ಲೂಯಿ ಪ್ಯಾಸ್ಚರ್ ಅವರ ಕೆಲಸವು ತಿಳಿಯಪಡಿಸಿದ ಸಂಗತಿ
ಫ್ರಾನ್ಸಿನ ಎಚ್ಚರ! ಸುದ್ದಿಗಾರರಿಂದ
ಜೀವವು ನಿರ್ಜೀವ ವಸ್ತುಗಳಿಂದ ಉತ್ಪತ್ತಿಯಾಗಬಲ್ಲದೊ? ಅದು ಉತ್ಪತ್ತಿಯಾಗಬಲ್ಲದೆಂದು 19ನೆಯ ಶತಮಾನದಲ್ಲಿನ ಕೆಲವು ವಿಜ್ಞಾನಿಗಳು ನೆನಸಿದರು. ಜೀವವು ತನ್ನಷ್ಟಕ್ಕೆ, ಒಬ್ಬ ಸೃಷ್ಟಿಕರ್ತನ ಹಸ್ತಕ್ಷೇಪವಿಲ್ಲದೇ, ನಿರ್ಜೀವ ವಸ್ತುವಿನಿಂದ ಆರಂಭವಾಗಬಲ್ಲದೆಂದು ಅವರಿಗನಿಸಿತು.
ಆದರೆ ಎಪ್ರಿಲ್ 1864ರ ಒಂದು ವಸಂತ ಸಾಯಂಕಾಲದಂದು, ಪ್ಯಾರಿಸಿನಲ್ಲಿನ ಸೊರ್ಬೊನ್ ವಿಶ್ವವಿದ್ಯಾನಿಲಯದ ಕೂಟದ ಸಭಾಗೃಹದಲ್ಲಿ ಉಪಸ್ಥಿತರಿದ್ದ ಸಭಿಕರು, ಒಂದು ಭಿನ್ನವಾದ ಸಂಗತಿಯನ್ನು ಕೇಳಿಸಿಕೊಂಡರು. ವಿಜ್ಞಾನಿಗಳ ಒಂದು ಮಂಡಳಿಯ ಮುಂದೆ ಒಂದು ನಿಪುಣವಾದ ನಿರೂಪಣೆಯಲ್ಲಿ, ಲೂಯಿ ಪ್ಯಾಸ್ಚರರು, ನಿರ್ಜೀವ ವಸ್ತುವಿನಿಂದ ಜೀವೋತ್ಪತ್ತಿಯಾಗುವ ವಾದವನ್ನು, ಯಶಸ್ವಿಕರವಾಗಿ ಹಂತ ಹಂತವಾಗಿ ತಪ್ಪೆಂದು ಸಿದ್ಧಪಡಿಸಿದರು.
ಈ ಉಪನ್ಯಾಸ ಮತ್ತು ಅವರಿಂದ ಮಾಡಲ್ಪಟ್ಟ ಇತರ ಕಂಡುಹಿಡಿತಗಳು, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಅದನ್ನು ಹೇಳುವಂತೆ, ಅವರನ್ನು “ಲೋಕದಲ್ಲಿನ ಅತಿ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರನ್ನಾಗಿ” ಮಾಡಿದವು. ಆದರೆ ಈ ಮನುಷ್ಯನು ತನ್ನ ಸಮಯದಲ್ಲಿನ ಮನುಷ್ಯರ ಮೇಲೆ ಇಷ್ಟೊಂದು ಪ್ರಭಾವವನ್ನು ಬೀರಿದ್ದೇಕೆ, ಮತ್ತು ಅವರು ಜಗದ್ವ್ಯಾಪಕವಾಗಿ ಪ್ರಖ್ಯಾತರಾದುದು ಹೇಗೆ? ಅವರ ಕಂಡುಹಿಡಿತಗಳಲ್ಲಿ ಕೆಲವು ಕಂಡುಹಿಡಿತಗಳಿಂದ ನಾವು ಈಗ ಹೇಗೆ ಲಾಭ ಪಡೆಯುತ್ತೇವೆ?
ಆರಂಭದ ಸಂಶೋಧನೆ
ಫ್ರಾನ್ಸಿನ ಪೂರ್ವ ದಿಕ್ಕಿನಲ್ಲಿರುವ ಡೊಲ್ ಎಂಬ ಚಿಕ್ಕ ಪಟ್ಟಣದಲ್ಲಿ, 1822ರಲ್ಲಿ ಲೂಯಿ ಪ್ಯಾಸ್ಚರ್ ಜನಿಸಿದರು. ಅವರ ತಂದೆ ಚರ್ಮಹದಮಾಡುವವರಾಗಿದ್ದರು. ಅವರಿಗೆ ತಮ್ಮ ಮಗನ ಕುರಿತಾಗಿ ಮಹತ್ವಾಕಾಂಕ್ಷೆಗಳಿದ್ದವು. ಕಲೆ ಹಾಗೂ ನಿಜವಾದ ಕಲಾತ್ಮಕ ಕೌಶಲ್ಯದ ಕಡೆಗೆ ಒಲವನ್ನು ಹೊಂದಿದ್ದರೂ, ಲೂಯಿ ವಿಜ್ಞಾನಗಳನ್ನು ಆರಿಸಿಕೊಂಡರು. 25ರ ವಯಸ್ಸಿನಲ್ಲಿ ಅವರು ವಿಜ್ಞಾನಗಳಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.
ಅವರ ಆರಂಭದ ಸಂಶೋಧನೆಯು, ದ್ರಾಕ್ಷಾಮದ್ಯದ ಪೀಪಾಯಿಗಳಲ್ಲಿ ಉಳಿದ ಗಸಿಯಲ್ಲಿರುವ ಒಂದು ಮೂಲಧಾತುವಾದ ಟಾರ್ಟಾರಿಕ್ ಆಮ್ಲದೊಂದಿಗೆ ಸಂಬಂಧಿತವಾಗಿತ್ತು. ಆ ಸಂಶೋಧನೆಯ ಫಲಿತಾಂಶಗಳು, ಕೆಲವು ವರ್ಷಗಳ ನಂತರ ಇತರ ಸಂಶೋಧಕರಿಂದ ಆಧುನಿಕ ಜೈವಿಕ ರಸಾಯನಶಾಸ್ತ್ರಕ್ಕೆ ಆಧಾರವನ್ನಿಡಲು ಉಪಯೋಗಿಸಲ್ಪಟ್ಟವು. ಪ್ಯಾಸ್ಚರ್ ಅನಂತರ ಹುದುಗೆಬ್ಬಿಸುವ ಪದಾರ್ಥಗಳ ಅಧ್ಯಯನಕ್ಕೆ ಮುಂದುವರಿದನು.
ಪ್ಯಾಸ್ಚರರ ಸಂಶೋಧನೆಗೆ ಮುಂಚೆ, ಕಿಣ್ವದಂತಹ ಹುದುಗೆಬ್ಬಿಸುವ ಪದಾರ್ಥಗಳ ಇರುವಿಕೆಯು ಜ್ಞಾತವಾಗಿತ್ತು. ಆದರೆ ಅವು ಹುದುಗೆಬ್ಬಿಸುವಿಕೆಯ ಫಲಿತಾಂಶವಾಗಿವೆಯೆಂದು ನೆನಸಲಾಗಿತ್ತು. ಆದಾಗಲೂ, ಈ ಹುದುಗೆಬ್ಬಿಸುವ ಪದಾರ್ಥಗಳು, ಹುದುಗೆಬ್ಬಿಸುವಿಕೆಯ ಫಲಿತಾಂಶವಲ್ಲ, ಬದಲಾಗಿ ಅವೇ ಹುದುಗೆಬ್ಬಿಸುವಿಕೆಯನ್ನು ಉಂಟುಮಾಡುತ್ತವೆಂದು ಪ್ಯಾಸ್ಚರ್ ರುಜುಪಡಿಸಿದರು. ಪ್ರತಿಯೊಂದು ವಿಧದ ಹುದುಗೆಬ್ಬಿಸುವಿಕೆಯ ಪದಾರ್ಥವು, ಒಂದು ವಿಭಿನ್ನ ಪ್ರಕಾರದ ಹುದುಗೆಬ್ಬಿಸುವಿಕೆಯನ್ನು ಉಂಟುಮಾಡುತ್ತದೆಂದು ಅವರು ತೋರಿಸಿದರು. 1857ರಲ್ಲಿ ಅವರು ಇದರ ಕುರಿತಾಗಿ ಪ್ರಕಾಶಿಸಿದ ವರದಿಯನ್ನು ಇಂದು, “ಸೂಕ್ಷ್ಮದರ್ಶಕ ಜೀವಶಾಸ್ತ್ರದ ಜನನ ಪತ್ರ”ದೋಪಾದಿ ವೀಕ್ಷಿಸಲಾಗಿದೆ.
ಆ ಬಿಂದುವಿನಿಂದ ಹಿಡಿದು, ಅವರ ಕೆಲಸ ಮತ್ತು ಕಂಡುಹಿಡಿತಗಳು ಹೆಚ್ಚುತ್ತಾಹೋದವು. ಅವರ ಖ್ಯಾತಿಯ ಕಾರಣದಿಂದ, ಆರ್ಲೀನ್ಸ್ನಲ್ಲಿನ ಹುಳಿ ತಯಾರಕರು, ತಮ್ಮ ಅಸಂಖ್ಯಾತ ಪ್ರಕ್ರಿಯೆ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಅವರನ್ನು ಭೇಟಿಮಾಡಿದರು. ದ್ರಾಕ್ಷಾಮದ್ಯವು ಹುಳಿನೀರಾಗಿ ಪರಿವರ್ತನೆಗೊಳ್ಳಲಿಕ್ಕಾಗಿ ಕಾರಣವಾಗಿರುವ ಪದಾರ್ಥವು, ಯಾವುದನ್ನು ಈಗ ಸೂಕ್ಷ್ಮಾಣುಜೀವಿಯೆಂದು ಕರೆಯಲಾಗುತ್ತದೊ ಅದಾಗಿದೆಯೆಂದು ಪ್ಯಾಸ್ಚರ್ ರುಜುಪಡಿಸಿದರು. ಇದು ದ್ರವದ ಮೇಲ್ಮೈಯಲ್ಲಿ ಇರುತ್ತದೆ. ತಮ್ಮ ಸಂಶೋಧನೆಯ ಅಂತ್ಯದಲ್ಲಿ, ಅವರು ಪಟ್ಟಣದ ಹುಳಿನೀರು ತಯಾರಕರ ಮತ್ತು ದೊಡ್ಡ ಅಧಿಕಾರಿಗಳ ಮುಂದೆ, ತಮ್ಮ ಪ್ರಸಿದ್ಧವಾದ “ದ್ರಾಕ್ಷಾಮದ್ಯ ಹುಳಿಯ ಕುರಿತಾದ ಪಾಠ”ವನ್ನು ಪ್ರಸ್ತುತಪಡಿಸಿದರು.
ಪಾಸ್ಚರೀಕರಣ
ಹುದುಗೆಬ್ಬಿಸುವಿಕೆಯ ವಿಷಯದಲ್ಲಿ ಪ್ಯಾಸ್ಚರರ ಸಂಶೋಧನೆಯು, ಆಹಾರ ಉದ್ಯಮದಲ್ಲಿನ ಕಲುಷಿತಗೊಳಿಸುವಿಕೆಯ ಕುರಿತಾದ ಸಮಸ್ಯೆಗಳಲ್ಲಿ ಹೆಚ್ಚಿನವು, ಸೂಕ್ಷ್ಮದರ್ಶಕೀಯ ಜೀವಿಗಳಿಂದ ಉಂಟುಮಾಡಲ್ಪಟ್ಟಿದ್ದವೆಂಬ ತೀರ್ಮಾನಕ್ಕೆ ಬರುವಂತೆ ಅವರನ್ನು ಶಕ್ತಗೊಳಿಸಿತು. ಸೂಕ್ಷ್ಮದರ್ಶಕೀಯ ಜೀವಿಗಳು ಗಾಳಿಯಲ್ಲಿ ಅಥವಾ ಸರಿಯಾಗಿ ತೊಳೆಯದಿದ್ದ ಪಾತ್ರೆಗಳಲ್ಲಿ ಇರುತ್ತಿದ್ದವು. ಬ್ಯಾಕ್ಟೀರಿಯಾದಿಂದ ಆಹಾರ ಉತ್ಪನ್ನಗಳು ಹಾಳಾಗುವುದನ್ನು, ಆರೋಗ್ಯಶಾಸ್ತ್ರವನ್ನು ಉತ್ತಮಗೊಳಿಸುವ ಮೂಲಕ ತಡೆಯಬಹುದೆಂದು ಮತ್ತು ಒಂದು ದ್ರವದ ಹಾಳಾಗುವಿಕೆಯನ್ನು, ಕೆಲವೊಂದು ನಿಮಿಷಗಳ ವರೆಗೆ 50ರಿಂದ 60 ಡಿಗ್ರಿಗಳ ನಡುವಿನ ತಾಪಮಾನವನ್ನು ಕಾಪಾಡಿಕೊಳ್ಳುವುದರ ಮೂಲಕ ತಡೆಯಬಹುದೆಂದು ಪ್ಯಾಸ್ಚರ್ ಸಲಹೆಯಿತ್ತರು. ಈ ವಿಧಾನವು ಪ್ರಥಮವಾಗಿ, ಅಸಾಮಾನ್ಯ ಹುದುಗೆಬ್ಬಿಸುವಿಕೆಯನ್ನು ತಡೆಯಲು ದ್ರಾಕ್ಷಾಮದ್ಯದ ಮೇಲೆ ಉಪಯೋಗಿಸಲ್ಪಟ್ಟಿತು. ರುಚಿ ಅಥವಾ ಸುವಾಸನೆಯಲ್ಲಿ ಹೆಚ್ಚು ಬದಲಾವಣೆಯನ್ನು ಉಂಟುಮಾಡದೇ, ಪ್ರಧಾನ ಸೂಕ್ಷ್ಮದರ್ಶಕೀಯ ಜೀವಿಗಳನ್ನು ಕೊಲ್ಲಲಾಯಿತು.
ಪ್ಯಾಸ್ಚರ್ ಆರಂಭಿಸಿದ, ಪಾಸ್ಚರೀಕರಣವೆಂದು ಕರೆಯಲ್ಪಡುವ ಈ ವಿಧಾನವು, ಆಹಾರ ಉದ್ಯಮವನ್ನು ಬದಲಾವಣೆಗೊಳಪಡಿಸಿತು. ಈಗಿನ ದಿನಗಳಲ್ಲಿ ಈ ವಿಧಾನವು ಇನ್ನು ಮುಂದೆ ದ್ರಾಕ್ಷಾಮದ್ಯಕ್ಕಾಗಿ ಉಪಯೋಗಿಸಲ್ಪಡುವುದಿಲ್ಲ, ಆದರೆ ಹಾಲು ಮತ್ತು ಹಣ್ಣಿನ ರಸದಂತಹ ಹಲವಾರು ಉತ್ಪಾದನೆಗಳಿಗಾಗಿ ಇನ್ನೂ ತಕ್ಕದ್ದಾಗಿರುತ್ತದೆ. ಆದಾಗಲೂ, ಅತ್ಯುಚ್ಚ ತಾಪಮಾನದಲ್ಲಿ ಕ್ರಿಮಿಶುದ್ಧಿಮಾಡುವಿಕೆಯಂತಹ ಇತರ ವಿಧಾನಗಳೂ ಉಪಯೋಗಿಸಲ್ಪಡಸಾಧ್ಯವಿದೆ.
ಪ್ಯಾಸ್ಚರರ ಸಂಶೋಧನೆಯಿಂದ ಲಾಭಪಡೆದ ಇನ್ನೊಂದು ಉದ್ಯಮವು, ಮದ್ಯತಯಾರಿಕೆಯ ಉದ್ಯಮವಾಗಿತ್ತು. ಆ ಸಮಯದಲ್ಲಿ ಫ್ರೆಂಚ್ ಜನರಿಗೆ ಉತ್ಪಾದನೆಯ ಅನೇಕ ಸಮಸ್ಯೆಗಳಿದ್ದವು ಮತ್ತು ಬಲವಾದ ಜರ್ಮನ್ ಪ್ರತಿಸ್ಪರ್ಧೆಯಿತ್ತು. ಪ್ಯಾಸ್ಚರ್ ಈ ಸಮಸ್ಯೆಗಳಿಗೆ ನಿಕಟವಾದ ಗಮನವನ್ನು ಕೊಟ್ಟು, ಮದ್ಯತಯಾರಕರಿಗೆ ತುಂಬ ಸಲಹೆಯನ್ನು ಕೊಟ್ಟರು. ಮದ್ಯತಯಾರಿಸುವ ಮೊಳೆತ ಧಾನ್ಯದ ಕಷಾಯದ ಶುದ್ಧತೆಗೆ ಹಾಗೂ ಸುತ್ತಮುತ್ತಲಿನ ಗಾಳಿಯ ಸಾಮಾನ್ಯವಾದ ನೈರ್ಮಲ್ಯಕ್ಕೂ ಗಮನವನ್ನು ಕೊಡುವಂತೆ ಅವರು ಸಲಹೆ ನೀಡಿದರು. ಯಶಸ್ಸು ತತ್ಕ್ಷಣದ್ದಾಗಿತ್ತು, ಮತ್ತು ಅವರು ತದನಂತರ ಅನೇಕ ಅನುಗ್ರಹಪತ್ರಗಳನ್ನು ಪಡೆದರು.
ಜೀವವು ಜೀವದಿಂದ ಬರುತ್ತದೆ
ಹಳೆಯಕಾಲದಿಂದಲೂ, ಕೊಳೆಯುತ್ತಿರುವ ವಸ್ತುವಿನಲ್ಲಿ ಕೀಟಗಳು, ಹುಳುಗಳು ಅಥವಾ ಇತರ ಜೀವಿಗಳ ತೋರಿಬರುವಿಕೆಯನ್ನು ವಿವರಿಸಲು ತೀರ ವಿಚಿತ್ರ ರೀತಿಯ ವಿಚಾರಗಳು ಮುಂದಿಡಲ್ಪಟ್ಟಿವೆ. ದೃಷ್ಟಾಂತಕ್ಕಾಗಿ, ಗೋಧಿ ತುಂಬಿದ ಒಂದು ಜಾಡಿಯಲ್ಲಿ ಒಂದು ಗಲೀಜಾದ ರವಿಕೆಯನ್ನು ತುರುಕಿಸುವ ಮೂಲಕ, ಇಲಿಗಳು ತೋರಿಬರುವಂತೆ ಮಾಡಿದೆನೆಂದು, 17ನೆಯ ಶತಮಾನದಲ್ಲಿನ ಒಬ್ಬ ಬೆಲ್ಜಿಯನ್ ರಸಾಯನಶಾಸ್ತ್ರಜ್ಞನು ಕೊಚ್ಚಿಕೊಂಡನು!
ಪ್ಯಾಸ್ಚರರ ಸಮಯದಲ್ಲಿ ಆ ವಾಗ್ವಾದವು ವೈಜ್ಞಾನಿಕ ಸಮುದಾಯದಲ್ಲಿ ಕಾವೇರಿದ್ದ ಸ್ಥಿತಿಯಲ್ಲಿತ್ತು. ನಿರ್ಜೀವ ವಸ್ತುವಿನಿಂದ ಜೀವೋತ್ಪತ್ತಿಯಾಗುತ್ತದೆಂಬ ವಾದದ ಪ್ರತಿಪಾದಕರನ್ನು ಎದುರಿಸುವುದು ಒಂದು ನಿಜವಾದ ಪಂಥಾಹ್ವಾನವಾಗಿತ್ತು. ಆದರೆ ಹುದುಗೆಬ್ಬಿಸುವಿಕೆಯ ಕುರಿತಾದ ತಮ್ಮ ಸಂಶೋಧನೆಯ ಫಲವಾಗಿ ಪ್ಯಾಸ್ಚರ್ ಏನನ್ನು ಕಲಿತಿದ್ದರೊ, ಅದರಿಂದಾಗಿ ಅವರು ಆತ್ಮವಿಶ್ವಾಸವುಳ್ಳವರಾಗಿದ್ದರು. ಆದುದರಿಂದ, ನಿರ್ಜೀವ ವಸ್ತುವಿನಿಂದ ಜೀವೋತ್ಪತ್ತಿಯಾಗುವ ವಿಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವ ಉದ್ದೇಶದಿಂದ ಅವರು ಪ್ರಯೋಗಗಳನ್ನು ನಡಿಸಿದರು.
ಹಂಸದ ಕತ್ತಿನಂತಹ (ಹೊರಬಿಡುವ ಕೊಂಕು ತುದಿ) ಫ್ಲಾಸ್ಕ್ಗಳನ್ನು ಉಪಯೋಗಿಸಿ ಮಾಡಿದ ಅವರ ಪ್ರಯೋಗವು, ಅವರ ಅತಿ ಪ್ರಸಿದ್ಧವಾದ ಪ್ರಯೋಗಗಳಲ್ಲಿ ಒಂದಾಗಿದೆ. ತೆರೆದ ಬಾಯಿ ಇರುವ ಒಂದು ಫ್ಲಾಸ್ಕಿನಲ್ಲಿ ಬಿಡಲ್ಪಟ್ಟಿರುವ ಒಂದು ದ್ರವರೂಪ ಪುಷ್ಟಿಕಾರಕವು ಶೀಘ್ರವಾಗಿ ಕ್ರಿಮಿಗಳಿಂದ ಕಲುಷಿತವಾಗುತ್ತದೆ. ಆದಾಗಲೂ, ಒಂದು ಹಂಸದ ಕತ್ತಿನಂತಹ ಆಕಾರದಲ್ಲಿ ಕೊನೆಗೊಳ್ಳುವ ಒಂದು ಫ್ಲಾಸ್ಕ್ನಲ್ಲಿ ಶೇಖರಿಸಿಡಲ್ಪಟ್ಟಿರುವಾಗ, ಅದೇ ದ್ರವರೂಪದ ಪುಷ್ಟಿಕಾರಕವು ಕಲುಷಿತವಾಗದೆ ಉಳಿಯುತ್ತದೆ. ಇದು ಹೀಗೇಕೆ?
ಪ್ಯಾಸ್ಚರರ ವಿವರಣೆಯು ಸರಳವಾಗಿತ್ತು: ಹಂಸದ ಕತ್ತಿನಂತಹ ಭಾಗವನ್ನು ದಾಟಿದ ಬಳಿಕ, ಗಾಳಿಯಲ್ಲಿರುವ ಬ್ಯಾಕ್ಟೀರಿಯಾವು ಗಾಜಿನ ಮೇಲ್ಮೈಯ ಮೇಲೆ ಶೇಖರವಾಗುತ್ತದೆ, ಆದುದರಿಂದ ಗಾಳಿಯು ದ್ರವವನ್ನು ತಲಪುವಷ್ಟರಲ್ಲಿ ಅದು ಕ್ರಿಮಿಶುದ್ಧವಾಗಿರುತ್ತದೆ. ತೆರೆದ ಫ್ಲಾಸ್ಕಿನಲ್ಲಿ ಬೆಳೆಯುವ ಕ್ರಿಮಿಗಳು, ದ್ರವರೂಪದ ಪುಷ್ಟಿಕಾರಕದಿಂದ ತನ್ನಿಂದ ತಾನೇ ಉತ್ಪಾದಿಸಲ್ಪಡುವುದಿಲ್ಲ, ಬದಲಾಗಿ ಗಾಳಿಯ ಮೂಲಕ ರವಾನಿಸಲ್ಪಡುತ್ತವೆ.
ಸೂಕ್ಷ್ಮದರ್ಶಕೀಯ ಜೀವಿಗಳ ವಾಹಕದೋಪಾದಿ ಗಾಳಿಯ ಪ್ರಮುಖತೆಯನ್ನು ತೋರಿಸಲು, ಪ್ಯಾಸ್ಚರ್, ಫ್ರೆಂಚ್ ಆ್ಯಲ್ಪ್ಸ್ ಪರ್ವತಗಳಲ್ಲಿರುವ ಒಂದು ನೀರ್ಗಲ್ಲ ನದಿಯಾದ ಮರ್ ಡಾ ಗ್ಲೇಸ್ ಎಂಬಲ್ಲಿಗೆ ಹೋದರು. 1,800 ಮೀಟರುಗಳ ಎತ್ತರದಲ್ಲಿ, ಅವರು ತಮ್ಮ ಬಿಗಿಯಾಗಿ ಮುಚ್ಚಿದ ಫ್ಲಾಸ್ಕ್ಗಳನ್ನು ತೆರೆದು, ಗಾಳಿಗೊಡ್ಡಿದರು. 20 ಫ್ಲಾಸ್ಕ್ಗಳಲ್ಲಿ, ಒಂದೇ ಒಂದು ಕಲುಷಿತವಾಯಿತು. ಅನಂತರ ಅವರು ಜ್ಯುರಾ ಪರ್ವತಗಳ ತಪ್ಪಲಿಗೆ ಹೋಗಿ ಅದೇ ಪ್ರಯೋಗವನ್ನು ನಡಿಸಿದರು. ಇಲ್ಲಿ, ತುಂಬ ಕಡಿಮೆ ಎತ್ತರದಲ್ಲಿ, ಎಂಟು ಫ್ಲಾಸ್ಕ್ಗಳು ಕಲುಷಿತವಾದವು. ಹೀಗೆ, ಹೆಚ್ಚು ಎತ್ತರಗಳಲ್ಲಿನ ಶುದ್ಧವಾದ ಗಾಳಿಯಿಂದಾಗಿ, ಕಲುಷಿತಗೊಳ್ಳುವ ಅಪಾಯವು ಕಡಿಮೆಯಾಗಿತ್ತೆಂಬುದನ್ನು ಅವರು ರುಜುಪಡಿಸಿದರು.
ಜೀವವು, ಈ ಮುಂಚೆ ಅಸ್ತಿತ್ವದಲ್ಲಿದ್ದ ಜೀವದಿಂದ ಮಾತ್ರವೇ ಬರುತ್ತದೆಂದು, ಅಂತಹ ಪ್ರಯೋಗಗಳ ಮೂಲಕ ಮನಗಾಣುವಂತಹ ರೀತಿಯಲ್ಲಿ ಪ್ಯಾಸ್ಚರ್ ಪ್ರದರ್ಶಿಸಿದರು. ಜೀವವು ಎಂದಿಗೂ ತನ್ನಷ್ಟಕ್ಕೇ ಅಸ್ತಿತ್ವಕ್ಕೆ ಬರುವುದೇ ಇಲ್ಲ.
ಸೋಂಕು ರೋಗಗಳ ವಿರುದ್ಧ ಹೋರಾಟ
ಹುದುಗೆಬ್ಬಿಸುವಿಕೆಯು, ಸೂಕ್ಷ್ಮದರ್ಶಕೀಯ ಜೀವಿಗಳ ಉಪಸ್ಥಿತಿಯನ್ನು ಅವಶ್ಯಪಡಿಸುವುದರಿಂದ, ಸೋಂಕು ರೋಗಗಳ ವಿಷಯದಲ್ಲೂ ಇದು ನಿಜವಾಗಿದ್ದಿರಬೇಕೆಂದು ಪ್ಯಾಸ್ಚರ್ ತರ್ಕಿಸಿದರು. ಫ್ರಾನ್ಸಿನ ದಕ್ಷಿಣ ಭಾಗದಲ್ಲಿದ್ದ ರೇಶ್ಮೆ ಉತ್ಪಾದಕರ ಒಂದು ಗಂಭೀರವಾದ ಆರ್ಥಿಕ ಸಮಸ್ಯೆಯಾಗಿದ್ದ, ರೇಶ್ಮೆಹುಳು ರೋಗದ ಕುರಿತಾದ ಅವರ ಶೋಧನೆಗಳು ಅವರನ್ನು ಸರಿಯೆಂದು ರುಜುಪಡಿಸಿದವು. ಕೆಲವೇ ವರ್ಷಗಳೊಳಗೆ, ಅವರು ಎರಡು ರೋಗಗಳ ಕಾರಣಗಳನ್ನು ಕಂಡುಹಿಡಿದು, ಆರೋಗ್ಯವಂತ ರೇಶ್ಮೆಹುಳುಗಳನ್ನು ಆರಿಸಿಕೊಳ್ಳಲು ಕಟ್ಟುನಿಟ್ಟಾದ ವಿಧಾನಗಳನ್ನು ಪ್ರಸ್ತಾಪಿಸಿದರು. ಇದು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು.
ಕೋಳಿ ಕಾಲೇರಾದ ಕುರಿತು ಅಧ್ಯಯನ ಮಾಡುತ್ತಿದ್ದಾಗ, ಕೆಲವೇ ತಿಂಗಳುಗಳ ವಯಸ್ಸಿನ ಕ್ರಿಮಿಯ ಒಂದು ರಾಶಿಯು, ಕೋಳಿಗಳನ್ನು ಅಸ್ವಸ್ಥಗೊಳಿಸಲಿಲ್ಲ, ಬದಲಾಗಿ ಅವುಗಳನ್ನು ಆ ಅಸ್ವಸ್ಥತೆಯಿಂದ ಕಾಪಾಡಿತೆಂಬುದನ್ನು ಪ್ಯಾಸ್ಚರ್ ಗಮನಿಸಿದರು. ಕಾರ್ಯತಃ, ಅವರು ಆ ಕ್ರಿಮಿಯ ಕೃಶವಾದ, ಅಥವಾ ದುರ್ಬಲವಾದ ರೂಪದೊಂದಿಗೆ ಕೋಳಿಗಳಿಗೆ ಲಸಿಕೆಹಾಕಿಸಸಾಧ್ಯವೆಂದು ಅವರು ಕಂಡುಹಿಡಿದರು.
ಲಸಿಕೆಹಾಕುವಿಕೆಯನ್ನು ಉಪಯೋಗಿಸುವುದರಲ್ಲಿ ಪ್ಯಾಸ್ಚರ್ ಮೊದಲನೆಯವರಾಗಿರಲಿಲ್ಲ. ಅವರಿಗಿಂತ ಮುಂಚೆ ಆಂಗ್ಲವ್ಯಕ್ತಿಯಾದ ಎಡ್ವರ್ಡ್ ಜೆನ್ನರ್ ಅದನ್ನು ಉಪಯೋಗಿಸಿದ್ದನು. ಆದರೆ ಒಂದು ಸಂಬಂಧಿತ ಸೂಕ್ಷ್ಮದರ್ಶಕೀಯ ಜೀವಿಯನ್ನು ಉಪಯೋಗಿಸುವ ಬದಲಿಗೆ, ಒಂದು ಕೃಶವಾದ ರೂಪದಲ್ಲಿ ವಾಸ್ತವವಾದ ರೋಗಕಾರಕವನ್ನು ಉಪಯೋಗಿಸುವುದರಲ್ಲಿ ಪ್ಯಾಸ್ಚರ್ ಮೊದಲನೆಯವರಾಗಿದ್ದರು. ಗೋವು ಮತ್ತು ಕುರಿಗಳಂತಹ ಬಿಸಿರಕ್ತದ ಪ್ರಾಣಿಗಳಲ್ಲಿ ಒಂದು ಸೋಂಕು ರೋಗವಾಗಿರುವ, ನೆರಡಿರೋಗದ (ಆ್ಯನ್ತ್ರಾಕ್ಸ್) ವಿರುದ್ಧವಾದ ಲಸಿಕೆಯನ್ನು ಉಪಯೋಗಿಸುವುದರಲ್ಲಿಯೂ ಅವರು ಯಶಸ್ವಿಯಾಗಿದ್ದರು.
ಇದನ್ನು ಹಿಂಬಾಲಿಸಿ, ಅವರು ರೇಬೀಸ್ ರೋಗದ ವಿರುದ್ಧವಾದ ತಮ್ಮ ಕೊನೆಯ ಮತ್ತು ತೀರ ಪ್ರಸಿದ್ಧವಾದ ಸಂಗ್ರಾಮವನ್ನು ಹೋರಾಡಲು ಮುಂದುವರಿದರು. ಅವರು ಅದನ್ನು ಗ್ರಹಿಸದಿದ್ದರೂ, ರೇಬೀಸ್ ರೋಗವನ್ನು ಎದುರಿಸುವುದರಲ್ಲಿ ಪ್ಯಾಸ್ಚರರು, ಬ್ಯಾಕ್ಟೀರಿಯದಿಂದ ತೀರ ಭಿನ್ನವಾಗಿರುವ ಒಂದು ಕ್ಷೇತ್ರದೊಂದಿಗೆ ವ್ಯವಹರಿಸುತ್ತಿದ್ದರು. ಈಗ ಅವರು ವೈರಸ್ಗಳೊಂದಿಗೆ ವ್ಯವಹರಿಸುತ್ತಿದ್ದರು. ಒಂದು ಸೂಕ್ಷ್ಮದರ್ಶಕದಿಂದ ಅವರು ನೋಡಸಾಧ್ಯವಿರದ ಒಂದು ಕ್ಷೇತ್ರ.
ಜುಲೈ 6, 1885ರಂದು, ಒಬ್ಬ ತಾಯಿಯು ತನ್ನ ಒಂಬತ್ತು ವರ್ಷ ಪ್ರಾಯದ ಹುಡುಗನನ್ನು ಪ್ಯಾಸ್ಚರರ ಪ್ರಯೋಗಾಲಯಕ್ಕೆ ಕರೆದುಕೊಂಡುಹೋದಳು. ಆ ಮಗು ಆಗತಾನೇ ಒಂದು ಹುಚ್ಚುನಾಯಿಯಿಂದ ಕಚ್ಚಲ್ಪಟ್ಟಿತ್ತು. ತಾಯಿಯ ಬೇಡಿಕೆಯ ಹೊರತೂ, ಪ್ಯಾಸ್ಚರರು ಹುಡುಗನಿಗೆ ಸಹಾಯ ಮಾಡಲು ಹಿಂದೆಮುಂದೆ ನೋಡಿದರು. ಅವರು ಒಬ್ಬ ವೈದ್ಯರಾಗಿರಲಿಲ್ಲ, ಮತ್ತು ಔಷಧಶಾಸ್ತ್ರದ ಕಾನೂನುಬಾಹಿರ ಬಳಕೆಗಾಗಿ ಅಪಾದಿಸಲ್ಪಡುವ ಗಂಡಾಂತರದಲ್ಲಿದ್ದರು. ಅದಕ್ಕಿಂತಲೂ ಹೆಚ್ಚಾಗಿ, ಅವರು ತಮ್ಮ ವಿಧಾನಗಳನ್ನು ಇನ್ನೂ ಒಬ್ಬ ಮನುಷ್ಯನ ಮೇಲೆ ಪ್ರಯೋಗಿಸಿರಲಿಲ್ಲ. ಹಾಗಿದ್ದರೂ, ಅವರು ತಮ್ಮ ಸಹೋದ್ಯಮಿಯಾದ ಡಾ. ಗ್ರಾಂಚಾರನ್ನು ಆ ಎಳೆಯ ಹುಡುಗನಿಗೆ ಲಸಿಕೆಹಾಕುವಂತೆ ಕೇಳಿಕೊಂಡರು. ಅವರು ಲಸಿಕೆಹಾಕಿದರು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದುಕೊಂಡರು. ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಚಿಕಿತ್ಸೆನೀಡಲ್ಪಟ್ಟ 350 ಜನರಲ್ಲಿ, ಕೇವಲ ಒಬ್ಬನು—ಅವನನ್ನು ತೀರ ತಡವಾಗಿ ತರಲಾಯಿತು—ಬದುಕಿ ಉಳಿಯಲಿಲ್ಲ.
ಆ ಸಮಯಾವಧಿಯಲ್ಲಿ, ಪ್ಯಾಸ್ಚರರು ಆಸ್ಪತ್ರೆಯ ಆರೋಗ್ಯಶಾಸ್ತ್ರಕ್ಕೆ ಗಮನವನ್ನು ನೀಡುತ್ತಿದ್ದರು. ಪ್ರಸೂತಿ ಸಂಬಂಧವಾದ ಜ್ವರವು, ಪ್ಯಾರಿಸಿನ ಹೆರಿಗೆ ಆಸ್ಪತ್ರೆಯಲ್ಲಿ ಪ್ರತಿ ವರ್ಷ ಅಧಿಕ ಸಂಖ್ಯೆಯ ಸ್ತ್ರೀಯರ ಮರಣಗಳನ್ನು ಉಂಟುಮಾಡುತ್ತಿತ್ತು. ಪ್ಯಾಸ್ಚರರು ವಿಷಾಣುರಹಿತ ವಿಧಾನಗಳನ್ನು ಮತ್ತು ಕಟ್ಟುನಿಟ್ಟಾದ ಆರೋಗ್ಯಶಾಸ್ತ್ರದ—ವಿಶೇಷವಾಗಿ ಕೈಗಳ ಕುರಿತಾಗಿ—ಸಲಹೆ ನೀಡಿದರು. ಅನಂತರ, ಆಂಗ್ಲ ಶಸ್ತ್ರಚಿಕಿತ್ಸಕನಾದ ಜೋಸೆಫ್ ಲಿಸ್ಟರ್ ಮತ್ತು ಇತರರಿಂದ ನಡೆಸಲ್ಪಟ್ಟ ಶೋಧನೆಗಳು, ಪ್ಯಾಸ್ಚರರ ತೀರ್ಮಾನಗಳ ನಿಷ್ಕೃಷ್ಟತೆಯನ್ನು ರುಜುಪಡಿಸಿದವು.
ಅಮೂಲ್ಯವಾದ ಕೆಲಸ
ಪ್ಯಾಸ್ಚರ್ 1895ರಲ್ಲಿ ಸತ್ತರು. ಆದರೆ ಅವರ ಕೆಲಸವು ಅಮೂಲ್ಯವಾದುದಾಗಿತ್ತು, ಮತ್ತು ಇಂದೂ ನಾವು ಅದರ ಅಂಶಗಳಿಂದ ಲಾಭ ಪಡೆಯುತ್ತೇವೆ. ಈ ಕಾರಣದಿಂದಲೇ ಅವರನ್ನು “ಮಾನವತ್ವದ ಉಪಕಾರಿ”ಯೆಂದು ಕರೆಯಲಾಗಿದೆ. ಅವರ ಹೆಸರು, ಅವರು ಯಾವುದರ ಅನ್ವೇಷಕರು ಎಂದು ಸಾಮಾನ್ಯವಾಗಿ ಅಂಗೀಕರಿಸಲಾಗುತ್ತದೊ, ಅಂತಹ ಲಸಿಕೆಗಳು ಮತ್ತು ಕಾರ್ಯವಿಧಾನಗಳೊಂದಿಗೆ ಈಗಲೂ ಜೋಡಿಸಲ್ಪಟ್ಟಿದೆ.
ರೇಬೀಸ್ ರೋಗದ ಚಿಕಿತ್ಸೆಗಾಗಿ ಪ್ಯಾಸ್ಚರರ ಜೀವಮಾನಕಾಲದಲ್ಲೇ ಪ್ಯಾರಿಸಿನಲ್ಲಿ ಸ್ಥಾಪಿಸಲ್ಪಟ್ಟ ಒಂದು ಸಂಸ್ಥೆಯಾದ, ಲಾಇನ್ಸ್ಟಿಟ್ಯೂಟ್ ಪ್ಯಾಸ್ಚರ್, ಇಂದು ಸೋಂಕು ರೋಗಗಳ ಅಧ್ಯಯನಕ್ಕಾಗಿ ಬಹಳವಾಗಿ ಖ್ಯಾತಿಹೊಂದಿರುವ ಒಂದು ಕೇಂದ್ರವಾಗಿದೆ. ಲಸಿಕೆಗಳು ಮತ್ತು ಔಷಧಗಳ ಕುರಿತಾದ ಅದರ ಕೆಲಸಕ್ಕಾಗಿ ಅದು ನಿರ್ದಿಷ್ಟವಾಗಿ ಜ್ಞಾತವಾಗಿದೆ. ಮತ್ತು 1983ರಲ್ಲಿ ಪ್ರೊಫೆಸರ್ ಲೂಕ್ ಮೊಂಟೇನ್ಯಾರ ನಾಯಕತ್ವದಡಿಯಲ್ಲಿ ಅದರ ವಿಜ್ಞಾನಿಗಳ ತಂಡವು, ಏಡ್ಸ್ ವೈರಸನ್ನು ಪ್ರಥಮವಾಗಿ ಪ್ರತ್ಯೇಕಗೊಳಿಸಿದಾಗ, ಇದು ಇನ್ನೂ ಹೆಚ್ಚಾಗಿ ಜ್ಞಾತವಾಯಿತು.
ಪ್ಯಾಸ್ಚರರು ಒಳಗೂಡಿದಂತಹ ಮತ್ತು ಅವರು ವಿಜಯಿಯಾದ, ನಿರ್ಜೀವ ವಸ್ತುವಿನಿಂದ ಜೀವೋತ್ಪತ್ತಿಯಾಗುವ ವಿಷಯದ ಕುರಿತಾದ ವಾಗ್ವಾದವು, ಕೇವಲ ಒಂದು ವೈಜ್ಞಾನಿಕ ದ್ವಂದ್ವಾರ್ಥವಾಗಿರಲಿಲ್ಲ. ಅದು ಕೆಲವು ವಿಜ್ಞಾನಿಗಳು ಅಥವಾ ಬುದ್ಧಿಜೀವಿಗಳು ತಮ್ಮೊಳಗೇ ಚರ್ಚಿಸಲಿಕ್ಕಾಗಿರುವ ಒಂದು ಆಸಕ್ತಿಕರ ವಿಷಯಕ್ಕಿಂತಲೂ ಹೆಚ್ಚಾಗಿತ್ತು. ಅದಕ್ಕೆ ಹೆಚ್ಚು ಮಹತ್ತಾದ ಪ್ರಮುಖತೆಯಿತ್ತು—ಅದು ದೇವರ ಅಸ್ತಿತ್ವದೊಂದಿಗೆ ಸಂಬಂಧಿಸಿರುವ ರುಜುವಾತನ್ನು ಒಳಗೊಂಡಿತು.
ವಿಜ್ಞಾನಗಳಲ್ಲಿ ವಿಶೇಷಜ್ಞನಾಗಿರುವ ಒಬ್ಬ ಫ್ರೆಂಚ್ ತತ್ವಜ್ಞಾನಿಯಾದ ಫ್ರಾನ್ಸ್ವಾ ಡಾಗೊನ್ಯಾ ಅವಲೋಕಿಸುವುದೇನಂದರೆ, ಪ್ಯಾಸ್ಚರರ “ವಿರೋಧಿಗಳಾದ ಭೌತಿಕವಾದಿಗಳೂ ನಾಸ್ತಿಕರೂ, ಒಂದೇ ಜೀವಕಣವುಳ್ಳ ಜೀವಿಯು, ಕೊಳೆಯುತ್ತಿರುವ ಕಣಗಳಿಂದ ಫಲಿಸಸಾಧ್ಯವಿದೆಯೆಂಬುದನ್ನು ತಾವು ರುಜುಪಡಿಸಸಾಧ್ಯವಿದೆಯೆಂದು ನಂಬಿದರು. ಇದು ಅವರಿಗೆ ಒಬ್ಬ ಸೃಷ್ಟಿಕರ್ತನ ಅಸ್ತಿತ್ವವನ್ನು ತಿರಸ್ಕರಿಸುವಂತೆ ಅನುಮತಿಸಿತು. ಆದಾಗಲೂ, ಪ್ಯಾಸ್ಚರ್ರಿಗನುಸಾರ, ಮರಣದಿಂದ ಜೀವಿತಕ್ಕೆ ಯಾವುದೇ ಸಂಭಾವ್ಯ ಮಾರ್ಗವಿರಲಿಲ್ಲ.”
ಈ ದಿನದ ವರೆಗೂ, ಪ್ರಯೋಗನಡೆಸುವಿಕೆ, ಇತಿಹಾಸ, ಜೀವಶಾಸ್ತ್ರ, ಅಗೆತಶಾಸ್ತ್ರ, ಮತ್ತು ಮಾನವಶಾಸ್ತ್ರದಿಂದ ದೊರೆತಿರುವ ಎಲ್ಲ ರುಜುವಾತು, ಪ್ಯಾಸ್ಚರ್ ಏನನ್ನು ಪ್ರದರ್ಶಿಸಿದರೊ ಅದನ್ನು, ಅಂದರೆ ಜೀವವು, ಜೀವವಿಲ್ಲದ ವಸ್ತುವಿನಿಂದ ಅಲ್ಲ, ಬದಲಾಗಿ ಈ ಮುಂಚಿನ ಜೀವದಿಂದ ಮಾತ್ರ ಬರಸಾಧ್ಯವಿದೆಯೆಂಬುದನ್ನು ತೋರಿಸುವುದನ್ನು ಮುಂದುವರಿಸುತ್ತದೆ. ಮತ್ತು ಆದಿಕಾಂಡದಲ್ಲಿನ ಬೈಬಲ್ ವೃತ್ತಾಂತವು ತಿಳಿಸುವಂತೆ, ಜೀವವು “ಅವುಗಳ ಜಾತಿಗನುಸಾರವಾಗಿ” ಪುನರುತ್ಪಾದಿಸುತ್ತದೆಂದೂ ರುಜುವಾತು ಸ್ಪಷ್ಟವಾಗಿ ತೋರಿಸುತ್ತದೆ. ಸಂತತಿಯು ಯಾವಾಗಲೂ, ಹೆತ್ತವರಂತೆ ಅದೇ “ಜಾತಿ” ಅಥವಾ ರೀತಿಯದ್ದಾಗಿರುತ್ತದೆ.—ಆದಿಕಾಂಡ 1:11, 12, 20-25.
ಹೀಗೆ, ತಿಳಿದೊ ತಿಳಿಯದೆಯೊ, ತಮ್ಮ ಕೆಲಸದ ಮೂಲಕ ಲೂಯಿ ಪ್ಯಾಸ್ಚರರು, ವಿಕಾಸವಾದದ ವಿರುದ್ಧವಾಗಿ ಹಾಗೂ ಭೂಮಿಯ ಮೇಲೆ ಜೀವವು ಅಸ್ತಿತ್ವಕ್ಕೆ ಬರಲು ಒಬ್ಬ ಸೃಷ್ಟಿಕರ್ತನ ಸಂಪೂರ್ಣವಾದ ಆವಶ್ಯಕತೆಯ ಕುರಿತಾಗಿ ಬಲವಾದ ರುಜುವಾತು ಮತ್ತು ಸಾಕ್ಷ್ಯವನ್ನು ಒದಗಿಸಿದರು. ನಮ್ರ ಕೀರ್ತನೆಗಾರನು ಏನನ್ನು ಅಂಗೀಕರಿಸಿದನೊ ಅದನ್ನು ಅವರ ಕೆಲಸವು ಪ್ರತಿಬಿಂಬಿಸಿತು: “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು.”—ಕೀರ್ತನೆ 100:3.
[ಪುಟ 34 ರಲ್ಲಿರುವ ಚಿತ್ರಗಳು]
ಮೇಲಿನ ಉಪಕರಣವು, ಬೇಡವಾದ ಸೂಕ್ಷ್ಮದರ್ಶಕೀಯ ಜೀವಿಗಳನ್ನು ಕೊಲ್ಲುತ್ತಾ, ದ್ರಾಕ್ಷಾಮದ್ಯವನ್ನು ಪಾಸ್ಚೀಕರಿಸಲು ಉಪಯೋಗಿಸಲ್ಪಟ್ಟಿತು; ಅದು ಕೆಳಗಿನ ಚಿತ್ರದಲ್ಲಿ ಎತ್ತಿತೋರಿಸಲ್ಪಟ್ಟಿದೆ
[ಪುಟ 35 ರಲ್ಲಿರುವ ಚಿತ್ರ]
ಪ್ಯಾಸ್ಚರರ ಪ್ರಯೋಗಗಳು, ನಿರ್ಜೀವ ವಸ್ತುವಿನಿಂದ ಜೀವೋತ್ಪತ್ತಿಯಾಗುವ ವಾದವನ್ನು ತಪ್ಪೆಂದು ತೋರಿಸಿದವು
[ಪುಟ 33 ರಲ್ಲಿರುವ ಚಿತ್ರ ಕೃಪೆ]
22-4ನೆಯ ಪುಟಗಳಲ್ಲಿರುವ ಎಲ್ಲಾ ಛಾಯಾಚಿತ್ರಗಳು: © Institut Pasteur