃದಯ ಜೀವಕೋಶಗಳನ್ನು ಮಾಡಲಿಕ್ಕಾಗಿ, ಜೀವಕೋಶವೊಂದು ತನ್ನ ಫೈಲ್ ಕಪಾಟಿನಿಂದ ಒಂದು ನೀಲಿನಕ್ಷೆಯನ್ನು ಆರಿಸಿತು. ಇನ್ನೊಂದು ಜೀವಕೋಶವು, ನರ ಜೀವಕೋಶಗಳನ್ನು ಉತ್ಪಾದಿಸಲಿಕ್ಕಾಗಿ ಮಾಹಿತಿಗಳನ್ನು ಹೊಂದಿರುವ ವಿಭಿನ್ನವಾದ ನೀಲಿನಕ್ಷೆಯೊಂದನ್ನು ಆರಿಸಿತು, ಮತ್ತೊಂದು ಜೀವಕೋಶವು ಪಿತ್ತಜನಕಾಂಗದ ಜೀವಕೋಶಗಳನ್ನು ಮಾಡಲಿಕ್ಕಾಗಿರುವ ಒಂದು ನೀಲಿನಕ್ಷೆಯನ್ನು ಆರಿಸಿತು, ಮತ್ತು ಇತ್ಯಾದಿ. ನಿಶ್ಚಯವಾಗಿ, ಒಂದು ನಿರ್ದಿಷ್ಟ ವಿಧದ ಜೀವಕೋಶವನ್ನು ಉತ್ಪಾದಿಸಲು ಅಗತ್ಯವಾಗಿರುವ ಮಾಹಿತಿಗಳನ್ನು ಆರಿಸಲು ಮತ್ತು ಅದೇ ಸಮಯದಲ್ಲಿ, ಇತರ ಎಲ್ಲಾ ಮಾಹಿತಿಗಳನ್ನು ನಿಗ್ರಹಿಸಲಿಕ್ಕಾಗಿರುವ, ಜೀವಕೋಶವೊಂದರ ಇನ್ನೂ ವಿವರಿಸಲ್ಪಟ್ಟಿರದ ಈ ಸಾಮರ್ಥ್ಯವು, “ಗರ್ಭಧಾರಣೆಯಿಂದ ಜನನದ ವರೆಗೆ . . . ನಮ್ಮನ್ನು ಕೊಂಡೊಯ್ಯುವ” ಅನೇಕ “ಅದ್ಭುತಗಳ”ಲ್ಲಿ ಇನ್ನೊಂದಾಗಿದೆ.
ಆದರೂ, ಇನ್ನೂ ಹೆಚ್ಚಿನದ್ದು ಒಳಗೂಡಿದೆ. ಉದಾಹರಣೆಗಾಗಿ, ಹೃದಯದ ಜೀವಕೋಶಗಳನ್ನು ಅವು ತಾಳಬದ್ಧವಾಗಿ ಸಂಕುಚಿತವಾಗುವಂತೆ ಪ್ರಚೋದಿಸುವ ಅಗತ್ಯವಿದೆ. ಹೀಗೆ, ಅದು ಯಾವ ಚಟುವಟಿಕೆಯಲ್ಲಿ ತೊಡಗಿದೆಯೊ, ಆ ಚಟುವಟಿಕೆಯಲ್ಲಿ ದೇಹವನ್ನು ಪೋಷಿಸಲಿಕ್ಕಾಗಿ, ಸೂಕ್ತವಾದ ವೇಗದಲ್ಲಿ ಹೃದಯವು ಬಡಿಯುವಂತೆ ಮಾಡಲು ವಿದ್ಯುತ್ ಸಂಬಂಧಿತ ಆವೇಗಗಳನ್ನು ಉತ್ಪಾದಿಸಲಿಕ್ಕಾಗಿ, ಒಂದು ಸಂಕೀರ್ಣ ವ್ಯೂಹವು ಹೃದಯದೊಳಗೆ ರಚಿಸಲ್ಪಟ್ಟಿತು. ನಿಜವಾಗಿಯೂ, ವಿನ್ಯಾಸದ ಒಂದು ಅದ್ಭುತ! ವೈದ್ಯರು ಹೃದಯದ ಕುರಿತಾಗಿ ಹೀಗೆ ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ: “ಇಷ್ಟರ ವರೆಗೆ ಮಾನವನಿಂದ ರಚಿಸಲ್ಪಟ್ಟಿರುವ ಯಾವುದೇ ರೀತಿಯ ಯಂತ್ರಕ್ಕಿಂತಲೂ ಇದು ಹೆಚ್ಚು ಪರಿಣಾಮಕಾರಿಯಾಗಿದೆ.”
ಮಿದುಳು
ಇನ್ನೂ ಹೆಚ್ಚಿನ ಮಹತ್ವವುಳ್ಳ ಕೌತುಕವು ಮಿದುಳಿನ—ಮಾನವ ಅದ್ಭುತದ ಅತ್ಯಂತ ರಹಸ್ಯಗರ್ಭಿತ ಅಂಗ—ವಿಕಸನವಾಗಿದೆ. ಗರ್ಭಧಾರಣೆಯಾದ ಮೂರು ವಾರಗಳ ಬಳಿಕ, ಮಿದುಳಿನ ಜೀವಕೋಶಗಳು ರೂಪುಗೊಳ್ಳಲು ಆರಂಭವಾಗುತ್ತವೆ. ಸಕಾಲದಲ್ಲಿ, ನರಕಣಗಳೆಂದು ಕರೆಯಲ್ಪಡುವ ಸುಮಾರು 10,000 ಕೋಟಿ ನರ ಜೀವಕೋಶ—ಕ್ಷೀರಪಥದಲ್ಲಿರುವ ನಕ್ಷತ್ರಗಳಷ್ಟು ಹೆಚ್ಚು—ಗಳು ಮಾನವ ಮಿದುಳಿನೊಳಗೆ ತುಂಬಲ್ಪಡುತ್ತವೆ.
“ಇವುಗಳಲ್ಲಿ ಪ್ರತಿಯೊಂದು ಜೀವಕೋಶವು, ಮಿದುಳಿನಲ್ಲಿರುವ ಸುಮಾರು 10,000 ಇತರ ನರಕಣಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತದೆ” ಎಂದು ಟೈಮ್ ಪತ್ರಿಕೆಯು ವರದಿಸಿತು, “ಮತ್ತು ಒಂದು ಸಾವಿರ ಹೆಚ್ಚು ನರಕಣಗಳಿಗೆ ಸಂದೇಶಗಳನ್ನು ಕಳುಹಿಸುತ್ತದೆ.” ಸಾಧ್ಯವಿರುವ ಸಂಯೋಜನೆಯ ಸಂಭವನೀಯತೆಗಳನ್ನು ಗಮನಿಸುತ್ತಾ, ನರವಿಜ್ಞಾನಿ ಜೆರಲ್ಡ್ ಎಡೆಲ್ಮನ್ ಹೇಳಿದ್ದು: “ಮಿದುಳಿನ ಬೆಂಕಿಯ ಕಡ್ಡಿಯಷ್ಟು ಚಿಕ್ಕದಾದ ಒಂದು ಭಾಗವು, ಅತಿ ಖಗೋಳೀಯ—ಅನುಕ್ರಮದಲ್ಲಿ ಹತ್ತರ ಮುಂದೆ ಲಕ್ಷಾಂತರ ಸೊನ್ನೆಗಳು—ವೆಂದು ಮಾತ್ರವೇ ವಿವರಿಸಸಾಧ್ಯವಿರುವಂತಹ ವಿಧಗಳಲ್ಲಿ ಸಂಯೋಜನೆಗೊಳ್ಳಬಲ್ಲ, ಸುಮಾರು 100 ಕೋಟಿ ಸಂಬಂಧಗಳನ್ನು ಒಳಗೊಂಡಿದೆ.”
ಯಾವ ಸಂಭಾವ್ಯ ಸಾಮರ್ಥ್ಯವನ್ನು ಇದು ಮಿದುಳಿಗೆ ಕೊಡುತ್ತದೆ? ಮಾನವ ಮಿದುಳು “ಲೋಕದ ಅತ್ಯಂತ ದೊಡ್ಡ ಪುಸ್ತಕಾಲಯಗಳಲ್ಲಿರುವಷ್ಟು ಹೆಚ್ಚು, ಸುಮಾರು ಎರಡು ಕೋಟಿ ಸಂಪುಟಗಳನ್ನು ಭರ್ತಿಮಾಡಸಾಧ್ಯವಿರುವಷ್ಟು” ಮಾಹಿತಿಯನ್ನು ಸಂಗ್ರಹಿಸಬಲ್ಲದೆಂದು ಖಗೋಳಶಾಸ್ತ್ರಜ್ಞರಾದ ಕಾರ್ಲ್ ಸೇಗಾನ್ ಹೇಳಿದರು. ಲೇಖಕರಾದ ಜಾರ್ಜ್ ಲೆನಾರ್ಡ್ ಹೀಗೆ ಘೋಷಿಸುತ್ತಾ, ಇನ್ನೂ ಮುಂದುವರಿಸಿದ್ದು: “ಬಹುಶಃ, ವಾಸ್ತವವಾಗಿ, ನಾವು ಈಗ ಒಂದು ಆಶ್ಚರ್ಯಕರವಾದ ಊಹಾ ಪ್ರತಿಜ್ಞೆಯನ್ನು ಪ್ರಸ್ತಾಪಿಸಸಾಧ್ಯವಿದೆ: ಮಿದುಳಿನ ಮೂಲಭೂತವಾದ ಸೃಷ್ಟಿಶೀಲ ಸಾಮರ್ಥ್ಯವು, ಕಾರ್ಯತಃ, ಅಪಾರವಾಗಿರಬಹುದು.”
ಹೀಗೆ ಈ ಕೆಳಗಿನ ಹೇಳಿಕೆಗಳ ಮೂಲಕ ನಾವು ಆಶ್ಚರ್ಯಗೊಳಿಸಲ್ಪಡಬಾರದು: “ನಮ್ಮ ವಿಶ್ವದಲ್ಲಿ ನಾವು ಇದುವರೆಗೆ ಅನ್ವೇಷಿಸಿರುವ ಅತ್ಯಂತ ಜಟಿಲ ವಿಷಯವು ಮಿದುಳಾಗಿದೆ” ಎಂದು, ಡಿಎನ್ಎಯ ಭೌತಿಕ ರಚನೆಯ ಕುರಿತ ಸಹಅನ್ವೇಷಕರಾದ, ಅಣು ಜೀವಶಾಸ್ತ್ರಜ್ಞ ಜೇಮ್ಸ್ ವಾಟ್ಸನ್ ಹೇಳಿದರು. ಮಿದುಳನ್ನು ಒಂದು ಕಂಪ್ಯೂಟರಿಗೆ ಹೋಲಿಸುವುದರ ಕುರಿತು ಅಸಮಾಧಾನವನ್ನು ತೋರಿಸುವ ನರಶಾಸ್ತ್ರಜ್ಞ ರಿಚರ್ಡ್ ರೆಸ್ಟ್ಯಾಕ್ ಹೇಳಿದ್ದು: “ವಿದಿತವಾದ ವಿಶ್ವದಲ್ಲಿ ಮಿದುಳಿಗೆ ಅನುರೂಪವಾಗಿರುವ ಯಾವುದೇ ವಸ್ತುವು ಇಲ್ಲವೇ ಇಲ್ಲ.”
ಒಂದು ಅಂದಾಜಿಗನುಸಾರ, ನಮ್ಮ ಜೀವಮಾನದಲ್ಲಿ ನಾವು ನಮ್ಮ ಸಂಭಾವ್ಯ ಮಿದುಳು ಶಕ್ತಿಯಲ್ಲಿ ಕೇವಲ ಒಂದು ಸಣ್ಣ ಭಾಗವನ್ನು—ಸುಮಾರು 1/10,000 ಭಾಗವನ್ನು, ಅಥವಾ ಒಂದು ಪ್ರತಿಶತದ 1/100 ಭಾಗವನ್ನು ಮಾತ್ರ—ಉಪಯೋಗಿಸುತ್ತೇವೆ ಎಂದು ನರವಿಜ್ಞಾನಿಗಳು ಹೇಳುತ್ತಾರೆ. ಆ ಕುರಿತು ಯೋಚಿಸಿರಿ. ಪೂರ್ಣವಾಗಿ ಉಪಯೋಗಿಸಲ್ಪಡಬಾರದಾಗಿದ್ದಲ್ಲಿ, ಅಂತಹ ಅದ್ಭುತ ಸಾಮರ್ಥ್ಯಗಳಿರುವ ಒಂದು ಮಿದುಳು ನಮಗೆ ಕೊಡಲ್ಪಟ್ಟಿರುವುದು ನ್ಯಾಯಸಮ್ಮತವೊ? ಅಂತ್ಯರಹಿತ ಕಲಿಕೆಯ ಸಾಮರ್ಥ್ಯವಿರುವ ಮಾನವರು, ವಾಸ್ತವವಾಗಿ ಸದಾಕಾಲ ಜೀವಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದ್ದರೆಂಬುದು ವಿವೇಕಯುತವಾಗಿಲ್ಲವೊ?
ಅದು ಸತ್ಯವಾಗಿರುವಲ್ಲಿ, ನಾವು ಏಕೆ ವೃದ್ಧರಾಗುತ್ತೇವೆ? ಏನು ತಪ್ಪಾಯಿತು? ನಮ್ಮ ದೇಹಗಳು ಸದಾಕಾಲ ಉಳಿಯುವಂತೆ ವಿನ್ಯಾಸಿಸಲ್ಪಟ್ಟಿರುವುದು ಸುವ್ಯಕ್ತವಾಗಿರುವುದಾದರೂ, ಸುಮಾರು 70 ಅಥವಾ 80 ವರ್ಷಗಳ ಬಳಿಕ ನಾವು ಏಕೆ ಸಾಯುತ್ತೇವೆ?
[Diagram on page 7]
(For fully formatted text, see publication)
ಜೀವಕೋಶ—ವಿನ್ಯಾಸದ ಒಂದು ಅದ್ಭುತ
ಜೀವಕೋಶದ ಪೊರೆ (ಸೆಲ್ ಮೆಂಬ್ರೇನ್)
ಜೀವಕೋಶವನ್ನು ಪ್ರವೇಶಿಸುವ ಮತ್ತು ಹೊರಬರುವ ವಸ್ತುಗಳನ್ನು ನಿಯಂತ್ರಿಸುವ ಹೊರಪೊರೆ
ಕೋಶ ಬೀಜ (ನ್ಯೂಕ್ಲಿಯಸ್)
ದಯ್ವ ಪೊರೆಗಳ ಆವರಣವೊಂದರಲ್ಲಿ ಸೇರಿಸಲ್ಪಟ್ಟಿದ್ದು, ಇದು ಜೀವಕೋಶದ ಚಟುವಟಿಕೆಗಳನ್ನು ಮಾರ್ಗದರ್ಶಿಸುವ ನಿಯಂತ್ರಣ ಕೇಂದ್ರವಾಗಿದೆ
ರೈಬಸೋಮ್ಗಳು
ಅಮೀನೊ ಆಮ್ಲಗಳು ಪ್ರೋಟೀನ್ಗಳಾಗಿ ಜೋಡಿಸಲ್ಪಡುವ ರಚನೆಗಳು
ಕ್ರೋಮಸೋಮ್ಗಳು (ವರ್ಣತಂತುಗಳು)
ಅವು ಜೀವಕೋಶದ ತಳಿಶಾಸ್ತ್ರೀಯ ಕುಶಲ ಯೋಜನೆಯಾದ ಡಿಎನ್ಎ ಅನ್ನು ಒಳಗೊಂಡಿವೆ
ಕೋಶ ಬೀಜ ಕೇಂದ್ರ (ನ್ಯೂಕ್ಲೀಯಲಸ್)
ರೈಬಸೋಮ್ಗಳು ಜೋಡಿಸಲ್ಪಟ್ಟಿರುವ ಸ್ಥಳ
ಒಳ ಜೀವರಸಜಾಲ (ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್)
ಇವುಗಳು ಪೊರೆಗಳ ಹರವುಗಳಾಗಿದ್ದು, ಅವುಗಳಿಗೆ ಅಂಟಿಕೊಂಡಿರುವ (ಕೆಲವು ರೈಬಸೋಮ್ಗಳು ಜೀವಕೋಶದಲ್ಲಿ ಸ್ವತಂತ್ರವಾಗಿ ತೇಲುತ್ತವೆ) ರೈಬಸೋಮ್ಗಳಿಂದ ತಯಾರಿಸಲ್ಪಡುವ ಪ್ರೋಟೀನ್ಗಳನ್ನು ಶೇಖರಿಸುತ್ತವೆ ಅಥವಾ ಸಾಗಿಸುತ್ತವೆ
ಮೈಟೋಕಾಂಡ್ರಿಯ
ಜೀವಕೋಶಕ್ಕೆ ಶಕ್ತಿಯನ್ನು ಸರಬರಾಯಿ ಮಾಡುವ ಅಣುಗಳಾದ, ಎಟಿಪಿ (ATP)ಯ ಉತ್ಪಾದನಾ ಕೇಂದ್ರಗಳು
ಗಾಲ್ಜಿ ಸಂಕೀರ್ಣ (ಗಾಲ್ಜಿ ಬಾಡಿ)
ಜೀವಕೋಶಗಳಿಂದ ಮಾಡಲ್ಪಟ್ಟ ಪ್ರೋಟೀನ್ಗಳನ್ನು ಕಂತೆಕಟ್ಟಿ ವಿತರಿಸುವ, ಚಪ್ಪಟೆಯಾದ ಪೊರೆಯ ಕೋಶಗಳ ಒಂದು ಗುಂಪು
ಕೇಂದ್ರ ಬಿಂದುಗಳು (ಸೆಂಟ್ರಿಯೋಲ್ಸ್)
ಅವು ಕೋಶ ಬೀಜದ ಬಳಿ ಇರುತ್ತವೆ ಮತ್ತು ಜೀವಕೋಶದ ಪುನರುತ್ಪತ್ತಿಯಲ್ಲಿ ಪ್ರಮುಖವಾಗಿವೆ