ರಾಜ್ಯ ಘೋಷಕರು ವರದಿಮಾಡುತ್ತಾರೆ
ಪ್ರತಿಯೊಂದು ಸಂದರ್ಭದಲ್ಲಿಯೂ ರಾಜ್ಯದ ಬೀಜವನ್ನು ಹರಡಿಸುವುದು
ದೇವರ ವಾಕ್ಯವಾದ ಬೈಬಲ್, ಉದ್ಯೋಗಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ರಾಜ ಸೊಲೊಮೋನನು ಹೇಳಿದ್ದು: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.”—ಪ್ರಸಂಗಿ 11:6.
ಪ್ರತಿಯೊಂದು ಉಚಿತ ಸಂದರ್ಭದಲ್ಲಿಯೂ, ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರ ಮೂಲಕ “ಬೀಜ”ವನ್ನು ಬಿತ್ತುತ್ತಾರೆ. ಅವರು, 230ಕ್ಕಿಂತಲೂ ಹೆಚ್ಚಿನ ದೇಶ ದ್ವೀಪಗಳಲ್ಲಿ “ಎಡೆಬಿಡದೆ . . . ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ” ಮುಂದುವರಿಯುತ್ತಾರೆ. (ಅ. ಕೃತ್ಯಗಳು 5:42) ಯೆಹೋವನ ಸಾಕ್ಷಿಗಳು ಯಾವ ರೀತಿಯಲ್ಲಿ ಸಾರುವ ಕೆಲಸದಲ್ಲಿ ‘ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ’ ಎಂಬುದನ್ನು ಈ ಮುಂದಿನ ಅನುಭವಗಳು ತಿಳಿಸುತ್ತವೆ.
◻ ರಿಪಬ್ಲಿಕ್ ಆಫ್ ಕೇಪ್ ವರ್ಡ್ನಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆಯು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿರುವಾಗ ಸೆರೆಮನೆ ಬದಿಯಿಂದ ನಡೆಯುತ್ತಿದ್ದಳು. ಸೆರೆಮನೆಯ ಅಂಗಳದಲ್ಲಿನ ಒಂದು ಮರದ ಮೇಲೆ ಕೆಲವು ಸೆರೆವಾಸಿಗಳು ಕುಳಿತುಕೊಂಡಿದ್ದರು. ಕೆಳಗೆ ಹೋಗುತ್ತಿದ್ದ ಸಾಕ್ಷಿಯನ್ನು ಗಮನಿಸುತ್ತಾ, ಸೆರೆವಾಸಿಗಳು ಕೆಲವು ಪತ್ರಿಕೆಗಳಿಗಾಗಿ ಬೇಡಿಕೊಂಡರು. ಸಾಕ್ಷಿಯು ಅನೇಕ ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ಒಂದು ಕಲ್ಲಿಗೆ ಕಟ್ಟಿ ಸೆರೆಮನೆ ಗೋಡೆಯಿಂದಾಚೆಗೆ ಎಸೆದಳು. ಈ ಪ್ರಾರಂಭಿಕ ಆಸಕ್ತಿಯ ಫಲಿತಾಂಶವಾಗಿ, 12 ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟವು. ಸೆರೆವಾಸಿಗಳಲ್ಲಿ ಮೂವರು, ದೇವರಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡಿದ್ದಾರೆ ಮತ್ತು ನೀರಿನ ದೀಕ್ಷಾಸ್ನಾನಕ್ಕೆ ತಮ್ಮನ್ನು ತಾವೇ ನೀಡಿಕೊಂಡಿದ್ದಾರೆ. ಸೆರೆವಾಸಿಗಳಲ್ಲೊಬ್ಬನು, ಈಗ ಒಂದು ವರುಷಕ್ಕಿಂತಲೂ ಹೆಚ್ಚು ಸಮಯದಿಂದ ಪೂರ್ಣ ಸಮಯದ ಸೌವಾರ್ತಿಕನಾಗಿ ಅಥವಾ ಪಯನೀಯರನಾಗಿ ಸೇವೆಮಾಡುತ್ತಾ ಇದ್ದಾನೆ. ಆದರೂ, ಅವರು ಸೆರೆಮನೆಯಲ್ಲಿ ಕ್ಷೇತ್ರ ಸೇವಾ ಚಟುವಟಿಕೆಗಳನ್ನು ಹೇಗೆ ನಡಿಸುತ್ತಾರೆ? ಮೊದಲಾಗಿ ಸೆರೆಮನೆಯನ್ನು ಟೆರಿಟೊರಿಗಳಾಗಿ ವಿಭಜಿಸಲಾಗುತ್ತದೆ. ಆಮೇಲೆ ಟೆರಿಟೊರಿಯನ್ನು ಮೂವರು ಸಾಕ್ಷಿಗಳೊಳಗೆ ಹಂಚಲಾಗುತ್ತದೆ ಮತ್ತು ಅವರು ಪ್ರತಿಯೊಂದು ಕೋಣೆಯಲ್ಲಿರುವವರಿಗೆ ಸಾಕ್ಷಿಕೊಡುತ್ತಾರೆ. ಈ ರಾಜ್ಯ ಘೋಷಕರು ಲೋಕಾದ್ಯಂತ ಯೆಹೋವನ ಸಾಕ್ಷಿಗಳು ಮಾಡುವ ರೀತಿಯಲ್ಲಿಯೇ ಪುನರ್ಭೇಟಿಗಳನ್ನು ಮಾಡುವ ಮೂಲಕ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹಾಗಿದ್ದರೂ, ಒಂದು ವ್ಯತ್ಯಾಸವು, ಬೈಬಲ್ ಅಧ್ಯಯನಗಳನ್ನು ಪದೇಪದೇ ನಡಿಸುವುದೇ ಆಗಿದೆ. ಒಂದು ವಾರದಲ್ಲಿ ಕೇವಲ ಒಮ್ಮೆಯೊ, ಎರಡಾವರ್ತಿಯೊ, ಒಂದು ಅಥವಾ ಹೆಚ್ಚು ತಾಸು ಬೈಬಲ್ ಅಧ್ಯಯನ ಮಾಡುವ ಬದಲಾಗಿ, ಕೆಲವು ಸೆರೆವಾಸಿಗಳು ಪ್ರತಿ ದಿನವು ಅಧ್ಯಯನ ಮಾಡುತ್ತಾರೆ! ಅದರ ಜೊತೆಗೆ, ಸಾಕ್ಷಿಗಳಿಗೆ ಸೆರೆಮನೆಯ ಒಳಗೆಯೇ ಎಲ್ಲಾ ಸಭಾ ಕೂಟಗಳನ್ನು ನಡಿಸಲು ಸೆರೆಮನೆಯ ಸಾಮಾನ್ಯ ಮೇಲ್ವಿಚಾರಕನಿಂದ ಪರವಾನಗಿ ಕೊಡಲ್ಪಟ್ಟಿದೆ.
◻ ಪೋರ್ಚುಗಲ್ನಲ್ಲಿರುವ ಒಬ್ಬಾಕೆ ಸ್ತ್ರೀಯು ತನ್ನ ಅಜ್ಜಿ ತೀರಿಕೊಂಡಾಗ ಅನೇಕ ವಾಚ್ ಟವರ್ ಪ್ರಕಾಶನಗಳಿಗೆ ವಾರಸುದಾರಳಾದಳು. ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರದ ಕಾರಣ, ಆ ಪುಸ್ತಕಗಳನ್ನು ಇಟ್ಟುಕೊಳ್ಳಲು ಅವಳಿಗೆ ಆಸಕ್ತಿಯಿರಲಿಲ್ಲ. ಹಾಗಿದ್ದರೂ, ಅವುಗಳನ್ನು ನಾಶಮಾಡಲು ಅವಳು ಬಯಸಲಿಲ್ಲ. ಒಂದು ದಿನ ಮನೆಯಿಂದ ಮನೆಯ ಸೇವೆಯಲ್ಲಿ ಅವಳನ್ನು ಸಂದರ್ಶಿಸಿದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆಗೆ ಅವಳು ಪುಸ್ತಕ ಭಂಡಾರದ ಕುರಿತು ಹೇಳಿದಳು. ಆ ಪುಸ್ತಕ ಭಂಡಾರದ ನಿಜವಾದ ಮೌಲ್ಯ ಅವಳಿಗೆ ತಿಳಿದಿದೆಯೋ ಎಂದು ಸಾಕ್ಷಿಯು ಅವಳನ್ನು ಕೇಳಿದಳು. ಸ್ತ್ರೀಯು ಉತ್ತರಿಸಿದ್ದು: “ವಾಸ್ತವವಾಗಿ, ನನಗೆ ಅದರ ನಿಜ ಮೌಲ್ಯ ತಿಳಿದಿಲ್ಲ, ಆದರೆ ನಾನು ಹೇಗೆ ಕಂಡುಕೊಳ್ಳಸಾಧ್ಯವಿದೆ?” ಸ್ತ್ರೀಯು ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದಳು, ಮತ್ತು ಬೇಗನೆ ತನ್ನ ಅಜ್ಜಿಯ ಪುಸ್ತಕ ಭಂಡಾರವನ್ನು ಅಮೂಲ್ಯವೆಂದು ಎಣಿಸತೊಡಗಿದಳು. ಈಗ ಅವಳು ಕೂಡ ಒಬ್ಬ ಸ್ನಾನಿತ ಯೆಹೋವನ ಸಾಕ್ಷಿಯಾಗಿದ್ದಾಳೆ. ಅಷ್ಟುಮಾತ್ರವಲ್ಲದೆ, ಅವಳ ಮಗಳು ಮತ್ತು ಕುಟುಂಬದ ಒಬ್ಬ ಆಪ್ತ ಸೇಹಿತೆಯು ಕೂಡ ಬೈಬಲನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಪುಸ್ತಕಗಳ ಸಂಗ್ರಹವು ಎಂತಹ ಒಂದು ಅಮೂಲ್ಯ ಸೊತ್ತಾಗಿ ಪರಿಣಮಿಸಿತು!