“ಯೆಹೋವನ ಸಾಕ್ಷಿಗಳ ಬಗ್ಗೆ ನನಗಿದ್ದ ಅಭಿಪ್ರಾಯವನ್ನು ನೀವು ಬದಲಾಯಿಸಿದ್ದೀರಿ”
ನಮ್ಮ ಅಕ್ಟೋಬರ್ 15, 1998ರ ಕಾವಲಿನಬುರುಜು ಸಂಚಿಕೆಯಲ್ಲಿ ವರದಿಸಲ್ಪಟ್ಟಂತೆ, ಯೆಹೋವನ ಸಾಕ್ಷಿಗಳ ಕೆಲಸದ ಕುರಿತಾಗಿ ಬಂದಿದ್ದ ಒಂದು ಲೇಖನವನ್ನು ನೋಡಿ ಪೋಲೆಂಡ್ನ ಸೆರೆಮನೆಯ ಅಧಿಕಾರಿಯೊಬ್ಬನು ಈ ವಾಕ್ಯವನ್ನು ನುಡಿದನು. “ಕಲ್ಲೆದೆಯವರು ಪ್ರತಿಕ್ರಿಯೆ ತೋರಿಸುವಾಗ” ಎಂಬ ಈ ಲೇಖನವು, ಪೋಲೆಂಡ್ನ ವಾವೂಫ್ ಸೆರೆಮನೆಯಲ್ಲಿದ್ದ ಸೆರೆವಾಸಿಗಳಿಗೆ ಸಾಕ್ಷಿನೀಡುವುದರಲ್ಲಿ ಯೆಹೋವನ ಸಾಕ್ಷಿಗಳಿಗೆ ದೊರೆತ ಯಶಸ್ಸಿನ ಪುರಾವೆಯನ್ನು ನೀಡಿತ್ತು.
ಈ ಮೇಲೆ ತಿಳಿಸಲ್ಪಟ್ಟಿರುವ ಕಾವಲಿನಬುರುಜು ಪತ್ರಿಕೆಯನ್ನು ಸಾರ್ವಜನಿಕರಿಗೆ ಕೊಡುವುದಕ್ಕೆ ಮುಂಚೆ, 1998ರ ಸೆಪ್ಟೆಂಬರ್ 13ರಂದು ವಾವೂಫ್ ಕಾರಾಗೃಹದಲ್ಲಿನ ಸೆರೆವಾಸಿಗಳಿಗೆ ಅದನ್ನು ಒದಗಿಸಲಿಕ್ಕಾಗಿ ಒಂದು ವಿಶೇಷ ಕೂಟವನ್ನು ಏರ್ಪಡಿಸಲಾಗಿತ್ತು. ಈ ಕೂಟಕ್ಕೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟವರಲ್ಲಿ, ಸ್ಥಳಿಕ ಸಾಕ್ಷಿಗಳು, ದೀಕ್ಷಾಸ್ನಾನ ಪಡೆದುಕೊಂಡಿದ್ದ ಸೆರೆವಾಸಿಗಳು ಹಾಗೂ ಇನ್ನಿತರ ಆಸಕ್ತ ಸೆರೆವಾಸಿಗಳು, ಮತ್ತು ಕಾರಾಗೃಹದ ಅನೇಕ ಅಧಿಕಾರಿಗಳು ಸೇರಿದ್ದರು. ಅಲ್ಲಿ ಹಾಜರಿದ್ದವರ ಅಭಿಪ್ರಾಯೋಕ್ತಿಗಳಲ್ಲಿ ಕೆಲವು ಇಲ್ಲಿ ಕೊಡಲ್ಪಟ್ಟಿವೆ.
ಐದು ವರ್ಷಗಳಿಗಿಂತಲೂ ಹಿಂದೆ ಸೆರೆಮನೆಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಪರಿಣಮಿಸಿದ ಯೆರ್ಸೀ ಹೇಳಿದ್ದು: “ನಮಗೆ ಸಹಾಯ ಮಾಡಲಿಕ್ಕಾಗಿ ಹತ್ತಿರದ ಸಭೆಗಳ ಸಹೋದರರು ಎಷ್ಟೊಂದು ಪ್ರಯಾಸಪಟ್ಟರು ಎಂಬುದರ ಕುರಿತು ನಾನು ಇಂದು ಓದಸಾಧ್ಯವಿರುವುದರಿಂದ ನನಗೆ ತುಂಬ ಸಂತೋಷವಾಗಿದೆ.” ಅವನು ಕೂಡಿಸಿ ಹೇಳಿದ್ದು: “ನನ್ನ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ನಾನು ತುಂಬ ಹೆಣಗಾಡುತ್ತಿದ್ದೇನೆ, ಮತ್ತು ಯೆಹೋವನು ನನ್ನನ್ನು ಸರಿಯಾದ ಸ್ಥಿತಿಗೆ ಹೇಗೆ ತರುತ್ತಿದ್ದಾನೆ ಎಂಬುದನ್ನು ನಾನು ಗಮನಿಸಬಲ್ಲೆ.”
ಜೆಷ್ವಾಫ್ ಎಂಬ ಹೆಸರಿನ ಇನ್ನೊಬ್ಬ ಸೆರೆವಾಸಿಯು, ಸೆರೆಮನೆಯಲ್ಲಿನ ಸಾಕ್ಷಿಕಾರ್ಯದ ಕುರಿತು ಹೀಗೆ ಹೇಳಿದನು: “ಸದ್ಯಕ್ಕೆ ನಾಲ್ಕು ಖೈದಿಗಳು ದೀಕ್ಷಾಸ್ನಾನಕ್ಕಾಗಿ ಸಿದ್ಧರಾಗುತ್ತಿದ್ದಾರೆ, ಮತ್ತು ಹೊಸ ಆಸಕ್ತ ಜನರು ನಮ್ಮ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆಯನ್ನು ಮಾಡುವಂತೆ ಈ ಲೇಖನವು ನಮಗೆ ಪ್ರಬಲವಾದ ಪ್ರಚೋದನೆಯನ್ನು ನೀಡಿದೆ.” ಇನ್ನೂ 19 ವರ್ಷಗಳ ವರೆಗೆ ಜೆಷ್ವಾಫ್ ಸೆರೆಮನೆಯಲ್ಲಿ ಕಳೆಯಬೇಕಾಗಿರುವುದನ್ನು ಪರಿಗಣಿಸುವಾಗ, ನಿಜವಾಗಿಯೂ ಇದು ಎಂತಹ ಸಕಾರಾತ್ಮಕ ಮನೋಭಾವವಾಗಿದೆ!
ವಾವೂಫ್ ಕಾರಾಗೃಹದ ಕುರಿತಾದ ಲೇಖನವನ್ನು ಓದಿದ ಬಳಿಕ, ಸೆರೆಮನೆಯ ಅಧಿಕಾರಿಯೊಬ್ಬನು ಹೇಳಿದ್ದು: “ನಮಗೆ ವಿಶೇಷವಾದ ಸನ್ಮಾನವು ಸಿಕ್ಕಿದೆ. ಇಡೀ ಲೋಕದಲ್ಲಿ 130 ಭಾಷೆಗಳಲ್ಲಿ ಈ ಕಾರಾಗೃಹಕ್ಕೆ ಇಂತಹ ಒಳ್ಳೆಯ ಪ್ರಚಾರವು ದೊರಕುವುದು ಎಂದು ನಾನೆಂದೂ ನೆನಸಿರಲಿಲ್ಲ. ನಾನು ನಿಮ್ಮನ್ನು ಇಷ್ಟಪಡುತ್ತೇನೆ, ಮತ್ತು ಖೈದಿಗಳ ಪರವಾಗಿ ನೀವು ಮಾಡುತ್ತಿರುವ ಪ್ರಯತ್ನಗಳನ್ನು ನಾನು ಗಣ್ಯಮಾಡುತ್ತೇನೆ.” ಇನ್ನೊಬ್ಬ ಅಧಿಕಾರಿಯು ಹೇಳಿದ್ದು: “ಯೆಹೋವನ ಸಾಕ್ಷಿಗಳ ಬಗ್ಗೆ ನನಗಿದ್ದ ಅಭಿಪ್ರಾಯವನ್ನು ನೀವು ಬದಲಾಯಿಸಿದ್ದೀರಿ. ಈ ಮುಂಚೆ ನಾನು ನಿಮ್ಮನ್ನು ಕೇವಲ ಧಾರ್ಮಿಕ ಮತಾಂಧರು ಎಂದು ಪರಿಗಣಿಸಿದ್ದೆ. ಆದರೆ ನೀವು ನೀತಿನಿಯಮಗಳನ್ನು ಪಾಲಿಸುವ ಜನರಾಗಿದ್ದೀರಿ ಎಂಬುದು ಈಗ ನನಗೆ ಗೊತ್ತಾಗಿದೆ.”
ವಾವೂಫ್ ಸೆರೆಮನೆಯ ಡೈರೆಕ್ಟರರಾದ ಮಾರೆಕ್ ಗೈಯಾಸ್ ನಸುನಗುತ್ತಾ ಹೇಳಿದ್ದು: “ನೀವು ಹೆಚ್ಚನ್ನು ಸಾಧಿಸಲಾರಿರಿ ಎಂದು ನಾವು ಮೊದಮೊದಲು ನೆನಸಿದ್ದೆವು. ನೀವು ಖೈದಿಗಳನ್ನು ಬೈಬಲಿನ ಮೂಲಕ ಒಳ್ಳೇ ಸ್ಥಿತಿಗೆ ತರುವಂತಹ ಆಕಾಂಕ್ಷೆಯಿರುವ ಇನ್ನೊಂದು ಧಾರ್ಮಿಕ ಗುಂಪಾಗಿದ್ದೀರಿ ಎಂದು ನಾವು ಅಭಿಪ್ರಯಿಸಿದ್ದೆವು. ಆದರೂ, ನಿಮ್ಮ ಆರಂಭದ ಚಟುವಟಿಕೆಯ ಫಲಿತಾಂಶಗಳನ್ನು ನೋಡಿದ ಬಳಿಕ ನಾವು ನಿಮಗೆ ಒಳ್ಳೆಯ ರೀತಿಯಲ್ಲಿ ಸಹಕರಿಸಬೇಕೆಂದು ನಿರ್ಧರಿಸಿದೆವು. ಸುಮಾರು ಒಂಬತ್ತು ವರ್ಷಗಳಿಂದಲೂ ನೀವು ಸತತವಾಗಿ ಇಲ್ಲಿಗೆ ಬರುತ್ತಿದ್ದೀರಿ, ಮತ್ತು ಇಷ್ಟರ ತನಕ ನೀವು ಮಾಡಿರುವ ಸಹಾಯಗಳನ್ನು ನಾನು ತುಂಬ ಗಣ್ಯಮಾಡುತ್ತೇನೆ.”
ಆದರೂ, ವಾವೂಫ್ನ ಸೆರೆಯಲ್ಲಿರುವ ಜನಸಾಮಾನ್ಯರು ಈ ಲೇಖನವನ್ನು ಯಾವ ಮನೋಭಾವದಿಂದ ಸ್ವೀಕರಿಸಿದರು? ಸೆರೆವಾಸಿಗಳ ನಡುವೆ ಎಷ್ಟರ ಮಟ್ಟಿಗಿನ ಆಸಕ್ತಿಯಿತ್ತೆಂದರೆ, ಸೆರೆಯಲ್ಲಿರುವ ಸಾಕ್ಷಿಗಳ ಪತ್ರಿಕೆಯ ಸರಬರಾಜು ಸಂಪೂರ್ಣವಾಗಿ ಮುಗಿದುಹೋಯಿತು. ತಮಗೋಸ್ಕರ 40 ಪ್ರತಿಗಳನ್ನು ವಿನಂತಿಸಿಕೊಳ್ಳುವ ಮೂಲಕ, ಸೆರೆಮನೆಯ ಅಧಿಕಾರಿಗಳು ಸಹ ಆಸಕ್ತಿಯನ್ನು ತೋರಿಸಿದರು. ಈ ಅತ್ಯಧಿಕ ಬೇಡಿಕೆಯನ್ನು ಪೂರೈಸಲಿಕ್ಕಾಗಿ, ಸ್ಥಳಿಕ ಸಭೆಗಳವರು ಸಹಾಯ ಹಸ್ತವನ್ನು ನೀಡಿದರು ಮತ್ತು ಸೆರೆಮನೆಯಲ್ಲಿರುವ ಸಹೋದರರಿಗಾಗಿ ಇನ್ನೂ 100 ಪ್ರತಿಗಳನ್ನು ಒದಗಿಸಿದರು. ಅದೇ ಸಮಯದಲ್ಲಿ, ಸೆರೆಮನೆಯಲ್ಲಿನ ಕೂಟದ ಹಾಜರಿಯು ಸಹ ಹೆಚ್ಚಿತು.
ಸೆರೆಮನೆಯ ಅಧಿಕಾರಿಯಾಗಿದ್ದು, ಯೆಹೋವನ ಸಾಕ್ಷಿಗಳೊಂದಿಗೆ ಹೆಚ್ಚು ನಿಕಟವಾಗಿ ಸಹಕರಿಸಿದ ಪ್ಯಾಟ್ ಹಾಡುವೆನ್ ಹೇಳಿದ್ದು: “ನಾವು ಈ ಲೇಖನವನ್ನು ನಮ್ಮ ಕಾರಾಗೃಹದ ಷೋಕೇಸ್ಗಳಲ್ಲೆಲ್ಲ ಪ್ರದರ್ಶನಕ್ಕಿಡಲು ನಿರ್ಧರಿಸಿದೆವು. ಸೆರೆವಾಸಿಗಳಲ್ಲಿ ಯಾರು ಇನ್ನೂ ನಿಮ್ಮೊಂದಿಗೆ ಬೈಬಲ್ ಅಭ್ಯಾಸವನ್ನು ಮಾಡುತ್ತಿಲ್ಲವೋ ಅವರು ಈ ಪತ್ರಿಕೆಯನ್ನು ಓದುವರು ಎಂದು ನಾವು ನಿರೀಕ್ಷಿಸುತ್ತೇವೆ.”
ಸಾಕ್ಷಿಗಳ ಅತ್ಯುತ್ತಮ ಉದಾಹರಣೆ ಹಾಗೂ ಅವರ ದೃಢವಾದ ಸಾರುವ ಪ್ರಯತ್ನಗಳು ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಿವೆ. ಸುಮಾರು 15 ಸೆರೆವಾಸಿಗಳು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಹಂತದ ವರೆಗೆ ಪ್ರಗತಿಯನ್ನು ಮಾಡಿದ್ದಾರಲ್ಲದೆ, ಸೆರೆಮನೆಯ ಇಬ್ಬರು ಅಧಿಕಾರಿಗಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಮತ್ತು ಸೆರೆಮನೆಯ ಇನ್ನೊಬ್ಬ ಅಧಿಕಾರಿಯು ಬೈಬಲ್ ಅಭ್ಯಾಸವನ್ನು ಕೇಳಿಕೊಂಡಿದ್ದಾನೆ. ಖಂಡಿತವಾಗಿಯೂ, ವಾವೂಫ್ ಸೆರೆಮನೆಯಲ್ಲಿ ಸಾರುವಂತಹ ಸಹೋದರರು, ತಮ್ಮ ಯಶಸ್ಸಿಗೆ ದೊರೆತ ಎಲ್ಲ ಕೀರ್ತಿಯನ್ನು ಯೆಹೋವ ದೇವರಿಗೆ ಸಲ್ಲಿಸುತ್ತಾರೆ.—1 ಕೊರಿಂಥ 3:6, 7ನ್ನು ಹೋಲಿಸಿರಿ.
[ಪುಟ 28 ರಲ್ಲಿರುವ ಚಿತ್ರ]
ಸೆರೆಮನೆಯ ಉಪನ್ಯಾಸದ ಕೋಣೆಯಲ್ಲಿ ಮೂವರು ಸಾಕ್ಷಿಗಳು ಹಾಗೂ ಒಬ್ಬ ಸೆರೆವಾಸಿಯು ಪತ್ರಿಕೆಯನ್ನು ತೋರಿಸುತ್ತಿರುವುದು