ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 6/8 ಪು. 11-13
  • ಟ್ಸೆಟ್ಸಿ ನೊಣ ಆಫ್ರಿಕದ ಶಾಪವೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಟ್ಸೆಟ್ಸಿ ನೊಣ ಆಫ್ರಿಕದ ಶಾಪವೊ?
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದು ರಕ್ತ ಕುಡಿಯುತ್ತದೆ
  • ಅದು ಪ್ರಾಣಿಗಳನ್ನು ಕೊಲ್ಲುತ್ತದೆ
  • ಅದು ಜನರನ್ನು ಕೊಲ್ಲುತ್ತದೆ
  • ಸಮರ್ಥನೆಯಲ್ಲಿ ಒಂದು ಮಾತು
  • ಕ್ಷಣಮಾತ್ರದಲ್ಲಿ ಹಾರುವ ನುಸಿ
    ವಿಕಾಸವೇ? ವಿನ್ಯಾಸವೇ?
  • ಸೂಕ್ಷ್ಮರೂಪದ ಹಾರಾಟ ಪ್ರವೀಣರು
    ಎಚ್ಚರ!—1999
  • ಕೀಟರವಾನಿತ ರೋಗಗಳು ಬೆಳೆಯುತ್ತಿರುವ ಒಂದು ಸಮಸ್ಯೆ
    ಎಚ್ಚರ!—2003
  • ಪರೋಪಜೀವಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ!
    ಎಚ್ಚರ!—1999
ಇನ್ನಷ್ಟು
ಎಚ್ಚರ!—1996
g96 6/8 ಪು. 11-13

ಟ್ಸೆಟ್ಸಿ ನೊಣ ಆಫ್ರಿಕದ ಶಾಪವೊ?

ನೈಜೀರಿಯದ ಎಚ್ಚರ! ಸುದ್ದಿಗಾರರಿಂದ

ನಾವು ಇತ್ತೀಚೆಗೆ ಪಶ್ಚಿಮ ಆಫ್ರಿಕದಲ್ಲಿರುವ ಒಂದು ಗ್ರಾಮೀಣ ಕ್ಷೇತ್ರಕ್ಕೆ ಸ್ಥಳಾಂತರಿಸಿದ್ದೆವು. ಉಷ್ಣವಲಯದ ಕಾಡು ನಮ್ಮನ್ನು ಸುತ್ತುವರಿದಿತ್ತು. ಒಂದು ಅಪರಾಹ್ನ ನನ್ನ ಹೆಂಡತಿಯು ಕಿರುಕೋಣೆಯೊಳಗೆ ನಡೆದುಹೋಗಿ, “ಇಲ್ಲೊಂದು ಕುದುರೆಗಳನ್ನು ಪೀಡಿಸುವ ನೊಣವಿದೆ!” ಎಂದು ಚೀರಿದಳು.

ನೊಣವು ಕಿರುಕೋಣೆಯಿಂದ ರಭಸದಿಂದ ಹೊರಬಂದು, ಸ್ನಾನದ ಕೋಣೆಯೊಳಗೆ ಪ್ರವೇಶಿಸಿತು. ನನ್ನ ಹಿಂದೆ ಬಾಗಲನ್ನು ಮುಚ್ಚುತ್ತಾ, ನಾನು ಕೀಟನಾಶಕದ ಒಂದು ಡಬ್ಬಿಯನ್ನು ಥಟ್ಟನೆ ಸೆಳೆದು, ಅದರ ಹಿಂದೆ ಹೋದೆ. ನೊಣವು ಎಲ್ಲೂ ಕಾಣಲಿಲ್ಲ. ಹಠಾತ್ತನೆ ಅದು ನನ್ನ ಮುಖದ ಕಡೆಗೆ ಹಾರಿತು. ಅದು ನನ್ನನ್ನು ಆಕ್ರಮಿಸುತ್ತಿದೆ! ತೋಳುಗಳು ಚಲಿಸುತ್ತಾ, ನಾನು ಅದನ್ನು ಹೊಡೆದು ನೆಲಕ್ಕುರುಳಿಸಲು ಅಸಫಲವಾಗಿ ಪ್ರಯತ್ನಿಸಿದೆ. ಅದು ಕಿಟಕಿಯ ಕಡೆಗೆ ಹಾರಿತು. ಅಲ್ಲಿದ್ದ ಪರದೆಯು ಅದರ ಪಾರಾಗುವಿಕೆಯನ್ನು ತಡೆಯಿತು. ನೊಣವು ಅದರ ಮೇಲೆ ಬಂದಿಳಿಯಿತು.

ನಾನು ಗುರಿಯಿಟ್ಟು, ನೊಣವನ್ನು ಕೀಟನಾಶಕದಿಂದ ಹೊಡೆದೆ. ಸಾಮಾನ್ಯವಾಗಿ ಆ ರೀತಿಯ ನೇರವಾದ ಹೊಡೆತವು, ಯಾವುದೇ ಕೀಟವನ್ನು ತತ್‌ಕ್ಷಣ ಕೊಲ್ಲುವುದು. ಆದರೆ ಈ ನೊಣವನ್ನು ಕೊಲ್ಲಲಿಲ್ಲ. ಅದು ಹಾರಿ, ಸ್ನಾನದ ಕೋಣೆಯ ಸುತ್ತಲೂ ಝೇಂಕರಿಸುವುದನ್ನು ಮುಂದುವರಿಸಿತು.

ಈ ನೊಣವು ಗಡುಸಾಗಿದೆ! ಕೀಟನಾಶಕವು ಪರಿಣಾಮಕಾರಿಯಾಗಿರುವುದೆಂದು ಮತ್ತು ನೊಣವು ಬೇಗನೆ ನೆಲಕ್ಕುರುಳುವುದೆಂದು ನಾನು ಭರವಸೆಯಿಂದಿದ್ದೆ. ಆದರೆ ಅದು ಬೀಳಲಿಲ್ಲ. ಮುಂದಿನ ಸಾರಿ ಅದು ನೆಲಮುಟ್ಟಿದಾಗ, ನಾನು ಎರಡನೆಯ ಬಾರಿ ಸಿಂಪಡಿಸಿದೆ. ಅದು ಮತ್ತೊಮ್ಮೆ ಹಾರಿಹೋಯಿತು.

ಇದು ಯಾವ ಬಗೆಯ ಅಸಾಧಾರಣ ನೊಣವಾಗಿದೆ? ನೇರವಾದ ಇನ್ನೂ ಎರಡು ಹೊಡೆತಗಳು ಅದನ್ನು ಅಂತಿಮವಾಗಿ ಕೊಂದವು.

ನನ್ನ ಕನ್ನಡಕಗಳನ್ನು ನಾನು ಧರಿಸಿಕೊಂಡು, ಆ ಜೀವಿಯನ್ನು ಜಾಗರೂಕವಾಗಿ ಪರೀಕ್ಷಿಸಿದೆ. ಅದು ಸಾಮಾನ್ಯ ನೊಣಕ್ಕಿಂತ ದೊಡ್ಡದಾಗಿದ್ದರೂ, ಕುದುರೆಗಳನ್ನು ಪೀಡಿಸುವ ನೊಣದಷ್ಟು ದೊಡ್ಡದಾಗಿರಲಿಲ್ಲ. ಒಂದು ಸಾಧಾರಣ ನೊಣಕ್ಕಿಂತ ಹೆಚ್ಚು ನುಣುಪಿನ ಆಕಾರವನ್ನು ಅದಕ್ಕೆ ಕೊಡುತ್ತಾ, ಅದರ ರೆಕ್ಕೆಗಳು ಅದರ ಬೆನ್ನಿನ ಮೇಲೆ ಅಡ್ಡಲಾಗಿದ್ದವು. ಒಂದು ಉದ್ದವಾದ ಸೂಜಿಯಂತಹ ಹೀರು ಕೊಳವಿಯು ಅದರ ಬಾಯಿಯ ಭಾಗದಿಂದ ಚಾಚಿತು.

ನನ್ನ ಹೆಂಡತಿಯನ್ನು ನಾನು ಕರೆದು ಹೇಳಿದ್ದು: “ಇದು ಕುದುರೆಗಳನ್ನು ಪೀಡಿಸುವ ನೊಣವಲ್ಲ. ಇದೊಂದು ಟ್ಸೆಟ್ಸಿ ನೊಣವಾಗಿದೆ.”

ಅಮೆರಿಕದ ಕ್ಷೇತ್ರಕ್ಕಿಂತಲೂ ದೊಡ್ಡದಾದ, 1 ಕೋಟಿ 17 ಲಕ್ಷ ಚದರ ಕಿಲೊಮೀಟರಿನಷ್ಟು ಅದರ ಆಫ್ರಿಕನ್‌ ರಾಜ್ಯದಿಂದ, ಆ ನೊಣವನ್ನು ನಿರ್ಮೂಲಗೊಳಿಸಲು ಪ್ರಯತ್ನಿಸುವುದರ ಕಷ್ಟವನ್ನು ಈ ಹೋರಾಟವು ನನ್ನ ಮೇಲೆ ಅಚ್ಚೊತ್ತಿತು. ಜನರು ಏಕೆ ಅದನ್ನು ನಿರ್ಮೂಲಗೊಳಿಸಲು ಬಯಸುತ್ತಾರೆ? ಮೂರು ಆರೋಪಗಳು ಅದರ ಮೇಲೆ ಹೊರಿಸಲ್ಪಟ್ಟಿವೆ. ಒಂದನೆಯ ಆರೋಪ:

ಅದು ರಕ್ತ ಕುಡಿಯುತ್ತದೆ

ಟ್ಸೆಟ್ಸಿ ನೊಣಗಳ 22 ವಿಭಿನ್ನ ಜಾತಿಗಳಿವೆ. ಎಲ್ಲವು ಸಹಾರದ ಕೆಳಗಿನ (ಸಬ್‌-ಸಹಾರನ್‌) ಆಫ್ರಿಕದಲ್ಲಿ ಜೀವಿಸುತ್ತವೆ. ಗಂಡುಗಳೂ ಹೆಣ್ಣುಗಳೂ—ಸಕಲವೂ—ಏಕೈಕ ಕಡಿತದಿಂದ ಅವುಗಳ ತೂಕಕ್ಕಿಂತ ಮೂರು ಬಾರಿಯಷ್ಟು ಹೆಚ್ಚು ರಕ್ತವನ್ನು ಹೀರುತ್ತಾ, ಕಶೇರುಕ ರಕ್ತವನ್ನು ಕಂಠಪೂರ್ತಿ ಕುಡಿಯುತ್ತವೆ.

ಅವು ಮೇಯುವ ಪ್ರಾಣಿಗಳ—ಆಫ್ರಿಕ ದೇಶಕ್ಕೆ ಸ್ಥಳೀಯವಾದವುಗಳು ಹಾಗೂ ಸ್ಥಳೀಯವಲ್ಲದವುಗಳು, ಎರಡರ—ವ್ಯಾಪಕವಾದ ಶ್ರೇಣಿಯ ಮೇಲೆ ಔತಣಮಾಡುತ್ತವೆ. ಅವು ಜನರನ್ನೂ ಕಚ್ಚುತ್ತವೆ. ಕಡಿತವು ಆಳವಾದ, ರಕ್ತವನ್ನು ಹೀರುವ ಇರಿತವಾಗಿದ್ದು, ತೀಕ್ಷ್ಣವಾಗಿಯೂ ವೇದನಾಮಯವಾಗಿಯೂ ಇರುತ್ತದೆ. ಅದು ಒಂದೇ ಸಮಯದಲ್ಲಿ ತುರಿಸುತ್ತಲೂ ನೋಯುತ್ತಲೂ ಇರುತ್ತದೆ. ಅದು ಬಾಸುಂಡೆಯನ್ನು ಎಬ್ಬಿಸುತ್ತದೆ.

ಟ್ಸೆಟ್ಸಿ ನೊಣಗಳು ತಮ್ಮ ಕೆಲಸದಲ್ಲಿ ಬಹು ನೈಪುಣ್ಯವುಳ್ಳವುಗಳು. ಅವು ನಿಮ್ಮ ತಲೆಯ ಸುತ್ತಲೂ ಝೇಂಕರಿಸುತ್ತಾ, ಸಮಯವನ್ನು ವ್ಯರ್ಥವಾಗಿ ಕಳೆಯುವುದಿಲ್ಲ. ಅವು ಯಾರಾದರೊಬ್ಬರ ಕಡೆಗೆ ಗುಂಡಿನಂತೆ ಹಾರಬಲ್ಲವು ಮತ್ತು ಹೇಗೊ ತಡೆಗಳನ್ನು ಹಾಕಿ, ಮುಖದ ಮೇಲೆ ಎಷ್ಟು ಕೋಮಲವಾಗಿ ನೆಲೆಸುತ್ತವೆಂದರೆ, ಅವುಗಳ ಇರುವಿಕೆಯ ಅನಿಸಿಕೆಯೇ ಆಗುವುದಿಲ್ಲ. ಅವು ಕಳ್ಳರಂತೆ ಇರಬಲ್ಲವು; ಅವು ಹಾರಿಹೋಗುವ ತನಕ ಒಂದಿಷ್ಟು ರಕ್ತವನ್ನು ಅವು ಕದ್ದಿವೆ ಎಂಬುದು ನಿಮಗೆ ಕೆಲವೊಮ್ಮೆ ತಿಳಿದಿರುವುದೇ ಇಲ್ಲ—ಆಗ ನೀವು ಮಾಡುವಂತೆ ಉಳಿದಿರುವ ಸಂಗತಿಯು, ನಷ್ಟವನ್ನು ನಿರ್ಧರಿಸುವುದೇ ಆಗಿರುತ್ತದೆ.

ಅವು ಸಾಮಾನ್ಯವಾಗಿ ತೆರೆದಿಡಲ್ಪಟ್ಟಿರುವ ದೇಹದ ಕಡೆಗೆ ಧಾವಿಸುತ್ತವೆ. (ನನ್ನ ಕುತ್ತಿಗೆಯ ಹಿಂಭಾಗವನ್ನು ಅವು ಇಷ್ಟಪಡುವಂತೆ ತೋರುತ್ತದೆ!) ಆದರೆ, ಕೆಲವೊಮ್ಮೆ, ಒಂದು ರಕ್ತನಾಳವನ್ನು ಕೊರೆಯುವ ಮೊದಲು, ಷರಾಯಿಯ ಕಾಲಿನ ಮೇಲೆ ಅಥವಾ ಷರ್ಟಿನ ತೋಳುಗಳ ಮೇಲೆ ಹರಿದಾಡಲು ಅವು ನಿರ್ಧರಿಸುತ್ತವೆ. ಅಥವಾ ಆರಿಸಿಕೊಳ್ಳುವಲ್ಲಿ, ಅವು ಬಟ್ಟೆಯ ಮೇಲಿಂದಲೂ ಕಚ್ಚಬಲ್ಲವು—ಒಂದು ಘೇಂಡಾ ಮೃಗದ ಗಡುಸಾದ ತ್ವಚ್ಛೆಯನ್ನೂ ತಿವಿಯಬಲ್ಲ ಒಂದು ಕೀಟಕ್ಕೆ ಅದೊಂದು ಸಮಸ್ಯೆಯಾಗಿರದು.

ಟ್ಸೆಟ್ಸಿ ನೊಣವು ಬುದ್ಧಿವಂತ ನೊಣವಾಗಿದೆ ಮಾತ್ರವಲ್ಲ ಕುಯುಕ್ತಿಯುಳ್ಳದ್ದೂ ಆಗಿರುವುದಾಗಿ ಜನರು ಅದನ್ನು ಆಪಾದಿಸುತ್ತಾರೆ. ಒಮ್ಮೆ ನಾನು ಒಂದನ್ನು ಕೀಟನಾಶಕದಿಂದ ಕೊಲ್ಲಲು ಪ್ರಯತ್ನಿಸಿದಾಗ, ಅದು ನನ್ನ ಕಿರುಕೋಣೆಯೊಳಗೆ ಹಾರಿಹೋಗಿ ನನ್ನ ಈಜುಡುಗೆಯಲ್ಲಿ ಅಡಗಿಕೊಂಡಿತು. ಎರಡು ದಿನಗಳ ತರುವಾಯ ನಾನು ಆ ಉಡುಗೆಗಳನ್ನು ತೊಟ್ಟುಕೊಂಡಾಗ, ಅದು ನನ್ನನ್ನು ಎರಡು ಬಾರಿ ಕಚ್ಚಿತು! ಇನ್ನೊಂದು ಸಂದರ್ಭದಲ್ಲಿ ಒಂದು ಟ್ಸೆಟ್ಸಿ ನೊಣವು ನನ್ನ ಹೆಂಡತಿಯ ಪರ್ಸಿನಲ್ಲಿ ಅಡಗಿಕೊಂಡಿತು. ಆಕೆ ಪರ್ಸನ್ನು ಒಂದು ಆಫೀಸಿಗೆ ತೆಗೆದುಕೊಂಡು ಹೋಗಿ, ಅದರೊಳಗೆ ಕೈಯನ್ನು ಹಾಕಿದಾಗ, ನೊಣವು ಆಕೆಯ ಕೈಯನ್ನು ಕಚ್ಚಿತು. ಆಫೀಸಿನ ಕೆಲಸಗಾರರ ನಡುವೆ ಹಾವಳಿಯನ್ನುಂಟುಮಾಡುತ್ತಾ, ಅದು ಕೋಣೆಯ ಸುತ್ತಲೂ ಹಾರಿತು. ಅದನ್ನು ಜಜ್ಜುಬಡಿಯಲು ಪ್ರಯತ್ನಿಸುತ್ತಾ, ಎಲ್ಲರೂ ಕೆಲಸಮಾಡುವುದನ್ನು ನಿಲ್ಲಿಸಿದರು.

ಆದುದರಿಂದ ಟ್ಸೆಟ್ಸಿ ನೊಣದ ವಿರುದ್ಧವಿರುವ ಮೊದಲನೆಯ ಆರೋಪವು, ಅದು ವೇದನಾಮಯವಾದ ಕಡಿತದೊಂದಿಗೆ ರಕ್ತವನ್ನು ಹೀರುವ ನೊಣವಾಗಿದೆ ಎಂಬುದೆ. ಎರಡನೆಯ ಆರೋಪ:

ಅದು ಪ್ರಾಣಿಗಳನ್ನು ಕೊಲ್ಲುತ್ತದೆ

ಟ್ರಿಪನೊಸೋಂಗಳೆಂದು ಕರೆಯಲ್ಪಡುವ ಅತಿಸೂಕ್ಷ್ಮ ಪರೋಪಜೀವಿಗಳ ಮೂಲಕ ಉಂಟಾಗುವ ಒಂದು ರೋಗವನ್ನು ಕೆಲವು ವಿಧಗಳ ಟ್ಸೆಟ್ಸಿ ನೊಣಗಳು ರವಾನಿಸುತ್ತವೆ. ಆ ರೋಗವಿರುವ ಒಂದು ಪ್ರಾಣಿಯ ರಕ್ತವನ್ನು ಟ್ಸೆಟ್ಸಿ ನೊಣವೊಂದು ಹೀರುವಾಗ, ಪರೋಪಜೀವಿಗಳನ್ನೊಳಗೊಂಡ ರಕ್ತವನ್ನು ಅವು ನುಂಗುತ್ತವೆ. ಇವು ನೊಣದ ಒಳಗೆ ವಿಕಸಿಸಿ, ವೃದ್ಧಿಗೊಳ್ಳುತ್ತವೆ. ನೊಣವು ಮತ್ತೊಂದು ಪ್ರಾಣಿಯನ್ನು ಕಚ್ಚುವಾಗ, ಪರೋಪಜೀವಿಗಳು ನೊಣದಿಂದ ಆ ಪ್ರಾಣಿಯ ರಕ್ತಪ್ರವಾಹದೊಳಗೆ ಸಾಗುತ್ತವೆ.

ರೋಗವು ಟ್ರಿಪನೊಸೋಮಿಯಾಸಿಸ್‌ ಆಗಿದೆ. ಪ್ರಾಣಿಗಳಲ್ಲಿ ಸಂಭವಿಸುವ ಬಗೆಯು ನಗಾನ ಎಂಬುದಾಗಿ ಕರೆಯಲ್ಪಟ್ಟಿದೆ. ನಗಾನ ಪರೋಪಜೀವಿಗಳು ಆಫ್ರಿಕದ ದೇಶಕ್ಕೆ ಸ್ಥಳೀಯವಾಗಿರುವ ಅನೇಕ ಪ್ರಾಣಿಗಳ—ವಿಶೇಷವಾಗಿ ಹರಿಣ, ಕೋಣ, ಕಾಡುಹಂದಿಗಳು, ಜಿಂಕೆಯಂಥ ಪ್ರಾಣಿಗಳು, ರೀಡ್‌ಬಕ್‌, ಮತ್ತು ನರಹುಲಿ ಹಂದಿಗಳು—ರಕ್ತಪ್ರವಾಹದಲ್ಲಿ ಹುಲುಸಾಗಿ ಬೆಳೆಯುತ್ತವೆ. ಪರೋಪಜೀವಿಗಳು ಈ ಪ್ರಾಣಿಗಳನ್ನು ಕೊಲ್ಲುವುದಿಲ್ಲ.

ಆದರೆ ಈ ಪರೋಪಜೀವಿಗಳು ಆಫ್ರಿಕ ದೇಶಕ್ಕೆ ಸ್ಥಳೀಯವಾಗಿರದ ಜಾನುವಾರುಗಳನ್ನು—ಒಂಟೆಗಳು, ನಾಯಿಗಳು, ಕತ್ತೆಗಳು, ಆಡುಗಳು, ಕುದುರೆಗಳು, ಹೇಸರಗತ್ತೆಗಳು, ಹೋರಿಗಳು, ಹಂದಿಗಳು ಮತ್ತು ಕುರಿಗಳನ್ನು—ಧ್ವಂಸಮಾಡುತ್ತವೆ. ನ್ಯಾಷನಲ್‌ ಜಿಯೋಗ್ರಾಫಿಕ್‌ ಪತ್ರಿಕೆಗನುಸಾರ, ಪ್ರತಿ ವರ್ಷ ನಗಾನ 30 ಲಕ್ಷ ಪಶುಗಳನ್ನು ಕೊಲ್ಲುತ್ತದೆ.

ಪೂರ್ವ ಆಫ್ರಿಕದಲ್ಲಿರುವ ಮಾಸೈಗಳಂತಹ ದನಕಾಯುವವರು, ಟ್ಸೆಟ್ಸಿ ನೊಣಗಳು ಅತಿ ಹೇರಳವಾಗಿರುವ ಕ್ಷೇತ್ರಗಳನ್ನು ತೊರೆಯುವುದು ಹೇಗೆಂದು ಕಲಿತಿದ್ದಾರೆ, ಆದರೆ ಅನಾವೃಷ್ಟಿ ಹಾಗೂ ಹುಲ್ಲುಗಾವಲಿನ ಕೊರತೆಯು ಕೆಲವೊಮ್ಮೆ ಇದನ್ನು ಅಸಾಧ್ಯವಾಗಿ ಮಾಡುತ್ತದೆ. ಇತ್ತೀಚಿನ ಒಂದು ಅನಾವೃಷ್ಟಿಯ ಸಮಯದಲ್ಲಿ, ತಮ್ಮ 600 ಪಶುಗಳನ್ನು ಒಟ್ಟಿಗೆ ಇಡುತ್ತಿದ್ದ ನಾಲ್ಕು ಕುಟುಂಬಗಳು ಪ್ರತಿದಿನ ಈ ನೊಣದಿಂದಾಗಿ ಒಂದು ಪ್ರಾಣಿಯನ್ನು ಕಳೆದುಕೊಳ್ಳುತ್ತಿದ್ದರು. ಲೆಸಾಲಾನ್‌, ಅವರೊಳಗಿನ ಒಬ್ಬ ಕುಟುಂಬ ಹಿರಿಯನು ಹೇಳಿದ್ದು: “ನಾವು ಮಾಸೈ ಜನರು ಧೈರ್ಯವಂತರು. ನಾವು ಸಿಂಹವನ್ನು ಈಟಿಯಿಂದ ತಿವಿಯುತ್ತೇವೆ ಮತ್ತು ಆಕ್ರಮಿಸುವ ಕೋಣವನ್ನು ಎದುರಿಸುತ್ತೇವೆ. ಕರಿಯ ವಿಷಸರ್ಪವನ್ನು ದೊಣ್ಣೆಯಿಂದ ಹೊಡೆಯುತ್ತೇವೆ ಮತ್ತು ಕುಪಿತಗೊಂಡ ಆನೆಯನ್ನು ಎದುರಿಸುತ್ತೇವೆ. ಆದರೆ ಆರ್‌ಕಿಮ್‌ಬೈ [ಟ್ಸೆಟ್ಸಿ ನೊಣ]ದೊಂದಿಗೆ? ನಾವು ನಿಸ್ಸಹಾಯಕರಾಗಿದ್ದೇವೆ.”

ನಗಾನವನ್ನು ಗುಣಪಡಿಸಲು ಔಷಧಗಳಿವೆ, ಆದರೆ ಕೆಲವು ಸರಕಾರಗಳು ಅವುಗಳ ಉಪಯೋಗವನ್ನು ಒಬ್ಬ ಪಶುವೈದ್ಯನ ಮೇಲ್ವಿಚಾರಣೆಯ ಕೆಳಗೆ ಮಾತ್ರ ಅನುಮತಿಸುತ್ತವೆ. ಅದಕ್ಕೆ ಒಳ್ಳೆಯ ಕಾರಣವಿದೆ, ಏಕೆಂದರೆ ಔಷಧದ ಭಾಗಶಃ ಪರಿಮಾಣಗಳು ಪ್ರಾಣಿಯನ್ನು ನಾಶಗೊಳಿಸುತ್ತವೆ ಮಾತ್ರವಲ್ಲ, ಔಷಧಗಳಿಗೆ ನಿರೋಧಕವಾಗಿರುವ ಪರೋಪಜೀವಿಗಳನ್ನೂ ಉತ್ಪಾದಿಸುತ್ತವೆ. ಸಾಯುತ್ತಿರುವ ತನ್ನ ಪ್ರಾಣಿಗಳ ಚಿಕಿತ್ಸೆ ಮಾಡಲು ಸಕಾಲದಲ್ಲಿ ಒಬ್ಬ ಪಶುವೈದ್ಯನನ್ನು ಕಾಡಿನಲ್ಲಿ ಕಂಡುಹಿಡಿಯುವುದು ದನಕಾಯುವವನಿಗೆ ಕಷ್ಟಕರವಾಗಿರಬಹುದು.

ಟ್ಸೆಟ್ಸಿ ನೊಣದ ವಿರುದ್ಧವಿರುವ ಮೊದಲಿನ ಎರಡು ಆರೋಪಗಳು ನಿರ್ವಿವಾದವಾಗಿ ರುಜುಮಾಡಲ್ಪಟ್ಟಿವೆ—ಅದು ರಕ್ತವನ್ನು ಕುಡಿಯುತ್ತದೆ ಮತ್ತು ಪ್ರಾಣಿಗಳನ್ನು ಕೊಲ್ಲುವ ಒಂದು ರೋಗವನ್ನು ಹರಡಿಸುತ್ತದೆ. ಆದರೆ ಇನ್ನೂ ಹೆಚ್ಚಿನದಿದೆ. ಮೂರನೆಯ ಆರೋಪ:

ಅದು ಜನರನ್ನು ಕೊಲ್ಲುತ್ತದೆ

ಮನುಷ್ಯರು ನಗಾನ ಟ್ರಿಪನೊಸೋಂನಿಂದ ಬಾಧಿಸಲ್ಪಡುವುದಿಲ್ಲ. ಆದರೆ ಟ್ಸೆಟ್ಸಿ ನೊಣವು ಮನುಷ್ಯರಿಂದ ಮನುಷ್ಯರಿಗೆ ಮತ್ತೊಂದು ವಿಧದ ಟ್ರಿಪನೊಸೋಂ ಅನ್ನು ಹಂಚುತ್ತದೆ. ಈ ರೀತಿಯ ಟ್ರಿಪನೊಸೋಮಿಯಾಸಿಸ್‌, ನಿದ್ರಾರೋಗವೆಂದು ಕರೆಯಲ್ಪಟ್ಟಿದೆ. ನಿದ್ರಾ ರೋಗವಿರುವ ಒಬ್ಬ ವ್ಯಕ್ತಿಯು, ಕೇವಲ ಬಹಳಷ್ಟು ನಿದ್ರಿಸುತ್ತಾನೆಂದು ನೆನಸಬೇಡಿ. ರೋಗವು ಆನಂದಕರವಾದ ನಿದ್ರೆಯಾಗಿರುವುದಿಲ್ಲ. ಅದು ಅಸ್ವಸ್ಥತೆ, ಆಯಾಸ ಮತ್ತು ಇಳಿ ಜ್ವರದಿಂದ ಆರಂಭಿಸುತ್ತದೆ. ಅದರ ನಂತರ ದೀರ್ಘ ಮಂಪರ, ಅತಿ ಜ್ವರ, ಸಂಧಿ ವೇದನೆ, ಬೀಗಿದ ಅಂಗಾಂಶಗಳು ಮತ್ತು ಉಬ್ಬಿದ ಯಕೃತ್ತು ಹಾಗೂ ಗುಲ್ಮ ಬರುತ್ತವೆ. ಕೊನೆಯ ಹಂತಗಳಲ್ಲಿ, ಪರೋಪಜೀವಿಗಳು ಕೇಂದ್ರನರವ್ಯೂಹವನ್ನು ಹೊಕ್ಕಂತೆ, ರೋಗಿಯು ಮಾನಸಿಕ ಕ್ಷಯಿಸುವಿಕೆ, ತೀಕ್ಷ್ಣವಾಯು, ಅತಿಸುಪ್ತಿ (ಕೋಮ) ಮತ್ತು ಮರಣವನ್ನು ಅನುಭವಿಸುತ್ತಾನೆ.

ಈ ಶತಮಾನದ ಆದಿ ಭಾಗದಲ್ಲಿ, ನಿದ್ರಾರೋಗದ ತಲೆದೋರುವಿಕೆಗಳು ಆಫ್ರಿಕನ್‌ ಭೂಖಂಡವನ್ನು ಧ್ವಂಸಮಾಡಿದವು. 1902 ಮತ್ತು 1905ರ ನಡುವೆ, ರೋಗವು ವಿಕ್ಟೋರಿಯ ನದಿಯ ಬಳಿ ಸುಮಾರು 30,000 ಜನರನ್ನು ಕೊಂದಿತು. ಹಿಂಬಾಲಿಸಿ ಬಂದ ದಶಕಗಳಲ್ಲಿ, ರೋಗವು ಕ್ಯಾಮರೂನ್‌, ಘಾನ ಮತ್ತು ನೈಜೀರಿಯದೊಳಗೆ ಹಬ್ಬಿತು. ಅನೇಕ ಹಳ್ಳಿಗಳಲ್ಲಿ, ಹೆಚ್ಚಿನ ನದಿ ಕಣಿವೆಗಳಿಂದ ಜನರ ದೊಡ್ಡ ಪ್ರಮಾಣದ ವಿಸರ್ಜನೆಯನ್ನು ಅವಶ್ಯಪಡಿಸುತ್ತಾ, ಮೂರನೆಯ ಒಂದಂಶದಷ್ಟು ಜನರು ಸೋಂಕಿತರಾಗಿದ್ದರು. ಚಲಿಸುವ ತಂಡಗಳು ನೂರಾರು ಸಾವಿರ ಜನರಿಗೆ ಚಿಕಿತ್ಸೆ ನೀಡಿದವು. 1930ರ ಅಂತ್ಯದಷ್ಟಕ್ಕೆ, ಈ ಸಾಂಕ್ರಾಮಿಕವು ಮಂಕಾಗಿ, ಗತಿಸಿಹೋಯಿತು.

ಇಂದು ಈ ರೋಗವು ಪ್ರತಿ ವರ್ಷ ಸುಮಾರು 25,000 ಜನರನ್ನು ಬಾಧಿಸುತ್ತದೆ. ಲೋಕ ಆರೋಗ್ಯ ಸಂಸ್ಥೆಗನುಸಾರ, 36 ಉಪ ಸಹಾರದ ದೇಶಗಳಲ್ಲಿರುವ ಐದು ಕೋಟಿಗಿಂತಲೂ ಹೆಚ್ಚಿನ ಜನರು ಈ ರೋಗವನ್ನು ಸೋಂಕಿಸಿಕೊಳ್ಳುವ ಗಂಡಾಂತರದಲ್ಲಿದ್ದಾರೆ. ನಿದ್ರಾ ರೋಗವನ್ನು ಚಿಕಿತ್ಸೆಗೆ ಒಳಪಡಿಸದಿದ್ದರೆ ಅದು ಮಾರಕವಾಗಿದೆಯಾದರೂ, ಅದರ ಚಿಕಿತ್ಸೆಗೆ ಔಷಧಗಳಿವೆ. ಇತ್ತೀಚೆಗೆ ರೋಗದ ಚಿಕಿತ್ಸೆ ಮಾಡಲು ಎಫ್ಲಾರ್ನಿತೈನ್‌ ಎಂಬುದಾಗಿ ಕರೆಯಲ್ಪಡುವ ಒಂದು ಹೊಸ ಔಷಧವು ವಿಕಸಿಸಲ್ಪಟ್ಟಿತು—40 ವರ್ಷಗಳಲ್ಲಿ ಅಂತಹ ಮೊದಲನೆಯ ಔಷಧವು.

ಟ್ಸೆಟ್ಸಿ ನೊಣ ಮತ್ತು ಅದು ಸಾಗಿಸುವ ರೋಗದ ವಿರುದ್ಧ ಮಾನವರು ದೀರ್ಘವಾದೊಂದು ಯುದ್ಧವನ್ನು ಮಾಡಿದ್ದಾರೆ. 1907ರಲ್ಲಿ, ವಿನ್ಸಂಟ್‌ ಚರ್ಚಿಲ್‌, ಟ್ಸೆಟ್ಸಿ ನೊಣವನ್ನು ನಿರ್ಮೂಲಗೊಳಿಸಲಿಕ್ಕಾಗಿರುವ ಒಂದು ಕಾರ್ಯಾಚರಣೆಯ ಕುರಿತು ಬರೆದರು: “ಅವನ ಸುತ್ತಲೂ ಒಂದು ಸೂಕ್ಷ್ಮವಾದ ಜಾಲವು ಅಳುಕಿಲ್ಲದೆ ಹೆಣೆಯಲ್ಪಡುತ್ತಿದೆ.” ಹಿನ್ನೋಟ ಬೀರುವಾಗ, ಚರ್ಚಿಲರ “ಸೂಕ್ಷ್ಮವಾದ ಜಾಲ”ವು ದೊಡ್ಡ ರಂಧ್ರಗಳನ್ನು ಪಡೆದಿತ್ತೆಂಬುದು ಸುವ್ಯಕ್ತ. ಫೌಂಡೇಷನ್ಸ್‌ ಆಫ್‌ ಪ್ಯಾರಸೈಟಾಲಜಿ ಎಂಬ ಪುಸ್ತಕವು ಹೇಳುವುದು: “ಇಷ್ಟರ ವರೆಗೆ, ಟ್ಸೆಟ್ಸಿ ನೊಣದ 80 ವರ್ಷಗಳ ನಿರ್ಮೂಲನವು, ಟ್ಸೆಟ್ಸಿ ಹರಡಿಕೆಯ ಮೇಲೆ ಅತ್ಯಲ್ಪ ಪ್ರಭಾವವನ್ನು ಬೀರಿದೆ.”

ಸಮರ್ಥನೆಯಲ್ಲಿ ಒಂದು ಮಾತು

ಅಮೆರಿಕನ್‌ ಕವಿ ಆಗ್‌ಡನ್‌ ನ್ಯಾಶ್‌ ಬರೆದುದು: “ದೇವರು ತನ್ನ ವಿವೇಕದಲ್ಲಿ ನೊಣವನ್ನು ಮಾಡಿ, ಏಕೆಂಬುದನ್ನು ಹೇಳಲು ಮರೆತನು.” ಯೆಹೋವ ದೇವರು ಸಕಲ ವಿಷಯಗಳ ಸೃಷ್ಟಿಕರ್ತನೆಂಬುದು ಸತ್ಯವಾಗಿರುವುದಾದರೂ, ಆತನು ಮರೆಯುವ ಸ್ವಭಾವದವನೆಂಬುದು ಖಂಡಿತವಾಗಿಯೂ ಸತ್ಯವಲ್ಲ. ಸ್ವತಃ ಅನೇಕ ವಿಷಯಗಳನ್ನು ಕಂಡುಹಿಡಿಯುವಂತೆ ಅವನು ನಮ್ಮನ್ನು ಅನುಮತಿಸುತ್ತಾನೆ. ಹಾಗಾದರೆ ಟ್ಸೆಟ್ಸಿ ನೊಣದ ಕುರಿತೇನು? ಈ ವ್ಯಕ್ತವಾದ ಖಳನಾಯಕನ ಸಮರ್ಥನೆಯಲ್ಲಿ ಹೇಳಲಿಕ್ಕೆ ಏನಾದರೂ ಇದೆಯೊ?

ಬಹುಶಃ ಇಷ್ಟರ ವರೆಗಿನ ಅತಿ ಬಲವಾದ ಸಮರ್ಥನೆಯು ಏನೆಂದರೆ, ಜಾನುವಾರುಗಳ ನಾಶನದಲ್ಲಿ ಅದರ ಪಾತ್ರವು ಸ್ಥಳೀಯ ಆಫ್ರಿಕನ್‌ ವನ್ಯಜೀವಿ ರಕ್ಷಣಾತಾಣಗಳನ್ನು ಸಂರಕ್ಷಿಸಲು ಕಾರ್ಯಮಾಡಿದೆ ಎಂಬ ವಿಷಯವೇ ಆಗಿದೆ. ಆಫ್ರಿಕದ ವಿಶಾಲವಾದ ಕ್ಷೇತ್ರಗಳು ಪಶ್ಚಿಮ ಅಮೆರಿಕದ ಹುಲ್ಲುಪ್ರದೇಶಗಳಿಗೆ ತದ್ರೀತಿಯದ್ದಾಗಿದೆ—ಸ್ವತಃ ದೇಶವೇ ಸಾಕು ಪ್ರಾಣಿಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಟ್ಸೆಟ್ಸಿ ನೊಣದ ಕಾರಣ, ಸ್ಥಳೀಯ ಮೇಯುವ ಪ್ರಾಣಿಗಳನ್ನು ಕೊಲ್ಲದೆ ಇರುವ ಟ್ರಿಪನೊಸೋಂಗಳಿಂದ ಸಾಕು ಪ್ರಾಣಿಗಳು ಕೊಲ್ಲಲ್ಪಡುತ್ತವೆ.

ಟ್ಸೆಟ್ಸಿ ನೊಣ ಇಲ್ಲದೆ ಇರುತ್ತಿದ್ದಲ್ಲಿ, ಆಫ್ರಿಕದ ದೊಡ್ಡ ವನ್ಯಜೀವಿ ರಕ್ಷಣಾತಾಣಗಳು ಬಹಳ ಸಮಯದ ಹಿಂದೆಯೇ ಜಾನುವಾರುಗಳ ಹಿಂಡುಗಳಿಂದ ಸ್ಥಾನಭರ್ತಿ ಮಾಡಲ್ಪಟ್ಟಿರುತ್ತಿದ್ದವು ಎಂಬುದಾಗಿ ಅನೇಕರು ನಂಬುತ್ತಾರೆ. “ನಾನು ಟ್ಸೆಟ್ಸಿ ನೊಣವನ್ನು ಪ್ರವರ್ಧಿಸುತ್ತೇನೆ,” ಎಂಬುದಾಗಿ ಬಾಟ್ಸ್‌ವಾನ ವನ್ಯಜೀವಿ ರಕ್ಷಣಾತಾಣದಲ್ಲಿನ ಒಬ್ಬ ಮಾರ್ಗದರ್ಶಿಯಾದ ವಿಲಿ ಫಾನ್‌ ನಿಕರ್ಕ್‌ ಹೇಳುತ್ತಾರೆ. “ಟ್ಸೆಟ್ಸಿ ನೊಣವನ್ನು ನಾವು ನಿರ್ಮೂಲ ಮಾಡುವುದಾದರೆ, ಜಾನುವಾರುಗಳು ಆಕ್ರಮಿಸುವವು, ಮತ್ತು ಜಾನುವಾರುಗಳು ಭೂಖಂಡವನ್ನು ಒಂದು ದೊಡ್ಡ ಮರುಭೂಮಿಯಾಗಿ ನೆಲಸಮಗೊಳಿಸುತ್ತಾ, ಆಫ್ರಿಕದ ಲೂಟಿಕೋರರಾಗಿವೆ.” ಅವರು ಕೂಡಿಸಿದ್ದು: “ನೊಣವು ಉಳಿಯಬೇಕು.”

ನಿಶ್ಚಯವಾಗಿಯೂ, ಪ್ರತಿಯೊಬ್ಬರೂ ಅದರೊಂದಿಗೆ ಸಹಮತಿಸುವುದಿಲ್ಲ. ತನ್ನ ಮಕ್ಕಳು ಅಥವಾ ಜಾನುವಾರು ಟ್ರಿಪನೊಸೋಮಿಯಾಸಿಸ್‌ನಿಂದ ಕಷ್ಟಾನುಭವಿಸುವುದನ್ನು ನೋಡುವ ಒಬ್ಬ ಮನುಷ್ಯನನ್ನು ಮನಗಾಣಿಸಲು ಈ ವಾದವು ಹೆಚ್ಚನ್ನು ಪೂರೈಸುವುದಿಲ್ಲ. ಆಫ್ರಿಕ ದೇಶಕ್ಕೆ ಆಹಾರ ಒದಗಿಸಲು ಜಾನುವಾರುಗಳು ಬೇಕಾಗಿವೆ ಎಂದು ವಾದಿಸುವವರನ್ನೂ ಅದು ಮನಗಾಣಿಸುವುದಿಲ್ಲ.

ಆದರೂ ನಿಸರ್ಗದಲ್ಲಿ ಟ್ಸೆಟ್ಸಿ ನೊಣವು ವಹಿಸುವ ಪಾತ್ರದ ಕುರಿತು ಕಲಿಯಲು ಇನ್ನೂ ಹೆಚ್ಚಿನ ವಿಷಯವಿದೆ ಎಂಬುದು ನಿಸ್ಸಂದೇಹ. ಅದರ ವಿರುದ್ಧವಿರುವ ಆರೋಪಗಳು ಬಲವಾಗಿ ತೋರುತ್ತವಾದರೂ, ಬಹುಶಃ ಒಂದು ತೀರ್ಮಾನವನ್ನು ಮಾಡಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ.

ನೊಣಗಳ ಕುರಿತು ಮಾತಾಡುವಾಗ, ಈಗ ತಾನೇ ಒಂದು ಕೋಣೆಯೊಳಗೆ ಹಾರಿಬಂದಿದೆ. ಅದೊಂದು ಟ್ಸೆಟ್ಸಿ ನೊಣವೊ ಅಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೋಗುವಂತೆ ನನ್ನನ್ನು ಅನುಮತಿಸಿರಿ.

[ಪುಟ 22 ರಲ್ಲಿರುವ ಚಿತ್ರ ಕೃಪೆ]

Tsetse fly: ©Martin Dohrn, The National Audubon Society Collection/PR

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ