ಇಂದಿನ ವಿಜ್ಞಾನ ಕಲ್ಪನಾ ಕಥೆಯ ಕಡೆಗೆ ಒಂದು ನೋಟ
ಮೋಟಾರುಗಾಡಿಗಳು, ದೂರವಾಣಿಗಳು, ಕಂಪ್ಯೂಟರ್ಗಳು—130 ವರ್ಷಗಳ ಹಿಂದೆ ಅವುಗಳ ಶೋಧನೆಯನ್ನು ಬಹುಶಃ ಯಾರಾದರೂ ಮುಂಗಾಣಬಹುದಿತ್ತೊ? ವಿಜ್ಞಾನ ಕಲ್ಪನಾ ಕಥೆಯ (ಎಸ್ಎಫ್) ಬರಹಗಾರ, ಜೂಲ್ಸ್ ವರ್ನ್ ಮುಂಗಂಡರು! ಈ ಆಶ್ಚರ್ಯಕರ ವೈಜ್ಞಾನಿಕ ಒಳನೋಟಗಳು, ಇಪ್ಪತ್ತನೆಯ ಶತಮಾನದಲ್ಲಿ ಪ್ಯಾರಿಸ್ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಜೂಲ್ಸ್ ವರ್ನ್ರ ಒಂದು ಕಾದಂಬರಿಯ, ಇತ್ತೀಚೆಗೆ ಕಂಡುಹಿಡಿಯಲ್ಪಟ್ಟ ಹಸ್ತಪ್ರತಿಯಲ್ಲಿ ಕಂಡುಕೊಳ್ಳಲ್ಪಟ್ಟವು. ಈ ಹಿಂದೆ ಪ್ರಕಾಶಿಸಲ್ಪಡದ ಈ ಕಾದಂಬರಿಯಲ್ಲಿ, ವರ್ನ್, ಆಧುನಿಕ ಫ್ಯಾಕ್ಸ್ ಯಂತ್ರಕ್ಕೆ ವಿಸ್ಮಯಕರ ಹೋಲಿಕೆಯುಳ್ಳ ಒಂದು ವಿಲಕ್ಷಣ ಯಂತ್ರವನ್ನೂ ವರ್ಣಿಸಿದರು!a
ಹಾಗಿದ್ದರೂ, ವಿಜ್ಞಾನ ಕಲ್ಪನಾ ಕಥೆಯ ಬರಹಗಾರರಲ್ಲಿ ಅತ್ಯಂತ ಚತುರರು ಕೂಡ, ನಿಜವಾದ ಪ್ರವಾದಿಗಳಾಗುವ ವಿಷಯದಲ್ಲಿ ತೀರ ವಿಫಲರಾಗುತ್ತಾರೆ. ಉದಾಹರಣೆಗೆ, ಜೂಲ್ಸ್ ವರ್ನ್ರ, ಭೂಮಿಯ ಕೇಂದ್ರನಾಭಿಗೆ ಪ್ರಯಾಣ (ಇಂಗ್ಲಿಷ್) ಎಂಬ ಕಾದಂಬರಿಯು, ಚಿತ್ತಾಕರ್ಷಕ ವಾಚನಕ್ಕೆ ಅನುಕೂಲವಾಗಿದ್ದರೂ, ಇಂತಹ ಒಂದು ಪ್ರಯಾಣವನ್ನು ಮಾಡುವುದು ಅಸಾಧ್ಯವೆಂದು ವಿಜ್ಞಾನಿಗಳಿಗೆ ಈಗ ತಿಳಿದಿದೆ. ಅಥವಾ, ಕೆಲವರು ಈ ಮುಂಚೆ ಸೂಚಿಸಿರುವಂತೆ, 2001ನೆಯ ವರ್ಷವು, ಗುರುಗ್ರಹಕ್ಕೆ ಅಥವಾ ಇತರ ಗ್ರಹಗಳಿಗೆ ಮನುಷ್ಯರಿಂದ ನಿರ್ವಹಿಸಲ್ಪಟ್ಟ ಸಂಚಾರಗಳನ್ನು ನೋಡುವುದೆಂಬ ವಿಷಯವು ಅಸಾಧ್ಯವೆಂದು ತೋರುತ್ತದೆ.
ಸಂಭವಿಸಿರುವ ಅನೇಕ ಆಶ್ಚರ್ಯಕಾರಿ ವೈಜ್ಞಾನಿಕ ವಿಕಸನಗಳನ್ನು ಮುಂತಿಳಿಸಲು ಸಹ ವಿಜ್ಞಾನ ಕಲ್ಪನಾ ಕಥೆಯ ಬರಹಗಾರರು ತಪ್ಪಿಹೋಗಿದ್ದಾರೆ. ದಿ ಅಟ್ಲ್ಯಾಂಟಿಕ್ ಮಂತ್ಲಿಯಲ್ಲಿ ಕಾಣಿಸಿಕೊಳ್ಳುವ ಒಂದು ಲೇಖನದಲ್ಲಿ, ವಿಜ್ಞಾನ ಕಲ್ಪನಾ ಕಥೆಯ ಬರಹಗಾರ, ಥಾಮಸ್ ಎಮ್. ಡಿಶ್ ಒಪ್ಪಿಕೊಳ್ಳುವುದು: “ಯಂತ್ರೀಕರಣದ [ಕಂಪ್ಯೂಟರ್] ಯುಗ . . . , ಸಸ್ಯಾಗಾರ ಪರಿಣಾಮ ಅಥವಾ ಓಸೋನ್ ಪದರದ ನಾಶನ ಅಥವಾ ಏಡ್ಸ್ ರೋಗದ ಕುರಿತು ಊಹಿಸಲು, ಎಸ್ಎಫ್ನ ಎಲ್ಲ ಅಸಫಲತೆಗಳನ್ನು ಪರಿಗಣಿಸಿರಿ. ಅಧಿಕಾರದ ನೂತನ ಭೂರಾಜಕೀಯ ಅಸಮತೂಕತೆಯನ್ನು ಪರಿಗಣಿಸಿರಿ. ಈ ಎಲ್ಲ ವಿಷಯಗಳನ್ನು ಪರಿಗಣಿಸಿ, ನಂತರ ಇವುಗಳ ಕುರಿತು ಎಸ್ಎಫ್ಗೆ ಏನು ಹೇಳಲಿಕ್ಕಿತ್ತು ಎಂದು ಕೇಳಿರಿ. ಬಹುಮಟ್ಟಿಗೆ ಒಂದು ಮಾತೂ ಇಲ್ಲ.”
ವಿಜ್ಞಾನ ಕಲ್ಪನಾ ಕಥೆ—ಭಾರಿ ವ್ಯಾಪಾರ
ನಿಶ್ಚಯವಾಗಿ, ಆಸಕ್ತರಿಗೆ, ವಿಜ್ಞಾನ ಕಲ್ಪನಾ ಕಥೆಯು ಊಹಾತ್ಮಕ ವಿಜ್ಞಾನವಲ್ಲ, ಮನೋರಂಜನೆಯಾಗಿರುತ್ತದೆ. ಹಾಗಿದ್ದರೂ, ಆ ವಿಷಯದಲ್ಲಿಯೂ ಅದರ ಮೌಲ್ಯವನ್ನು ಪ್ರಶ್ನಿಸುವವರು ಇದ್ದಾರೆ. ಈ ಶತಮಾನದ ಆದಿ ಭಾಗದಲ್ಲಿ, ವಿಜ್ಞಾನ ಕಲ್ಪನಾ ಕಥೆಯಲ್ಲಿ ವಿಶೇಷಿಸಿದ ಅಗ್ಗವಾದ ಪತ್ರಿಕೆಗಳ ಪ್ರಕಟನೆಯೊಂದಿಗೆ, ಅದು ಕಳಪೆ ಸಾಹಿತ್ಯವಾಗಿದೆ ಎಂಬ ಖ್ಯಾತಿಯನ್ನು ವಿಜ್ಞಾನ ಕಲ್ಪನಾ ಕಥೆಯು ಪಡೆಯತೊಡಗಿತು. ಇವುಗಳಲ್ಲಿ ಮೊದಲನೆಯದಾದ ಬೆರಗುಗೊಳಿಸುವ ಕಥೆಗಳು (ಇಂಗ್ಲಿಷ್) ಎಂಬ ಪತ್ರಿಕೆಯು, 1926ರಲ್ಲಿ ಮಾರಾಟಕ್ಕಾಗಿ ಇಡಲ್ಪಟ್ಟಿತು. ಅದರ ಸ್ಥಾಪಕ, ಹ್ಯೂಗೊ ಗರ್ನ್ಸ್ಬ್ಯಾಕ್ಗೆ, “ವಿಜ್ಞಾನ ಕಲ್ಪನಾ ಕಥೆ” ಎಂಬ ಪದವಾಗಿ ವಿಕಾಸಹೊಂದಿದ ಶಬ್ದವನ್ನು ಸೃಷ್ಟಿಸಿದುದಕ್ಕಾಗಿ ಗೌರವವು ಸಲ್ಲುತ್ತದೆ. ಈ ಭಾವೋದ್ರೇಕಕಾರಿ ಸಾಹಸ ಕಥೆಗಳಿಗೆ, ಇದ್ದರೂ ಅತಿ ಕೊಂಚ ಸಾಹಿತ್ಯಾತ್ಮಕ ಮೌಲ್ಯವಿತ್ತೆಂದು ಅನೇಕರಿಗೆ ಅನಿಸಿತು.
ವಿಜ್ಞಾನ ಕಲ್ಪನಾ ಕಥೆಯು, IIನೆಯ ಜಾಗತಿಕ ಯುದ್ಧದ ತರುವಾಯ ಹೆಚ್ಚು ಗಂಭೀರವಾಗಿ ಪರಿಗಣಿಸಲ್ಪಡಲಾರಂಭವಾಯಿತು. ಆ ಯುದ್ಧದಲ್ಲಿ ವಿಜ್ಞಾನವು ವಹಿಸಿದ ನಾಟಕೀಯ ಪಾತ್ರವು ಅದಕ್ಕೆ ಹೊಸ ಪ್ರತಿಷ್ಠೆಯನ್ನು ಕೊಟ್ಟಿತು. ವಿಜ್ಞಾನ ಕಲ್ಪನಾ ಕಥೆಯ ಬರಹಗಾರರ ಭವಿಷ್ಯ ನುಡಿಗಳು ಹೆಚ್ಚು ವಿಶ್ವಾಸಾರ್ಹವಾಗಿ ತೋರಲಾರಂಭಿಸಿದವು. ಆದುದರಿಂದ ವಿಜ್ಞಾನ ಕಲ್ಪನಾ ಕಥೆಯ ಕಾಮಿಕ್ಸ್, ಪತ್ರಿಕೆಗಳು, ಮತ್ತು ಪುಸ್ತಕಗಳು ಪುನರ್ ಉತ್ಪತ್ತಿಗೊಳ್ಳತೊಡಗಿದವು. ರಟ್ಟುಕಟ್ಟಿದ ವಿಜ್ಞಾನ ಕಲ್ಪನಾ ಕಥೆಯ ಪುಸ್ತಕಗಳು ಅಧಿಕ ಮಾರಾಟವಾಗುವ ಪುಸ್ತಕಗಳಾದವು. ಆದರೆ ಜನಸಾಮಾನ್ಯರ ತಗಾದೆಗಳನ್ನು ಪೂರೈಸಲು ವಿಜ್ಞಾನ ಕಲ್ಪನಾ ಕಥೆಯು ಹೋರಾಡಿದಂತೆ, ಸಾಹಿತ್ಯಾತ್ಮಕ ಗುಣಮಟ್ಟ ಮತ್ತು ವೈಜ್ಞಾನಿಕ ನಿಷ್ಕೃಷ್ಟತೆಯು ಅನೇಕ ವೇಳೆ ತ್ಯಜಿಸಲ್ಪಡುತ್ತದೆ. ವಿಜ್ಞಾನ ಕಲ್ಪನಾ ಕಥೆಯ ಬರಹಗಾರ, ರಾಬರ್ಟ್ ಎ. ಹೈನ್ಲೈನ್ ಪ್ರಲಾಪಿಸುವುದೇನೆಂದರೆ, “ಓದಬಹುದಾದ ಮತ್ತು ಮಿತವಾಗಿ ಮನೋರಂಜನೆ ನೀಡುವಂತಹ ಯಾವುದೇ ವಿಷಯವು” ಈಗ ಪ್ರಕಟಿಸಲ್ಪಡುತ್ತದೆ; ಇದರಲ್ಲಿ “ಕೀಳಾದ ಊಹಾಪೋಹದ ಅತ್ಯಧಿಕ ಕಾದಂಬರಿಗಳು” ಸೇರಿವೆ. ಬರಹಗಾರ್ತಿ ಅರ್ಸಲ ಕೆ. ಲಗಿನ್ ಕೂಡಿಸುವುದೇನೆಂದರೆ, “ಎರಡನೆಯ ದರ್ಜೆಯ ವಿಷಯ” ಸಹ ಮುದ್ರಿಸಲ್ಪಡುತ್ತದೆ.
ಇಂತಹ ವಿಮರ್ಶೆಯ ಹೊರತೂ, ವಿಜ್ಞಾನ ಕಲ್ಪನಾ ಕಥೆಯು ವಿಜ್ಞಾನಿಗಳಿಂದಲ್ಲ, ಆದರೆ ಚಲನ ಚಿತ್ರ ಉದ್ಯಮದಿಂದ ಮಹತ್ವದ ವರ್ಧಕವನ್ನು ಪಡೆದಿರುವ ಕಾರಣ, ಜನಪ್ರಿಯತೆಯ ಹೊಸ ಶಿಖರಗಳನ್ನು ತಲಪಿದೆ.
ವಿಜ್ಞಾನ ಕಲ್ಪನಾ ಕಥೆಯು “ಚಲನ ಚಿತ್ರಗಳಲ್ಲಿ” ಪ್ರಸ್ತುತಗೊಳಿಸಲ್ಪಡುತ್ತದೆ
ವಿಜ್ಞಾನ ಕಲ್ಪನಾ ಕಥೆಯ ಚಿತ್ರಗಳು, ಎ ಟ್ರಿಪ್ ಟು ದ ಮೂನ್ ಎಂಬ ಚಿತ್ರವನ್ನು 1902ರಲ್ಲಿ ಸಾರ್ಸ್ ಮೇಲ್ಯೆಸ್ ಮಾಡಿದಂದಿನಿಂದ ಅಸ್ತಿತ್ವದಲ್ಲಿವೆ. ಯುವ ಚಲನ ಚಿತ್ರಹೋಕರ ಒಂದು ನಂತರದ ಸಂತತಿಯು, ಫ್ಲ್ಯಾಶ್ ಗಾರ್ಡನ್ನಿಂದ ವಶೀಕರಿಸಲ್ಪಟ್ಟಿತು. ಆದರೆ 1968ರಲ್ಲಿ, ಮನುಷ್ಯನು ಚಂದ್ರನ ಮೇಲೆ ಕಾಲಿರಿಸುವುದಕ್ಕೆ ಒಂದು ವರ್ಷ ಮೊದಲು, 2001: ಎ ಸ್ಪೇಸ್ ಆಡಿಸಿ ಎಂಬ ಚಿತ್ರವು ಕಲಾತ್ಮಕ ಮನ್ನಣೆಯನ್ನು ಪಡೆಯಿತು ಮತ್ತು ವಾಣಿಜ್ಯ ಯಶಸ್ಸನ್ನೂ ಗಳಿಸಿತು. ಹಾಲಿವುಡ್ ಈಗ ವಿಜ್ಞಾನ ಕಲ್ಪನಾ ಕಥೆಯ ಚಿತ್ರಗಳಿಗೆ ಹೆಚ್ಚು ಹಣದ ಮೊತ್ತವನ್ನು ಒದಗಿಸತೊಡಗಿತು.
1970ಗಳ ಕೊನೆಯ ಭಾಗ ಮತ್ತು 1980ರ ಆದಿ ಭಾಗದೊಳಗಾಗಿ, ಏಲ್ಯನ್, ಸ್ಟಾರ್ ವಾರ್ಸ್, ಬ್ಲೇಡ್ ರನರ್ ಮತ್ತು ಈಟಿ: ದಿ ಎಕ್ಸ್ಟ್ರಾಟೆರೆಸ್ಟ್ರಿಯಲ್ ಎಂಬಂತಹ ಚಿತ್ರಗಳು, ಅಮೆರಿಕದ ಎಲ್ಲ ಗಲ್ಲಾಪೆಟ್ಟಿಗೆಯ ಸಂದಾಯದ ಅರ್ಧಭಾಗಕ್ಕೆ ಕಾರಣವಾಯಿತು. ನಿಶ್ಚಯವಾಗಿ, ವಿಜ್ಞಾನ ಕಲ್ಪನಾ ಕಥೆಯು, ಎಲ್ಲ ಸಮಯದ ಅತ್ಯಂತ ಸಫಲವಾದ ಚಿತ್ರಗಳಲ್ಲಿ ಒಂದು, ಜ್ಯೂರ್ಯಾಸಿಕ್ ಪಾರ್ಕ್ ಅನ್ನು ಒದಗಿಸಿತು. ಆ ಚಿತ್ರದೊಂದಿಗೆ ಸುಮಾರು 1,000 ಜ್ಯೂರ್ಯಾಸಿಕ್ ಪಾರ್ಕ್ ಉತ್ಪಾದನೆಗಳ ಹುಚ್ಚುಪ್ರವಾಹ ಬಂದಿತು. ಟಿವಿಯೂ ವಿಜಯರಥವನ್ನು ಹಾರಿಹತ್ತಿರುವುದು ಆಶ್ಚರ್ಯಕರವೇನೂ ಆಗಿರುವುದಿಲ್ಲ. ಸ್ಟಾರ್ ಟ್ರೆಕ್ ಎಂಬ ಜನಪ್ರಿಯ ಪ್ರದರ್ಶನವು, ಬಾಹ್ಯಾಕಾಶದ ಕುರಿತಾದ ಹಲವಾರು ಕಾರ್ಯಕ್ರಮಗಳನ್ನು ಉತ್ಪಾದಿಸಿತು.
ಆದರೆ, ಜನಪ್ರಿಯ ತಗಾದೆಗಳನ್ನು ಪೂರೈಸುವ ಮೂಲಕ, ವಿಜ್ಞಾನ ಕಲ್ಪನಾ ಕಥೆಯ ಕೆಲವು ಬರಹಗಾರರು, ವಿಜ್ಞಾನ ಕಲ್ಪನಾ ಕಥೆಗೆ ಒಂದಿಷ್ಟು ಮೌಲ್ಯವನ್ನು ನೀಡಿದ್ದ ಗುಣಗಳನ್ನು ತ್ಯಾಗಮಾಡಿದ್ದಾರೆಂದು ಅನೇಕರಿಗೆ ಅನಿಸುತ್ತದೆ. ಜರ್ಮನ್ ಗ್ರಂಥಕರ್ತ ಕಾರ್ಲ್ ಮಿಕಾಯೆಲ್ ಆರ್ಮರ್ ಪ್ರತಿಪಾದಿಸುವುದೇನೆಂದರೆ, ‘ಈಗ ವಿಜ್ಞಾನ ಕಲ್ಪನಾ ಕಥೆಯು, ಒಳವಿಷಯದಿಂದಲ್ಲ, ಬದಲಿಗೆ ಮಾರಿಕೆಯ ತಂತ್ರಗಳ ಮೂಲಕ ಗುರುತಿಸಲ್ಪಡುವ ಕೇವಲ ಒಂದು ಜನಪ್ರಿಯ ಸರಕುಮುದ್ರೆಯಾಗಿದೆ.’ ಇತರರು ಪ್ರಲಾಪಿಸುವುದೇನೆಂದರೆ, ಇಂದಿನ ವಿಜ್ಞಾನ ಕಲ್ಪನಾ ಕಥೆಯ ಚಿತ್ರಗಳ ನಿಜವಾದ “ತಾರೆಗಳು” ವ್ಯಕ್ತಿಗಳಲ್ಲ, ವಿಶೇಷ ಪರಿಣಾಮಗಳಾಗಿವೆ. ವಿಜ್ಞಾನ ಕಲ್ಪನಾ ಕಥೆಯು, “ಅದರ ಅನೇಕ ತೋರಿಕೆಗಳಲ್ಲಿ ಅಸಹ್ಯಕರವಾಗಿಯೂ ತಳವಿಲ್ಲದ್ದಾಗಿಯೂ” ಇದೆ ಎಂದು ಸಹ ಒಬ್ಬ ವಿಮರ್ಶಕನು ಹೇಳುತ್ತಾನೆ.
ಉದಾಹರಣೆಗೆ, ವಿಜ್ಞಾನ ಕಲ್ಪನಾ ಕಥೆಯ ಚಿತ್ರಗಳೆಂದು ಕರೆಯಲ್ಪಡುವ ಅನೇಕ ಚಿತ್ರಗಳು, ನಿಜವಾಗಿಯೂ ವಿಜ್ಞಾನ ಅಥವಾ ಭವಿಷ್ಯತ್ತಿನ ಕುರಿತಾಗಿ ಇರುವುದೇ ಇಲ್ಲ. ಭವಿಷ್ಯತ್ತಿನ ಸನ್ನಿವೇಶಗಳು ಕೆಲವೊಮ್ಮೆ ಸುಸ್ಪಷ್ಟ ವರ್ಣನೆಯ ಹಿಂಸೆಗೆ ಕೇವಲ ಒಂದು ಹಿನ್ನೆಲೆಯಾಗಿ ಬಳಸಲ್ಪಡುತ್ತವೆ. ಬರಹಗಾರ ನಾರ್ಮನ್ ಸ್ಪಿನ್ರ್ಯಡ್ ಗಮನಿಸುವುದೇನೆಂದರೆ, ಇಂದಿನ ವಿಜ್ಞಾನ ಕಲ್ಪನಾ ಕಥೆಯ ಅನೇಕ ಕಥೆಗಳಲ್ಲಿ, ಯಾರಾದರೊಬ್ಬನು “ಗುಂಡಿನಿಂದ ಹೊಡೆಯಲ್ಪಡುತ್ತಾನೆ, ಇರಿಯಲ್ಪಡುತ್ತಾನೆ, ಹಬೆಯಾಗಿಸಲ್ಪಡುತ್ತಾನೆ, ಲೇಸರ್ ಆಯುಧದಿಂದ ಕೊಲ್ಲಲ್ಪಡುತ್ತಾನೆ, ಪರಚಲ್ಪಡುತ್ತಾನೆ, ನುಂಗಲ್ಪಡುತ್ತಾನೆ, ಅಥವಾ ಸಿಡಿಮದ್ದಿನಿಂದ ನಾಶಮಾಡಲ್ಪಡುತ್ತಾನೆ.” ಅನೇಕ ಚಿತ್ರಗಳಲ್ಲಿ ಈ ಪಾತಕವು ದಿಗಿಲುಗೊಳಿಸುವ ವಿವರದಲ್ಲಿ ಚಿತ್ರಿಸಲ್ಪಡುತ್ತದೆ!
ಚಿಂತೆಯ ಇನ್ನೊಂದು ಕ್ಷೇತ್ರವು, ಹಲವಾರು ವಿಜ್ಞಾನ ಭ್ರಾಂತಿಯ ಪುಸ್ತಕಗಳಲ್ಲಿ ಮತ್ತು ಚಿತ್ರಗಳಲ್ಲಿ ಪ್ರದರ್ಶಿಸಲ್ಪಡುವ ಅತಿಲೌಕಿಕ ಅಂಶವಾಗಿದೆ. ಕೆಲವು ಜನರು ಇಂತಹ ಕಥೆಗಳನ್ನು ಒಳ್ಳೆಯದರ ಮತ್ತು ಕೆಟ್ಟದ್ದರ ನಡುವಿನ ಲಾಕ್ಷಣಿಕ ಕಾದಾಟಗಳಿಗಿಂತ ಹೆಚ್ಚಾಗಿ ಪರಿಗಣಿಸದಿದ್ದರೂ, ಈ ಕೃತಿಗಳಲ್ಲಿ ಕೆಲವು, ರೂಪಕ ಕಥೆಯನ್ನು ಮೀರಿ ಹೋಗುವಂತೆ ತೋರುತ್ತವೆ ಮತ್ತು ಪ್ರೇತವ್ಯವಹಾರಾತ್ಮಕ ಆಚರಣೆಗಳನ್ನು ಪ್ರವರ್ಧಿಸುತ್ತವೆ.
ಸಮತೂಕಕ್ಕಾಗಿರುವ ಅಗತ್ಯ
ಬೈಬಲು ಊಹಾತ್ಮಕ ಮನೋರಂಜನೆಯನ್ನು ಖಂಡಿಸುವುದಿಲ್ಲ ನಿಶ್ಚಯ. ಯೋತಾಮನ ಮರಗಳ ದೃಷ್ಟಾಂತದಲ್ಲಿ, ನಿರ್ಜೀವ ಗಿಡಗಳು ಪರಸ್ಪರವಾಗಿ ಮಾತಾಡುತ್ತಾ, ಯೋಜನೆಗಳನ್ನೂ ಸಂಚುಗಳನ್ನೂ ರಚಿಸುತ್ತಾ ಇರುವುದಾಗಿ ಚಿತ್ರಿಸಲ್ಪಟ್ಟಿವೆ. (ನ್ಯಾಯಸ್ಥಾಪಕರು 9:7-15) ಪ್ರವಾದಿಯಾದ ಯೆಶಾಯನು, ಬಹು ಹಿಂದೆ ಸತ್ತ ರಾಷ್ಟ್ರೀಯ ಪ್ರಭುಗಳು ಸಮಾಧಿಯಲ್ಲಿ ಒಂದು ಸಂಭಾಷಣೆಯನ್ನು ನಡೆಸುತ್ತಿರುವುದಾಗಿ ಚಿತ್ರಿಸಿದಾಗ, ತದ್ರೀತಿಯ ಒಂದು ಊಹಾತ್ಮಕ ಸಾಧನವನ್ನು ಬಳಸಿದನು. (ಯೆಶಾಯ 14:9-11) ಯೇಸುವಿನ ದೃಷ್ಟಾಂತಗಳಲ್ಲಿಯೂ ಕೆಲವು, ಅಕ್ಷರಾರ್ಥವಾಗಿ ಸಂಭವಿಸಸಾಧ್ಯವಿರದ ಅಂಶಗಳನ್ನು ಪಡೆದಿದ್ದವು. (ಲೂಕ 16:23-31) ಅಂತಹ ಊಹಾತ್ಮಕ ಸಾಧನಗಳು ಕೇವಲ ಮನೋರಂಜನೆ ನೀಡಲು ಅಲ್ಲ, ಉಪದೇಶಿಸುವ ಮತ್ತು ಕಲಿಸುವ ಕಾರ್ಯಮಾಡಿದವು.
ಇಂದು, ಕೆಲವು ಬರಹಗಾರರು ಉಪದೇಶಿಸುವ ಅಥವಾ ಮನೋರಂಜನೆ ನೀಡುವ ಸಲುವಾಗಿ, ಒಂದು ಭವಿಷ್ಯತ್ತಿನ ಸನ್ನಿವೇಶವನ್ನು ನ್ಯಾಯಸಮ್ಮತವಾಗಿ ಬಳಸಬಹುದು. ಆದರೆ, ಪ್ರಾಮಾಣಿಕ ಕ್ರೈಸ್ತರಾಗಿರುವ ಓದುಗರು, ಶುದ್ಧವಾಗಿಯೂ ಹಿತಕರವಾಗಿಯೂ ಇರುವಂತಹ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನು ಮನಸ್ಸಿನಲ್ಲಿಡುತ್ತಾರೆ. (ಫಿಲಿಪ್ಪಿ 4:8) “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ,” ಎಂದೂ ಅದು ನಮಗೆ ಜ್ಞಾಪಕ ಹುಟ್ಟಿಸುತ್ತದೆ. (1 ಯೋಹಾನ 5:19) ಕೆಲವು ವಿಜ್ಞಾನ ಕಲ್ಪನಾ ಕಥೆಯ ಚಿತ್ರಗಳು ಮತ್ತು ಪುಸ್ತಕಗಳು—ವಿಕಾಸ, ಮಾನವ ಅಮರತ್ವ, ಮತ್ತು ಪುನರವತಾರಗಳಂಥ—ಬೈಬಲಿನೊಂದಿಗೆ ಅಸಂಗತವಾದ ವಿಚಾರಗಳಿಗೆ ಮತ್ತು ತತ್ವಜ್ಞಾನಗಳಿಗೆ ವೇದಿಕೆಯಾಗಿ ಕೆಲಸ ಮಾಡುತ್ತವೆ. ‘ಸಂಪ್ರದಾಯ ಪ್ರಾಪಂಚಿಕಬಾಲಬೋಧೆ’ಗೆ ಬಲಿಯಾಗದಿರುವಂತೆ ಬೈಬಲು ನಮ್ಮನ್ನು ಎಚ್ಚರಿಸುತ್ತದೆ. (ಕೊಲೊಸ್ಸೆ 2:8) ಮನೋರಂಜನೆಯ ಎಲ್ಲ ರೂಪಗಳ ವಿಷಯದಲ್ಲಿರುವಂತೆ, ವಿಜ್ಞಾನ ಕಲ್ಪನಾ ಕಥೆಯ ವಿಷಯದಲ್ಲಿ ಎಚ್ಚರಿಕೆಯು ಯೋಗ್ಯವಾಗಿದೆ. ನಾವು ಓದುವ ಅಥವಾ ವೀಕ್ಷಿಸುವ ವಿಷಯದ ಕುರಿತು ಆಯ್ಕೆಮಾಡುವವರಾಗಿರತಕ್ಕದ್ದು.—ಎಫೆಸ 5:10.
ಈ ಮುಂಚೆ ಉಲ್ಲೇಖಿಸಿದಂತೆ, ಅನೇಕ ಜನಪ್ರಿಯ ಚಿತ್ರಗಳು ಹಿಂಸಾತ್ಮಕವಾಗಿವೆ. “ಹಿಂಸೆಯನ್ನು ಪ್ರೀತಿಸುವ ಯಾವನನ್ನಾದರೂ ಆತನ ಪ್ರಾಣವು ದ್ವೇಷಿಸುತ್ತದೆ,” ಎಂದು ಯಾರ ಕುರಿತು ಹೇಳಲಾಗಿದೆಯೊ, ಆ ಯೆಹೋವನಿಗೆ ಅನಾವಶ್ಯಕವಾದ ರಕ್ತಪಾತ ಪಥ್ಯದ ನಮ್ಮ ಸೇವನೆಯು ಇಷ್ಟಕರವಾಗಿರುವುದೊ? (ಕೀರ್ತನೆ 11:5, NW) ಮತ್ತು ಪ್ರೇತವ್ಯವಹಾರವಾದವು ಶಾಸ್ತ್ರದಲ್ಲಿ ಖಂಡಿಸಲ್ಪಟ್ಟಿರುವುದರಿಂದ, ಮಾಟ ಅಥವಾ ಮಂತ್ರಗಳಂತಹ ಅಂಶಗಳನ್ನು ಪ್ರದರ್ಶಿಸುವ ಪುಸ್ತಕಗಳ ಅಥವಾ ಚಿತ್ರಗಳ ವಿಷಯದಲ್ಲಿ, ಕ್ರೈಸ್ತರು ಒಳ್ಳೆಯ ವಿವೇಚನೆಯನ್ನು ಉಪಯೋಗಿಸಲು ಬಯಸುವರು. (ಧರ್ಮೋಪದೇಶಕಾಂಡ 18:10) ಭ್ರಾಂತಿಯನ್ನು ವಾಸ್ತವಿಕತೆಯಿಂದ ಒಬ್ಬ ವಯಸ್ಕನು ಯಾವುದೇ ಕಷ್ಟವಿಲ್ಲದೆ ಬೇರ್ಪಡಿಸಬಹುದಾದರೂ, ಎಲ್ಲ ಮಕ್ಕಳಿಗೆ ಅದು ಸಾಧ್ಯವಿಲ್ಲ ಎಂಬುದನ್ನು ಸಹ ಗ್ರಹಿಸಿರಿ. ವಿಷಯವನ್ನು ಒತ್ತಿಹೇಳಲು, ತಾವು ಓದುವ ಮತ್ತು ನೋಡುವ ವಿಷಯದಿಂದ ತಮ್ಮ ಮಕ್ಕಳು ಹೇಗೆ ಪ್ರಭಾವಿಸಲ್ಪಡುತ್ತಾರೆ ಎಂಬುದರ ಕುರಿತು ಹೆತ್ತವರು ಗಮನವಿಡುವವರಾಗಿರಲು ಬಯಸುವರು.b
ವಾಚನದ ಮತ್ತು ಮನೋರಂಜನೆಯ ಇತರ ರೂಪಗಳನ್ನು ತಾವು ಇಷ್ಟಪಡುತ್ತೇವೆಂದು ಕೆಲವರು ನಿರ್ಣಯಿಸಬಹುದು. ಇಂಥವರಿಗೆ ಈ ವಿಷಯದಲ್ಲಿ ಇತರರ ಕುರಿತು ನಿರ್ಣಾಯಕರಾಗಿರುವ ಅಥವಾ ವೈಯಕ್ತಿಕ ಆಯ್ಕೆಯ ವಿಷಯಗಳ ಮೇಲೆ ವಿವಾದಗಳನ್ನು ಮಾಡುವ ಯಾವ ಅಗತ್ಯವೂ ಇರುವುದಿಲ್ಲ.—ರೋಮಾಪುರ 14:4.
ಇನ್ನೊಂದು ಕಡೆಯಲ್ಲಿ, ಪ್ರಾಸಂಗಿಕ ವಿನೋದದಂತೆ ವಿಜ್ಞಾನ ಕಲ್ಪನಾ ಕಥೆಯ ಹಲವಾರು ಬಗೆಗಳನ್ನು ಅನುಭವಿಸಲು ಆರಿಸಿಕೊಳ್ಳುವ ಕ್ರೈಸ್ತರು, ಸೊಲೊಮೋನನ ಎಚ್ಚರಿಕೆಯನ್ನು ಜ್ಞಾಪಕದಲ್ಲಿಡುವುದು ಒಳ್ಳೆಯದು: “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಇಂದಿನ ಲೋಕದಲ್ಲಿರುವ ಅನೇಕರು, ವಿಜ್ಞಾನ ಕಲ್ಪನಾ ಕಥೆಯ ಪುಸ್ತಕಗಳ ಮತ್ತು ಚಲನ ಚಿತ್ರಗಳ ಕಡೆಗಿರುವ ತಮ್ಮ ಭಕ್ತಿಯಲ್ಲಿ ಸ್ಪಷ್ಟವಾಗಿ ಮಿತಿಮೀರಿ ಹೋಗಿದ್ದಾರೆ. ವಿಜ್ಞಾನ ಕಲ್ಪನಾ ಕಥೆಯ ಸಂಘಗಳ ಮತ್ತು ಸಭೆಗಳ ಸಂಖ್ಯಾಭಿವೃದ್ಧಿಯಾಗಿದೆ. ಟೈಮ್ ಪತ್ರಿಕೆಗನುಸಾರ, ಐದು ಭೂಖಂಡಗಳಲ್ಲಿರುವ ಸ್ಟಾರ್ ಟ್ರೆಕ್ ಆಸಕ್ತರು, ಸ್ಟಾರ್ ಟ್ರೆಕ್ ಟಿವಿ ಪ್ರದರ್ಶನಗಳಲ್ಲಿ ಮತ್ತು ಚಲನ ಚಿತ್ರಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದ ಕಲ್ಪಿತ ಭಾಷೆಯಾದ ಕ್ಲಿಂಗಾನ್ ಅನ್ನು ಕಲಿಯುವುದಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇಂತಹ ಅತಿರೇಕ ವರ್ತನೆಯು, ‘ಸ್ವಸ್ಥಚಿತ್ತರಾಗಿರಿ [“ಸಮತೂಕತೆಯನ್ನು ಕಾಪಾಡಿಕೊಳ್ಳಿರಿ,” ಪಾದಟಿಪ್ಪಣಿ, NW]’ ಎಂಬ 1 ಪೇತ್ರ 1:13ರಲ್ಲಿರುವ ಬೈಬಲಿನ ಸಲಹೆಗೆ ಹೊಂದಿಕೆಯಲ್ಲಿರುವುದಿಲ್ಲ.
ಅದು ಎಷ್ಟೇ ಉತ್ತಮವಾಗಿರಲಿ, ಭವಿಷ್ಯತ್ತು ಏನನ್ನು ಕಾದಿರಿಸಿದೆ ಎಂಬುದರ ಕುರಿತು ವಿಜ್ಞಾನ ಕಲ್ಪನಾ ಕಥೆಯು ಮನುಷ್ಯನ ಕುತೂಹಲವನ್ನು ತೃಪ್ತಿಗೊಳಿಸಲು ಸಾಧ್ಯವಿಲ್ಲ. ಭವಿಷ್ಯತ್ತನ್ನು ಅರಿಯಲು ನಿಜವಾಗಿಯೂ ಬಯಸುವವರು, ನಿಶ್ಚಿತವಾಗಿರುವ ಒಂದು ಮೂಲಕ್ಕೆ ತಿರುಗಬೇಕು. ಇದನ್ನು ನಾವು ನಮ್ಮ ಮುಂದಿನ ಲೇಖನದಲ್ಲಿ ಚರ್ಚಿಸುವೆವು.
[ಅಧ್ಯಯನ ಪ್ರಶ್ನೆಗಳು]
a ವರ್ನ್ರ ಮಾತುಗಳಲ್ಲಿ, “ಯಾವುದೇ ಬರವಣಿಗೆ, ಹಸ್ತಾಕ್ಷರ ಅಥವಾ ವಿನ್ಯಾಸದ ಪಡಿಯಚ್ಚಿನ ರವಾನೆಯನ್ನು ಬಹಳ ದೂರದ ಅಂತರಗಳಲ್ಲಿ ಅನುಮತಿಸಿದ ಛಾಯಾಪ್ರತೀಕ ತಂತೀಟಪಾಲು.”—ನ್ಯೂಸ್ವೀಕ್, ಅಕ್ಟೋಬರ್ 10, 1994.
b “ನಿಮ್ಮ ಮಗುವು ಏನನ್ನು ಓದತಕ್ಕದ್ದು?” ಎಂಬ ಲೇಖನವನ್ನು, 1978, ಮಾರ್ಚ್ 22ರ ಅವೇಕ್! ಸಂಚಿಕೆಯಲ್ಲಿ ನೋಡಿರಿ.
[ಪುಟ 8 ರಲ್ಲಿರುವ ಚಿತ್ರ]
ಹೆತ್ತವರು ತಮ್ಮ ಮಕ್ಕಳ ಮನೋರಂಜನೆಯ ಮೇಲ್ವಿಚಾರಣೆ ಮಾಡತಕ್ಕದ್ದು
[ಪುಟ 8 ರಲ್ಲಿರುವ ಚಿತ್ರ]
ವಿಜ್ಞಾನ ಕಲ್ಪನಾ ಕಥೆಯ ವಿಷಯದಲ್ಲಿ ಕ್ರೈಸ್ತರು ಆಯ್ಕೆಮಾಡುವವರಾಗಿರಬೇಕು