ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 1/8 ಪು. 16-19
  • ಸಮುದ್ರದ ಸ್ಫಟಿಕ ಭವನಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮುದ್ರದ ಸ್ಫಟಿಕ ಭವನಗಳು
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮೂಲ ಮತ್ತು ಜೀವನಚಕ್ರ
  • ನೀರ್ಗಲ್ಲ ಗುಡ್ಡಗಳ ವಲಸೆ ಹೋಗುವಿಕೆ
  • ನೀರ್ಗಲ್ಲ ಗುಡ್ಡಗಳು ನಮ್ಮ ಜೀವಿತಗಳ ಮೇಲೆ ಪರಿಣಾಮ ಬೀರುವ ವಿಧ
  • ಯೆಹೋವನ ಸೃಷ್ಟಿಯ ಒಂದು ಅದ್ಭುತ
  • ಐಸ್‌ ಕ್ರೀಮಿನ ಇತಿಹಾಸ
    ಎಚ್ಚರ!—1994
  • ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಎಚ್ಚರ!—1996
g96 1/8 ಪು. 16-19

ಸಮುದ್ರದ ಸ್ಫಟಿಕ ಭವನಗಳು

ಕೆನಡದ ಎಚ್ಚರ! ಸುದ್ದಿಗಾರರಿಂದ

“ನೀರ್ಗಲ್ಲ ಗುಡ್ಡ ನೇರ ಮುಂದಿದೆ!” ಎಂದು ಕೂಗುತ್ತಾನೆ ವ್ಯಾಕುಲಿತ ಕಾವಲುಗಾರ. ಹಡಗಿನ ವೇದಿಕೆಯಲ್ಲಿದ್ದ ನಾವಿಕ ತಂಡವು ಒಡನೆ ಪ್ರತಿಕ್ರಿಯಿಸುತ್ತದೆ. ಆಘಾತವನ್ನು ತಪ್ಪಿಸಲು ಎಂಜಿನುಗಳನ್ನು ಹಿಂಗೇರಲಾಗುತ್ತದೆ. ಆದರೆ ಸಮಯ ಮೀರಿಹೋಗುತ್ತದೆ. ಹಡಗಿನ ಬಲಪಕ್ಕಕ್ಕೆ ಮಾರಕವಾದ ಸೀಳುಗಾಯವಾಗುತ್ತದೆ.

ಮೂರು ತಾಸುಗಳಿಗೂ ಕಡಮೆ ಸಮಯದೊಳಗೆ ಆಗ ಜಗತ್ತಿನ ಅತಿ ದೊಡ್ಡ ಸುಖಭೋಗಪ್ರದ ಹಡಗನ್ನು ಉತ್ತರ ಅಟ್ಲಾಂಟಿಕ್‌ ಸಾಗರವು ನುಂಗಿಬಿಡುತ್ತದೆ. ಎಪ್ರಿಲ್‌ 15, 1912ರಂದು, ಯೂರೋಪ್‌ನಿಂದ ಉತ್ತರ ಅಮೆರಿಕಕ್ಕೆ ಮಾಡುತ್ತಿದ್ದ ತನ್ನ ಪ್ರಪ್ರಥಮ ಸಮುದ್ರಯಾನದ ಕೇವಲ ಐದನೆಯ ದಿವಸದಲ್ಲಿ ಟೈಟ್ಯಾನಿಕ್‌, ಮೇಲ್ಮೈಯಿಂದ ನಾಲ್ಕು ಕಿಲೊಮೀಟರ್‌ಗಳಷ್ಟು ಕೆಳಗಿನ ಸಾಗರತಳದಲ್ಲಿ ಬಂದು ನೆಲೆಸುತ್ತದೆ. ಸುಮಾರು 1,500 ಪ್ರಯಾಣಿಕರೂ ನಾವಿಕ ತಂಡವೂ ಸಮುದ್ರದಲ್ಲಿ ಸಾಯುತ್ತದೆ.

ಆದರೆ ಆ ಮಹಾ ಹಿಮಗಡ್ಡೆಯಲ್ಲಿ ಏನು ಉಳಿದಿತ್ತು? ಅದು ಕಾರ್ಯತಃ ಹಾನಿತಟ್ಟಿಲ್ಲದ್ದಾಗಿತ್ತು. ಅದರ ತುದಿ ಮಾತ್ರ ಟೈಟ್ಯಾನಿಕ್‌ಗೆ ಬಡಿಯಿತು. ಮರುದಿವಸ ಅದು ದಕ್ಷಿಣಕ್ಕೆ ಹೆಚ್ಚು ಬೆಚ್ಚಗಿನ ನೀರುಗಳ ಕಡೆಗೆ, ಏನೂ ಸಂಭವಿಸಿಲ್ಲದ ಹಾಗೆ ತೇಲಿಕೊಂಡು ಹೋಗುವುದನ್ನು ಶೋಧಕರು ಕಂಡುಹಿಡಿದರು. ಆ ಗುಡ್ಡದ ಸಾವು, ಕ್ರಮೇಣ ಆ ವಿಶಾಲ ಸಾಗರದಲ್ಲಿ ಅದರ ಕರಗಿಹೋಗುವಿಕೆಯು, ಬೇಗನೇ ಮರೆತುಹೋಗಲಿಕ್ಕಿತ್ತು. ಆದರೆ ಟೈಟ್ಯಾನಿಕ್‌ನ ಮುಳುಗುವಿಕೆಯು ಈಗಲೂ ತಲ್ಲಣಗೊಳಿಸುವ ಸಮುದ್ರ ಅನಾಹುತವಾಗಿ ಜ್ಞಾಪಿಸಿಕೊಳ್ಳಲ್ಪಡುತ್ತದೆ.

ನೀರ್ಗಲ್ಲ ಗುಡ್ಡಗಳು! ಅವು ಎಷ್ಟೋ ಆಕರ್ಷಕವೂ ಭವ್ಯವೂ ಆಗಿದ್ದರೂ ಅಷ್ಟೇ ಸಗ್ಗದವೂ ಆಗಿವೆ. ನೀವು ಎಂದಾದರೂ ಅವನ್ನು ಹತ್ತಿರದಲ್ಲಿ ನೋಡಿ, ಮನುಷ್ಯನ ಮೇಲೂ ನಿಸರ್ಗದ ಮೇಲೂ ಅವುಗಳು ಹಾಕುವ ಪ್ರಭಾವವನ್ನು ಗ್ರಹಿಸಿದ್ದುಂಟೊ? ಅವು ಏಕೆ ಮತ್ತು ಹೇಗೆ ಅಸ್ತಿತ್ವಕ್ಕೆ ಬರುತ್ತವೆಂದು ತಿಳಿಯಲು ನಿಮಗೆ ಮನಸ್ಸಿದೆಯೆ? ಮತ್ತು ಸಮುದ್ರದಲ್ಲಿರುವ ಜನರನ್ನು ನೀರ್ಗಲ್ಲ ಗುಡ್ಡಗಳಿಂದ ಬರಬಹುದಾದ ಅಪಾಯಗಳಿಂದ ಕಾಪಾಡಲು ಏನು ಮಾಡಲಾಗುತ್ತದೆ? (“ಇಂಟರ್‌ನ್ಯಾಷನಲ್‌ ಐಸ್‌ ಪೆಟ್ರೋಲ್‌” ಎಂಬ ರೇಖಾಚೌಕ ನೋಡಿ.)

ಮೂಲ ಮತ್ತು ಜೀವನಚಕ್ರ

ನೀರ್ಗಲ್ಲ ಗುಡ್ಡಗಳು ಸೀನೀರಿನ ದೈತ್ಯಾಕಾರದ ಹಿಮಗಟ್ಟಿಗಳಂತಿವೆ. ಅವು ಉತ್ತರದಿಂದ ಮತ್ತು ದಕ್ಷಿಣ ಧ್ರುವದಲ್ಲಿರುವ ನೀರ್ಗಲ್ಲ ನದಿ ಮತ್ತು ಹಿಮಹರವುಗಳಿಂದ ಬರುತ್ತವೆ. ದಕ್ಷಿಣ ಧ್ರುವ ಹಿಮರಾಶಿಯು ಭೂಮಿಯ ನೀರ್ಗಲ್ಲ ಗುಡ್ಡಗಳಲ್ಲಿ ಸುಮಾರು 90 ಪ್ರತಿಶತವನ್ನು ಉತ್ಪಾದಿಸುತ್ತದೆಂದು ನಿಮಗೆ ಗೊತ್ತಿತ್ತೊ? ಅದು ಅತಿ ದೊಡ್ಡದಾಗಿರುವವುಗಳನ್ನೂ ಉತ್ಪನ್ನ ಮಾಡುತ್ತದೆ. ಇವು ನೀರಿನ ಮೇಲ್ಮೈಯಿಂದ 100 ಮೀಟರ್‌ಗಳಷ್ಟೂ ಎತ್ತರ ನಿಂತು, 300 ಕಿಲೊಮೀಟರ್‌ ಉದ್ದ ಮತ್ತು 90 ಕಿಲೊಮೀಟರ್‌ ಅಗಲವುಳ್ಳವುಗಳಾಗಿರಬಲ್ಲವು. ದೊಡ್ಡ ನೀರ್ಗಲ್ಲ ಗುಡ್ಡಗಳು 20 ಲಕ್ಷ ಟನ್ನುಗಳಿಂದ ನಾಲ್ಕು ಕೋಟಿ ಟನ್ನುಗಳಷ್ಟು ಭಾರವಾಗಿರಬಲ್ಲವು. ಮತ್ತು ಹಿಮದ ಹಳುಕುಗಳಂತೆ ಯಾವುದೇ ಎರಡು ಗುಡ್ಡಗಳು ಸದೃಶವಾಗಿ ಕಾಣಿಸುವುದಿಲ್ಲ. ಕೆಲವು ಪದರ ಪದರವಾಗಿರುತ್ತವೆ ಅಥವಾ ಸಮತಲ ನೆತ್ತಿಯವಾಗಿರುತ್ತವೆ. ಬೇರೆಯವುಗಳು ಬೆಣೆಯಾಕಾರದವುಗಳು, ಚಾವಣಿ ಅಥವಾ ಗುಮ್ಮಟವಿರುವಂತಹವುಗಳಾಗಿರುತ್ತವೆ.

ಸಾಧಾರಣವಾಗಿ, ಒಂದು ನೀರ್ಗಲ್ಲ ಗುಡ್ಡದ ವಿಸ್ತಾರ್ಯದ ಏಳನೆಯ ಒಂದರಿಂದ ಹತ್ತನೆಯ ಒಂದು ಅಂಶವು ಮಾತ್ರ ನೀರಿನ ಮೇಲೆ ತೋರಿಬರುತ್ತದೆ. ವಿಶೇಷವಾಗಿ ಚಪ್ಪಟೆ ತುದಿಯ ನೀರ್ಗಲ್ಲ ಗುಡ್ಡಗಳ ವಿಷಯದಲ್ಲಿ ಇದು ಸತ್ಯವಾಗಿದೆ. ಒಂದು ಐಸ್‌ ಕ್ಯೂಬ್‌ ಒಂದು ಗ್ಲಾಸ್‌ ನೀರಿನಲ್ಲಿ ತೇಲುತ್ತಿರುವಾಗ ನೀವು ಏನು ನೋಡುತ್ತೀರೊ ಹೆಚ್ಚುಕಡಮೆ ಅದರಂತೆ ಇದು ಇದೆ. ಆದರೂ, ಆ ಗುಡ್ಡದ ಆಕಾರದ ಮೇಲೆ ಹೊಂದಿಕೊಂಡು ತೋರಿಬರುವ ಮಂಜುಗಡ್ಡೆಗೂ ಮುಳುಗಿರುವ ಮಂಜುಗಡ್ಡೆಗೂ ಇರುವ ಈ ಪ್ರಮಾಣವು ಭಿನ್ನವಾಗಿರುತ್ತದೆ.

ದಕ್ಷಿಣ ಧ್ರುವದ ನೀರ್ಗಲ್ಲ ಗುಡ್ಡಗಳು ಚಪ್ಪಟೆ ತುದಿ ಮತ್ತು ಚಪ್ಪಟೆ ಬದಿಗಳಿರುವ ಪ್ರವೃತ್ತಿಯುಳ್ಳವುಗಳಾಗಿರುವಾಗ, ಉತ್ತರ ಧ್ರುವದ ನೀರ್ಗಲ್ಲ ಗುಡ್ಡಗಳು ಅನೇಕ ವೇಳೆ ಅಸಮ ರೂಪದವುಗಳೂ ಗೋಪುರಾಕೃತಿಯವುಗಳೂ ಆಗಿವೆ. ಗ್ರೀನ್ಲೆಂಡನ್ನು ಆವರಿಸಿರುವ ಮಹಾ ಹಿಮರಾಶಿಯಿಂದ ಹೆಚ್ಚಾಗಿ ಬರುವ ಈ ಕೊನೆಯವುಗಳು, ಅಟ್ಲಾಂಟಿಕನ್ನು ಅಡ್ಡಹಾಯುವ ಹಡಗು ಮಾರ್ಗಗಳಿಗೆ ತೇಲಿ ಬರಬಹುದಾಗಿರುವುದರಿಂದ ಮನುಷ್ಯನಿಗೆ ಅತ್ಯಂತ ಮಹಾ ಅಪಾಯ ಬೆದರಿಕೆಯನ್ನು ಒಡ್ಡುತ್ತವೆ.

ಆದರೆ ನೀರ್ಗಲ್ಲ ಗುಡ್ಡಗಳು ಹೇಗೆ ಉಂಟಾಗುತ್ತವೆ? ಭೂಮಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ, ಹಿಮದ ಶೇಖರಣೆ ಮತ್ತು ಘನೀಭವಿಸುವ ಮಳೆಯು ಅನೇಕ ವೇಳೆ ಕರಗುವಿಕೆ ಮತ್ತು ಬಾಷ್ಪೀಕರಣವನ್ನು ಮೀರಿ ಹೋಗುತ್ತದೆ. ಅದು ಜಮೀನಿನ ಮೇಲ್ಮೈಗಳ ಮೇಲೆ ಬೆಳೆಯುವ ಹಿಮದ ಪದರಗಳನ್ನು ನೀರ್ಗಲ್ಲ ಮಂಜುಗಡ್ಡೆಯಾಗುವಂತೆ ಮಾಡುತ್ತದೆ. ಪ್ರತಿ ವರ್ಷ, ಹೆಚ್ಚು ಹಿಮ ಮತ್ತು ಮಳೆ ಬಿದ್ದಂತೆ, ಮುಂದುವರಿಯುವ ಗಟ್ಟಿಯಾಗುವಿಕೆ ಸಂಭವಿಸುತ್ತದೆ. ಇದು ಗ್ರೀನ್ಲೆಂಡ್‌ನ ಹಾಗಿರುವ ವಿಸ್ತಾರವಾದ ನೆಲಪ್ರದೇಶದಲ್ಲಿ ಭಾರಿ ನೀರ್ಗಲ್ಲಿನ ಖಂಡಗಳನ್ನು ಉಂಟುಮಾಡುತ್ತದೆ. ಕ್ರಮೇಣ, ಆ ಮಂಜುಗಡ್ಡೆಯು, ಭಾರವಾದ ನೀರ್ಗಲ್ಲ ನದಿಯು ಎತ್ತರದ ಇಳುಕಲುಗಳಿಂದ ಕಣಿವೆಗಳಿಗೆ ಮತ್ತು ಅಂತಿಮವಾಗಿ ಸಮುದ್ರಕ್ಕೆ ತೀರ ನಿಧಾನವಾಗಿ ಜಾರಿಹೋಗುವಷ್ಟು ದಪ್ಪವಾದ ಮತ್ತು ಗಟ್ಟಿಯಾಗಿರುವ ಸ್ಥಿತಿಯನ್ನು ಮುಟ್ಟುತ್ತದೆ. ಈ ವಲಸೆ ಹೋಗುವಿಕೆಯನ್ನು ವರ್ಣಿಸುವುದರಲ್ಲಿ, ಉತ್ತರ ಧ್ರುವ, ದಕ್ಷಿಣ ಧ್ರುವ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಬರ್ನರ್ಡ್‌ ಸ್ಟೋನ್ಹೌಸ್‌ ಹೇಳಿದ್ದು: “ಗಟ್ಟಿ ಮಂಜುಗಡ್ಡೆಯು ಸ್ಥಿತಿಸ್ಥಾಪಕ ಗುಣವುಳ್ಳದ್ದಾದರೂ ಅದನ್ನು ಸುಲಭವಾಗಿ ರೂಪುಗೆಡಿಸಬಹುದು; ಒತ್ತಡ ಬಿದ್ದಾಗ ಅದರ ಷಡ್ಭುಜಾಕಾರದ ಸ್ಫಟಿಕಗಳು ಸಾಲುಗೂಡಿ, ಬಳಿಕ ಒಂದರ ಮೇಲೊಂದು ಜಾರಿ ನಾವು ಹಿಮನದಿಗಳೊಂದಿಗೆ ಜೊತೆಗೂಡಿಸುವ ಹರಿಯುವಿಕೆ ಮತ್ತು ಕುಸಿದು ಬೀಳುವಿಕೆಯನ್ನು ಉಂಟುಮಾಡುತ್ತದೆ.”

ಒಂದು ಹಿಮನದಿಯು ಅಸಮತಟ್ಟಾದ ಪ್ರದೇಶದಲ್ಲಿ ತಣ್ಣಗಾದ ಕಾಕಂಬಿಯಂತೆ, ಅತಿ ನಿಧಾನವಾಗಿ ಹರಿಯುವುದನ್ನು ಊಹಿಸಿಕೊಳ್ಳಿರಿ. ಆಗಲೇ ಆಳವಾಗಿ ಲಂಬಿಸಿದ ಬಿರುಕುಗಳನ್ನು ಹೊತ್ತುಕೊಂಡಿರುವ ಈ ದೈತ್ಯಾಕಾರದ ಹಿಮ ಹರವು ಅದು ಕರಾವಳಿಯನ್ನು ಮುಟ್ಟಿದಾಗ, ಒಂದು ಪ್ರೇಕ್ಷಣೀಯ ಪ್ರಕೃತಿ ಘಟನೆಯನ್ನು ಉತ್ಪಾದಿಸುವಂತೆ ಇನ್ನೂ ಹೆಚ್ಚು ಪ್ರಭಾವಿಸಲ್ಪಡುವುದು. ಭರತವಿಳಿತಗಳು, ಬಗ್ಗಿಸುವ ಅಲೆಗಳು ಮತ್ತು ನೀರಿನಡಿಯ ಕೊರೆತಗಳ ಸಂಯೋಜಿತ ಪರಿಣಾಮಗಳ ಕಾರಣ, ಸಮುದ್ರದಲ್ಲಿ ಸುಮಾರು 40 ಕಿಲೊಮೀಟರುಗಳಷ್ಟು ದೂರ ಹರಡಬಲ್ಲ ಸೀನೀರಿನ ಮಂಜುಗಡ್ಡೆಯ ಒಂದು ದೊಡ್ಡ ತುಂಡು ಗುಡುಗಾಡುತ್ತ ಆ ನೀರ್ಗಲ್ಲ ನದಿಯಿಂದ ಪ್ರತ್ಯೇಕವಾಗುವುದು. ಒಂದು ನೀರ್ಗಲ್ಲ ಗುಡ್ಡ ಜನಿಸುತ್ತದೆ! ಒಬ್ಬ ಪ್ರೇಕ್ಷಕನು ಅದನ್ನು, ಒಂದು “ತೇಲಾಡುತ್ತಿರುವ ಸ್ಫಟಿಕದ ಕೋಟೆಮನೆ”ಯೋಪಾದಿ ವರ್ಣಿಸಿದನು.

ಉತ್ತರ ಧ್ರುವದಲ್ಲಿ, ವಾರ್ಷಿಕವಾಗಿ 10,000ದಿಂದ 15,000 ನೀರ್ಗಲ್ಲ ಗುಡ್ಡಗಳು ರಚಿಸಲ್ಪಡುತ್ತವೆ. ಆದರೂ ತುಲನಾತ್ಮಕವಾಗಿ ಮಾತಾಡುವುದಾದರೆ, ಕೇವಲ ಕೆಲವು ನ್ಯೂಫಂಡ್ಲಂಡ್‌ ಕರಾವಳಿಯ ಉದ್ದಕ್ಕಿರುವ ತೆಂಕಣ ನೀರುಗಳನ್ನು ತಲಪುತ್ತವೆ. ಹಾಗೆ ತಲಪಿದವುಗಳಿಗೆ ಏನು ಸಂಭವಿಸುತ್ತದೆ?

ನೀರ್ಗಲ್ಲ ಗುಡ್ಡಗಳ ವಲಸೆ ಹೋಗುವಿಕೆ

ನೀರ್ಗಲ್ಲ ಗುಡ್ಡಗಳು ಒಡೆದಾದ ಬಳಿಕ ಸಾಗರ ಪ್ರವಾಹವು, ಕೆಲವನ್ನು ಪಶ್ಚಿಮ ಮತ್ತು ದಕ್ಷಿಣಕ್ಕೆ ಮತ್ತು ಅಂತಿಮವಾಗಿ ನೀರ್ಗಲ್ಲ ಗಲ್ಲಿಯೆಂದು ಅಡ್ಡ ಹೆಸರಿರುವ ಲ್ಯಾಬ್ರಡರ್‌ ಸಮುದ್ರಕ್ಕೆ ಕೊಂಡೊಯ್ಯುವ ಮೊದಲು, ಅವುಗಳಲ್ಲಿ ಹೆಚ್ಚಿನವಕ್ಕೆ ಒಂದು ವ್ಯಾಪಿಸಿದ ಪಯಣವನ್ನು ಮಾಡಿಸುತ್ತದೆ. ತಮ್ಮ ಜನ್ಮ ಸ್ಥಳದಿಂದ ಲ್ಯಾಬ್ರಡರ್‌ ಮತ್ತು ನ್ಯೂಫಂಡ್ಲಂಡ್‌ನಾಚೆ, ತೆರೆದ ಅಟ್ಲಾಂಟಿಕ್‌ನೊಳಗೆ ಸುಮಾರು ಎರಡು ವರ್ಷಗಳ ತೇಲಾಟವನ್ನು ಪಾರಾಗುವ ನೀರ್ಗಲ್ಲ ಗುಡ್ಡಗಳು ಒಂದು ಅಲ್ಪಕಾಲಿಕ ಆಯುಷ್ಯವನ್ನು ಅನುಭವಿಸುತ್ತವೆ. ಹೆಚ್ಚು ಬೆಚ್ಚಗಿರುವ ನೀರುಗಳೊಳಗೆ ತೇಲಿಕೊಂಡು ಹೋಗುವಾಗ ಅವು ಕರಗುವಿಕೆ, ಕೊರೆತ ಮತ್ತು ಹೆಚ್ಚು ಒಡೆಯುವಿಕೆಯಿಂದಾಗಿ ವ್ಯಾಪಕ ಕ್ಷಯಿಸುವಿಕೆಯನ್ನು ಅನುಭವಿಸುತ್ತವೆ.

ರೂಢಿಯಂತೆ, ದಿನದ ಸಮಯದಲ್ಲಿ ಮಂಜುಗಡ್ಡೆಯು ಕರಗಿ ನೀರು ಬಿರುಕುಗಳಲ್ಲಿ ಶೇಖರವಾಗುತ್ತದೆ. ರಾತ್ರಿಯಲ್ಲಿ ಆ ನೀರು ಹೆಪ್ಪುಗಟ್ಟಿ ಈ ಬಿರುಕುಗಳಲ್ಲಿ ಉಬ್ಬುವುದರಿಂದ ಅದು ತುಂಡುಗಳು ಒಡೆಯುವಂತೆ ಮಾಡುತ್ತದೆ. ಇದು ಆ ಗುಡ್ಡದ ಆಕಾರದಲ್ಲಿ ಥಟ್ಟನೆ ಒಂದು ಬದಲಾವಣೆಯನ್ನು ಉಂಟುಮಾಡಿ ಅದರ ಗುರುತ್ವಾಕರ್ಷಣ ಕೇಂದ್ರವನ್ನು ಬದಲಾಯಿಸುತ್ತದೆ. ಆ ಮಂಜುಗಡ್ಡೆಯ ರಾಶಿಯು ತರುವಾಯ ನೀರಿನಲ್ಲಿ ಉರುಳಿ ಬೀಳುವುದರಿಂದ, ಒಂದು ಪೂರ್ತಿ ಹೊಸತಾದ ನೀರ್ಗಲ್ಲ ಶಿಲ್ಪಕಲೆಯನ್ನು ಬಯಲು ಮಾಡುತ್ತದೆ.

ಈ ಚಕ್ರ ಮುಂದುವರಿಯುತ್ತ ಈ ಮಂಜುಗಡ್ಡೆಯ ಕೋಟೆಮನೆಗಳು ಹೋಳಾಗುವ ಮೂಲಕ ಗಾತ್ರದಲ್ಲಿ ಇನ್ನೂ ಚಿಕ್ಕವಾಗುತ್ತ ಹೋಗುವಾಗ, ಅವು “ಬರ್ಗೀ ಬಿಟ್ಸ್‌” ಎಂದು ಕರೆಯಲ್ಪಡುವ ಒಂದು ಸಾಮಾನ್ಯ ಮನೆಯ ಗಾತ್ರದ ಮತ್ತು “ಗ್ರೌಲರ್ಸ್‌” (ಗುರುಗುಟ್ಟಿಗಗಳು) ಎಂದು ಕರೆಯಲ್ಪಡುವ ಸುಮಾರು ಒಂದು ಕೋಣೆಯ ಗಾತ್ರದ ತಮ್ಮ ಸ್ವಂತ ನೀರ್ಗಲ್ಲ ಗುಡ್ಡಗಳನ್ನು ಉತ್ಪನ್ನ ಮಾಡುತ್ತವೆ. ಅವು ಅಲೆಗಳಲ್ಲಿ ತೇಲುತ್ತಿರುವಾಗ ಮಾಡುವ ಸದ್ದಿನ ಕಾರಣ ಆ ಕೊನೆಯವುಗಳನ್ನು ಹಾಗೆ ಹೆಸರಿಸಲಾಗಿದೆ. ಹೆಚ್ಚು ಸಣ್ಣದಾದ ಕೆಲವು ಗುರುಗುಟ್ಟಿಗಗಳು ಕರಾವಳಿಯ ಮತ್ತು ಕಡಲ ಒಳಚಾಚುಗಳ ಆಳಕಡಮೆಯಾದ ನೀರುಗಳಲ್ಲಿ ಹೊರಳಿ ಬೀಳಲೂಬಹುದು.

ಪರಿಸ್ಥಿತಿಗಳು ಏನೇ ಇರಲಿ, ಹೆಚ್ಚು ತೆಂಕಣ ನೀರುಗಳಲ್ಲಿನ ಪರಿಸರವು, ನೀರ್ಗಲ್ಲ ಗುಡ್ಡವನ್ನು ಸೀನೀರಿನ ಮಂಜುಗಡ್ಡೆಯ ಚಿಕ್ಕ ತುಂಡುಗಳಾಗಿ ಶೀಘ್ರವಾಗಿ ಶಿಥಿಲಗೊಳಿಸಿ, ತರುವಾಯ ಅದು ಬಲಾಢ್ಯ ಸಾಗರದ ಭಾಗವಾಗುವಂತೆ ಮಾಡುವುದು. ಆದರೆ ಅದು ಸಂಭವಿಸುವ ತನಕ ನೀರ್ಗಲ್ಲ ಗುಡ್ಡಗಳೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು.

ನೀರ್ಗಲ್ಲ ಗುಡ್ಡಗಳು ನಮ್ಮ ಜೀವಿತಗಳ ಮೇಲೆ ಪರಿಣಾಮ ಬೀರುವ ವಿಧ

ತಮ್ಮ ಜೀವನೋಪಾಯಕ್ಕಾಗಿ ಮಹಾ ಸಾಗರದ ಮೇಲೆ ಆತುಕೊಳ್ಳುವ ಬೆಸ್ತರು, ನೀರ್ಗಲ್ಲ ಗುಡ್ಡಗಳನ್ನು ಒಂದು ಪೀಡೆಯೆಂದೂ ಒಂದು ಅಪಾಯವೆಂದೂ ನೋಡುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಒಬ್ಬ ಬೆಸ್ತನು ಹೇಳಿದ್ದು: “ಪ್ರವಾಸಿಗಳು ನೀರ್ಗಲ್ಲ ಗುಡ್ಡವನ್ನು ಬಯಸಬಹುದು, ಆದರೆ ಒಬ್ಬ ಬೆಸ್ತನಿಗೆ ಅದು ಅಪಾಯದ ಸಾಧ್ಯತೆಯುಳ್ಳದ್ದು.” ಬೆಸ್ತರು ತಮ್ಮ ಮೀನುಹಿಡಿತವನ್ನು ಪರೀಕ್ಷಿಸಲು ಬಂದಾಗ, ಒಂದು ನೀರ್ಗಲ್ಲ ಗುಡ್ಡವು, ಭರತವಿಳಿತ ಮತ್ತು ಪ್ರವಾಹದಿಂದ ಚಲಿಸಲ್ಪಟ್ಟು, ಅವರ ಬೆಲೆಬಾಳುವ ಬಲೆಗಳನ್ನು ಮತ್ತು ಅವರ ಹಿಡಿತವನ್ನು ನಾಶಮಾಡಿರುವುದನ್ನು ಕಂಡುಹಿಡಿದಿದ್ದಾರೆ.

ನೀರ್ಗಲ್ಲ ಗುಡ್ಡಗಳು ಗೌರವಕ್ಕೆ ಅರ್ಹವಾಗಿವೆ. ಒಂದು ಹಾಯಿಹಡಗಿನ ಮುಖ್ಯಸ್ಥನು ಹೇಳುವುದು: “ನಿಮ್ಮ ದೂರವನ್ನಿಟ್ಟುಕೊಳ್ಳುವುದು ಹಿತಕರ. ನೀರ್ಗಲ್ಲ ಗುಡ್ಡಗಳು ತೀರ ಅಭರವಸಾರ್ಹ! ಎತ್ತರವಾಗಿರುವವುಗಳಿಂದ ದೊಡ್ಡ ವಿಭಾಗಗಳು ಒಡೆದುಹೋಗಸಾಧ್ಯವಿದೆ, ಅಥವಾ ಅವು ತಳವನ್ನು ಮುಟ್ಟುವಾಗ ದೊಡ್ಡ ತುಂಡುಗಳು ಒಡೆದು ನಿಮ್ಮ ಕಡೆಗೆ ಎದ್ದುಬರಬಹುದು. ಅಲ್ಲದೆ, ಗುಡ್ಡವು ತಿರುಗುತ್ತ ಹೊರಳಸಾಧ್ಯವಿದೆ. ಇದೆಲ್ಲ ತೀರ ಹತ್ತಿರ ಹೋಗುವ ಯಾವನಿಗೂ ವಿಪತ್ಕಾರಕವಾಗಿರಬಲ್ಲದು!”

ನೀರ್ಗಲ್ಲ ಗುಡ್ಡಗಳಿಂದ ಸಾಗರ ತಳದ ಕೊಚ್ಚಾಟವು ಚಿಂತೆಯ ಇನ್ನೊಂದು ರೂಪವಾಗಿದೆ. “ಒಂದು ಗುಡ್ಡವು ತಳ್ಳಿಹಾಕುವ ನೀರಿನ ಮೊತ್ತವು ನೀರಿನ ಆಳಕ್ಕೆ ಸರಿಸುಮಾರು ಸಮವಾಗಿರುವಲ್ಲಿ, ಅದರ ಬುಡವು ಉದ್ದವೂ ಆಳವೂ ಆದ ಕಾಲುವೆಗಳನ್ನು ಅಗೆಯುತ್ತದೆಂದು ತಿಳಿದುಬರುತ್ತದೆ. ತೈಲ ಪರಿಶೋಧನೆಯ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಯು ತೈಲ ಬಾವಿಸೆಲೆಗಳಂತಹ ಸಮುದ್ರ ತಳದ ಅಳವಡಿಸುವಿಕೆಗಳ ಮೇಲೆ ಧ್ವಂಸಕಾರಕ ಪರಿಣಾಮಗಳನ್ನು ತಂದೀತು,” ಎಂಬುದು ಒಬ್ಬ ಪ್ರೇಕ್ಷಕನ ಅಭಿಪ್ರಾಯ.

ಇಷ್ಟರಲ್ಲಿ ನೀರ್ಗಲ್ಲ ಗುಡ್ಡಗಳಿಲ್ಲದಿರುವುದೇ ನಮಗೆ ಅನುಕೂಲವೆಂದು ನೀವು ಯೋಚಿಸುತ್ತಿರಬಹುದು. ಆದರೆ ನೀರ್ಗಲ್ಲ ಗುಡ್ಡದ ಕಥೆಯೆಲ್ಲ ನಕಾರಾತ್ಮಕವಲ್ಲವೇ ಅಲ್ಲ. ನ್ಯೂಫಂಡ್ಲೆಂಡ್‌ನ ಒಬ್ಬ ನಿವಾಸಿ ಹೇಳಿದ್ದು: “ವರ್ಷಗಳ ಹಿಂದೆ, ಶೈತ್ಯೀಕರಣವು ಸಾಮಾನ್ಯವಾಗುವುದಕ್ಕೆ ಮೊದಲು, ಕರಾವಳಿಯ ಕೆಲವು ಚಿಕ್ಕ ಹಳ್ಳಿಗಳ ಜನರು, ಗುಡ್ಡದ ಚಿಕ್ಕ ತುಂಡುಗಳನ್ನು ಉದ್ಧರಿಸಿ, ನೀರನ್ನು ಹಿಮದಷ್ಟು ತಣ್ಣಗಾಗಿರಿಸಲು ಅವುಗಳನ್ನು ತಮ್ಮ ಬಾವಿಗಳೊಳಗೆ ಹಾಕುತ್ತಿದ್ದರು. ಇನ್ನೊಂದು ಪದ್ಧತಿಯು, ಗೃಹನಿರ್ಮಿತ ಐಸ್‌ ಕ್ರೀಮ್‌ ತಯಾರಿಕೆಯಲ್ಲಿ ಸಹಾಯಿಸಲು, ಗುಡ್ಡದ ಮಂಜುಗಡ್ಡೆಯ ತುಂಡುಗಳನ್ನು ಮರದ ಪುಡಿಯ ತೊಟ್ಟಿಗಳಲ್ಲಿ ಸುರಕ್ಷಿತವಾಗಿಡುವುದು ಆಗಿತ್ತು.”

ಈ ತೇಲುವ ಹಿಮನದೀ ಮಂಜುಗಡ್ಡೆಯ ದೊಡ್ಡ ಬೆಟ್ಟಗಳಿಗೆ ವಿಶೇಷವಾಗಿ ಪ್ರವಾಸಿಗಳು ಆಕರ್ಷಿತರಾಗುತ್ತಾರೆ. ಅವರು ನ್ಯೂಫಂಡ್ಲೆಂಡ್‌ನ ಒಡ್ಡೊಡ್ಡಾದ ಸಮುದ್ರ ತೀರದಲ್ಲಿ ಅಟ್ಲಾಂಟಿಕ್‌ನ ಸುತ್ತುನೋಟವನ್ನು ಪಡೆಯಲು, ಈ ಸಮುದ್ರ ದೈತ್ಯರನ್ನು ನೋಡಿ ತಮ್ಮ ಕಣ್ಣುಗಳಿಗೆ ಸಂತೃಪ್ತಿಯನ್ನು ತರಲು ಅನುಕೂಲಕರವಾದ ವೀಕ್ಷಣ ಸ್ಥಳಗಳನ್ನು ಹುಡುಕುತ್ತಾರೆ. ಆ ಕ್ಷಣವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಲು ಕ್ಯಾಮರಗಳು ಕ್ಲಿಕ್ಕಿಸಲ್ಪಡುತ್ತವೆ.

ಕುಡಿಯುವ ನೀರಿನ ಬಹುಮಟ್ಟಿಗೆ ಅನಂತ ಸರಬರಾಯಿಯನ್ನು ಮಾಡುವ ಸಾಮರ್ಥ್ಯವೂ ನೀರ್ಗಲ್ಲ ಗುಡ್ಡಗಳಿಗಿದೆ. ಅಭೂತಪೂರ್ವ ಜಲಮಾಲಿನ್ಯದ ಈ ದಿನಗಳಲ್ಲಿ, ನೀರ್ಗಲ್ಲ ಗುಡ್ಡದ ಜಲವನ್ನು ಬಟ್ಟಿಯಿಳಿಸಿ, ಸೀಸೆಗಳಲ್ಲಿ ಹಾಕುವುದು ಕ್ರಮೇಣ ಒಂದು ಕಾರ್ಯಸಾಧ್ಯ ವ್ಯಾಪಾರವಾಗಬಲ್ಲದು. ದೊಡ್ಡ ಪ್ರಮಾಣಗಳಲ್ಲಿ, ಒಂದು ದೈತ್ಯಾಕಾರದ “ಐಸ್‌ ಕ್ಯೂಬ್‌” ಅನ್ನು ಕಂಡುಹಿಡಿದು ಅದನ್ನು ಸಂಸ್ಕರಿಸಲಿಕ್ಕಾಗಿ ಬಂದರಿಗೆ ಎಳೆದು ತರುವುದು ಸುಲಭ ವಿಷಯವಾಗಿ ತೋರಬಹುದು. ಆದರೆ ವಾಸ್ತವದಲ್ಲಿ, ಅದು ಇದುವರೆಗೆ ದುಸ್ಸಾಧ್ಯವಾಗಿ ಪರಿಣಮಿಸಿರುವ ಬೃಹದಾಕಾರದ ಪಂಥಾಹ್ವಾನವಾಗಿದೆ.

ಯೆಹೋವನ ಸೃಷ್ಟಿಯ ಒಂದು ಅದ್ಭುತ

ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತನು ಪ್ರಶ್ನಿಸುವುದು: “ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು?” (ಯೋಬ 38:29) ಇದು ಎಲೀಹುವಿಗೆ ಗೊತ್ತಿತ್ತು, ಏಕೆಂದರೆ ಅವನು ಆ ಮೊದಲು, “ದೇವರ ಶ್ವಾಸದಿಂದ ನೀರು ಮಂಜುಗಡ್ಡೆಯಾಗುವುದು,” ಎಂದು ಹೇಳಿದ್ದನು.—ಯೋಬ 37:10.

ಹೀಗೆ, ನಾವು ಈ ಉನ್ನತವಾಗಿರುವ, ಥಳಥಳಿಸುವ ಸಮುದ್ರದ ಅದ್ಭುತಗಳನ್ನು ನೋಡುವಾಗ, ನಮ್ಮ ಆಲೋಚನೆಗಳು ಅವುಗಳನ್ನು ಅಲ್ಲಿ ಇಟ್ಟಿರುವ ಸೃಷ್ಟಿಕರ್ತನ ಬಳಿ ತಿರುಗುತ್ತವೆ. ಕೀರ್ತನೆಗಾರನಂತೆ ನಾವು ಹೀಗೆನ್ನುತ್ತೇವೆ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” ಅವನು ಕೂಡಿಸುವುದು: “ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆ.”—ಕೀರ್ತನೆ 104:24; 139:14.

ಸತ್ಯವಾಗಿಯೂ, ಯೆಹೋವನು ಆಶ್ಚರ್ಯಕಾರಕ ದೇವರು. ನಾವು ಆತನನ್ನು ಹೆಚ್ಚು ಉತ್ತಮವಾಗಿ ಪರಿಚಯ ಮಾಡಿಕೊಳ್ಳಲು ಎಷ್ಟು ಹಂಬಲಿಸುತ್ತೇವೆ! ಆತನ ವಾಕ್ಯಕ್ಕೆ ಗಮನಕೊಡುವ ಮೂಲಕ ನಾವು ಹಾಗೆ ಮಾಡಬಲ್ಲೆವು.—ರೋಮಾಪುರ 11:33.

[ಪುಟ 29 ರಲ್ಲಿರುವ ಚೌಕ]

ಇಂಟರ್‌ನ್ಯಾಷನಲ್‌ ಐಸ್‌ ಪಟ್ರೋಲ್‌

ಟೈಟ್ಯಾನಿಕ್‌ ಪ್ರಯಾಣಿಕ ಹಡಗು ದುರಂತದ ತರುವಾಯ, ನೀರ್ಗಲ್ಲ ಗುಡ್ಡಗಳನ್ನು ಕಂಡುಹಿಡಿಯಲು, ಸಾಗರ ಮತ್ತು ಗಾಳಿಯ ಸೆಳೆತದ ಮೇಲೆ ಆಧಾರಿಸಿ ಅವುಗಳ ಚಲನೆಯನ್ನು ಮುಂತಿಳಿಸಲು ಮತ್ತು ಸಾರ್ವಜನಿಕರಿಗೆ ಐಸ್‌ ಎಚ್ಚರಿಕೆಗಳನ್ನು ಕೊಡಲು, 1914ರಲ್ಲಿ ಇಂಟರ್‌ನ್ಯಾಷನಲ್‌ ಐಸ್‌ ಪಟ್ರೋಲ್‌ (ಐಐಪಿ) ಅನ್ನು ಸ್ಥಾಪಿಸಲಾಯಿತು. ಸಮುದ್ರದ ಈ ಸ್ಫಟಿಕ ದೈತ್ಯರುಗಳಿಂದ ರಕ್ಷಣೆಯನ್ನು ಒದಗಿಸುವ ದೃಷ್ಟಿಯಿಂದ, ಮಂಜುಗಡ್ಡೆಯ ವೈಲಕ್ಷಣ್ಯಗಳ ಮತ್ತು ವರ್ತನೆಗಳ ಜ್ಞಾನವನ್ನು ಶೇಖರಿಸಲು ಸಕಲ ಪ್ರಯತ್ನವನ್ನೂ ಮಾಡಲಾಗಿದೆ. ಬಳಸಲ್ಪಡುತ್ತಿರುವ ಯಂತ್ರಕಲೆಯಲ್ಲಿ, ವಿಮಾನಗಳಿಂದ ದೃಷ್ಟಿಗೋಚರ ಹಾಗೂ ರೇಡಾರ್‌ ನಿಗಾವಣೆ, ವ್ಯಾಪಾರದ ಹಡಗುಗಳಿಂದ ಮಂಜುಗಡ್ಡೆ ಕಾಣ್ಕೆಯ ವರದಿಗಳು, ಉಪಗ್ರಹ ಛಾಯಾಚಿತ್ರ ಮತ್ತು ಸಾಗರ ವಿವರಣಾ ವಿಶ್ಲೇಷಣಗಳು ಮತ್ತು ಮುನ್ಸೂಚನೆಗಳು ಸೇರಿವೆ.

[Picture on page 16, 17]

ಚಾವಣಿಯುಳ್ಳದ್ದು

ಗುಮ್ಮಟ ಆಕಾರದ್ದು

ಸಮತಲ ನೆತ್ತಿಯುಳ್ಳದ್ದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ