ಸಂಘಟಿತ ಅಪರಾಧವು ಏಳಿಗೆ ಹೊಂದುವುದೇಕೆ?
ಆ್ಯಲ್ ಕಪೋನ್ ಅಮೆರಿಕದ ಮದ್ಯಪಾನ ನಿಷೇಧ ಯುಗದ (1920-33) ಕುಖ್ಯಾತ ಗ್ಯಾಂಗ್ಸ್ಟರ್, ತಾನು ಕೇವಲ ನಿಯಮ—ಸರಬರಾಯಿ ಮತ್ತು ಗಿರಾಕಿಯ ನಿಯಮ—ವು ಬಯಸಿದ್ದನ್ನು ಒದಗಿಸುವ ಒಬ್ಬ ವ್ಯಾಪಾರಸ್ಥನೆಂದು ಹೇಳಿಕೊಂಡನು. ಜಪಾನಿನ ಅತಿ ದೊಡ್ಡ ಯಾಕೂಸಾ ಸಂಘದ ವಕೀಲನೊಬ್ಬನು ಹೇಳಿದ್ದು: “[ಕಾಮಕ್ರೀಡೆ, ಅಮಲೌಷಧ ಮತ್ತು ಜೂಜಾಟ] ಚಟುವಟಿಕೆಗಳಿಗೆ ಬಲವಾದ ಗಿರಾಕಿಯಿದೆಯೆಂಬುದನ್ನು ನೀವು ಅಲ್ಲಗಳೆಯಸಾಧ್ಯವಿಲ್ಲ.” ಆ ಗಿರಾಕಿಯು ಸಂಘಟಿತ ಅಪರಾಧವನ್ನು ಪೋಷಿಸುತ್ತದೆ. ತಾನು ಅಪರಾಧದ ಬಲಿಯಾಗಬೇಕೆಂದು ಯಾರೂ ಬಯಸದಿದ್ದರೂ, ಕೆಲವರು ಅಪರಾಧ ಸಂಸ್ಥೆಗಳ ಕಡೆ ತಿರುಗಿ ಅವುಗಳ ಸಹಾಯವನ್ನು ಪಡೆದುಕೊಳ್ಳಬಹುದು.
ಉದಾಹರಣೆಗೆ, ಅನೇಕ ದೇಶಗಳಲ್ಲಿ ಆದಾಯದ ಮೂಲವಾಗಿ ದೊಂಬಿಗಾರರು ಉಪಯೋಗಿಸುವ ರಕ್ಷಣಾ ಕಪಟೋಪಾಯ (ಪ್ರೊಟೆಕ್ಷನ್ ರ್ಯಾಕೆಟ್)ಗಳನ್ನು ತೆಗೆದುಕೊಳ್ಳಿ. ಅವು ಕೆಲವು ವೇಳೆ ಪ್ರಾಮಾಣಿಕ ವ್ಯಾಪಾರಸ್ಥರನ್ನು ಗುರಿಹಲಗೆಗಳನ್ನಾಗಿ ಮಾಡುವುದಾದರೂ, ಸಾಮಾನ್ಯವಾಗಿ ಅಗೌರವಾನಿತ್ವ ವ್ಯಾಪಾರಗಳಲ್ಲಿ ತೊಡಗಿರುವವರನ್ನು ಬಲಿತೆಗೆದುಕೊಳ್ಳುತ್ತವೆ. ಟೋಕಿಯೊ ನಗರದ ಶಿನ್ಜೂಕೂನಲ್ಲಿ ವಿಡಿಯೋ ಆಟ ಮಂದಿರದ ಹೆಸರಿನಲ್ಲಿ ತನ್ನ ವ್ಯಾಪಾರವನ್ನು ನಡೆಸುತ್ತಿರುವ, ಒಬ್ಬ ಕಸೀನೋ (ಮೋಜು ಮಂದಿರ) ಧಣಿಯು ಹೇಳಿದ್ದು: “ಒಬ್ಬ ಗುಮಾಸ್ತನಿಗೆ ಚೂರಿ ಇರಿದು 20 ಲಕ್ಷ ಯೆನ್ಗಳು ಕದಿಯಲ್ಪಟ್ಟರೂ ನಾವು ಪೊಲೀಸರನ್ನು ಕರೆಯಲಿಲ್ಲ.” ಏಕಿಲ್ಲ? “ನಾವು ಶಾಸನಬದ್ಧವಲ್ಲದ ಕ್ರಿಯೆ (ಜೂಜಾಟ)ಯಲ್ಲಿ ತೊಡಗಿರುವುದರಿಂದ, ಪೊಲೀಸರೊಂದಿಗೆ ತೊಡರಿಸಿಕೊಳ್ಳಲು ಬಯಸುವುದಿಲ್ಲ. ನಮ್ಮ ಅಂಗಡಿಯಲ್ಲಿ ಒಬ್ಬ ಗಿರಾಕಿ ಉಪದ್ರವ ಕೊಡುವುದಾದರೆ ನಾವು ಯಾಕೂಸಾದವರನ್ನು ಕರೆಯುತ್ತೇವೆ.” ಈ ಕಸೀನೋ ನಡೆಸುವವನು ಯಾಕೂಸಾಕ್ಕೆ ತಿಂಗಳಿಗೆ 4,000 ಡಾಲರ್ಗಳನ್ನು ತೆರುತ್ತಾನೆ. ಇದನ್ನು, ಅದೇ ಸಮಯದಲ್ಲಿ ಅವನು ಶಾಸನಬದ್ಧವಲ್ಲದ ವ್ಯಾಪಾರದಿಂದ ಸಂಪಾದಿಸುವ 3 ಲಕ್ಷ ಡಾಲರುಗಳಿಗೆ ಹೋಲಿಸುವಾಗ ಇದು ಒಂದು ಚಿಕ್ಕ ಮೊತ್ತವಾಗಿದೆ. ಈ ಹಣವೆಲ್ಲ ಬರುವುದಾದರೂ ಎಲ್ಲಿಂದ? ಆ ಶಾಸನಬದ್ಧವಲ್ಲದ ಜೂಜಾಟದಲ್ಲಿ ಸಂತೋಷಿಸುವವರ ಕಿಸೆಗಳಿಂದಲೇ.
ಸಮಸ್ಯೆಗಳನ್ನು ತಪ್ಪಿಸಬಯಸುವ ಗೌರವಾನಿತ್ವ ವ್ಯಾಪಾರಗಳ ವಿಷಯದಲ್ಲಿಯೂ ಇದು ಸತ್ಯ. ಒಂದು ವರ್ಷಕ್ಕೆ ಒಂದೂವರೆ ಕೋಟಿ ಡಾಲರ್ಗಳನ್ನು ಗಳಿಸುವ ಒಬ್ಬ ಪೆಯಿಂಟಿಂಗ್ ಕಂಟ್ರ್ಯಾಕ್ಟರನು ದೊಂಬಿಗಾರರಿಗೆ ಹಣತೆತ್ತು 38 ಲಕ್ಷ ಡಾಲರುಗಳನ್ನು ಉಳಿಸಿದನೆಂದು ಒಂದು ನ್ಯೂ ಯಾರ್ಕ್ ಅಧಿಕಾರವರ್ಗವು ಅಂದಾಜುಮಾಡಿತು. ಕಂಟ್ರ್ಯಾಕ್ಟರನು ಕಡಮೆ ಸಂಬಳದ ಕಾರ್ಮಿಕರನ್ನು ಉಪಯೋಗಿಸುವಂತೆಯೂ ಮಾಫಿಯ ನಿಯಂತ್ರಿತ ಯೂನಿಯನ್ಗಳೊಂದಿಗೆ ಮುಕಾಬಿಲೆಯನ್ನು ತಪ್ಪಿಸುವಂತೆಯೂ ಇದು ಅನುಮತಿಸಿತು. ಜಪಾನಿನಲ್ಲಿ, ಆರ್ಥಿಕ ಏಳಿಗೆಯ ಒಂದು ಸಮಯದಲ್ಲಿ, ಬಂಡವಾಳಗಾರರು ಜಮೀನು ಕೊಳ್ಳುವುದಕ್ಕೆ ಹಣಹಾಕಿ, ದುಬಾರಿಯಾದ ಕಟ್ಟಡಗಳನ್ನು ಕಟ್ಟಲಿಕ್ಕಾಗಿ ಹಳೆಯ ಕಟ್ಟಡಗಳನ್ನು ಮತ್ತು ಅಂಗಡಿಗಳನ್ನು ಕೆಡವಿಹಾಕಿದರು. ನಿವಾಸಿಗಳು ಸ್ಥಳ ಬಿಡದಿದ್ದಾಗ ಮತ್ತು ತಮ್ಮ ಜಮೀನನ್ನು ಮಾರದಿದ್ದಾಗ, ಹಣಹಾಕಿದವರು ಅವರನ್ನು ಎಬ್ಬಿಸಲಿಕ್ಕಾಗಿ ಜೀಆಗೇಆಗಳನ್ನು, ಹೆಚ್ಚಿನದಾಗಿ ಯಾಕೂಸಾ-ಸಂಬಂಧೀ ಕಂಪನಿಗಳನ್ನು ಕರೆಸಿದರು.
ಸಾಲತಕ್ಕೊಳ್ಳುವುದು ಮತ್ತು ಹಣಮಾಡುವುದು ಎಷ್ಟು ಸುಲಭವೆಂದು 80’ಗಳಲ್ಲಿ ಯಾಕೂಸಾ ನೋಡಿದಾಗ, ಅವರು ಕಂಪನಿಗಳನ್ನು ರಚಿಸಿ ಜಮೀನು ಮತ್ತು ಬಂಡವಾಳ ಸಾಹಸ ವ್ಯಾಪಾರಕ್ಕೆ ನುಗ್ಗಿದರು. ಬ್ಯಾಂಕುಗಳೂ ಹಣಕಾಸಿನ ಸಂಘಗಳೂ, ಖಂಡಿತವಾಗಿ ತಮ್ಮ ಸ್ವಂತ ಲಾಭದ ಉದ್ದೇಶದಿಂದ, ಈ ಕಂಪನಿಗಳಿಗೆ ಹಣ ಸುರಿಸಿದವು. ಆದರೆ ವ್ಯಾಪಾರದ ಏರಿಕೆ ಕೊನೆಗೆ ಕುಸಿದುಬಿದ್ದಾಗ, ತಮ್ಮ ಹಣವನ್ನು ಮರುಪಡೆಯುವುದು ಬ್ಯಾಂಕುಗಳಿಗೆ ಕಷ್ಟವಾಯಿತು. ಜಪಾನಿನ ಬಹುಕಾಲದ ಆರ್ಥಿಕ ಹಿಂಜರಿತದ ಕುರಿತು ಮಾತಾಡುತ್ತ, ಒಬ್ಬ ಮಾಜಿ ಪೊಲೀಸ್ ಅಧಿಕಾರಿ ನ್ಯೂಸ್ವೀಕ್ನಲ್ಲಿ ಹೇಳಿದ್ದು: “ವಸೂಲಾಗದಿರುವ ಸಾಲಗಳ ಸಮಸ್ಯೆಗಳು ಬೇಗನೆ ಪರಿಹರಿಸಲು ಸಾಧ್ಯವಾಗದಿರುವುದಕ್ಕೆ ನಿಜಕಾರಣವು, ಅವುಗಳಲ್ಲಿ ಗಮನಾರ್ಹ ಭಾಗವು ಸಂಘಟಿತ ಅಪರಾಧಕ್ಕೆ ಸಂಬಂಧಿಸಿರುವುದೇ.”
ಸಂಘಟಿತ ಅಪರಾಧವು ಬೇರೂರಿ ಹುಲುಸಾಗುವುದು, ಜನರು ಯಾವುದರ ಮೂಲಕವೇ ಆಗಲಿ, ತಮ್ಮ ಕಾಮಾಸಕ್ತಿಗಳನ್ನು ತೃಪ್ತಿಪಡಿಸಲು ಆತುರತೆಯಿಂದಿರುವುದೇ. ಸುಖಾನುಭವ, ಕಾಮಕ್ರೀಡೆ ಮತ್ತು ಹಣದ ದುರಾಶೆಯು ಅಮಲೌಷಧ ವ್ಯಾಪಾರ, ವೇಶ್ಯಾವಾಟಿಕೆ, ಜೂಜಾಟ ಮತ್ತು ವಿಪರೀತ ಬಡ್ಡಿಯ ಸಾಲದ ಬೆಳವಣಿಗೆಗೆ ಫಲವತ್ತಾದ ಜಾಗವನ್ನು ಒದಗಿಸುತ್ತದೆ. ಇಂತಹ ಚಟುವಟಿಕೆಗಳಲ್ಲಿ ಸಿಕ್ಕಿಕೊಳ್ಳುವುದೆಂದರೆ ಸಾಧಾರಣವಾಗಿ ಮಾಫಿಯಕ್ಕೆ ಉಣಿಸಿ ಅದನ್ನು ಕೊಬ್ಬಿಸುವುದೆಂದರ್ಥ. ಸಂಘಟಿತ ಅಪರಾಧವು ತಮ್ಮ ಸ್ವಂತ ಇಂದ್ರಿಯ ಸುಖದ ಬಯಕೆಗಳನ್ನು ತೃಪ್ತಿಗೊಳಿಸುವರೆ ನಿರ್ಧರಿಸಿರುವ ಜನರ ತಗಾದೆಗಳನ್ನು ಒದಗಿಸುತ್ತದೆಂಬುದು ಎಷ್ಟು ಸತ್ಯ!
ಅಣಕು ಕುಟುಂಬ ಪದ್ಧತಿ
ಕಾನೂನುಬಾಹಿರ ಕಾರ್ಯನಡೆಸುವಿಕೆಯ ಕೇಳಿಕೆಗೆ ಕೂಡಿಕೆಯಾಗಿ, ಸಂಘಟಿತ ಅಪರಾಧವು ಯಾವುದರ ಮೇಲೆ ವೃದ್ಧಿಹೊಂದುತ್ತದೊ ಅಂತಹ ಇನ್ನೊಂದು ಅಗತ್ಯ ಇಂದು ಇದೆ. ಜಪಾನಿನ ಅತಿ ದೊಡ್ಡ ಯಾಕೂಸಾ ಸಂಘಗಳಲ್ಲಿ ಒಂದರ ಮಾಜಿ ನಾಯಕನು, ತಾನು ಕಾನೂನುಭ್ರಷ್ಟರನ್ನು ಒಳಸೇರಿಸಿಕೊಂಡು, ಅವರನ್ನು ಪರಾಮರಿಸಿ, ಹೀಗೆ ಅವರು ಅತಿಯಾಗಿ ಕೆಟ್ಟುಹೋಗುವುದರಿಂದ ತಡೆಯುತ್ತಿದ್ದೇನೆಂದು ಪಟ್ಟುಹಿಡಿದು ಹೇಳಿದನು. ತಾನು ಆ ಗ್ಯಾಂಗ್ನ ಸದಸ್ಯರ ತಂದೆಯಾಗಿದ್ದೇನೆಂದು ಅವನು ವಾದಿಸಿದನು. ಹೆಚ್ಚಿನ ಅಪರಾಧ ಸಂಘಗಳು, ಅವು ಯಾವ ರಾಷ್ಟ್ರದವೇ ಆಗಿರಲಿ, ತಮ್ಮ ಸಂಘಗಳನ್ನು ಅಂತಹ ಅಣಕು ಕುಟುಂಬ ಸಂಬಂಧಗಳ ಮೇಲೆ ಕಟ್ಟುತ್ತವೆ.
ದೃಷ್ಟಾಂತಕ್ಕೆ, ಹಾಂಗ್ ಕಾಂಗ್ನ ಒಂದು ಬಡ ಕುಟುಂಬದಿಂದ ಬಂದ ಚೀ ಸನ್a ಎಂಬವನನ್ನು ತೆಗೆದುಕೊಳ್ಳಿ. ಅವನ ತಂದೆ ಅನೇಕ ಸಲ ಕ್ಷುಲ್ಲಕ ವಿಷಯಗಳಿಗಾಗಿ ಅವನಿಗೆ ಉಗ್ರ ರೀತಿಯಲ್ಲಿ ಹೊಡೆಯುತ್ತಿದ್ದನು. ಯುವ ಚೀ ಸನ್ ಪ್ರತಿಭಟಕನಾಗಿ, 12 ವರ್ಷ ಪ್ರಾಯದಲ್ಲಿ ಕುಖ್ಯಾತ ಟ್ರೈಆ್ಯಡ್ಸ್ ತಂಡವನ್ನು ಸೇರಿದನು. ಆ ಅಪರಾಧ ಸಂಸ್ಥೆಯಲ್ಲಿ, ಅವನಿಗೆ “ಅಂಗೀಕರಿಸಲ್ಪಟ್ಟ” ಅನಿಸಿಕೆಯಾದ ಒಂದು ಸ್ಥಳವು ದೊರೆಯಿತು. ಸಶಸ್ತ್ರ ಕಾಳಗದಲ್ಲಿ ಅವನು ತೋರಿಸಿದ ಶೌರ್ಯದ ಕಾರಣ, ಅನೇಕ ಜನರು ಅವನ ಕೈಕೆಳಗಿದ್ದ ಒಂದು ಸ್ಥಾನಕ್ಕೆ ಅವನಿಗೆ ಬೇಗನೆ ಬಡತಿಯಾಯಿತು. ಕೊನೆಗೆ, ಅವನು ಕೇವಲ 17 ವರ್ಷ ವಯಸ್ಸಿನವನಾಗಿದ್ದಾಗ, ಅವನನ್ನು ಜೆಯ್ಲಿಗೆ ಕಳುಹಿಸಲಾಯಿತು.
ಚೀ ಸನ್ನಂತಹ ಅನೇಕರು, ಮನೆಯಲ್ಲಿ ಗೈರುಹಾಜರಿಯಾಗಿದ್ದ ಕುಟುಂಬ ಅಂಟಿಕೆಯನ್ನು ಕಂಡುಕೊಳ್ಳುವ ಸಲುವಾಗಿ ಅಪರಾಧ ಸಂಸ್ಥೆಗಳಿಗೆ ಸೇರುತ್ತಾರೆ. ಸದಸ್ಯರು ಪರಾಮರಿಸುವವರೆಂದು ಹೇಳಿಕೊಂಡರೂ, ಪ್ರತಿಯೊಬ್ಬ ಸದಸ್ಯನು ಮುಖ್ಯವಾಗಿ ತನ್ನಲ್ಲೇ ಆಸಕ್ತನಾಗಿರುವುದನ್ನು ನೋಡುವಾಗ ಎಳೆಯರು ಅನೇಕ ವೇಳೆ ನಿರಾಶರಾಗುತ್ತಾರೆ.
ಬೆಳಕಿನ ದೇವದೂತ
ಜಪಾನಿನ ಅತಿ ದೊಡ್ಡ ಅಪರಾಧ ಸಂಘ, 1992ರಲ್ಲಿ ಹೊಸ ಗ್ಯಾಂಗ್-ವಿರೋಧಿ ಕಾನೂನಿಗನುಸಾರ ಹಿಂಸಾತ್ಮಕ ಗುಂಪೆಂದು ಹೆಸರಿಸಲ್ಪಟ್ಟಾಗ, ಅದರ ನಾಯಕರುಗಳಲ್ಲೊಬ್ಬನು, ತಮ್ಮ ಗುಂಪು “ದೀನರಕ್ಷಕ”ವೆಂದೂ, ದುಷ್ಟತ್ವದ ವಿರುದ್ಧ ಹೋರಾಡುವಂತಹದ್ದೆಂದೂ ವಾದಿಸಿದನು. ಕೋಬಿಯಲ್ಲಿ 1995ರಲ್ಲಿ ಭಯಂಕರ ಭೂಕಂಪವಾದಾಗ, ಅದೇ ಗ್ಯಾಂಗ್, ತಮ್ಮ ನೆರೆಯವರಿಗೆ ಆಹಾರ, ನೀರು ಮತ್ತು ಇತರ ತುರ್ತಿನ ವಸ್ತುಗಳನ್ನು ವಿತರಣೆಮಾಡಿತು. “ಅಂತಹ ಉದಾರ ಭಾವವು ಜಪಾನಿನಲ್ಲಿ, ಯಾಕೂಸಾ ಕಾನೂನುಭ್ರಷ್ಟರು ಗೌರವಾರ್ಹರೆಂಬ ಬಾಳುವ ಕಲ್ಪನೆಯನ್ನು ಬಲಪಡಿಸುವುದು ಖಂಡಿತ,” ಎಂದು ಆಸಾಹೀ ಈವ್ನಿಂಗ್ ನ್ಯೂಸ್ ವರದಿ ಮಾಡಿತು.
ಅಪರಾಧ ಸಂಘಗಳ ಯಜಮಾನರು ಅನೇಕ ವೇಳೆ ಒಂದು ಧರ್ಮಶೀಲ ಮುಮ್ಮುಖವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. ಕೊಲಂಬಿಯದ ಮೆಡಲೀನ್ ಡ್ರಗ್ ಕಾರ್ಟೆಲ್ನ ಕುಪ್ರಸಿದ್ಧ ದೊರೆಯಾದ ಪಾಬ್ಲೋ ಎಸ್ಕೊಬಾರ್, ತನ್ನ ನಗರದ ಜೋಪಡಿನಿವಾಸಿಗಳಿಗೆ, “ಒಬ್ಬ ಕಾಲ್ಪನಿಕ ವ್ಯಕ್ತಿ—ಆಂಶಿಕ ಮೆಸ್ಸೀಯ, ಆಂಶಿಕ ರಾಬಿನ್ಹುಡ್, ಪಾತ್ರಾನ್ ಎಂಬುದರ ಹೆಚ್ಚುಕಡಮೆ ಊಳಿಗಮಾನ್ಯಾರ್ಥದಲ್ಲಿ ಧರ್ಮಪಿತೃ, ಯಜಮಾನ” ಆಗಿದ್ದನೆಂದು ನ್ಯೂಸ್ವೀಕ್ನಲ್ಲಿ ಆ್ಯನ ಕ್ಯಾರಿಗನ್ ಬರೆದರು. ಅವನು ಮಕ್ಕಳಿಗೆ ಜಾರಾಟದ ನೆಲಗಟ್ಟು (ಸ್ಕೇಟಿಂಗ್ ರಿಂಕ್)ಗಳನ್ನು, ಬಡವರಿಗೆ ಹಿತಕರವಾದ ಮನೆಗಳನ್ನು ಕಟ್ಟಿಸಿ, ಬೀದಿಮಕ್ಕಳಿಗೆ ಕೆಲಸಗಳನ್ನು ಕೊಡಿಸಿದನು. ಅವನ ಉದಾರದಾನದಿಂದ ಲಾಭಪಡೆದವರಿಗೆ ಅವನು ಒಬ್ಬ ವೀರನಾಯಕನಾಗಿದ್ದನು.
ತಮ್ಮ ಸಂಘಗಳ ಹಿಂದೆ ಸುರಕ್ಷಿತವಾಗಿ ಅಡಗಿಕೊಳ್ಳುವ ಅಪರಾಧಿಗಳಾದರೊ, ಒಬ್ಬ ಸಾರ್ವತ್ರಿಕ ಕುಶಲಪಾತಕಿಯ ಕೇವಲ ಕೈಗೊಂಬೆಗಳಾಗಿದ್ದಾರೆ. ಅವನು ಯಾರೆಂಬುದನ್ನು ಬೈಬಲು ತಿಳಿಯಪಡಿಸುತ್ತದೆ. “ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವದು ದೊಡ್ಡದಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.” (2 ಕೊರಿಂಥ 11:14, 15) ಇಂದು ಹೆಚ್ಚಿನ ಜನರು ಸೈತಾನನು ನಿಜ ವ್ಯಕ್ತಿಯೆಂದು ನಂಬುವುದಿಲ್ಲ. 19ನೆಯ ಶತಮಾನದ ಫ್ರೆಂಚ್ ಕವಿಯೊಬ್ಬನು ಹೇಳಿದ್ದು: “ಪಿಶಾಚನ ಅತಿ ಜಾಣತನದ ಉದ್ಯೋಗವು, ಅವನು ಅಸ್ತಿತ್ವದಲ್ಲಿಲ್ಲವೆಂದು ನಿಮ್ಮನ್ನು ನಂಬಿಸುವುದೇ ಆಗಿದೆ.” ಅವನು ವೇದಿಕೆಯ ಹಿಂದೆ ಅಡಗಿ, ನಡೆಯುತ್ತಿರುವುದನ್ನು ಕುಟಿಲೋಪಾಯದಿಂದ ನಿರ್ವಹಿಸುತ್ತಾನೆ. ಅಪರಾಧ ಸಂಘಗಳಲ್ಲಿ ಮಾತ್ರವಲ್ಲ, ಇಡೀ ಲೋಕದಲ್ಲಿಯೂ ಹೀಗೆ ಮಾಡುತ್ತಾನೆ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ,” ಎಂದು ಬೈಬಲು ವಿವರಿಸುತ್ತದೆ. ಯೇಸು ಸೈತಾನನನ್ನು, “ಆದಿಯಿಂದ ಕೊಲೆಗಾರನು . . . ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಎಂದು ಹೇಳಿ ವರ್ಣಿಸಿದನು.—1 ಯೋಹಾನ 5:19; ಯೋಹಾನ 8:44.
ಪಿಶಾಚನಾದ ಸೈತಾನನು, 1914ರಿಂದ ವಿಶೇಷವಾಗಿ ಕ್ರಿಯಾಶೀಲನಾಗಿದ್ದಾನೆಂದು ಬೈಬಲ್ ಪ್ರವಾದನೆಗಳು ತಿಳಿಸುತ್ತವೆ. ಆ ವರ್ಷದಿಂದೀಚೆಗೆ, ಅವನು ಸರ್ವಶಕ್ತಿ ಬಳಸಿದ ಯುದ್ಧಕ್ಕಾಗಿ ತನ್ನ ಸೈನ್ಯಗಳನ್ನು ದೇವಜನರ ವಿರುದ್ಧ ಸಜ್ಜುಗೊಳಿಸುತ್ತಾ ಇದ್ದಾನೆ. ಅವನು ಮಾನವಕುಲವನ್ನು ಗಲಿಬಿಲಿಯ ಜಲಾವರ್ತದೊಳಕ್ಕೆ ಎಳೆಯುತ್ತಿದ್ದಾನೆ. ಇಂದು ಅಪರಾಧಗಳೂ ಅಪರಾಧ ಸಂಸ್ಥೆಗಳೂ ವೃದ್ಧಿಯಾಗುವುದಕ್ಕೆ ಅವನೇ ಮುಖ್ಯ ಕಾರಣವಾಗಿದ್ದಾನೆ.—ಪ್ರಕಟನೆ 12:9-12.
ಭೂಮಿಯ ಅಪರಾಧ ಸಂಸ್ಥೆಗಳ ಮರೆಯಲ್ಲಿರುವ ಆ ಕುಶಲಪ್ರಜ್ಞಾಶಾಲಿಯನ್ನು ಎಂದಾದರೂ ಬಂಧಿಸಲಾಗುವುದೊ? ಮಾನವಕುಲವು ಎಂದಾದರೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಅನುಭವಿಸೀತೇ? ಇಂದು ಭೂಮಿಯ ಮೇಲೆ ಸೈತಾನನು ಕಟ್ಟಿರುವ ದುಷ್ಟ ಸಾಮ್ರಾಜ್ಯದಿಂದ ನೀವು ಸ್ವತಂತ್ರರಾಗಬಲ್ಲಿರೊ?
[ಅಧ್ಯಯನ ಪ್ರಶ್ನೆಗಳು]
a ಸೇರಿರುವವರ ಭದ್ರತೆಗಾಗಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 8 ರಲ್ಲಿರುವ ಚೌಕ]
ನಿಮ್ಮ ಕುಟುಂಬವನ್ನು ಸಂರಕ್ಷಿಸುವ ವಿಧ
ಉಲ್ಲಾಸದ ಐಕ್ಯ ಕುಟುಂಬ ವಾತಾವರಣದ ಕೊರತೆಯು, ಯುವ ಜನರನ್ನು ಅಪರಾಧ ಸಂಘಗಳಿಗೆ ಸುಲಭವಾದ ಬಲಿಗಳಾಗುವಂತೆ ಮಾಡಸಾಧ್ಯವಿದೆ. ಅಮೆರಿಕದಲ್ಲಿ, ಗ್ಯಾಂಗ್ ಕೊಲೆಗಳಲ್ಲಿ ಸಿಕ್ಕಿಕೊಳ್ಳುವ ಯುವ ಜನರಲ್ಲಿ ಹೆಚ್ಚಿನವರು ಬಡ ಅಥವಾ ಒಡೆದಿರುವ ಕುಟುಂಬಗಳವರೆಂದು ವರದಿಯಾಗಿದೆ. ನಾರ್ತ್ ಕ್ಯಾರಲೈನದ ಬಂಧನಗೃಹವೊಂದರ ಅಧಿಕಾರಿಯೊಬ್ಬನು ಹೇಳುವುದು: “ನ್ಯೂನ ಸೌಕರ್ಯಗಳ ಕಾರಣ, ತಮ್ಮ ಜೀವನದಲ್ಲಿ ಪ್ರಥಮ ಬಾರಿ ಅನುಭವಿಸುವ, ಧಣಿ ಮತ್ತು ಕಟ್ಟಾ ಅನುಯಾಯಿಯ ಮಧ್ಯೆ ಇರುವ ಬಲವಾದ ಅಂಟಿಕೆ ಮತ್ತು ಒಂದು ಸಂಸ್ಥೆಯ ಸದಸ್ಯನೆಂಬ ಏಕತೆಯ ಭಾವನೆಯಿಂದ ಅವರು ಸುಲಭವಾಗಿ ಪ್ರಚೋದಿಸಲ್ಪಡುತ್ತಾರೆ.”
ಅದೇ ರೀತಿ, ಪೌರಸ್ತ್ಯ ದೇಶದಲ್ಲಿ ತನ್ನ ಧಣಿಗೆ ಜೀವಂತ ರಕ್ಷಾಕವಚವಾಗಬಯಸುವ ಒಬ್ಬ ಯುವ ಯಾಕೂಸಾ ಹೇಳುವುದು: “ಮನೆಯಲ್ಲಿ ಯಾವಾಗಲೂ ನಾನೊಬ್ಬನೇ ಇದ್ದೆ. ನಾವೊಂದು ಕುಟುಂಬವಾಗಿದ್ದರೂ, ನಮ್ಮ ಮಧ್ಯೆ ಮನಬಿಚ್ಚಿ ಮಾತಾಡುವ ಸಾಧ್ಯತೆಯಿದೆಯೆಂದು ನಾನೆಂದೂ ಭಾವಿಸಲಿಲ್ಲ. . . . ಆದರೆ ಈಗ ನಾನು ಗ್ಯಾಂಗ್ ಸದಸ್ಯರೊಂದಿಗೆ ಮನಬಿಚ್ಚಿ ಮಾತಾಡಬಲ್ಲೆ.” ತಮ್ಮನ್ನು ಕುಟುಂಬಸದೃಶ ಪದ್ಧತಿಯೊಳಗೆ ಎಳೆಯುವ ಒಂದು ಅಪರಾಧ ಸಂಸ್ಥೆಯ ಸದಸ್ಯರಿಗೆ ಒಂಟಿಗ ಯುವ ಜನರು ಕೃತಜ್ಞರಾಗುತ್ತಾರೆ.
“ಯಾಕೂಸಾ ಜನರು ತೀರ, ಅತಿ ತೀರ ಪರಾಮರಿಸುವ ಜನರು,” ಎನ್ನುತ್ತಾಳೆ, ಒಕಿನಾವಾದ ಮೋಟರ್ಬೈಕ್ ಹುಡುಗಿಯರ ತಂಡದ ನಾಯಕಿ. “ಅದು ಅವರ ತಂತ್ರವಾಗಿರಬಹುದು, ಆದರೆ ನಾವು ಹಿಂದೆಂದೂ ಮೃದುವಾಗಿ ಉಪಚರಿಸಲ್ಪಡದವರಾಗಿರುವುದರಿಂದ ಅದು ನಮ್ಮ ಮನವೊಲಿಸುತ್ತದೆ.” ಅಪರಾಧಿ ಹುಡುಗಿಯರ ಬಂಧನಗೃಹದ ಉಸ್ತುವಾರಿ ಅಧಿಕಾರಿಯು, ಗ್ಯಾಂಗ್ ಸದಸ್ಯರು “ಹುಡುಗಿಯರ ಹೃದಯಗಳನ್ನು ಆಕರ್ಷಿಸುವುದರಲ್ಲಿ ನಿಜವಾಗಿಯೂ ಉತ್ತಮರು” ಎಂಬುದನ್ನು ದೃಢೀಕರಿಸುತ್ತಾರೆ. ಒಂಟಿ ಹುಡುಗಿಯರು ಮಧ್ಯರಾತ್ರಿಯಲ್ಲಿ ಕರೆದರೂ, ಗ್ಯಾಂಗ್ ಸದಸ್ಯರು ಅವರಲ್ಲಿಗೆ ಓಡಿ, ಯಾವುದೇ ಲೈಂಗಿಕ ಪ್ರಸ್ತಾಪಗಳನ್ನೆತ್ತದೆ, ಅವರಿಗೆ ಹೇಳಲಿಕ್ಕಿರುವುದನ್ನು ಕೇಳುತ್ತಾರೆ.
ಅವರು ಬಲಿಬೀಳಿಸುವ ಯುವ ಜನರು ಪೂರ್ತಿಯಾಗಿ ಆಕರ್ಷಿತರಾಗುವ ತನಕ ಮಾತ್ರ ಅವರ ಪರಾಮರಿಕೆ ಬಾಳುತ್ತದೆ. ಈ ಯುವ ಜನರು ಒಮ್ಮೆ ಸಿಕ್ಕಿಬಿದ್ದರೆಂದರೆ ಅವರನ್ನು ಶೋಷಣೆಗೆ—ಹುಡುಗಿಯರು ವೇಶ್ಯಾವಾಟಿಕೆಯಲ್ಲಿ, ಹುಡುಗರು ಅಪರಾಧ ಸಂಸ್ಥೆಗಳಲ್ಲಿ—ಒಳಗಾಗಿಸಲಾಗುತ್ತದೆ.
ನಿಮ್ಮ ಪ್ರಿಯರನ್ನು ನೀವು ಹೇಗೆ ಸಂರಕ್ಷಿಸಬಲ್ಲಿರಿ?
“ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ,” ಎಂದು ಬೈಬಲು ಸಲಹೆ ನೀಡುತ್ತದೆ. (ಕೊಲೊಸ್ಸೆ 3:21) ಸ್ವಚ್ಛಂದತೆಯನ್ನು ಅನುಮತಿಸಬೇಕೆಂದು ಇದು ಹೆತ್ತವರನ್ನು ಪ್ರೋತ್ಸಾಹಿಸುವುದಿಲ್ಲ. ಒಂದು ಬೈಬಲ್ ಜ್ಞಾನೋಕ್ತಿ ಹೇಳುವುದು: “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” (ಜ್ಞಾನೋಕ್ತಿ 29:15) ಬೈಬಲು ತಂದೆಯರನ್ನೂ ತಾಯಿಯರನ್ನೂ, ಅವರು ಮಕ್ಕಳೊಂದಿಗೆ ವ್ಯವಹರಿಸುವಾಗ ವಿವೇಚನಾಶಕ್ತಿಯನ್ನು ತೋರಿಸಬೇಕೆಂದೂ, ಅವರಿಗೆ ಕಿವಿಗೊಡಬೇಕೆಂದೂ, ಅವರೊಂದಿಗೆ ಸಂವಾದ ಮಾರ್ಗವನ್ನು ತೆರೆದಿಡಬೇಕೆಂದೂ ಪ್ರೋತ್ಸಾಹಿಸುತ್ತದೆ. ಆಗ, ತಾವು ಆಪತ್ತಿನಲ್ಲಿರುವಾಗ ಮಕ್ಕಳು ತಮ್ಮ ಹೆತ್ತವರೊಂದಿಗೆ ನಂಬಿ ಮಾತಾಡುವಂತೆ ಪ್ರೇರಿಸಲ್ಪಡುವರು.
ತೆರೆದ ಸಂವಾದ ಮಾರ್ಗ ಮಾತ್ರವಲ್ಲ, ತಮ್ಮ ಮಕ್ಕಳಿಗೆ ಜೀವನದಲ್ಲಿ ಮಟ್ಟಗಳನ್ನೂ ಹೆತ್ತವರು ಕೊಡುವುದು ಅಗತ್ಯ. ಒಬ್ಬ ತಂದೆಯು ಅಂತಹ ಮಾರ್ಗದರ್ಶಕಗಳನ್ನು ಎಲ್ಲಿ ಕಂಡುಕೊಳ್ಳಬಲ್ಲನು? ಬೈಬಲು ಹೇಳುವುದು: “ತಂದೆಯರಾದ ನೀವು, ನಿಮ್ಮ ಮಕ್ಕಳಿಗೆ ಕಿರುಕುಳಕೊಡದೆ, ಯೆಹೋವನ ಶಿಸ್ತು ಮತ್ತು ಮಾನಸಿಕ ಸರಿಹೊಂದಿಸುವಿಕೆಯಲ್ಲಿ ಅವರನ್ನು ಬೆಳೆಸುತ್ತ ಹೋಗಿರಿ.” (ಎಫೆಸ 6:4, NW) ಕುಟುಂಬ ಬೈಬಲ್ ಅಭ್ಯಾಸ ಕೂಟಗಳ ಮೂಲಕ ನಿಮ್ಮ ಮಕ್ಕಳೊಂದಿಗೆ ಬೈಬಲನ್ನು ಪರ್ಯಾಲೋಚಿಸಲು ಸಮಯವನ್ನು ತೆಗೆದುಕೊಳ್ಳಿರಿ. ಅವರು ಸದಾ ಯೆಹೋವನ ಮಾರ್ಗದರ್ಶನವನ್ನು ತಮ್ಮ ಸ್ವಪ್ರಯೋಜನಾರ್ಥವಾಗಿ ಅನುಸರಿಸುವಂತೆ, ಅವರ ಹೃದಯಗಳಲ್ಲಿ ಯೆಹೋವನಿಗಾಗಿ ಹಿತಕರವಾದ ಭಯವನ್ನು ಮೂಡಿಸಿರಿ.—ಯೆಶಾಯ 48:17.