ನಾಜೂಕು ಆದರೂ ದಿಟ್ಟವಾದ ಪ್ರವಾಸಿ
ಕೆನಡದಲ್ಲಿನ ಎಚ್ಚರ! ಸುದ್ದಿಗಾರರಿಂದ
ಕಲಾಕಾರರು ಅವುಗಳನ್ನು ಬಣ್ಣದಲ್ಲಿ ಚಿತ್ರಿಸುತ್ತಾರೆ ಮತ್ತು ಕವಿಗಳು ಅವುಗಳ ಕುರಿತು ಬರೆಯುತ್ತಾರೆ. ಹಲವಾರು ಬಗೆ ಬಗೆಯ ಜಾತಿಗಳು ಉಷ್ಣವಲಯದ ಮಳೆಗಾಡುಗಳಲ್ಲಿ ಜೀವಿಸುತ್ತವೆ. ಹೆಚ್ಚಿನವು ಕಾಡುಪ್ರದೇಶಗಳಲ್ಲಿ, ಗದ್ದೆಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಜೀವಿಸುತ್ತವೆ. ಕೆಲವು ಪರ್ವತಶಿಖರಗಳ ಚಳಿಯನ್ನು; ಉಳಿದವು ಮರುಭೂಮಿಗಳ ತಾಪವನ್ನು ನಿಭಾಯಿಸುತ್ತವೆ. ಎಲ್ಲ ಕೀಟಗಳಲ್ಲೇ ಅತ್ಯಂತ ಸುಂದರವಾದ ಒಂದು ಕೀಟವಾಗಿ ಅವು ವರ್ಣಿಸಲ್ಪಟ್ಟಿವೆ.
ನಿಸ್ಸಂದೇಹವಾಗಿ, ನೀವು ಈ ಮನೋಹರವು ಆಕರ್ಷಕವೂ ಆದ ಜೀವಿ—ಚಿಟ್ಟೆ—ಯೊಂದಿಗೆ ಚಿರಪರಿಚಿತರಾಗಿದ್ದೀರಿ. ಹಾಗಿದ್ದರೂ, ಒಂದು ಬಗೆಯ ಚಿಟ್ಟೆಯು, ಅದರ ವಿಸ್ಮಯಕರ ಪ್ರವಾಸದ ಸಾಹಸಕಾರ್ಯಗಳಿಗಾಗಿ ಜಗದ್ವ್ಯಾಪಕ ಕೀರ್ತಿಯನ್ನು ಪಡೆದಿದೆ. ಈ ನಾಜೂಕಾದರೂ ದಿಟ್ಟವಾದ ಪ್ರವಾಸಿಯು ಮಾನರ್ಕ್ ಚಿಟ್ಟೆಯಾಗಿದೆ. ಸೃಷ್ಟಿಯ ಈ ರತ್ನ ಮತ್ತು ಅದರ ನಂಬಲಸಾಧ್ಯವಾದ ವಲಸೆ ಹೋಗುವಿಕೆಗಳ ಕಡೆಗೆ ನಾವೊಂದು ಹತ್ತಿರದ ನೋಟವನ್ನು ಹರಿಸೋಣ.
ಸೃಷ್ಟಿಯ ಸೂಕ್ಷ್ಮವಾದ ರತ್ನ
ಒಂದು ಬೆಚ್ಚನೆಯ, ಪ್ರಕಾಶಮಾನ ದಿನದಂದು, ನಿಮ್ಮನ್ನು ಒಂದು ಹುಲ್ಲುಗಾವಲಿನಲ್ಲಿ ಚಿತ್ರಿಸಿಕೊಳ್ಳಿರಿ. ಆಹಾರ ಮತ್ತು ಪಾನೀಯಕ್ಕಾಗಿರುವ ತಮ್ಮ ಅಂತ್ಯರಹಿತ ಅನ್ವೇಷಣೆಯಲ್ಲಿ, ಕಾಡುಪುಷ್ಪಗಳ ಮಧ್ಯೆ ಅಲ್ಲಿಲ್ಲಿ ಚಲಿಸುತ್ತಿರುವ ಆ ವಿಸ್ಮಯಕರವಾದ ಚಿಟ್ಟೆಗಳ ಮೇಲೆ ನಿಮ್ಮ ಕಣ್ಣುಗಳನ್ನು ಸ್ಥಿರಪಡಿಸಿರಿ. ಕದಲದೆ ನಿಂತು, ನಿಮ್ಮ ತೋಳನ್ನು ಹೊರಚಾಚಿರಿ. ಒಂದು, ಹತ್ತಿರಕ್ಕೆ ಬರುತ್ತಿದೆ. ಓಹ್, ಅದು ನಿಮ್ಮ ತೋಳಿನ ಮೇಲೆ ಇಳಿಯಲಿದೆ! ಅದು ಎಷ್ಟು ನಯವಾಗಿ ಬಂದಿಳಿಯುತ್ತದೆಂಬುದನ್ನು ಗಮನಿಸಿರಿ.
ಈಗ ಒಂದು ಹತ್ತಿರದ ನೋಟವನ್ನು ಬೀರಿರಿ. ಅದರ ಜಟಿಲವಾಗಿ ವಿನ್ಯಾಸಿಸಲ್ಪಟ್ಟ ಅಂಚುಗಳೊಂದಿಗೆ, ಕಪ್ಪು ಬಣ್ಣದಲ್ಲಿ ಕೆತ್ತಲ್ಪಟ್ಟ, ಪುಡಿಯಂತಹ ಸೂಕ್ಷ್ಮವಾದ ಕಿತ್ತಿಳೆ ಬಣ್ಣದ ರೆಕ್ಕೆಗಳ ಎರಡು ಜೊತೆಗಳನ್ನು ಗಮನಿಸಿರಿ. ಮಾನರ್ಕ್ ಚಿಟ್ಟೆಯು, ಯಾರು ಅದನ್ನು ತಮ್ಮ ರಾಜನಾದ ವಿಲಿಯಮ್ ಆಫ್ ಆರೆಂಜ್‌ನೊಂದಿಗೆ ಸಂಬಂಧಿಸಿದರೊ, ಆ ಅಮೆರಿಕದಲ್ಲಿನ ಇಂಗ್ಲಿಷ್ ನೆಲಸಿಗರಿಂದ ಹೆಸರಿಸಲ್ಪಟ್ಟಿತೆಂದು ಹೇಳಲಾಗಿದೆ. ನಿಶ್ಚಯವಾಗಿಯೂ ಈ ಚಿಟ್ಟೆಯು “ಅಧೀಶ್ವರ”ವಾಗಿದೆ. ಆದರೆ, ಕೇವಲ ಅರ್ಧ ಗ್ರಾಮಿನಷ್ಟು ತೂಕವುಳ್ಳ ಮತ್ತು ಎಂಟರಿಂದ ಹತ್ತು ಸೆಂಟಿಮೀಟರುಗಳಷ್ಟು ಪಕ್ಷವಿಸ್ತಾರವಿರುವ ಈ ನಾಜೂಕಾದ ಚೆಲುವು, ದೀರ್ಘವಾದ, ಪ್ರಯಾಸಕರ ಪ್ರಯಾಣಗಳನ್ನು ಮಾಡುವ ಸಾಮರ್ಥ್ಯವನ್ನು ಪಡೆದಿದೆ.
ಭಾವೋತ್ಪಾದಕ ಹಾರಾಟಗಳು
ಕೆಲವು ಚಿಟ್ಟೆಗಳು ಚಳಿಗಾಲದ ಆರಂಭದೊಂದಿಗೆ ಹೆಚ್ಚು ದೀರ್ಘವಾದ ಅಂತರಗಳ ವರೆಗೆ ವಲಸೆಹೋಗುತ್ತವೆಂದು ಹೇಳಲಾಗುತ್ತದಾದರೂ, ಮಾನರ್ಕ್ ಚಿಟ್ಟೆಯು ಮಾತ್ರ ಇಂತಹ ದೀರ್ಘವಾದ ಪ್ರಯಾಣಗಳನ್ನು ನಿಖರವಾದ ಗಮ್ಯಸ್ಥಾನಗಳೊಂದಿಗೆ ಮತ್ತು ಬಹು ದೊಡ್ಡ ಸಂಖ್ಯೆಗಳಲ್ಲಿ ಮಾಡುತ್ತದೆ. ಮಾನರ್ಕ್ ಚಿಟ್ಟೆಯ ವಲಸೆ ಹೋಗುವಿಕೆಯು, ನಿಜವಾಗಿಯೂ ಒಂದು ಚಿಟ್ಟೆ ಚಮತ್ಕಾರವೇ ಸರಿ. ಈ ದಿಟ್ಟವಾದ ಪ್ರವಾಸಿಗರ ಕೆಲವು ಭಾವೋತ್ಪಾದಕ ಸಾಹಸಕಾರ್ಯಗಳನ್ನು ಪರಿಗಣಿಸಿರಿ.
ಕ್ಯಾಲಿಫೋರ್ನಿಯ ಅಥವಾ ಮೆಕ್ಸಿಕೊದಲ್ಲಿನ ತಮ್ಮ ಚಳಿಗಾಲದ ಪ್ರದೇಶಗಳಿಗೆ, ಕೆನಡವನ್ನು ಮಾಗಿ ಕಾಲದಲ್ಲಿ ಬಿಡುವ ಅವುಗಳ ಹಾರಾಟಗಳು 3,200 ಕಿಲೊಮೀಟರುಗಳಿಗಿಂತಲೂ ಹೆಚ್ಚಾಗಿರುತ್ತದೆ. ಅವು ದೊಡ್ಡ ಸರೋವರಗಳನ್ನು, ನದಿಗಳನ್ನು, ಬಯಲು ಸೀಮೆಗಳನ್ನು, ಮತ್ತು ಪರ್ವತಗಳನ್ನು ದಾಟುತ್ತವೆ. ಅವುಗಳಲ್ಲಿ ಲಕ್ಷಾಂತರ ಚಿಟ್ಟೆಗಳು, ಮಧ್ಯ ಮೆಕ್ಸಿಕೊದ ಸಿಯೆರಾ ಮಾಡ್ರೇ ಪರ್ವತಗಳಲ್ಲಿನ ಒಂದು ಉನ್ನತ ಗಮ್ಯಸ್ಥಾನಕ್ಕೆ ವಲಸೆ ಹೋಗುವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತವೆ.
ಈ ಎಳೆಯ ಚಿಟ್ಟೆಗಳು ಈ ಹಾರಾಟವನ್ನು ಹಿಂದೆಂದೂ ಮಾಡಿರುವುದಿಲ್ಲ ಅಥವಾ ಅವು ನಿಶ್ಚೇಷ್ಟ ಸ್ಥಿತಿಯ ನಿವೇಶನಗಳನ್ನು ನೋಡಿರುವುದಿಲ್ಲ ಎಂಬುದನ್ನು ನೀವು ಪರಿಗಣಿಸುವಾಗ, ಇಂತಹ ಹಾರಾಟಗಳು ಹೆಚ್ಚು ಆಶ್ಚರ್ಯಕರವಾಗಿವೆ. ಆದರೆ ಗುರಿತಪ್ಪದೆ ಅವು ಹಾರಾಟದ ದಿಕ್ಕನ್ನು ಗ್ರಹಿಸುತ್ತವೆ ಮತ್ತು ತಮ್ಮ ಚಳಿಗಾಲದ ಇರುನೆಲೆಗಳಿಗೆ ಅವು ಆಗಮಿಸಿರುವಾಗ ಅದು ಅವುಗಳಿಗೆ ಗೊತ್ತಾಗುತ್ತದೆ. ಅವು ಅದನ್ನು ಹೇಗೆ ಮಾಡುತ್ತವೆ?
ಕೆನೆಡಿಯನ್ ಜಿಯೋಗ್ರಾಫಿಕ್ ಹೇಳುವುದು: “ಅವುಗಳ ಮಿತವಾದ ಚಿಕ್ಕ ಮಿದುಳುಗಳಲ್ಲಿ ಸಂಕೀರ್ಣವಾದ ಯಾವುದೋ ಆನುವಂಶೀಯ ಕಾರ್ಯಯೋಜನೆಯಿದೆ, ಜೇನುನೊಣಗಳು ಮಾಡುವಂತೆ, ಪ್ರಾಯಶಃ ಸೂರ್ಯಕಿರಣಗಳ ಕೋನವನ್ನು ಅಥವಾ ಪಕ್ಷಿಗಳನ್ನು ಮಾರ್ಗದರ್ಶಿಸುತ್ತದೆಂದು ತೋರಿಬರುವ ಭೂಮಿಯ ಅಯಸ್ಕಾಂತತೆಯ ಕ್ಷೇತ್ರವನ್ನು ಅವಲೋಕಿಸಿ ಪ್ರತಿಕ್ರಿಯಿಸುವ ಯಾವುದೋ ಮಾಧ್ಯಮವಿದೆಯೆಂಬುದು ಸ್ಪಷ್ಟ. ನಿರ್ದಿಷ್ಟವಾದ ತಾಪಮಾನ ಹಾಗೂ ತೇವಾಂಶದ ಪರಿಸ್ಥಿತಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯವು ಅವುಗಳ ಪ್ರಯಾಣದ ಕೊನೆಯಲ್ಲಿ ಸಹಾಯಮಾಡಬಹುದು. ಆದರೆ ಇಷ್ಟರ ವರೆಗೆ ಉತ್ತರಗಳು ವಿಜ್ಞಾನವನ್ನು ಮೀರಿವೆ.” ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯಲ್ಲಿ ಉಲ್ಲೇಖಿಸಲ್ಪಟ್ಟ ಜೀವಿಗಳಂತೆ, “ಅವು ಸಹಜಪ್ರವೃತ್ತಿಯಿಂದಾಗಿ ವಿವೇಕವುಳ್ಳವುಗಳಾಗಿವೆ.”—ಜ್ಞಾನೋಕ್ತಿ 30:24, NW.
ಮಾನರ್ಕ್ ಚಿಟ್ಟೆಗಳು ಕುಶಲ ಹಾರಾಟಗಾರರೂ ಹೌದು. ಅವು ಪ್ರತಿ ಗಂಟೆಗೆ ಸುಮಾರು 12 ಕಿಲೊಮೀಟರುಗಳಷ್ಟು ತೇಲುತ್ತವೆ, ಪ್ರತಿ ಗಂಟೆಗೆ ಸುಮಾರು 18 ಕಿಲೊಮೀಟರುಗಳಷ್ಟು ಎತ್ತರವಾಗಿ ಹಾರುತ್ತವೆ, ಮತ್ತು—ಚಿಟ್ಟೆಯೊಂದನ್ನು ಹಿಡಿಯಲು ಪ್ರಯತ್ನಿಸಿರುವ ಯಾರಾದರೊಬ್ಬರಿಗೆ ತಿಳಿದಿರುವಂತೆ—ಅವು ಇನ್ನೂ ವೇಗವಾಗಿ, ಪ್ರತಿ ಗಂಟೆಗೆ ಸುಮಾರು 35 ಕಿಲೊಮೀಟರುಗಳಷ್ಟು ವೇಗದಲ್ಲಿ ಚಲಿಸುತ್ತವೆ. ತಮ್ಮ ಗಮ್ಯಸ್ಥಾನದ ಕಡೆಗೆ ನೈರುತ್ಯಕ್ಕೆ ಸ್ಥಳಾಂತರಿಸಲು, ಪೂರ್ವದ ಕಡೆಗೆ ಬೀಸುತ್ತಿರುವ ಒಂದು ಗಾಳಿಯ ವಿರುದ್ಧ ತಮ್ಮನ್ನು ಓರೆಯಾಗಿಸಿಕೊಳ್ಳುತ್ತಲೂ, ಅವು ಗಾಳಿಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ಬಹಳ ನಿಪುಣವಾಗಿವೆ. ಜಟಿಲವಾದ ಹಾರಾಟದ ತಂತ್ರಗಳನ್ನು ಉಪಯೋಗಿಸುತ್ತಾ, ಅವು ಗಾಳಿಯ ವೇಗ ಮತ್ತು ದಿಕ್ಕಿನ ಭಿನ್ನತೆಗಳೊಂದಿಗೆ ವ್ಯವಹರಿಸುತ್ತವೆ. ಫಲಕ ವಿಮಾನಚಾಲಕರು ಮತ್ತು ಗಿಡುಗ ಪಕ್ಷಿಗಳಂತೆ, ಅವು ಏರುತ್ತಿರುವ ಗಾಳಿಯ ಸೆಳೆತ (ಬೆಚ್ಚನೆಯ ಗಾಳಿಯ ಮೇಲುಗಡೆಯ ಚಲನೆ)ವನ್ನುಪಯೋಗಿಸಿ ಹಾರುತ್ತವೆ. ಒಂದು ಮೂಲಕ್ಕನುಸಾರ, ಮಾನರ್ಕ್ ಚಿಟ್ಟೆಗಳು ಸಾಮಾನ್ಯವಾಗಿ ಒಂದು ದಿನಕ್ಕೆ 200 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸುತ್ತವೆ. ಅವು ಹಗಲ ಬೆಳಕಿನಲ್ಲಿ ಮಾತ್ರ ಹಾರುತ್ತವೆ. ರಾತ್ರಿಯಲ್ಲಿ ಅವು ವಿಶ್ರಮಿಸುತ್ತವೆ, ಅನೇಕ ವೇಳೆ ಪ್ರತಿ ವರ್ಷ ಅದೇ ಸ್ಥಳದಲ್ಲೇ.
ಮಾನರ್ಕ್ ಚಿಟ್ಟೆಯು ಆಗಾಗ ಮಾತ್ರ ಗಗನಕ್ಕೇರುವ ಅಥವಾ ತೇಲುವ ಚಿಟ್ಟೆಗಿಂತ ಹೆಚ್ಚಿನದ್ದಾಗಿದೆ ಎಂದು ಟೊರಾಂಟೊ ವಿಶ್ವವಿದ್ಯಾನಿಲಯದ ವಿಜ್ಞಾನಿ, ಡೇವಿಡ್ ಗಿಬೊ ಕಲಿತಿದ್ದಾರೆ. ಅವರು ವರದಿಸುವುದು: “ವಲಸೆಹೋಗುತ್ತಿರುವ ಹೆಬ್ಬಾತುಗಳು ಮಾಡುವುದಕ್ಕಿಂತಲೂ ಅತ್ಯಧಿಕ ಚುರುಕಾದ ವಿಧಗಳಲ್ಲಿ ಚಿಟ್ಟೆಗಳು ಗಾಳಿಯನ್ನು ಉಪಯೋಗಿಸಿಕೊಳ್ಳಬೇಕೆಂದು ನಾನು ನೆನಸುತ್ತೇನೆ.” ನಿಯತಕ್ರಮದ ರೆಕ್ಕೆ ಬಡಿಯುವಿಕೆ, ಏರುವಿಕೆ, ಮತ್ತು ಉಣ್ಣುವಿಕೆಯು, ಚಳಿಗಾಲದ ವರೆಗೆ ಉಳಿಯುವಷ್ಟು ಕೊಬ್ಬಿನೊಂದಿಗೆ ಮೆಕ್ಸಿಕೊವನ್ನು ತಲಪಲು ಮತ್ತು ವಸಂತಕಾಲದಲ್ಲಿ ಪುನಃ ಉತ್ತರಕ್ಕೆ ತಮ್ಮ ಹಾರಾಟವನ್ನು ಆರಂಭಿಸಲು ಮಾನರ್ಕ್ ಚಿಟ್ಟೆಗಳನ್ನು ಅನುಮತಿಸುತ್ತದೆ. ಪ್ರೊಫೆಸರ್ ಗಿಬೊ ಇದನ್ನೂ ಹೇಳುತ್ತಾರೆ: “ಅವು ದೀರ್ಘವಾದ ಸಂಚಾರವನ್ನು ಮಾಡಿ, ಬಲವಾಗಿಯೂ ಆರೋಗ್ಯವಾಗಿಯೂ ಇರುವುದು ತೇಲುವ ಮೂಲಕವೇ.”
ಸಮೂಹ ವಲಸೆ ಹೋಗುವಿಕೆಗಳು
ರಾಕಿ ಪರ್ವತಗಳ ಪಶ್ಚಿಮಕ್ಕಿರುವ ಮಾನರ್ಕ್ ಚಿಟ್ಟೆಗಳು ದಕ್ಷಿಣಕ್ಕೆ ವಲಸೆಹೋಗುತ್ತವೆ ಮತ್ತು ಚಳಿಗಾಲವನ್ನು ಕ್ಯಾಲಿಫೋರ್ನಿಯದಲ್ಲಿ ಕಳೆಯುತ್ತವೆ ಎಂಬುದು ದೀರ್ಘ ಸಮಯದಿಂದ ಗೊತ್ತಿರುವ ವಿಷಯವಾಗಿದೆ. ಅವು ಕ್ಯಾಲಿಫೋರ್ನಿಯದ ದಕ್ಷಿಣ ತೀರದ ಉದ್ದಕ್ಕೂ ಇರುವ ಸ್ಥಳಗಳಲ್ಲಿನ ಪೈನ್ ಮತ್ತು ಯೂಕಲಿಪ್ಟಸ್ ಮರಗಳಲ್ಲಿ ಗುಂಪಾಗಿ ತೂಗುತ್ತಿರುವುದನ್ನು ನೋಡಸಾಧ್ಯವಿದೆ. ಆದರೆ ಪೂರ್ವ ಕೆನಡದಲ್ಲಿನ ಮಾನರ್ಕ್ ಚಿಟ್ಟೆಗಳ ದೊಡ್ಡ ಸಂಖ್ಯೆಗಳ ವಲಸೆ ಹೋಗುವಿಕೆಯ ಗಮ್ಯಸ್ಥಾನವು ಸ್ವಲ್ಪಸಮಯಕ್ಕಾಗಿ ರಹಸ್ಯವಾಗಿ ಉಳಿಯಿತು.
1976ರಲ್ಲಿ ಈ ರಹಸ್ಯವು ಅನಾವರಣಗೊಂಡಿತು. ಅವುಗಳ ಚಳಿಗಾಲದ ಪ್ರದೇಶಗಳು ಅಂತಿಮವಾಗಿ ಕಂಡುಹಿಡಿಯಲ್ಪಟ್ಟವು—ಮೆಕ್ಸಿಕೊದ ಸಿಯೆರಾ ಮಾಡ್ರೇ ಪರ್ವತಗಳಲ್ಲಿನ, ಕಾಡುತುಂಬಿದ ಒಂದು ಶಿಖರ. ಕೋಟಿಗಟ್ಟಲೆ ಚಿಟ್ಟೆಗಳು, ಎತ್ತರವಾದ, ಬೂದು ಹಸಿರು ಬಣ್ಣದ ಫರ್ ಮರಗಳ ಕೊಂಬೆಗಳು ಮತ್ತು ಕಾಂಡಗಳ ಮೇಲೆ ಸಾಂದ್ರವಾಗಿ ತುಂಬಿರುವುದು ಕಂಡುಬಂದಿತು. ಈ ಭಾವೋತ್ಪಾದಕ ದೃಶ್ಯವು ಸಂದರ್ಶಕರಿಗೆ ಒಂದು ಮೋಹಗೊಳಿಸುವ ಆಕರ್ಷಣೆಯಾಗಿರಲು ಮುಂದುವರಿದಿದೆ.
ಕೆನಡದಲ್ಲಿ ಮಾನರ್ಕ್ ಚಿಟ್ಟೆಗಳನ್ನು ಒಟ್ಟಾಗಿ ನೋಡಬಹುದಾದ ಅತ್ಯುತ್ತಮ ಸ್ಥಳಗಳಲ್ಲೊಂದು, ಪಾಯಿಂಟ್ ಪಿಲೀ ನ್ಯಾಷನೆಲ್ ಪಾರ್ಕ್, ಒಂಟೇರಿಯೊ ಆಗಿದೆ; ಅಲ್ಲಿ ಅವು ದಕ್ಷಿಣದ ಕಡೆಗಿನ ತಮ್ಮ ವಲಸೆ ಹೋಗುವಿಕೆಗಾಗಿ ತಯಾರಿಸಲು ಗುಂಪುಗೂಡುತ್ತವೆ. ಬೇಸಗೆಯ ಅಂತಿಮ ಭಾಗದಲ್ಲಿ ಅವು ಕೆನಡದಲ್ಲಿನ ಈ ತೆಂಕಣ ಬಿಂದುವಿನಲ್ಲಿ ಒಟ್ಟುಗೂಡಿ, ಮೆಕ್ಸಿಕೊದಲ್ಲಿನ ತಮ್ಮ ಚಳಿಗಾಲದ ನಿವೇಶನಗಳಿಗೆ ತಮ್ಮ ದಕ್ಷಿಣದ ಪ್ರಯಾಣವನ್ನು ಆರಂಭಿಸುವ ಮೊದಲು ಗಾಳಿಗಳು ಮತ್ತು ತಾಪಮಾನವು ಅನುಕೂಲಕರವಾಗುವ ತನಕ ಐರಿ ಸರೋವರದ ಉತ್ತರ ತೀರದಲ್ಲಿ ಕಾಯುತ್ತಿರುತ್ತವೆ.
ಗಮ್ಯಸ್ಥಾನಗಳು
ಪಾಯಿಂಟ್ ಪಿಲೀಯಲ್ಲಿ ಆರಂಭಿಸುತ್ತಾ, ಅವು ಅಮೆರಿಕ ಭೂಖಂಡದ ಉದ್ದಕ್ಕೂ ದೀರ್ಘವಾದ ಪ್ರಯಾಣವನ್ನು ತೊಡಗಲು ಐರಿ ಸರೋವರದ ಆಚೆ, ದ್ವೀಪದಿಂದ ದ್ವೀಪಕ್ಕೆ ಪ್ರಯಾಣಿಸುತ್ತವೆ. ಮಾರ್ಗದಲ್ಲಿ ಮಾನರ್ಕ್ ಚಿಟ್ಟೆಗಳ ಇತರ ಗುಂಪುಗಳು ವಲಸೆ ಹೋಗುವಿಕೆಯಲ್ಲಿ ಅವುಗಳನ್ನು ಸೇರುತ್ತವೆ. ಮೆಕ್ಸಿಕೊ ನಗರದ ವಾಯವ್ಯ ದಿಕ್ಕಿನಲ್ಲಿರುವ ಪರ್ವತಗಳ ಉನ್ನತ ಸ್ಥಳಗಳಲ್ಲಿ, ಚಳಿಗಾಲವನ್ನು ಕಳೆಯಲು ಸರಿಸುಮಾರು ಹತ್ತು ಕೋಟಿ ಚಿಟ್ಟೆಗಳು ಒಟ್ಟುಗೂಡುತ್ತವೆ.
ಇತರ ವಲಸೆ ಹೋಗುವಿಕೆಗಳು ಫ್ಲೋರಿಡಾದ ಆಚೆ ಮತ್ತು ಕ್ಯಾರಿಬಿಯನ್‌ನ ಉದ್ದಕ್ಕೂ ಸಂಭವಿಸುತ್ತವೆ, ಮತ್ತು ಇವು ಯುಕಾಟನ್ ದ್ವೀಪಕಲ್ಪ ಅಥವಾ ಗೌಟೆಮಾಲದಲ್ಲಿನ ಇನ್ನೂ ಕಂಡುಹಿಡಿಯಲಿಕ್ಕಿರುವ ಗಮ್ಯಸ್ಥಾನಗಳಲ್ಲಿ ಕೊನೆಗೊಳ್ಳಬಹುದು. ಮೆಕ್ಸಿಕೊದಲ್ಲಾಗಲಿ ಅಥವಾ ತಮ್ಮ ಇತರ ಚಳಿಗಾಲದ ಆಶ್ರಯ ಸ್ಥಾನಗಳಲ್ಲಾಗಲಿ, ಮಾನರ್ಕ್ ಚಿಟ್ಟೆಗಳು ಪರ್ವತ ಕಾಡಿನ ಸಂಬಂಧಸೂಚಕವಾಗಿ ಸಣ್ಣ ತುಂಡು ನೆಲಗಳಲ್ಲಿ ಒಟ್ಟಿಗೆ ಗುಂಪುಗೂಡುತ್ತವೆ.
ತಮ್ಮ ಚಳಿಗಾಲದ ಮನೆಗೆ ಅವುಗಳ ದೀರ್ಘವಾದ ಹಾರಾಟವು, ಅವುಗಳನ್ನು ಬೆಚ್ಚನೆಯ, ಪ್ರಕಾಶಮಾನ ಹುಲ್ಲುಗಾವಲುಗಳ ದೇಶದ ವಿರಾಮಕಾಲಕ್ಕೆ ಕೊಂಡೊಯ್ಯುವುದೆಂದು ಒಬ್ಬನು ನೆನಸಬಹುದು. ಆದರೆ ವಿಷಯವು ಹಾಗಿರುವುದಿಲ್ಲ. ಅವು ಹೋಗುವ ಮೆಕ್ಸಿಕೊದ ಜ್ವಾಲಾಮುಖಿಯ ಪರ್ವತಸಾಲಿನ ಆಚೆ ಪಕ್ಕವು ತಣ್ಣಗಿರುತ್ತದೆ. ಆದರೆ, ಪರ್ವತದ ಶಿಖರಗಳಿಂದ ಒದಗಿಸಲ್ಪಡುವ ಹವಾಮಾನವು ಅವುಗಳಿಗೆ ಚಳಿಗಾಲವನ್ನು ಕಳೆಯಲಿಕ್ಕಾಗಿ ಯೋಗ್ಯವಾಗಿದೆ. ಅದು, ಬಹುಮಟ್ಟಿಗೆ ಸಂಪೂರ್ಣ ನಿಷ್ಕ್ರಿಯ ಸ್ಥಿತಿಯಲ್ಲಿ ತಮ್ಮ ಸಮಯವನ್ನು ಅವುಗಳು ಕಳೆಯುವಂತೆ ಮಾಡುವಷ್ಟು ಚಳಿಯಾಗಿದೆ—ಹೀಗೆ ಅವುಗಳ ಜೀವನಾವಧಿಯನ್ನು ಎಂಟರಿಂದ ಹತ್ತು ತಿಂಗಳುಗಳಿಗೆ ವಿಸ್ತರಿಸುತ್ತದೆ. ಇದು ಮೆಕ್ಸಿಕೊಗೆ ಹೋಗಿ, ಚಳಿಗಾಲವನ್ನು ಅಲ್ಲಿ ಕಳೆದು ಪುನಃ ಹಿಂದಿರುಗಿ ಬರುವುದನ್ನು ಅನುಮತಿಸುತ್ತದೆ. ಇದನ್ನು ಒಂದು ಬಗೆಯ ವಿರಾಮಕಾಲವೆಂದು ನೀವು ಹೇಳಸಾಧ್ಯವಿದೆ.
ವಸಂತಕಾಲವು ಆಗಮಿಸುತ್ತದೆ ಮತ್ತು ಮಾನರ್ಕ್ ಚಿಟ್ಟೆಗಳು ಪುನಃ ಸಕ್ರಿಯಗೊಳ್ಳುತ್ತವೆ. ದಿನಗಳು ದೀರ್ಘವಾದಂತೆ, ಸೂರ್ಯನ ಬೆಳಕಿನಲ್ಲಿ ಚಿಟ್ಟೆಗಳು ರೆಕ್ಕೆಬಡಿಯುತ್ತವೆ, ಕೂಡಲು ಆರಂಭಿಸುತ್ತವೆ, ಮತ್ತು ಪುನಃ ಉತ್ತರಕ್ಕೆ ತಮ್ಮ ಹಾರಾಟವನ್ನು ಆರಂಭಿಸುತ್ತವೆ. ಕೆಲವು ಹಿಮ್ಮರಳಿ ಸಂಪೂರ್ಣ ಪ್ರಯಾಣವನ್ನು ಮಾಡಬಹುದೆಂದು ನಂಬಲಾಗಿದೆ, ಆದರೆ ಸಾಮಾನ್ಯವಾಗಿ ಸಂತಾನವು ಮಾತ್ರವೇ ಕೆನಡದಲ್ಲಿನ ಬೇಸಗೆಯ ಪರ್ವತಸಾಲುಗಳಿಗೆ ಮತ್ತು ಉತ್ತರ ಅಮೆರಿಕಕ್ಕೆ ಬಂದು ತಲಪುತ್ತವೆ. ಮೊಟ್ಟೆಗಳು, ಕೋರಿಹುಳಗಳು, ಪೊರೆಹುಳಗಳು, ಮತ್ತು ಚಿಟ್ಟೆಗಳ ಹಂತಗಳನ್ನು ದಾಟುವ ಚಿಟ್ಟೆಗಳು ಕ್ರಮೇಣವಾಗಿ ಭೂಖಂಡಕ್ಕೆ ಚಲಿಸುತ್ತವೆ. ಹೆಣ್ಣು ಚಿಟ್ಟೆಯು—ಫಲವತ್ತಾಗಿ ಮಾಡಲ್ಪಟ್ಟ ನೂರು ಅಥವಾ ಹೆಚ್ಚು ಮೊಟ್ಟೆಗಳನ್ನು ಹೊತ್ತಿದ್ದು—ಕಾಡುಪುಷ್ಪಗಳ ತುಂಡುನೆಲಗಳ ಉದ್ದಕ್ಕೂ ಸುಳಿದಾಡುತ್ತ, ಎಳೆಯ, ಕೋಮಲವಾದ ಕಾಡುಗಿಡದ ಎಲೆಗಳ ಕೆಳಭಾಗದ ಪಕ್ಕಗಳಲ್ಲಿ ಒಂದೊಂದಾಗಿ ಮೊಟ್ಟೆಗಳನ್ನು ಇಡುತ್ತದೆ. ಮತ್ತು ಹೀಗೆ ಚಕ್ರವು ಮುಂದುವರಿಯುತ್ತದೆ, ಮತ್ತು ಮಾನರ್ಕ್ ಚಿಟ್ಟೆಯ ಬೇಸಗೆಯ ಮನೆಯ ಕಡೆಗಿನ ಪ್ರಯಾಣವು ಮುಂದೆ ಸಾಗುತ್ತದೆ.
ನಿಜವಾಗಿಯೂ, ಮಾನರ್ಕ್ ಚಿಟ್ಟೆಯು ಒಂದು ಮನೋಹರವಾದ ಜೀವಿಯಾಗಿದೆ. ಅದನ್ನು ಗಮನಿಸುವ ಮತ್ತು ಅದರ ಚಟುವಟಿಕೆಗಳನ್ನು ಅಧ್ಯಯನಿಸುವ ಎಂತಹ ಒಂದು ಸುಯೋಗ ಮಾನವರಿಗಿದೆ. ಆದರೆ, ಮಾನರ್ಕ್ ಚಿಟ್ಟೆಯ, ದೀರ್ಘ ಸಮಯದ ವರೆಗೆ ರಹಸ್ಯವಾಗಿ ಉಳಿದ ಮೆಕ್ಸಿಕೊದಲ್ಲಿನ ಚಳಿಗಾಲದ ಪ್ರದೇಶಗಳು, ಅಷ್ಟೇ ಅಲ್ಲದೆ ಕ್ಯಾಲಿಫೋರ್ನಿಯದಲ್ಲಿನ ಗಮ್ಯಸ್ಥಾನಗಳು ಮಾನವ ಸಾಹಸಗಳಿಂದ ಬೆದರಿಸಲ್ಪಡುತ್ತಿವೆ ಎಂಬುದು ಆಶ್ಚರ್ಯಕರವೇನೂ ಅಲ್ಲ. ಸೃಷ್ಟಿಯ ಈ ಸೂಕ್ಷ್ಮ ಚೆಲುವುಗಳಿಗೆ ಹೋಗಲು ಬೇರೆ ಎಲ್ಲೋ ಸ್ಥಳವಿದೆಯೆಂದು ಊಹಿಸುವುದು ಅವುಗಳ ಅಳಿವಿನಲ್ಲಿ ಫಲಿಸಸಾಧ್ಯವಿದೆ. ಪ್ರಶಂಸನೀಯವಾಗಿ, ಇಂತಹ ಒಂದು ಸಂಭವನೀಯತೆಯಿಂದ ಅವುಗಳನ್ನು ರಕ್ಷಿಸಲು ಪ್ರಯತ್ನಗಳು ಮಾಡಲ್ಪಡುತ್ತಿವೆ. ಹತ್ತಿರದಲ್ಲಿರುವ ಸೃಷ್ಟಿಕರ್ತನ ವಾಗ್ದತ್ತ ಪ್ರಮೋದವನ ಭೂಮಿಯಲ್ಲಿ, ಈ ನಾಜೂಕಾದರೂ ದಿಟ್ಟವಾದ ಪ್ರವಾಸಿಗರಿಗೆ ಸುರಕ್ಷಿತವಾದ ಆಶ್ರಯಸ್ಥಾನವು ಖಚಿತಗೊಳಿಸಲ್ಪಡುವಾಗ ಅದೆಷ್ಟು ಮಹೋನ್ನತವಾಗಿರುವುದು!
[ಪುಟ 26 ರಲ್ಲಿರುವ ಚಿತ್ರ ಕೃಪೆ]
Butterfly: Parks Canada/J. N. Flynn
[Picture Credit Lines on page 17]
Page 16 top and bottom: Parks Canada/J. N. Flynn; middle: Parks Canada/D. A. Wilkes; page 17 top: Parks Canada/J. N. Flynn; middle and bottom: Parks Canada/J. R. Graham