ಘಾನದಲ್ಲಿನ “ಸಾಂಪ್ರದಾಯಿಕ ವಿವಾಹ”
ಘಾನದ ಎಚ್ಚರ! ಸುದ್ದಿಗಾರರಿಂದ
ವಿವಾಹ—ಈ ಸಂಬಂಧವನ್ನು ಪ್ರತಿ ವರ್ಷವೂ ಲೋಕದಾದ್ಯಂತವಾಗಿ ಲಕ್ಷಾಂತರ ಮಂದಿ ಪ್ರಾರಂಭಿಸುತ್ತಾರೆ. ಅವರು ಸಾಮಾನ್ಯವಾಗಿ ತಾವು ಜೀವಿಸುವಲ್ಲಿ ಚಾಲ್ತಿಯಲ್ಲಿರುವ ವಿವಾಹ ಸಂಪ್ರದಾಯಕ್ಕನುಸಾರವಾಗಿ ಹಾಗೆ ಮಾಡುತ್ತಾರೆ.
ಘಾನದಲ್ಲಿನ ವಿವಾಹದ ಅತ್ಯಂತ ಸಾಮಾನ್ಯ ವಿಧವು, ಸಾಂಪ್ರದಾಯಿಕ ವಿವಾಹ ಎಂದು ಕರೆಯಲ್ಪಡುವ ವಿವಾಹವೇ ಆಗಿದೆ. ಇದು ವರನ ಕುಟುಂಬದಿಂದ ವಧುವಿನ ಕುಟುಂಬಕ್ಕೆ ಕೊಡಲ್ಪಡುವ ವಧುದಕ್ಷಿಣೆಯನ್ನು ಒಳಗೂಡುತ್ತದೆ. ಸಾಂಪ್ರದಾಯಿಕ ವಿವಾಹವು, ಆಫ್ರಿಕದ ಹೆಚ್ಚಿನ ಭಾಗಗಳಲ್ಲಿ ಮತ್ತು ಹಾಂಗ್ ಕಾಂಗ್, ಪಾಪೂವ ನ್ಯೂ ಗಿನೀ, ಮತ್ತು ಸಾಲೊಮನ್ ಐಲೆಂಡ್ಸ್ಗಳಂಥ ಸ್ಥಳಗಳಲ್ಲಿ, ಈಶಾನ್ಯ ಕೊಲಂಬಿಯ ಮತ್ತು ವಾಯವ್ಯ ವೆನೆಸ್ವೆಲದಲ್ಲಿರುವ ಗ್ವಾಕೇರೋ ಭಾರತೀಯರ ನಡುವೆಯೂ ಇರುವ ಜನರಿಂದ ಆಚರಿಸಲ್ಪಡುತ್ತದೆ. ಇವು ಕೇವಲ ಕೆಲವು ಸ್ಥಳಗಳು.
ವಧುದಕ್ಷಿಣೆಯನ್ನು ಕೊಡುವುದು ಬೈಬಲ್ ಸಮಯಗಳಲ್ಲಿ ಒಂದು ರೂಢಿಯಾಗಿತ್ತು. (ಆದಿಕಾಂಡ 34:11, 12; 1 ಸಮುವೇಲ 18:25) ಆಕೆಯ ಸೇವೆಗಳ ನಷ್ಟಕ್ಕಾಗಿ ಮತ್ತು ವಿವಾಹಕ್ಕೆ ಮೊದಲು ಆಕೆಯ ಶಿಕ್ಷಣ ಹಾಗೂ ಪಾಲನೆಗಾಗಿ ವ್ಯಯಿಸಿದ ಸಮಯ, ಶಕ್ತಿ, ಹಾಗೂ ಸಂಪನ್ಮೂಲಗಳಿಗಾಗಿ ಹೆಣ್ಣಿನ ಹೆತ್ತವರಿಗೆ ಪರಿಹಾರ ಧನವಾಗಿ ಕೊಡುವಂಥದ್ದು ವಧುದಕ್ಷಿಣೆಯಾಗಿದೆ ಎಂಬುದು ಪ್ರಾಚೀನ ಸಮಯಗಳಲ್ಲಿನ ಮತ್ತು ಇಂದಿನ ತಿಳಿವಳಿಕೆಯಾಗಿದೆ.
ಹೆತ್ತವರ ಜವಾಬ್ದಾರಿ
ಘಾನದ ಹಿಂದಿನ ದಿನಗಳಲ್ಲಿ, ಯುವ ಜನರ ಮಧ್ಯೆ ಡೇಟಿಂಗ್ ಮತ್ತು ಪ್ರೇಮಯಾಚನೆಯು ಅಸ್ತಿತ್ವದಲ್ಲಿರಲಿಲ್ಲ. ಹೆತ್ತವರು ಸಮುದಾಯದಲ್ಲಿನ ವಿವಾಹವಯಸ್ಕ ಯುವ ಪುರುಷರನ್ನೂ ಸ್ತೀಯರನ್ನೂ ಶ್ರಮವಹಿಸಿ ತಿಳಿದುಕೊಂಡ ಬಳಿಕ, ತಮ್ಮ ಬೆಳೆದ ಮಕ್ಕಳಿಗಾಗಿ ವಿವಾಹಗಳ ನಿಶ್ಚಿತಾರ್ಥವನ್ನು ಮಾಡುತ್ತಿದ್ದರು. ಘಾನದಲ್ಲಿನ ಕೆಲವು ಹೆತ್ತವರು ಇದನ್ನು ಇನ್ನೂ ಆಚರಿಸುತ್ತಾರೆ.
ಹುಡುಗನ ಹೆತ್ತವರು, ಹೆಣ್ಣಿನ ವ್ಯಕ್ತಿತ್ವ, ಆಕೆಯ ಮತ್ತು ಆಕೆಯ ಕುಟುಂಬದ ಸತ್ಕೀರ್ತಿ, ಕುಟುಂಬದಲ್ಲಿ ಆನುವಂಶಿಕವಾಗಿ ಮುಂದುವರಿಯಬಹುದಾದ ರೋಗ, ಮತ್ತು ಯೆಹೋವನ ಸಾಕ್ಷಿಗಳ ವಿದ್ಯಮಾನದಲ್ಲಿಯಾದರೋ, ಆಕೆಯ ಆತ್ಮಿಕತೆಯಂಥ ಅಂಶಗಳನ್ನು ಪರಿಗಣಿಸುತ್ತಾರೆ. ತೃಪ್ತರಾಗುವಲ್ಲಿ, ಹೆತ್ತವರು ಔಪಚಾರಿಕವಾಗಿ ಹೆಣ್ಣಿನ ಹೆತ್ತವರನ್ನು ಸಮೀಪಿಸಿ, ವಿವಾಹದ ಪ್ರಸ್ತಾಪವನ್ನು ಮಾಡುತ್ತಾರೆ.
ಈಗ ಹೆಣ್ಣಿನ ಹೆತ್ತವರು, ಹುಡುಗನ ಮತ್ತು ಅವನ ಕುಟುಂಬದ ಹಿನ್ನೆಲೆಯ ಕುರಿತು ವಿಚಾರಣೆ ಮಾಡುತ್ತಾರೆ. ಮೇಲೆ ತಿಳಿಸಿದಂಥ ಅಂಶಗಳಿಗೆ ಕೂಡಿಸಿ, ಪತ್ನಿಯೊಬ್ಬಳನ್ನು ಪೋಷಿಸಲಿಕ್ಕಿರುವ ಹುಡುಗನ ಸಾಮರ್ಥ್ಯವನ್ನು ಅವರು ಪರಿಗಣಿಸುತ್ತಾರೆ—ಅವನು ಕೆಲಸಮಾಡುತ್ತಿದ್ದಾನೋ ಇಲ್ಲವೇ ನಿರುದ್ಯೋಗಿಯೋ? ಹೆಣ್ಣಿನ ಹೆತ್ತವರು ತೃಪ್ತರಾಗುವಲ್ಲಿ, ಹುಡುಗನ ಹೆತ್ತವರಿಗೆ ವಿಷಯವನ್ನು ತಿಳಿಯಪಡಿಸುತ್ತಾರೆ ಮತ್ತು ಗಂಡೂ ಹೆಣ್ಣೂ ಇಬ್ಬರೂ ಅದಕ್ಕೆ ಒಪ್ಪಿದ ಬಳಿಕ, ವಿವಾಹದ ಕುರಿತಾದ ವಿವರಗಳನ್ನು ಹೆತ್ತವರು ಕೂಡಿ ಯೋಜಿಸುತ್ತಾರೆ.
ಕೆಲವು ಹೆತ್ತವರು ತಮ್ಮ ಬೆಳೆದ ಮಕ್ಕಳಿಗಾಗಿ ಸಂಗಾತಿಗಳನ್ನು ಕಂಡುಹಿಡಿಯುವ ಕೆಲಸವನ್ನು ಇನ್ನೂ ಏಕೆ ತಾವೇ ಕೈಕೊಳ್ಳುತ್ತಾರೆ? ಭಾರತದಲ್ಲಿರುವ ಒಬ್ಬ ಮಹಿಳೆಯು—ಆಕೆಯ ವಿವಾಹವು ಹೆತ್ತವರಿಂದ ಏರ್ಪಡಿಸಲ್ಪಟ್ಟದ್ದು—ಹೇಳಿದ್ದು: “ಅಂಥ ಒಂದು ಪ್ರಾಮುಖ್ಯವಾದ ನಿರ್ಣಯವನ್ನು ಮಾಡಲು ಒಬ್ಬ ಯುವ ವ್ಯಕ್ತಿಯು ಹೇಗೆ ಅರ್ಹನಾಗಸಾಧ್ಯವಿದೆ? ಅತ್ಯಂತ ವಿವೇಕಯುಕ್ತ ಆಯ್ಕೆಯು ಯಾವುದಾಗಿದೆ ಎಂಬುದನ್ನು ಅರಿಯಲು, ಯಾರ ವಯಸ್ಸು ಮತ್ತು ಅನುಭವವು ಅವರನ್ನು ಅರ್ಹಗೊಳಿಸುತ್ತದೋ ಅವರಿಗೆ ವಿಷಯವನ್ನು ಬಿಡುವುದು ಹೆಚ್ಚು ಉತ್ತಮ.” ಆಕೆಯ ಹೇಳಿಕೆಗಳೂ ಆಫ್ರಿಕದ ಅನೇಕ ಜನರ ದೃಷ್ಟಿಕೋನವನ್ನು ಪ್ರತಿಫಲಿಸುತ್ತವೆ.
ಆದರೂ, ಘಾನದಲ್ಲಿ ಕಾಲಗಳು ಬದಲಾಗುತ್ತಿವೆ. ಡೇಟಿಂಗ್ ಮತ್ತು ಪ್ರೇಮಯಾಚನೆ ಜನಪ್ರಿಯವಾಗಿ ಬೆಳೆಯುತ್ತಿದೆ. ಪ್ರೇಮಯಾಚನೆಯ ಒಂದು ಸೂಕ್ತವಾದ ಹಂತದಲ್ಲಿ, ಆ ಜೋಡಿಯು ತಮ್ಮ ಮನದ ಇಂಗಿತವನ್ನು ಹೆತ್ತವರಿಗೆ ತಿಳಿಯಪಡಿಸುತ್ತದೆ. ಅವರ ಹೆತ್ತವರ ಮಾತುಕತೆಯಾದ ಅನಂತರ, ಮತ್ತು ಅದು ಒಂದು ಒಳ್ಳೆಯ ಜೋಡಿಯಾಗಿದೆ ಎಂಬುದರ ಕುರಿತು ಸ್ವತಃ ಹೆತ್ತವರು ತೃಪ್ತಿಪಟ್ಟುಕೊಂಡ ಅನಂತರ, ಘಾನದ ವಿವಿಧ ಭಾಷೆಗಳಲ್ಲಿ ಸಾಮಾನ್ಯವಾಗಿ ಜ್ಞಾತವಾಗಿರುವ ಔಪಚಾರಿಕ ಆಚರಣೆಯು—ಬಾಗಿಲು ತಟ್ಟುವಿಕೆ—ವಿವಾಹದ ಬಾಗಿಲು ತಟ್ಟುವಿಕೆಗೆ ಕುಟುಂಬಗಳು ಮುಂದುವರಿಯುತ್ತವೆ.
ಬಾಗಿಲು ತಟ್ಟುವಿಕೆಯ ಆಚರಣೆ
ಆ ಜೋಡಿಯ ಹೆತ್ತವರು ಕುಟುಂಬ ಸದಸ್ಯರಿಗೆ ತಾರೀಖನ್ನು ಮತ್ತು ಒಟ್ಟುಗೂಡುವ ಉದ್ದೇಶವನ್ನು ಗೊತ್ತುಪಡಿಸುತ್ತಾರೆ. “ಕುಟುಂಬ ಸದಸ್ಯರು” ಎಂಬ ಪದವು, ಆ ಜೋಡಿಯ ಮಾವಂದಿರು, ಅತ್ತೆಯಂದಿರು, ಸೋದರಸಂಬಂಧಿಗಳು, ಅಜ್ಜಅಜ್ಜಿಯರನ್ನು ಒಳಗೂಡುವ ವಿಸ್ತಾರ್ಯ ಆಫ್ರಿಕನ್ ಕುಟುಂಬಕ್ಕೆ ಅನ್ವಯಿಸುತ್ತದೆ. ಗೊತ್ತುಪಡಿಸಿದ ದಿನದಂದು, ಎರಡೂ ಕುಟುಂಬಗಳಿಂದ ಬಂದ ಪ್ರತಿನಿಧಿಗಳು ಆಚರಣೆಗಾಗಿ ಒಟ್ಟುಗೂಡುತ್ತಾರೆ. ವರನ ಉಪಸ್ಥಿತಿಯು ಐಚ್ಛಿಕ. ಈ ಮುಂದೆ ಕೊಡಲ್ಪಟ್ಟಿರುವ ವಿಷಯವು, ಅಂಥ ಒಂದು ಬಾಗಿಲು ತಟ್ಟುವಿಕೆಯ ಆಚರಣೆಯಲ್ಲಿ ಏನು ಸಂಭವಿಸಿತೆಂಬುದರ ಒಂದು ಬಹಳ ಸಂಕ್ಷಿಪ್ತ ವರದಿಯಾಗಿದೆ.
ಹೆಣ್ಣಿನ ಪ್ರತಿನಿಧಿ (ಹೆಪ್ರ): [ವರನ ಪ್ರತಿನಿಧಿಗಳೊಡನೆ ಮಾತಾಡುತ್ತಾ] ನೀವು ಬಂದ ಕಾರಣವು ನಮಗೆ ಗೊತ್ತು, ಆದರೂ ನೀವು ಇಲ್ಲಿ ಬಂದ ಕಾರಣವೇನು? ಎಂಬುದಾಗಿ ನಾವು ಕೇಳಬೇಕೆಂಬುದನ್ನು ಸಂಪ್ರದಾಯವು ಒತ್ತಾಯಪಡಿಸುತ್ತದೆ.
ಹುಡುಗನ ಪ್ರತಿನಿಧಿ (ಹುಪ್ರ): ನಮ್ಮ ಮಗನಾದ ಕ್ವೆಸೀ ನಿಮ್ಮ ಮನೆಯನ್ನು ಹಾದುಹೋಗುತ್ತಿರುವಾಗ, ಒಂದು ಚೆಂದದ ಹೂವನ್ನು ನೋಡಿದ ಮತ್ತು ಅದನ್ನು ಕೀಳಲು ನಿಮ್ಮ ಅನುಮತಿಯನ್ನು ಬಯಸುತ್ತಾನೆ.
ಹೆಪ್ರ: [ಅರಿಯದಂತೆ ನಟಿಸುತ್ತಾ] ಈ ಮನೆಯಲ್ಲಿ ಯಾವುದೇ ಹೂವಿಲ್ಲ. ಅದನ್ನು ನೀವೇ ಪರೀಕ್ಷಿಸಸಾಧ್ಯವಿದೆ.
ಹುಪ್ರ: ನಮ್ಮ ಹುಡುಗನು ತಪ್ಪಾದ ಎಣಿಕೆಯನ್ನು ಮಾಡಿಲ್ಲ. ಈ ಮನೆಯಲ್ಲಿ ಅಂಥ ಒಂದು ಚೆಂದದ ಹೂವಿದೆಯೆಂಬುದನ್ನು ನಾವು ಸಮರ್ಥಿಸುತ್ತೇವೆ. ಆ ಹೂವಿನ ಹೆಸರು ಆಫೀ.
ಹೆಪ್ರ: ಹಾಗಾದರೆ ನೀವು ಒಂದು ಮಾನವ ಹೂವಿನ ಬಗ್ಗೆ ಹೇಳುತ್ತಿದ್ದೀರಿ. ಒಳ್ಳೆಯದು, ಆಫೀ ನಿಶ್ಚಯವಾಗಿಯೂ ಇಲ್ಲಿ ಜೀವಿಸುತ್ತಾಳೆ.
ಹುಪ್ರ: ನಾವು ಬಾಗಿಲನ್ನು ತಟ್ಟಿ, ನಮ್ಮ ಮಗನಾದ ಕ್ವೆಸೀಯನ್ನು ಆಫೀ ವಿವಾಹವಾಗುವಂತೆ ಕೇಳಿಕೊಳ್ಳುತ್ತೇವೆ.
ಈಗ ಹುಡುಗನ ಕುಟುಂಬವು ಕೆಲವು ಐಟಮ್ಗಳನ್ನು, ವಿವಿಧ ಪಾನೀಯಗಳನ್ನು ಮತ್ತು ಸ್ವಲ್ಪ ಹಣವನ್ನು ನೀಡುತ್ತದೆ. ಗೋತ್ರದ ಮೇಲಾಧಾರಿಸಿ, ಕೊಡುವುದರಲ್ಲಿನ ಮೊತ್ತಗಳಲ್ಲಿ ಮತ್ತು ಐಟಮ್ಗಳಲ್ಲಿ ವ್ಯತ್ಯಾಸವಿರುತ್ತದೆ. ಈ ಆಚರಣೆಯು ಹೆಚ್ಚುಕಡಿಮೆ ಪಾಶ್ಚಿಮಾತ್ಯ ವೈಖರಿಯ ನಿಶ್ಚಿತಾರ್ಥದಂತೆಯೇ ಇರುತ್ತದೆ, ಮತ್ತು ಕೆಲವು ವಿದ್ಯಮಾನಗಳಲ್ಲಿ ನಿಶ್ಚಿತಾರ್ಥದ ಉಂಗುರವು ನಿರ್ಬಂಧಿಸಲ್ಪಡುತ್ತದೆ.
ಈಗ ಹೆಣ್ಣಿನ ಪ್ರತಿನಿಧಿಯು ಸಕಲ ಪ್ರೇಕ್ಷಕರ ಮುಂದೆ, ತರಲ್ಪಟ್ಟ ಐಟಮ್ಗಳನ್ನು ಸ್ವೀಕರಿಸಬೇಕೋ ಎಂಬುದರ ಕುರಿತಾಗಿ ಆಕೆಯನ್ನು ಕೇಳುತ್ತಾನೆ. ಆಕೆಯ ಹೌದೆನ್ನುವ ಉತ್ತರದಿಂದ, ಉಪಸ್ಥಿತರಿದ್ದವರೆಲ್ಲರೂ ವಿವಾಹವಾಗಲು ಆಕೆಗಿರುವ ಸ್ವಇಚ್ಛೆಗೆ ಪ್ರತ್ಯಕ್ಷಸಾಕ್ಷಿಗಳಾಗಿರುತ್ತಾರೆ. ವಿವಾಹದ ಆಚರಣೆಗಾಗಿ ಎರಡೂ ಕುಟುಂಬಗಳಿಗೆ ಅನುಕೂಲಕರವಾದ ಒಂದು ತಾರೀಖು ಸಮ್ಮತಿಸಲ್ಪಡುತ್ತದೆ. ಉಪಾಹಾರಗಳಿಂದ ಆಚರಣೆಯು ಕೊನೆಗೊಳಿಸಲ್ಪಡುತ್ತದೆ.
ವಿವಾಹ ಆಚರಣೆ
ಹೆಣ್ಣಿನ ಮನೆಯಲ್ಲಿ ಅಥವಾ ಆಯ್ದ ಪ್ರತಿನಿಧಿಯೊಬ್ಬನ ಮನೆಯಲ್ಲಿ, ಯಾವ ಘಟನೆಯು ವಿವಾಹವನ್ನು ಸಂಯೋಜಿಸುತ್ತದೋ, ಆ ವಧುದಕ್ಷಿಣೆಯನ್ನು ನೀಡಲಿಕ್ಕಾಗಿ ಒಟ್ಟುಗೂಡುವ ಜನರ ಸಂಖ್ಯೆಯು, ಸಾಮಾನ್ಯವಾಗಿ ಬಾಗಿಲು ತಟ್ಟುವಿಕೆಯ ಆಚರಣೆಗಾಗಿ ಉಪಸ್ಥಿತರಿದ್ದವರ ಸಂಖ್ಯೆಗಿಂತ ತುಂಬ ದೊಡ್ಡದ್ದಾಗಿರುತ್ತದೆ. ಇದು ಏಕೆಂದರೆ ಈಗ ಅನೇಕ ಸ್ನೇಹಿತರು ಉಪಸ್ಥಿತರಿದ್ದಾರೆ.
ವಾತಾವರಣವು ಹರ್ಷಮಯವಾಗಿರುತ್ತದೆ. ಯುವ ಅವಿವಾಹಿತ ಪುರುಷರೂ ಸ್ತ್ರೀಯರೂ ವಧುವಿಗಾಗಿ ಏನು ತರಲ್ಪಟ್ಟಿದೆಯೆಂಬುದನ್ನು ನೋಡಲು ಕಾತುರರಾಗಿದ್ದಾರೆ. ಆದರೆ ವಧುದಕ್ಷಿಣೆಯ ಐಟಮ್ಗಳು ಅಪೂರ್ಣವಾಗಿವೆ ಎಂಬುದಾಗಿ ವಧುವಿನ ಕುಟುಂಬವು ದೂರುಹೇಳಿದಂತೆ, ಆ ಸಂತೋಷದ ವಾತಾವರಣವು ಬಿಗುಪುಗೊಳ್ಳುತ್ತದೆ. ವಧುವಿನ ಕುಟುಂಬವು ಪಟ್ಟುಬಿಡದಿರುವಾಗ, ಸಭಿಕರಲ್ಲಿ ಕೆಲವರು ಕಾತುರ ಪ್ರತೀಕ್ಷೆಯುಳ್ಳವರಾಗಿರುತ್ತಾರೆ. ವರನ ವದನಕನು ವಧುವಿನ ಕುಟುಂಬವು ಸಹಾನುಭೂತಿಯ ಪರಿಗಣನೆ ತೋರಿಸುವಂತೆ ಕೌಶಲಭರಿತವಾಗಿ ಒಡಂಬಡಿಸುತ್ತಾನೆ. ಹೆಣ್ಣಿನ ಕುಟುಂಬವು ಮೃದುವಾದಂತೆ ಬಿಗುಪು ಸಡಿಲವಾಗುತ್ತದೆ. ವಾತಾವರಣವು ಪುನಃ ಬದಲಾಗುತ್ತದೆ. ಈಗ ಉಲ್ಲಾಸದ ಸಮಯವಾಗಿದ್ದು, ಬಗೆಬಗೆಯ ಲಘು ಉಪಾಹಾರಗಳು ಬಡಿಸಲ್ಪಡುತ್ತವೆ.
ವಿವಾಹದ ಆಚರಣೆಯನ್ನು ಪ್ರಾರಂಭಿಸಲಿಕ್ಕಾಗಿ, ವಧುವಿನ ವದನಕನು ಒಟ್ಟುಗೂಡಿದವರಿಗೆ ಶಾಂತರಾಗುವಂತೆ ಹೇಳಿ, ಎಲ್ಲರನ್ನೂ ಸ್ವಾಗತಿಸುತ್ತಾನೆ. ಅವನು ವರನ ಪ್ರತಿನಿಧಿಗಳನ್ನು ಅವರ ಉದ್ದೇಶದ ಕುರಿತು ಕೇಳುತ್ತಾನೆ. ವರನ ವದನಕನು, ಬಾಗಿಲು ಈಗಾಗಲೇ ತಟ್ಟಲ್ಪಟ್ಟಿದ್ದು, ಒಳಪ್ರವೇಶಿಸಲು ಅನುಮತಿಯು ಕೊಡಲ್ಪಟ್ಟಿದೆ ಎಂಬುದನ್ನು ಒಟ್ಟುಗೂಡಿದವರಿಗೆ ಜ್ಞಾಪಿಸುತ್ತಾ, ಬಂದ ತಮ್ಮ ಕಾರಣವನ್ನು ಹೇಳುತ್ತಾನೆ.
ಅನಂತರ ಎರಡೂ ಕುಟುಂಬದ ವದನಕರು, ಕನ್ಯಾದಾನವನ್ನು ಮಾಡುವವರನ್ನು ಹಾಗೂ ವಿವಾಹದಲ್ಲಿ ಹುಡುಗನನ್ನು ಬೆಂಬಲಿಸುವವರನ್ನೂ ಒಳಗೂಡಿಸಿ, ಕುಟುಂಬದ ಆಪ್ತ ಸದಸ್ಯರನ್ನು ಒಟ್ಟುಗೂಡಿದವರಿಗೆ ಪರಿಚಯಿಸುತ್ತಾರೆ. ಆಚರಣೆಯು ಮುಂದುವರಿಯುತ್ತದೆ.
ಹೆಪ್ರ: [ವರನ ಪ್ರತಿನಿಧಿಗಳೊಡನೆ ಮಾತನಾಡುತ್ತಾ] ನಾವು ಕೇಳಿದಂಥ ವಿವಾಹದ ಐಟಮ್ಗಳನ್ನು ದಯವಿಟ್ಟು ತೋರಿಸಿರಿ.
ವಧುವಿನ ವದನಕನು ವಧುದಕ್ಷಿಣೆಯ ಐಟಮ್ಗಳನ್ನು ಒಂದೊಂದಾಗಿ ಹೇಳುತ್ತಾನೆ, ಹೀಗೆ ಎಲ್ಲರೂ ಅವುಗಳು ಕೊಡಲ್ಪಟ್ಟಿವೆಯೆಂಬುದನ್ನು ದೃಢಪಡಿಸಿಕೊಳ್ಳಸಾಧ್ಯವಿದೆ. ವಧುವಿನ ಕುಟುಂಬವು ಬೇಡಿಕೆಗಳನ್ನು ಮೀತಿಮೀರಿ ಏರಿಸಿವೆಯೆಂದು ವರನ ಪ್ರತಿನಿಧಿಗಳು ಭಾವಿಸುವಲ್ಲಿ, ವಿವಾಹದ ದಿನದ ಮುಂಚೆಯೇ ಅವರು ಆ ವಿವಾದಾಂಶವನ್ನು ಖಾಸಗಿಯಾಗಿ ಬಗೆಹರಿಸುತ್ತಾರೆ. ಹಾಗಿದ್ದರೂ, ವರನ ಕುಟುಂಬವು, ವಧುವಿನ ಕುಟುಂಬದ ಕೆಲವು ಸದಸ್ಯರು ವ್ಯವಹರಿಸಲು ಕಷ್ಟಸಾಧ್ಯವಾಗಿ ಪರಿಣಮಿಸುವಲ್ಲಿ, ಯಾವುದೇ ಹೆಚ್ಚಳವನ್ನು ಕಡಿಮೆಮಾಡುವುದಕ್ಕಾಗಿ ಚೌಕಾಸಿ ಮಾಡಲು ಆಚರಣೆಗೆ ಸಿದ್ಧವಾಗಿ ಬರುತ್ತವೆ. ಒಬ್ಬನು ಎಲ್ಲಿಯೇ ಜೀವಿಸಲಿ, ಮೂಲಭೂತ ವಧುದಕ್ಷಿಣೆಯು—ಹೆಚ್ಚಾಗಿರಲಿ ಇಲ್ಲವೇ ಕಡಿಮೆಯಾಗಿರಲಿ—ಪೂರಾ ಪಾವತಿಮಾಡಲ್ಪಡಬೇಕು.
ಕೆಲವು ಕುಟುಂಬಗಳು, ಪಾನೀಯಗಳು, ಬಟ್ಟೆಬರೆಗಳು, ನೆಕ್ಲೇಸ್ಗಳು, ಕಿವಿಯೋಲೆಗಳು, ಮತ್ತು ಹೆಂಗಸರ ಇತರ ಐಟಮ್ಗಳಂಥ ವಸ್ತುಗಳನ್ನು ನಿರ್ಬಂಧಪಡಿಸುತ್ತವೆ. ಉತ್ತರ ಘಾನದಲ್ಲಿ, ವಧುದಕ್ಷಿಣೆಯು, ಉಪ್ಪು, ಕೋಲ ಮರದ ಬೀಜಗಳು, ಗಿನೀ ಕೋಳಿ, ಕುರಿ, ಮತ್ತು ಗೋವನ್ನು ಕೂಡ ಒಳಗೊಳ್ಳಬಹುದು. ವಧುದಕ್ಷಿಣೆಯಲ್ಲಿ ಒಂದು ಹಣದ ಅಂಶವು ತಪ್ಪದೆ ಇರುತ್ತದೆ.
ಸಮಾಲೋಚನೆಗಳು ಮುಂದುವರಿಯುತ್ತಿರುವಾಗ, ವಧು ಉಪಸ್ಥಿತಳಿಲ್ಲದಿರುವುದಾದರೂ ಹತ್ತಿರದಲ್ಲಿಯೇ ಗಮನಿಸುತ್ತಿರುತ್ತಾಳೆ. ವರನ ಉಪಸ್ಥಿತಿಯು ಐಚ್ಛಿಕ. ಹೀಗೆ, ಬಹು ದೂರದಲ್ಲಿ ಜೀವಿಸುತ್ತಿರುವ ಒಬ್ಬ ವ್ಯಕ್ತಿಯು, ವಿವಾಹದ ನಿಶ್ಚಿತಾರ್ಥವನ್ನು ತನ್ನ ಪರವಾಗಿ ತನ್ನ ಹೆತ್ತವರು ಮಾಡುವಂತೆ ಅನುಮತಿ ನೀಡಬಲ್ಲನು. ಆದರೆ ಇಲ್ಲಿ ವರ್ಣಿಸಲ್ಪಟ್ಟ ಸಂದರ್ಭದಲ್ಲಿ ವರನು ಉಪಸ್ಥಿತನಿದ್ದಾನೆ. ಈಗ ಬೇಡಿಕೆಯನ್ನು ಮಾಡಲು ಅವನ ಕುಟುಂಬದ ಸರದಿಯಾಗಿರುತ್ತದೆ.
ಹುಪ್ರ: ನಮ್ಮಿಂದ ಕೇಳಿಕೊಳ್ಳಲ್ಪಟ್ಟ ಸಕಲವನ್ನೂ ನಾವು ನೆರವೇರಿಸಿದ್ದೇವಾದರೂ ನಾವು ನಮ್ಮ ಸೊಸೆಯನ್ನು ನೋಡಿಲ್ಲ.
ವಿವಾಹ ಆಚರಣೆಯು ಕೇವಲ ಗಂಭೀರವಾದ ವಿಷಯವಾಗಿರುವುದಿಲ್ಲ; ಅದು ತುಸು ವಿನೋದವನ್ನು ಹೊಂದಿರುವ ಒಂದು ಸಂದರ್ಭವೂ ಆಗಿರುತ್ತದೆ. ವಧುವನ್ನು ನೋಡಲಿಕ್ಕಾಗಿರುವ ಹುಡುಗನ ಕುಟುಂಬದ ಬೇಡಿಕೆಗೆ ಈಗ ಹೆಣ್ಣಿನ ಕುಟುಂಬವು ಪ್ರತಿಕ್ರಿಯೆಯನ್ನು ತೋರಿಸುತ್ತದೆ.
ಹೆಪ್ರ: ವಧು ಇಲ್ಲಿದ್ದಿದ್ದರೆ ಚೆನ್ನಾಗಿತ್ತು. ಅಸಂತೋಷಕರವಾಗಿ ಆಕೆ ವಿದೇಶಕ್ಕೆ ಪಯಣಿಸಿದ್ದಾಳೆ ಮತ್ತು ಆಕೆಯನ್ನು ಹಿಂದಿರುಗಿಬರುವಂತೆ ಮಾಡುವ ಪ್ರವಾಸಕ್ಕೆ ನಮ್ಮಲ್ಲಿ ಪಾಸ್ಪೋರ್ಟ್ ಇಲ್ಲವೇ ವೀಸಾಗಳು ಇಲ್ಲ.
ಅದರ ಅರ್ಥವೇನೆಂದು ಪ್ರತಿಯೊಬ್ಬರಿಗೂ ಗೊತ್ತು. ತತ್ಕ್ಷಣವೇ ವರನ ಕುಟುಂಬವು ಹಣದ ಮೊತ್ತವನ್ನು—ವರನು ಕೊಡಶಕ್ತನಿರುವ ಎಷ್ಟೇ ಮೊತ್ತವನ್ನು—ಕೊಡುತ್ತದೆ ಮತ್ತು ಕ್ಷಣಮಾತ್ರದಲ್ಲಿಯೇ! ಕಲ್ಪಿತ ಪಾಸ್ಪೋರ್ಟ್ ಮತ್ತು ವೀಸಾಗಳು ಸಿದ್ಧ. ಮತ್ತು ಆ ವಧು ತನ್ನ ಪ್ರವಾಸದಿಂದ ಹಿಂದಿರುಗಿದ್ದಾಳೆ!
ವಿನೋದಕ್ಕೆ ಕೂಡಿಸಲು, ಕೆಲವು ಗೋತ್ರಗಳು, ವಧುವಿನ ಕೆಲವು ಸ್ನೇಹಿತೆಯರು ಆಕೆಯಂತೆ ನಟಿಸಲು ಏರ್ಪಡಿಸುತ್ತವೆ. ಚಪ್ಪಾಳೆ ಸಮ್ಮತಿಯ ಮಧ್ಯೆ ನಿಜವಾದ ವಧು ಉಪಸ್ಥಿತಳಾಗುವ ವರೆಗೆ, ಪ್ರತಿಯೊಬ್ಬ ನಟಿಯೂ ಸಮೂಹದಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಡುತ್ತಾಳೆ. ನಂತರ ತನ್ನ ವಧುದಕ್ಷಿಣೆಯ ವಿವಿಧ ಐಟಮ್ಗಳನ್ನು ನೋಡುವಂತೆ ವಧು ತನ್ನ ವದನಕನಿಂದ ಆಮಂತ್ರಿಸಲ್ಪಡುತ್ತಾಳೆ. ವರನು ಏನನ್ನು ತಂದಿದ್ದಾನೋ ಅದನ್ನು ಸ್ವೀಕರಿಸಬೇಕೋ ಎಂದು ಆಕೆಯನ್ನು ಕೇಳಲಾಗುತ್ತದೆ. ಉತ್ತರಕ್ಕಾಗಿ ಪ್ರತಿಯೊಬ್ಬರೂ ಕಾತರದಿಂದ ಕಾದಂತೆ, ಅಲ್ಲಿ ನಿಶ್ಶಬ್ದವು ಮನೆಮಾಡುತ್ತದೆ. ಕೆಲವು ಹುಡುಗಿಯರು ಪುಕ್ಕಲ ಸ್ವಭಾವದವರು ಮತ್ತು ಇತರರು ದಿಟ್ಟ ಸ್ವಭಾವದವರಾಗಿರುತ್ತಾರಾದರೂ, ಭಾರಿ ಚಪ್ಪಾಳೆ ಸಮ್ಮತಿಯಿಂದ ಹಿಂಬಾಲಿಸಿ ಬರುವ ಸ್ಥಿರ ಉತ್ತರವು ಹೌದು ಎಂದಾಗಿರುತ್ತದೆ.
ವರನು ಉಪಸ್ಥಿತನಿರುವಲ್ಲಿ, ವಧುವಿನ ಕುಟುಂಬವು ಅವನ ಬಗ್ಗೆ ತಿಳಿದುಕೊಳ್ಳುವ ಬೇಡಿಕೆಯನ್ನಿಡುತ್ತದೆ. ಅವನಂತೆ ನಟಿಸಲು ಅವನ ಸ್ನೇಹಿತರಲ್ಲಿ ಒಬ್ಬನಿಗಾಗಿ ಏರ್ಪಾಡು ಮಾಡಲ್ಪಟ್ಟಿರುವಲ್ಲಿ, ವಿನೋದವು ತಗ್ಗದೆ ಮುಂದುವರಿಯುತ್ತದೆ. ಅವನ ಸ್ನೇಹಿತನು ಪ್ರತಿಷ್ಠೆಯ ಠೀವಿಯಿಂದ ಎದ್ದುನಿಲ್ಲುತ್ತಾನಾದರೂ ಪ್ರತಿಯೊಬ್ಬರೂ ಜೋರಾಗಿ ಅವನ ಬಗ್ಗೆ ಅಸಮ್ಮತಿಯನ್ನು ಸೂಚಿಸುತ್ತಾರೆ.
ವಧುವಿನ ಹೆತ್ತವರು ತಮ್ಮ ಅಳಿಯನನ್ನು ನೋಡಲಿಕ್ಕಾಗಿ ಪುನಃ ಬೇಡಿಕೆಯನ್ನಿಡುತ್ತಾರೆ. ಈಗ ನಿಜವಾದ ವರನು ಸಂತೋಷದ ನಸುನಗುವನ್ನು ಹೊರಸೂಸುತ್ತಾ ಎದ್ದುನಿಲ್ಲುತ್ತಾನೆ. ವಧುವಿನ ಕುಟುಂಬವು ಅವಳಿಗೆ ಅವನೊಂದಿಗೆ ಜತೆಗೂಡುವಂತೆ ಅನುಮತಿ ನೀಡುತ್ತದೆ; ವಧುದಕ್ಷಿಣೆಯ ಒಂದು ಭಾಗವಾಗಿ ಉಂಗುರವು ನಿರ್ಬಂಧಿಸಲ್ಪಟ್ಟಿರುವಲ್ಲಿ, ಅವನು ಆಕೆಯ ಬೆರಳಿಗೆ ಉಂಗುರವನ್ನು ತೊಡಿಸುತ್ತಾನೆ. ಉಂಗುರವು ಪಶ್ಚಿಮದಿಂದ ಪರಿಚಯಿಸಲ್ಪಟ್ಟ ಹೊಸ ವಿಚಾರವಾಗಿದೆ. ಅದಕ್ಕೆ ಪ್ರತಿಯಾಗಿ ಆಕೆ ಅವನ ಬೆರಳಿಗೆ ಉಂಗುರವನ್ನು ತೊಡಿಸುತ್ತಾಳೆ. ಅಭಿನಂದನೆಗಳೂ ಹರ್ಷವೂ ವಾತಾವರಣವನ್ನು ಆವರಿಸುತ್ತದೆ. ಅನುಕೂಲಕ್ಕಾಗಿ ಮತ್ತು ಮಿತವ್ಯಯಕ್ಕಾಗಿ, ಈಗ ಕೆಲವರು ಅದೇ ದಿನದಂದು ಬಾಗಿಲು ತಟ್ಟುವ ಆಚರಣೆಯೊಂದಿಗೆ ವಿವಾಹವನ್ನೂ ಸಂಯೋಜಿಸುತ್ತಾರೆ.
ನವವಿವಾಹಿತರನ್ನು ಮರಣವು ಅಗಲಿಸುವ ತನಕವೂ ಅವರು ತಮ್ಮ ವಿವಾಹವನ್ನು ಹೇಗೆ ಸಫಲವಾಗಿಟ್ಟುಕೊಳ್ಳಸಾಧ್ಯವಿದೆ ಎಂಬುದರ ಕುರಿತಾಗಿ, ಈಗ ಎರಡೂ ಕುಟುಂಬಗಳ ಅನುಭವಸ್ಥ ಸದಸ್ಯರು ಮತ್ತು ಇತರರು ಅವರಿಗೆ ಸಲಹೆಯನ್ನು ನೀಡುತ್ತಾರೆ. ಆ ದಿನವನ್ನು ಒಂದು ಆಹ್ಲಾದಕರವಾದ ವಿಧದಲ್ಲಿ ಸಮಾಪ್ತಿಗೊಳಿಸಲು, ಉಪಾಹಾರಗಳು ಬಡಿಸಲ್ಪಡುತ್ತವೆ.
ವಿವಾಹದ ಆಚರಣೆಯು ಮುಗಿಯಿತು! ಘಾನದಲ್ಲಿ ಆ ದಿನದಿಂದ ಆ ದಂಪತಿಗಳು ಸಮುದಾಯದಿಂದ ಕಾನೂನುರೀತ್ಯಾ ವಿವಾಹಿತರಾಗಿ ಪರಿಗಣಿಸಲ್ಪಡುತ್ತಾರೆ. ಕಾರಣಾಂತರಗಳಿಂದ ಹೆಣ್ಣಿನ ಕುಟುಂಬದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಯಾರಿಗಾದರೂ ಆಚರಣೆಗೆ ಬರಲಾಗಲಿಲ್ಲವಾದರೆ, ಅಲ್ಲಿ ಕೊಡಲಾಗುವ ಪಾನೀಯಗಳಲ್ಲಿ ಕೆಲವನ್ನು ವಿವಾಹದ ಸಾಂಗಗೊಳಿಸುವಿಕೆಯನ್ನು ದೃಢೀಕರಿಸಲಿಕ್ಕಾಗಿ ಅವರಿಗೆ ಕಳುಹಿಸಲಾಗುತ್ತದೆ. ವಧೂವರರು ಯೆಹೋವನ ಸಾಕ್ಷಿಗಳಾಗಿರುವಲ್ಲಿ, ಕೆಲವು ಸಂದರ್ಭಗಳಲ್ಲಿ ಸಾಕ್ಷಿಗಳು ಒಂದು ಬೈಬಲ್ ಭಾಷಣವನ್ನು ಕೊಟ್ಟಾದ ನಂತರ, ಲಘು ಉಪಾಹಾರಗಳಿರುವಂತೆ ಅವರು ಏರ್ಪಾಡು ಮಾಡುತ್ತಾರೆ.
ಘಾನದಲ್ಲಿನ ಕೆಲವು ದಂಪತಿಗಳು ಪಾಶ್ಚಿಮಾತ್ಯ ವೈಖರಿಯ ವಿವಾಹದ ಆಚರಣೆಯನ್ನು ಮಾಡುತ್ತಾರೆ, ಇಲ್ಲಿ ಅದು ರಿಜಿಸ್ಟರ್ ವಿವಾಹ ಅಥವಾ ಶಾಸನಬದ್ಧ ವಿವಾಹವೆಂದು ಕರೆಯಲ್ಪಡುತ್ತದೆ. ಇದು ಆ ಜೋಡಿ ಕಾನೂನುರೀತ್ಯಾ ವಯಸ್ಕರಾಗಿರುವಷ್ಟರ ತನಕ ಹೆತ್ತವರ ಸಮ್ಮತಿಯೊಂದಿಗೆ ಇಲ್ಲವೇ ಅಸಮ್ಮತಿಯೊಂದಿಗೆ ನಿಶ್ಚಿತಾರ್ಥಮಾಡಸಾಧ್ಯವಿದೆ. ಸಾಂಪ್ರದಾಯಿಕ ವಿವಾಹದಲ್ಲಿ ಹೆತ್ತವರ ಸಮ್ಮತಿಯು ಬೇಕೇಬೇಕು.
ರಿಜಿಸ್ಟರ್ ವಿವಾಹದಲ್ಲಿ ಜೋಡಿಯು ವಿವಾಹ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಾಂಪ್ರದಾಯಿಕ ವಿವಾಹಗಳಲ್ಲಿ ಪ್ರತಿಜ್ಞೆಗಳು ಅಸ್ತಿತ್ವದಲ್ಲಿರುವುದಿಲ್ಲ. ಎಲ್ಲ ಸಾಂಪ್ರದಾಯಿಕ ವಿವಾಹಗಳು ದಾಖಲಿಸಲ್ಪಡಬೇಕೆಂದು ಸರಕಾರವು ಕೇಳಿಕೊಳ್ಳುತ್ತದೆ ಮತ್ತು ಅದಕ್ಕೆ ಯೆಹೋವನ ಸಾಕ್ಷಿಗಳು ಅನುವರ್ತಿಸುತ್ತಾರೆ. (ರೋಮಾಪುರ 13:1) ಅನಂತರ ಒಂದು ರೆಜಿಸ್ಟ್ರೇಶನ್ ಸರ್ಟಿಫಿಕೇಟ್ ಕೊಡಲಾಗುತ್ತದೆ.
ಪುರಾತನ ಸಮಯಗಳಿಂದ ಗೋಲ್ಡ್ ಕೋಸ್ಟ್—ಈಗ ಘಾನ—ಬ್ರಿಟಿಷ್ ವಸಾಹತಾಗಿ ಪರಿಣಮಿಸಿದ ವರೆಗೆ, ದೇಶದಲ್ಲಿ ವಿವಾಹದ ಏಕಮಾತ್ರ ವಿಧವು ಸಾಂಪ್ರದಾಯಿಕ ವಿವಾಹವಾಗಿತ್ತು. ಅನಂತರ ಬ್ರಿಟಿಷರು ಇಲ್ಲಿ ಜೀವಿಸುತ್ತಿದ್ದ ತಮ್ಮ ನಾಗರಿಕರಿಗೆ ಪಾಶ್ಚಿಮಾತ್ಯ ವೈಖರಿಯ ವಿವಾಹವನ್ನು ಪರಿಚಯಿಸಿದರು. ಈ ಪ್ರದೇಶದ ನೆಲಸಿಗರು ಸಹ ಈ ರೀತಿಯ ವಿವಾಹವನ್ನು ನಿಶ್ಚಿತಾರ್ಥಮಾಡಲು ಅನುಮತಿಸಲ್ಪಟ್ಟರು. ಮತ್ತು ಅನೇಕ ವರ್ಷಗಳಿಂದ ಪಾಶ್ಚಿಮಾತ್ಯ ವೈಖರಿಯ ವಿವಾಹ ಮತ್ತು ಸಾಂಪ್ರದಾಯಿಕ ವಿವಾಹವು ಒಟ್ಟಿಗೆ ಅಸ್ತಿತ್ವದಲ್ಲಿದೆ. ಘಾನದಲ್ಲಿ ಎರಡೂ ರೀತಿಯ ವಿವಾಹಗಳು ಕಾನೂನುರೀತ್ಯಾ ಅಂಗೀಕರಿಸಲ್ಪಡುತ್ತವೆ, ಆದಕಾರಣ ಇವು ಯೆಹೋವನ ಸಾಕ್ಷಿಗಳಿಗೆ ಸ್ವೀಕಾರಾರ್ಹವಾಗಿವೆ. ತಾವು ಯಾವ ರೀತಿಯ ವಿವಾಹವನ್ನು ಬಯಸುತ್ತೇವೆಂಬುದನ್ನು ಆರಿಸಿಕೊಳ್ಳುವುದು ವ್ಯಕ್ತಿಪರರಿಗೆ ಬಿಟ್ಟದ್ದಾಗಿರುತ್ತದೆ.
ಆಫ್ರಿಕದ ಕೆಲವು ದೇಶಗಳಲ್ಲಿ, ದಂಪತಿಗಳು ಕಾನೂನುರೀತ್ಯಾ ವಿವಾಹಿತರಾಗಿ ಪರಿಗಣಿಸಲ್ಪಡಸಾಧ್ಯವಿರುವ ಮುನ್ನ, ಸಾಂಪ್ರದಾಯಿಕ ವಿವಾಹಗಳು ದಾಖಲಿಸಲ್ಪಡಬೇಕಾಗಿದೆ. ಘಾನದಲ್ಲಿಯಾದರೋ, ಮೇಲೆ ವರ್ಣಿಸಲ್ಪಟ್ಟಿರುವಂತೆ ಸಾಂಪ್ರದಾಯಿಕ ವಿವಾಹವು ದಾಖಲಾಗದೆಯೇ ಕಾನೂನುರೀತ್ಯಾ ಸಮಂಜಸವಾದದ್ದಾಗಿದೆ, ಸಾಂಪ್ರದಾಯಿಕ ವಿವಾಹವು ಸಾಂಗಗೊಳಿಸಲ್ಪಟ್ಟಾಗ ಜೋಡಿಗಳು ಕಾನೂನುರೀತ್ಯಾ ವಿವಾಹಿತರಾಗಿ ಪರಿಗಣಿಸಲ್ಪಡುತ್ತಾರೆ. ಮುಂದೆ, ಕೇವಲ ಸಾಕ್ಷ್ಯದ ಉದ್ದೇಶಕ್ಕಾಗಿ ಸಾಂಪ್ರದಾಯಿಕ ವಿವಾಹವು ದಾಖಲಿಸಲ್ಪಡುತ್ತದೆ.
ವಿವಾಹವು ನಿಜವಾಗಿಯೂ ಮಾನವಕುಲಕ್ಕೆ ದೇವರ ಪ್ರೀತಿಪರ ಕೊಡುಗೆಯಾಗಿದೆ, ದೇವದೂತರಿಗೂ ನೀಡಲ್ಪಟ್ಟಿರದಂಥ ಒಂದು ಅಪೂರ್ವವಾದ ಕೊಡುಗೆ. (ಲೂಕ 20:34-36) ಇದು ವಿವಾಹದ ಮೂಲಕರ್ತನಾದ ಯೆಹೋವ ದೇವರ ಮಹಿಮೆಗಾಗಿ ಜೋಪಾನವಾಗಿಟ್ಟುಕೊಳ್ಳಲು ಅರ್ಹವಾದ ಒಂದು ಅಮೂಲ್ಯ ಸಂಬಂಧವಾಗಿದೆ.
[ಪುಟ 30 ರಲ್ಲಿರುವ ಚಿತ್ರ]
ಉಂಗುರಗಳನ್ನು ಅದಲು ಬದಲು ಮಾಡಿಕೊಳ್ಳುತ್ತಿರುವುದು