ಸೂಕ್ಷ್ಮರೂಪದ ಹಾರಾಟ ಪ್ರವೀಣರು
ಚಟೀರ್! ನೊಣಚಾಟಿಯನ್ನು ಹಾರುತ್ತಿರುವ ನೊಣದ ಕಡೆಗೆ ಬೀಸಿ ಹೊಡೆಯಲಾಗುತ್ತದೆ. ಆದರೆ ಆ ನೊಣ, ಚಾಟಿಯಿಂದ ತಪ್ಪಿಸಿಕೊಂಡು, ಗಾಳಿಯ ಸುಳಿಯಲ್ಲಿ ಒಂದು ಕ್ಷಣ ಹೆಣಗಾಡಿ, ತನ್ನನ್ನು ಸರಿಪಡಿಸಿಕೊಂಡು, ಮಿಡಿದು, ಚಾವಣಿಯ ಮೇಲೆ ಅಡಿಮೇಲಾಗಿ ಬಿದ್ದು, ಅದನ್ನು ನಾಶಪಡಿಸಲು ನೀವು ಮಾಡಿದ ಅಸಫಲ ಪ್ರಯತ್ನವನ್ನು ಅಣಕಿಸುತ್ತದೆ. ಈ ನೊಣಗಳು ನಿಜವಾಗಿಯೂ ಅಮೋಘ ರೀತಿಯ ಹಾರುವ ಜೀವಿಗಳಾಗಿವೆ! ವಾಸ್ತವದಲ್ಲಿ, ಈ ಸರ್ವವ್ಯಾಪಿ ನೊಣದ ಜಾತಿಗೆ, ಕೀಟಜಗತ್ತಿನಲ್ಲೇ ಅತಿ ಎತ್ತರದಲ್ಲಿ ಹಾರುವ ಹಾರಾಟಗಾರರು ಎಂಬ ಪ್ರಸಿದ್ಧಿ ಇದೆ. ಉಪರೆಕ್ಕೆಗಳು (ಹಾಲ್ಟರ್ಸ್) ಎಂದು ಕರೆಯಲ್ಪಡುವ, ಅದ್ಭುತಕರವಾಗಿ ಅಳವಡಿಸಲ್ಪಟ್ಟಿದ್ದು, ಸಮತೂಕವನ್ನು ಕಾಪಾಡಿಕೊಳ್ಳುವ ರೆಕ್ಕೆಗಳೇ ಭಾಗಶಃ ಈ ಹಾರಾಟಕ್ಕೆ ಕಾರಣವಾಗಿವೆ.
ತುದಿಯಲ್ಲಿ ಗುಂಡಾದ ಉಬ್ಬು ಇರುವ ಚಿಕ್ಕ ಜವುಗು ಸಸ್ಯದಂತೆ, ಎರಡು ಉಪರೆಕ್ಕೆಗಳು ನೊಣದ ಮುಂಡಭಾಗದಿಂದ, ಅಂದರೆ ಅದರ ಎರಡು ರೆಕ್ಕೆಗಳ ಕೆಳಗಿನಿಂದ ಹೊರಕ್ಕೆ ಚಾಚಿಕೊಂಡಿರುತ್ತವೆ. (ಮುಂದಿನ ಪುಟದಲ್ಲಿರುವ ಚಿತ್ರವನ್ನು ನೋಡಿ.) ನೊಣವೊಂದರ ರೆಕ್ಕೆಗಳು ಪಟಪಟನೆ ಬಡಿದುಕೊಳ್ಳಲು ಆರಂಭಿಸುವಾಗ, ಉಪರೆಕ್ಕೆಗಳು ಸಹ ಬಡಿದುಕೊಳ್ಳಲಾರಂಭಿಸುತ್ತವೆ; ಆ ಎರಡು ರೆಕ್ಕೆಗಳಷ್ಟೇ ವೇಗದಲ್ಲಿ, ಮತ್ತು ಪ್ರತಿ ಸೆಕೆಂಡಿಗೆ ನೂರಾರು ಬಾರಿ ಅವು ಬಡಿದುಕೊಳ್ಳುತ್ತವೆ. ವಾಸ್ತವದಲ್ಲಿ, ಉಪರೆಕ್ಕೆಗಳು ಅತಿ ಚಿಕ್ಕ ಗೈರೋಸ್ಕೋಪ್ (ಭ್ರಮದರ್ಶಕ)ಗಳಂತಿದ್ದು, ಕೀಟಗಳು ಹಾರಲು ಸಹಾಯ ಮಾಡುತ್ತವೆ. ನೊಣವು ತನ್ನ ದಿಕ್ಕನ್ನು ಬದಲಾಯಿಸಿದಾಗಲೆಲ್ಲ ಈ ಉಪರೆಕ್ಕೆಗಳು ನೊಣದ ಮಿದುಳಿಗೆ ಸಂಜ್ಞೆಗಳನ್ನು ಕಳುಹಿಸುತ್ತವೆ. ಉದಾಹರಣೆಗೆ, ಚಿಕ್ಕ ನೊಣವು ಗಾಳಿಯ ರಭಸಕ್ಕೆ ತುತ್ತಾದಾಗ, ಅಥವಾ ನೊಣಚಾಟಿಯಿಂದ ಝಾಡಿಸಲ್ಪಡುವಾಗ, ಇಲ್ಲವೆ ಅದನ್ನು ಪೇಪರ್‌ನಿಂದ ಹೊಡೆಯಲು ಹೋದಾಗ, ಅದರ ಮಿದುಳಿಗೆ ಸಂಜ್ಞೆಗಳು ಹೋಗುತ್ತವೆ. ಒಂದು ವಿಮಾನದಲ್ಲಿರುವ ಗೈರೋಸ್ಕೋಪ್ ವಿಮಾನ ಚಾಲಕನಿಗೆ ವಿಮಾನದ ಚಲನೆಯ ಗತಿಯ ಬಗ್ಗೆ ತಿಳಿಯಪಡಿಸುವಂತೆಯೇ, ನೊಣದ ದೇಹವು ಓರೆಯಾಗಿ ಹಾರುತ್ತಿದೆ, ಓಲಾಡುತ್ತಿದೆ, ಅಥವಾ ಹಿಂದಕ್ಕೂ ಮುಂದಕ್ಕೂ ತೂಗಾಡುತ್ತಾ ಹಾರುತ್ತಿದೆ ಎಂಬುದನ್ನು ಉಪರೆಕ್ಕೆಗಳು ತತ್‌ಕ್ಷಣವೇ ನೊಣಕ್ಕೆ ತಿಳಿಯಪಡಿಸುತ್ತವೆ. ಆದರೆ ಅವು ಗೈರೋಸ್ಕೋಪ್‌ಗಿಂತಲೂ ಹೆಚ್ಚು ನಿಷ್ಕೃಷ್ಟವಾದ ರೀತಿಯಲ್ಲಿ ನೊಣಕ್ಕೆ ಸುದ್ದಿ ಮುಟ್ಟಿಸುತ್ತವೆ. ಆಗ ನೊಣವು ಕೂಡಲೇ ತನ್ನ ಹಾರಾಟದ ವಿಧಾನವನ್ನು ಬದಲಾಯಿಸುತ್ತದೆ.
ಸಾಮಾನ್ಯವಾಗಿ ಗಿರಕಿಹೊಡೆಯುತ್ತಿರುವ ಗೈರೋಸ್ಕೋಪ್‌ಗಳಿಗೆ ಅಸದೃಶವಾಗಿ, ಉಪರೆಕ್ಕೆಗಳು ಹೆಚ್ಚಾಗಿ ಲೋಲಕದಂಡದಂತೆ ಕಾಣುತ್ತವೆ. ಆದರೆ ನೊಣಕ್ಕೆ ಹೋಲಿಸುವಾಗ ಅವು ನೇತಾಡುವುದಿಲ್ಲ ಅಥವಾ ಲಂಬರೇಖೆಯಲ್ಲಿರುವುದಿಲ್ಲ; ಅವು ನೊಣದ ಎರಡೂ ಪಾರ್ಶ್ವಗಳಿಂದ ಹೊರಕ್ಕೆ ಚಾಚಿಕೊಂಡಿರುತ್ತವೆ. ಈ ಉಪರೆಕ್ಕೆಗಳು ತಮ್ಮ ಚಲನೆಯನ್ನು ಆರಂಭಿಸಿದ ಬಳಿಕ, ಚಲನೆಯ ನಿಯಮಗಳಿಗೆ ಅನುಸಾರವಾಗಿ ಒಂದೇ ದಿಕ್ಕಿನಲ್ಲಿ ಯಾವಾಗಲೂ ಹಿಂದಕ್ಕೂ ಮುಂದಕ್ಕೂ ತೂಗಾಡುತ್ತಿರುತ್ತವೆ ಅಥವಾ ಓಲಾಡುತ್ತಿರುತ್ತವೆ. ಆದುದರಿಂದ, ಎತ್ತರದಲ್ಲಿ ಹಾರುತ್ತಿರುವಾಗ ನೊಣದ ದೇಹವು ತನ್ನ ಭಂಗಿಯನ್ನು ಬದಲಾಯಿಸುವಾಗ, ಬಾಹ್ಯ ಒತ್ತಡಗಳು ಓಲಾಡುತ್ತಿರುವ ಉಪರೆಕ್ಕೆಗಳನ್ನು ಬುಡದಲ್ಲಿಯೇ ತಿರುಚಿಬಿಡುತ್ತವೆ; ಆಗ ಉಪರೆಕ್ಕೆಗಳ ಬುಡದಲ್ಲಿರುವ ನರಗಳು ಇದನ್ನು ಗ್ರಹಿಸುತ್ತವೆ. ನರಗಳಿಂದ ಕಳುಹಿಸಲ್ಪಟ್ಟ ಸಂಜ್ಞೆಗಳನ್ನು ಮಿದುಳು ಅರ್ಥಮಾಡಿಕೊಳ್ಳುತ್ತದೆ ಮತ್ತು ನೊಣದ ಭಂಗಿಯನ್ನು ಸರಿಪಡಿಸುವಂತೆ ರೆಕ್ಕೆಗಳಿಗೆ ಸಂದೇಶ ಕಳಿಸುತ್ತದೆ—ಇದೆಲ್ಲ ಮಿಂಚಿನ ವೇಗದಲ್ಲಿ ನಡೆಯುತ್ತದೆ.
ನಿಜವಾಗಿಯೂ ಈ ಉಪರೆಕ್ಕೆಗಳು ನೊಣಗಳಲ್ಲಿ ಮಾತ್ರ ಕಂಡುಬರುವ ಅಪೂರ್ವ ಅಂಗಗಳಾಗಿವೆ. ಎರಡು ರೆಕ್ಕೆಗಳುಳ್ಳ ನೊಣದ ಗುಂಪಿಗೆ ಸೇರಿದ 1,00,000 ಜಾತಿಯಲ್ಲಿ, ಕುದುರೆ ನೊಣಗಳು, ಸಾಧಾರಣ ನೊಣಗಳು, ತಿಪ್ಪೆನೊಣಗಳು, ಹಣ್ಣಿನ ನೊಣಗಳು, ಟ್ಸೆಟ್ಸಿ ನೊಣಗಳು, ಗಾಳದ ನೊಣಗಳು, ಮತ್ತು ಕೊಕ್ಕರೆ ನೊಣಗಳೂ ಒಳಗೂಡಿವೆ. ಈ ನೊಣಗಳ ಕುಶಲ ಗೈರೋಸ್ಕೋಪ್‌ಗಳು, ಹಾರಾಡುವಂತಹ ಕೀಟಗಳ ಇನ್ನಾವುದೇ ಜಾತಿಯನ್ನು ಮೀರಿಸುವಂತಹ ಹಾರಾಟ ನಿರ್ವಹಣೆಗೆ ನೆರವನ್ನು ನೀಡಿವೆ. ಅನೇಕವೇಳೆ ಕಡೆಗಣಿಸಲ್ಪಡುವ ಈ ಕೀಟವು, ಸೃಷ್ಟಿಕರ್ತನ ವೈಜ್ಞಾನಿಕ ಪ್ರತಿಭೆಯ ರುಜುವಾತನ್ನು ನೀಡುತ್ತದೆ ಎಂಬುದಂತೂ ನಿಜ.
[ಪುಟ 22 ರಲ್ಲಿರುವ ಚಿತ್ರ]
ಓರೆಯಾಗಿ ಹಾರುತ್ತಿರುವುದು
[ಪುಟ 22 ರಲ್ಲಿರುವ ಚಿತ್ರ]
ಓಲಾಡುತ್ತಿರುವುದು
[ಪುಟ 22 ರಲ್ಲಿರುವ ಚಿತ್ರ]
ಹಿಂದಕ್ಕೂ ಮುಂದಕ್ಕೂ ತೂಗಾಡುತ್ತಾ ಹಾರುತ್ತಿರುವುದು
[ಪುಟ 23 ರಲ್ಲಿರುವ ಚಿತ್ರ]
ಸಿಪಾಯಿ ನೊಣ (ದೊಡ್ಡದಾಗಿ ತೋರಿಸಲ್ಪಟ್ಟಿದೆ), ಉಪರೆಕ್ಕೆಗಳು ಗುರುತಿಸಲ್ಪಟ್ಟಿವೆ
[ಕೃಪೆ]
© Kjell B. Sandved/Visuals Unlimited
[ಪುಟ 23 ರಲ್ಲಿರುವ ಚಿತ್ರಗಳು]
ಸಾಧಾರಣ ನೊಣ
ಕೊಕ್ಕರೆ ನೊಣ
[ಕೃಪೆ]
Animals/Jim Harter/Dover Publications, Inc.
[ಪುಟ 23 ರಲ್ಲಿರುವ ಚಿತ್ರ ಕೃಪೆ]
Century Dictionary