ಯೋಗ್ಯ ಸಮತೋಲನವು ನಿಮ್ಮ ಜೀವಿತವನ್ನು ಮಧುರಗೊಳಿಸಬಲ್ಲದು
ಸಹನೆಯು, ಕಾಫಿಯ ಬಟ್ಟಲಿನಲ್ಲಿರುವ ಸಕ್ಕರೆಯಂತಿದೆ. ಸರಿಯಾದ ಅಳತೆಯು ಜೀವಿತಕ್ಕೆ ಮಾಧುರ್ಯವನ್ನು ಕೂಡಿಸಬಲ್ಲದು. ಆದರೆ ನಾವು ಸಕ್ಕರೆಯೊಂದಿಗೆ ತೀರ ಉದಾರತೆಯುಳ್ಳವರಾಗಿರಬಹುದಾದರೂ, ಅನೇಕ ವೇಳೆ ಸಹನೆಯೊಂದಿಗೆ ಜಿಪುಣರಾಗಿರುತ್ತೇವೆ. ಏಕೆ?
ಮಿಷಿಗನ್ ರಾಜ್ಯ ವಿಶ್ವವಿದ್ಯಾನಿಲಯದಲ್ಲಿನ ಅಸೋಸಿಯೇಟ್ ಪ್ರೊಫೆಸರರಾದ, ಆರ್ಥರ್ ಎಮ್. ಮೆಲ್ಸರ್ರು, “ಮಾನವರು ಸಹನೆಯುಳ್ಳವರಾಗಿರಲು ಬಯಸುವುದಿಲ್ಲ” ಎಂದು ಬರೆದರು. “ಸಹಜವಾಗಿ ಬರುವಂಥದ್ದು . . . ಪೂರ್ವಕಲ್ಪಿತ ಅಭಿಪ್ರಾಯವೇ.” ಆದುದರಿಂದ ಅಸಹನೆಯು ಕೇವಲ ಅಲ್ಪಸಂಖ್ಯಾತರನ್ನು ಮಾತ್ರವೇ ಬಾಧಿಸುವ ಒಂದು ವಿಶಿಷ್ಟ ತಪ್ಪಾಗಿರುವುದಿಲ್ಲ; ಮಾನವಕುಲದವರೆಲ್ಲರೂ ಅಪರಿಪೂರ್ಣರಾಗಿರುವುದರಿಂದ, ನಾವೆಲ್ಲರೂ ಸಹಜವಾಗಿಯೇ ಸಂಕುಚಿತ ಸ್ವಭಾವದವರಾಗಿರುತ್ತೇವೆ.—ರೋಮಾಪುರ 5:12ನ್ನು ಹೋಲಿಸಿರಿ.
ಭಾವೀ ಅಧಿಕಪ್ರಸಂಗಿಗಳು
1991ರಲ್ಲಿ, ಟೈಮ್ ಪತ್ರಿಕೆಯು ಅಮೆರಿಕದಲ್ಲಿನ ಸಂಕುಚಿತ ಸ್ವಭಾವದ ಬೆಳವಣಿಗೆಯ ಕುರಿತಾಗಿ ವರದಿಸಿತು. ಆ ಲೇಖನವು, ಪ್ರತಿಯೊಬ್ಬರ ಮೇಲೂ ನಡತೆಯ ತಮ್ಮ ಸ್ವಂತ ಮಟ್ಟಗಳನ್ನು ಹೇರಲು ಪ್ರಯತ್ನಿಸುವ ಜನರ “ಅಧಿಕಪ್ರಸಂಗಿ ಜೀವನಶೈಲಿ”ಯನ್ನು ವರ್ಣಿಸಿತು. ಅನುವರ್ತಿಸದವರು ಬಲಿತೆಗೆದುಕೊಳ್ಳಲ್ಪಟ್ಟಿದ್ದಾರೆ. ದೃಷ್ಟಾಂತಕ್ಕಾಗಿ, ಬಾಸ್ಟನ್ನ ಒಬ್ಬ ಮಹಿಳೆಯು ಪ್ರಸಾಧನವನ್ನು ಹಾಕಿಕೊಳ್ಳಲು ನಿರಾಕರಿಸಿದ್ದರಿಂದ, ತನ್ನ ಕೆಲಸದಿಂದ ತೆಗೆದುಹಾಕಲ್ಪಟ್ಟಳು. ಲಾಸ್ ಎಂಜಲೀಸ್ನ ಒಬ್ಬ ಪುರುಷನು, ತೀರ ಹೆಚ್ಚು ತೂಕವುಳ್ಳವನಾಗಿದ್ದರಿಂದ ಕೆಲಸದಿಂದ ವಜಾಮಾಡಲ್ಪಟ್ಟನು. ಇತರರ ಅನುವರ್ತನೆಯನ್ನು ಮಾಡಲು ಏಕೆ ಅಷ್ಟೊಂದು ಹುರುಪು?
ಸಂಕುಚಿತ ಸ್ವಭಾವದ ಜನರು, ಅಸಮಂಜಸರು, ಸ್ವಾರ್ಥಿಗಳು, ಮೊಂಡರು, ಹಾಗೂ ಉದ್ಧಟತನವುಳ್ಳವರು. ಆದರೂ ಹೆಚ್ಚಿನ ಜನರು ಒಂದು ನಿರ್ದಿಷ್ಟ ಮಟ್ಟದ ವರೆಗೆ ಅಸಮಂಜಸರೂ, ಸ್ವಾರ್ಥಿಗಳೂ, ಮೊಂಡರೂ ಅಥವಾ ಉದ್ಧಟತನವುಳ್ಳವರೂ ಆಗಿರುವುದಿಲ್ಲವೋ? ಈ ಗುಣಗಳು ನಮ್ಮ ವ್ಯಕ್ತಿತ್ವದಲ್ಲಿ ದೃಢವಾಗಿ ನೆಲೆಯೂರುವಲ್ಲಿ, ನಾವು ಸಂಕುಚಿತ ಸ್ವಭಾವದವರಾಗಿರುವೆವು.
ನಿಮ್ಮ ಕುರಿತಾಗಿ ಏನು? ಬೇರೆ ಯಾರೋ ಒಬ್ಬನ ಆಹಾರದಲ್ಲಿನ ರುಚಿಗೆ ನೀವು ಅಸಮ್ಮತಿಯನ್ನು ಸೂಚಿಸುತ್ತೀರೋ? ಮಾತುಕತೆಯಲ್ಲಿ, ನೀವು ಸಾಮಾನ್ಯವಾಗಿ ಅಂತಿಮ ಅಭಿಪ್ರಾಯವನ್ನು ಹೇಳಲು ಬಯಸುತ್ತೀರೋ? ಒಂದು ಗುಂಪಿನೋಪಾದಿ ಕಾರ್ಯಮಾಡುತ್ತಿರುವಾಗ, ನಿಮ್ಮ ಆಲೋಚನಾ ರೀತಿಯನ್ನು ಅವರು ಅನುಸರಿಸಬೇಕೆಂದು ನೀವು ಅಪೇಕ್ಷಿಸುತ್ತೀರೋ? ಹಾಗಿರುವಲ್ಲಿ, ನಿಮ್ಮ ಕಾಫಿಗೆ ತುಸು ಸಕ್ಕರೆಯನ್ನು ಸೇರಿಸುವುದು ಸ್ವಲ್ಪ ಒಳಿತನ್ನು ಮಾಡಬಹುದು!
ಆದರೆ, ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಂತೆ, ಅಸಹನೆಯು ಶತ್ರುತ್ವದ ಪೂರ್ವಕಲ್ಪಿತ ಅಭಿಪ್ರಾಯದ ರೂಪದಲ್ಲಿ ಬರಸಾಧ್ಯವಿದೆ. ಅಸಹನೆಯನ್ನು ವರ್ಧಿಸುವಂತೆ ಮಾಡಸಾಧ್ಯವಿರುವ ಒಂದು ಅಂಶವು, ಅತಿಯಾದ ವ್ಯಾಕುಲತೆಯೇ.
“ಸಂದಿಗ್ಧತೆಯ ಗಾಢವಾದೊಂದು ಭಾವನೆ”
ಮಾನವಕುಲ ಶಾಸ್ತ್ರಜ್ಞರು, ಎಲ್ಲಿ ಹಾಗೂ ಹೇಗೆ ಜಾತೀಯ ಪೂರ್ವಕಲ್ಪಿತ ಅಭಿಪ್ರಾಯವು ವ್ಯಕ್ತವಾಗಿತ್ತು ಎಂಬುದನ್ನು ಕಂಡುಹಿಡಿಯಲು, ಮಾನವಕುಲದ ಗತ ವಿಷಯವನ್ನು ಅಧ್ಯಯನಿಸಿದ್ದಾರೆ. ಈ ರೀತಿಯ ಅಸಹನೆಯು ಎಲ್ಲ ಸಮಯದಲ್ಲೂ ವ್ಯಕ್ತವಾಗುವುದಿಲ್ಲ, ಇಲ್ಲವೇ ಪ್ರತಿಯೊಂದು ದೇಶದಲ್ಲಿಯೂ ಒಂದೇ ಮಟ್ಟದಲ್ಲಿ ಪ್ರದರ್ಶಿಸಲ್ಪಡುವುದಿಲ್ಲ ಎಂಬುದನ್ನು ಅವರು ಕಂಡುಕೊಂಡರು. ಜರ್ಮನ್ ಸ್ವಾಭಾವಿಕ ವಿಜ್ಞಾನ ಪತ್ರಿಕೆಯಾದ ಗೆಯೋ ವರದಿಸುತ್ತದೇನೆಂದರೆ, ಜಾತೀಯ ವಿರೋಧವು, ಬಿಕ್ಕಟ್ಟುಗಳ ಸಮಯಗಳಲ್ಲಿ, “ಜನರಿಗೆ ಸಂದಿಗ್ಧತೆಯ ಗಾಢವಾದೊಂದು ಭಾವನೆ ಹಾಗೂ ತಮ್ಮ ಗುರುತಿಗೆ ಬೆದರಿಕೆಯೊಡ್ಡಲ್ಪಟ್ಟಿದೆ ಎಂಬ ಭಾವ”ವಿರುವಾಗ ತೋರಿಬರುತ್ತದೆ.
ಅಂಥ “ಸಂದಿಗ್ಧತೆಯ ಗಾಢವಾದೊಂದು ಭಾವನೆ”ಯು ಇಂದು ವ್ಯಾಪಕವಾಗಿದೆಯೋ? ಖಂಡಿತವಾಗಿಯೂ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಮಾನವಕುಲವು ಬಿಕ್ಕಟ್ಟುಗಳಿಂದ ಸುತ್ತುವರಿಯಲ್ಪಟ್ಟಿದೆ. ನಿರುದ್ಯೋಗ, ಏರುತ್ತಿರುವ ಜೀವನದ ವೆಚ್ಚ, ಮಿತಿಮೀರಿದ ಜನಸಂಖ್ಯೆ, ಓಸೋನ್ ಪದರದ ವಿರೇಚನ, ಪಟ್ಟಣಗಳಲ್ಲಿನ ಪಾತಕ, ಕುಡಿಯುವ ನೀರಿನ ಮಾಲಿನ್ಯ, ಭೌಗೋಲಿಕ ಕಾವೇರುವಿಕೆ—ಇವುಗಳ ವಿಷಯದಲ್ಲಿ ಯಾವುದಕ್ಕಾದರೂ ಕಾಡಿಸುವ ಭಯವು, ವ್ಯಾಕುಲತೆಯನ್ನು ಹೆಚ್ಚಿಸುತ್ತದೆ. ಬಿಕ್ಕಟ್ಟುಗಳು ವ್ಯಾಕುಲತೆಯನ್ನು ಉಂಟುಮಾಡುತ್ತವೆ, ಮತ್ತು ಅನುಚಿತ ವ್ಯಾಕುಲತೆಯು ಅಸಹನೆಗೆ ದಾರಿಮಾಡಿಕೊಡುತ್ತದೆ.
ಉದಾಹರಣೆಗೆ, ಕೆಲವು ಯೂರೋಪಿಯನ್ ದೇಶಗಳಲ್ಲಿರುವಂತೆ, ಎಲ್ಲಿ ಬೇರೆ ಬೇರೆ ಕುಲಸಂಬಂಧವಾದ ಹಾಗೂ ಸಾಂಸ್ಕೃತಿಕ ಗುಂಪುಗಳು ಅಂತರ್ಮಿಶ್ರವಾಗುತ್ತವೋ ಅಲ್ಲಿ ಅಂಥ ಅಸಹನೆಯು ತನ್ನನ್ನು ತೋರ್ಪಡಿಸಿಕೊಳ್ಳುತ್ತದೆ. 1993ರಲ್ಲಿನ ನ್ಯಾಷನಲ್ ಜಿಯೋಗ್ರಾಫಿಕ್ನ ವರದಿಗನುಸಾರ, ಆಗ ಪಾಶ್ಚಿಮಾತ್ಯ ಯೂರೋಪಿಯನ್ ದೇಶಗಳು, 2.2 ಕೋಟಿಗಿಂತಲೂ ಹೆಚ್ಚಿನ ವಲಸೆಗಾರರಿಗೆ ಆತಿಥೇಯವಾಗಿದ್ದವು. ಬೇರೆ ಬೇರೆ ಭಾಷೆ, ಸಂಸ್ಕೃತಿ, ಅಥವಾ ಧರ್ಮದಿಂದ ಬಂದ “ಹೊಸಬರ ಸತತವಾದ ಒಳಬರುವಿಕೆಯಿಂದ ಕಂಗೆಟ್ಟ ಅನಿಸಿಕೆ” ಅನೇಕ ಯೂರೋಪಿಯನರಿಗಾಯಿತು. ಆಸ್ಟ್ರಿಯ, ಇಟಲಿ, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಬ್ರಿಟನ್, ಸ್ಪೆಯ್ನ್, ಮತ್ತು ಸ್ವೀಡನಿನಲ್ಲಿ ವಿದೇಶೀವಿರೋಧ ಭಾವಾತಿರೇಕದಲ್ಲಿ ಹೆಚ್ಚಳವಿದೆ.
ಲೋಕ ಮುಖಂಡರ ಕುರಿತೇನು? 1930ಗಳ ಮತ್ತು 1940ಗಳ ಅವಧಿಯಲ್ಲಿ, ಹಿಟ್ಲರನು ಅಸಹನೆಯನ್ನು ಒಂದು ಸರಕಾರೀ ಕಾರ್ಯನೀತಿಯನ್ನಾಗಿ ಮಾಡಿದನು. ವಿಷಾದಕರವಾಗಿ, ಇಂದು ಕೆಲವು ರಾಜಕೀಯ ಹಾಗೂ ಧಾರ್ಮಿಕ ಮುಖಂಡರು, ತಮ್ಮ ಸ್ವಂತ ಉದ್ದೇಶ ಸಾಧನೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅಸಹನೆಯನ್ನು ಉಪಯೋಗಿಸುತ್ತಾರೆ. ಅಮೆರಿಕ, ಆಸ್ಟ್ರಿಯ, ಐರ್ಲೆಂಡ್, ಫ್ರಾನ್ಸ್, ರಷ್ಯ, ಹಾಗೂ ರ್ವಾಂಡದಂಥ ಸ್ಥಳಗಳಲ್ಲಿ ವಿದ್ಯಮಾನವು ಇದೇ ಆಗಿದೆ.
ಭಾವಶೂನ್ಯತೆಯ ಪಾಶದಿಂದ ದೂರವಿರಿ
ನಮ್ಮ ಕಾಫಿಯಲ್ಲಿ ತೀರ ಕಡಿಮೆ ಸಕ್ಕರೆಯಿರುವಲ್ಲಿ, ಏನೋ ಕಡಿಮೆಯಾಗಿದೆಯೆಂಬುದನ್ನು ನಾವು ಗ್ರಹಿಸುತ್ತೇವೆ; ತೀರ ಹೆಚ್ಚು ಸಕ್ಕರೆಯಿರುವಲ್ಲಿ ನಮ್ಮ ಬಾಯಲ್ಲಿ ಓಕರಿಕೆಯನ್ನುಂಟುಮಾಡುವ ಸಿಹಿರುಚಿಯಿರುತ್ತದೆ. ಸಹನೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅಮೆರಿಕದ ಕಾಲೇಜೊಂದರಲ್ಲಿ ಕಲಿಸುವ ಒಬ್ಬ ಮನುಷ್ಯನ ಅನುಭವವನ್ನು ಪರಿಗಣಿಸಿರಿ.
ಕೆಲವು ವರ್ಷಗಳ ಹಿಂದೆ, ಡೇವಿಡ್ ಆರ್. ಕಾರ್ಲೆನ್ ಜೂನಿಯರ್, ತರಗತಿ ಚರ್ಚೆಯನ್ನು ಪ್ರಚೋದಿಸಲು, ಸರಳವಾದರೂ ಪ್ರಭಾವಕಾರಿಯಾದ ಒಂದು ವಿಧವನ್ನು ಕಂಡುಕೊಂಡನು. ತನ್ನ ವಿದ್ಯಾರ್ಥಿಗಳು ವಿರೋಧಿಸುವರೆಂಬುದನ್ನು ತಿಳಿದಿದ್ದು, ಅವನು ಅವರ ವೀಕ್ಷಣೆಗಳಿಗೆ ಸವಾಲೆಸೆಯುವ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟ ಒಂದು ಹೇಳಿಕೆಯನ್ನು ಹೇಳುತ್ತಿದ್ದನು. ಫಲಿತಾಂಶವು ಉತ್ಸಾಹಭರಿತ ಚರ್ಚೆಯಾಗಿತ್ತು. ಆದರೂ ಅದೇ ವಿಧಾನವು ಇನ್ನು ಮುಂದೆ ಪರಿಣಾಮಕಾರಿಯಾಗಿರಲಿಲ್ಲವೆಂದು, 1989ರಲ್ಲಿ ಕಾರ್ಲೆನ್ ಬರೆದನು. ಏಕೆ ಪರಿಣಾಮಕಾರಿಯಾಗಿರಲಿಲ್ಲ? ಅವನು ಹೇಳಿದ ವಿಷಯವನ್ನು ವಿದ್ಯಾರ್ಥಿಗಳು ಇನ್ನೂ ಸಮ್ಮತಿಸದಿದ್ದರೂ, ಅವರು ವಾಗ್ವಾದಮಾಡಲು ಮುಂದೆ ತೊಂದರೆ ತೆಗೆದುಕೊಳ್ಳಲಿಲ್ಲ. ಅವರು “ಸಂದೇಹವಾದಿಗಳ ನಿಶ್ಚಿಂತ ಸಹನೆ”ಯನ್ನು—ನಿರಾತಂಕ, ತಾತ್ಸಾರ ಮನೋಭಾವವನ್ನು ಸ್ವೀಕರಿಸಿದ್ದರು ಎಂದು ಕಾರ್ಲೆನ್ ವಿವರಿಸಿದನು.
ತಾತ್ಸಾರ ಮನೋಭಾವವು ಸಹನೆಗೆ ಸಮಾನವಾಗಿರುತ್ತದೋ? ಬೇರೆಯವರು ಏನು ಯೋಚಿಸುತ್ತಾರೆ ಅಥವಾ ಮಾಡುತ್ತಾರೆ ಎಂಬುದನ್ನು ಯಾರೊಬ್ಬರೂ ಚಿಂತಿಸದಿರುವಲ್ಲಿ, ಯಾವ ಆದರ್ಶ ಮಟ್ಟಗಳೂ ಇರುವುದಿಲ್ಲ. ಆದರ್ಶ ಮಟ್ಟಗಳ ಅನುಪಸ್ಥಿತಿಯು ಭಾವಶೂನ್ಯತೆಯಾಗಿದೆ—ಆಸಕ್ತಿಯ ಸಂಪೂರ್ಣ ಕೊರತೆ. ಅಂಥ ಒಂದು ಪರಿಸ್ಥಿತಿ ಹೇಗೆ ಆಗಸಾಧ್ಯವಿದೆ?
ಪ್ರೊಫೆಸರ್ ಮೆಲ್ಸರ್ಗೆ ಅನುಸಾರ, ಅನೇಕ ವಿಭಿನ್ನ ವರ್ತನೆಯ ಆದರ್ಶ ಮಟ್ಟಗಳನ್ನು ಸ್ವೀಕರಿಸುವ ಸಮಾಜವೊಂದರಲ್ಲಿ ಭಾವಶೂನ್ಯತೆಯು ಹರಡಬಲ್ಲದು. ಎಲ್ಲ ರೀತಿಯ ನಡತೆಯು ಸ್ವೀಕಾರಯೋಗ್ಯವೂ, ಪ್ರತಿಯೊಂದು ವಿಷಯವು ಕೇವಲ ವೈಯಕ್ತಿಕ ಆಯ್ಕೆಯ ಒಂದು ವಿಷಯವಾಗಿದೆಯೆಂದೂ ಜನರು ನಂಬುತ್ತಾರೆ. ಸ್ವೀಕಾರಯೋಗ್ಯವಾಗಿರುವ ಹಾಗೂ ಸ್ವೀಕಾರಯೋಗ್ಯವಾಗಿರದ ವಿಷಯಗಳ ಕುರಿತು ಆಲೋಚಿಸುವುದಕ್ಕೆ ಮತ್ತು ಪ್ರಶ್ನಿಸುವುದಕ್ಕೆ ಬದಲು, ಜನರು “ಅನೇಕ ವೇಳೆ ಯೋಚಿಸುವುದೇ ಬೇಡವೆಂಬುದನ್ನು ಕಲಿಯುತ್ತಾರೆ.” ಅವರಿಗೆ ಇತರರ ಅಸಹನೆಯನ್ನು ಧೈರ್ಯದಿಂದ ತಡೆಯಲು ಒಬ್ಬ ವ್ಯಕ್ತಿಯನ್ನು ಪ್ರೇರಿಸುವ ನೈತಿಕ ಶಕ್ತಿಯ ಕೊರತೆಯಿದೆ.
ನಿಮ್ಮ ಕುರಿತಾಗಿ ಏನು? ಯಾವಾಗಲಾದರೊಮ್ಮೆ ತಾತ್ಸಾರ ಮನೋಭಾವವನ್ನು ನೀವು ಸ್ವೀಕರಿಸುತ್ತಿರುವುದನ್ನು ಗ್ರಹಿಸಿದ್ದೀರೋ? ಅಶ್ಲೀಲವಾದ ಅಥವಾ ಕುಲಸಂಬಂಧಿತ ಹಾಸ್ಯಗಳಿಗೆ ನೀವು ನಗುತ್ತೀರೋ? ಲೋಭ ಅಥವಾ ಅನೈತಿಕತೆಯನ್ನು ಸಮರ್ಥಿಸುವ ವಿಡಿಯೋಗಳನ್ನು ನಿಮ್ಮ ಪ್ರಾಯದ ಮಗನೋ ಮಗಳೋ ವೀಕ್ಷಿಸುವಂತೆ ನೀವು ಅನುಮತಿಸುತ್ತೀರೋ? ನಿಮ್ಮ ಮಕ್ಕಳು ಹಿಂಸಾತ್ಮಕ ಕಂಪ್ಯೂಟರ್ ಆಟಗಳನ್ನು ಆಡಿದರೆ ಪರವಾಗಿಲ್ಲವೆಂದು ನಿಮಗೆ ಅನಿಸುತ್ತದೋ?
ತೀರ ಹೆಚ್ಚು ಸಹಿಸಿಕೊಳ್ಳುವಲ್ಲಿ, ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದು ಯಾರೊಬ್ಬರಿಗೂ ಗೊತ್ತಿಲ್ಲದಿರುವುದರಿಂದ—ಅಥವಾ ಚಿಂತಿಸುವುದಿಲ್ಲವಾದುದರಿಂದ—ಒಂದು ಕುಟುಂಬ ಇಲ್ಲವೇ ಸಮಾಜವು ಕಡುಸಂಕಟವನ್ನು ಕೊಯ್ಯುವುದು. ಅಮೆರಿಕದ ಸೆನೆಟರ್ ಡಾನ್ ಕಾಟ್ಸ್, “ಸಹನೆಯು, ಔದಾಸೀನ್ಯವೆಂದು” ಎಚ್ಚರಿಕೆಯನ್ನಿತ್ತರು. ಸಹನೆಯು ವಿಶಾಲ ಮನೋಭಾವದವರಾಗಿರಲು ನಡೆಸಬಲ್ಲದು, ಅತಿ ಹೆಚ್ಚಿನ ಸಹನೆಯು—ಭಾವಶೂನ್ಯತೆಗೆ—ಪೊಳ್ಳು ತಲೆಯವರಾಗಿರಲು ನಡೆಸಬಲ್ಲದು.
ಹಾಗಾದರೆ, ನಾವು ಯಾವುದನ್ನು ಸಹಿಸಿಕೊಳ್ಳಬೇಕು ಮತ್ತು ಯಾವುದನ್ನು ತಿರಸ್ಕರಿಸಬೇಕು? ಯೋಗ್ಯ ಸಮತೋಲನವನ್ನು ಪಡೆದುಕೊಳ್ಳುವುದಕ್ಕೆ ಯಾವುದು ಕೀಲಿ ಕೈಯಾಗಿದೆ? ಇದು ಮುಂದಿನ ಲೇಖನದ ವಿಷಯವಾಗಿರುವುದು.
[ಪುಟ 6 ರಲ್ಲಿರುವ ಚಿತ್ರ]
ಸನ್ನಿವೇಶಗಳಿಗೆ ಸಮತೋಲನದ ಪ್ರತಿಕ್ರಿಯೆಗಳನ್ನು ತೋರಿಸಲು ಪ್ರಯತ್ನಿಸಿರಿ