ಏಯ್ಡ್ಸ್ ಹದಿಹರೆಯದವರಿಗೆ ಆಪತ್ಕಾಲ
ಏಯ್ಡ್ಸ್ ವ್ಯಾಧಿಗೆ ವಯಸ್ಸು ಯಾ ಸಂತತಿಯ ಅಂತರದ ಜ್ಞಾನವಿಲ್ಲ. ಜಗದ್ವ್ಯಾಪಕ ವರದಿಗಳು, ಏಯ್ಡ್ಸ್ನ ಕುರಿತಾಗಿ ನ್ಯೂ ಯಾರ್ಕ್ ಟೈಮ್ಸ್ ಲೇಖನದ ಶೀರ್ಷಿಕೆ ಹೇಳಿದಂತೆ “ಏಯ್ಡ್ಸ್ ಹದಿಪ್ರಾಯದವರಲ್ಲಿ ಹರಡುತ್ತಿದೆ, ಈ ಹೊಸ ಪ್ರವಣತೆ ಪರಿಣತರನ್ನು ಭೀತಿಗೊಳಪಡಿಸಿದೆ,” ಎಂಬುದಕ್ಕೆ ದುಃಖಕರವಾದ ರುಜುವಾತನ್ನು ಒದಗಿಸುತ್ತವೆ. ಹದಿಪ್ರಾಯದವರಲ್ಲಿ ಏಯ್ಡ್ಸ್ನ ಹರವು “ಮುಂದಿನ ವಿಪತ್ತಾಗಲಿದೆ,” ಎಂದರು ಶಿಕಾಗೋ ನಗರದ ಒಂದು ಪ್ರಸಿದ್ಧ ಮೆಡಿಕಲ್ ಸೆಂಟರಿನಲ್ಲಿ ತರುಣಾವಸ್ಥೆಯ ಔಷಧಶಾಸ್ತ್ರದ ಡೈರೆಕ್ಟರ್, ಡಾ. ಗ್ಯಾರಿ ಆರ್. ಸ್ಟ್ರೋಕ್ಯಾಶ್. “ಇದು ಭಯಂಕರ, ಮತ್ತು ಧ್ವಂಸಕಾರಕವಾಗಲಿದೆ,” ಎಂದರವರು. ಸಾನ್ ಫ್ರಾನ್ಸಿಸ್ಕೊ ನಗರದ ಕೈಸರ್ ಪರ್ಮನಂಟೆ ಮೆಡಿಕಲ್ ಸೆಂಟರಿನಲ್ಲಿ ಟೀನ್ ಕಿನ್ಲಿಕ್ನ ಮುಖ್ಯಸ್ಥ, ಡಾ. ಚಾರ್ಲ್ಸ್ ವಿಬ್ಲ್ಸ್ಮೆನ್ ಪ್ರಲಾಪಿಸಿದ್ದು: “1990ಗಳ ಏಯ್ಡ್ಸ್ ವ್ಯಾಧಿ, ವ್ಯಾಕ್ಸಿನ್ ಲಸಿಕೆಯಿಲ್ಲದಿರುವಲ್ಲಿ, ಹದಿಹರೆಯದವರ ಮಧ್ಯೆ ಬರುವುದು.” ಏಯ್ಡ್ಸ್ ಅಂಟಿರುವ ಹದಿಪ್ರಾಯದವರ ಕುರಿತು ಮಾತಾಡುತ್ತಾ, ನ್ಯೂ ಯಾರ್ಕ್ ಸಿಟಿಯ ಪ್ರಸಿದ್ಧ ಏಯ್ಡ್ಸ್ ಶಿಕ್ಷಕರೊಬ್ಬರ ಅವಲೋಕನವು ಹೀಗಿತ್ತು: “ಇದೊಂದು ವಿಷಮ ತುರ್ತು ಪರಿಸ್ಥಿತಿಯೆಂದು ನಮ್ಮ ಎಣಿಕೆ.”
ಕೆನಡದ ದ ಟೊರಾಂಟೊ ಸ್ಟಾರ್, ಏಯ್ಡ್ಸ್ ವ್ಯಾಧಿ ಹದಿಪ್ರಾಯದವರ ಮಧ್ಯೆ ಹರಡುವಾಗ ನಿಷೇಧಕ ಹೊರನೋಟವನ್ನು ಮೇಲ್ಪಂಕ್ತಿಯಾಗಿ ಕೊಟ್ಟಿತು. ಒಬ್ಬ ಡಾಕ್ಟರರು ಹೇಳಿದ್ದು: “ಇದೀಗ ಯಾರ ಗ್ರಹಿಕೆಗಿಂತಲೂ ಇದು ಹೆಚ್ಚು ಕೆಟ್ಟದ್ದಾಗಿದೆ. ಇದು ನಮ್ಮ ಹೆಚ್ಚು ನಿಯಂತ್ರಣದಲ್ಲಿರದ ಭಯಂಕರ ಸಮಸ್ಯೆಯೆಂದು ನನ್ನ ಎಣಿಕೆ. ಕ್ರಮೇಣ, ಇದು ಎಷ್ಟು ಕೆಟ್ಟದೆಂದು ನಾವು ಕಂಡುಹಿಡಿಯಲಿದ್ದೇವೆ.” ಈ ಏಯ್ಡ್ಸ್ ಪೀಡೆ ವರ್ಧಿಸಿದಂತೆ, ಈ ಡಾಕ್ಟರರ ಸರಳ ಪದಸಮೂಹ, ಲೋಕವ್ಯಾಪಕವಾಗಿ ಆರೋಗ್ಯಾಧಿಕಾರಿಗಳ ಮತ್ತು ಸರಕಾರಿ ನಾಯಕರುಗಳ ಸರ್ವಾನುಮತ ಅಭಿಪ್ರಾಯವಾಗುತ್ತದೆ.
ಇತ್ತೀಚೆಗಿನ ವರೆಗೆ, ಏಯ್ಡ್ಸ್ ನಿಪುಣರು, ಏಯ್ಡ್ಸ್ ರೋಗವನ್ನು ತರುವ ಏಚ್ಐವಿ ರೋಗಾಣುವಿನ ಅಂಟುವಿಕೆಗೆ ತರುಣರು ಹೆಚ್ಚಿನ ಅಪಾಯದಲ್ಲಿದ್ದಾರೆಂದು ಎತ್ತಿಹೇಳಲಿಲ್ಲ. “ಒಂದು ವರ್ಷದ ಹಿಂದೆ ಕೇವಲ ಊಹಾತ್ಮಕ ಸಾಧ್ಯತೆಯಿದ್ದ ವಿಷಯದ ಕುರಿತು ನಾವೀಗ ಮಾತಾಡುತ್ತಿದ್ದೇವೆ,” ಎಂದರು ನ್ಯೂ ಯಾರ್ಕ್ ಸಿಟಿಯ ಒಬ್ಬ ಡಾಕ್ಟರರು. ಆದರೆ, “ಒಂದು ವರ್ಷದ ಹಿಂದೆ ಒಬ್ಬ ಹದಿಪ್ರಾಯದ ರೋಗಿಯೂ ಇದ್ದಿಲ್ಲದ ಡಾಕ್ಟರರಿಗೆ ಈಗ ಒಂದು ಡಜನ್ ಅಥವಾ ಹೆಚ್ಚು ರೋಗಿಗಳಿದ್ದಾರೆ,” ಎಂದು ವರದಿ ಮಾಡಿತು, ದ ನ್ಯೂ ಯಾರ್ಕ್ ಟೈಮ್ಸ್.
ಏಯ್ಡ್ಸ್ ಪೀಡಿತರಾದ ಹದಿಪ್ರಾಯದವರ ಕುರಿತು ದೊರಕಿರುವ ಮಾಹಿತಿ ಅಪಾಯಸೂಚಕವಾದರೂ, ಅದು ದೊಡ್ಡ ಸಮಸ್ಯೆಯ ತುದಿಯ ಕೇವಲ ಮಸುಕು ಹೊರಮೇರೆಯೆಂದು ಸಂಶೋಧಕರ ಅಭಿಪ್ರಾಯ. ಏಕೆಂದರೆ ರೋಗ ಅಂಟಿದ ಮೇಲೆ ಸರಾಸರಿ ಏಳರಿಂದ ಹತ್ತು ವರ್ಷಗಳ ತನಕ ಅನೇಕ ವೇಳೆ ರೋಗಸೂಚನೆ ಕಂಡುಬರುವುದಿಲ್ಲ. ಆದುದರಿಂದ, ಹದಿಪ್ರಾಯದಲ್ಲಿ ಏಚ್ಐವಿಯ ಸೋಂಕುಹಿಡಿದವರು, ಬೆಳೆದಿರುವ ಏಯ್ಡ್ಸ್ ರೋಗಸೂಚನೆಯನ್ನು ಹದಿಪ್ರಾಯದ ಅಂತ್ಯವರ್ಷಗಳ ತನಕ ಯಾ 20ಗಳ ಮೊದಲಭಾಗದ ತನಕ ವಿಕಸಿಸಿರಲಿಕ್ಕಿಲ್ಲ.
ಉದಾಹರಣೆಗೆ, ನ್ಯೂ ಯಾರ್ಕ್ ರಾಜ್ಯದಲ್ಲಿ 1987ರಿಂದ ಹಿಡಿದು ನಡೆದ ಎಲ್ಲ ಜನನಗಳ ಒಂದು ಅಧ್ಯಯನದಲ್ಲಿ, ನ್ಯೂ ಯಾರ್ಕ್ ರಾಜ್ಯದ ಆರೋಗ್ಯ ಇಲಾಖೆ, 15 ವರ್ಷದವರಿಗೆ ಹುಟ್ಟಿದ 1,000 ಮಕ್ಕಳಲ್ಲಿ ಒಂದು ಮಗು ಏಯ್ಡ್ಸ್ ರೋಗಾಣುವಿಗೆ ಪ್ರತಿವಿಷ ವಸ್ತುವುಳ್ಳದ್ದಾಗಿತ್ತೆಂದು ಕಂಡುಹಿಡಿಯಿತು. ಇದು ಅದರ ತಾಯಿ ರೋಗಪೀಡಿತಳೆಂದು ತೋರಿಸಿತು. ಅಪಾಯಸೂಚಕವಾಗಿ, ಇದೇ ಅಧ್ಯಯನ, 19 ವಯಸ್ಸಿನವರಿಗೆ ಹುಟ್ಟಿದ 100 ಮಕ್ಕಳಲ್ಲಿ ಒಂದು ಮಗುವಿನಲ್ಲಿ ಏಯ್ಡ್ಸ್ ರೋಗಾಣುವಿನ ಪ್ರತಿವಿಷವಿತ್ತೆಂದು ತೋರಿಸಿತು. ಅಮೆರಿಕದ ಸಿಡಿಸಿ (ರೋಗ ನಿಯಂತ್ರಣ ಕೇಂದ್ರಗಳು) ಮಾಡಿದ ಇನ್ನೊಂದು ಅಧ್ಯಯನ, ಅಮೆರಿಕದ ಪುರುಷರಲ್ಲಿ ಏಯ್ಡ್ಸ್ ಇರುವವರಲ್ಲಿ 20 ಪ್ರತಿಶತ ಮತ್ತು ಅಮೆರಿಕದ ಸ್ತ್ರೀಯರಲ್ಲಿ 25 ಪ್ರತಿಶತ, 20ಗಳ ವಯಸ್ಸಿನವರು ಎಂದು ತೋರಿಸಿತು. ಅಧಿಕಾಂಶ ಕೇಸುಗಳಲ್ಲಿ, ಈ ರೋಗ ತಾರುಣ್ಯದಲ್ಲಿ ಸೋಂಕಿತೆಂದು ಈ ಸಿಡಿಸಿ ಅಧ್ಯಯನ ತೋರಿಸುತ್ತದೆ.
ಆದರೆ, ಏಯ್ಡ್ಸ್ ರೋಗಾಣುವಿನಿಂದ ಹುಟ್ಟಿದ ಮಕ್ಕಳು ಹದಿಪ್ರಾಯದವರಾಗುವುದು ವಿರಳವಾಗಿರುವಾಗ ಇದು ಹೇಗೆ ಸಾಧ್ಯ? ಕಾರಣಗಳು ನಿಬ್ಬೆರಗಾಗಿಸುತ್ತವೆ!
ಸಂಶೋಧಕರು ಮತ್ತು ವೈದ್ಯರು, ಇಂದಿನ ಹದಿಪ್ರಾಯದವರು “ಅವರಲ್ಲಿ ಲೈಂಗಿಕ ರವಾನಿತ ರೋಗಗಳ ಸಂಖ್ಯೆ ತೋರಿಸುವಂತೆ, ವಿಪರೀತ ಲೈಂಗಿಕಾಸಕ್ತರು” ಎಂದು ಬೇಗನೆ ತಿಳಿಸುತ್ತಾರೆಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತು. ಪಾಪ್ಯುಲೇಶನ್ ಆಪ್ಶನ್ಸ್ ಕೇಂದ್ರ ವರದಿ ಮಾಡುವುದೇನಂದರೆ ಪ್ರತಿ ವರ್ಷ 6 ಹದಿಪ್ರಾಯದವರಲ್ಲಿ ಒಬ್ಬನಿಗೆ ರತಿರೋಗ ಹಿಡಿಯುವುದಲ್ಲದೆ, ಲೈಂಗಿಕ ಕ್ರಿಯಾಶೀಲರಾದ ಪ್ರತಿ 6 ಹೈಸ್ಕೂಲ್ ಹುಡುಗಿಯರಲ್ಲಿ ಒಬ್ಬಳಿಗೆ ಕಡಮೆ ಪಕ್ಷ ನಾಲ್ಕು ವಿಭಿನ್ನ ಜೊತೆಗಾರರಾದರೂ ಇದ್ದಾರೆ.
“‘ಬೇಡವೆಂದು ಹೇಳು’ ಎಂಬ ಬುದ್ಧಿವಾದದ ಎದುರಿನಲ್ಲಿಯೂ, ಸಾಮಾನ್ಯ ಅಮೆರಿಕನ್ ಹದಿಪ್ರಾಯದ ಹುಡುಗಿ ತನ್ನ ಕನ್ಯಾವಸ್ಥೆಯನ್ನು 16ನೆಯ ವಯಸ್ಸಿನೊಳಗೆ ಕಳೆದುಕೊಳ್ಳುತ್ತಾಳೆ,” ಎನ್ನುತ್ತದೆ, ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್. “ಹದಿಪ್ರಾಯದವರ ಪರೀಕ್ಷೆ ವಿರಳವಾಗಿರುವುದರಿಂದ, ರೋಗ ಅಂಟಿದವರಿಗೆ ತಮ್ಮಲ್ಲಿ ಏಚ್ಐವಿ ರೋಗಾಣು ಇದೆಯೊ ಇಲ್ಲವೊ ಎಂದು ತಿಳಿದಿರುವುದಿಲ್ಲ,” ಎನ್ನುತ್ತದೆ ಆ ಪತ್ರಿಕೆ. ಕ್ರ್ಯಾಕ್ ಕೊಕೇಯ್ನ್ ಮಾದಕ ದ್ರವ್ಯದೊಂದಿಗೆ ಜೊತೆ ಸೇರಿರುವ ಲೈಂಗಿಕ ಸ್ವೇಚ್ಛಾಸಂಪರ್ಕವಿರಲಿ, ಇಲ್ಲದಿರಲಿ, ಅವರು ಪಲಾಯನಶೀಲರಾಗಿರಲಿ, ಇಲ್ಲದಿರಲಿ, “ಅಮೆರಿಕನ್ ಹದಿಪ್ರಾಯದವರು ಏಯ್ಡ್ಸ್ಗೆ ಪಕ್ವವಾದ ಗುರಿಹಲಗೆಗಳು,” ಎಂದು ಏಯ್ಡ್ಸ್ನ ಒಬ್ಬ ಪರಿಣತರು ಬರೆದರು. “ಅವರು ಈಗಾಗಲೆ 25 ಲಕ್ಷ ರತಿ ರವಾನಿತ ರೋಗದ ಕೇಸುಗಳನ್ನು ಅನುಭವಿಸುತ್ತಿದ್ದಾರೆ.” ಸಿಡಿಸಿಯ ಡಾ. ಗ್ಯಾರಿ ನೋಬ್ಲ್ ಈ ಅವಲೋಕನವನ್ನು ಮಾಡಿದರು: “ಅವರ ಲೈಂಗಿಕ ನಡತೆಯ ಕಾರಣ ವಿಶೇಷ ರೀತಿಯಲ್ಲಿ ರೋಗ ಅಂಟುವ ಅಪಾಯವಿದೆಯೆಂದು ನಮಗೆ ಗೊತ್ತು.”
ಏಯ್ಡ್ಸ್ ರವಾನೆಗೆ ಆಗಲೆ ಹೆಚ್ಚುತ್ತಿರುವ ಸಂಖ್ಯೆಯ ಮಾರ್ಗಗಳಿಗೆ ಬೀದಿ ಜೀವನಾರ್ಹತೆಯುಳ್ಳ ತರುಣರನ್ನು ಕೂಡಿಸಬೇಕು. ಇವರಲ್ಲಿ ಕೆಲವರು ಇನ್ನೂ ಹದಿಹರೆಯದವರೂ ಅಲ್ಲ. ಅನೇಕರು ಮಕ್ಕಳನ್ನು ಅಪಪ್ರಯೋಗಿಸುವ ಹೆತ್ತವರಿಂದ ಓಡಿಹೋಗುವವರು. ಇವರಲ್ಲಿ ಕ್ರ್ಯಾಕ್ ಕೊಕೇಯ್ನ್ ಉಪಯೋಗಿಸುವವರ ಸಂಖ್ಯೆಯಲ್ಲಿ ನಾಟಕೀಯ ವೃದ್ಧಿಯಿದೆ. ಅನೇಕರು ಈ ಅಭ್ಯಾಸವನ್ನು ಮುಂದುವರಿಸುವ ಕಾರಣದಿಂದ ಯಾ ಮಲಗಲು ಸ್ಥಳ ಬೇಕಾಗುವ ಕಾರಣದಿಂದ ವೇಶ್ಯಾವೃತ್ತಿಗೆ ಇಳಿದಿದ್ದಾರೆ. ಉದಾಹರಣೆಗೆ, ದಕ್ಷಿಣ ಅಮೆರಿಕದಲ್ಲಿ, “9 ಮತ್ತು 10ರಷ್ಟೂ ಚಿಕ್ಕ ಹುಡುಗಿಯರು—ಕೆಲವು ವೇಳೆ ಕೇವಲ ಒಂದು ಪೇಟ್ಲು ಆಹಾರಕ್ಕಾಗಿ—ವೇಶ್ಯಾ ವೃತ್ತಿ ಮಾಡುತ್ತಾರೆ,” ಎಂದರು ಒಬ್ಬ ಮಕ್ಕಳ ಸಲಹೆಗಾರ್ತಿ. “ಅನೇಕರಿಗೆ ಏಯ್ಡ್ಸ್ ಆಗಲಿ, ಸಂಭೋಗವಾಗಲಿ ಏನೆಂದು ಗೊತ್ತಿಲ್ಲ. ಗರ್ಭಿಣಿ ಹುಡುಗಿಯರು, ಅದು ತಮಗೆ ನೆಗಡಿಯಂತೆ ‘ಹಿಡಿಯಿತು’ ಎಂದು ಯೋಚಿಸಿದವರೂ ಇದ್ದಾರೆ,” ಎಂದರು ಅವರು.
ಹದಿಹರೆಯದ ಪಲಾಯನಶೀಲರಿಗೆ ಏಚ್ಐವಿ ಅಂಟುವ ಸಂಖ್ಯೆ ಏಯ್ಡ್ಸ್ ವ್ಯಾಧಿಗೆ ಅಶುಭಸೂಚಕ ಎನ್ನುತ್ತಾರೆ, ಏಯ್ಡ್ಸ್ ಪರಿಣತರೂ ನ್ಯಾಷನಲ್ ಕ್ಯಾನ್ಸರ್ ಇನ್ಸಿಟ್ಟ್ಯೂಟಿನ ಮಕ್ಕಳ ರೋಗ ವಿಭಾಗದ ಮುಖ್ಯಸ್ಥರೂ ಆದ ಡಾ. ಫಿಲಿಪ್ ಪಿಸೋ. “ಮೈಥುನದ ಮೂಲಕ ಜೀವಿಸುವ ಹತ್ತು ಲಕ್ಷಕ್ಕೂ ಹೆಚ್ಚು ಪಲಾಯನಶೀಲರಿದ್ದಾರೆ. ಇವರಲ್ಲಿ ಅನೇಕರು ಸಮಾಜದೊಳಗೆ ಮರುಸಂಯೋಜಿತರಾಗುವುದು ನಿಸ್ಸಂದೇಹ.”
ಹೀಗಿರುವುದರಿಂದ, ಏಯ್ಡ್ಸ್ ಸಾಂಕ್ರಾಮಿಕ ರೋಗ ಹದಿಪ್ರಾಯದವರಲ್ಲಿ ಅತ್ಯಂತ ವೇಗದಲ್ಲಿ ಹರಡುವುದು ಆಶ್ಚರ್ಯವೆ? ಅದು ನಿಲ್ಲಿಸಲಾಗದ ಪಥದಲ್ಲಿದೆಯೆ? ಏಯ್ಡ್ಸ್ ರೋಗಾಣು ಅಂಟಿರುವವರು ಮತ್ತು ವಿವಾಹಪೂರ್ವದ ಮೈಥುನ ಬೇಡ ಎಂದು ಹೇಳಸಾಧ್ಯವಿಲ್ಲದಿರುವವರು ಔದಾಸೀನ್ಯ ಮತ್ತು ದಾಕ್ಷಿಣ್ಯಪರತೆಯನ್ನು ತೋರಿಸುವ ತನಕ ಇದು ಮುಂದುವರಿಯುವುದು. ದೃಷ್ಟಾಂತಕ್ಕೆ, ದಕ್ಷಿಣ ಆಫ್ರಿಕದ ಜೊಹಾನೆಸ್ಬರ್ಗಿನ ದ ಸಂಡೇ ಸ್ಟಾರ್ನ ಈ ವರದಿಯನ್ನು ಪರಿಗಣಿಸಿರಿ. ರತಿ ರವಾನಿತ ರೋಗವಿದ್ದ 1,142 ಚಿಕಿತ್ಸಾಲಯದ ರೋಗಿಗಳ ಒಂದು ಸಮೀಕ್ಷೆಯಲ್ಲಿ, 70 ಸೇಕಡ ಜನರು ತಮಗೆ ಒಂದು ತಿಂಗಳಲ್ಲಿ 3ರಿಂದ 80 ಸಂಭೋಗದ ಜೊತೆಗಾರರಿದ್ದರೆಂದು ಒಪ್ಪಿಕೊಂಡರು. ಇವರಲ್ಲಿ ಕೆಲವರು ಇನ್ನೂ ಸಂಭೋಗ ಮಾಡುತ್ತಾ ಇತರರಿಗೆ ರೋಗ ಅಂಟಿಸುತ್ತಿದ್ದರು.
ದುರ್ಭಾಗ್ಯವಶಾತ್, ಅನೇಕ ಹದಿಪ್ರಾಯದವರಿಗೆ ಏಯ್ಡ್ಸ್ ತಗಲುವ ಕುರಿತು ಹೆಚ್ಚು ಲಕ್ಷ್ಯವೇ ಇಲ್ಲ. ಅವರಿಗೆ ರಸ್ತೆಯಲ್ಲಿ ಸಾಯುವ ಅನೇಕ ವಿಧಗಳಿರುವುದರಿಂದ, ಪ್ರತಿದಿನ ಬದುಕಿ ಉಳಿಯುವುದೇ ಒಂದು ಹೋರಾಟವಾಗಿರುವಾಗ, ಕೆಲವು ವರ್ಷಗಳ ಮೇಲೆ ತಮ್ಮನ್ನು ಕೊಲ್ಲುವ ಒಂದು ವಿಷಯದ ಮೇಲೆ ಅವರ ದೃಷ್ಟಿಯಿರುವುದಿಲ್ಲ. ಈ ಮಧ್ಯೆ, ಇದನ್ನು ಗುಣಮಾಡುವ ಒಂದು ಔಷಧ ಖಂಡಿತವಾಗಿಯೂ ಕಂಡುಹಿಡಿಯಲ್ಪಡುವುದೆಂದು ಅವರ ಅಭಿಪ್ರಾಯ. ಒಬ್ಬ ಏಯ್ಡ್ಸ್ ಪರಿಣತರು ಹೇಳಿದ್ದು: “ತರುಣಾವಸ್ಥೆಯವರು, 10 ವರ್ಷಗಳ ಮುಂದೃಷ್ಟಿಯಿಲ್ಲದ ಗುಂಪಿಗೆ ಒಂದು ಪ್ರಧಾನ ದೃಷ್ಟಾಂತ.”
ಅನೇಕರಲ್ಲಿ, ತಮ್ಮ ಸಂಭೋಗದ ಜೊತೆಗಳು ತಮ್ಮಲ್ಲಿ ಏಯ್ಡ್ಸ್ ರೋಗಾಣುವಿಲ್ಲವೆಂದು ಹೇಳುವಾಗ ಅವರು ಸುಳ್ಳಾಡುತ್ತಿಲ್ಲವೆಂಬ ಅಮಂಗಳಸೂಚಕ ತಪ್ಪು ಊಹೆ ಇದೆ. ಅನೇಕಾನೇಕ ವೇಳೆ ಇದು ಸತ್ಯವಲ್ಲ. ರೋಗ ಪರಿಪಕ್ವಾವಸ್ಥೆಯ ಸಮಯದಲ್ಲಿಯೂ ಅನೇಕ ರೋಗಿಗಳು ಕೋಪದ ಯಾ ಸೇಡು ತೀರಿಸುವ ಕಾರಣದಿಂದ ಬೇಕೆಂದು ಇತರರಿಗೆ ರೋಗ ಅಂಟಿಸುತ್ತಾರೆ.
ಅಲಕ್ಷ್ಯಿಸಬಾರದ ಇನ್ನು ಕೆಲವರು, ಪ್ರಮುಖ ಮಾದಕ ಪದಾರ್ಥಗಳನ್ನು ಸೇವಿಸಲು ಮಲಿನವಾದ ಚುಚ್ಚುಸೂಜಿಗಳನ್ನು ಉಪಯೋಗಿಸುವುದರಿಂದ ರೋಗ ಅಂಟಿರುವವರು. ಈ ನಾಲೆ ಈಗಾಗಲೆ ಅನೇಕ ಆಹುತಿಗಳನ್ನು ತೆಗೆದುಕೊಂಡಿದೆ. ಮತ್ತು, ಕೊನೆಯದಾಗಿ, ರಕ್ತಪೂರಣಗಳಿಂದಾಗಿ ಏಯ್ಡ್ಸ್ ಬರುವ ಸದಾ ಹಾಜರಿರುವ ಬೆದರಿಕೆಯಿದೆ. ಅನೇಕ ನಿರಪರಾಧಿ ಆಹುತಿಗಳು ಆಗಲೆ ಸತ್ತಿರುತ್ತಾರೆ, ಮತ್ತು ಇನ್ನಿತರರು ಏಚ್ಐವಿ ಕಳಂಕಿತ ರಕ್ತದಿಂದ ಇನ್ನು ಸಾಯಲಿದ್ದಾರೆ. ಅನೇಕ ಡಾಕ್ಟರರು ಮತ್ತು ನರ್ಸುಗಳು ಏಯ್ಡ್ಸ್ ರೋಗಾಣು ಕಳಂಕಿತ ಚುಚ್ಚುಸೂಜಿಗಳಿಂದ ತಮ್ಮನ್ನು ತಾವೇ ಎಲ್ಲಿ ಚುಚ್ಚಿಕೊಳ್ಳುತ್ತೇವೋ ಎಂದು ಭಯಪಡುತ್ತಾರೆ. ಇದು ಅವರ ಜೀವವನ್ನು ಬದಲಾಯಿಸಲಾಗದ ರೀತಿಯಲ್ಲಿ ಮಾರ್ಪಡಿಸುವುದು. ಹೀಗಿರುವುದರಿಂದ, ಏಯ್ಡ್ಸ್ ವ್ಯಾಧಿ 90ಗಳ ಮತ್ತು ಮುಂದಿನ ವರ್ಷಗಳ ಆಪತ್ಕಾಲವಾಗಿದೆಯೆಂದು ಹೇಳಲ್ಪಟ್ಟಿರುವುದು ಆಶ್ಚರ್ಯವೊ? (g91 7/22)