ನಿರುದ್ಯೋಗದಿಂದ ಬಿಡುಗಡೆ ಹೇಗೆ ಮತ್ತು ಯಾವಾಗ?
ತನ್ನ ಸೃಷ್ಟಿಕರ್ತನಂತೆ, ಮನುಷ್ಯನು ಕೆಲಸದಲ್ಲಿ, ಯಾವುದು ಸರಿಯಾಗಿಯೇ “ದೇವರ ಕೊಡುಗೆ” ಎಂಬುದಾಗಿ ವಿಶದೀಕರಿಸಲ್ಪಟ್ಟಿದೆಯೊ, ಅದರಲ್ಲಿ ಹರ್ಷವನ್ನು ಅನುಭವಿಸಬಲ್ಲನು. (ಪ್ರಸಂಗಿ 3:12, 13, NW; ಯೋಹಾನ 5:17) ಸ್ವಾರಸ್ಯಕರವಾದೊಂದು ಕೆಲಸವು, ನಮಗೆ ಸಂತೋಷವನ್ನು ಕೊಡಬಲ್ಲದು ಮತ್ತು ನಾವು ಉಪಯುಕ್ತರೂ ಬೇಕಾದವರೂ ಆಗಿದ್ದೇವೆಂಬ ಅನಿಸಿಕೆಯನ್ನು ಉಂಟುಮಾಡಬಲ್ಲದು. ಒಂದು ಕೆಲಸದಲ್ಲಿ ಒಬ್ಬನು ಸ್ವಲ್ಪವೇ ಆನಂದಿಸಿದರೂ, ಅದನ್ನು ಕಳೆದುಕೊಳ್ಳಲು ಅವನು ಕಿಂಚಿತ್ತೂ ಬಯಸಲಾರನು. ಸಂಬಳದ ಖಾತ್ರಿಯನ್ನು ಕೊಡುವುದರೊಂದಿಗೆ, ಸಂಬಳವಿರುವ ಉದ್ಯೋಗವು ಒಬ್ಬನ ಜೀವಿತಕ್ಕೆ, ಸ್ವರೂಪ, ಉದ್ದೇಶ, ಮತ್ತು ಒಂದು ಪ್ರತ್ಯೇಕವಾದ ಅಸ್ತಿತ್ವವನ್ನು ಕೊಡುತ್ತದೆ. ಸಾಮಾನ್ಯವಾಗಿ, “ಬೇರೆ ಯಾವುದೇ ವಿಷಯಕ್ಕಿಂತಲೂ ನಿರುದ್ಯೋಗಿಗಳಿಗೆ ಒಂದು ಕೆಲಸವು ಬೇಕು” ಎಂಬುದು ಆಶ್ಚರ್ಯಕರವಲ್ಲ.
ಒಂದು ಕೆಲಸದ ಅನ್ವೇಷಣೆಯಲ್ಲಿ
ನಾವು ಈಗಾಗಲೇ ನೋಡಿರುವಂತೆ, ಜೀತಗಾರ ಸರಬರಾಯಿ ಮಾರುಕಟ್ಟೆಯಲ್ಲಿನ ಸನ್ನಿವೇಶವು ಬಹಳ ಸಂಕೀರ್ಣವಾಗಿದೆ. ಪರಿಣಾಮಸ್ವರೂಪವಾಗಿ, ಒಂದು ಕೆಲಸವನ್ನು ಹುಡುಕಲಿಕ್ಕಾಗಿ, ಅನೇಕ ಸಮಂಜಸವಾದ ವಿಧಾನಗಳಿವೆ. ಲಭ್ಯವಿರುವಲ್ಲಿ ಸರಕಾರೀ ನಿರುದ್ಯೋಗ ಲಾಭಗಳ ಉಪಯೋಗವನ್ನು ಮಾಡಿಕೊಳ್ಳಲು ಯೋಗ್ಯರಾಗಿರುವ ಯಾವ ವ್ಯಕ್ತಿಗಳಾದರೂ, ಹಾಗೆ ಮಾಡಬಲ್ಲರು; ಮತ್ತು ಅನ್ವಯವಾಗುವಲ್ಲಿ, ನಿರುದ್ಯೋಗ ಆಫೀಸುಗಳಲ್ಲಿ ಅವರು ತಮ್ಮ ಹೆಸರುಗಳನ್ನು ನಮೂದಿಸಿಕೊಂಡು, ನೀಡಲ್ಪಡುವ ಸೇವೆಗಳ ಉಪಯೋಗವನ್ನು ಪಡೆದುಕೊಳ್ಳಬಲ್ಲರು. ಇತರರು ತಮ್ಮ ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಮೂಲಕ ಒಂದು ಕೆಲಸವನ್ನು ಕಂಡುಕೊಳ್ಳುತ್ತಾರೆ. ಆದರೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಅನೇಕ ವೇಳೆ, ಸ್ವಯಂ ಉದ್ಯೋಗಸ್ಥರು, ಪೂರ್ತಿ ಸಾಲ ತೀರಿಸಲು ಸುಲಭವಾಗಿರದ, ಭಾರಿ ಆರಂಭಿಕ ವೆಚ್ಚಗಳನ್ನು ಸಲ್ಲಿಸಬೇಕಾಗುತ್ತದೆ. ರಾಜ್ಯಾದಾಯದ ಮತ್ತು ತೆರಿಗೆಯ ನಿಯಮಗಳನ್ನು ಅರಿತು, ಅವುಗಳನ್ನು ಗೌರವಿಸುವುದೂ ಆವಶ್ಯಕ—ಇದು, ಕೆಲವೊಂದು ದೇಶಗಳಲ್ಲಿ ಸಾಧಿಸಲು ತೀರ ಕಷ್ಟಕರವಾದ ಒಂದು ಸಂಗತಿಯಾಗಿದೆ!—ರೋಮಾಪುರ 13:1-7; ಎಫೆಸ 4:28.
ಕೆಲಸವನ್ನು ಕಂಡುಕೊಳ್ಳಲು, ವಿಧಾನ ಹಾಗೂ ಪಟ್ಟುಹಿಡಿಯುವಿಕೆಯೊಂದಿಗೆ ತಮ್ಮನ್ನು ಅದಕ್ಕೆ ಸಮರ್ಪಿಸಿಕೊಳ್ಳುತ್ತಾ, ಕೆಲವರು ಕೆಲಸವೊಂದನ್ನು ಕಂಡುಕೊಳ್ಳುವುದನ್ನೇ ಒಂದು ಕೆಲಸವಾಗಿ ಮಾಡಿಕೊಂಡಿದ್ದಾರೆ. ಇತರರು ಉದ್ಯೋಗಿಗಳಿಗಾಗಿ ಹುಡುಕುತ್ತಿರುವ ಕಂಪನಿಗಳಿಗೆ ಪತ್ರವನ್ನು ಬರೆದಿದ್ದಾರೆ, ಇಲ್ಲವೆ ಸ್ಥಳಿಕ ವಾರ್ತಾಪತ್ರಿಕೆಗಳಲ್ಲಿ ಪ್ರಕಟನೆಗಳನ್ನು ಅವರು ಪ್ರಕಟಿಸಿದ್ದಾರೆ—ಕೆಲವು ಪತ್ರಿಕೆಗಳು ಕೆಲಸ ವಿನಂತಿಯ ಪ್ರಕಟನೆಗಳನ್ನು ಉಚಿತವಾಗಿ ಮುದ್ರಿಸುತ್ತವೆ. ಎಚ್ಚರ!ವು ಅನೇಕ ವೇಳೆ, ಈ ವಿಷಯದಲ್ಲಿ ಉಪಯುಕ್ತ ಹಾಗೂ ಪ್ರಾಯೋಗಿಕ ಸಲಹೆಯನ್ನು—ಏಕರೂಪವಾಗಿ ಯುವ ಜನರಿಗೆ ಮತ್ತು ವಯಸ್ಕರಿಗೆ—ನೀಡಿದೆ.a—ರೇಖಾಚೌಕಗಳನ್ನು ನೋಡಿ, ಪುಟ 11.
ನೀವು ಹೊಂದಿಕೊಳ್ಳಬಲ್ಲವರಾಗಿರಬೇಕು—ನೀವು ಇಷ್ಟಪಡದೆ ಇರುವ ಕೆಲಸಗಳನ್ನೂ ಸೇರಿಸಿ, ಎಲ್ಲ ರೀತಿಯ ಕೆಲಸಗಳನ್ನು ಮಾಡಲು ಸಿದ್ಧರಾಗಿರಬೇಕು. ಕೆಲಸದ ಇಂಟರ್ವ್ಯೂಗಳಲ್ಲಿ ಕೇಳಲ್ಪಡುವ ಮೊದಲ ವಿಷಯಗಳಲ್ಲಿ—ಕೆಲಸದ ಹಿಂದಿನ ಅನುಭವ ಮತ್ತು ಕೆಲಸವಿಲ್ಲದೆ ಇದ್ದ ಸಮಯಾವಧಿಯು—ಒಂದೆಂದು ಪರಿಣತರು ಹೇಳುತ್ತಾರೆ. ಕೆಲಸದ ತಾಳಗತಿಯ ನಷ್ಟವು, ಸಂಭಾವ್ಯ ಯಜಮಾನನಿಗೆ ಒಂದು ಒಳ್ಳೆಯ ಸೂಚನೆಯಾಗಿರುವುದಿಲ್ಲ.
ಶಾಲೆಯಲ್ಲಿ ಕೌಶಲಗಳನ್ನು ಸಂಪಾದಿಸುವುದರಲ್ಲಿ ತನ್ನ ಸಮಯವನ್ನು ವಿವೇಕಯುತವಾಗಿ ವ್ಯಯಿಸಿದ ಒಬ್ಬ ವ್ಯಕ್ತಿಗೆ, ತನ್ನ ಪ್ರಥಮ ಕೆಲಸವನ್ನು ಕಂಡುಕೊಳ್ಳುವ ಹೆಚ್ಚು ಉತ್ತಮ ಅವಕಾಶವಿದೆ. “ನಿರುದ್ಯೋಗವು, ವಿಶೇಷವಾಗಿ ನಿಪುಣರಲ್ಲದ ಕೆಲಸಗಾರರನ್ನು ಬಾಧಿಸುತ್ತದೆ,” ಎಂಬುದಾಗಿ ಹಣಕಾಸಿನ ವಿಜ್ಞಾನಗಳ ಶಿಕ್ಷಕರಾದ, ಆ್ಯರ್ಲ್ಬೆಟೊ ಮಾಯಾಕಿ ಹೇಳುತ್ತಾರೆ.
ಭಾವನಾತ್ಮಕ ಬೆಂಬಲದ ಪ್ರಮುಖತೆ
ಪ್ರಾಮುಖ್ಯವಾದ ಒಂದು ಅಂಶವು ಸಕಾರಾತ್ಮಕ ಹೊರನೋಟವಾಗಿದೆ. ಇದು, ಒಂದು ಕೆಲಸವನ್ನು ಕಂಡುಕೊಳ್ಳುವುದು ಮತ್ತು ಕಂಡುಕೊಳ್ಳದೆ ಇರುವುದರ ನಡುವೆ ವ್ಯತ್ಯಾಸವನ್ನು ಮಾಡಬಲ್ಲದು. ನಿರುದ್ಯೋಗಸ್ಥರು ಭಾವನಾತ್ಮಕ ಬೆಂಬಲವನ್ನು ಬಹಳವಾಗಿ ಗಣ್ಯಮಾಡುತ್ತಾರೆ, ಇದು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವುದನ್ನು ಅಥವಾ ಉದಾಸೀನರಾಗುವುದನ್ನು ತೊರೆಯುವಂತೆ ಸಹಾಯ ಮಾಡುತ್ತದೆ. ಅವರ ಕೆಲಸಗಳನ್ನು ಕಳೆದುಕೊಳ್ಳದೆ ಇರುವವರೊಂದಿಗೆ ತಮ್ಮನ್ನು ಹೋಲಿಸುವುದರಿಂದ ಫಲಿಸಸಾಧ್ಯವಿರುವ ಆತ್ಮ ಗೌರವದ ನಷ್ಟವನ್ನು ಜಯಿಸಲು ಸಹ ಅದು ಕಾರ್ಯಮಾಡುತ್ತದೆ.
ವರಮಾನವನ್ನೂ ವೆಚ್ಚವನ್ನೂ ಸರಿಹೊಂದಿಸುವುದು ಸುಲಭವಾಗಿರದು. “ಚಿಂತಿತನಾಗಿದ್ದ ನಾನು, ಸಮಯದ ಸದುಪಯೋಗ ಮಾಡುವುದನ್ನು ಕಷ್ಟಕರವಾಗಿ ಕಂಡುಕೊಂಡೆ,” ಎಂದು ಸ್ಟೆಫಾನೊ ಹೇಳುತ್ತಾನೆ. “ಸನ್ನಿವೇಶವು ನನ್ನನ್ನು ಎಷ್ಟೊಂದು ಉದ್ವೇಗಕ್ಕೆ ಗುರಿಮಾಡಿತ್ತೆಂದರೆ, ನನ್ನ ಪ್ರಿಯ ಮಿತ್ರರಲ್ಲಿ ಕೆಲವರಲ್ಲಿ ತಪ್ಪು ಹುಡುಕಲು ನಾನು ತೊಡಗಿದೆ,” ಎಂದು ಫ್ರಾನ್ಚೆಸ್ಕೊ ಜ್ಞಾಪಿಸಿಕೊಳ್ಳುತ್ತಾನೆ. ಕುಟುಂಬದ ಬೆಂಬಲವು ಪ್ರಾಮುಖ್ಯವಾಗಿರುವುದು ಈ ಸಂದರ್ಭದಲ್ಲಿಯೇ. ಜೀವನದ ಮಟ್ಟವನ್ನು ಕಡಮೆಗೊಳಿಸುವ ಸಲುವಾಗಿ, ವರಮಾನದ ಕೊರತೆಯು ಕುಟುಂಬದ ಎಲ್ಲ ಸದಸ್ಯರಿಂದ ಹೊಂದಾಣಿಕೆಯನ್ನು ಕೇಳಿಕೊಳ್ಳುತ್ತದೆ. ಒಂದೇ ಕಂಪನಿಗಾಗಿ 23 ವರ್ಷಗಳ ಕಾಲ ಕೆಲಸಮಾಡಿದ ತರುವಾಯ, 43ರ ಪ್ರಾಯದಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟ ಫ್ರ್ಯಾಂಕೊ ಹೇಳುವುದು: “ನಾನು ಕೆಲಸದಿಂದ ತೆಗೆದುಹಾಕಲ್ಪಟ್ಟ ಸಮಯದಿಂದ, ನನ್ನ ಹೆಂಡತಿ ಸಕಾರಾತ್ಮಕಳಾಗಿದ್ದಳು ಮತ್ತು ಮಹಾ ಉತ್ತೇಜನದ ಮೂಲವಾಗಿದ್ದಳು.” “ಖರೀದಿ ಮಾಡುವ ವಿಷಯದಲ್ಲಿ ಆಕೆಯ ಮಹಾ ದೂರದೃಷ್ಟಿ”ಗಾಗಿ, ಆರ್ಮಾಂಡೊ ತನ್ನ ಹೆಂಡತಿಗೆ ವಿಶೇಷವಾಗಿ ಕೃತಜ್ಞನಾಗಿದ್ದಾನೆ.—ಜ್ಞಾನೋಕ್ತಿ 31:10-31; ಮತ್ತಾಯ 6:19-22; ಯೋಹಾನ 6:12; 1 ತಿಮೊಥೆಯ 6:8-10.
ಬೈಬಲ್ ತತ್ವಗಳು, ಒಂದು ಸಕಾರಾತ್ಮಕವಾದ ಮನೋಭಾವವನ್ನಿಡಲು ಮತ್ತು ಹೆಚ್ಚು ಪ್ರಾಮುಖ್ಯವಾದ ಮೌಲ್ಯಗಳನ್ನು ಮರೆಯದಿರಲು ನಮಗೆ ಸಹಾಯ ಮಾಡಬಲ್ಲವು. ಮೇಲೆ ಉಲ್ಲೇಖಿಸಲ್ಪಟ್ಟ, ಎಚ್ಚರ!ದಿಂದ ಸಂದರ್ಶನ ಮಾಡಲ್ಪಟ್ಟವರು, ಬೈಬಲಿನಿಂದ ಸಾಂತ್ವನದಾಯಕ ಪುನರಾಶ್ವಾಸನೆಯನ್ನು ಪಡೆದಿದ್ದಾರೆ. ಇದು ದೇವರಿಗೆ ಹೆಚ್ಚು ಹತ್ತಿರವಾದ ಅನಿಸಿಕೆ ಅವರಿಗಾಗುವಂತೆ ಮಾಡಿದೆ. (ಕೀರ್ತನೆ 34:10; 37:25; 55:22; ಫಿಲಿಪ್ಪಿ 4:6, 7) ಯೆಹೋವ ದೇವರೊಂದಿಗೆ ಒಂದು ಆಪ್ತವಾದ ಸಂಬಂಧವನ್ನು ಪಡೆದಿರುವುದು ಅತಿ ಪ್ರಾಮುಖ್ಯವಾದ ವಿಷಯವಾಗಿದೆ, ಏಕೆಂದರೆ ಆತನು ವಾಗ್ದಾನಿಸುವುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
ವ್ಯಕ್ತಿಯೊಬ್ಬನು ನಿರುದ್ಯೋಗಿಯಾಗಿರಲಿ, ಇಲ್ಲದಿರಲಿ, ಅನುದಿನದ ಜೀವಿತಕ್ಕಾಗಿ ಉಪಯುಕ್ತವಾಗಿರುವ ಗುಣಗಳನ್ನು ಬೆಳೆಸಿಕೊಳ್ಳುವಂತೆ ದೇವರ ವಾಕ್ಯವು ಒಬ್ಬನನ್ನು ಉತ್ತೇಜಿಸುತ್ತದೆ. ಯೆಹೋವನ ಸಾಕ್ಷಿಗಳು ಕೆಲವೊಮ್ಮೆ ಪ್ರಾಮಾಣಿಕ ಕೆಲಸಗಾರರೋಪಾದಿ ಅನ್ವೇಷಿಸಲ್ಪಟ್ಟು, ಗಣ್ಯಮಾಡಲ್ಪಡುತ್ತಾರೆಂಬುದು ಕಾಕತಾಳೀಯವಲ್ಲ. ಅವರು ಸೋಮಾರಿಗಳಾಗಿರದೆ, ಶ್ರದ್ಧಾಶೀಲರೂ ವಿಶ್ವಾಸಾರ್ಹರೂ ಆಗಿರಬೇಕೆಂಬ ಬೈಬಲಿನ ಸಲಹೆಯನ್ನು ಅನುಸರಿಸುತ್ತಾರೆ.—ಜ್ಞಾನೋಕ್ತಿ 13:4; 22:29; 1 ಥೆಸಲೊನೀಕ 4:10-12; 2 ಥೆಸಲೊನೀಕ 3:10-12.
ನಿರುದ್ಯೋಗದ ಪ್ರೇತದಿಂದ ಬಿಡುಗಡೆ
ಕೆಲಸದ ಕೊರತೆಯೊಂದಿಗೆ ಒಳಗೊಂಡ ಮೂಲ ಕಾರಣವೊಂದಿದೆ—ಮಾನವ ಸ್ವಾರ್ಥ ಹಾಗೂ ಅತ್ಯಾಶೆ. ಬೈಬಲು ಹೇಳುವಂತೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆ.—ಪ್ರಸಂಗಿ 8:9.
ನಿರುದ್ಯೋಗದ ಸಮಸ್ಯೆ—ಮತ್ತು ಇತರ ಸಮಸ್ಯೆಗಳೂ—ತನ್ನ “ಕಡೇ ದಿವಸಗಳಲ್ಲಿ” ಇರುವ ಮಾನವ ಪ್ರಭುತ್ವದ ತೆಗೆದುಹಾಕುವಿಕೆಯ ಮೂಲಕ ಬಗೆಹರಿಸಲ್ಪಡುವುದು. (2 ತಿಮೊಥೆಯ 3:1-3) ನಿಜವಾಗಿಯೂ ನವೀನವಾಗಿರುವ ಒಂದು ಲೋಕದ ಅಗತ್ಯವಿದೆ. ಹೌದು, ಎಲ್ಲಿ ಅತ್ಯಾಶೆಯು ಇನ್ನಿರುವುದಿಲ್ಲವೊ, ಎಲ್ಲಿ ಒಂದು ನೀತಿವಂತ ಮಾನವ ಸಮಾಜವು ನ್ಯಾಯವಾದ ಆಳಿಕೆಯ ಕೆಳಗೆ ಜೀವಿಸಿ, ಕೆಲಸಮಾಡಬಲ್ಲದೊ ಅಂತಹ ಒಂದು ಲೋಕವೇ. (1 ಕೊರಿಂಥ 6:9, 10; 2 ಪೇತ್ರ 3:13) ಆದುದರಿಂದಲೇ, ದೇವರ ರಾಜ್ಯವು ಬರುವಂತೆ ಮತ್ತು ಆತನ ಚಿತ್ತವು ಭೂಮಿಯ ಮೇಲೆ ನೆರವೇರುವಂತೆ ಪ್ರಾರ್ಥಿಸಲು ಯೇಸು ಜನರಿಗೆ ಕಲಿಸಿದನು.—ಮತ್ತಾಯ 6:10.
ಮಾನವ ಜಾತಿಯ ಪ್ರಧಾನ ಸಮಸ್ಯೆಗಳಲ್ಲಿ ಕೆಲವು ಸಮಸ್ಯೆಗಳ ನಿರ್ಮೂಲನವನ್ನು ಪ್ರವಾದನಾತ್ಮಕವಾಗಿ ವರ್ಣಿಸುತ್ತಾ, ದೇವರ ವಾಕ್ಯವು ಆ ರಾಜ್ಯದ ಪರಿಣಾಮಗಳನ್ನು ದೃಷ್ಟಾಂತಿಸುತ್ತದೆ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರ ವ್ಯಾಧಿಗೆ ಗುರಿಯಾಗರು.” (ಯೆಶಾಯ 65:21-23) ನಿರುದ್ಯೋಗದ ಪ್ರೇತವು, ಬೇಗನೆ ಸದಾ ಕಾಲಕ್ಕೆ ಕಾಣೆಯಾಗುವುದು. ದೇವರ ಪರಿಹಾರದ ಕುರಿತು ಹೆಚ್ಚನ್ನು ತಿಳಿಯಲು ನೀವು ಬಯಸುವುದಾದರೆ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ.
[ಪಾದಟಿಪ್ಪಣಿ]
a ಅವೇಕ್! ಪತ್ರಿಕೆಯ, ಅಕ್ಟೋಬರ್ 22, 1994, ಪುಟಗಳು 16-18; ಆಗಸ್ಟ್ 8, 1991, ಪುಟಗಳು 6-10; ಜನವರಿ 22, 1983, ಪುಟಗಳು 17-19; ಮತ್ತು ಜೂನ್ 8, 1982, ಪುಟಗಳು 3-8ನ್ನು ನೋಡಿರಿ.
[ಪುಟ 22 ರಲ್ಲಿರುವ ಚೌಕ]
ಮನೆಯಲ್ಲಿ ಕೆಲಸವನ್ನು ಸೃಷ್ಟಿಸುವುದು
• ಮಗು ನೋಡಿಕೊಳ್ಳುವುದು, ಮಗು ಆರೈಕೆ
• ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು ಅಥವಾ ಹೂವುಗಳನ್ನು ಮಾರುವುದು
• ಉಡುಪುಗಳಿಗೆ ಹೊಲಿಗೆ ಹಾಕುವುದು, ಮಾರ್ಪಡಿಸುವುದು, ಮತ್ತು ಸರಿಪಡಿಸುವುದು
• ತಯಾರಕರಿಗಾಗಿ ಚಿಲ್ಲರೆ ಕೆಲಸ
• ಬೇಕಿಂಗ್ ಮಾಡುವುದು ಮತ್ತು ಆಹಾರದ ತಯಾರಿಕೆ
• ರಜಾಯಿ ಮಾಡುವಿಕೆ, ಕ್ರೋಷಾ, ಹೆಣಿಗೆ; ಲೇಸ್ ಹೆಣಿಗೆ, ಕುಂಬಾರಗೆಲಸ; ಇತರ ಕಸಬುಗಳು
• ಆಸನ ಹೊದಿಕೆಯ ಕೆಲಸ
• ಲೆಕ್ಕಾಚಾರ, ಟೈಪಿಂಗ್, ಗೃಹ ಕಂಪ್ಯೂಟರ್ ಸೇವೆಗಳು
• ಟೆಲಿಫೋನ್ ಉತ್ತರಿಸುವ ಸೇವೆ
• ಕೇಶಾಲಂಕಾರ
• ಹಣಕೊಟ್ಟು ಊಟಮಾಡುವವರನ್ನು ಇಟ್ಟುಕೊಳ್ಳುವುದು
• ಜಾಹೀರಾತುಗಾರರಿಗಾಗಿ ಲಕೋಟೆಗಳನ್ನು ತುಂಬಿಸುವುದು ಮತ್ತು ವಿಳಾಸ ಬರೆಯುವುದು
• ಕಾರುಗಳ ತೊಳೆಯುವಿಕೆ ಮತ್ತು ಮೇಣ ಲೇಪನ (ಗಿರಾಕಿಯು ನಿಮ್ಮ ಮನೆಗೆ ಕಾರನ್ನು ತರುತ್ತಾನೆ)
• ಮುದ್ದಿನ ಪ್ರಾಣಿಗಳ ಅಂದಗೊಳಿಸುವಿಕೆ ಮತ್ತು ವ್ಯಾಯಾಮ ಮಾಡಿಸುವಿಕೆ
• ಬೀಗದ ರಿಪೇರಿ ಮತ್ತು ಬೀಗದ ಕೈ ತಯಾರಿಕೆ (ಮನೆಯಲ್ಲಿ ಕಾರ್ಯಾಗಾರ)
• ಈ ಕೆಲಸಗಳಲ್ಲಿ ಹೆಚ್ಚಿನ ಕೆಲಸಗಳಿಗಾಗಿ ಜಾಹೀರಾತುಗಳು, ವಾರಾಂತ್ಯದ ಶಾಪಿಂಗ್ ವಾರ್ತೆಗಳು ಅಥವಾ ಸೂಪರ್ ಮಾರ್ಕೆಟ್ನ ಸೂಚನಾ ಫಲಕಗಳ ಮೇಲೆ, ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಪ್ರಕಟಿಸಲ್ಪಡಬಲ್ಲವು
[ಪುಟ 22 ರಲ್ಲಿರುವ ಚೌಕ]
ಮನೆಯ ಹೊರಗೆ ಕೆಲಸವನ್ನು ಸೃಷ್ಟಿಸುವುದು
• ಮನೆ ನೋಡಿಕೊಳ್ಳುವುದು (ಜನರು ರಜೆಯಲ್ಲಿರುವಾಗ ಮತ್ತು ಅವರ ಮನೆಯ ಜಾಗ್ರತೆವಹಿಸಬೇಕೆಂದು ಬಯಸುವಾಗ)
• ಶುಚಿ ಮಾಡುವಿಕೆ: ಅಂಗಡಿಗಳು; ಆಫೀಸುಗಳು; ನಿರ್ಮಾಣಾನಂತರ, ಬೆಂಕಿಯ ನಂತರ, ಜನರು ಮನೆಯನ್ನು ಬಿಟ್ಟುಹೋದ ನಂತರ ಮನೆಗಳು ಮತ್ತು ಕೋಣೆಗಳು; ಮನೆಗೆಲಸ (ಇತರರ ಮನೆಗಳಲ್ಲಿ); (ವ್ಯಾಪಾರದ ಹಾಗೂ ಮನೆಯ) ಕಿಟಕಿಗಳು
• ರಿಪೇರಿ ಮಾಡುವಿಕೆ: ಎಲ್ಲ ಬಗೆಯ ಸಲಕರಣೆಗಳು (ದುರಸ್ತುಗೊಳಿಸುವಿಕೆಯ ವಿಷಯದಲ್ಲಿ, ಅನುಸರಿಸಲು ಸುಲಭವಾದ ಪುಸ್ತಕಗಳು ಗ್ರಂಥಾಲಯಗಳಲ್ಲಿವೆ)
• ಕೈಯಾಳು ಕೆಲಸಗಳು: ಮನೆಯ ಗೋಡೆಗಳಿಗೆ ಹೊರಾವರಣ ಹಾಕುವುದು, ಕಪಾಟುಗಳು, ಬಾಗಿಲುಗಳು, ದ್ವಾರ ಮಂಟಪಗಳನ್ನು ಕಟ್ಟುವುದು; ಬಣ್ಣ ಹಚ್ಚುವುದು; ಬೇಲಿ ಕಟ್ಟುವುದು; ಚಾವಣಿ ಹಾಕುವುದು
• ಹೊಲದ ಕೆಲಸ: ಸಸ್ಯಗಳ ನೆಡುವಿಕೆ ಅಥವಾ ಕೊಯ್ಲು, ಹಣ್ಣನ್ನು ಕಿತ್ತು ಒಟ್ಟುಗೂಡಿಸುವುದು
• ಆಂತರಿಕ ಭೂದೃಶ್ಯ ರಚನೆ ಮತ್ತು ಗಿಡ ಆರೈಕೆ: ಆಫೀಸುಗಳಲ್ಲಿ, ಬ್ಯಾಂಕ್ಗಳಲ್ಲಿ, ಶಾಪಿಂಗ್ ಚೌಕ ಮತ್ತು ಅಂಗಳಗಳಲ್ಲಿ, ಪ್ರವೇಶಾಂಗಣಗಳಲ್ಲಿ
• ಆಸ್ತಿಯ ಆಡಳಿತ: ದ್ವಾರಪಾಲಕರು, ಕಟ್ಟಡ ನಿರ್ವಾಹಕರು (ಕೆಲವೊಮ್ಮೆ ಉಚಿತ ವಸತಿಯನ್ನು ಒಳಗೊಳ್ಳುತ್ತದೆ)
• ವಿಮೆ, ಸ್ಥಿರಾಸ್ತಿ
• ರತ್ನಗಂಬಳಿಯ ಅಳವಡಿಸುವಿಕೆ, ಶುಚಿಮಾಡುವಿಕೆ
• ವಾರ್ತಾಪತ್ರಿಕೆಯ ಪಥಗಳು (ವಯಸ್ಕರು ಮತ್ತು ಮಕ್ಕಳು), ವಿತರಣೆ ಮಾಡುವ ಇತರ ಸೇವೆಗಳು: ಜಾಹೀರಾತುಗಳು, ನಗರಪಾಲಿಕೆಗಾಗಿ ಬೆಲೆಪಟ್ಟಿಗಳು
• ವಸ್ತು ಸಾಗಣೆ, ಶೇಖರಣೆ
• ಭೂದೃಶ್ಯ ರಚನೆ, ಮರಗಳ ಸಮರಿಕೆ, ಹಸಲೆಯ ಆರೈಕೆ, ಮರಕಡಿಯುವಿಕೆ
• ಶಾಲಾ ಬಸ್ಸಿನ ಚಾಲಕ
• ಫೋಟೋಗ್ರಾಫಿ (ಭಾವಚಿತ್ರಗಳು ಮತ್ತು ಸಾರ್ವಜನಿಕ ಘಟನೆಗಳು)
• ಬೆಸ್ತರಿಗಾಗಿ ಎರೆ
• ವಿನಿಮಯ ಕೆಲಸ: ಕಾರಿನ ದುರಸ್ತು ಕೆಲಸವನ್ನು ವಿದ್ಯುತ್ತಿನ ಕೆಲಸಕ್ಕಾಗಿ, ಹೊಲಿಗೆ ಹಾಕುವುದನ್ನು ಕೊಳಾಯಿ ಕೆಲಸಕ್ಕಾಗಿ ವಿನಿಮಯ ಮಾಡುವುದು, ಇತ್ಯಾದಿ.
[ಪುಟ 21 ರಲ್ಲಿರುವ ಚಿತ್ರ]
“ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:22