ಯಾರ ಮೇಲಾದರೂ ಭರವಸೆಯಿಡಸಾಧ್ಯವಿದೆಯೆ?
“ಕುಟುಂಬದಿಂದ ಹೊರಗೆ ನನ್ನ ಹೆತ್ತವರು ಸಂಪೂರ್ಣವಾದ ಭರವಸೆಯನ್ನಿಟ್ಟ ಕೆಲವೇ ಜನರಲ್ಲಿ ಅವನು ಒಬ್ಬನಾಗಿದ್ದನು . . . ನಮ್ಮನ್ನು ಘಾಸಿಗೊಳಿಸುವಂತಹ ಯಾವುದನ್ನೂ ಎಂದಿಗೂ ಮಾಡದಂತಹ, ಒಬ್ಬ ಒಳ್ಳೆಯ ಹಾಗೂ ಕಾಳಜಿವಹಿಸುವ ವ್ಯಕ್ತಿಯೋಪಾದಿ ಅವನು ತನ್ನನ್ನು ತೋರ್ಪಡಿಸಿಕೊಂಡನು. . . . ನನ್ನ ಜೀವಿತದಲ್ಲಿ ನಾನು ನಿಸ್ಸಂಶಯವಾಗಿ ಭರವಸೆಯಿಡತೊಡಗಿದ ಕೆಲವೇ ಜನರಲ್ಲಿ ಅವನು ಒಬ್ಬನಾಗಿದ್ದನು.”
ತನ್ನ ಕುಟುಂಬ ವೈದ್ಯನಲ್ಲಿ ತನಗಿದ್ದಂತಹ ಭರವಸೆಯನ್ನು ಒಬ್ಬ ಯುವ ಸ್ತ್ರೀಯು ವಿವರಿಸಿದ್ದು ಹೀಗೆಯೇ. ವಿಷಾದಕರವಾಗಿ, ಇದು ಗಂಭೀರವಾಗಿ ಅನುಚಿತವಾಗಿಟ್ಟ ಭರವಸೆಯಾಗಿತ್ತು. ಅವಳು 16 ವರ್ಷ ಪ್ರಾಯದವಳಾಗಿದ್ದಾಗಿನಿಂದ ಈ ವೈದ್ಯನು ಅವಳನ್ನು ಲೈಂಗಿಕವಾಗಿ ಅಪಪ್ರಯೋಗಿಸಿದನು. “ಅವನು ನನಗೆ ಸುಳ್ಳು ಹೇಳಿದನು ಮತ್ತು ನನ್ನನ್ನು ವಂಚಿಸಿದನು” ಎಂದು ಅನಂತರ ನ್ಯಾಯವನ್ನು ವಿಧಿಸಿಕೊಟ್ಟಂತಹ ಕೋರ್ಟ್ ಅಧಿಕಾರಿಗಳಿಗೆ ಅವಳು ಹೇಳಿದಳು.—ದ ಟೊರಾಂಟೊ ಸ್ಟಾರ್.
ಎಲ್ಲಾ ಕಡೆಗಳಲ್ಲಿಯೂ ಭರವಸೆಯು ನಾಶಮಾಡಲ್ಪಟ್ಟಿದೆ
ಸುಂದರವಾದರೂ ಸೂಕ್ಷ್ಮವಾದ ಒಂದು ಹೂವಿನಂತೆ, ಭರವಸೆಯು ಸುಲಭವಾಗಿ ಬೇರುಸಮೇತ ಕಿತ್ತೊಗೆಯಲ್ಪಡಸಾಧ್ಯವಿದೆ ಮತ್ತು ಕಾಲಕೆಳಗೆ ತುಳಿಯಲ್ಪಡಸಾಧ್ಯವಿದೆ. ಅದು ಎಲ್ಲಾ ಕಡೆಗಳಲ್ಲಿಯೂ ಹಿಸುಕಿಹಾಕಲ್ಪಡುತ್ತಿದೆ! ಇಂಗ್ಲೆಂಡ್ನಲ್ಲಿ ಒಬ್ಬ ಕಾರ್ಡಿನಲ್ಗೆ ಮತ್ತು ಒಬ್ಬ ಆರ್ಚ್ಬಿಷಪನಿಗೆ ಸೆಕ್ರಿಟರಿಯಾಗಿದ್ದ ಮೈಕಲ್ ಗೇನ್ ಹೇಳಿದ್ದು: “ಪಾದ್ರಿಯೊಬ್ಬನ ಮೇಲೆ ಎಲ್ಲರೂ ಭರವಸೆಯಿಟ್ಟಂತಹ ಒಂದು ಸಮಯವಿತ್ತು. ಆಗ ಕುಟುಂಬಗಳು ತಮ್ಮ ಮಕ್ಕಳನ್ನು ಅವನ ಪರಾಮರಿಕೆಯೊಳಗೆ ನಂಬಿಕೆಯಿಂದ ಒಪ್ಪಿಸುತ್ತಿದ್ದವು. ಈಗ ನಾನು ಅದನ್ನು ನಿರೀಕ್ಷಿಸುವುದಿಲ್ಲ. ನಾವು ಆ ಭರವಸೆಯಿಂದ ಸದಾಕಾಲಕ್ಕೂ ಬೇರ್ಪಡಿಸಲ್ಪಟ್ಟೆವು.”—ದ ಗಾರ್ಡಿಯನ್ ವೀಕೆಂಡ್.
ವ್ಯಾಪಾರ ಮಾಡುವ ಜನರು ಪ್ರತಿಸ್ಪರ್ಧಿಗಳಿಗೆ ಮೋಸಮಾಡುತ್ತಾರೆ. ಕುಟಿಲ ಜಾಹೀರಾತುಗಾರರು ಬಳಕೆದಾರರನ್ನು ವಂಚಿಸಿ ಶೋಷಣೆ ಮಾಡುತ್ತಾರೆ. ತನ್ನ ನೌಕರರಿಂದ ಅವರ ಮೀಸಲು ಹಣಗಳನ್ನು ಬಲಾತ್ಕಾರದಿಂದ ಕಸಿದುಕೊಳ್ಳುತ್ತಾ, ಒಬ್ಬ ನಿರ್ದಯಿ ಅಧಿಕಾರಿಯು ತನ್ನ ಸ್ವಂತ ಕಂಪೆನಿಯ ಪೆನ್ಷನ್ ನಿಧಿಗಳನ್ನು ಅಪಹರಿಸಿದನು. ನೌಕರರು ಕ್ರಮವಾಗಿ ತಮ್ಮ ಧಣಿಗಳಿಂದ ಅಪಹರಿಸುತ್ತಾರೆ. ಉದಾಹರಣೆಗಾಗಿ, “ಕೆನಡದ ವ್ಯಾಪಾರಗಳು, ಆಂತರಿಕ ಕಳ್ಳತನಗಳಿಂದಾಗಿ ವರ್ಷವೊಂದಕ್ಕೆ ಅಂದಾಜು ಮಾಡಲ್ಪಟ್ಟ 2,000 ಕೋಟಿ ಡಾಲರುಗಳನ್ನು ಕಳೆದುಕೊಳ್ಳುತ್ತವೆ” ಎಂದು ಒಂದು ವರದಿಯು ಗಮನಿಸಿತು.—ಕೆನೇಡಿಯನ್ ಬಿಸಿನೆಸ್.
ಎಲ್ಲಾ ರಾಜಕಾರಣಿಗಳು ಭರವಸೆಗೆ ಅನರ್ಹರಾಗಿಲ್ಲ. ಆದರೆ ಈ ಕೆಳಗಿನಂತಹ ವರದಿಗಳು ತೀರ ಕೆಲವೇ ಜನರನ್ನು ಆಶ್ಚರ್ಯಗೊಳಿಸುತ್ತವೆ: “ಫ್ರಾನ್ಸ್ನ ಅತ್ಯಂತ ವಾದಾಸ್ಪದವಾದ ಸ್ತ್ರೀ ರಾಜಕಾರಣಿಗಳಲ್ಲಿ ಒಬ್ಬರ ಕೊಲೆಯಾದ ಎರಡು ವಾರಗಳ ಬಳಿಕ, ಮೆಡಿಟರೇನಿಯನ್ ತೀರದಲ್ಲಿರುವ ಸರಕಾರದ ವ್ಯಾಪಾರವನ್ನು ದೀರ್ಘ ಸಮಯದಿಂದಲೂ ಮರೆಮಾಚಿರುವ, ರಾಜಕೀಯ ವಂಚನೆ ಮತ್ತು ಅಪರಾಧದ ಒಳಸಂಚನ್ನು ಪೊಲೀಸರು ಬಯಲುಮಾಡುತ್ತಿದ್ದಾರೆ.”—ದ ಸಂಡೇ ಟೈಮ್ಸ್, ಲಂಡನ್.
ಅನೇಕವೇಳೆ, ನಿಕಟ ಸಂಬಂಧಗಳಲ್ಲಿ ಭರವಸೆಯು ಧ್ವಂಸಮಾಡಲ್ಪಟ್ಟಿದೆ. ಗಂಡಂದಿರು ಮತ್ತು ಹೆಂಡತಿಯರು, ತಮ್ಮ ಪತಿ ಅಥವಾ ಪತ್ನಿಗೆ ಲೈಂಗಿಕವಾಗಿ ಅಪನಂಬಿಗಸ್ತರಾಗಿದ್ದಾರೆ. ಹೆತ್ತವರು ಮಕ್ಕಳನ್ನು ಅಪಪ್ರಯೋಗಿಸುತ್ತಾರೆ. ಮಕ್ಕಳು ಹೆತ್ತವರಿಗೆ ವಂಚನೆಮಾಡುತ್ತಾರೆ. ಹಿಂದಿನ ಪೂರ್ವ ಜರ್ಮನಿಯಲ್ಲಿನ ಗುಪ್ತ ಪೊಲೀಸ್ ದಳ, ಶ್ಟಾಸೀಯ ಕಾಗದಪತ್ರಗಳು ತೆರೆಯಲ್ಪಟ್ಟಾಗ, ಸ್ನೇಹಿತರಾಗಿ ಪರಿಗಣಿಸಲ್ಪಟ್ಟ ಜನರಿಂದ ಮಾಡಲ್ಪಡುವ “ವಂಚನೆಯ ವ್ಯಾಪಕ ವ್ಯವಸ್ಥೆ”ಯನ್ನು ಅವು ಪ್ರಕಟಗೊಳಿಸಿದವು. ವಿಶ್ವಾಸಘಾತಕತೆಯ ಜಾಲಬಂಧವೊಂದರಲ್ಲಿ, “ಶ್ಟಾಸೀಯ ಬಿಗಿಹಿಡಿತಗಳು, ಶಾಲಾಕೊಠಡಿ, ಉಪದೇಶ ವೇದಿಕೆ, ಮಲಗುವ ಕೋಣೆ, ಪಾಪ ನಿವೇದನಾ ಸ್ಥಳದೊಳಕ್ಕೆ ಸಹ ವ್ಯಾಪಿಸಿದವು” ಎಂಬುದಾಗಿ ಒಂದು ವರದಿಯು ಹೇಳುತ್ತದೆ.—ಟೈಮ್.
ಐಯರ್ಲೆಂಡ್ನಲ್ಲಿನ ಅಂಕಣಕಾರನೊಬ್ಬನು ಬರೆದುದು: “ನಾವು ಯಾರನ್ನು ಅಧಿಕಾರದ ಸ್ಥಾನಗಳಲ್ಲಿ ಇಟ್ಟಿದ್ದೇವೋ, ಅವರಿಂದ ನಮಗೆ ಸುಳ್ಳು ಹೇಳಲಾಗಿದೆ, ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿದ್ದೇವೆ ಮತ್ತು ಉಪಯೋಗಿಸಲ್ಪಟ್ಟಿದ್ದೇವೆ ಹಾಗೂ ಅಪಪ್ರಯೋಗಿಸಲ್ಪಟ್ಟಿದ್ದೇವೆ ಮತ್ತು ತಿರಸ್ಕಾರದಿಂದ ಕಾಣಲ್ಪಟ್ಟಿದ್ದೇವೆ.” (ದ ಕೆರಿಮೆನ್) ಅವರು ಪದೇ ಪದೇ ವಿಶ್ವಾಸಘಾತಗೊಳಿಸಲ್ಪಟ್ಟಿರುವುದರಿಂದ, ಅನೇಕ ಜನರು ಯಾರ ಮೇಲೂ ಭರವಸೆ ಇಡುವುದಿಲ್ಲ. ನಮ್ಮ ಭರವಸೆಯು ಅನುಚಿತವಾಗಿಡಲ್ಪಟ್ಟಿಲ್ಲ ಎಂಬ ಖಾತ್ರಿಯನ್ನು ಪಡೆಯಲು ನಾವೇನು ಮಾಡಬಲ್ಲೆವು? ಮುಂದಿನ ಎರಡು ಲೇಖನಗಳು ಈ ಪ್ರಶ್ನೆಯನ್ನು ಪರೀಕ್ಷಿಸುವವು.