ಮಾನರ್ಕ್ ಪತಂಗಗಳಿಗೆ ಪ್ರಕೃತಿ ಮೀಸಲು ಪ್ರದೇಶಗಳು ಕೊಲ್ಲುಕಳಗಳಾಗಿವೆ
ಬೆರಗುಗೊಳಿಸುವ ಒಂದು ವಲಸೆ ಹಾರಾಟದಲ್ಲಿ, ಕೆನಡ ಮತ್ತು ಅಮೆರಿಕದ ಉತ್ತರ ಭಾಗದಲ್ಲಿ ಬೇಸಗೆ ಕಳೆಯುವ ಮಾನರ್ಕ್ ಪತಂಗಗಳು, ತಮ್ಮ ಕಿತ್ತಿಳೆ ಮತ್ತು ಕಪ್ಪು ಬಣ್ಣದ ರೆಕ್ಕೆಗಳನ್ನು ಹರಡಿ, ಕೆನಡದಿಂದ ತಮ್ಮನ್ನು ತೇಲಿಸಿಕೊಳ್ಳುತ್ತ, ಅಮೆರಿಕವನ್ನು ದಾಟಿ, ಮೆಕ್ಸಿಕೊ ಸಿಟಿಯ ಪಶ್ಚಿಮಕ್ಕಿರುವ ಒಂದು ಪ್ರದೇಶದಲ್ಲಿ ಒಟ್ಟುಗೂಡುತ್ತವೆ. ಅಲ್ಲಿ 1986ರಲ್ಲಿ, ಮೆಕ್ಸಿಕನ್ ಸರಕಾರವು 3,400 ಮೀರ್ಟಗಳಷ್ಟು ಎತ್ತರವುಳ್ಳ ಸೂಜಿಪರ್ಣ (ಫರ್) ವೃಕ್ಷಗಳಿಂದ ತುಂಬಿರುವ ಪರ್ವತಗಳಲ್ಲಿ, ಐದು ಪ್ರಕೃತಿ ಮೀಸಲು ಪ್ರದೇಶಗಳನ್ನು ನಿರ್ಮಿಸಿತು. 1994ರ ಒಂದು ಗಣತಿಯ ಮೇರೆಗೆ, ಕಡಮೆ ಪಕ್ಷ ಆರು ಕೋಟಿ ಮಾನರ್ಕ್ಗಳು ಆ ಮೀಸಲು ಪ್ರದೇಶಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ.
ಆ ಮಾನರ್ಕ್ಗಳು ಫರ್ ಮರಗಳನ್ನು ವಿಶೇಷವಾಗಿ ಇಷ್ಟಪಡುತ್ತವೆ. ಏಕೆಂದರೆ ಈ ಮರಗಳು ಈ ಪತಂಗಗಳನ್ನು ಶೀತಲ ಮಳೆ ಮತ್ತು ಹಿಮದಿಂದ ಕಾಪಾಡುವ ದಟ್ಟವಾದ ಮೇಲಾವರಣವನ್ನು ರಚಿಸುತ್ತವೆ. ಈ ಐದು ಮೀಸಲು ಪ್ರದೇಶಗಳಲ್ಲಿ ಮರ ಕಡಿತ ನಿಷೇಧಿಸಲ್ಪಟ್ಟಿದೆ, ಆದರೆ ಕಾನೂನು ವಿರುದ್ಧವಾದ ಮರ ಕಡಿತವನ್ನು ಅದು ನಿಲ್ಲಿಸುವುದಿಲ್ಲ. “ಸರಕಾರದ ನಿಷೇಧಗಳ ಹೊರತೂ ಮೆಕ್ಸಿಕನ್ ಮೀಸಲು ಪ್ರದೇಶಗಳಲ್ಲಿ ಫರ್ ಮರಗಳ ಕಡಿತವು, ಮಾನರ್ಕ್ಗಳನ್ನು ಕಠಿನ ಚಂಡಮಾರುತಗಳಿಗೆ ಮತ್ತು ಶೀತಕ್ಕೆ ಹೆಚ್ಚು ಸುಲಭಭೇದ್ಯವಾಗಿ ಮಾಡುತ್ತಿದೆ. . . . ಮರಗಳ ಮತ್ತು ಅವುಗಳ ಮೇಲಾವರಣಗಳ ನಷ್ಟವು, ಪತಂಗಗಳು ಮಳೆ ಮತ್ತು ಹಿಮಕ್ಕೆ ಒಡ್ಡಲ್ಪಡುವಂತೆ ಮಾಡುವುದು ಹೆಚ್ಚು ಸಂಭಾವ್ಯ,” ಎಂದು ಪತಂಗ ವಿಜ್ಞಾನಿಗಳು ಚಿಂತಿತರಾಗಿದ್ದಾರೆ. ಮರ ಕಡಿತವು ಆ ರಕ್ಷಕ ಮೇಲಾವರಣವನ್ನು ಒಡೆಯುತ್ತದೆ. ಗೇನ್ಸ್ವಿಲ್ನಲ್ಲಿರುವ ಫ್ಲಾರಿಡ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರಜ್ಞನಾದ ಲಿಂಕನ್ ಬ್ರಾವರ್, ಮಾನರ್ಕ್ಗಳ ರಕ್ಷಕ ಆವರಣದ ಕುರಿತು ಹೇಳಿದ್ದು: “ಈ ಕಾಡುಗಳು ಎಷ್ಟು ಶಿಥಿಲೀಕರಿಸಲ್ಪಡುತ್ತವೆಯೊ ಅಷ್ಟು ಹೆಚ್ಚು ತೂತುಗಳು ಅವುಗಳ ಕಂಬಳಿಯಲ್ಲಿರುತ್ತವೆ.”
“ಕೆಟ್ಟ ಹವಾಮಾನ ಮತ್ತು ಮರಗಳ ಕಡಿತವು ಪತಂಗಗಳಿಗೆ ಮಾರಕ,” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಹೇಳಿತು. ಬಳಿಕ ಮೀಸಲು ಪ್ರದೇಶಗಳಲ್ಲಿ, ಡಿಸೆಂಬರ್ 30, 1995ರ ರಾತ್ರಿಯಲ್ಲಿ ಬಿದ್ದ ಹಿಮದ ಕುರಿತು ಅದು ವರದಿಸಿದುದು: “ಮೀಸಲು ಪ್ರದೇಶಗಳ ಭಾಗಗಳಲ್ಲಿ ಪ್ರಯಾಣಿಸಿದ ಸರಕಾರದ ವನರಕ್ಷಕರು ಮತ್ತು ಜೀವಶಾಸ್ತ್ರಜ್ಞರು, ಘನೀಭವಿಸಿದ ಸಾವಿರ ಸಾವಿರಗಟ್ಟಲೆ ಪತಂಗಗಳು, ಹಿಮರಾಶಿಗಳ ಮೇಲೆ ದಟ್ಟವಾಗಿ ಬಿದ್ದಿದ್ದವು. ಹಾಗೂ ಅನೇಕ ಪತಂಗಗಳು ಹಿಮದ ಕೆಳಗಡೆ ಹೂಳಲ್ಪಟ್ಟಿದ್ದವು ಎಂದು ಹೇಳಿದರು.”
ಈ ಪುಟದ ಮೇಲ್ಭಾಗದಲ್ಲಿರುವ ಫೋಟೊ, ಈ ದುರಂತಮಯ ಕಥೆಯನ್ನು ದೃಢೀಕರಿಸುತ್ತದೆ.
[ಪುಟ 37 ರಲ್ಲಿರುವ ಚಿತ್ರ ಕೃಪೆ]
Jorge Nunez/Sipa Press