“ಕಾನ್ಕೂ” ವಿಮಾನ ನಿಲ್ದಾಣ ನೋಡಲ್ಪಡುತ್ತದೆ ಆದರೆ ಕೇಳಲ್ಪಡುವುದಿಲ್ಲ
ಜಪಾನಿನ ಎಚ್ಚರ! ಸುದ್ದಿಗಾರರಿಂದ
ವಿಮಾನದ ಮೂಲಕ ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿರುವಾಗ, ಇಂಗ್ಲಿಷ್ನಲ್ಲಿ “ಕಾನ್ಸೈ” ಎಂಬ ಪದದೊಂದಿಗಿರುವ ಒಂದು ದ್ವೀಪವನ್ನು ನೀವು ನೋಡುವಿರಿ.a ಈ ಜಪಾನೀಯರ ದ್ವೀಪವು ಓಸಾಕಾ ಕೊಲ್ಲಿಯಲ್ಲಿನ ಕರಾವಳಿಯಿಂದ ಸುಮಾರು ಐದು ಕಿಲೊಮೀಟರುಗಳಷ್ಟು ದೂರದಲ್ಲಿದೆ. ವಿಮಾನ ನಿಲ್ದಾಣ ಮತ್ತು ಸಂಬಂಧಿತ ಸೌಕರ್ಯಗಳನ್ನು ಮಾತ್ರವೇ ನೋಡಸಾಧ್ಯವಿದೆ. ವಾಸ್ತವವಾಗಿ, ದ್ವೀಪವು ಒಂದು ವಿಮಾನ ನಿಲ್ದಾಣದೋಪಾದಿ ಉಪಯೋಗಿಸಲಿಕ್ಕಾಗಿಯೇ ತಯಾರಿಸಲ್ಪಟ್ಟಿದೆ. ಸೆಪ್ಟಂಬರ್ 1994ರಲ್ಲಿ ಪ್ರಾರಂಭಿಸಲ್ಪಟ್ಟ ವಿಮಾನ ನಿಲ್ದಾಣವು ಕಾನ್ಕೂ ಎಂಬುದಾಗಿ ಅಡ್ಡಹೆಸರಿಸಲ್ಪಟ್ಟಿದೆ, ಇದು ಕಾನ್ಸೈ ಕೋಕೂಸೈ ಕೂಕೋ ಎಂಬ ಅದರ ಜಪಾನೀಯ ಹೆಸರಿನ ಹ್ರಸ್ವ ಪದವಾಗಿದೆ.
ನೀಳದಲ್ಲಿ 3.75 ಕಿಲೊಮಿಟರ್ ಇರುವ, ವೇಗಗತಿಯ ಹೆದ್ದಾರಿ ಸೇತುವೆಯು, ಅದನ್ನು ರಸ್ತೆ ಮತ್ತು ರೈಲಿನ ಮೂಲಕ ಪ್ರಾಪ್ಯಗೊಳಿಸುವಂತೆ ಮಾಡುತ್ತಾ, ವಿಮಾನ ನಿಲ್ದಾಣ ದ್ವೀಪವನ್ನು ಭೂಪ್ರದೇಶದೊಂದಿಗೆ ಜೋಡಿಸುತ್ತದೆ. ದ್ವೀಪವು, ನೌಕೆಗಳಿಗಾಗಿ ಮತ್ತು ಹರಿಗೋಲು ಸಾಗಣೆಯ ಸೇವೆಗಳಿಗಾಗಿ ಬೇಕಾಗಿರುವ ಬಂದರು ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲ್ಪಟ್ಟಿದೆ. ಆದರೆ ವಿಮಾನ ನಿಲ್ದಾಣವೊಂದಕ್ಕಾಗಿ ಇಡೀ ಹೊಸ ದ್ವೀಪವನ್ನು ನಿರ್ಮಿಸಬೇಕು ಏಕೆ?
ಕೇಳಲ್ಪಡದ ಒಂದು ವಿಮಾನ ನಿಲ್ದಾಣ
ಕಾನ್ಸೈ ಕ್ಷೇತ್ರಕ್ಕೆ ಬರುತ್ತಿರುವ ಪ್ರವಾಸಿಗರ ಮತ್ತು ಭೇಟಿಗಾರರ ಅಧಿಕಗೊಳ್ಳುತ್ತಿರುವ ಸಂಖ್ಯೆಯು, ಓಸಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿರುವ ನಿವಾಸಿ ಕ್ಷೇತ್ರದ ಮೇಲೆ ಭಾರಿ ಸದ್ದು ಮಾಡುತ್ತಾ ಹೋಗುವ ವಿಮಾನಗಳ ಸಂಖ್ಯೆಯು ಹೆಚ್ಚುವಂತೆ ಮಾಡಿದೆ. ಅಲ್ಲಿ ಜೀವಿಸುತ್ತಿರುವ ಜನರನ್ನು ಗದ್ದಲದ ತೊಂದರೆಯಿಂದ ಬಿಡುಗಡೆಗೊಳಿಸಲು, ರಾತ್ರಿ 9ರಿಂದ ಬೆಳಗ್ಗೆ 7ರ ತನಕ ಕರ್ಫ್ಯೂ ವಿಧಿಸಲ್ಪಟ್ಟಿತು. 1974ರಿಂದ ಹೆಚ್ಚಿನ ಅಂತಾರಾಷ್ಟ್ರೀಯ ಹಾರಾಟಗಳನ್ನು ಕೂಡಿಸಲು ಅನುಮತಿ ನೀಡಲ್ಪಟ್ಟಿಲ್ಲ. ಹೀಗೆ, ಭೂಪ್ರದೇಶಕ್ಕೆ ಕೇಳಿಸದಂತೆ, ಅಧಿಕಗೊಂಡಿರುವ ಪ್ರಯಾಣಿಕರನ್ನು ಮತ್ತು ಸರಕು ಸಾಗಣೆಯನ್ನು ನಿರ್ವಹಿಸುವ ವಿಮಾನ ನಿಲ್ದಾಣವು ಒಂದು ಜರೂರಿಯಾದ ಅಗತ್ಯವಾಗಿ ಪರಿಣಮಿಸಿತು.
ಆ ಕಾರ್ಯಯೋಜನೆಯಲ್ಲಿ ಒಳಗೊಂಡಿದ್ದವರಿಗೆ— ತೊಂದರೆಯನ್ನುಂಟುಮಾಡದೆ ಹಗಲೂರಾತ್ರಿ ಉಪಯೋಗಿಸಲ್ಪಡಸಾಧ್ಯವಿರುವ ಒಂದು ವಿಮಾನ ನಿಲ್ದಾಣವು—ಒಂದು ಅತಿ ದೊಡ್ಡ ಪಂಥಾಹ್ವಾನವಾಗಿತ್ತು. ತಾನಾಗಿಯೇ ತೋರಿಬಂದ ಏಕಮಾತ್ರ ಪರಿಹಾರವು, ಜನರು ಜೀವಿಸುವ ಸ್ಥಳದಿಂದ ಬಹು ದೂರದಲ್ಲಿ ಒಂದು ದ್ವೀಪವನ್ನು ನಿರ್ಮಿಸುವುದು ಮತ್ತು ಅದನ್ನು ಒಂದು ವಿಮಾನ ನಿಲ್ದಾಣವಾಗಿ ಮಾಡುವುದೇ ಆಗಿತ್ತು. ಅತ್ಯಂತ ದೊಡ್ಡದಾದ ಒಂದು ಕಾರ್ಯಯೋಜನೆಯೇ ಸರಿ!
ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಿ ಕಾರ್ಯನಡೆಸಲಿಕ್ಕೆ ಖಾಸಗಿ ಕಂಪನಿಯೊಂದನ್ನು ಸ್ಥಾಪಿಸುತ್ತಾ, ಸ್ಥಳಿಕ ವ್ಯಾಪಾರ ಲೋಕದೊಂದಿಗೆ ರಾಷ್ಟ್ರೀಯ ಮತ್ತು ಸ್ಥಳಿಕ ಸರಕಾರಗಳು ಜತೆಗೂಡಿ 1,500 ಕೋಟಿ ಡಾಲರಿನ ಕಾರ್ಯಯೋಜನೆಗೆ ಹಣಕಾಸಿನ ನೆರವನ್ನಿತ್ತವು. ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಂಪನಿಯ ನಿರ್ವಾಹಕ ಉಪಾಧ್ಯಕ್ಷರಾದ, ಶ್ರೀ. ಕೇಸೂಕಿ ಕೀಮೂರಾ ಎಚ್ಚರ!ಕ್ಕೆ ಹೇಳಿದ್ದು: “ಒಂದು ಖಾಸಗಿ ಕಂಪನಿಯಾಗಿದ್ದು, ನಾವು ದ್ವೀಪವನ್ನು ರಚಿಸುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸಲು ಶಕ್ತರಾಗಿರಲಿಲ್ಲ. ಕೆಲಸವು ಅತಿ ಶೀಘ್ರವಾಗಿ ಮಾಡಲ್ಪಡಬೇಕಿತ್ತು.”
“ದ್ವೀಪವನ್ನು ರಚಿಸುವುದು”
ಕರಾವಳಿಯ ಪಕ್ಕದಲ್ಲಿರುವ ನೆಲವನ್ನು ಮೇಲಕ್ಕೆತ್ತುವುದು ಕಷ್ಟಕರವಾಗಿದೆ, ಆದರೆ ಕರಾವಳಿಯಿಂದ ಐದು ಕಿಲೊಮೀಟರುಗಳಷ್ಟು ದೂರದಲ್ಲಿ ದ್ವೀಪವೊಂದನ್ನು ರಚಿಸುವುದು ಇನ್ನೂ ಹೆಚ್ಚು ಕಷ್ಟಕರವಾಗಿದೆ. 511 ಹೆಕ್ಟೆರ್ ವಿಮಾನ ನಿಲ್ದಾಣ ದ್ವೀಪವನ್ನು ರಚಿಸುವ ಸಲುವಾಗಿ, 18 ಕೋಟಿ ಕ್ಯೂಬಿಕ್ ಮೀಟರಿನಷ್ಟು ಮರಳು ಮತ್ತು ಮಣ್ಣು ನೆಲವನ್ನು ಸಮಗೊಳಿಸುವ ವಸ್ತುವಾಗಿ ಉಪಯೋಗಿಸಲ್ಪಟ್ಟಿತು. “ಅದು 73 ಪಿರಮಿಡ್ಗಳಿಗೆ ಸಮವಾಗಿದೆ—ಅಂದರೆ ರಾಜ ಕೂಫೂನಿಂದ ಮಾಡಲ್ಪಟ್ಟ ಪಿರಮಿಡ್ಗಳಲ್ಲಿ ಅತಿ ದೊಡ್ಡದು” ಎಂಬುದಾಗಿ ಶ್ರೀ. ಕೀಮೂರಾ ವಿವರಿಸುತ್ತಾರೆ.
ಸಮುದ್ರ ತಳದ ಮೇಲೆ, 18 ಮೀಟರುಗಳ ಸರಾಸರಿ ಆಳದಲ್ಲಿ, ನೀರು ನಿರಾರ್ದ್ರಗೊಳಿಸಲ್ಪಡಬೇಕಾಗಿದ್ದ ಮೆದುವಾದ ಜೇಡಿಮಣ್ಣಿನ ಪದರವಿತ್ತು. “ವ್ಯಾಸದಲ್ಲಿ 40 ಸೆಂಟಿಮೀಟರುಗಳಿದ್ದ [16 ಇಂಚುಗಳು] ಹತ್ತು ಲಕ್ಷ ಮರಳು ರಾಶಿಗಳು, ನೀರನ್ನು ಅದರಿಂದ ನಿರಾರ್ದ್ರಗೊಳಿಸಿ ತಳಪಾಯವನ್ನು ಗಟ್ಟಿಗೊಳಿಸಲು ಆ ಪದರದೊಳಕ್ಕೆ ಹಾಕಲ್ಪಟ್ಟವು. ಜೌಗುಪ್ರದೇಶವನ್ನು ತುಂಬಿಸಿದ್ದರಿಂದ ಆದ ಭಾರದೊಂದಿಗೆ, ಮಣ್ಣಿನ 20 ಮೀಟರ್ [66 ಅಡಿ] ಮೆದು ಪದರದಿಂದ 14 ಮೀಟರುಗಳಿಗೆ [46 ಅಡಿ] ಮಣ್ಣನ್ನು ಕುಗ್ಗಿಸುತ್ತಾ ನೀರು ಹಿಂಡಲ್ಪಟ್ಟಿತು” ಎಂದು ಆ ಜೌಗುಪ್ರದೇಶವನ್ನು ತುಂಬಿಸುವ ಕಾರ್ಯಯೋಜನೆಯ ಮೇಲ್ವಿಚಾರಣೆಯಲ್ಲಿದ್ದ ಶ್ರೀ. ಕೆನೀಚೀರೊ ಮೀನಾಮೀ ವಿವರಿಸುತ್ತಾರೆ. “ನಾವು ಅತ್ಯಂತ ಭಯಗೊಂಡದ್ದು ಯಾವುದಕ್ಕೆಂದರೆ, ಕೆಳಪದರದ ಮಣ್ಣಿನ ಸಮವಲ್ಲದ ನೆಲೆಗೊಳ್ಳುವಿಕೆಯ ವಿಚಾರವಾಗಿಯೇ. ನೆಲೆಗೊಳ್ಳುವಿಕೆಯು ಸಮವಾಗಿರಲು ಎಲ್ಲಿ ನಿಖರವಾಗಿ ನೆಲವು ತುಂಬಿಸಲ್ಪಡಬೇಕೆಂಬುದನ್ನು ಲೆಕ್ಕಹಾಕಲು ನಾವು ಕಂಪ್ಯೂಟರ್ಗಳನ್ನು ಉಪಯೋಗಿಸಿದೆವು.”
ಎಲ್ಲ ಸೇರಿಸಿ, ತುಂಬಿಸಲ್ಪಟ್ಟ ನೆಲದ ಆಳವು 33 ಮೀಟರುಗಳಿಗೆ—10 ಅಂತಸ್ತಿನ ಕಟ್ಟಡದ ಸಮಕ್ಕೆ—ತಲಪಿತು. ಹಾಗಿದ್ದರೂ, ನೆಲ ತುಂಬಿಸುವಿಕೆಯ ಭಾರದ ಕೆಳಗೆ, ಸಮುದ್ರ ತಳವು ಮುಳುಗಿದೆ ಮತ್ತು ಮುಳುಗುತ್ತಾ ಇದೆ. ದ್ವೀಪವನ್ನು ಸಮುದ್ರ ಮಟ್ಟದಿಂದ ನಾಲ್ಕು ಮೀಟರಿನಷ್ಟು ಎತ್ತರದಲ್ಲಿರುವಂತೆ ಮಾಡುತ್ತಾ, 50 ವರ್ಷಗಳಲ್ಲಿ ಸಮುದ್ರ ನೆಲವು ಇನ್ನೂ 1.5 ಮೀಟರಿನಷ್ಟು ಮುಳುಗುವುದೆಂದು ಲೆಕ್ಕಹಾಕಲಾಗಿದೆ.
1991ರಲ್ಲಿ, ಇಡೀ ದ್ವೀಪವು ರಚಿಸಲ್ಪಡುವ ಮುನ್ನವೇ, ಪ್ರಯಾಣಿಕರ ಕೊನೆದಾಣ ಕಟ್ಟಡದ ಮತ್ತು ನಿಯಂತ್ರಣ ಬುರುಜಿನ ಕೆಲಸವು ಪ್ರಾರಂಭಿಸಲ್ಪಟ್ಟಿತು. ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯದ ಕಠಿನ ಕೆಲಸದ ಅನಂತರ, ದ್ವೀಪ, ವಿಮಾನ ನಿಲ್ದಾಣ ಮತ್ತು ಸಂಬಂಧಿತ ಸೌಕರ್ಯಗಳ ನಿರ್ಮಾಣವು ಪೂರ್ಣಗೊಳಿಸಲ್ಪಟ್ಟಿತು.
ಬಹು ದೊಡ್ಡದು ಆದರೆ ಸಾಂದ್ರವಾದದ್ದು
ಆಗಮಿಸುತ್ತಿರುವ ಪ್ರಯಾಣಿಕರು ಸುಖಾಶ್ಚರ್ಯವನ್ನು ಪಡೆಯುತ್ತಾರೆ. “ಸಾಮಾನು ಹಕ್ಕು ಕೇಳಿಕೆ ಕ್ಷೇತ್ರಕ್ಕೆ ನಾವು ಹೋಗುವಷ್ಟರಲ್ಲಿ, ನಮ್ಮ ಸೂಟ್ಕೇಸ್ಗಳು ಅಲ್ಲಿದ್ದವು” ಎಂಬುದಾಗಿ ಅಮೆರಿಕದಿಂದ ಬಂದ ಪ್ರಯಾಣಿಕನೊಬ್ಬನು ಹೇಳುತ್ತಾನೆ. ಈ ಸುಗಮ ಸಾಗಣೆಗೆ ಕಾರಣ? “ಪ್ರಯಾಣಿಕ ಕೊನೆದಾಣ ಕಟ್ಟಡವು ಬಹು ದೊಡ್ಡದು ಆದರೆ ಸಾಂದ್ರವಾದದ್ದಾಗಿದೆ” ಎಂಬುದಾಗಿ ಪ್ರಯಾಣಿಕ ಕೊನೆದಾಣ ಕಟ್ಟಡದ ಮೇಲ್ವಿಚಾರಣೆಯಲ್ಲಿರುವ, ಶ್ರೀ. ಕಾಸೂಹೀಟೋ ಆರಾವೋ ಹೇಳುತ್ತಾರೆ. “ಪ್ರಯಾಣಿಕರಿಗೆ ತಬ್ಬಿಬ್ಬುಗೊಳಿಸುವ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಮೂನೆಯನ್ನು ಹಾದುಹೋಗುವ ಅವಶ್ಯವಿಲ್ಲ.”
ಪ್ರಯಾಣಿಕ ಕೊನೆದಾಣ ಕಟ್ಟಡದ ರಚನೆಯು ಸರಳವಾಗಿದ್ದರೂ ಅಪೂರ್ವವಾದದ್ದಾಗಿದೆ. ಮುಖ್ಯ ಕಟ್ಟಡವು ಪ್ರಯಾಣಿಕರ ಅಗತ್ಯವಿಲ್ಲದ ಚಲನೆಯನ್ನು ಉಳಿಸಲು ವಿನ್ಯಾಸಿಸಲ್ಪಟ್ಟಿದೆ. ಸ್ವದೇಶದ ಪ್ರಯಾಣಿಕರು ರೈಲು ನಿಲ್ದಾಣದಿಂದ ನೇರವಾಗಿ ಟಿಕೆಟ್ ಮತ್ತು ಲಗೆಜ್ ತಪಾಸಣಾ ಕೌಂಟರ್ಗೆ ಮುಂದುವರಿಯಸಾಧ್ಯವಿದೆ ಮತ್ತು ನಂತರ ಮೆಟ್ಟಿಲುಸಾಲುಗಳನ್ನು ಹತ್ತದೆ ಅಥವಾ ಇಳಿಯದೆ ಆರೋಹಣ ದ್ವಾರಕ್ಕೆ ಹೋಗಸಾಧ್ಯವಿದೆ.
ಎಲ್ಲಿ ತಪಾಸಣಾ ಕೌಂಟರ್ಗಳು, ವಲಸೆ ಆಫೀಸುಗಳು, ಮತ್ತು ಕಸ್ಟಮ್ಸ್ಗಳಿವೆಯೋ, ಆ ಮುಖ್ಯ ಕಟ್ಟಡದಿಂದ ಎರಡು 700 ಮೀಟರ್ ಪಾರ್ಶ್ವ ಕಟ್ಟಡಗಳು ಉತ್ತರ ಮತ್ತು ದಕ್ಷಿಣಕ್ಕೆ, ಚಾಚುತ್ತಾ 33 ಆರೋಹಣ ದ್ವಾರಗಳಿಗೆ ನಡೆಸುತ್ತವೆ. ಮುಖ್ಯ ಕಟ್ಟಡದಿಂದ ದೂರವಿರುವ ದ್ವಾರಗಳನ್ನು ಬಳಸುವ ಪ್ರಯಾಣಿಕರು, ವಿಂಗ್ ಷಟಲ್ ಎಂದು ಕರೆಯಲ್ಪಡುವ ಸ್ವಯಂಚಾಲಿತ ಗಾಡಿ ಸಾಗಣೆ ವ್ಯವಸ್ಥೆಯನ್ನು ತೆಗೆದುಕೊಳ್ಳಸಾಧ್ಯವಿದೆ. ಅದು ಷಟಲ್ಗಾಗಿ ಕಾಯುವ ಸಮಯವನ್ನು ಒಳಗೊಂಡು ಐದು ನಿಮಿಷಗಳೊಳಗೆ ಪ್ರಯಾಣಿಕರನ್ನು ಅಪೇಕ್ಷಿಸಿದ ದ್ವಾರಕ್ಕೆ ತೆಗೆದುಕೊಂಡು ಹೋಗುತ್ತದೆ.
ನೋಡಲ್ಪಡಬೇಕಾಗಿರುವ ವಿಮಾನ ನಿಲ್ದಾಣ
“ಸಂಪೂರ್ಣವಾಗಿ ಸಮುದ್ರದ ಮೇಲಿರುವ ಒಂದು ವಿಮಾನ ನಿಲ್ದಾಣವಾಗಿರುತ್ತಾ, ಅದು ಯಾವುದೇ ತೊಡರುಗಳಿಂದ ಮುಕ್ತವಾಗಿದೆ,” ಎಂದು ಶ್ರೀ. ಆರಾವೋ ಹೇಳುತ್ತಾರೆ. “ಹೌದು, ಕೆಳಗಿಳಿಸಲು ಇದು ಸುಲಭವಾದ ವಿಮಾನ ನಿಲ್ದಾಣವಾಗಿದೆ ಎಂದು ಪೈಲಟ್ಗಳು ಹೇಳುತ್ತಿದ್ದಾರೆಂದು ನಾವು ಕೇಳಿಸಿಕೊಳ್ಳುತ್ತೇವೆ,” ಎಂಬುದಾಗಿ ಶ್ರೀ. ಕೀಮೂರಾ ಒಪ್ಪುತ್ತಾರೆ.
ಇತರರೂ ಅದರ ತೋರಿಕೆಯನ್ನು ಗಣ್ಯಮಾಡುತ್ತಾರೆ. ವಿಮಾನದ ರೆಕ್ಕೆಗಳ ಆಕಾರದಲ್ಲಿರುವ ಕೊನೆದಾಣ ಕಟ್ಟಡದ ಬುದ್ಧಿಗ್ರಾಹ್ಯ ವಿನ್ಯಾಸವು, ಅನೇಕ ಪ್ರವಾಸಿಗರನ್ನು ಕಾನ್ಕೂಗೆ ಆಕರ್ಷಿಸಿದೆ. ವಿಮಾನಗಳು, ಅಸಾಮಾನ್ಯವಾದ ದ್ವೀಪ ವಿಮಾನ ನಿಲ್ದಾಣದಿಂದ ಮೇಲೇರುವುದನ್ನು ಮತ್ತು ಕೆಳಗೆ ಇಳಿಯುವುದನ್ನು ವೀಕ್ಷಿಸುವುದನ್ನೂ ಅವರು ಆನಂದಿಸುತ್ತಾರೆ. “ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ನಿರ್ವಹಣಾ ಕೇಂದ್ರದ ಮೇಲೆ ಪರಿಶೀಲನ ಅಟ್ಟವನ್ನು ನಮಗೆ ಕಟ್ಟಬೇಕಾಯಿತು, ಆದರೂ ಹಾಗೆ ಮಾಡುವುದನ್ನು ಮೊದಲು ನಾವು ಉದ್ದೇಶಿಸಲಿಲ್ಲ” ಎಂದು ಶ್ರೀ. ಕೀಮೂರಾ ಹೇಳುತ್ತಾರೆ. ಕೇವಲ ವೀಕ್ಷಿಸಲು ದಿನವೊಂದಕ್ಕೆ ಸರಾಸರಿ 30,000 ಜನರು ಈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ.
ನೀವು ಜಪಾನನ್ನು ಕಾನ್ಸೈ ಕ್ಷೇತ್ರದ ಹತ್ತಿರ ಭೇಟಿಮಾಡುವಲ್ಲಿ, ಕಾನ್ಕೂವಿನ—ತನ್ನ ನೆರೆಹೊರೆಯವರಿಂದ ನೋಡಲ್ಪಡಸಾಧ್ಯವಿರುವ ಆದರೆ ಕೇಳಲ್ಪಡದ ಒಂದು ವಿಮಾನ ನಿಲ್ದಾಣದ—ಒಳಕ್ಕೆ ಅಥವಾ ಹೊರಕ್ಕೆ ಹಾರಾಡಬಾರದೇಕೆ.
[ಪಾದಟಿಪ್ಪಣಿ]
a ಕಾನ್ಸೈ, ಓಸಾಕಾ ಹಾಗೂ ಕೋಬಿಯ ವಾಣಿಜ್ಯ ನಗರಗಳನ್ನು ಮತ್ತು ಕ್ಯೋಟೊ ಹಾಗೂ ನಾರಾದ ಐತಿಹಾಸಿಕ ನಗರಗಳನ್ನು ಒಳಗೊಳ್ಳುವ ಪಶ್ಚಿಮ ಜಪಾನಿನಲ್ಲಿರುವ ಸಾಮಾನ್ಯ ಕ್ಷೇತ್ರವಾಗಿದೆ. ಕೋಕೂಸಿ ಕೂಕೋ ಅಂದರೆ “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ”ವೆಂದರ್ಥ.
[ಪುಟ 20 ರಲ್ಲಿರುವ ಚಿತ್ರ ಕೃಪೆ]
Kansai International Airport Co., Ltd.