ನಾನೊಬ್ಬ ಕಾನೂನುಭ್ರಷ್ಟನಾಗಿದ್ದೆ
ಸಿಸಿಲಿಯಲ್ಲಿ, 1947ರ ಮೇ 1ನೆಯ ತಾರೀಖಾಗಿತ್ತು. ಸುಮಾರು 3,000 ಜನರು, ಶಿಶುಗಳಿದ್ದ ಸ್ತ್ರೀಯರನ್ನು ಕೂಡಿಸಿ, ವಾರ್ಷಿಕ ಕಾರ್ಮಿಕರ ದಿನದ ಆಚರಣೆಗಾಗಿ ಒಂದು ಪರ್ವತದ ತಗ್ಗಿನಲ್ಲಿ ಒಟ್ಟುಗೂಡಿದ್ದರು. ಹತ್ತಿರದಲ್ಲಿದ್ದ ಗುಡ್ಡಗಳಲ್ಲಿ ಮರೆಮಾಚಲ್ಪಟ್ಟಿದ್ದ ಅಪಾಯದ ಕುರಿತಾಗಿ ಅವರಿಗೆ ಅರಿವಿರಲಿಲ್ಲ. ಹಿಂಬಾಲಿಸಿದಂತಹ ದುರಂತದ ಕುರಿತಾಗಿ ನೀವು ಓದಿರಬಹುದು ಅಥವಾ ಚಲನಚಿತ್ರಗಳನ್ನು ನೋಡಿದ್ದಿರಲೂಬಹುದು. 11 ಜನರು ಕೊಲ್ಲಲ್ಪಟ್ಟು, 56 ಜನರು ಗಾಯಗೊಳ್ಳುವುದರಲ್ಲಿ ಫಲಿಸಿದ ಆ ಹತ್ಯೆಯನ್ನು, ಪೋರ್ಟೆಲಾ ಡೆಲಾ ಜಿನಿಸ್ಟ್ರಾದ ಕಗ್ಗೊಲೆ ಎಂದು ಕರೆಯಲಾಗಿದೆ.
ಆ ದುರಂತದಲ್ಲಿ ನನಗೆ ಯಾವ ಭಾಗವಿರದಿದ್ದರೂ, ಅದಕ್ಕಾಗಿ ಜವಾಬ್ದಾರರಾಗಿದ್ದ ಪ್ರತ್ಯೇಕವಾದಿಗಳ ತಂಡಕ್ಕೆ ನಾನು ಸೇರಿದ್ದೆ ನಿಶ್ಚಯ. ಯಾರೊಂದಿಗೆ ನಾನು ಮೊಂಟೆಲೆಪ್ರೆ ಎಂಬ ಹಳ್ಳಿಯಲ್ಲಿ ಬೆಳೆದಿದ್ದೇನೊ ಆ, ಸಾಲ್ವಟೋರ್ ಜೂಲೀಆನೊ ಅವರ ನಾಯಕನಾಗಿದ್ದನು. ಅವನು ನನಗಿಂತ ಕೇವಲ ಒಂದು ವರ್ಷ ಹಿರಿಯವನಾಗಿದ್ದನು. 1942ರಲ್ಲಿ ನಾನು 19 ವರ್ಷದವನಾಗಿದ್ದಾಗ, IIನೇ ಲೋಕ ಯುದ್ಧದ ಸಮಯದಲ್ಲಿ ಸೇನೆಯಲ್ಲಿ ಸೇವೆಮಾಡಲು ನನ್ನನ್ನು ಕರೆಯಲಾಯಿತು. ಅದೇ ವರ್ಷದ ಆರಂಭದಲ್ಲಿ ನಾನು ಅನುರಕ್ತನಾಗಿ, ವೀಟಾ ಮೊಟೀಜಿಳನ್ನು ವಿವಾಹವಾಗಿದ್ದೆ. ಕಟ್ಟಕಡೆಗೆ, ನಮಗೆ ಮೂವರು ಪುತ್ರರಿದ್ದರು; ಮೊದಲನೆಯವನು 1943ರಲ್ಲಿ ಜನಿಸಿದನು.
ನಾನು ಒಬ್ಬ ಕಾನೂನುಭ್ರಷ್ಟನಾದ ಕಾರಣ
IIನೇ ಲೋಕ ಯುದ್ಧವು ಅಂತ್ಯಗೊಂಡ ವರ್ಷ, 1945ರಲ್ಲಿ, ನಾನು ಸಿಸಿಲಿಯ ಸ್ವಾತಂತ್ರ್ಯಕ್ಕಾಗಿ ಸ್ವಯಂಸೇವಕರ ಸೇನೆಯ (ಇವಿಐಎಸ್) ಪಾಶ್ಚಿಮಾತ್ಯ ವಿಭಾಗವನ್ನು ಸೇರಿದೆ. ಇದು ಸಿಸಿಲಿಯ ಸ್ವಾತಂತ್ರ್ಯಕ್ಕಾಗಿರುವ ಚಳವಳಿ (ಎಮ್ಐಎಸ್) ಎಂದು ಪ್ರಸಿದ್ಧವಾಗಿದ್ದ ಪ್ರತ್ಯೇಕವಾದಿ ರಾಜಕೀಯ ಪಕ್ಷದ ಪಾರಾಮಿಲಿಟರಿ ಅಂಗವಾಗಿತ್ತು. ಈಗಾಗಲೇ ನ್ಯಾಯದಂಡನೆಯಿಂದ ಓಡಿಹೋಗುವವನು ಆಗಿದ್ದ ಸಾಲ್ವಟೋರ್ ಜೂಲೀಆನೊ ಇವಿಐಎಸ್ ಮತ್ತು ಎಮ್ಐಎಸ್ನ ಉಚ್ಚ ಪಂಕ್ತಿಗಳಿಂದ, ನಮ್ಮ ವಿಭಾಗದ ಅಧಿಕಾರವನ್ನು ವಹಿಸಲು ನೇಮಿಸಲ್ಪಟ್ಟಿದ್ದನು.
ನಮ್ಮ ದ್ವೀಪವಾದ ಸಿಸಿಲಿ ಮತ್ತು ನಮ್ಮ ಜನರಿಗಾಗಿರುವ ನಮ್ಮ ಪ್ರೀತಿಯಿಂದ ನಾವು ಐಕ್ಯರಾಗಿದ್ದೆವು. ಮತ್ತು ನಾವು ಅನುಭವಿಸಿದ್ದ ಅನ್ಯಾಯಗಳ ಕುರಿತಾಗಿ ನಾವು ಕೋಪದಿಂದಿದ್ದೆವು. ಆದದರಿಂದ ನಾನು ಜೂಲೀಆನೊ ತಂಡದ ಉದ್ದೇಶವನ್ನು ಅಂಗೀಕರಿಸಿದೆ, ಅದು ಸಿಸಿಲಿಯನ್ನು ಅಮೆರಿಕಕ್ಕೆ ಅದರ 49ನೇ ರಾಜ್ಯವಾಗಿ ಜೋಡಿಸುವುದು ಆಗಿತ್ತು. ಇದು ಸಾಧ್ಯವೆಂದು ನಂಬಲು ಕಾರಣವಿತ್ತೊ? ನಿಜವಾಗಿಯೂ ಇತ್ತು, ಯಾಕಂದರೆ ಎಮ್ಐಎಸ್ನ ಅಧಿಕಾರಿಗಳು, ತಮಗೆ ವಾಶಿಂಗ್ಟನ್ ಡಿ.ಸಿ.ಯೊಂದಿಗೆ ನಿಕಟವಾದ ಸಂಬಂಧವಿತ್ತೆಂದು ಮತ್ತು ಅಮೆರಿಕದ ರಾಷ್ಟ್ರಪತಿಯಾದ ಹ್ಯಾರಿ ಎಸ್. ಟ್ರುಮ್ಯಾನ್ ಅಂತಹ ಒಂದು ಜೋಡಿಸುವಿಕೆಯ ಪರವಾಗಿದ್ದಾರೆಂದು ನಮಗೆ ಆಶ್ವಾಸನೆಯನ್ನಿತ್ತಿದ್ದರು.
ಕಾನೂನುಭ್ರಷ್ಟ ಚಟುವಟಿಕೆ
ನನ್ನ ಗುಂಪಿನ ಕೆಲಸವು ಮುಖ್ಯವಾಗಿ, ಗಣ್ಯ ವ್ಯಕ್ತಿಗಳ ಅಪಹರಣ ಮತ್ತು ಬಿಡುಗಡೆ ಹಣಕ್ಕಾಗಿ ಅವರನ್ನು ಹಿಡಿದಿಟ್ಟುಕೊಳ್ಳುವುದನ್ನು ಒಳಗೊಂಡಿತ್ತು. ಈ ಮಾಧ್ಯಮದ ಮೂಲಕ ನಾವು ಅಗತ್ಯವಾಗಿದ್ದ ಸರಬರಾಯಿಗಳನ್ನು ಖರೀದಿಸಲು ನಿಧಿಗಳನ್ನು ಪಡೆದೆವು. ಅಪಹರಿಸಲ್ಪಟ್ಟವರಲ್ಲಿ ಯಾರೂ—ಅವರನ್ನು ನಾವು “ನಮ್ಮ ಅತಿಥಿಗಳು” ಎಂದು ಕರೆಯುತ್ತಿದ್ದೆವು—ಎಂದೂ ಹಾನಿಗೊಳಿಸಲ್ಪಡಲಿಲ್ಲ. ಅವರು ಬಿಡುಗಡೆಗೊಳಿಸಲ್ಪಟ್ಟಾಗ, ನಾವು ಪಡೆದುಕೊಂಡಿದ್ದಂತಹ ಬಿಡುಗಡೆ ಹಣದ ಪುನಃ ಭರ್ತಿಮಾಡುವಿಕೆಗಾಗಿ ಉಪಯೋಗಿಸಲು, ನಾವು ಅವರಿಗೆ ಒಂದು ರಶೀದಿಯನ್ನು ಕೊಟ್ಟೆವು. ನಾವು ವಿಜಯವನ್ನು ಗಳಿಸಿದ ನಂತರ ಅವರು ತಮ್ಮ ಹಣವನ್ನು ಹಿಂದೆ ಪಡೆಯಲು ಆ ರಶೀದಿಯನ್ನು ಉಪಯೋಗಿಸಬಹುದೆಂದು ಅವರಿಗೆ ಹೇಳಲಾಯಿತು.
ನಾನು ಸುಮಾರು 20 ಅಪಹರಣಗಳಲ್ಲಿ, ಹಾಗೂ ಒಂದು ರಾಷ್ಟ್ರೀಯ ಮಿಲಿಟರೀಕೃತ ಪೊಲೀಸ್ ತಂಡವಾಗಿರುವ, ಕಾರಾಬಿನ್ಯಾರೆಯ ಕಟ್ಟಡಗಳ ಮೇಲೆ ಶಸ್ತ್ರಸಜ್ಜಿತ ದಾಳಿಗಳಲ್ಲಿ ಭಾಗವಹಿಸಿದೆ. ಆದಾಗಲೂ, ನಾನು ಎಂದೂ ಯಾರನ್ನೂ ಕೊಲ್ಲಲಿಲ್ಲ ಎಂದು ಹೇಳಲು ಸಂತೋಷಿಸುತ್ತೇನೆ. ನಮ್ಮ ಪ್ರತ್ಯೇಕವಾದಿ ಆಕ್ರಮಣಗಳು, ಪೋರ್ಟೆಲಾ ಡೆಲಾ ಜಿನಿಸ್ಟ್ರಾದ ಹಳ್ಳಿಯಲ್ಲಿನ ಅವಿವೇಕಿ ಕ್ರಿಯೆಯಲ್ಲಿ ತುತ್ತತುದಿಗೇರಿದವು. ಅದು ಜೂಲೀಆನೊ ತಂಡದ ಸುಮಾರು ಒಂದು ಡಜನ್ ಪುರುಷರಿಂದ ವ್ಯವಸ್ಥಾಪಿಸಲ್ಪಟ್ಟಿತ್ತು ಮತ್ತು ಕಮ್ಯೂನಿಸ್ಟ್ ಪಾರ್ಟಿಯ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು.
ನೆರೆಹೊರೆಯವರು ಮತ್ತು ಬೆಂಬಲಿಗರನ್ನು ಸೇರಿಸಿ, ಸಾಮಾನ್ಯ ಜನತೆಯ ಕೊಲ್ಲುವಿಕೆಯು ಉದ್ದೇಶಪೂರ್ವಕವಾಗಿರದಿದ್ದರೂ, ನಮ್ಮನ್ನು ಬೆಂಬಲಿಸಿದ್ದ ಮತ್ತು ನಮ್ಮಿಂದಾಗಿ ತಾವು ರಕ್ಷಿತರೆಂದು ಪರಿಗಣಿಸಿದ್ದ ಜನರು, ನಾವು ಅವರಿಗೆ ವಿಶ್ವಾಸದ್ರೋಹ ಮಾಡಿದ್ದೇವೆಂದು ನಂಬಿದರು. ಅಂದಿನಿಂದ, ಜೂಲೀಆನೊವಿನ ಕಾನೂನುಭ್ರಷ್ಟರ ತಂಡಕ್ಕಾಗಿ ಬೇಟೆಯು ನಿರಂತರವಾಗಿತ್ತು. ಪೊಲೀಸರಿಗೆ ಸುಳಿವು ಕೊಡಲ್ಪಟ್ಟ ನಂತರ, ನನ್ನ ಸಂಗಾತಿಗಳಲ್ಲಿ ಅನೇಕರು ಸೆರೆಹಿಡಿಯಲ್ಪಟ್ಟರು. 1950ರ ಮಾರ್ಚ್ 19ರಂದು ನಾನು ಸಿಕ್ಕಿಬಿದ್ದು ದಸ್ತಗಿರಿಮಾಡಲ್ಪಟ್ಟೆ. ಮತ್ತು ಆ ಬೇಸಗೆಕಾಲದಲ್ಲಿ ಸ್ವತಃ ಜೂಲೀಆನೊ ಕೊಲ್ಲಲ್ಪಟ್ಟನು.
ಸೆರೆಮನೆವಾಸ ಮತ್ತು ಶಿಕ್ಷೆವಿಧಿಸುವಿಕೆ
ತೀರ್ಮಾನವಾಗಿಲ್ಲದ ಒಂದು ವಿಚಾರಣೆಗಾಗಿ ನಾನು ಬಂಧಿಯಾಗಿಡಲ್ಪಟ್ಟ ಒಂದು ಪಾಲೆರ್ಮೊ ಸೆರೆಮನೆಯಲ್ಲಿ, ನಾನು ನನ್ನ ಯುವ ಪತ್ನಿ ಮತ್ತು ಮೂವರು ಪುತ್ರರಿಂದ ಪ್ರತ್ಯೇಕಿಸಲ್ಪಟ್ಟಿರುವುದಕ್ಕಾಗಿ ದುಃಖಿಸಿದೆ. ಆದರೂ, ನಾನು ಯಾವುದನ್ನು ಸರಿಯೆಂದು ಭಾವಿಸಿದೆನೊ, ಅದಕ್ಕಾಗಿ ಹೋರಾಡುವ ನನ್ನ ಅಪೇಕ್ಷೆಯು ನನ್ನನ್ನು ಸಂಪೂರ್ಣ ಹತಾಶೆಯಿಂದ ಸಂರಕ್ಷಿಸಿತು. ನನ್ನ ಸಮಯವನ್ನು ಕಳೆಯಲು ನಾನು ಓದಲಾರಂಭಿಸಿದೆ. ಒಂದು ಪುಸ್ತಕವು ಬೈಬಲನ್ನು ಓದುವ ನನ್ನ ಅಪೇಕ್ಷೆಯನ್ನು ಹೊತ್ತಿಸಿತು. ಅದು 19ನೆಯ ಶತಮಾನದಲ್ಲಿ ರಾಜಕೀಯ ಕಾರಣಗಳಿಗೋಸ್ಕರ ಸೆರೆಮನೆಗೆ ಹಾಕಲ್ಪಟ್ಟ ಒಬ್ಬ ಇಟಲಿಯವನಾದ, ಸಿಲ್ವ್ಯೊ ಪೆಲೀಕೊವಿನ ಆತ್ಮಚರಿತ್ರೆಯಾಗಿತ್ತು.
ತನ್ನೊಂದಿಗೆ ಸೆರೆಮನೆಯಲ್ಲಿ ಯಾವಾಗಲೂ ಒಂದು ಶಬ್ದಕೋಶ ಮತ್ತು ಒಂದು ಬೈಬಲ್ ಇರುತ್ತಿತ್ತು ಎಂದು ಪೆಲೀಕೊ ಬರೆದಿದ್ದನು. ನನ್ನ ಕುಟುಂಬ ಮತ್ತು ನಾನು ರೋಮನ್ ಕ್ಯಾಥೊಲಿಕರಾಗಿದ್ದರೂ, ನಾನು ನಿಜವಾಗಿಯೂ ಬೈಬಲಿನ ಕುರಿತಾಗಿ ಏನನ್ನೂ ಕೇಳಿರಲಿಲ್ಲ. ಆದುದರಿಂದ ಒಂದು ಪ್ರತಿಯನ್ನು ಪಡೆದುಕೊಳ್ಳಲು ನಾನು ಅಧಿಕಾರಿಗಳಿಗೆ ಒಂದು ವಿನಂತಿಯನ್ನು ಮಾಡಿದೆ. ಅದು ನಿಷಿದ್ಧವಾಗಿತ್ತೆಂದು ನನಗೆ ಹೇಳಲಾಯಿತು, ಆದರೆ ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಸುವಾರ್ತೆಗಳ ಒಂದು ಪ್ರತಿಯು ನನಗೆ ಕೊಡಲ್ಪಟ್ಟಿತ್ತು. ಅನಂತರ, ನಾನು ಇಡೀ ಬೈಬಲಿನ ಒಂದು ಪ್ರತಿಯನ್ನು ಪಡೆಯಲು ಶಕ್ತನಾದೆ, ಇದನ್ನು ನಾನು ಇನ್ನೂ ಒಂದು ಅಮೂಲ್ಯ ಜ್ಞಾಪಕವಸ್ತುವಾಗಿ ಇಟ್ಟಿದ್ದೇನೆ.
ಕೊನೆಗೆ, 1951ರಲ್ಲಿ ನನ್ನ ವಿಚಾರಣೆಯು ರೋಮ್ನ ಹತ್ತಿರದ ವಿಟೆರ್ಬೊನಲ್ಲಿ ಆರಂಭವಾಯಿತು. ಅದು 13 ತಿಂಗಳುಗಳ ವರೆಗೆ ಮುಂದುವರಿಯಿತು. ನನಗೆ ಎರಡು ಜೀವಾವಧಿಗಳಿಗೆ ಕೂಡಿಸಿ 302 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು! ಅದರ ಅರ್ಥ ನಾನು ಸೆರೆಮನೆಯಿಂದ ಎಂದೂ ಜೀವಂತವಾಗಿ ಹೊರಬರಲಿಕ್ಕಿಲ್ಲವೆಂದಾಗಿತ್ತು.
ಬೈಬಲ್ ಸತ್ಯಗಳನ್ನು ಕಲಿಯುವುದು
ಪಾಲೆರ್ಮೊದಲ್ಲಿನ ಸೆರೆಮನೆಗೆ ಹಿಂದಿರುಗಿಸಲ್ಪಟ್ಟಾಗ, ಜೂಲೀಆನೊವಿನ ಒಬ್ಬ ಸೋದರಬಂಧುವಾಗಿದ್ದ ನಮ್ಮ ಗುಂಪಿನ ಸದಸ್ಯನೊಬ್ಬನೂ ಬಂಧಿಸಲ್ಪಟ್ಟಿದ್ದ ಒಂದು ವಿಭಾಗಕ್ಕೆ ನನ್ನನ್ನು ನೇಮಿಸಲಾಯಿತು. ಅವನನ್ನು ನನಗಿಂತ ಮೂರು ವರ್ಷಗಳ ಮುಂಚೆ ದಸ್ತಗಿರಿ ಮಾಡಲಾಗಿತ್ತು. ಈ ಮುಂಚೆ, ಅವನು ಸೆರೆಮನೆಯಲ್ಲಿ, ಬೈಬಲಿನ ಅದ್ಭುತಕರ ವಾಗ್ದಾನಗಳ ಕುರಿತಾಗಿ ತನ್ನೊಂದಿಗೆ ಮಾತಾಡಿದ, ಸ್ವಿಟ್ಸ್ರ್ಲೆಂಡ್ ದೇಶದ ಒಬ್ಬ ಯೆಹೋವನ ಸಾಕ್ಷಿಯನ್ನು ಭೇಟಿಯಾಗಿದ್ದನು. ಆ ಮನುಷ್ಯನು ಪಾಲೆರ್ಮೊದ ಒಬ್ಬ ಸಾಕ್ಷಿಯೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾಗ ದಸ್ತಗಿರಿ ಮಾಡಲ್ಪಟ್ಟಿದ್ದನು. (ಮತ್ತಾಯ 24:14) ಅವನ ದಸ್ತಗಿರಿಯು ಪಾದ್ರಿವರ್ಗದ ಸದಸ್ಯರಿಂದ ಪ್ರೇರೇಪಣೆ ಮಾಡಲ್ಪಟ್ಟಿತ್ತೆಂದು ನನಗೆ ಅನಂತರ ಹೇಳಲಾಯಿತು.
ಶಾಸನಬದ್ಧವಾಗಿರದ ನನ್ನ ಚಟುವಟಿಕೆಗಳ ಹೊರತೂ, ನಾನು ದೇವರಲ್ಲಿ ಮತ್ತು ಚರ್ಚ್ ಬೋಧನೆಗಳಲ್ಲಿ ನಂಬುತ್ತಿದ್ದೆ. ಆದುದರಿಂದ ಸಂತರೆಂದು ಕರೆಯಲ್ಪಡುವವರ ಕಡೆಗಿನ ಪೂಜ್ಯಭಾವನೆಯು ಅಶಾಸ್ತ್ರೀಯವಾಗಿತ್ತು ಮತ್ತು ದಶಾಜ್ಞೆಗಳಲ್ಲಿ ಒಂದು ಆಜ್ಞೆಯು ಆರಾಧನೆಯಲ್ಲಿ ವಿಗ್ರಹಗಳ ಉಪಯೋಗವನ್ನು ನಿಷೇಧಿಸಿತ್ತೆಂಬುದನ್ನು ಕಲಿಯಲು ನಾನು ದಿಗ್ಭ್ರಾಂತನಾದೆ. (ವಿಮೋಚನಕಾಂಡ 20:3, 4) ನಾನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾ ಮಾಡಿದೆ, ಇವು ನನಗೆ ಅತ್ಯಮೂಲ್ಯವಾಗಿ ಪರಿಣಮಿಸಿದವು. ನಾನು ಓದಿದೆಲ್ಲವು ನನಗೆ ಅರ್ಥವಾಗಲಿಲ್ಲ, ಆದರೆ ನಾನು ಹೆಚ್ಚು ಓದಿದಷ್ಟು, ಸೆರೆಮನೆಯಿಂದಲ್ಲ, ಬದಲಾಗಿ ಧಾರ್ಮಿಕ ಅಸತ್ಯ ಮತ್ತು ಆತ್ಮಿಕ ಅಂಧತೆಯಿಂದ ಪಲಾಯನಗೈಯುವ ಅಗತ್ಯವನ್ನು ಅಷ್ಟೇ ಹೆಚ್ಚಾಗಿ ಭಾವಿಸಿದೆ.
ದೇವರನ್ನು ಮೆಚ್ಚಿಸಲು ನಾನು ನನ್ನ ಹಳೆಯ ವ್ಯಕ್ತಿತ್ವವನ್ನು ಕಳಚಿಹಾಕಿ, ಒಂದು ಹೊಸ—ದೀನವಾಗಿರುವ ಮತ್ತು ಕ್ರಿಸ್ತ ಯೇಸುವಿಗೆ ತದ್ರೀತಿಯದ್ದಾಗಿರುವಂತಹ—ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕೆಂಬುದನ್ನು ನಾನು ಕಟ್ಟಕಡೆಗೆ ಗ್ರಹಿಸಿದೆ. (ಎಫೆಸ 4:20-24) ನನ್ನ ಬದಲಾವಣೆಯು ಕ್ರಮೇಣವಾದದ್ದಾಗಿತ್ತು. ಆದರೂ ಹೆಚ್ಚು ಕಡಿಮೆ ತತ್ಕ್ಷಣವೇ ನನ್ನ ಸಹ ಸೆರೆಮನೆವಾಸಿಗಳ ಪರವಾಗಿ ನಾನು ವಿಷಯಗಳನ್ನು ಮಾಡಲಾರಂಭಿಸಿದೆ ಮತ್ತು ನಾನು ಕಲಿಯುತ್ತಿದ್ದ ಭವ್ಯವಾದ ವಿಷಯಗಳನ್ನು ನಾನು ಅವರೊಂದಿಗೆ ಮಾತಾಡಲು ಪ್ರಯತ್ನಿಸಿದೆ. ಹೀಗೆ, 1953ರಲ್ಲಿ ಒಂದು ಆನಂದಭರಿತ ಅವಧಿಯು ನನಗೆ ಆರಂಭಿಸಿತು. ಆದರೆ ಅಡಚಣೆಗಳಿದ್ದವು.
ಸೇನಾಪಡೆಯ ಪಾದ್ರಿಯಿಂದ ವಿರೋಧ
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ನಾನು ಚಂದಾ ಮಾಡಿದ ಆರು ತಿಂಗಳುಗಳ ನಂತರ, ಅವುಗಳ ಬಟವಾಡೆಯು ನಿಲ್ಲಿಸಲ್ಪಟ್ಟಿತು. ಸೆರೆಮನೆವಾಸಿಗಳ ಪತ್ರವ್ಯವಹಾರ ನಿಯಂತ್ರಣಾಧಿಕಾರಿಯ ಬಳಿ ನಾನು ಹೋಗಿ, ವಿಷಯವನ್ನು ಅವರ ಗಮನಕ್ಕೆ ತಂದೆ. ಬಟವಾಡೆಯನ್ನು ತಡೆಹಿಡಿದಿದ್ದವನು ಸೇನಾಪಡೆಯ ಪಾದ್ರಿಯೆಂದು ಅವರು ನನಗೆ ಹೇಳಿದರು.
ನಾನು ಸೇನಾಪಡೆಯ ಪಾದ್ರಿಯನ್ನು ಕಾಣಲು ವಿನಂತಿಸಿಕೊಂಡೆ. ನಮ್ಮ ಚರ್ಚೆಯ ಸಮಯದಲ್ಲಿ ನಾನು, ಆರಾಧನೆಯಲ್ಲಿ ವಿಗ್ರಹಗಳ ಉಪಯೋಗದ ಕುರಿತಾದ ವಿಮೋಚನಕಾಂಡ 20:3, 4 ಮತ್ತು ಯೆಶಾಯ 44:14-17ಗಳಂತಹ ವಚನಗಳನ್ನು ಸೇರಿಸಿ, ನನಗೆ ಬೈಬಲಿನಿಂದ ತಿಳಿದಂತಹ ಅಲ್ಪ ವಿಷಯವನ್ನು ಅವನಿಗೆ ತೋರಿಸಿದೆ. “ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ” ಎಂದು ಮತ್ತಾಯ 23:8, 9ರಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಮಾತುಗಳನ್ನೂ ನಾನು ಅವನಿಗೆ ಓದಿಹೇಳಿದೆ. ರೇಗಿಸಲ್ಪಟ್ಟು, ನಾನು ಒಬ್ಬ ಅಜ್ಞಾನಿ ಮನುಷ್ಯನಾಗಿದ್ದದರಿಂದ ನಾನು ಬೈಬಲನ್ನು ತಿಳಿಯಲು ಶಕ್ತನಾಗಿರಲಿಲ್ಲವೆಂದು ಅವನು ಉತ್ತರಿಸಿದನು.
ನಾನು ನನ್ನ ವ್ಯಕ್ತಿತ್ವವನ್ನು ಈಗಾಗಲೇ ಬದಲಾಯಿಸಲು ಆರಂಭಿಸಿದ್ದರಿಂದ ಒಳ್ಳೇದಾಯಿತು—ಇಲ್ಲದಿದ್ದಲ್ಲಿ, ನಾನು ಏನು ಮಾಡುತ್ತಿದ್ದೆನೆಂದು ನನಗೆ ಗೊತ್ತಿಲ್ಲ. ಶಾಂತನಾಗಿರುತ್ತಾ, ನಾನು ಉತ್ತರಿಸಿದೆ: “ಹೌದು, ಅದು ಸತ್ಯ; ನಾನು ಅಜ್ಞಾನಿಯಾಗಿದ್ದೇನೆ. ಆದರೆ ನೀನು ಕಲಿತಿರುವಿ, ಮತ್ತು ನನಗೆ ಬೈಬಲ್ ಸತ್ಯಗಳನ್ನು ಕಲಿಸಲು ನೀನು ಏನನ್ನೂ ಮಾಡಿಲ್ಲ.” ಯೆಹೋವನ ಸಾಕ್ಷಿಗಳ ಸಾಹಿತ್ಯವನ್ನು ಪಡೆದುಕೊಳ್ಳಲು, ನಾನು ನ್ಯಾಯ ಖಾತೆಗೆ ಕ್ಯಾಥೊಲಿಕ್ ಧರ್ಮವನ್ನು ಪರಿತ್ಯಜಿಸುವುದಕ್ಕಾಗಿ ಒಂದು ವಿನಂತಿಯನ್ನು ಮಾಡಬೇಕಾದೀತೆಂದು ಸೇನಾಪಡೆಯ ಪಾದ್ರಿಯು ಉತ್ತರಿಸಿದನು. ನಾನು ಅದನ್ನೂ ಕೂಡಲೇ ಮಾಡಿದೆ, ಆದರೆ ವಿನಂತಿಯು ಮಾನ್ಯ ಮಾಡಲ್ಪಡಲಿಲ್ಲ. ಆದಾಗಲೂ ಅನಂತರ, ನಾನು ಒಬ್ಬ ಯೆಹೋವನ ಸಾಕ್ಷಿಯಾಗಿ ದಾಖಲಿಸಲ್ಪಡಲು ಶಕ್ತನಾದೆ ಮತ್ತು ಪತ್ರಿಕೆಗಳನ್ನು ಪುನಃ ಪಡೆಯಲು ಶಕ್ತನಾದೆ. ಆದರೆ ನಾನು ತುಂಬ ಪಟ್ಟುಹಿಡಿಯಬೇಕಾಗಿತ್ತು.
ಸೆರೆಮನೆಯಲ್ಲಿ ಒಂದು ರಾಜ್ಯ ಸಭಾಗೃಹ
ನನ್ನ ಕುಟುಂಬಕ್ಕೆ ಕಳುಹಿಸಲು ನಾನು ಹಣವನ್ನು ಸಂಪಾದಿಸಲಾಗುವಂತೆ ನಾನು ಸ್ವಲ್ಪ ಸಮಯದಿಂದ ಸೆರೆಮನೆಯ ನಿರ್ದೇಶಕನಿಗೆ ಒಂದು ಉದ್ಯೋಗಕ್ಕಾಗಿ ಕೇಳುತ್ತಿದ್ದೆ. ಅವನು ನನಗೆ ಒಂದು ಉದ್ಯೋಗವನ್ನು ಕೊಟ್ಟರೆ, ಇತರರಿಗೂ ಅವನು ಕೊಡಬೇಕಾದೀತು, ಮತ್ತು ಅದು ಸಾಧ್ಯವಿಲ್ಲವೆಂದು ಅವನು ಯಾವಾಗಲೂ ಹೇಳುತ್ತಿದ್ದನು. ಆದರೆ 1955, ಆಗಸ್ಟ್ 5ರ ಆ ಬೆಳಗಾತ, ನಿರ್ದೇಶಕನು ನನಗೆ ಒಳ್ಳೇ ವಾರ್ತೆಯನ್ನು ಕೊಟ್ಟನು—ಸೆರೆಮನೆಯೊಳಗೆ ನಾನು ಒಬ್ಬ ಕ್ಲರ್ಕ್ ಆಗಿ ಕೆಲಸ ಆರಂಭಿಸಬೇಕಿತ್ತು.
ನನ್ನ ಕೆಲಸವು ಸೆರೆಮನೆಯ ನಿರ್ದೇಶಕನ ಗೌರವವನ್ನು ಗಳಿಸುವಂತೆ ನನ್ನನ್ನು ಶಕ್ತನನ್ನಾಗಿ ಮಾಡಿತು, ಮತ್ತು ಅವನು ದಯಾಪರನಾಗಿ ಒಂದು ಉಗ್ರಾಣವನ್ನು ಬೈಬಲ್ ಅಭ್ಯಾಸಕ್ಕಾಗಿ ಕೂಟಗಳನ್ನು ನಡೆಸುವಂತೆ ಉಪಯೋಗಿಸಲು ನನಗೆ ಪರವಾನಗಿಯನ್ನು ಕೊಟ್ಟನು. ಹೀಗೆ, 1956ರಲ್ಲಿ ಎಸೆಯಲ್ಪಟ್ಟಿದ್ದ ಫೈಲ್ ಕ್ಯಾಬಿನೆಟ್ಗಳಿಂದ ಮರವನ್ನು ಉಪಯೋಗಿಸುತ್ತಾ, ಯಾವುದನ್ನು ರಾಜ್ಯ ಸಭಾಗೃಹವೆಂದು—ಯೆಹೋವನ ಸಾಕ್ಷಿಗಳ ಕೂಟದ ಸ್ಥಳಗಳು ಕರೆಯಲ್ಪಡುವಂತೆ—ಪರಿಗಣಿಸಸಾಧ್ಯವಿತ್ತೊ ಅದಕ್ಕಾಗಿ ಬೆಂಚುಗಳನ್ನು ತಯಾರಿಸಿದೆ. ನಾನು ಅಲ್ಲಿ ಪ್ರತಿ ಆದಿತ್ಯವಾರ ಇತರ ಸಹ ವಾಸಿಗಳೊಂದಿಗೆ ಒಟ್ಟುಗೂಡಿದೆ, ಮತ್ತು ನಮ್ಮ ಬೈಬಲ್ ಚರ್ಚೆಗಳಿಗಾಗಿ ನಾವು 25 ವ್ಯಕ್ತಿಗಳ ಉಚ್ಚಾಂಕ ಹಾಜರಿಯನ್ನು ತಲಪಿದೆವು.
ಸಮಯಾನಂತರ, ನಾನು ನಡಿಸುತ್ತಿದ್ದ ಕೂಟಗಳ ಕುರಿತಾಗಿ ಸೇನಾಪಡೆಯ ಪಾದ್ರಿಯು ಕಂಡುಹಿಡಿದನು ಮತ್ತು ಅವನು ಕೋಪಾವೇಶದಿಂದ ಕೆರಳಿದನು. ಫಲಸ್ವರೂಪವಾಗಿ, 1957ರ ಬೇಸಗೆಕಾಲದಲ್ಲಿ, ನನ್ನನ್ನು ಪಾಲೆರ್ಮೊದಿಂದ ಎಲ್ಬಾ ಎಂಬ ದ್ವೀಪದಲ್ಲಿ ಪೋರ್ಟೊ ಆಟ್ಸೂರೊದ ಕಾರಾಗೃಹಕ್ಕೆ ವರ್ಗಾಯಿಸಲಾಯಿತು. ಈ ಸ್ಥಳಕ್ಕೆ ಒಂದು ಭಯಂಕರವಾದ ಖ್ಯಾತಿಯಿತ್ತು.
ಸೆರೆಮನೆಯಲ್ಲಿ ದೀಕ್ಷಾಸ್ನಾನ ಮಾಡಲ್ಪಟ್ಟದ್ದು
ನಾನು ಆಗಮಿಸಿದಾಗ, 18 ದಿನಗಳಿಗೆ ನನ್ನನ್ನು ಏಕಾಂತವಾಸ ನಿರ್ಬಂಧದಲ್ಲಿ ಹಾಕಲಾಯಿತು. ಅಲ್ಲಿ ನಾನು ನನ್ನ ಬೈಬಲನ್ನು ಸಹ ಇಡಲು ಅನುಮತಿಸಲ್ಪಡಲಿಲ್ಲ. ತದನಂತರ, ನಾನು ಕ್ಯಾಥೊಲಿಕ್ ಧರ್ಮವನ್ನು ಪರಿತ್ಯಜಿಸಲು ಅನುಮತಿಸಲ್ಪಡುವಂತೆ ವಿನಂತಿಸಿಕೊಳ್ಳುತ್ತಾ ನಾನು ಪುನಃ ನ್ಯಾಯ ಖಾತೆಗೆ ಬರೆದೆ. ಈ ಸಲವಾದರೊ, ರೋಮ್ನಲ್ಲಿದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನ ಸಹಾಯಕ್ಕಾಗಿ ನಾನು ಕೇಳಿಕೊಂಡೆ. ಹತ್ತು ತಿಂಗಳುಗಳ ಬಳಿಕ, ದೀರ್ಘ ಸಮಯದಿಂದ ಕಾದಿದ್ದ ಉತ್ತರವು ಬಂದಿತು. ನನ್ನ ಧರ್ಮದ ಬದಲಾವಣೆಯನ್ನು ಖಾತೆಯು ಅಂಗೀಕರಿಸಿತು! ಇದು ನಾನು ಒಂದು ಬೈಬಲನ್ನು, ಪತ್ರಿಕೆಗಳನ್ನು, ಮತ್ತು ಇತರ ಬೈಬಲ್ ಸಾಹಿತ್ಯವನ್ನು ಹೊಂದಸಾಧ್ಯವಿತ್ತೆಂಬುದನ್ನು ಅರ್ಥೈಸಿತು ಮಾತ್ರವಲ್ಲ, ಬದಲಾಗಿ ಯೆಹೋವನ ಸಾಕ್ಷಿಗಳ ಒಬ್ಬ ಶುಶ್ರೂಷಕನಿಂದಲೂ ಕ್ರಮವಾದ ಭೇಟಿಗಳನ್ನು ನಾನು ಪಡೆಯಸಾಧ್ಯವಿತ್ತೆಂಬುದನ್ನೂ ಅರ್ಥೈಸಿತು.
ಇಟಲಿಯಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಿಂದ ಬಂದಂತಹ ಜುಸಿಪ್ಪೇ ರೊಮಾನೊನಿಂದ ನಾನು ಪ್ರಥಮ ಭೇಟಿಯನ್ನು ಪಡೆದಾಗ, ನನ್ನ ಆನಂದವು ಮಿತಿಯಿಲ್ಲದ್ದಾಗಿತ್ತು. ಸೆರೆಮನೆ ಅಧಿಕಾರಿಗಳ ಪರವಾನಗಿಯೊಂದಿಗೆ, ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಕೊನೆಗೆ ಸಾಂಕೇತಿಸಸಾಧ್ಯವಾಗುವಂತೆ ಏರ್ಪಾಡುಗಳು ಮಾಡಲ್ಪಟ್ಟವು. 1958, ಅಕ್ಟೋಬರ್ 4ರಂದು, ಸೆರೆಮನೆ ನಿರ್ದೇಶಕ, ಶಿಸ್ತಿನ ಮೇಲ್ವಿಚಾರಣೆ ಹೊಂದಿದ ಅಧಿಕಾರಿ, ಮತ್ತು ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಹೋದರ ರೊಮಾನೊ ನನ್ನನ್ನು, ಮತ್ತೊಬ್ಬ ಸಹ ವಾಸಿಯೊಂದಿಗೆ, ಸೆರೆಮನೆಯ ತೋಟಕ್ಕೆ ನೀರು ಹಾಕಲು ಬಳಸಲಾಗುತ್ತಿದ್ದ ದೊಡ್ಡದಾದ ತೊಟ್ಟಿಯಲ್ಲಿ, ದೀಕ್ಷಾಸ್ನಾನಗೊಳಿಸಿದನು.
ನಾನು ಕಾವಲಿನಬುರುಜು ಪತ್ರಿಕೆಯನ್ನು ಬಹುಮಟ್ಟಿಗೆ ಯಾವಾಗಲೂ ಇತರ ಸಹ ವಾಸಿಗಳೊಂದಿಗೆ ಅಭ್ಯಾಸಿಸಲು ಶಕ್ತನಾಗಿರುತ್ತಿದ್ದರೂ, ನಾನು ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕವನ್ನು ನನ್ನ ಕೋಣೆಯಲ್ಲಿ ಒಬ್ಬನೇ ಆಚರಿಸಬೇಕಾಗುತ್ತಿತ್ತು, ಯಾಕಂದರೆ ಈ ಆಚರಣೆಯು ಸೂರ್ಯಾಸ್ತಮಾನದ ನಂತರ ನಡೆಯುತ್ತದೆ. ನಾನು ಜೊತೆ ಸಾಕ್ಷಿಗಳೊಂದಿಗೆ ಒಟ್ಟುಸೇರಿದ್ದೇನೆಂದು ಊಹಿಸಿಕೊಳ್ಳುತ್ತಾ, ನಾನು ನನ್ನ ಕಣ್ಣುಗಳನ್ನು ಮುಚ್ಚಿ ಪ್ರಾರ್ಥಿಸುತ್ತಿದ್ದೆ.
ಸೆರೆಮನೆಯಲ್ಲಿ ಶಿಷ್ಯರನ್ನು ಮಾಡುವುದು
1968ರಲ್ಲಿ, ನಾನು ಪೇಸಾರೊದ ಪ್ರಾಂತದಲ್ಲಿನ ಫೊಸೊಬ್ರೊನಾದಲ್ಲಿರುವ ಸೆರೆಮನೆಗೆ ವರ್ಗಾಯಿಸಲ್ಪಟ್ಟೆ. ಅಲ್ಲಿ ನಾನು ಇತರರೊಂದಿಗೆ ಬೈಬಲ್ ಸತ್ಯಗಳ ಕುರಿತಾಗಿ ಮಾತಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಅನುಭವಿಸಿದೆ. ಸಾಕ್ಷಿಕೊಡಲು ಅವಕಾಶಗಳನ್ನು ಕಂಡುಕೊಳ್ಳಲು ಸುಲಭವಾಗಿದ್ದ ಚಿಕಿತ್ಸಾಲಯದಲ್ಲಿ ನಾನು ಕೆಲಸ ಮಾಡಿದೆ. ಇಮ್ಯಾನ್ವೇಲಾ ಆಲ್ಟಾವಿಲ್ಲಾ ಎಂಬ ಒಬ್ಬ ಸಹ ವಾಸಿಯ ಪ್ರಗತಿಯನ್ನು ನೋಡುವುದು ವಿಶೇಷವಾಗಿ ಒಂದು ಆನಂದವಾಗಿತ್ತು. ಎರಡು ತಿಂಗಳುಗಳ ಅಭ್ಯಾಸದ ನಂತರ, ತಾನು ಅ. ಕೃತ್ಯಗಳು 19:19ರ ಸಲಹೆಯನ್ನು ಅನ್ವಯಿಸಿ, ಮಾಯಾವಿದ್ಯೆಯ ಕಲೆಯ ಕುರಿತಾದ ತನ್ನ ಪುಸ್ತಕವನ್ನು ನಾಶಮಾಡಬೇಕೆಂಬುದನ್ನು ಅವನು ಗ್ರಹಿಸಿದನು. ತದನಂತರ ಇಮ್ಯಾನ್ವೇಲಾ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದನು.
ಮುಂದಿನ ವರ್ಷ, ನೆಪಲ್ಸ್ನಿಂದ ಕೊಲ್ಲಿಯ ಸ್ವಲ್ಪ ಆಚೆ ಬದಿಯಲ್ಲಿ, ಪ್ರೊಚೀಡಾ ಎಂಬ ದ್ವೀಪದಲ್ಲಿನ ಸೆರೆಮನೆಗೆ ನಾನು ವರ್ಗಾಯಿಸಲ್ಪಟ್ಟೆ. ಒಳ್ಳೆಯ ನಡತೆಯ ಕಾರಣದಿಂದ, ನಾನು ಪುನಃ ಒಮ್ಮೆ ಚಿಕಿತ್ಸಾಲಯಕ್ಕೆ ನೇಮಿಸಲ್ಪಟ್ಟೆ. ಅಲ್ಲಿ ನಾನು, ದೃಢೀಕರಣ ಹೊಂದಿದ್ದ ಒಬ್ಬ ಕ್ಯಾಥೊಲಿಕನಾಗಿದ್ದ ಒಬ್ಬ ಸಹ ವಾಸಿಯಾದ ಮಾರ್ಯೊ ಮೊರೆನೊನನ್ನು ಭೇಟಿಯಾದೆ. ಅವನಿಗೂ ಜವಾಬ್ದಾರಿಯುತ ಸ್ಥಾನವಿದ್ದು, ಲೆಕ್ಕಾಚಾರದ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು.
ಒಂದು ಸಾಯಂಕಾಲ ಮಾರ್ಯೊ ಏನಾದರೂ ಓದಲಿಕ್ಕಾಗಿ ಕೊಡುವಂತೆ ನನ್ನಲ್ಲಿ ಕೇಳಿಕೊಂಡನು, ಮತ್ತು ನಾನು ಅವನಿಗೆ ನಿತ್ಯ ಜೀವಕ್ಕೆ ನಡಿಸುವ ಸತ್ಯ ಪುಸ್ತಕವನ್ನು ಕೊಟ್ಟೆ.a ತಾನು ಓದುತ್ತಿರುವ ವಿಷಯದ ಪ್ರಮುಖತೆಯನ್ನು ಅವನು ತತ್ಕ್ಷಣವೇ ತಿಳಿದುಕೊಂಡನು ಮತ್ತು ನಾವು ಒಂದು ಬೈಬಲಭ್ಯಾಸವನ್ನು ಆರಂಭಿಸಿದೆವು. ದಿನಕ್ಕೆ ಮೂರು ಪ್ಯಾಕೆಟ್ಗಳ ಸಿಗರೇಟ್ಗಳನ್ನು ಸೇದುವುದನ್ನು ಮಾರ್ಯೊ ನಿಲ್ಲಿಸಿದನು. ಇದಕ್ಕೆ ಕೂಡಿಸಿ, ಸೆರೆಮನೆಯಲ್ಲಿ ಮಾಡಲ್ಪಡುತ್ತಿದ್ದ ಲೆಕ್ಕಾಚಾರದ ಕೆಲಸದಲ್ಲೂ ತಾನು ಪ್ರಾಮಾಣಿಕನಾಗಿ ನಡೆಯಬೇಕೆಂಬುದನ್ನು ಅವನು ಗ್ರಹಿಸಿದನು. ಅವನು ತನ್ನ ನಿಶ್ಚಯಮಾಡಿಕೊಂಡಿದ್ದ ವಧುವಿಗೆ ಸಾಕ್ಷಿಕೊಡಲು ಆರಂಭಿಸಿದನು, ಮತ್ತು ಅವಳು ಸಹ ಬೈಬಲ್ ಬೋಧನೆಗಳನ್ನು ಸ್ವೀಕರಿಸಿದಳು. ಸ್ವಲ್ಪ ಸಮಯದ ನಂತರ, ಅವರು ಅಲ್ಲಿ ಸೆರೆಮನೆಯಲ್ಲಿ ಮದುವೆಯಾದರು. 1975ರಲ್ಲಿ, ನೆಪಲ್ಸ್ನಲ್ಲಿನ ಒಂದು ಅಧಿವೇಶನದಲ್ಲಿ, ಮಾರ್ಯೊನ ಹೆಂಡತಿ ದೀಕ್ಷಾಸ್ನಾನಗೊಳಿಸಲ್ಪಟ್ಟಳು. ತನ್ನ ಗಂಡನು ಅದೇ ದಿನ ಸೆರೆಮನೆಯಲ್ಲಿ ದೀಕ್ಷಾಸ್ನಾನವನ್ನು ಹೊಂದಿದ್ದನೆಂಬುದನ್ನು ಅವಳು ಕೇಳಿದಾಗ ಅವಳ ಆನಂದವು ಮಹತ್ತರವಾಗಿತ್ತು!
ಪ್ರೊಚೀಡಾದಲ್ಲಿ ನನಗೆ ಭೇಟಿ ನೀಡಿದ ಸಾಕ್ಷಿಗಳೊಂದಿಗೆ ಸಾಪ್ತಾಹಿಕ ಸಂಭಾಷಣೆಗಳನ್ನು ಮಾಡಲು ನನಗೆ ಅನುಮತಿಸಲಾಯಿತು. ಸಂದರ್ಶಕರ ಹಾಲ್ನಲ್ಲಿ ಅವರೊಂದಿಗೆ ಹಂಚಿಕೊಳ್ಳಲು ಊಟಗಳನ್ನು ತಯಾರಿಸುವಂತೆಯೂ ನನ್ನನ್ನು ಅನುಮತಿಸಲಾಯಿತು. ಒಂದು ಸಮಯದಲ್ಲಿ ಹತ್ತು ವ್ಯಕ್ತಿಗಳು ಉಪಸ್ಥಿತರಿರಸಾಧ್ಯವಿತ್ತು. ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರು ಭೇಟಿ ನೀಡಿದಾಗ, ಅವರ ಸ್ಲೈಡ್ ಪ್ರಸ್ತುತಪಡಿಸುವಿಕೆಗಳನ್ನು ತೋರಿಸಲು ನಾನು ಪರವಾನಗಿಯನ್ನು ಪಡೆದೆ. ಒಮ್ಮೆ ನಾನು 14 ಸಾಕ್ಷಿಗಳ ಭೇಟಿಯ ಸಮಯದಲ್ಲಿ ಕಾವಲಿನಬುರುಜು ಅಭ್ಯಾಸವನ್ನು ನಡಿಸುವ ಆನಂದವನ್ನು ಹೊಂದಿದ್ದೆ. ಅಧಿಕಾರಿಗಳು ನನ್ನಲ್ಲಿ ಸಂಪೂರ್ಣವಾಗಿ ಭರವಸೆಯಿಟ್ಟಂತೆ ತೋರಿತು. ನೇಮಿಸಲ್ಪಟ್ಟ ದಿನಗಳಂದು, ಸಾಯಂಕಾಲದ ಸಮಯದಷ್ಟಕ್ಕೆ ನಾನು ಸೆರೆಮನೆಯ ಕಿರುಕೊಠಡಿಯಿಂದ ಕಿರುಕೊಠಡಿಗೆ ಸಾರಲು ಹೋಗುತ್ತಿದ್ದೆ.
ವಿವಿಧ ಸೆರೆಮನೆಗಳಲ್ಲಿ 24 ವರ್ಷಗಳನ್ನು ಕಳೆದ ಬಳಿಕ, 1974ರಲ್ಲಿ, ಕ್ಷಮೆಗಾಗಿ ಒಂದು ಅರ್ಜಿಯನ್ನು ಹಾಕುವಂತೆ ನನ್ನನ್ನು ಉತ್ತೇಜಿಸಿದ ಒಬ್ಬ ನ್ಯಾಯಧೀಶನಿಂದ ಒಂದು ಭೇಟಿಯನ್ನು ಪಡೆದೆ. ಅದನ್ನು ಮಾಡುವುದು ಸೂಕ್ತವೆಂದು ನಾನು ಎಣಿಸಲಿಲ್ಲ, ಯಾಕಂದರೆ ಅದು ಪೋರ್ಟೆಲಾ ಡೆಲಾ ಜಿನಿಸ್ಟ್ರಾದ ಕಗ್ಗೊಲೆಯಲ್ಲಿ ಒಳಗೂಡುವಿಕೆಯನ್ನು ಅಂಗೀಕರಿಸುವುದಾಗಿರುತ್ತಿತ್ತು, ಮತ್ತು ನಾನು ಅದರಲ್ಲಿ ಭಾಗವಹಿಸಿರಲಿಲ್ಲ.
ಮಹತ್ತಾದ ಆನಂದದ ಸಂದರ್ಭಗಳು
1975ರಲ್ಲಿ ಸೆರೆಮನೆಯಿಂದ ಹೊರಹೋಗುವ ಪರ್ಮಿಟ್ಗಳನ್ನು ದಯಪಾಲಿಸುವುದಕ್ಕಾಗಿ ಒಂದು ಹೊಸ ನಿಯಮವು ಒದಗಿಸಿಕೊಟ್ಟಿತು. ಹೀಗೆ, ನನಗೆ ನೆಪಲ್ಸ್ ನಗರದಲ್ಲಿ, ಯೆಹೋವನ ಸಾಕ್ಷಿಗಳ ನನ್ನ ಪ್ರಥಮ ಅಧಿವೇಶನವನ್ನು ಹಾಜರಾಗುವ ಅವಕಾಶವು ಇತ್ತು. ನಾನು ಐದು ಮರೆಯಲಾಗದ ದಿನಗಳನ್ನು ಆನಂದಿಸಿದೆ, ಆ ಸಮಯದಲ್ಲಿ ನಾನು ಹಿಂದೆಂದೂ ನೋಡಿದ್ದಕ್ಕಿಂತಲೂ ಹೆಚ್ಚು ಕ್ರೈಸ್ತ ಸಹೋದರ ಸಹೋದರಿಯರನ್ನು ಸಂಧಿಸಿದೆ.
ನನಗೆ ವಿಶೇಷ ಆನಂದವನ್ನು ತಂದಂತಹದ್ದು ಯಾವುದೆಂದರೆ, ಕೊನೆಗೆ ಇಷ್ಟೊಂದು ವರ್ಷಗಳ ಬಳಿಕ ನನ್ನ ಕುಟುಂಬದೊಂದಿಗೆ ಪುನಃ ಒಟ್ಟುಗೂಡಿಸಲ್ಪಡುವುದು. ನನ್ನ ಹೆಂಡತಿಯಾದ ವೀಟಾ ನನಗೆ ನಂಬಿಗಸ್ತಳಾಗಿ ಉಳಿದಿದ್ದಳು, ಮತ್ತು ನನ್ನ ಪುತ್ರರು ಈಗ ತಮ್ಮ 20 ಮತ್ತು 30ಗಳಲ್ಲಿದ್ದ ಯುವ ಪುರುಷರಾಗಿದ್ದರು.
ಮುಂದಿನ ವರ್ಷ—ಸೆರೆಮನೆಯಿಂದ ನಾನು ಅನೇಕ ಸಲ ಬಿಡುವನ್ನು ಅನುಭವಿಸಿದ ಸಮಯ—ನಾನು ಸೆರೆಮನೆಯಿಂದ ಬಿಡುಗಡೆಗಾಗಿ ಅರ್ಜಿ ಸಲ್ಲಿಸುವಂತೆ ನನಗೆ ಸಲಹೆ ಕೊಡಲಾಯಿತು. ನನ್ನ ಕುರಿತಾದ ಬಿಡುಗಡೆಮಾಡುವ ದಂಡಾಧಿಕಾರಿಯ ವರದಿಯಲ್ಲಿ, ನನ್ನ ಅರ್ಜಿಯು ಸ್ವೀಕರಿಸಲ್ಪಡುವಂತೆ ಅವನು ಶಿಫಾರಸ್ಸು ಮಾಡಿದನು. ಅವನು ಬರೆದುದು: “ವಿರೋಧೋಕ್ತಿಯ ಭಯವಿಲ್ಲದೆ ಹೇಳಬಹುದೇನಂದರೆ—ಇಂದು ಮಾನಿನೊ, ಜೂಲೀಆನೊವಿನ ಆಜ್ಞೆಗಳನ್ನು ನಡಿಸುತ್ತಿದ್ದ ರಕ್ತದಾಹಿ ಯುವಕನಿಗೆ ಹೋಲಿಸುವಾಗ, ಇನ್ನೊಬ್ಬ ಮನುಷ್ಯನಾಗಿದ್ದಾನೆ; ಅವನು ಸಂಪೂರ್ಣವಾಗಿ ಬದಲಾಗಿದ್ದಾನೆ.”
ಸಮಯಾನಂತರ, ಪ್ರೊಚೀಡಾದ ಸೆರೆಮನೆ ಅಧಿಕಾರಿಗಳು ನನಗಾಗಿ ಕ್ಷಮೆಯನ್ನು ವಿನಂತಿಸಿಕೊಂಡರು. ಕೊನೆಗೆ ಕ್ಷಮೆಯು ದಯಪಾಲಿಸಲ್ಪಟ್ಟಿತು, ಮತ್ತು 1978, ಡಿಸೆಂಬರ್ 28ರಂದು, ನಾನು ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟೆ. 28ಕ್ಕಿಂತಲೂ ಹೆಚ್ಚು ವರ್ಷಗಳ ನಿರ್ಬಂಧವಾಸದ ನಂತರ, ಒಬ್ಬ ಸ್ವತಂತ್ರ ಮನುಷ್ಯನಾಗಿರುವುದು ಎಂತಹ ಒಂದು ಆನಂದ!
ನ್ಯಾಯಕ್ಕಾಗಿ ಏಕಮಾತ್ರ ನಿರೀಕ್ಷೆ
ಸಾಲ್ವಟೋರ್ ಜೂಲೀಆನೊವಿನ ಆಧಿಪತ್ಯದ ಕೆಳಗೆ ಒಬ್ಬ ಅಪಹರಣಗಾರನಾಗಿ, ನನ್ನ ಕುಟುಂಬ ಮತ್ತು ನನ್ನ ದೇಶಸ್ಥರಿಗೆ ನಿಜ ಸ್ವಾತಂತ್ರವನ್ನು ತರುವುದೆಂದು ನಾನು ನಂಬಿದಂತಹ ವಿಷಯಕ್ಕಾಗಿ ನಾನು ಹೋರಾಡಿದ್ದೆ. ಆದರೂ, ಮಾನವರು ಎಷ್ಟೇ ಪ್ರಾಮಾಣಿಕರಾಗಿರಲಿ, ನಾನು ಒಬ್ಬ ಯುವಕನಾಗಿ ತೀವ್ರವಾಗಿ ಅಪೇಕ್ಷಿಸಿದಂತಹ ನ್ಯಾಯವನ್ನು ಅವರು ಎಂದೂ ತರಲಾರರು ಎಂಬುದನ್ನು ನಾನು ಬೈಬಲಿನಿಂದ ಕಲಿತೆ. ಕೃತಜ್ಞತಾಪೂರ್ವಕವಾಗಿ, ತನ್ನ ಪುತ್ರನಾದ ಯೇಸು ಕ್ರಿಸ್ತನ ಹಸ್ತಗಳಲ್ಲಿರುವ ದೇವರ ರಾಜ್ಯವು ಮಾತ್ರವೇ, ಅನ್ಯಾಯದಿಂದ ಇಷ್ಟೊಂದು ವಿಪರೀತವಾಗಿ ಅಗತ್ಯವಿರುವ ಪರಿಹಾರವನ್ನು ಒದಗಿಸಬಲ್ಲದೆಂದು ಬೈಬಲ್ ಜ್ಞಾನವು ನನಗೆ ಕಾಣುವಂತೆ ಸಹಾಯ ಮಾಡಿತು.—ಯೆಶಾಯ 9:6, 7; ದಾನಿಯೇಲ 2:44; ಮತ್ತಾಯ 6:9, 10; ಪ್ರಕಟನೆ 21:3, 4.
ಯಾವುದಕ್ಕಾಗಿ ಅಂತಹ ಬೈಬಲ್ ಜ್ಞಾನವು ಕಾರಣವಾಗಿತ್ತೊ ಆ ನನ್ನ ವ್ಯಕ್ತಿತ್ವದಲ್ಲಿನ ಬದಲಾವಣೆಯನ್ನು ಅನೇಕ ವಾರ್ತಾಪತ್ರಗಳು ದಾಖಲಿಸಿದವು. ಉದಾಹರಣೆಗಾಗಿ, ಪ್ರೊಚೀಡಾದ ಸೆರೆಮನೆಯ ವಾರ್ಡನ್ ಹೀಗೆ ಹೇಳುತ್ತಿರುವುದಾಗಿ ಪಾಯಿಸ್ ಸೇರಾ ಉಲ್ಲೇಖಿಸಿತು: “ಎಲ್ಲಾ ಸೆರೆಮನೆವಾಸಿಗಳು ಫ್ರಾಂಕ್ನಂತಿರುತ್ತಿದ್ದಲ್ಲಿ, ಸೆರೆಮನೆಗಳು ಕಣ್ಮರೆಯಾಗುವವು; ಅವನ ನಡತೆಯು ಆಕ್ಷೇಪಣಾರಹಿತವಾದದ್ದಾಗಿರುತ್ತದೆ, ಅವನು ಎಂದೂ ಜಗಳವಾಡಲಿಲ್ಲ, ಮತ್ತು ಅವನು ಎಂದೂ ಅತ್ಯಲ್ಪವಾದ ಛೀಮಾರಿಯನ್ನೂ ಪಡೆಯಲಿಲ್ಲ.” ಇನ್ನೊಂದು ವಾರ್ತಾಪತ್ರವಾದ ಎವಾನೆರೆ ಹೇಳಿದ್ದು: “ಅವನೊಬ್ಬ ಆದರ್ಶಪ್ರಾಯ ಸೆರೆಮನೆವಾಸಿಯಾಗಿದ್ದಾನೆ, ಅಸಾಮಾನ್ಯನು. ಅವನ ಪುನಃಸ್ಥಾಪನೆಯು ಎಲ್ಲಾ ನಿರೀಕ್ಷಣೆಗಳನ್ನು ಮೀರುವಂತಹದ್ದಾಗಿದೆ. ಅವನು ಸಂಸ್ಥೆಗಳ ಕಡೆಗೆ ಮತ್ತು ಸೆರೆಮನೆಯ ಅಧಿಕಾರಿಗಳ ಕಡೆಗೆ ಗೌರವಪೂರ್ಣನಾಗಿದ್ದಾನೆ ಹಾಗೂ ಒಂದು ಅಸಾಮಾನ್ಯವಾದ ಆತ್ಮಿಕತೆಯನ್ನು ಹೊಂದಿರುತ್ತಾನೆ.”
ಒಂದು ಪ್ರತಿಫಲದಾಯಕ ಜೀವನ
1984ರಂದಿನಿಂದ, ನಾನು ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಒಬ್ಬ ಹಿರಿಯನು ಮತ್ತು ಒಬ್ಬ ಪಯನೀಯರನು—ಪೂರ್ಣ ಸಮಯದ ಶುಶ್ರೂಷಕರು ಹಾಗೆಂದು ಕರೆಯಲ್ಪಡುತ್ತಾರೆ—ಆಗಿ ಸೇವೆಸಲ್ಲಿಸಿದ್ದೇನೆ. 1990ರಲ್ಲಿ, ನಾನು ಯಾರೊಂದಿಗೆ 15 ವರ್ಷಗಳ ಹಿಂದೆ ಬೈಬಲ್ ಜ್ಞಾನವನ್ನು ಹಂಚಿಕೊಂಡಿದ್ದೆನೊ, ಆ ಒಬ್ಬ ಸೆರೆಮನೆ ಕಾವಲುಗಾರ, ತಾನು ಮತ್ತು ತನ್ನೆಲ್ಲ ಕುಟುಂಬವು ಯೆಹೋವನ ಸಾಕ್ಷಿಗಳಾಗಿದ್ದೇವೆಂದು ನನಗೆ ತಿಳಿಸಲು ಫೋನ್ ಮಾಡಿದನು.
ಆದರೆ ನನ್ನ ಅತ್ಯಂತ ಸಂತೋಷಭರಿತ ಅನುಭವವು ಜುಲೈ 1995ರಲ್ಲಿ ಬಂತು. ಆ ವರ್ಷ ನನ್ನ ಪ್ರಿಯ ಹೆಂಡತಿಯಾದ ವೀಟಾಳ ದೀಕ್ಷಾಸ್ನಾನವನ್ನು ಹಾಜರಾಗುವ ಮಹತ್ತಾದ ಆನಂದವನ್ನು ನಾನು ಹೊಂದಿದೆ. ಇಷ್ಟೊಂದು ವರ್ಷಗಳ ನಂತರ, ಅವಳು ಬೈಬಲಿನ ಬೋಧನೆಗಳನ್ನು ತನ್ನದಾಗಿ ಮಾಡಿಕೊಂಡಿದ್ದಳು. ಈಗ ನನ್ನ ನಂಬಿಕೆಯನ್ನು ಪಾಲಿಸದಿರುವ ನನ್ನ ಮೂವರು ಪುತ್ರರು ಸಹ ಪ್ರಾಯಶಃ ಒಂದು ದಿನ, ದೇವರ ವಾಕ್ಯದಿಂದ ನಾನು ಕಲಿತಿರುವಂತಹ ವಿಷಯಗಳನ್ನು ಸ್ವೀಕರಿಸುವರು.
ಇತರರು ಬೈಬಲ್ ಸತ್ಯಗಳನ್ನು ಕಲಿಯುವುದರಲ್ಲಿ ಸಹಾಯ ಮಾಡುವ ನನ್ನ ಅನುಭವಗಳು ನನಗೆ ಅತುಲ್ಯವಾದ ಆನಂದವನ್ನು ಕೊಟ್ಟಿವೆ. ನಿತ್ಯ ಜೀವಕ್ಕೆ ನಡಿಸುವ ಸತ್ಯವನ್ನು ಪಡೆದುಕೊಂಡಿರುವುದು ಮತ್ತು ಅದನ್ನು ಪ್ರಾಮಾಣಿಕ ಹೃದಯದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಶಕ್ತನಾಗಿರುವುದು ಎಷ್ಟು ಪ್ರತಿಫಲದಾಯಕವಾಗಿ ಪರಿಣಮಿಸಿದೆ!—ಯೋಹಾನ 17:3.—ಫ್ರಾಂಕ್ ಮಾನಿನೊ ಹೇಳಿದಂತೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 26 ರಲ್ಲಿರುವ ಚಿತ್ರ]
ಕಗ್ಗೊಲೆಯು ಸಂಭವಿಸಿದಂತಹ ಸಿಸಿಲಿಯಲ್ಲಿನ ಪರ್ವತದ ತಗ್ಗು
[ಪುಟ 27 ರಲ್ಲಿರುವ ಚಿತ್ರ]
1942ರಲ್ಲಿ ನಾವು ಮದುವೆಯಾದಾಗ
[ಪುಟ 29 ರಲ್ಲಿರುವ ಚಿತ್ರ]
ನಾನು ಅನೇಕ ಸಲ ಸೆರೆಮನೆ ಕಾವಲುಗಾರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚಿಕೊಂಡೆ
[ಪುಟ 31 ರಲ್ಲಿರುವ ಚಿತ್ರ]
ನನ್ನ ಹೆಂಡತಿಯೊಂದಿಗೆ