ವಿಜ್ಞಾನ ಕಲ್ಪನಾ ಕಥೆ ಜನಪ್ರಿಯತೆಗೆ ಅದರ ಏರಿಕೆ
ಇಸವಿ 1982ರಲ್ಲಿ, ಅಮೆರಿಕನ್ ಚಲನ ಚಿತ್ರ ಉದ್ಯಮವು, ಆ ಬಗೆಯ ಮೊತ್ತಮೊದಲನೆಯ ಸಂಭವವನ್ನು ಕಂಡಿತು. 1982/83ರ ಕಾಲದಲ್ಲಿ, ಅತ್ಯಂತ ಜನಪ್ರಿಯ ಚಿತ್ರ “ಅಭಿನೇತೃ” ಒಬ್ಬ ವ್ಯಕ್ತಿಯಾಗಿರಲೇ ಇಲ್ಲ. ದಿ ಇಲಸ್ಟ್ರೇಟಡ್ ಹಿಸ್ಟರಿ ಆಫ್ ದ ಸಿನೆಮಾಗನುಸಾರ, ಅದು ಈಟಿ—ಈಟಿ: ದಿ ಎಕ್ಸ್ಟ್ರಾಟೆರೆಸ್ಟ್ರಿಯಲ್ ಎಂಬ ಚಿತ್ರದಲ್ಲಿ ಅಭಿನಯಿಸಿದ, ಬಾಹ್ಯಾಕಾಶದಿಂದ ಬಂದ ವಿಕಟ ಆದರೂ ಹೇಗೊ ಆಕರ್ಷಕವಾದ ನಟನ ಪಾತ್ರವಾಗಿತ್ತು!
ಈ ಗಮನಾರ್ಹವಾದ ಪ್ರಸಂಗವು, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಕಲ್ಪನಾ ಕಥೆಯ (ಎಸ್ಎಫ್) ಅತಿಶಯಿಸುವ ಜನಪ್ರಿಯತೆಯ ಕೇವಲ ಒಂದು ಪ್ರಮಾಣವಾಗಿದೆ. ಹಿಂದೆ ಅಗ್ಗವಾದ ಪತ್ರಿಕೆಗಳ ದರ್ಜೆಗೆ ತಳ್ಳಲ್ಪಟ್ಟು, ಒಂಟಿಗರ ಹಾಗೂ ಕನಸುಗಾರರ ಮನೋರಂಜನೆಗಾಗಿರುವ ವಿಷಯವೆಂದು ಪರಿಗಣಿಸಲ್ಪಟ್ಟ ವಿಜ್ಞಾನ ಕಲ್ಪನಾ ಕಥೆಯು, ಪ್ರಚಲಿತ ಮನೋರಂಜನೆಯ ಸ್ಥಾಪಿತ ಭಾಗವಾಗಿ ಪರಿಣಮಿಸಿದೆ. ಆದರೆ ಜನಪ್ರಿಯತೆಯ ವಿಷಯದಲ್ಲಿ ಅದರ ನಾಟಕೀಯ ಏರಿಕೆಯ ಹಿಂದೆ ಇರುವುದೇನು?
ಈ ಪ್ರಶ್ನೆಯನ್ನು ಉತ್ತರಿಸಲು, ನಾವು ಮೊದಲು ವಿಜ್ಞಾನ ಕಲ್ಪನಾ ಕಥೆಯ ಇತಿಹಾಸವನ್ನು ಪರಿಗಣಿಸಬೇಕು. ಅನಾದಿ ಕಾಲದಿಂದ ಮನುಷ್ಯರು, ಭಯಹುಟ್ಟಿಸಲು, ಪ್ರಭಾವ ಬೀರಲು, ಅಥವಾ ಕೇವಲ ಮನೋರಂಜನೆ ನೀಡುವ ಸಲುವಾಗಿ ಭ್ರಾಮಕ ಕಥೆಗಳನ್ನು ಹೇಳಿದ್ದಾರೆ. ಹಾಗಿದ್ದರೂ, 17ನೆಯ ಮತ್ತು 18ನೆಯ ಶತಮಾನಗಳಲ್ಲಿ, ಯೂರೋಪ್ ವೈಜ್ಞಾನಿಕ ಹಾಗೂ ಪ್ರಾಪಂಚಿಕ ಪ್ರಗತಿಯ ಒಂದು ಶಕವನ್ನು ಪ್ರವೇಶಿಸಿತು. ಅನೇಕರು ಸಾಂಪ್ರದಾಯಿಕ ವಿಚಾರಗಳನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸತೊಡಗಿದರು. ಈ ವಾತಾವರಣದಲ್ಲಿ ಕೆಲವರು, ವೈಜ್ಞಾನಿಕ ಪ್ರಗತಿಯು ಮಾನವಜಾತಿಯನ್ನು ಭವಿಷ್ಯತ್ತಿನಲ್ಲಿ ಹೇಗೆ ಪ್ರಭಾವಿಸುವುದೆಂದು ಊಹಿಸಲು ತೊಡಗಿದರು.
ವಿಜ್ಞಾನ ಕಲ್ಪನಾ ಕಥೆಯನ್ನು ನಿಖರವಾಗಿ ಯಾರು ಕಂಡುಹಿಡಿದರೆಂಬುದು ವಾಗ್ವಾದದ ವಿಷಯವಾಗಿದೆ. ಹದಿನೇಳನೆಯ ಶತಮಾನದ ಗ್ರಂಥಕರ್ತರಾದ ಫ್ರ್ಯಾನ್ಸಿಸ್ ಗಾಡ್ವಿನ್ ಮತ್ತು ಸಿರನೊ ಡ ಬೆರ್ಸರ್ಯಾಕ್, ಬಾಹ್ಯಾಕಾಶ ಪಯಣವನ್ನೊಳಗೊಂಡ ಕಾಲ್ಪನಿಕ ಕೃತಿಗಳನ್ನು ಬರೆದರು. 1818ರಲ್ಲಿ, ಮೇರಿ ಶೆಲ್ಲಿಯವರ ಪುಸ್ತಕ, ಫ್ರ್ಯಾಂಕೆನ್ಸ್ಟೈನ್, ಆರ್ ದ ಮಾರ್ಡನ್ ಪ್ರೊಮೀತಿಯಸ್, ಜೀವವನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳ ಒಬ್ಬ ವಿಜ್ಞಾನಿಯನ್ನು ಚಿತ್ರಿಸಿತು ಮತ್ತು ಭಯಂಕರವಾದ ಪರಿಣಾಮಗಳನ್ನು ವರ್ಣಿಸಿತು.
ಕೆಲವು ಬರಹಗಾರರು ಈ ರೀತಿಯ ಕಲ್ಪನಾ ಕಥೆಯನ್ನು, ಮಾನವ ಸಮಾಜದ ನ್ಯೂನತೆಗಳನ್ನು ಎತ್ತಿತೋರಿಸಲು ಬಳಸಿದರು. ಆದುದರಿಂದ ಜಾನತನ್ ಸ್ವಿಫ್ಟ್, 18ನೆಯ ಶತಮಾನದ ಇಂಗ್ಲಿಷ್ ಸಮಾಜದ ಪರಿಹಾಸ್ಯ ಮಾಡಿದಾಗ, ಅವನು ತನ್ನ ವಿಡಂಬನ ಕಾವ್ಯವನ್ನು ಕಲ್ಪಿತ ಜಲಯಾನಗಳ ಸರಣಿಯಾಗಿ ಪೋಣಿಸಿದನು. ಫಲಿತಾಂಶವು, ವಿಜ್ಞಾನ ಕಲ್ಪನಾ ಕಥೆಯ “ಪ್ರಥಮ ಸಾಹಿತ್ಯಾತ್ಮಕ ಅನುಪಮಕೃತಿ” ಎಂಬುದಾಗಿ ಕರೆಯಲ್ಪಟ್ಟಿರುವ ತೀಕ್ಷ್ಣವಾದ ರೂಪಕ—ಗಲಿವರ್ಸ್ ಟ್ರ್ಯಾವಲ್ಸ್ ಆಗಿತ್ತು.
ಆದರೆ ಬರಹಗಾರರಾದ ಜೂಲ್ಸ್ ವರ್ನ್ ಮತ್ತು ಏಚ್. ಜಿ. ವೆಲ್ಸ್ರು, ಸಾಮಾನ್ಯವಾಗಿ ವಿಜ್ಞಾನ ಕಲ್ಪನಾ ಕಥೆಯ ಕಾದಂಬರಿಗಳನ್ನು ಅದರ ಆಧುನಿಕ ಆಕಾರದೊಳಗೆ ಹಾಕಿದ ವಿಷಯಕ್ಕಾಗಿ ಮಾನ್ಯಮಾಡಲ್ಪಡುತ್ತಾರೆ. 1865ರಲ್ಲಿ, ವರ್ನ್, ಭೂಮಿಯಿಂದ ಚಂದ್ರನ ವರೆಗೆ (ಇಂಗ್ಲಿಷ್)—ಸಫಲವಾದ ಕಾದಂಬರಿಗಳ ಎಳೆಗಳಲ್ಲಿ ಒಂದು—ಎಂಬ ಪುಸ್ತಕವನ್ನು ಬರೆದರು. 1895ರಲ್ಲಿ, ಏಚ್. ಜಿ. ವೆಲ್ಸ್ ಅವರ ಜನಪ್ರಿಯ ಪುಸ್ತಕ, ದ ಟೈಮ್ ಮಷೀನ್ ಕಾಣಿಸಿಕೊಂಡಿತು.
ಕಲ್ಪನಾ ಕಥೆಯು ವಾಸ್ತವಿಕತೆಯಾಗುತ್ತದೆ
1900ಗಳ ಆದಿ ಭಾಗದಲ್ಲಿ, ವಿಜ್ಞಾನಿಗಳು ಈ ಕನಸುಗಾರರಲ್ಲಿ ಕೆಲವರ ಕನಸುಗಳು ಸತ್ಯವಾಗುವಂತೆ ಮಾಡಲು ತೊಡಗುತ್ತಿದ್ದರು. ಡೀ ಗ್ರೋಸೆನ್ (ದ ಗ್ರೇಟ್ ಒನ್ಸ್) ಎಂಬ ಪುಸ್ತಕಕ್ಕನುಸಾರ, ಜರ್ಮನ್ ಭೌತವಿಜ್ಞಾನಿಯಾದ ಹರ್ಮಾನ್ ಓಬರ್ಟ್, ಮನುಷ್ಯರಿಂದ ನಿರ್ವಹಿಸಲ್ಪಟ್ಟ ಬಾಹ್ಯಾಕಾಶ ಹಾರಾಟದ ವಿಷಯವಾಗಿದ್ದ ಜೂಲ್ಸ್ ವರ್ನ್ರ ಕನಸನ್ನು ಒಂದು ವಾಸ್ತವಿಕತೆಯನ್ನಾಗಿ ಮಾಡಲು ಪ್ರಯತ್ನಿಸುತ್ತಾ, ವರ್ಷಗಳನ್ನು ವ್ಯಯಿಸಿದರು. ಓಬರ್ಟ್ರ ಲೆಕ್ಕಾಚಾರವು, ಬಾಹ್ಯಾಕಾಶ ಪಯಣಕ್ಕಾಗಿ ಒಂದು ವೈಜ್ಞಾವಿಕ ಆಧಾರವನ್ನೀಯಲು ಸಹಾಯ ಮಾಡಿತು. ಹಾಗಿದ್ದರೂ, ವಿಜ್ಞಾನ ಕಲ್ಪನಾ ಕಥೆಯಿಂದ ಪ್ರಭಾವಿಸಲ್ಪಟ್ಟ ಏಕಮಾತ್ರ ವಿಜ್ಞಾನಿ ಅವರಾಗಿರಲಿಲ್ಲ. ವಿಜ್ಞಾನ ಕಲ್ಪನಾ ಕಥೆಯ ಜನಪ್ರಿಯ ಬರಹಗಾರ, ರೇ ಬ್ರ್ಯಾಡ್ಬರಿ ಹೇಳುವುದು: “ವರ್ನ್ಹರ್ ಫಾನ್ ಬ್ರಾನ್ ಮತ್ತು ಜರ್ಮನಿಯಲ್ಲಿದ್ದ ಅವನ ಸಹೋದ್ಯೋಗಿಗಳು ಮತ್ತು ಹ್ಯೂಸ್ಟನ್ ಹಾಗೂ ಕೇಪ್ ಕೆನಡಿಯಲ್ಲಿದ್ದ ಪ್ರತಿಯೊಬ್ಬರು, ತಾವು ಮಕ್ಕಳಾಗಿದ್ದಾಗ ಏಚ್. ಜಿ. ವೆಲ್ಸ್ ಮತ್ತು ಜೂಲ್ಸ್ ವರ್ನ್ರ ಪುಸ್ತಕಗಳನ್ನು ಓದಿದರು. ತಾವು ದೊಡ್ಡವರಾದ ಮೇಲೆ, ಅದೆಲ್ಲವು ನಿಜವಾಗುವಂತೆ ಮಾಡುವೆವೆಂದು ಅವರು ನಿರ್ಧರಿಸಿದರು.”
ನಿಜವಾಗಿಯೂ, ವಿಜ್ಞಾನ ಕಲ್ಪನಾ ಕಥೆಯು ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಗಾಗಿ ಜಿಗಿ ಹಲಗೆಯಾಗಿದೆ. ಗ್ರಂಥಕರ್ತ ರನೆ ಆಟ್ ಪ್ರತಿಪಾದಿಸುವುದು, “ವಿಜ್ಞಾನ ಕಲ್ಪನಾ ಕಥೆಯು ಮುಂಚಿತವಾಗಿ ಸೂಚಿಸದೆ ಇದ್ದ ಶೋಧನೆಗಳು ಅಥವಾ ಕಂಡುಹಿಡಿತಗಳು” ಕೊಂಚವೇ ಆಗಿವೆ. ಜಲಾಂತರ್ಗಾಮಿ ಹಡಗುಗಳು, ಯಾಂತ್ರಿಕ ಮನುಷ್ಯರು, ಮತ್ತು ಮನುಷ್ಯರಿಂದ ನಿರ್ವಹಿಸಲ್ಪಟ್ಟ ರಾಕೆಟ್ಗಳು, ಅವು ವಾಸ್ತವಿಕತೆಗಳಾಗುವ ಬಹಳ ಮುಂಚೆಯೇ ವಿಜ್ಞಾನ ಕಲ್ಪನಾ ಕಥೆಯ ಸಾಮಾನ್ಯ ಅಂಶಗಳಾಗಿದ್ದವು. ಹೀಗೆ ವಿಜ್ಞಾನ ಕಲ್ಪನಾ ಕಥೆಯ ಬರಹಗಾರ, ಫ್ರೆಡ್ರಿಕ್ ಪೋಲ್ ಸಮರ್ಥಿಸುವುದೇನೆಂದರೆ, “ವಿಜ್ಞಾನ ಕಲ್ಪನಾ ಕಥೆಯನ್ನು ಓದುವುದು, ಮನಸ್ಸನ್ನು ವಿಸ್ತರಿಸುವುದಾಗಿದೆ.”
ಎಲ್ಲ ವಿಜ್ಞಾನ ಕಲ್ಪನಾ ಕಥೆಯು ನಿಜವಾಗಿಯೂ ವಿಜ್ಞಾನದ ಕುರಿತಿರುವುದಿಲ್ಲ, ನಿಶ್ಚಯ. ಅತ್ಯಂತ ಜನಪ್ರಿಯ ವಿಜ್ಞಾನ ಕಲ್ಪನಾ ಕಥೆಯ ಪುಸ್ತಕಗಳಲ್ಲಿ ಮತ್ತು ಚಿತ್ರಗಳಲ್ಲಿ ಕೆಲವು, ನಿಜವಾಗಿಯೂ ವಿಜ್ಞಾನ ಭ್ರಾಂತಿ ಎಂದು ಕೆಲವರು ಕರೆಯುವ ವಿಷಯದ ರೂಪಗಳಾಗಿವೆ. ವೈಜ್ಞಾನಿಕ ಸಂಭವನೀಯತೆಯು ಅನೇಕ ವೇಳೆ ವಿಜ್ಞಾನ ಕಲ್ಪನಾ ಕಥೆಯ ಶ್ರೇಷ್ಠತೆಯ ಗುರುತಾಗಿದೆಯಾದರೂ, ಭ್ರಾಂತಿಯ ಕಥೆಗಳು ಅವುಗಳ ಗ್ರಂಥಕರ್ತನ ಕಲ್ಪನೆಯಿಂದ ಮಾತ್ರ ಸೀಮಿತವಾಗಿವೆ. ಮಾಟಮಂತ್ರಗಳೂ ಒಂದು ಪಾತ್ರವನ್ನು ವಹಿಸಬಲ್ಲವು.
ಆದರೂ, ಭವಿಷ್ಯತ್ತಿನ ಕುರಿತಾದ ವಿಜ್ಞಾನ ಕಲ್ಪನಾ ಕಥೆಯ ವೀಕ್ಷಣಗಳು ಎಷ್ಟು ನಿಷ್ಕೃಷ್ಟವಾಗಿವೆ? ಎಲ್ಲ ವಿಜ್ಞಾನ ಕಲ್ಪನಾ ಕಥೆಯು ಓದುವಿಕೆಗಾಗಿ ಅಥವಾ ವೀಕ್ಷಣಕ್ಕಾಗಿ ಪ್ರಯೋಜನಕರವಾಗಿದೆಯೆ? ಮುಂದಿನ ಲೇಖನಗಳು ಈ ಪ್ರಶ್ನೆಗಳನ್ನು ಸಂಬೋಧಿಸುವವು.
[ಪುಟ 4 ರಲ್ಲಿರುವ ಚಿತ್ರ]
“ಭೂಮಿಯಿಂದ ಚಂದ್ರನ ವರೆಗೆ” (ಇಂಗ್ಲಿಷ್) ಎಂಬ ಜೂಲ್ಸ್ ವರ್ನ್ರ ಕಾದಂಬರಿಯು, ಬಾಹ್ಯಾಕಾಶ ಪಯಣದಲ್ಲಿ ಆಸಕ್ತಿಯನ್ನು ಕೆರಳಿಸಲು ಹೆಚ್ಚನ್ನು ಮಾಡಿತು
[ಪುಟ 4 ರಲ್ಲಿರುವ ಚಿತ್ರ ಕೃಪೆ]
Rocket Ship: General Research Division/The New York Public Library/Astor, Lenox and Tilden Foundations