ಕೊಲೆಗಡುಕ ವೈರಸ್ ಸಾಯಿರನ್ನು ಬಾಧಿಸುತ್ತದೆ
ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಕೀಕ್ವಿಟ್, ಸಾಯಿರ್, ಉಷ್ಣವಲಯದ ಮಳೆಕಾಡೊಂದರ ಅಂಚಿನ ಮೇಲೆ ಸಿಕ್ಕಾಬಟ್ಟೆಯಾಗಿ ಅಭಿವೃದ್ಧಿಯಾಗುತ್ತಿರುವ ಒಂದು ಪಟ್ಟಣವಾಗಿದೆ. ನಗರದ ಹೊರವಲಯದಲ್ಲಿ ವಾಸಿಸುತ್ತಿದ್ದ ನಲ್ವತ್ತೆರಡು ವರ್ಷ ಪ್ರಾಯದ ಗಾಸ್ಪಾರ್ ಮೆಂಗ ಕೀಟಾಂಬಾಲಾ, ತನ್ನ ಕುಟುಂಬದಲ್ಲಿದ್ದ ಏಕಮಾತ್ರ ಯೆಹೋವನ ಸಾಕ್ಷಿಯಾಗಿದ್ದನು. ಮೆಂಗ ಇದ್ದಲಿನ ಮಾರಾಟಗಾರನಾಗಿದ್ದನು. ಅವನು ತನ್ನ ಇದ್ದಲನ್ನು ನಡುಕಾಡಿನಲ್ಲಿ ತಯಾರಿಸಿ, ಅದನ್ನು ಮೂಟೆಕಟ್ಟಿ, ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಕೀಕ್ವಿಟ್ಗೆ ಹೋಗುತ್ತಿದ್ದನು.
1995ರ ಜನವರಿ 6ರಂದು, ಅವನು ಅಸ್ವಸ್ಥನಾದನು. ಅವನು ಕಾಡಿನಿಂದ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಎರಡು ಸಲ ಬಿದ್ದನು. ಅವನು ತನ್ನ ಮನೆಯನ್ನು ತಲಪಿದಾಗ, ತನಗೆ ತಲೆನೋವು ಹಾಗೂ ಜ್ವರವಿದೆಯೆಂದು ಅವನು ಹೇಳಿದನು.
ತದನಂತರದ ಕೆಲವು ದಿನಗಳಲ್ಲಿ, ಅವನ ಸ್ಥಿತಿಯು ಕ್ಷೀಣಿಸಿತು. ಜನವರಿ 12ರಂದು ಅವನ ಕುಟುಂಬವು ಅವನನ್ನು ಕೀಕ್ವಿಟ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿತು. ಆಸ್ಪತ್ರೆಯಲ್ಲಿ ಅವನ ಪರಾಮರಿಕೆ ಮಾಡಲಿಕ್ಕಾಗಿ, ಮೆಂಗನ ಸಭೆಯಲ್ಲಿದ್ದ ಸಾಕ್ಷಿಗಳು ಅವನ ಕುಟುಂಬಕ್ಕೆ ಸಹಾಯ ಮಾಡಿದರು. ದುಃಖಕರವಾಗಿ, ಅವನ ಸ್ಥಿತಿಯು ಹೆಚ್ಚು ಕೆಟ್ಟದ್ದಾಯಿತು. ಅವನು ರಕ್ತ ವಾಂತಿಮಾಡಲಾರಂಭಿಸಿದನು. ಅವನ ಮೂಗು ಹಾಗೂ ಕಿವಿಗಳಿಂದ ರಕ್ತವು ಅನಿಯಂತ್ರಿತವಾಗಿ ಹರಿಯಿತು. ಜನವರಿ 15ರಂದು ಅವನು ಮರಣಪಟ್ಟನು.
ಬೇಗನೆ, ಅವನ ದೇಹವನ್ನು ಸ್ಪರ್ಶಿಸಿದ್ದ ಮೆಂಗನ ಕುಟುಂಬದ ಇತರ ಸದಸ್ಯರು ಅಸ್ವಸ್ಥರಾದರು. ಮಾರ್ಚ್ ತಿಂಗಳ ಆರಂಭದಷ್ಟಕ್ಕೆ, ಮೆಂಗನಿಗೆ ಸಮೀಪ ಬಂಧುಗಳಾಗಿದ್ದ 12 ಜನರು ಮರಣಿಸಿದ್ದರು; ಅವರಲ್ಲಿ ಅವನ ಹೆಂಡತಿಯೂ, ಅವರ ಆರು ಮಂದಿ ಮಕ್ಕಳಲ್ಲಿ ಇಬ್ಬರೂ ಒಳಗೊಂಡಿದ್ದರು.
ಎಪ್ರಿಲ್ ತಿಂಗಳ ಮಧ್ಯದಷ್ಟಕ್ಕೆ, ಮೆಂಗ ಮತ್ತು ಅವನ ಕುಟುಂಬಕ್ಕೆ ಸಂಭವಿಸಿದ ರೀತಿಯಲ್ಲೇ, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಇತರರು ಅಸ್ವಸ್ಥರಾಗಿ ಮರಣಪಡಲಾರಂಭಿಸಿದರು. ಆ ಕೂಡಲೆ ಈ ಅನಾರೋಗ್ಯವು ಆ ಪ್ರಾಂತದಲ್ಲಿದ್ದ ಇತರ ಎರಡು ಪಟ್ಟಣಗಳಿಗೆ ಹಬ್ಬಿತು. ಸ್ಪಷ್ಟವಾಗಿ ಹೊರಗಿನ ಸಹಾಯದ ಅಗತ್ಯವಿತ್ತು.
ಸಾಯಿರ್ನ ಪ್ರಮುಖ ರೋಗಾಣುತಜ್ಞರಾದ ಪ್ರೊಫೆಸರ್ ಮೂಯೆಂಬೆ, ಮೇ 1ರಂದು ಕೀಕ್ವಿಟ್ಗೆ ಹೋದರು. ತದನಂತರ ಅವರು ಎಚ್ಚರ! ಪತ್ರಿಕೆಗೆ ಹೇಳಿದ್ದು: “ಕೀಕ್ವಿಟ್ ಎರಡು ಸಾಂಕ್ರಾಮಿಕ ರೋಗಗಳಿಂದ ಬಾಧಿತವಾಗಿತ್ತೆಂಬುದಾಗಿ ನಾವು ತೀರ್ಮಾನಿಸಿದೆವು: ಒಂದು, ಬ್ಯಾಕ್ಟೀರಿಯದಿಂದ ಉಂಟುಮಾಡಲ್ಪಟ್ಟ ಅತಿಭೇದಿಯಾಗಿತ್ತು, ಮತ್ತು ಇನ್ನೊಂದು, ಒಂದು ವೈರಸ್ನಿಂದ ಉಂಟುಮಾಡಲ್ಪಟ್ಟ ತೀವ್ರ ರಕ್ತಸ್ರಾವದ ಜ್ವರವಾಗಿತ್ತು. ಈ ರೋಗನಿರ್ಣಯವನ್ನು ನಾವು ದೃಢಪಡಿಸಿಕೊಳ್ಳುವ ಅಗತ್ಯವಿತ್ತೆಂಬುದು ನಿಶ್ಚಯ. ಆದುದರಿಂದ ನಾವು ರೋಗಿಗಳಿಂದ ಸ್ವಲ್ಪ ರಕ್ತವನ್ನು ಸಂಗ್ರಹಿಸಿದೆವು ಮತ್ತು ಅದನ್ನು ಅಮೆರಿಕದ ಅಟ್ಲಾಂಟದಲ್ಲಿರುವ ರೋಗ ನಿಯಂತ್ರಣಕ್ಕಾಗಿರುವ ಕೇಂದ್ರ (ಸಿಡಿಸಿ)ಗಳಲ್ಲಿ ಪರೀಕ್ಷಿಸಲ್ಪಡಲಿಕ್ಕಾಗಿ ಕಳುಹಿಸಿದೆವು.”
ಮೂಯೆಂಬೆ ಮತ್ತು ಸಾಯಿರ್ನಲ್ಲಿರುವ ಇತರ ವೈದ್ಯರು ಈಗಾಗಲೆ ಸಂದೇಹಿಸಿದ್ದಂತಹ ವಿಷಯವನ್ನು ಸಿಡಿಸಿ ದೃಢಪಡಿಸಿತು. ಈ ರೋಗವು ಈಬೋಲವಾಗಿತ್ತು.
ಒಂದು ಮಾರಕ ರೋಗ
ಈಬೋಲ ವೈರಸ್ ಉಗ್ರವಾದದ್ದಾಗಿದೆ. ಅದು ಅತಿ ಬೇಗನೆ ಕೊಲ್ಲಬಲ್ಲದು. ಅದರ ವಿರುದ್ಧವಾಗಿ ಯಾವುದೇ ಲಸಿಕೆಯಿಲ್ಲ, ಮತ್ತು ಅದಕ್ಕೆ ಆಹುತಿಯಾದವರಿಗೆ ವಿದಿತವಾದ ಯಾವುದೇ ಚಿಕಿತ್ಸೆಯಿಲ್ಲ.
ಈಬೋಲವು ಪ್ರಥಮವಾಗಿ 1976ರಲ್ಲಿ ಗುರುತಿಸಲ್ಪಟ್ಟಿತು. ಸಾಯಿರ್ನಲ್ಲಿರುವ ಒಂದು ನದಿಯ ಹೆಸರು ಕೊಡಲ್ಪಟ್ಟಿರುವ ಈ ರೋಗವು, ದಕ್ಷಿಣ ಸೂಡಾನ್ನಲ್ಲಿ ಆಕ್ರಮಣಮಾಡಿತು ಮತ್ತು ತದನಂತರ ಸ್ವಲ್ಪ ಸಮಯಾವಧಿಯಲ್ಲಿಯೇ ಉತ್ತರ ಸಾಯಿರ್ನಲ್ಲಿ ಆಕ್ರಮಣಮಾಡಿತು. 1979ರಲ್ಲಿ ಸೂಡಾನ್ನಲ್ಲಿ ಸಣ್ಣದಾದ ಒಂದು ತಲೆದೋರುವಿಕೆಯು ಪುನಃ ಸಂಭವಿಸಿತು. ಅದಾದನಂತರ, ಈಬೋಲದಂತಹ ರೋಗಲಕ್ಷಣಗಳಿಂದ ಸಾಯುತ್ತಿದ್ದ ಜನರ ಕೆಲವು ಪ್ರತ್ಯೇಕ ವಿದ್ಯಮಾನಗಳ ಹೊರತಾಗಿ, ಆ ರೋಗವು ಅನೇಕ ವರ್ಷಗಳ ವರೆಗೆ ಕಣ್ಮರೆಯಾಯಿತು.
ಈಬೋಲ ವೈರಸ್ ಎಷ್ಟು ಮಾರಕವಾದದ್ದಾಗಿದೆಯೆಂದರೆ, ಅಟ್ಲಾಂಟದಲ್ಲಿ ಅದರ ಅಧ್ಯಯನಮಾಡುವ ವಿಜ್ಞಾನಿಗಳು, ಯಾವುದೇ ವಾಯುಗಾಮಿ ಸೂಕ್ಷ್ಮಜೀವಾಣುವನ್ನು ತಪ್ಪಿಸಿಕೊಳ್ಳುವುದರಿಂದ ತಡೆಯುವ, ಒಂದು ವಾಯುಸಂಚಾರಿತ ವ್ಯವಸ್ಥೆಯೊಂದಿಗೆ ಕಟ್ಟಲ್ಪಟ್ಟ ಅಧಿಕತಮ ಸುರಕ್ಷೆಯನ್ನು ಒಳಗೊಂಡಿರುವ ಪ್ರಯೋಗಶಾಲೆಯೊಂದರಲ್ಲಿ ಅಧ್ಯಯನಮಾಡುತ್ತಾರೆ. ಪ್ರಯೋಗಶಾಲೆಯನ್ನು ಪ್ರವೇಶಿಸುವ ಮೊದಲು, ವಿಜ್ಞಾನಿಗಳು ಸಂರಕ್ಷಣಾತ್ಮಕವಾದ “ಬಾಹ್ಯಾಕಾಶ ಉಡುಪುಗಳ”ನ್ನು ತೊಟ್ಟುಕೊಳ್ಳುತ್ತಾರೆ. ಅದನ್ನು ಬಿಟ್ಟುಹೋಗುವಾಗ ಅವರು ಸೋಂಕುನಿವಾರಕದಲ್ಲಿ ಸ್ನಾನಮಾಡಿಕೊಳ್ಳುತ್ತಾರೆ. ಕೀಕ್ವಿಟ್ಗೆ ಬಂದಿದ್ದಂತಹ ವೈದ್ಯರ ತಂಡಗಳು, ತಮ್ಮೊಂದಿಗೆ ಸಂರಕ್ಷಣಾತ್ಮಕವಾದ ಸಲಕರಣೆ—ಬಳಸಿ ಬಿಸಾಡಬಹುದಾದ ಕೈಗವಸುಗಳು ಮತ್ತು ಕ್ಯಾಪ್ಗಳು, ಕನ್ನಡಕಗಳು, ಮತ್ತು ವೈರಸ್ನ ಒಳಪ್ರವೇಶವನ್ನು ಅನುಮತಿಸದಿರುವ ವಿಶೇಷವಾದ ಆಳುದ್ದದ ಉಡುಪು—ಗಳನ್ನು ತಂದಿದ್ದರು.
ಇದಕ್ಕೆ ವ್ಯತಿರಿಕ್ತವಾಗಿ, ಕೀಕ್ವಿಟ್ನ ನಿವಾಸಿಗಳಿಗೆ, ಸ್ವತಃ ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ, ತಿಳಿವಳಿಕೆ ಮತ್ತು ಸಲಕರಣೆಯ ಕೊರತೆಯಿತ್ತು. ಇತರರು ನರಳುತ್ತಿರುವ ತಮ್ಮ ಪ್ರಿಯ ಜನರ ಪರಾಮರಿಕೆ ಮಾಡುವುದರಲ್ಲಿ ಬುದ್ಧಿಪೂರ್ವಕವಾಗಿ ತಮ್ಮ ಜೀವವನ್ನು ಅಪಾಯಕ್ಕೊಡ್ಡಿದರು ಅಥವಾ ತಮ್ಮ ಜೀವಗಳನ್ನು ಕಳೆದುಕೊಂಡರು. ಸ್ನೇಹಿತರು ಮತ್ತು ಕುಟುಂಬದವರು, ಅಸ್ವಸ್ಥರನ್ನು ಹಾಗೂ ಮೃತರನ್ನು ತಮ್ಮ ಬೆನ್ನುಗಳ ಮೇಲೆ ಅಥವಾ ಭುಜಗಳ ಮೇಲೆ ಯಾವುದೇ ಸಂರಕ್ಷಣೆಯಿಲ್ಲದೇ ಕೊಂಡೊಯ್ದರು. ಜೀವದ ಭೀಕರ ನಷ್ಟವು ಇದರ ಪರಿಣಾಮವಾಗಿತ್ತು; ಆ ವೈರಸ್ ಇಡೀ ಕುಟುಂಬಗಳನ್ನು ಧ್ವಂಸಗೊಳಿಸಿತು.
ತಲೆದೋರುವಿಕೆಯನ್ನು ನಿಗ್ರಹಿಸುವುದು
ಸಹಾಯಕ್ಕಾಗಿ ಕೀಕ್ವಿಟ್ನ ರೋದನಕ್ಕೆ, ಹಣದ ದಾನಗಳು ಮತ್ತು ವೈದ್ಯಕೀಯ ಸಲಕರಣೆಯೊಂದಿಗೆ, ಅಂತಾರಾಷ್ಟ್ರೀಯ ಸಮುದಾಯವು ಪ್ರತಿಕ್ರಿಯಿಸಿತು. ಯೂರೋಪ್, ದಕ್ಷಿಣ ಆಫ್ರಿಕ, ಮತ್ತು ಅಮೆರಿಕದಿಂದ, ತನಿಖೆನಡೆಸುವವರ ತಂಡಗಳು ಹಾರಿಬಂದವು. ಇಲ್ಲಿಗೆ ಆಗಮಿಸುವುದರಲ್ಲಿನ ಅವುಗಳ ಉದ್ದೇಶವು ಇಬ್ಬಗೆಯದ್ದಾಗಿತ್ತು: ಮೊದಲಾಗಿ, ಆ ತಲೆದೋರುವಿಕೆಯನ್ನು ನಿಗ್ರಹಿಸಲು ಸಹಾಯ ಮಾಡುವುದು; ಮತ್ತು ಎರಡನೆಯದಾಗಿ, ಸಾಂಕ್ರಾಮಿಕ ರೋಗಗಳ ನಡುವಣ ಕಾಲದಲ್ಲಿ ಆ ವೈರಸ್ ಎಲ್ಲಿ ವಾಸವಾಗಿತ್ತೆಂಬುದನ್ನು ಕಂಡುಹಿಡಿಯುವುದು.
ಸಾಂಕ್ರಾಮಿಕ ರೋಗವನ್ನು ನಿಲ್ಲಿಸುವಂತೆ ಸಹಾಯ ಮಾಡಲು, ಆ ರೋಗದ ರೋಗಲಕ್ಷಣಗಳನ್ನು ತೋರಿಸಿದ ಯಾರೊಬ್ಬರನ್ನು ಕಂಡುಕೊಳ್ಳಲಿಕ್ಕಾಗಿ, ಆರೋಗ್ಯ ಕಾರ್ಯಕರ್ತರು ಬೀದಿ ಬೀದಿಯ ಅನ್ವೇಷಣೆಯನ್ನು ಮಾಡಿದರು. ಅಸ್ವಸ್ಥರು ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರು, ಅಲ್ಲಿ ಅವರು ಸಂಪರ್ಕಿಸದಂತೆ ಪ್ರತ್ಯೇಕವಾಗಿಡಲ್ಪಟ್ಟು, ಸುರಕ್ಷಿತವಾಗಿ ಪರಾಮರಿಸಲ್ಪಡಸಾಧ್ಯವಿತ್ತು. ಮೃತಪಟ್ಟವರು ಪ್ಲ್ಯಾಸ್ಟಿಕ್ ಹಾಳೆಗಳಲ್ಲಿ ಸುತ್ತಲ್ಪಟ್ಟು, ತತ್ಕ್ಷಣವೇ ಹೂಳಲ್ಪಟ್ಟರು.
ಆರೋಗ್ಯಾರೈಕೆಯ ಕಾರ್ಯಕರ್ತರಿಗೆ ಮತ್ತು ಸರ್ವಸಾಮಾನ್ಯವಾಗಿ ಸಾರ್ವಜನಿಕರಿಗೆ, ಈ ರೋಗದ ಕುರಿತಾದ ನಿಷ್ಕೃಷ್ಟವಾದ ಮಾಹಿತಿಯನ್ನು ಒದಗಿಸಲಿಕ್ಕಾಗಿ, ಒಂದು ಬೃಹತ್ ಕಾರ್ಯಾಚರಣೆಯು ಪ್ರಯೋಗಿಸಲ್ಪಟ್ಟಿತು. ಆ ಸಂದೇಶದ ಒಂದು ಭಾಗವು, ಕುಟುಂಬಗಳು ಮೃತರನ್ನು ಸಂಪ್ರದಾಯಬದ್ಧವಾಗಿ ಹಿಡಿದು ಶುಚಿಗೊಳಿಸುವ ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಗಳ ವಿರುದ್ಧವಾಗಿ ಪ್ರಬಲವಾದ ಎಚ್ಚರಿಕೆಯನ್ನು ನೀಡಿತು.
ವೈರಸ್ನ ಮೂಲಕ್ಕಾಗಿ ಅನ್ವೇಷಣೆಮಾಡುವುದು
ವಿಜ್ಞಾನಿಗಳು, ಈ ವೈರಸ್ ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ಬಯಸಿದರು. ಇಷ್ಟು ಮಾತ್ರ ನಮಗೆ ತಿಳಿದಿದೆ: ವೈರಸ್ಗಳು, ತಮ್ಮಷ್ಟಕ್ಕೆ ತಾವೇ ತಿನ್ನಲು, ಕುಡಿಯಲು, ಮತ್ತು ಸಂತಾನವೃದ್ಧಿಮಾಡಲು ಶಕ್ತವಾದ ಸ್ವತಂತ್ರ ಜೀವಿಗಳಾಗಿಲ್ಲ. ಬದುಕಿ ಉಳಿಯಲು ಹಾಗೂ ಪುನರುತ್ಪತ್ತಿಮಾಡಲಿಕ್ಕಾಗಿ, ಅವು ಸಜೀವ ಜೀವಕೋಶಗಳ ಜಟಿಲವಾದ ರಚನೆಯನ್ನು ಅತಿಕ್ರಮಿಸಿ, ಅದರ ಉಪಯೋಗವನ್ನು ಮಾಡಬೇಕು.
ಒಂದು ವೈರಸ್, ಪ್ರಾಣಿಯೊಂದಕ್ಕೆ ಸೋಂಕು ತಗಲಿಸುವಾಗ, ಅನೇಕವೇಳೆ ಆ ಸಂಬಂಧವು ಒಂದು ಪರಸ್ಪರ ಸಹಅಸ್ತಿತ್ವವಾಗಿರುತ್ತದೆ—ಆ ಪ್ರಾಣಿಯು ವೈರಸನ್ನು ಕೊಲ್ಲುವುದಿಲ್ಲ, ಮತ್ತು ವೈರಸ್ ಆ ಪ್ರಾಣಿಯನ್ನು ಕೊಲ್ಲುವುದಿಲ್ಲ. ಆದರೆ ಮನುಷ್ಯನೊಬ್ಬನು ಸೋಂಕು ತಗಲಿದ ಪ್ರಾಣಿಯ ಸಂಪರ್ಕ ಮಾಡುವಾಗ, ಆ ವೈರಸ್ ಹೇಗಾದರೂ ಆ ಮನುಷ್ಯನೊಳಗೆ ನುಸುಳಿದಾಗ, ಆ ವೈರಸ್ ಮಾರಕವಾಗಿ ಪರಿಣಮಿಸಬಹುದು.
ಈಬೋಲ ವೈರಸ್ ಜನರನ್ನೂ ಕೋತಿಗಳನ್ನೂ ಬಹಳ ಬೇಗನೆ ಕೊಲ್ಲುವುದರಿಂದ, ಈ ವೈರಸ್ ಇನ್ನೊಂದು ಜೀವಿಯಲ್ಲಿ ಬದುಕುತ್ತಿರಬೇಕೆಂದು ವಿಜ್ಞಾನಿಗಳು ಊಹಿಸುತ್ತಾರೆ. ಯಾವ ರೀತಿಯ ಜೀವಿಯಲ್ಲಿ ಈ ವೈರಸ್ ಇದೆಯೆಂಬುದನ್ನು ಆರೋಗ್ಯಾಧಿಕಾರಿಗಳು ಕಂಡುಹಿಡಿಯುವುದಾದರೆ, ಭವಿಷ್ಯತ್ತಿನ ತಲೆದೋರುವಿಕೆಗಳನ್ನು ದೂರಮಾಡಲಿಕ್ಕಾಗಿ ಪರಿಣಾಮಕರವಾದ ನಿಯಂತ್ರಣವನ್ನೂ ತಡೆಗಟ್ಟುವ ಸೂಕ್ತಕ್ರಮಗಳನ್ನೂ ಕೈಕೊಳ್ಳಲು ಅವರು ಶಕ್ತರಾಗಬಹುದು. ಮಾನವ ಸೋಂಕು ರೋಗಗಳ ನಡುವಣ ಕಾಲದಲ್ಲಿ ಈ ವೈರಸ್ ಎಲ್ಲಿ ವಾಸಿಸುತ್ತದೆ? ಎಂಬುದು, ಈಬೋಲದ ಕುರಿತಾದ ಉತ್ತರಿಸಲ್ಪಟ್ಟಿರದ ಪ್ರಶ್ನೆಯಾಗಿದೆ.
ಈ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ, ಸಂಶೋಧಕರು ಈ ವೈರಸ್ನ ಮೂಲವನ್ನು ಪತ್ತೆಹಚ್ಚಬೇಕು. ಹಿಂದಣ ತಲೆದೋರುವಿಕೆಗಳನ್ನು ಅನುಸರಿಸಿ, ಪ್ರಾಣಿ ಶರೀರದ ಅಂಗವನ್ನು ಕಂಡುಹಿಡಿಯಲು ನಡೆಸಿದ ಪ್ರಯತ್ನಗಳು ಅಸಫಲವಾಗಿ ಪರಿಣಮಿಸಿದ್ದವು. ಆದರೆ, ಕೀಕ್ವಿಟ್ ಸಾಂಕ್ರಾಮಿಕ ರೋಗವು ಒಂದು ಹೊಸ ಅವಕಾಶವನ್ನು ಒದಗಿಸಿತು.
ಕೀಕ್ವಿಟ್ ಸಾಂಕ್ರಾಮಿಕ ರೋಗಕ್ಕೆ ಪ್ರಥಮವಾಗಿ ಆಹುತಿಯಾದವನು, ಗಾಸ್ಪಾರ್ ಮೆಂಗನಾಗಿದ್ದನೆಂಬುದಾಗಿ ವಿಜ್ಞಾನಿಗಳು ಊಹಿಸಿದರು. ಆದರೆ ಅವನಿಗೆ ಹೇಗೆ ಸೋಂಕು ತಗಲಿತು? ಅದು ಯಾವುದೇ ಪ್ರಾಣಿಯಿಂದ ಸೋಂಕು ತಗಲಿಸಲ್ಪಟ್ಟಿದ್ದಲ್ಲಿ, ಅದು ಯಾವ ಜಾತಿಯ ಪ್ರಾಣಿಯಾಗಿತ್ತು? ತರ್ಕಬದ್ಧವಾಗಿ, ಇದಕ್ಕೆ ಉತ್ತರವು ಮೆಂಗ ಕೆಲಸಮಾಡುತ್ತಿದ್ದ ಕಾಡಿನಲ್ಲಿ ಕಂಡುಕೊಳ್ಳಲ್ಪಡಬಹುದಾಗಿತ್ತು. ಮೆಂಗ ಇದ್ದಲನ್ನು ತಯಾರಿಸಲು ಕೆಲಸಮಾಡುತ್ತಿದ್ದ ಸ್ಥಳಗಳಲ್ಲಿ, ಸಂಗ್ರಹಣ ತಂಡಗಳು 350 ಬೋನುಗಳನ್ನು ಇಟ್ಟವು. ದಂಶಕಗಳು, ಉದ್ದಮೂತಿಯ ಇಲಿಗಳು, ನೆಲಗಪ್ಪೆಗಳು, ಹಲ್ಲಿಗಳು, ಹಾವುಗಳು, ಸೊಳ್ಳೆಗಳು, ಗಾಳದ ನೊಣಗಳು, ಉಣ್ಣೆಹುಳುಗಳು, ತಗಣೆಗಳು, ಹೇನುಗಳು, ಚಿಗಟಗಳು, ನೆಗೆಹುಳುಗಳು—ಒಟ್ಟಿಗೆ 2,200 ಸಣ್ಣ ಪ್ರಾಣಿಗಳು ಮತ್ತು 15,000 ಕೀಟಗಳನ್ನು ಅವು ಸೆರೆಹಿಡಿದವು. ಸಂರಕ್ಷಣಾತ್ಮಕವಾದ ಸಲಕರಣೆಗಳನ್ನು ಧರಿಸಿದ್ದ ವಿಜ್ಞಾನಿಗಳು, ಆ ಪ್ರಾಣಿಗಳನ್ನು ಅರಿವಳಿಕೆ ಅನಿಲದಿಂದ ಕೊಂದರು. ತದನಂತರ ಆ ವೈರಸ್ಗಾಗಿ ಅವುಗಳನ್ನು ಪರೀಕ್ಷಿಸಸಾಧ್ಯವಿರುವಂತಹ ಸ್ಥಳವಾದ ಅಮೆರಿಕಕ್ಕೆ ಅಂಗಾಂಶದ ಸ್ಯಾಂಪ್ಲ್ಗಳನ್ನು ಅವರು ಕಳುಹಿಸಿದರು.
ಒಂದು ವೈರಸ್ ಅಡಗಿಕೊಳ್ಳಸಾಧ್ಯವಿರುವ ಸ್ಥಳಗಳು ಬಹುಮಟ್ಟಿಗೆ ಅಪರಿಮಿತವಾಗಿರುವುದರಿಂದ, ಅದರ ಮೂಲವು ಕಂಡುಕೊಳ್ಳಲ್ಪಡುವುದು ಎಂಬುದಕ್ಕೆ ಯಾವುದೇ ನಿಶ್ಚಿತತೆ ಇಲ್ಲ. ಸಿಡಿಸಿಯ ರೋಗೋತ್ಪತ್ತಿ ಸಂಬಂಧವಾದ ವಿಶೇಷ ಶಾಖೆಯ ಮುಖ್ಯಸ್ಥರಾದ, ಡಾ. ಸಿ. ಜೆ. ಪೀಟರ್ಸ್ ಹೇಳಿದ್ದು: “ಈ ಬಾರಿ, ಈಬೋಲ ವೈರಸ್ ಇರುವ ಶರೀರದ ಭಾಗವನ್ನು ಕಂಡುಹಿಡಿಯುವ ನಮ್ಮ ಅನುಪಾತವು ಸಮಭಾಗಕ್ಕಿಂತ ಹೆಚ್ಚಾಗಿದೆಯೆಂದು ನಾನು ಎಣಿಸುವುದಿಲ್ಲ.”
ಸಾಂಕ್ರಾಮಿಕ ರೋಗವು ಕಣ್ಮರೆಯಾಗುತ್ತದೆ
ಆಗಸ್ಟ್ 25ರಂದು, 42 ದಿನಗಳ ವರೆಗೆ—ರೋಗದ ಒಳಹೊಮ್ಮುವಿಕೆಯ ಅಧಿಕತಮ ಕಾಲಾವಧಿಯ ಇಮ್ಮಡಿಯಷ್ಟು—ಹೊಸ ರೋಗಿಗಳು ಇರದಿದ್ದ ಕಾರಣದಿಂದ, ಈ ಸಾಂಕ್ರಾಮಿಕ ರೋಗವು ಕೊನೆಗೊಂಡಿತೆಂದು ಅಧಿಕೃತವಾಗಿ ಘೋಷಿಸಲಾಯಿತು. ಈ ರೋಗವು ಏಕೆ ವ್ಯಾಪಕವಾಗಿ ಹಬ್ಬಿರಲಿಲ್ಲ? ಒಂದು ಕಾರಣವು, ಈ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲಿಕ್ಕಾಗಿ ಮಾಡಲ್ಪಟ್ಟ ಅಂತಾರಾಷ್ಟ್ರೀಯ ವೈದ್ಯಕೀಯ ಪ್ರಯತ್ನಗಳಾಗಿದ್ದವು. ಈ ಸಾಂಕ್ರಾಮಿಕ ರೋಗವನ್ನು ತುಂಡರಿಸಿದ ಇನ್ನೊಂದು ಕಾರಣವು, ರೋಗದ ತೀವ್ರತೆಯು ತಾನೇ ಆಗಿತ್ತು. ಈ ರೋಗವು ಇಷ್ಟು ತೀವ್ರಗತಿಯಲ್ಲಿ ಕಾಣಿಸಿಕೊಂಡು, ಜನರನ್ನು ಕೊಂದದ್ದರಿಂದ ಮತ್ತು ನಿಕಟ ಸಂಪರ್ಕದಿಂದ ಮಾತ್ರವೇ ರವಾನಿಸಲ್ಪಟ್ಟದ್ದರಿಂದ, ಇದು ಬಹು ದೊಡ್ಡ ಸಂಖ್ಯೆಯ ಜನರಿಗೆ ಹರಡಲಿಲ್ಲ.
315 ಜನರು ಈ ರೋಗವನ್ನು ಅಂಟಿಸಿಕೊಂಡರು ಮತ್ತು ಅವರಲ್ಲಿ 244 ಮಂದಿ ಮರಣಪಟ್ಟರೆಂದು ಅಧಿಕೃತ ದಾಖಲೆಗಳು ತೋರಿಸುತ್ತವೆ—ಮರಣ ಪ್ರಮಾಣವು 77 ಪ್ರತಿಶತ. ಈ ಕ್ಷಣದಲ್ಲಿ ಈಬೋಲವು ಸ್ತಬ್ಧವಾಗಿದೆ. ಯೆಹೋವನ ಹೊಸ ಲೋಕದಲ್ಲಿ ಅದು ಸದಾಕಾಲಕ್ಕೂ ಮೌನಗೊಳಿಸಲ್ಪಡುವುದು. (ಯೆಶಾಯ 33:24ನ್ನು ನೋಡಿರಿ.) ಈ ಮಧ್ಯೆ, ‘ಮತ್ತೊಮ್ಮೆ ಕೊಲ್ಲಲಿಕ್ಕಾಗಿ ಈಬೋಲ ಪುನರಾಗಮಿಸುವುದೊ?’ ಎಂಬುದಾಗಿ ಜನರು ಕುತೂಹಲಪಡುತ್ತಾರೆ. ಪುನರಾಗಮಿಸಬಹುದು. ಆದರೆ ಯಾರೊಬ್ಬರೂ ಎಲ್ಲಿ ಅಥವಾ ಯಾವಾಗ ಎಂಬುದನ್ನು ತಿಳಿದಿಲ್ಲ.
[ಪುಟ 34 ರಲ್ಲಿರುವ ಚೌಕ]
ಯಥಾದೃಷ್ಟಿಯಲ್ಲಿ ಸಾಂಕ್ರಾಮಿಕ ರೋಗ
ಈಬೋಲ ಒಂದು ಕೊಲೆಗಡುಕವಾಗಿದೆಯಾದರೂ, ಕಡಿಮೆ ಸ್ವರೂಪದ ರೋಗಗಳಿಂದ ಉಂಟುಮಾಡಲ್ಪಡುವ ಬೆದರಿಕೆಯು, ಆಫ್ರಿಕದವರಿಗೆ ಹೆಚ್ಚು ದೊಡ್ಡ ಬೆದರಿಕೆಯಾಗಿದೆ. ಈಬೋಲದ ತಲೆದೋರುವಿಕೆಯ ಸಮಯದಲ್ಲಿ, ಇತರ ರೋಗಗಳು ಸದ್ದಿಲ್ಲದೆ ತಮ್ಮ ಬಲಿತೆಗೆದುಕೊಂಡವು. ಕೀಕ್ವಿಟ್ನ ಕೆಲವು ನೂರು ಕಿಲೊಮೀಟರ್ಗಳಷ್ಟು ಪೂರ್ವಭಾಗದಲ್ಲಿ, 250 ಜನರು ಇತ್ತೀಚೆಗೆ ಪೋಲಿಯೊದಿಂದ ಬಾಧಿಸಲ್ಪಟ್ಟಿದ್ದರೆಂದು ವರದಿಸಲ್ಪಟ್ಟಿತು. ವಾಯುವ್ಯ ಭಾಗದಲ್ಲಿ, ಕಾಲರ ರೋಗದ ಮಾರಕ ವಿಧವು ಮಾಲಿಯನ್ನು ಸೂರೆಮಾಡಿತು. ದಕ್ಷಿಣ ಭಾಗದ ಅಂಗೋಲದಲ್ಲಿ, ನಿದ್ರಾವಾತರೋಗದಿಂದ 30,000 ಜನರು ಬಾಧಿಸಲ್ಪಟ್ಟಿದ್ದರು. ಪಶ್ಚಿಮ ಆಫ್ರಿಕದ ವಿಸ್ತಾರವಾದ ಕ್ಷೇತ್ರದಲ್ಲಿ, ಮಿದುಳಿನ ಪೊರೆಗಳ ಉರಿಯೂತದ ಸಾಂಕ್ರಾಮಿಕ ರೋಗದಿಂದ ಸಾವಿರಾರು ಮಂದಿ ಮೃತಪಟ್ಟರು. ದ ನ್ಯೂ ಯಾರ್ಕ್ ಟೈಮ್ಸ್ ಹೇಳಿಕೆಯನ್ನಿತ್ತದ್ದು: “ಆಫ್ರಿಕದವರಿಗೆ ಏಳುವ ಕಳವಳಗೊಳಿಸುವ ಪ್ರಶ್ನೆಯು, ಬಹುಮಟ್ಟಿಗೆ ತಡೆಯಸಾಧ್ಯವಿರುವ ರೋಗಗಳೊಂದಿಗೆ ನಡೆಯುವ [ಆಫ್ರಿಕದ] ದೈನಂದಿನ ಮಾರಕ ಪ್ರತಿಭಟನೆಗಳು, ಜಗತ್ತಿನ ಮನಸ್ಸಾಕ್ಷಿ ಪರದೆಯ ಮೇಲೆ ಏಕೆ ತೀರ ಕಡಮೆ ಮಿಣುಕನ್ನು ಎಬ್ಬಿಸುತ್ತವೆಂಬುದೇ.”
[ಪುಟ 33 ರಲ್ಲಿರುವ ಚಿತ್ರ]
ಕೊಲೆಗಡುಕ ವೈರಸ್ನ ಮೂಲಕ್ಕಾಗಿ ವಿಜ್ಞಾನಿಗಳು ಅನ್ವೇಷಣೆಮಾಡುತ್ತಾರೆ