ಸಂಘಟಿತ ಅಪರಾಧ ನಿಮ್ಮನ್ನು ಬಾಧಿಸುವ ವಿಧ
ಜಪಾನಿನ ಎಚ್ಚರ! ಸುದ್ದಿಗಾರರಿಂದ
ಮಾಫಿಯ ಕುಟುಂಬವೊಂದರ ದೊರೆ (ನಾಯಕ), ಹೊಸ ಸದಸ್ಯನೊಬ್ಬನ ಬೆರಳನ್ನು ಚುಚ್ಚುತ್ತಾನೆ. ರಕ್ತವು ಒಬ್ಬ “ಸಂತ”ನ ಚಿತ್ರದ ಮೇಲೆ ತೊಟ್ಟಿಕ್ಕುತ್ತದೆ. ಮುಂದೆ, ಆ ಚಿತ್ರವನ್ನು ಬೆಂಕಿ ದಹಿಸಿಬಿಡುತ್ತದೆ. ‘ನೀನು ಈ ಸಂಸ್ಥೆಯ ಯಾವುದೇ ಗುಟ್ಟನ್ನು ರಟ್ಟುಮಾಡುವುದಾದರೆ, ಈ ಸಂತನಂತೆ ನಿನ್ನ ಪ್ರಾಣವು ಸುಡುವುದು,’ ಎನ್ನುತ್ತಾನೆ ದೊರೆ ಆ ಯುವಕನಿಗೆ.
ಮೌನನೀತಿ—ಇಟ್ಯಾಲ್ಯನ್ ಭಾಷೆಯಲ್ಲಿ ಓಮೆರ್ಟಾ—ಅನೇಕ ವರುಷಗಳಲ್ಲಿ ಸಂಘಟಿತ ಅಪರಾಧವನ್ನು ಹೆಚ್ಚುಕಡಮೆ ಭೂಗತವಾಗಿರಿಸಿತು. ಆದರೆ ಇಂದು, ಕೆಲವು ದೊಂಬಿಗಾರರು ಗುಪ್ತ ಮಾಹಿತಿದಾರರಾಗುವಾಗ, ಅಪರಾಧ ಗ್ಯಾಂಗ್ಗಳು ಎಲ್ಲೆಲ್ಲಿಯೂ ಮುಖ್ಯಶೀರ್ಷಿಕೆಗಳಾಗುತ್ತಿವೆ. ಈ ಪೆಂಟೀಟೀ ಅಥವಾ ಮಾಫಿಯ ಸ್ವಪಕ್ಷತ್ಯಾಗಿಗಳಿಂದ ಅಪವಾದ ಹೊರಿಸಲ್ಪಟ್ಟವರಲ್ಲಿ ಅತ್ಯಂತ ಪ್ರಧಾನನಾದ ವ್ಯಕ್ತಿಯು, ಏಳು ಬಾರಿ ಇಟೆಲಿಯ ಪ್ರಧಾನ ಮಂತ್ರಿಯಾಗಿದ್ದು ಈಗ ಮಾಫಿಯ ಸಂಬಂಧಗಳ ಕಾರಣ ವಿಚಾರಣೆಗೊಳಗಾಗುತ್ತಿರುವ ಜೂಲ್ಯೊ ಆಂಡ್ರೆಆಟಿ.
ಅಪರಾಧ ಸಂಘಗಳು ಎಲ್ಲೆಡೆಗಳಲ್ಲಿಯೂ ತಮ್ಮ ಸ್ಪರ್ಶಾಂಗಗಳನ್ನು ಸಕಲ ವೃತ್ತಿಗಳ ಮೇಲೆ ಹರಡಿವೆ: ಇಟೆಲಿ ಮತ್ತು ಅಮೆರಿಕದಲ್ಲಿ, ಕೋಸಾ ನಾಸ್ಟ್ರಾ ಎಂದೂ ಕರೆಯಲ್ಪಡುವ ಮಾಫಿಯ; ದಕ್ಷಿಣ ಅಮೆರಿಕದಲ್ಲಿ ಡ್ರಗ್ ಕಾರ್ಟೆಲ್ಸ್ ಎಂಬ ಮಾದಕ ಪದಾರ್ಥ ಒಕ್ಕೂಟಗಳು; ಚೈನದ ಮುಕ್ಕೂಟಗಳು (ಟ್ರೈಆ್ಯಡ್ಸ್); ಜಪಾನಿನಲ್ಲಿ ಯಾಕೂಸಾ. ಅವುಗಳ ಕೆಟ್ಟ ಚಟುವಟಿಕೆಗಳು ನಮ್ಮೆಲ್ಲರನ್ನು ಬಾಧಿಸಿ, ಜೀವನವನ್ನು ಹೆಚ್ಚು ದುಬಾರಿಯಾಗಿ ಮಾಡುತ್ತವೆ.
ಅಮೆರಿಕದಲ್ಲಿ, ಮಾಫಿಯ ನ್ಯೂ ಯಾರ್ಕ್ ನಗರವನ್ನು ಐದು ಅಪರಾಧ ಕುಟುಂಬಗಳ ಮಧ್ಯೆ ವಿಂಗಡಿಸಿ, ಸುಲಿಗೆ, ರಕ್ಷಣೆ ಒದಗಿಸುವ ಹೂಟಗಳು, ವಿಪರೀತ ಬಡ್ಡಿಯ ಮೇಲೆ ಸಾಲಕೊಡುವಿಕೆ, ಜೂಜಾಟ, ಮಾದಕ ಪದಾರ್ಥ ವ್ಯಾಪಾರ ಮತ್ತು ವೇಶ್ಯಾವಾಟಿಕೆ—ಇವುಗಳ ಮೂಲಕ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತದೆಂದು ಹೇಳಲಾಗುತ್ತದೆ. ಮಾಫಿಯ ಕುಟುಂಬಗಳಿಗೆ, ಕಚಡ ರವಾನಿಸುವ ವ್ಯಾಪಾರಗಳು, ಟ್ರಕ್ ವ್ಯಾಪಾರ, ಕಟ್ಟಡ ರಚನೆ, ಆಹಾರ ವಿತರಣೆ ಮತ್ತು ಟೆಕ್ಸ್ಟೈಲ್ಸ್ಗಳ ಲೇಬರ್ ಯೂನಿಯನ್ಗಳ ಮೇಲೆ ಬಿಗಿ ಹಿಡಿತವಿದೆಯೆಂದು ಆರೋಪಿಸಲಾಗುತ್ತದೆ. ಲೇಬರ್ ಯೂನಿಯನ್ಗಳ ಮೇಲೆ ಅವುಗಳಿಗಿರುವ ಅಧಿಕಾರದಿಂದ, ಅವು ಕಾರ್ಮಿಕ ವಿವಾದಗಳನ್ನು ಪರಿಹರಿಸಬಲ್ಲವು ಇಲ್ಲವೆ ಒಂದು ಯೋಜನೆಗೆ ಹಾನಿಯನ್ನು ತರಬಲ್ಲವು. ಉದಾಹರಣೆಗೆ, ಒಂದು ಕಟ್ಟಡ ನಿವೇಶನದಲ್ಲಿ, ಒಂದು ದಿನ ಬುಲ್ಡೋಸರ್ ಚಲಿಸುವುದಿಲ್ಲ, ಇನ್ನೊಂದು ದಿನ ತೋಡುಯಂತ್ರದ ಬ್ರೇಕ್ಗಳು ಹಾಳಾಗುತ್ತವೆ ಮತ್ತು ಕಾರ್ಯನಡಿಸುವ ಇಂಜಿನಿಯರರು ಹಾಜರಿದ್ದರೂ ಕೆಲಸಮಾಡುವುದಿಲ್ಲ. ಇವೂ, ಇನ್ನೂ ಹೆಚ್ಚಿನ ವಿಷಯಗಳೂ, ಕಟ್ಟಡದ ಗುತ್ತಿಗೆದಾರನು ಮಾಫಿಯದ ಹಕ್ಕುಕೇಳಿಕೆಗಳಿಗೆ—ಹಣ ಕೊಡುವಿಕೆಗಳಾಗಲಿ, ಕೆಲಸದ ಕಂಟ್ರ್ಯಾಕ್ಟ್ಗಳಾಗಲಿ—ಒಪ್ಪುವ ತನಕ ಮುಂದುವರಿಯುವುವು. ವಾಸ್ತವವೇನಂದರೆ, “ಮಾಫಿಯಕ್ಕೆ ಹಣಕೊಡುವಿಕೆಯು ವ್ಯಾಪಾರಸ್ಥರಿಗೆ ತಕ್ಕ ಕಾಲದ ವಸ್ತು ವಿತರಣೆಯ, ಕಾರ್ಮಿಕ ಶಾಂತಿಯ ಮತ್ತು ಕಡಮೆ ಸಂಬಳದ ಕೆಲಸಗಾರರನ್ನು ಬಳಸುವ ಸಾಮರ್ಥ್ಯದ ಆಶ್ವಾಸನೆಯನ್ನು ಕೊಡಬಲ್ಲದು,” ಎಂದು ಟೈಮ್ ಪತ್ರಿಕೆ ವರದಿಸುತ್ತದೆ.
ಕೊಲಂಬಿಯದಲ್ಲಿ ಎರಡು ಡ್ರಗ್ ಕಾರ್ಟೆಲ್ಗಳು, 1993ರಲ್ಲಿ ಮೆಡಲೀನ್ ಕಾರ್ಟೆಲ್ನ ದೊರೆ ಪಾಬ್ಲೊ ಎಸ್ಕೊಬಾರ್ ಗುಂಡಿಕ್ಕಲ್ಪಡುವ ತನಕ ಪರಸ್ಪರವಾಗಿ ಸ್ಪರ್ಧಿಸಿದವು. ಆ ಬಳಿಕ, ಕಾಲೀ ಕಾರ್ಟೆಲ್ ಜಗತ್ತಿನ ಕೊಕೇಯ್ನ್ ವ್ಯಾಪಾರದ ಏಕಸ್ವಾಮ್ಯವುಳ್ಳದ್ದಾಯಿತು. ಅಮೆರಿಕದಲ್ಲಿಯೇ, 1994ರಲ್ಲಿ 7 ಸಾವಿರ ಕೋಟಿ ಡಾಲರುಗಳನ್ನು ಸಂಪಾದಿಸುತ್ತ, ಅದು ಪ್ರಾಯಶಃ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಘಟಿತ ಅಪರಾಧ ಸಂಘ (ಸಿಂಡಿಕೇಟ್) ಆಗಿ ಪರಿಣಮಿಸಿತು. ಆದರೆ 1995ರಲ್ಲಿ ಅದರ ಮುಖ್ಯನಿಯೋಜಕ ಹೋಸೇ ಸಾಂಟಾಕ್ರೂಸ್ ಲಾಂಡೋನ್ಯೋನ ದಸ್ತಗಿರಿಯಾದಾಗ, ಆ ಕಾರ್ಟೆಲ್ಗೆ ದೊಡ್ಡ ಪೆಟ್ಟು ಬಡಿಯಿತು. ಆದರೂ, ಮುಂದಿನ ದೊರೆಯಾಗಿ ಅಧಿಕಾರ ವಹಿಸಲು ಕಾಯುತ್ತಿರುವ ಒಬ್ಬ ತವಕಿಸುವ ಉತ್ತರಾಧಿಕಾರಿಯೊಬ್ಬನು ಯಾವಾಗಲೂ ಇರುತ್ತಾನೆ.
ಕಬ್ಬಿಣದ ಪರದೆಯು ಹರಿದು ಭಾಗವಾದಾಗ, ರಷ್ಯನ್ ಮಾಫಿಯ ಅಂತಾರಾಷ್ಟ್ರೀಯ ರಂಗಸ್ಥಳವನ್ನು ಪ್ರಥಮವಾಗಿ ಪ್ರವೇಶಿಸಿತು. ಇದರ ಪರಿಣಾಮವಾಗಿ, “ರಷ್ಯದಲ್ಲಿ ಪ್ರತಿಯೊಂದು ವ್ಯಾಪಾರವೂ ಮಾಫಿಯದೊಂದಿಗೆ ವ್ಯವಹರಿಸಲೇಬೇಕು,” ಎಂದು ನ್ಯೂಸ್ವೀಕ್ನಲ್ಲಿ ಉಲ್ಲೇಖಿಸಲಾಗಿರುವ ಒಬ್ಬ ಬ್ಯಾಂಕರ್ ಹೇಳುತ್ತಾನೆ. ನ್ಯೂ ಯಾರ್ಕ್ನ ಬ್ರೈಟನ್ ಬೀಚ್ನಲ್ಲಿಯೂ ರಷ್ಯನ್ ಮಾಫಿಯ ಗ್ಯಾಸೊಲೀನನ್ನು ಒಳಗೊಂಡಿರುವ ಜಟಿಲವಾದ ವಂಚನೆಯ ಯೋಜನೆಗಳಿಂದ ಲಾಭಗಳನ್ನು ಸಂಪಾದಿಸುತ್ತಿದೆಯೆಂದು ವರದಿಸಲಾಗುತ್ತದೆ. ಕಾರ್ ಮಾಲೀಕರು ಇದಕ್ಕೆ ಹಣತೆರಬೇಕಾಗುತ್ತದೆ ಮತ್ತು ಸರಕಾರವು ತೆರಿಗೆಯಲ್ಲಿ ನಷ್ಟವನ್ನು ಅನುಭವಿಸುತ್ತದೆ. ರಷ್ಯನ್ ಗ್ಯಾಂಗ್ಗಳು ಪೂರ್ವ ಯೂರೋಪಿನಲ್ಲಿ ವೇಶ್ಯಾವಾಟಿಕೆಯ ಒಳಕೂಟಗಳನ್ನೂ ನಡೆಸುತ್ತವೆ. ಅವರು ತಮ್ಮ ಅಪರಾಧಗಳಲ್ಲಿ ಹೆಚ್ಚಿನವುಗಳಿಂದ ಕಾನೂನು ಕ್ರಮವಿಲ್ಲದೆ ತಪ್ಪಿಸಿಕೊಳ್ಳುತ್ತಾರೆ. ಭಾರೀಶಸ್ತ್ರಧಾರಿಗಳಾದ ಮಾಜಿ ಕ್ರೀಡಾಪಟುಗಳನ್ನೂ ಅಫ್ಘಾನ್ ಯುದ್ಧ ಕದೀಮರನ್ನೂ ಎದುರಿಸಲು ಯಾರಿಗೆ ಧೈರ್ಯವಿದೆ?
ಪೌರಸ್ತ್ಯ ದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಜಪಾನಿನಲ್ಲಿ ಮನರಂಜನೆಯ ವ್ಯಾಪಾರದಲ್ಲಿ ತೊಡಗಿರುವವರು, ಸ್ಥಳಿಕ ಯಾಕೂಸಾ ಗುಂಪಿಗೆ ಮನ್ನಣೆ ತೋರಿಸಿ ಅದಕ್ಕೆ ಕಾಣಿಕೆ ತೆರದಿದ್ದರೆ ಸಕಲ ರೀತಿಗಳ ಉಪದ್ರವಗಳನ್ನು ನಿರೀಕ್ಷಿಸಬೇಕಾಗುತ್ತದೆ. ಇಲ್ಲಿಯೂ, ಮದ್ಯಪಾನ ಶಾಲೆಗಳಿಂದ ಮತ್ತು ವೇಶ್ಯೆಯರಿಂದಲೂ ರಕ್ಷಣಾ ಹಣವನ್ನು ಕೇಳಲಾಗುತ್ತದೆ. ಇದಕ್ಕೆ ಕೂಡಿಕೆಯಾಗಿ, ಯಾಕೂಸಾ ಗುಂಪುಗಳು ತಮ್ಮದೇ ಆದ ಕಂಪನಿಗಳನ್ನು ವ್ಯವಸ್ಥಾಪಿಸಿ, ದೊಡ್ಡ ವ್ಯಾಪಾರಗಳಿಂದ ಹಣ ವಸೂಲು ಮಾಡಿ ಮತ್ತು ಪರದೇಶಗಳ ಅಪರಾಧ ಸಂಘಗಳೊಂದಿಗೆ ಸಂಬಂಧವನ್ನಿಟ್ಟುಕೊಳ್ಳುತ್ತ, ಜಪಾನಿನ ಆರ್ಥಿಕ ವ್ಯವಸ್ಥೆಯೊಳಗೆ ಆಳವಾಗಿ ಒಳಹೊಕ್ಕಿವೆ.
ಹಾಂಗ್ ಕಾಂಗ್ ಮತ್ತು ಟೈವಾನ್ಗಳಲ್ಲಿರುವ ಅಪರಾಧ ಸಂಘಗಳು ಸಹ ಲೋಕದಲ್ಲೆಲ್ಲ ತಮ್ಮ ಜಾಲವನ್ನು ಹರಡುತ್ತಿವೆ. ಟ್ರೈಆ್ಯಡ್ಸ್ ಎಂಬ ಅವರ ಹೆಸರೊಂದಲ್ಲದೆ, ಅವರು ಹೇಗೆ ಸಂಘಟಿಸಲ್ಪಟ್ಟಿದ್ದಾರೆ ಎಂಬ ವಿಷಯದಲ್ಲಿ ಕೊಂಚವೇ ತಿಳಿದುಬಂದಿದೆ. ಅವರ ಇತಿಹಾಸ, ಚೈನದ ಅಧಿಕಾರ ವಹಿಸಿದ ಮಂಚೂರಿಯದವರ ವಿರುದ್ಧ ಚೈನದ ಸಂನ್ಯಾಸಿಗಳು ಒಟ್ಟುಸೇರಿದ 17ನೆಯ ಶತಮಾನಕ್ಕೆ ಹಿಂದೆಹೋಗುತ್ತದೆ. ಅವರ ಸದಸ್ಯರು ಸಾವಿರಗಟ್ಟಲೆ ಸಂಖ್ಯೆಯಲ್ಲಿರುವುದಾದರೂ, ಟ್ರೈಆ್ಯಡ್ಸ್ಗಳು ಹಾಂಗ್ ಕಾಂಗ್ನಲ್ಲಿ ಒಂದು ನಿರ್ದಿಷ್ಟ ಅಪರಾಧಕ್ಕೆ ಅಥವಾ ಅಪರಾಧಗಳ ಸರಣಿಗಾಗಿ ತಾತ್ಕಾಲಿಕ ಸಂಘಗಳನ್ನು ರಚಿಸುತ್ತವೆಂದು ಹೇಳಲಾಗುತ್ತದೆ. ಇದು ಪೊಲೀಸರಿಗೆ ಅವರ ಗುರುತನ್ನು ಕಂಡುಹಿಡಿಯುವುದನ್ನು ಕಷ್ಟಕರವಾಗಿ ಮಾಡುತ್ತದೆ. ಹೆರವಿನ್ ವ್ಯಾಪಾರದಿಂದ ಅವರು ಸಾವಿರ ಕೋಟಿಗಟ್ಟಲೆ ಡಾಲರುಗಳನ್ನು ಸಂಪಾದಿಸಿ, ಹಾಂಗ್ ಕಾಂಗನ್ನು ನಕಲಿ ಕ್ರೆಡಿಟ್ ಕಾರ್ಡಿನ ಕೇಂದ್ರವಾಗಿ ಮಾಡಿದ್ದಾರೆ.
ಹೊಸ ಕುಲಸಂಬಂಧೀ ದೊಂಬಿಗುಂಪುಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ವಿಲ್ಯಮ್ ಕ್ಲೈನ್ಕ್ನೆಕ್ಟ್ ಅಮೆರಿಕದಲ್ಲಿನ ಅಪರಾಧದ ಕುರಿತು ಬರೆಯುವುದು: “ಸಂಘಟಿತ ಅಪರಾಧದ ಹೊಸ ಜಗತ್ತಿನಲ್ಲಿ, ಯಾವ ಕುಲಸಂಬಂಧೀ ದೊಂಬಿಗಾರನಿಗೂ ಚೈನದವರಷ್ಟು ದೊಡ್ಡ ಭವಿಷ್ಯತ್ತಿರುವುದಿಲ್ಲ. . . . ಚೈನದ ಅಪರಾಧ ಗುಂಪುಗಳು ದೇಶದ ಸುತ್ತಲೂ ಶೀಘ್ರವಾಗಿ ಅಧಿಕಾರವನ್ನು ಪಡೆಯುತ್ತಿವೆ. . . . ಅವರು ನ್ಯೂ ಯಾರ್ಕ್ನ ಮಾಫಿಯಕ್ಕೆ ಕೇವಲ ದ್ವಿತೀಯ ಸ್ಥಾನದಲ್ಲಿದ್ದಾರೆ.”
ಹಾಂಗ್ ಕಾಂಗ್ನಿಂದ ಹುಟ್ಟಿಬರುವ ನ್ಯಾಯಬದ್ಧವಲ್ಲದ, ಇನ್ನೊಂದು ವಿಧದ ವ್ಯಾಪಾರದ ಕುರಿತು, ಅಮೆರಿಕದ ನ್ಯಾಯ ಇಲಾಖೆಯ ಒಬ್ಬ ಅಧಿಕಾರಿ ಹೇಳುವುದು: “ಅನ್ಯದೇಶಸ್ಥರ ಕಳ್ಳಸಾಗಣೆಯು ಸಂಘಟಿತ ಅಪರಾಧದ ಒಂದು ತೋರಿಬರುವಿಕೆಯಾಗಿದೆ.” ಅಮೆರಿಕವನ್ನು ಪ್ರತಿವರ್ಷ 1,00,000 ಚೀನೀಯರು ನ್ಯಾಯವಿರುದ್ಧವಾಗಿ ಪ್ರವೇಶಿಸುತ್ತಾರೆಂದು ಕೆಲವು ಅಧಿಕಾರಿಗಳು ಅಂದಾಜು ಮಾಡುತ್ತಾರೆ. ಒಂದು ಸಂಪತ್ಭರಿತ ದೇಶಕ್ಕೆ ಹೋಗಲಿಕ್ಕಾಗಿ ಒಬ್ಬ ಪ್ರಾತಿನಿಧಿಕ ಕಳ್ಳವಲಸೆಗಾರನು ಕಡಮೆ ಪಕ್ಷ 15,000 ಡಾಲರುಗಳನ್ನಾದರೂ ಕೊಡಬೇಕು, ಅದರಲ್ಲಿ ಹೆಚ್ಚಿನದ್ದನ್ನು ಅವನು ತೆರುವುದು, ಅವನು ತನ್ನ ಗಮ್ಯಸ್ಥಾನವನ್ನು ತಲುಪಿದ ಮೇಲೆಯೇ. ಹೀಗೆ, ಅನೇಕ ವಲಸೆಗಾರರಿಗೆ ತಮ್ಮ ಸ್ವಪ್ನ ರಾಜ್ಯದ ಜೀವಿತವು, ಬೆವರು ದುಡಿಮೆಯ ಕಾರ್ಖಾನೆಗಳಲ್ಲಿ ಮತ್ತು ವೇಶ್ಯಾಗೃಹಗಳಲ್ಲಿ ಬಲಾತ್ಕೃತ ದುಡಿಮೆಯ ಘೋರಸ್ವಪ್ನವಾಗಿ ಪರಿಣಮಿಸುತ್ತದೆ.
ನೀವು ಅಪರಾಧ ಚಟುವಟಿಕೆಗಳಲ್ಲಿ ಒಳಗೊಳ್ಳದಿರುವುದರಿಂದ, ಸಂಘಟಿತ ಅಪರಾಧಗಳಿಂದ ನೀವು ಬಾಧಿಸಲ್ಪಡುವುದಿಲ್ಲವೆಂದು ನಿಮಗನಿಸಬಹುದು. ಆದರೆ ಅದು ನಿಜವಾಗಿಯೂ ಹಾಗೆಯೊ? ಹಲವಾರು ಭೂಖಂಡಗಳಲ್ಲಿ ಜೀವಿಸುವ ಅನೇಕ ಮಾದಕ ಪದಾರ್ಥ ವ್ಯಸನಿಗಳು, ದಕ್ಷಿಣ ಅಮೆರಿಕದ ಡ್ರಗ್ ಕಾರ್ಟೆಲ್ಗಳು ಸರಬರಾಯಿ ಮಾಡುವ ಅಮಲೌಷಧಗಳಿಗೆ ಹಣ ತೆರಲು ಅಪರಾಧಗಳಿಗಿಳಿಯುತ್ತಾರೆ. ಸಾರ್ವಜನಿಕ ಸೇವಾ ಇಲಾಖೆಗಳ ಕಾಂಟ್ರ್ಯಾಕ್ಟುಗಳು ತಮಗೆ ಸಂಬಂಧಪಟ್ಟ ಕಂಪನಿಗಳಿಗೇ ನೇಮಿಸಲ್ಪಡುವಂತೆ ಸಂಘಟಿತ ಅಪರಾಧ ಲೋಕವು ನೋಡಿಕೊಳ್ಳುತ್ತದೆ; ಈ ಕಾರಣದಿಂದ ಪೌರರಿಗೆ ಹೆಚ್ಚುಹಣ ತೆರಬೇಕಾಗುತ್ತದೆ. ಸಂಘಟಿತ ಅಪರಾಧದ ಕುರಿತ ಅಮೆರಿಕ ರಾಷ್ಟ್ರಾಧ್ಯಕ್ಷರ ಆಯೋಗವು ಒಮ್ಮೆ, ಅಮೆರಿಕದಲ್ಲಿ, “ಸಂಘಟಿತ ಅಪರಾಧವು ವೆಚ್ಚಗಳನ್ನು ಕಳ್ಳತನ, ಸುಲಿಗೆ, ಲಂಚ, ಬೆಲೆ ಗೊತ್ತುಮಾಡುವಿಕೆ ಮತ್ತು ವ್ಯಾಪಾರ ಸ್ಪರ್ಧಾ ನಿಯಂತ್ರಣದ ಮೂಲಕ ವಿಕೃತಗೊಳಿಸುತ್ತದೆ” ಎಂದೂ ಬಳಕೆದಾರರು ಮಾಫಿಯಕ್ಕೆ “ದಂಡತೆರಿಗೆಯ ಅರ್ಥದಲ್ಲಿರುವ” ಹಣವನ್ನು ತೆರುವ ನಿರ್ಬಂಧಕ್ಕೊಳಗಾಗುತ್ತಾರೆಂದೂ ಹೇಳಿತು. ಹೀಗೆ, ಅಪರಾಧದ ಪರಿಣಾಮಗಳಿಂದ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ನಾವೆಲ್ಲರು ಹಣ ತೆರುತ್ತೇವೆ.
ಆದರೆ ಸಂಘಟಿತ ಅಪರಾಧವು ಇಂದು ಏಳಿಗೆ ಹೊಂದುವುದೇಕೆ?
[ಪುಟ 6 ರಲ್ಲಿರುವ ಚೌಕ]
ಮಾಫಿಯ—ಅದರ ಮೂಲಗಳು
“ಮಾಫಿಯವು ಸಿಸಿಲಿಯಲ್ಲಿ ಮಧ್ಯಯುಗಗಳ ಕೊನೆಯ ಭಾಗದಲ್ಲಿ ಹುಟ್ಟಿತು. ಅದು ಆ ದ್ವೀಪದ ವಿವಿಧ ವಿದೇಶೀ ವಿಜಯಿಗಳ—ಉದಾಹರಣೆಗೆ, ಸಾರಸೆನರು, ನಾರ್ಮನರು ಮತ್ತು ಸ್ಪ್ಯಾನಿಯಾರ್ಡರು—ಆಳಿಕೆಯನ್ನು ಉರುಳಿಸಲು ಮೀಸಲಾಗಿಡಲ್ಪಟ್ಟ ಒಂದು ಗುಪ್ತ ಸಂಸ್ಥೆಯಾಗಿ ಕಾರ್ಯನಡೆಸಲು ತೊಡಗಿರಸಾಧ್ಯವಿದೆ. ಮಾಫಿಯದ ಮೂಲವು, ಅನುಪಸ್ಥಿತ ಜಮೀನುದಾರರು ತಮ್ಮ ಜಮೀನುಗಳನ್ನು, ಸಿಸಿಲಿಯ ಹೆಚ್ಚಿನ ಭಾಗದಲ್ಲಿದ್ದ ನಿಯಮರಾಹಿತ್ಯದ ಪರಿಸ್ಥಿತಿಗಳಲ್ಲಿ, ಡಕಾಯಿತರಿಂದ ಕಾಪಾಡಲು ಮಜೂರಿಗೆ ಹಿಡಿದ ಅನೇಕ ಚಿಕ್ಕ ಖಾಸಗಿ ಸೈನ್ಯಗಳಿಂದ ಅಥವಾ ಮಾಫೀಗಳಿಂದ ಬಂದಿದೆ ಮತ್ತು ಅದರ ಸದಸ್ಯರು ಆ ಸೈನ್ಯಗಳಿಂದ ಬಂದರು. 18ನೆಯ ಮತ್ತು 19ನೆಯ ಶತಮಾನಗಳಲ್ಲಿ ಖಾಸಗಿ ಸೈನ್ಯಗಳ ಈ ಶಕ್ತಿಯುತ ಘಾತುಕರು ತಮ್ಮನ್ನು ವ್ಯವಸ್ಥಾಪಿಸಿಕೊಂಡು ಎಷ್ಟು ಪ್ರಬಲರಾದರೆಂದರೆ ಅವರು ಜಮೀನುದಾರರ ವಿರುದ್ಧ ತಿರುಗಿಬಿದ್ದು, ಅನೇಕ ಜಮೀನುಗಳಲ್ಲಿ ಜಮೀನುದಾರರ ಬೆಳೆಯನ್ನು ಕಾಯುವುದಕ್ಕೆ ಪ್ರತಿಯಾಗಿ ಅವರಿಂದ ಹಣವನ್ನು ಸುಲಿಗೆಮಾಡಿ, ಏಕೈಕ ನಿಯಮವಾದರು.” (ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ) ರಕ್ಷಣಾ ಹಣವನ್ನು ವಸೂಲುಮಾಡುವುದು ಅವರ ಕಾರ್ಯರೀತಿಯಾಯಿತು. ಅವರು ತಮ್ಮ ಕಾರ್ಯರೀತಿಯನ್ನು ಅಮೆರಿಕಕ್ಕೆ ತೆಗೆದುಕೊಂಡುಹೋಗಿ, ಅಲ್ಲಿ ಅವರು ಜೂಜಾಟ, ಕಾರ್ಮಿಕ ಕಪಟೋಪಾಯ, ವಿಪರೀತ ಬಡ್ಡಿಯ ಸಾಲ, ಅಮಲೌಷಧದ ಕಳ್ಳ ವ್ಯಾಪಾರ ಮತ್ತು ವೇಶ್ಯಾವಾಟಿಕೆ—ಇವುಗಳೊಳಗೆ ಪ್ರವೇಶಿಸಿದರು.