ಅಂಗವಿಕಲ ಆದರೂ ವಾಹನ ಚಲಾಯಿಸಲು ಶಕ್ತನು
“ನಾನು ಒಂದು ಕಾರನ್ನು ಚಲಾಯಿಸಬಲ್ಲೆ!” ಈ ಮಾತುಗಳು ನಿಮಗೆ ಗಮನಾರ್ಹವಾಗಿ ಧ್ವನಿಸದೆ ಇರಬಹುದು, ಆದರೆ ಅವು ನನ್ನ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದ್ದವು. ಅವುಗಳನ್ನಾಡಿದ 50 ವರ್ಷ ಪ್ರಾಯದ ಮನುಷ್ಯನು ನನ್ನ ಮುಂದೆ ನೆಲದ ಮೇಲಿದ್ದನು. ಅವನು ಮಗುವಾಗಿದ್ದಾಗ ಪೋಲಿಯೊ ರೋಗವನ್ನು ತಗಲಿಸಿಕೊಂಡಿದ್ದ ಕಾರಣ, ಅವನ ಕಾಲುಗಳು ಬೆಳದಿರಲೇ ಇಲ್ಲ. ಚಿಕ್ಕವೂ ನಿಷ್ಪ್ರಯೋಜಕವೂ ಆಗಿದ್ದ ಅವು, ಅವನ ದೇಹದ ಕೆಳಗೆ ಅಡ್ಡಲಾಗಿದ್ದವು. ಹಾಗಿದ್ದರೂ, ತನ್ನ ಕೈಗಳ ಆಧಾರದ ಮೇಲೆ ಅನೇಕ ವರ್ಷಗಳು ಅವನು ಚಲಿಸಿದ್ದ ಕಾರಣ, ಅವನು ಶಕ್ತಿಶಾಲಿ ತೋಳುಗಳು ಹಾಗೂ ಭುಜಗಳನ್ನು ವಿಕಸಿಸಿಕೊಂಡಿದ್ದನು. ಮತ್ತು ಸ್ವಾನುಕಂಪದ ಪೂರ್ತಿ ಇಲ್ಲದಿರುವಿಕೆಯು—ವಿಶೇಷವಾಗಿ ವಾಹನವನ್ನು ಚಲಾಯಿಸಲು ಶಕ್ತನಾಗಿರುವುದರ ಕುರಿತು ಅವನು ಮಾತಾಡಿದಾಗ ಅವನ ಧ್ವನಿಯಲ್ಲಿದ್ದ ಆ ಆನಂದಕರ ಅಭಿಮಾನವು—ನನ್ನನ್ನು ನಾಚಿಕೆಗೆ ಒಳಪಡಿಸಿತು.
ನೋಡಿ, 28 ವರ್ಷಗಳ ಪ್ರಾಯದಲ್ಲಿ ನಾನು ಸ್ವತಃ ಪೋಲಿಯೊ ರೋಗವನ್ನು ತಗಲಿಸಿಕೊಂಡಿದ್ದೆ. ಊರುಗೋಲುಗಳಿಲ್ಲದೆ ಇನ್ನು ಮುಂದೆ ನನಗೆ ನಡೆಯಲು ಸಾಧ್ಯವಿಲ್ಲವೆಂಬ ಸುದ್ದಿಯಿಂದ ನಾನು ನಿಬ್ಬೆರಗಾಗಿಸಲ್ಪಟ್ಟಿದ್ದೆ. ಈ ಮನುಷ್ಯನ ಸರಳವಾದ ಮಾತುಗಳು ನನ್ನ ಖಿನ್ನತೆಯೊಂದಿಗೆ ನಿಭಾಯಿಸುವಂತೆ ನನಗೆ ಸಹಾಯ ಮಾಡಿದವು. ಅವನು ನನಗಿಂತ ಹೆಚ್ಚು ವಿಪರೀತವಾಗಿ ಅಶಕ್ತನಾಗಿದ್ದರೂ, ತನ್ನ ವ್ಯಥೆಯನ್ನು ಜಯಿಸಸಾಧ್ಯವಿದ್ದಲ್ಲಿ, ನಾನೂ ಅಂತೆಯೇ ಏಕೆ ಮಾಡಸಾಧ್ಯವಿಲ್ಲ? ಎಂದು ಸ್ವತಃ ವಿವೇಚಿಸಿದೆ. ನಾನು ಸಹ ಒಂದು ಕಾರನ್ನು ಪುನಃ ಚಲಾಯಿಸುವೆನೆಂದು ಅಲ್ಲಿಯೇ ನಿರ್ಧರಿಸಿದೆ!
ಅಷ್ಟೇನು ಸುಲಭವಲ್ಲ
ಅದು ಬಹುಮಟ್ಟಿಗೆ 40 ವರ್ಷಗಳ ಹಿಂದಿನ ವಿಷಯವಾಗಿತ್ತು. ಆಗ, ಒಬ್ಬ ಅಂಗವಿಕಲನೋಪಾದಿ ಒಂದು ಕಾರನ್ನು ಚಲಾಯಿಸುವುದು ಧೈರ್ಯವನ್ನು ಅವಶ್ಯಪಡಿಸಿತು. ನನ್ನ ಮಾರ್ಪಡಿಸಲ್ಪಟ್ಟ ಕಾರು, ನಿಜವಾಗಿಯೂ ಒಂದು ವಿಲಕ್ಷಣ ಯಂತ್ರವಾಗಿತ್ತು! ಕ್ಲಚ್ ಪೆಡಲಿನ ವರೆಗೆ ವಿಸ್ತರಿಸಿದ, ನನ್ನ ಎಡಗೈಯ ಕಂಕುಳದ ಕೆಳಗೆ ಜೋಡಿಸಲ್ಪಟ್ಟ ಒಂದು ಊರುಗೋಲಿತ್ತು. ನನ್ನ ಎಡ ಭುಜವನ್ನು ಮುಂದಕ್ಕೆ ಚಲಿಸುವ ಮೂಲಕ ನಾನು ಕ್ಲಚ್ಚನ್ನು ತೊಡರಿಕೊಳ್ಳುವಂತೆ ಮಾಡಿದೆ. ವೇಗ ವರ್ಧಕ (ಆ್ಯಕ್ಸೆಲೆರೇಟರ್)ವು ಆದಿಕಾಲದ ಮಾಡೆಲ್ ಟಿ ಫೋರ್ಡ್ ಇಂದ ತೆಗೆಯಲ್ಪಟ್ಟ, ಕೈಯ ಮೂಲಕ ಕಾರ್ಯನಡೆಸಲ್ಪಡುವ ಮೀಟುಗೋಲು (ಲೀವರ್) ಆಗಿತ್ತು, ಮತ್ತು ಬ್ರೇಕು ಸಹ ಕೈಯ ಮೀಟುಗೋಲಿನ ಮೂಲಕ ನಡೆಸಲ್ಪಟ್ಟಿತು. ನಾನು ವಾಹನ ಚಲಾಯಿಸುವುದನ್ನು ನೀವು ಚಿತ್ರಿಸಿಕೊಳ್ಳಬಲ್ಲಿರೊ? ನನ್ನ ಭುಜವು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಇತ್ತು, ನನ್ನ ಎಡಗೈಯು ಚುಕ್ಕಾಣಿ ಚಕ್ರ (ಸ್ಟೀಯರಿಂಗ್ ವ್ಹೀಲ್)ವನ್ನು ನಡೆಸುತ್ತಿತ್ತು ಮತ್ತು ಬ್ರೇಕನ್ನು ಹಾಕುತ್ತಿತ್ತು, ಮತ್ತು ನನ್ನ ಬಲಗೈಯು ಚುಕ್ಕಾಣಿ ಚಕ್ರವನ್ನು ನಡೆಸುವುದು, ವೇಗ ವರ್ಧಕವನ್ನು ಉಪಯೋಗಿಸುವುದು ಮತ್ತು ಕೈ ಸನ್ನೆಗಳನ್ನು ಮಾಡುವುದರಲ್ಲಿ ತೊಡಗಿತ್ತು! (ಆಸ್ಟ್ರೇಲಿಯದಲ್ಲಿ ನಾವು ವಾಹನಗಳನ್ನು ರಸ್ತೆಯ ಎಡಬದಿಯಲ್ಲಿ ಚಲಾಯಿಸುತ್ತೇವೆ.) ಕಾರುಗಳಿಗೆ ಆಗ ಟ್ರ್ಯಾಫಿಕ್ ಸೂಚಕ ಮಿನುಗುದೀಪಗಳು ಇರಲಿಲ್ಲ.
ತೊಡಕಿನ ಜೋಡಣೆಗಳೊಂದಿಗಿನ ಆ ದಿನಗಳ ವಾಹನ ಚಲಾಯಿಸುವಿಕೆಯು, ಗತಕಾಲದ ವಿಷಯವೆಂಬುದಕ್ಕೆ ನಾನು ಕೃತಜ್ಞನು. ಇಂದು, ಸ್ವಯಂಚಾಲಿತ ಟ್ರಾನ್ಸ್ಮಿಷನ್ಗಳು ಮತ್ತು ಬೆರಳಿನಂಚಿನ ತಿರುವು ಸೂಚಕಗಳೊಂದಿಗೆ, ವಾಹನ ಚಲಾಯಿಸುವಿಕೆಯು ಮಹತ್ತರವಾಗಿ ಸರಳೀಕರಿಸಲ್ಪಟ್ಟಿದೆ. ತಾಂತ್ರಿಕ ಅಭಿವೃದ್ಧಿಗಳು ಅನೇಕ ಅಂಗವಿಕಲರನ್ನು ವಾಹನ ಚಲಾಯಿಸುವಂತೆ ಶಕ್ತಗೊಳಿಸಿವೆ. ಪುಟ 14ರಲ್ಲಿರುವ ಚೌಕದಲ್ಲಿ, ಸಾಮಾನ್ಯವಾಗಿ ಬಳಸಲ್ಪಡುವ ಕೆಲವು ಸಲಕರಣೆಗಳು ವರ್ಣಿಸಲ್ಪಟ್ಟಿವೆ.
ನನ್ನ ವೈಯಕ್ತಿಕ ಶಿಫಾರಸ್ಸುಗಳು
ನೀವು ಅಂಗವಿಕಲರಾಗಿದ್ದರೆ ಮತ್ತು ನೀವು ವಾಹನ ಚಲಾಯಿಸಸಾಧ್ಯವಿರುವಂತೆ ಒಂದು ವಾಹನವನ್ನು ಮಾರ್ಪಡಿಸುವುದರ ಕುರಿತು ಯೋಚಿಸುತ್ತಿರುವುದಾದರೆ, ಈ ಕ್ಷೇತ್ರದಲ್ಲಿನ ಒಬ್ಬ ವಿಶೇಷಜ್ಞನನ್ನು ನೀವು ಸಮೀಪಿಸಿರಿ ಎಂದು ನಾನು ಬಲವಾಗಿ ಸಲಹೆ ನೀಡುವೆ. ಚಾಲಕನೋಪಾದಿ ನಿಮ್ಮನ್ನು ಮತ್ತು ನಿಮ್ಮ ಪ್ರಯಾಣಿಕರನ್ನೂ ಸಂರಕ್ಷಿಸಲು, ಎಲ್ಲ ಯಂತ್ರ ಭಾಗಗಳು ಪರೀಕ್ಷಿಸಲ್ಪಡುವಂತೆ ಅವನು ಏರ್ಪಡಿಸಬಲ್ಲನು. ಅಪಘಾತಗಳ ಸಂಭವನೀಯತೆಯ ಕಾರಣ, ಒಂದು ಅಂಗೀಕೃತ ವಿಮಾ ಕಂಪನಿಯಿಂದ ವ್ಯಾಪಕವಾದ ವಿಮೆಯನ್ನು ಪಡೆದಿರುವುದು ಪ್ರಾಮುಖ್ಯ.
ಸಾಮಾನ್ಯವಾಗಿ, ವಾಹನ ಚಲಾಯಿಸುವಾಗ ಒಬ್ಬ ಸಂಗಾತಿಯನ್ನು ಜೊತೆಗೆ ಕರೆದುಕೊಂಡು ಹೋಗುವುದು ವಿವೇಕಯುತವಾದ ಮುಂಜಾಗ್ರತೆಯಾಗಿರಬಹುದು. ಒಂದು ಪ್ರಾಚೀನ ಜ್ಞಾನೋಕ್ತಿಯು ವಿವೇಕಯುತವಾಗಿ ಸಲಹೆ ನೀಡುವುದು: “ಒಬ್ಬನಿಗಿಂತ ಇಬ್ಬರು ಲೇಸು, ಏಕೆಂದರೆ ಒಟ್ಟಿಗೆ ಅವರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಬಲ್ಲರು. ಅವರಲ್ಲಿ ಒಬ್ಬನು ಕೆಳಗೆ ಬೀಳುವುದಾದರೆ, ಮತ್ತೊಬ್ಬನು ಮೇಲೇಳುವಂತೆ ಅವನಿಗೆ ಸಹಾಯ ಮಾಡಬಲ್ಲನು. ಆದರೆ ಯಾರಾದರೊಬ್ಬನು ಒಬ್ಬಂಟಿಗನಾಗಿದ್ದು, ಬೀಳುವುದಾದರೆ, ಅದು ಬಹಳ ಕೆಟ್ಟದಾಗಿದೆ ಏಕೆಂದರೆ ಅವನಿಗೆ ಸಹಾಯ ಮಾಡಲು ಯಾರೂ ಅಲ್ಲಿಲ್ಲ.” (ಪ್ರಸಂಗಿ 4:9, 10, ಟುಡೇಸ್ ಇಂಗ್ಲಿಷ್ ವರ್ಷನ್) ಒಂದು ಅಪಘಾತ, ವಾಹನದ ಅಸಮರ್ಥ ಕಾರ್ಯಾಚರಣೆ, ಅಥವಾ ಗಾಳಿಯಿಲ್ಲದ ಟಯರ್ನ ಸಮಸ್ಯೆಗಳು ಏಳುವ ಸಂದರ್ಭದಲ್ಲಿ, ಒಬ್ಬ ಸಂಗಾತಿಯು ನಿಮಗೆ ಹೆಚ್ಚಿನ ಸಹಾಯವಾಗಿರಬಲ್ಲನು. ಕೆಲವು ಅಂಗವಿಕಲ ವಾಹನ ಚಾಲಕರು ಕಾರಿನಲ್ಲಿ ಒಂದು ಸೆಲ್ಯೂಲರ್ ಟೆಲಿಫೋನ್ ಇಟ್ಟುಕೊಳ್ಳುತ್ತಾರೆ. ಹೀಗೆ, ಅಗತ್ಯವಿದ್ದಲ್ಲಿ, ಅವರು ಹೆಚ್ಚಿನ ಭರವಸೆಯಿಂದ ಒಬ್ಬಂಟಿಗರಾಗಿ ವಾಹನವನ್ನು ಚಲಾಯಿಸಬಲ್ಲರು.
ಒಬ್ಬ ಅಂಗವಿಕಲ ವಾಹನ ಚಾಲಕನಿಗೆ, ಮೋಟಾರು ಚಾಲಕರ ರಸ್ತೆಬದಿಯ ಸೇವಾ ಸಂಸ್ಥೆಯನ್ನು ಸೇರುವುದು ಸಮಂಜಸವಾಗಿದೆ ಏಕೆಂದರೆ, ಸಹಾಯಕ್ಕಾಗಿ ಮಾಡಲಾದ ಒಂದು ಕರೆಯು, ಹಗಲಾಗಲಿ ಇರುಳಾಗಲಿ ಒಂದು ಕ್ಷಿಪ್ರವಾದ ಪ್ರತಿಕ್ರಿಯೆಯನ್ನು ಪಡೆಯಬಲ್ಲದು. ವಾರ್ಷಿಕ ವಂತಿಗೆಯು ಸಾಮಾನ್ಯವಾಗಿ ಮಿತವಾದದ್ದಾಗಿದೆ—ಅದು ನೀಡಬಲ್ಲ ಮನಶ್ಶಾಂತಿಗಾಗಿ ಸಲ್ಲಿಸತಕ್ಕ ಒಂದು ಸಣ್ಣ ಬೆಲೆ.
ಅಂಗವಿಕಲ ವಾಹನ ಚಾಲಕರಾದ ನಾವು, ನಮ್ಮ ಇತಿಮಿತಿಗಳನ್ನು ಅಂಗೀಕರಿಸಿ, ಅಂತೆಯೇ ವಾಹನ ಚಲಾಯಿಸಬೇಕೆಂಬುದು ಸುಸ್ಪಷ್ಟವಾಗಿದೆ. ನಾವು ಇತರರಂತೆಯೇ ಚೆನ್ನಾಗಿ ವಾಹನ ಚಲಾಯಿಸಬಲ್ಲೆವೆಂದು ರುಜುಪಡಿಸಲು ಆಕ್ರಮಣಶೀಲರಾಗಿ ಚಲಾಯಿಸುವ ಅಗತ್ಯವಿಲ್ಲ. ಬದಲಿಗೆ, ಅನೇಕ ಅಂಗವಿಕಲ ವಾಹನ ಚಾಲಕರಿಗೆ ತಮ್ಮ ವಾಹನಗಳ ಮೇಲೆ, “ಅಂಗವಿಕಲ ವಾಹನ ಚಾಲಕ—ಎಚ್ಚರಿಕೆ,” ಎಂಬುದಾಗಿ ಓದುವ ಅಥವಾ ತದ್ರೀತಿಯ ಶಬ್ದರಚನೆಯ ಸೂಚನೆಗಳಿರುತ್ತವೆ. ಇದು, ಅಂಗವಿಕಲ ಚಾಲಕನು ಎಚ್ಚರಿಕೆಯುಳ್ಳವನಾಗಿರಬಹುದು ಮತ್ತು ಇತರರಿಗಿಂತ ಒಂದಿಷ್ಟು ನಿಧಾನವಾಗಿ ವಾಹನ ಚಲಾಯಿಸಬಹುದೆಂಬುದನ್ನು ಸೂಚಿಸುವ ಕೇವಲ ಒಂದು ಸೂಚನೆಯಾಗಿದೆ. ಇದು ಇತರ ಚಾಲಕರು ವಾಹನದಿಂದ ಅಸಾಮಾನ್ಯ ಅಂತರವನ್ನು ಕಾಪಾಡಿಕೊಳ್ಳಬೇಕೆಂಬುದನ್ನು ಅರ್ಥೈಸುವುದಿಲ್ಲ. ವಾಸ್ತವದಲ್ಲಿ, ನನ್ನ ಅನುಭವದಲ್ಲಿ, ವಿಶೇಷವಾಗಿ ಆಧುನಿಕ ಜೋಡಣೆಗಳ ಆಗಮನದಂದಿನಿಂದ, ದುರ್ಬಲನಾಗಿರದ ಚಾಲಕನು ಬ್ರೇಕುಗಳನ್ನು ಹಾಕಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಾನೊ, ಒಬ್ಬ ಅಂಗವಿಕಲ ಚಾಲಕನು ಅದಕ್ಕಿಂತ ಹೆಚ್ಚಿನ ಸಮಯವನ್ನು ವಿರಳವಾಗಿ ತೆಗೆದುಕೊಳ್ಳುತ್ತಾನೆ.
ವಾಹನವನ್ನು ಚಲಾಯಿಸಬೇಕೊ ಬಾರದೊ—ಒಂದು ಜವಾಬ್ದಾರಿಯುಳ್ಳ ನಿರ್ಧಾರ
ನೀವು ಅಂಗವಿಕಲರಾಗಿದ್ದರೆ ಮತ್ತು ಒಂದು ಕಾರನ್ನು ಚಲಾಯಿಸಲು ಬಯಸುವುದಾದರೆ, ನೀವು ವಿಷಯವನ್ನು ಅತ್ಯಧಿಕ ಗಂಭೀರತೆಯಿಂದ ಸಮೀಪಿಸಬೇಕು. ಮೊದಲನೆಯದಾಗಿ, ನಿಮ್ಮ ವೈದ್ಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಪರಾಮರ್ಶಿಸಿರಿ. ಇಂತಹ ಪ್ರಶ್ನೆಗಳನ್ನು ಸಹ ನೀವು ಪರಿಗಣಿಸಸಾಧ್ಯವಿದೆ: ನಾನು ವಾಹನ ಚಲಾಯಿಸಬೇಕಾದದ್ದು ಆವಶ್ಯಕವೊ? ಒಂದು ಅಪಘಾತದ ಸಂಭವನೀಯತೆಯನ್ನು ನಾನು ನಿರ್ವಹಿಸಬಲ್ಲೆನೊ? ನನ್ನಲ್ಲಿರಬಹುದಾದ ಯಾವುದೇ ಭಯಗಳನ್ನು ನಾನು ಜಯಿಸಬಲ್ಲೆನೊ? ಪ್ರಯೋಜನಗಳೇನು? ವಾಹನ ಚಲಾಯಿಸುವ ನನ್ನ ಸಾಮರ್ಥ್ಯವು, ನಾನು ಕಾರ್ಮಿಕ ತಂಡವನ್ನು ಮತ್ತೆ ಸೇರುವಂತೆ ನನ್ನನ್ನು ಶಕ್ತಗೊಳಿಸುವುದೊ? ಇತರ ಜನರೊಂದಿಗೆ ಹೆಚ್ಚು ಒಳಗೊಳ್ಳುವಂತೆ ಅದು ನನಗೆ ಸಹಾಯ ಮಾಡುವುದೊ?
ಯಾವಾಗ ಬಿಟ್ಟುಕೊಡುವುದೆಂಬುದನ್ನು ತಿಳಿದಿರುವುದೂ ಅತ್ಯಾವಶ್ಯಕವಾಗಿದೆ. ಯಾವನೇ ಚಾಲಕನಿಗೆ—ಅಂಗವಿಕಲನಾಗಿರಲಿ ಇಲ್ಲದಿರಲಿ, ಕುಗ್ಗುತ್ತಿರುವ ತೀರ್ಮಾನವು ಹಾಗೂ ನಿಧಾನಗೊಳ್ಳುತ್ತಿರುವ ಪ್ರತಿವರ್ತನೆಗಳು ಇಂತಹ ಒಂದು ನಿರ್ಧಾರವನ್ನು ಮಾಡುವುದನ್ನು ಅತ್ಯಗತ್ಯವಾದದ್ದಾಗಿ ಮಾಡುವ ದಿನವು ಬರಬಹುದು. ಆ ಸಮಯವು ನಿಮಗೆ ಬರುವಲ್ಲಿ, ನಿಮ್ಮ ವಿಷಯಕ್ಕಿಂತಲೂ ಹೆಚ್ಚಿನದ್ದನ್ನು ನೀವು ಪರಿಗಣಿಸಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ನೀವು ಪ್ರೀತಿಸುವವರ—ನಿಮ್ಮ ಕುಟುಂಬ ಮತ್ತು ನಿಮ್ಮ ನೆರೆಹೊರೆಯವನು ಸಹ, ರಸ್ತೆಯ ಮೇಲಿರುವ ನಿಮ್ಮ ಜೊತೆಮಾನವನ ಕುರಿತೇನು? ನಿಮ್ಮ ದುರ್ಬಲವಾದ ಚಲಾಯಿಸುವಿಕೆಯು ಅವನಿಗೆ ನಿಜವಾದ ಅಪಾಯವಾಗಿದ್ದೀತೊ?
ನನ್ನ ಸ್ವದೇಶವಾದ ಆಸ್ಟ್ರೇಲಿಯದಂತಹ ಕೆಲವು ದೇಶಗಳಲ್ಲಿ, 65ಕ್ಕಿಂತಲೂ ಹೆಚ್ಚಿನ ಪ್ರಾಯದ ಪ್ರತಿಯೊಬ್ಬ ಅಂಗವಿಕಲ ಚಾಲಕನು ಒಂದು ಸಮಯಕ್ಕೆ ಒಂದು ವರ್ಷಕ್ಕಾಗಿ ಮಾತ್ರ ತನ್ನ ಚಾಲಕ ಲೈಸೆನ್ಸನ್ನು ನವೀಕರಿಸಸಾಧ್ಯವಿದೆ—ಮತ್ತು ಇದು ಅವನ ಚಾಲಕ ಸಾಮರ್ಥ್ಯವನ್ನು ಇನ್ನೂ ಹೆಚ್ಚಾಗಿ ದುರ್ಬಲಗೊಳಿಸಬಹುದಾದ ಯಾವುದೇ ವೈದ್ಯಕೀಯ ಸಮಸ್ಯೆಗಳು ಅವನಿಗಿಲ್ಲವೆಂದು ಹೇಳುವ, ಒಬ್ಬ ವೈದ್ಯನ ಪ್ರಮಾಣಪತ್ರವನ್ನು ಮೊದಲು ಪಡೆದ ನಂತರವೇ.
ನನ್ನ ಕಾರು ಮತ್ತು ನನ್ನ ಶುಶ್ರೂಷೆ
ಕ್ಷಿಪ್ರಗತಿಯಲ್ಲಿ ಚಲಿಸುತ್ತಿರುವ ಈ ಯುಗದಲ್ಲಿ, ಕೆಲವೊಂದು ದೇಶಗಳಲ್ಲಿರುವ ಕ್ರೈಸ್ತರಿಗೆ ಮೋಟಾರು ಗಾಡಿಯು ಒಂದು ವಾಸ್ತವಿಕ ಆವಶ್ಯಕತೆಯಾಗಿ ಪರಿಣಮಿಸಿದೆ. ಕಾರುಗಳು ಸಾವಿರಾರು ಜನರನ್ನು, ಬಹುಶಃ ಲಕ್ಷಾಂತರ ಜನರನ್ನು ದೇವರ ರಾಜ್ಯದ ಸುವಾರ್ತೆಯಿಂದ ತಲಪುವಂತೆ ಅವರಿಗೆ ಸಹಾಯ ಮಾಡಿವೆ. (ಮತ್ತಾಯ 24:14) ಇದು ವಿಶೇಷವಾಗಿ ನನ್ನಂತೆಯೇ ಸಾಮರ್ಥ್ಯವಿಲ್ಲದವರ ವಿಷಯದಲ್ಲಿ ಸತ್ಯವಾಗಿದೆ. ನನ್ನ ವೈಯಕ್ತಿಕ ಅಗತ್ಯಗಳಿಗಾಗಿ ನನ್ನ ಮಾರ್ಪಡಿಸಲ್ಪಟ್ಟ ವಾಹನವು, ಅಪಘಾತಗಳು, ಅನಾರೋಗ್ಯ, ಮತ್ತು ಎಲ್ಲ ಅಸಾಮರ್ಥ್ಯಗಳಿಂದ ಮುಕ್ತವಾಗಿರುವ ಒಂದು ಹೊಸ ಲೋಕವು ಬೇಗನೆ ಬರಲಿದೆ ಎಂಬ ನನ್ನ ದೃಢನಂಬಿಕೆಯ ಕುರಿತು ಇತರರಿಗೆ ಹೇಳುವಂತೆ ನನ್ನನ್ನು ಶಕ್ತಗೊಳಿಸುತ್ತದೆ. (ಯೆಶಾಯ 35:5, 6) ಕೆಲವು ಅಂಗವಿಕಲ ವ್ಯಕ್ತಿಗಳು ಪೂರ್ಣ ಸಮಯದ ಸೌವಾರ್ತಿಕರೋಪಾದಿ ಸೇವೆ ಸಲ್ಲಿಸಲೂ ಶಕ್ತರಾಗಿದ್ದಾರೆ.
ಅಮೆರಿಕದ ಐಓವಾದಲ್ಲಿ, ಒಂದು ಗಾಲಿ ಕುರ್ಚಿಗೆ ನಿರ್ಬಂಧಿಸಲ್ಪಟ್ಟಿರುವ ಒಬ್ಬ ಯೆಹೋವನ ಸಾಕ್ಷಿ ಇದನ್ನು ಅನೇಕ ವರ್ಷಗಳಿಂದ ಮಾಡುತ್ತಿರಲು ಶಕ್ತಳಾಗಿದ್ದಾಳೆ. ತನ್ನ ವ್ಯಾನ್ ಮಹತ್ತರವಾಗಿ ತನಗೆ ಸಹಾಯ ಮಾಡಿದೆ ಎಂದು ಆಕೆ ಹೇಳುತ್ತಾಳೆ; ತನ್ನನ್ನು ವ್ಯಾನಿನೊಳಗೆ ಎತ್ತುವ ಎತ್ತಿಗೆಯಂತಹ ಅದರ ವಿಶೇಷ ನಿಯಂತ್ರಣಗಳನ್ನು ಒಬ್ಬ ಜೊತೆಸಾಕ್ಷಿಯು ವಿನ್ಯಾಸಿಸಿದನು. ಒಮ್ಮೆ ಒಳಗೆ ಹೋದನಂತರ, ಗಾಲಿ ಕುರ್ಚಿಯಿಂದ ಆಕೆ ಚಾಲಕರ ಆಸನದ ಕಡೆಗೆ ಚಲಿಸುತ್ತಾಳೆ. ಆಕೆ ಹೇಳುವುದು: “ಈ ರೀತಿಯಲ್ಲಿ ನಾನು ಹೊರಗೆ ಹೋಗಿ ಕ್ರಮವಾಗಿ ಜನರನ್ನು ಅವರ ಮನೆಗಳಲ್ಲಿ ಭೇಟಿಯಾಗಲು ಶಕ್ತಳಾಗಿದ್ದೇನೆ, ಮತ್ತು ಸಾಮಾನ್ಯವಾಗಿ ನಾನು ಹಲವಾರು ಬೈಬಲ್ ಅಧ್ಯಯನಗಳನ್ನು ನಡೆಸಲು ಶಕ್ತಳಾಗಿದ್ದೇನೆ.”
ನನ್ನ ಸ್ವಂತ ವಿಷಯದಲ್ಲಿ, ಶುಶ್ರೂಷೆಯಲ್ಲಿ ನಾನು ಪೂರ್ಣ ಸಮಯ ಕೆಲಸಮಾಡಲು ಶಕ್ತನಾಗಿರದಿದ್ದರೂ, ನನ್ನ ಮಾರ್ಪಡಿಸಲ್ಪಟ್ಟ ವಾಹನವು ಸಾರುವ ಕೆಲಸದಲ್ಲಿ ನಿಜವಾಗಿಯೂ ಒಂದು ಅಮೂಲ್ಯವಾದ ಆಸ್ತಿಯಾಗಿದೆ. ಅನೇಕ ವರ್ಷಗಳ ವರೆಗೆ ನಾನು ಊರುಗೋಲುಗಳ ಮೇಲೆ ಮನೆಯಿಂದ ಮನೆಗೆ ಹೋದೆ, ಆದರೆ ಸಮಯವು ಗತಿಸಿದಂತೆ, ನನ್ನ ತೋಳುಗಳು ಹಾಗೂ ಭುಜಗಳ ಮೇಲಿನ ಬೇಡಿಕೆಯು, ಹಾನಿಕಾರಕ ಪರಿಣಾಮವನ್ನು ಬೀರುತ್ತಿತ್ತು. ಆದುದರಿಂದ, ಕಡಿಮೆ ಶ್ರಮದ ವಿಧಾನವನ್ನು ನಾನು ಯೋಜಿಸಬೇಕಿತ್ತು. ನಾನು ಶುಶ್ರೂಷೆಯಲ್ಲಿ ಕೆಲಸಮಾಡುವಾಗ—ಪಟ್ಟಣದಲ್ಲಾಗಲಿ ಗ್ರಾಮೀಣ ಪ್ರದೇಶದಲ್ಲಾಗಲಿ,—ಬಾಗಲಿನ ಹತ್ತಿರಕ್ಕೆ ವಾಹನವನ್ನು ಚಲಾಯಿಸುವಂತೆ ನನ್ನನ್ನು ಅನುಮತಿಸುವ ವಾಹನಪಥಗಳಿರುವ ಮನೆಗಳನ್ನು ನಾನು ಆರಿಸಿಕೊಳ್ಳುತ್ತೇನೆ.
ನನ್ನ ಪ್ರಥಮ ಭೇಟಿಯಲ್ಲಿ, ನಾನು ಸಾಮಾನ್ಯವಾಗಿ ಕಾರಿನಿಂದಿಳಿದು, ಊರುಗೋಲುಗಳ ಮೇಲೆ ಮುಂಬಾಗಲಿನ ವರೆಗೆ ನಡೆದು, ನನ್ನ ಸಂದರ್ಶನದ ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಮನೆಯವನು ಸಂದೇಶದಲ್ಲಿ ಒಂದಿಷ್ಟು ಆಸಕ್ತಿಯನ್ನು ತೋರಿಸುವುದಾದರೆ, ಸ್ನೇಹವನ್ನು ಬೆಳಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ ಏಕೆಂದರೆ, ತರುವಾಯದ ಸಂದರ್ಶನಗಳಲ್ಲಿ ನನ್ನ ಉಪಸ್ಥಿತಿಯನ್ನು ಪ್ರಕಟಿಸಲು ಕಾರಿನ ಹಾರ್ನ್ ಧ್ವನಿಸುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬಹುದು—ನನ್ನನ್ನು ಬಂದು ಭೇಟಿಯಾಗುವ ಸರದಿಯು ಈಗ ಅವರದು.
ಈ ಪ್ರಸ್ತಾವವು ಕಾರ್ಯಸಾಧಕವಾಗಿದೆ. ಅನನುಕೂಲತೆಯ ಅನಿಸಿಕೆಯಾಗುವ ಬದಲಿಗೆ, ಅನೇಕ ಮನೆಯವರು ಹವಾಮಾನದಿಂದ ಸಂರಕ್ಷಿಸಲ್ಪಟ್ಟು, ನೆಮ್ಮದಿಯಿಂದ ನಾವು ಮಾತಾಡಸಾಧ್ಯವಿರುವಂತೆ, ಕೆಲವೊಂದು ಕ್ಷಣಗಳ ವರೆಗೆ ನನ್ನೊಂದಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಒಪ್ಪಿಕೊಳ್ಳುತ್ತಾರೆ. ನನ್ನ ಸಂದರ್ಶನವನ್ನು ಸ್ವಾಗತಿಸುವ ಮತ್ತು ಉತ್ತೇಜನ ನೀಡುವ ಬೈಬಲಿನ ಸಂದೇಶವೊಂದನ್ನು ಚರ್ಚಿಸಲು, ಮತ್ತು ಇತ್ತೀಚಿನ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಪಡೆದುಕೊಳ್ಳಲು ಎದುರುನೋಡುವ ಹಲವಾರು ಮನೆಯವರು ಯಾವಾಗಲೂ ಇರುತ್ತಾರೆ.
ನಿಶ್ಚಯವಾಗಿಯೂ, ಪ್ರತಿಯೊಬ್ಬ ಅಂಗವಿಕಲ ವ್ಯಕ್ತಿಯ ಸನ್ನಿವೇಶವು ಭಿನ್ನವಾಗಿದೆ. ಆದರೆ ಬಹುಶಃ ವಾಹನ ಚಲಾಯಿಸುವಿಕೆಯು ನನಗೆ ತಂದಿರುವ ಅದೇ ಪ್ರಯೋಜನಗಳನ್ನು ಅದು ನಿಮಗೆ ತರುವುದು—ನವೀಕೃತ ಭರವಸೆ, ಸ್ವಾತಂತ್ರ್ಯ, ಇತರರಿಗೆ ಸಹಾಯ ಮಾಡುವ ಅವಕಾಶ, ಮತ್ತು “ನಾನು ವಾಹನದಲ್ಲಿ ಸವಾರಿ ಮಾಡಲು ಹೋಗುತ್ತಿದ್ದೇನೆ” ಎಂದು ಹೇಳಲು ಶಕ್ತರಾಗಿರುವುದರಿಂದ ಬರುವ ಮಹತ್ತರ ಪ್ರಮಾಣದ ಸಂತೋಷ!—ಸಿಸಿಲ್ ಡಬ್ಲ್ಯೂ. ಬ್ರೂನ್ ಹೇಳಿದಂತೆ.
[ಪುಟ 31 ರಲ್ಲಿರುವ ಚೌಕ]
ಅಂಗವಿಕಲರಿಗಾಗಿ ಕಾರುಗಳು ಮಾರ್ಪಡಿಸಲ್ಪಟ್ಟಿರುವ ವಿಧ
ಹೆಚ್ಚಿನ ಅಂಗವಿಕಲ ವಾಹನ ಚಾಲಕರು, ತಮ್ಮ ಕಾಲುಗಳಿಗೆ ಮಾಡಲಸಾಧ್ಯವಾದ ಕೆಲಸಗಳನ್ನು ಮಾಡಲು ತಮ್ಮ ಕೈಗಳನ್ನು ಬಳಸುತ್ತಾರೆ. ಒಂದು ಬಗೆಯ ಕೈ ನಿಯಂತ್ರಣವು ವಿಶೇಷವಾಗಿ ಅನುಕೂಲಕರವಾಗಿದೆ. ಅದು ಚುಕ್ಕಾಣಿ ಚಕ್ರ (ಸ್ಟೀಯರಿಂಗ್ ವ್ಹೀಲ್)ದ ಕೆಳಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಮತ್ತು ಚುಕ್ಕಾಣಿಯ ಸ್ತಂಭದಿಂದ ಚಾಚುವ ಒಂದು ಮೀಟುಗೋಲಾಗಿದೆ. ಒಂದು ಉಕ್ಕಿನ ಕಂಬಿ ಈ ಮೀಟುಗೋಲಿನಿಂದ ಬ್ರೇಕ್ ಪೆಡಲ್ನ ವರೆಗೆ ವ್ಯಾಪಿಸುತ್ತದೆ. ಮೀಟುಗೋಲನ್ನು ಮುಂದುಗಡೆ ತಳ್ಳುವುದು ಬ್ರೇಕನ್ನು ಪ್ರಯೋಗಿಸುತ್ತದೆ.
ಇದೇ ಉಪಕರಣದಿಂದ, ಒಂದು ಹೊರಜಿ (ಕೇಬ್ಲ್)ಯು ವೇಗ ವರ್ಧಕಕ್ಕೆ ಆಧಾರವಾಗಿ ಜೋಡಿಸಲ್ಪಟ್ಟಿದೆ. ಮೀಟುಗೋಲಿಗೆ ದ್ವಿಮಾರ್ಗಿ ಚಲನೆಯಿದೆ: ಬ್ರೇಕ್ ಹಾಕಲು ಮುಂದುಗಡೆಯ ಚಲನೆ ಮತ್ತು ವೇಗ ವರ್ಧಿಸಲು ಮೇಲುಗಡೆಯ ಚಲನೆ. ಅದು ಕೊಂಚವೇ ಬಲವನ್ನು ಕೇಳಿಕೊಳ್ಳುತ್ತದೆ. ಈ ಬಗೆಯ ಕೈಯ ನಿಯಂತ್ರಣದ ಒಂದು ಗುರುತರವಾದ ಲಾಭವೇನೆಂದರೆ, ಅದು ಯಾವುದೇ ವಿಧದಲ್ಲಿ ಇತರರು ಸಾಮಾನ್ಯ ವಿಧಾನದಲ್ಲಿ ವಾಹನವನ್ನು ಚಲಾಯಿಸುವುದರಿಂದ ತಡೆಯುವುದಿಲ್ಲ. ಅದಕ್ಕೆ ಕೂಡಿಸಿ, ಆ ಉಪಕರಣವು ಇತರ ಕಾರುಗಳಿಗೆ ಸುಲಭವಾಗಿ ವರ್ಗಾಯಿಸಲ್ಪಡುತ್ತದೆ.
ತಮ್ಮ ಕೈಗಳಲ್ಲಿ ಕಡಿಮೆ ಬಲವಿರುವವರಿಗಾಗಿ, ಭಿನ್ನವಾದ ಕೈಯ ನಿಯಂತ್ರಣವು ಲಭ್ಯವಿದೆ. ಅದು, ಅದೇ ಪ್ರಕಾರ ಕಾರ್ಯಮಾಡುತ್ತದೆ, ಬ್ರೇಕ್ ಹಾಕಲು ಮುಂದುಗಡೆಯ ಚಲನೆ, ಆದರೆ ವೇಗ ವರ್ಧಕಕ್ಕಾಗಿ ಕೆಳಗಿನ ತಳ್ಳುವಿಕೆ—ಇದರಿಂದ ಕೇವಲ ಕೈಯ ತೂಕವು ವೇಗ ವರ್ಧಕವನ್ನು ಸಕ್ರಿಯಗೊಳಿಸುತ್ತದೆ.
ಗಾಲಿಕುರ್ಚಿಗಳ ಕುರಿತೇನು?
ಒಂದು ಹೆಚ್ಚಿನ ಸಮಸ್ಯೆಯು ಅಂಗವಿಕಲ ಚಾಲಕನನ್ನು ಎದುರುಗೊಳ್ಳುತ್ತದೆ: ಅವನು ಗಾಲಿಕುರ್ಚಿಯನ್ನು ಏನು ಮಾಡಬೇಕು? ಅನೇಕ ಯುವ ಚಾಲಕರು, ಚಾಲಕನ ಆಸನದ ಹಿಂದುಗಡೆಯಿರುವ ಸ್ಥಳದೊಳಕ್ಕೆ ಗಾಲಿಕುರ್ಚಿಯನ್ನು ಎತ್ತುವಂತೆ ಅವರನ್ನು ಅನುಮತಿಸುವ ದ್ವಿಬಾಗಲಿನ ಮುಚ್ಚುಗಾಡಿ (ಕೂಪೆ)ಗಳನ್ನು ಖರೀದಿಸುತ್ತಾರೆ. ಇದು ನಿಶ್ಚಯವಾಗಿಯೂ ತೋಳುಗಳಲ್ಲಿ ಮತ್ತು ಭುಜಗಳಲ್ಲಿ ಬಹಳಷ್ಟು ಪ್ರಮಾಣದ ಬಲವನ್ನು ಕೇಳಿಕೊಳ್ಳುತ್ತದೆ. ಸಾಕಷ್ಟು ಬಲಿಷ್ಠರಾಗಿರದವರು, ವಾಹನದೊಳಗೆ ತಮ್ಮ ಕುರ್ಚಿಯನ್ನು ಎತ್ತಲು ಒಬ್ಬ ಸ್ನೇಹಮಯಿಯಾದ ದಾರಿಗನಿಗಾಗಿ ಕಾಯಬೇಕು.
ಒಂದು ಅನ್ಯಮಾರ್ಗವು, ಕಾರಿನ ಮೇಲ್ಮುಚ್ಚಿನ ಮೇಲೆ ಏರಿಸಲ್ಪಟ್ಟ ಒಂದು ದೊಡ್ಡ ಫೈಬರ್ಗ್ಲಾಸ್ ಪೆಟ್ಟಿಗೆ—ಗಾಲಿಕುರ್ಚಿಯನ್ನು ಹೇರುವ ಯಂತ್ರವಾಗಿದೆ. ಒಂದು ಒತ್ತುಗುಂಡಿಯನ್ನು ಕೇವಲ ಒತ್ತುವುದರಿಂದ, ಒಂದು ಚಿಕ್ಕ ಚಾಲಕ ಯಂತ್ರವು ಪೆಟ್ಟಿಗೆಯನ್ನು ನಿಧಾನವಾಗಿ ಮೇಲಕ್ಕೆ ನಿಲ್ಲಿಸುತ್ತದೆ, ಇದರಿಂದ ಗಾಲಿಕುರ್ಚಿಯು ಕಾರಿನೊಳಗೆ ರಾಟೆಗಳಿಂದಾಗಿ ಹೇರಲ್ಪಡಸಾಧ್ಯವಿದೆ. ಒಮ್ಮೆ ಹೇರಲ್ಪಟ್ಟ ಮೇಲೆ ಪೆಟ್ಟಿಗೆಯು ಪುನಃ ಚಪ್ಪಟೆಯಾಗುತ್ತದೆ. ಆಸ್ಟ್ರೇಲಿಯದಲ್ಲಿ ಲಭ್ಯವಿರುವ ಇಂತಹ ಒಂದು ಹೇರುವ ಯಂತ್ರವು ಕಾರಿನ ಸಿಗರೇಟ್ ಲೈಟರ್ಗೆ ಅನುಕೂಲಕರವಾಗಿ ಜೋಡಿಸಲ್ಪಡುತ್ತದೆ.
ಗಾಲಿಕುರ್ಚಿಯನ್ನು ಹೇರುವ ಯಂತ್ರಕ್ಕಿರುವ ಒಂದು ಅನನುಕೂಲತೆಯು ಏನೆಂದರೆ, ಅದು ಕಾರಿಗೆ ಗಾಳಿಯೆಳೆತವನ್ನು ಕೂಡಿಸುತ್ತದೆ. ಇದು ಇಂಧನದ ಬಳಕೆಯನ್ನು 15ರಿಂದ 20 ಪ್ರತಿಶತದ ವರೆಗೆ ಹೆಚ್ಚಿಸುತ್ತದೆ. ಇದಕ್ಕೆ ಕೂಡಿಸಿ, ಉಪಕರಣದ ಬೆಲೆಯು ತಾನೇ ಎದೆಗುಂದಿಸುವಂತಹದ್ದಾಗಿರಬಹುದು. ಆದರೂ, ಹೇರುವ ಯಂತ್ರಗಳು ನೀಡುವ ಸ್ವಾತಂತ್ರ್ಯಕ್ಕಾಗಿ ಅನೇಕರು ಅವುಗಳನ್ನು ಇನ್ನೂ ಸಾರ್ಥಕವಾದದ್ದಾಗಿ ಪರಿಗಣಿಸುತ್ತಾರೆ. ಒಬ್ಬಾಕೆ ಅಂಗವಿಕಲ ಸ್ತ್ರೀಯು ಹೇಳಿಕೆಯನ್ನಿತ್ತದ್ದು: “ಗಾಲಿಕುರ್ಚಿಯನ್ನು ಕೆಳಗಿಳಿಸುವಂತೆ ಸಹಾಯ ಮಾಡಲು ನನ್ನೊಂದಿಗೆ ಅಥವಾ ನನ್ನ ಗಮ್ಯಸ್ಥಾನದಲ್ಲಿ ಯಾರಾದರೊಬ್ಬರು ಇರುವ ಅಗತ್ಯವಿಲ್ಲದೆ, ಈಗ ನಾನು ಸ್ವತಃ ಎಲ್ಲಿಗಾದರೂ ಹೋಗಬಲ್ಲೆ.”
[ಪುಟ 20 ರಲ್ಲಿರುವ ಚಿತ್ರ]
ನನ್ನ ಕಾರಿನೊಳಗಿಂದ ನಾನು ಸಾಕ್ಷಿಕೊಡಬಲ್ಲೆ