ಅಪರಾಧರಹಿತವಾದ ಒಂದು ಜಗತ್ತು ಹೇಗೆ?
ಸಂಘಟಿತ ಅಪರಾಧದ ವಿರುದ್ಧ ಹೋರಾಟವು ಲೋಕವ್ಯಾಪಕವಾಗಿ ನಡೆಯುತ್ತಿದೆ. ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿದ್ದು: “ಕೇವಲ ಸ್ವಲ್ಪ ಸಮಯದಲ್ಲೇ ಮಾಫಿಯದ ವಿರುದ್ಧ ನಡೆಯುವ ಹೋರಾಟದಲ್ಲಿ ಗಮನಾರ್ಹವಾದ ಪ್ರಗತಿಯಾಗಿರುತ್ತದೆ. ಇದು ಮುಖ್ಯವಾಗಿ, ಕಪಟೋಪಾಯ ಪ್ರಭಾವಿತ ಮತ್ತು ಭ್ರಷ್ಟ ಸಂಸ್ಥೆಗಳ ಕಾಯಿದೆ ಅಥವಾ ಆರ್ಐಸಿಓ ಎಂಬ ಒಂದು ಕಾಯಿದೆಯ ಕಾರಣವೇ.” ಅದು ಅಪರಾಧ ಸಂಸ್ಥೆಗಳ ಮೇಲೆ ಅಪರಾಧ ನಿರ್ಣಯವನ್ನು ಕೇವಲ ಒಂದೊಂದು ತಪ್ಪುಗಳ ಆಧಾರದ ಮೇಲಲ್ಲ, ಕಪಟೋಪಾಯ ಚಟುವಟಿಕೆಯ ನಮೂನೆಯ ಆಧಾರದ ಮೇರೆಗೆ ಅನುಮತಿಸುತ್ತದೆ. ಇದು ಮತ್ತು ಕದ್ದಾಲಿಕೆಗಳ ಮೂಲಕ ಬರುವ ಮಾಹಿತಿ ಮತ್ತು ತಮಗೆ ಕಡಮೆ ಶಿಕ್ಷೆ ದೊರೆಯುವಂತೆ ಒಳಸುದ್ದಿಯನ್ನು ಕೊಡುವ ಗ್ಯಾಂಗ್ ಸದಸ್ಯರಿಂದ ಬರುವ ಮಾಹಿತಿಯು, ಅಮೆರಿಕದಲ್ಲಿರುವ ಮಾಫಿಯದ ವಿರುದ್ಧ ನಡೆಯುವ ಹೋರಾಟದ ವಿಜಯದಲ್ಲಿ ಪಾತ್ರವನ್ನು ವಹಿಸಿದೆ.
ಇಟೆಲಿಯಲ್ಲಿ ಸಹ, ಅಧಿಕಾರಿಗಳು ಗ್ಯಾಂಗ್ಗಳ ಮೇಲೆ ಜೋರಾಗಿ ದಾಳಿಮಾಡುತ್ತಿದ್ದಾರೆ. ಸಂಘಟಿತ ಅಪರಾಧವು ಬಲಾಢ್ಯವಾಗಿರುವ ಸಿಸಿಲಿ, ಸಾರ್ಡಿನ್ಯ, ಮತ್ತು ಕಲೇಬ್ರಿಯದಲ್ಲಿ ಸಾರ್ವಜನಿಕ ಕಟ್ಟಡಗಳು ಮತ್ತು ಪ್ರಮುಖ ಕ್ಷೇತ್ರಗಳ ಮೇಲೆ ಅಪರಾಧಿಗಳು ಮಾಡುವ ಆಕ್ರಮಣವನ್ನು ತಡೆಗಟ್ಟುವುದಕ್ಕಾಗಿ ಗಸ್ತು ತಿರುಗಲು ಸೈನ್ಯಗಳ ಗುಂಪುಗಳನ್ನು ಕಳುಹಿಸಲಾಗಿದೆ. ಸರಕಾರವು ಇದನ್ನು ಹೆಚ್ಚು ಕಡಮೆ ಒಂದು ಆಂತರಿಕ ಯುದ್ಧದಂತೆ ನೋಡುತ್ತದೆ. ಅಪರಾಧ ಸಂಘಗಳ ಕುಖ್ಯಾತ ದೊರೆಗಳು ಸೆರೆಮನೆಯಲ್ಲಿದ್ದು, ತನ್ನ ಮಾಫಿಯ ಸಂಬಂಧಗಳ ಆಪಾದನೆಯ ಕಾರಣ ಒಬ್ಬ ಮಾಜಿ ಪ್ರಧಾನ ಮಂತ್ರಿ ಕೂಡ ದೋಷಾರೋಪಣೆಗೊಳಗಾಗಿರುವುದರಿಂದ ಇಟೆಲಿಯು ಸ್ವಲ್ಪ ಪರಿಣಾಮಗಳನ್ನು ನೋಡುತ್ತಿದೆ.
ಜಪಾನಿನಲ್ಲಿ, 1992ರ ಮಾರ್ಚ್ 1ರಲ್ಲಿ, ಸಂಘಟಿತ ಅಪರಾಧ-ವಿರುದ್ಧ ಕಾಯಿದೆಯನ್ನು ಜಾರಿಗೆ ತಂದು ಸರಕಾರವು ಯಾಕೂಸಾವನ್ನು ಒತ್ತಡಕ್ಕೊಳಪಡಿಸಿತು. ಈ ಕಾಯಿದೆಗನುಸಾರ, ಒಂದು ಗ್ಯಾಂಗ್ಸ್ಟರ್ ಸಂಸ್ಥೆಯು ಒಮ್ಮೆ ಹಾಗೆಂದು ಕರೆಯಲ್ಪಡುವಲ್ಲಿ, 11 ಹಿಂಸಾತ್ಮಕ ಬಲಾತ್ಕಾರ ಕ್ರಿಯೆಗಳ ಸಂಬಂಧದಲ್ಲಿ ನಿರ್ಬಂಧಕ್ಕೊಳಗಾಗುತ್ತದೆ. ಇದರಲ್ಲಿ ಶಮನ (ಹಷ್) ಹಣ, ರಕ್ಷಣಾ ಕಪಟೋಪಾಯಗಳಲ್ಲಿ ಭಾಗವಹಿಸುವಿಕೆ, ವಿವಾದಗಳನ್ನು ಹಣಕ್ಕಾಗಿ ತೀರ್ಮಾನಿಸುವರೆ ಹಸ್ತಕ್ಷೇಪ—ಇವುಗಳು ಸೇರಿವೆ. ಈ ಕಾಯಿದೆಯನ್ನು ಜಾರಿಗೆ ತರುವ ಮೂಲಕ, ಸರಕಾರವು ಮಾಫಿಯ ಆದಾಯದ ಸಕಲ ಮೂಲಗಳನ್ನು ಪ್ರತಿಬಂಧಿಸುವ ಗುರಿಯನ್ನಿಡುತ್ತದೆ. ಆ ನಿಯಮವು ಅಪರಾಧ ಸಂಸ್ಥೆಗಳನ್ನು ಜೋರಾಗಿ ಬಾಧಿಸಿದೆ. ಕೆಲವು ತಂಡಗಳು ಚೆದರಿಹೋಗಿವೆ ಮತ್ತು ಅಪರಾಧದೊರೆಯೊಬ್ಬನು—ನಿಯಮದ ಕಟ್ಟುನಿಟ್ಟಾದ ಜಾರಿಯ ಕಾರಣವೆಂದು ವ್ಯಕ್ತವಾಗುತ್ತದೆ—ಆತ್ಮಹತ್ಯೆ ಮಾಡಿಕೊಂಡನು.
ಹೌದು, ಸರಕಾರಗಳೂ ಕಾನೂನು ಜಾರಿಗೆ ತರುವ ಏಜನ್ಸಿಗಳೂ ಸಂಘಟಿತ ಅಪರಾಧದ ವಿರುದ್ಧ ಕಠಿನ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೂ, 1994ರಲ್ಲಿ ನಡೆದ, ಲೋಕದ ಸುತ್ತಲಿನ ನ್ಯಾಯಾಧೀಶರ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮೇಳನದ ಕುರಿತು ಮೆಯ್ನೀಚೀ ಡೆಯ್ಲೀ ನ್ಯೂಸ್ ವರದಿಮಾಡಿದಾಗ ಹೇಳಿದ್ದು: “ಸಂಘಟಿತ ಅಪರಾಧವು ಕಾರ್ಯತಃ ಲೋಕದ ಪ್ರತಿಯೊಂದು ಭಾಗದಲ್ಲಿ ವರ್ಷಕ್ಕೆ ಆದಾಯವಾಗಿ ಒಂದು ಲಕ್ಷ ಕೋಟಿ ಡಾಲರುಗಳಷ್ಟನ್ನು ಶೇಖರಿಸುತ್ತಾ, ಹೆಚ್ಚು ಬಲಾಢ್ಯವಾಗಿಯೂ ಹೆಚ್ಚು ಸಂಪತ್ತುಳ್ಳದ್ದಾಗಿಯೂ ಬೆಳೆಯುತ್ತದೆ.” ವಿಷಾದಕರವಾಗಿ, ಅಪರಾಧ ಸಂಘಗಳನ್ನು ಈ ಭೂಮಿಯಿಂದ ತೊಲಗಿಸುವ ಮಾನವ ಪ್ರಯತ್ನಗಳು ಸೀಮಿತವಾಗಿವೆ. ಇದಕ್ಕೆ ಒಂದು ಕಾರಣವೇನೆಂದರೆ, ಅನೇಕ ಸಂದರ್ಭಗಳಲ್ಲಿ ನ್ಯಾಯವು ತತ್ಕ್ಷಣ ಮತ್ತು ಖಾತರಿಯಾಗಿ ದೊರೆಯುವುದಿಲ್ಲ. ಅನೇಕರಿಗೆ, ನಿಯಮಗಳು ಅನೇಕವೇಳೆ ಅಪರಾಧಿಗೆ ಅನುಕೂಲವಾಗಿರುವಂತೆ—ಆಹುತಿಗಲ್ಲ—ಕಾಣುತ್ತವೆ. ಸುಮಾರು 3,000 ವರ್ಷಗಳ ಹಿಂದೆ ಬೈಬಲು ಹೇಳಿದ್ದು: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿತುಳುಕುವದು.”—ಪ್ರಸಂಗಿ 8:11.
ಅಪರಾಧ ಸಂಸ್ಥೆಗಳಿಂದ ಹೊರಬರುವುದು
ಸಂಘಟಿತ ಅಪರಾಧದ ವಿರುದ್ಧ ಹೊರಗಣಿಂದ ಹೋರಾಡುವುದಕ್ಕೆ ಕೂಡಿಸಿ, ಒಳಗಣ ಜನರು ಅಪರಾಧ ಸಂಘಗಳಿಂದ ಹೊರಬರುವಂತೆ ಸಹಾಯಮಾಡಲು ಸರಕಾರಗಳು ಪ್ರಯತ್ನಿಸಿವೆ. ಅಂತಹ ಪ್ರಯತ್ನವು ಸುಲಭವಲ್ಲ. ಒಂದು ಹಳೆಯ ನಾಣ್ಣುಡಿಗನುಸಾರವಾಗಿ, “ಮಾಫಿಯವನ್ನು ಬಿಟ್ಟು ಹೊರಬರುವ ಒಂದೇ ವಿಧವು ಶವಪೆಟ್ಟಿಗೆಯಲ್ಲಿಯೇ.” ಒಬ್ಬ ದೊಂಬಿಗಾರನು ಯಾಕೂಸಾ ಸಂಸ್ಥೆಯನ್ನು ಬಿಡಬೇಕಾದರೆ, ಅವನು ದೊಡ್ಡ ಮೊತ್ತದ ಹಣವನ್ನು ಕೊಡಬೇಕಾಗುತ್ತದೆ ಅಥವಾ ತನ್ನ ಚಿಕ್ಕ ಬೆರಳನ್ನೊ ಅದರ ಅಂಶವನ್ನೊ ಕತ್ತರಿಸಬೇಕಾಗುತ್ತದೆ. ಭೂಗತ ಜಗತ್ತಿನೊಂದಿಗೆ ಸಂಬಂಧವನ್ನು ಕಡಿಯುವ ಭಯಕ್ಕೆ ಕೂಡಿಸಿ, ಒಬ್ಬ ಮಾಜಿ ದೊಂಬಿಗಾರನು ಪ್ರಾಮಾಣಿಕವಾಗಿ ಜೀವಿಸುವ ವಾಸ್ತವ್ಯವನ್ನು ಎದುರಿಸಲೇಬೇಕು. ಅವನ ಕೆಲಸದ ಅರ್ಜಿಗಳು ಅನೇಕ ವೇಳೆ ತಳ್ಳಿಹಾಕಲ್ಪಡುವವು. ಆದರೆ ಕೆಲವು ದೇಶಗಳಲ್ಲಾದರೊ, ಸ್ವತಂತ್ರವಾಗಪ್ರಯತ್ನಿಸುತ್ತಿರುವ ಆದರೆ ಸಭ್ಯರೀತಿಯ ಕೆಲಸವು ದೊರೆಯುವುದು ಕಷ್ಟವಾಗಿರುವ ದೊಂಬಿಗಾರರಿಗೆ ಸಹಾಯಮಾಡಲು ಪೊಲೀಸ್ ಹಾಟ್ಲೈನ್ ಟೆಲಿಫೋನುಗಳಿವೆ.
ಗ್ಯಾಂಗ್ ಕುಟುಂಬದಿಂದ ಬರುವ ಒತ್ತಡಗಳು ಮತ್ತು ಸಮಾಜದ ಪೂರ್ವಾಗ್ರಹವನ್ನು ಎದುರಿಸಿ ಪ್ರಾಮಾಣಿಕನಾಗಿ ಮುಂದುವರಿಯಲು ಒಬ್ಬ ದೊಂಬಿಗಾರನಿಗೆ ಬಲವಾದ ಪ್ರಚೋದನೆ ಅಗತ್ಯ. ಅವನನ್ನು ಯಾವುದು ಪ್ರಚೋದಿಸಬಲ್ಲದು? ತನ್ನ ಕುಟುಂಬದ ಕಡೆಗೆ ಅವನಿಗಿರುವ ಪ್ರೀತಿ, ಶಾಂತಪೂರ್ಣ ಜೀವನವನ್ನು ನಡೆಸುವ ಹಾರೈಕೆ ಅಥವಾ ಸಮರ್ಪಕವಾಗಿರುವುದನ್ನು ಮಾಡುವ ಬಯಕೆ—ಇವುಗಳೇ. ಆದರೂ ಅತಿ ಬಲಾಢ್ಯವಾದ ಪ್ರಚೋದನೆಯು, ಈ ಸಂಚಿಕೆಯ ಪುಟ 26ರಲ್ಲಿರುವ ಲೇಖನದಲ್ಲಿನ ಯಾಸೂಓ ಕಾಟಾಓಕಾ ಎಂಬವರ ಕಥೆಯಿಂದ ಸುಚಿತ್ರಿತವಾಗಿದೆ.
ತಮ್ಮ ಜೀವನಗಳನ್ನು ಪೂರ್ತಿಯಾಗಿ ಬದಲಾಯಿಸಿರುವ ನೂರಾರು ಮಂದಿಯಲ್ಲಿ ಯಾಸೂಓ ಕಾಟಾಓಕಾ ಪ್ರಾತಿನಿಧಿಕ. ಅವರು ಈ ಹಿಂದೆ ತೋರಿಸಿದ್ದ ಮೃಗಸದೃಶ ಗುಣಗಳು “ದೇವರ ಚಿತ್ತಾನುಸಾರವಾಗಿ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟ” ನೂತನ ವ್ಯಕ್ತಿತ್ವದಿಂದ ಭರ್ತಿಮಾಡಲ್ಪಟ್ಟಿವೆ. (ಎಫೆಸ 4:24, NW) ಈಗ, ತೋಳಗಳಂತಿದ್ದ ಜನರು ಶಾಂತ ಸ್ವಭಾವದ ಕುರಿಮರಿಸದೃಶ ಪೌರರ ಮಧ್ಯೆ ಶಾಂತಿಯಲ್ಲಿ ವಾಸಿಸುತ್ತಿದ್ದು, ಅವರು ಇತರರಿಗೂ ಸಹಾಯಮಾಡುತ್ತಿದ್ದಾರೆ!—ಯೆಶಾಯ 11:6.
ಲೋಕಾತ್ಮದಿಂದ ಸ್ವತಂತ್ರರಾಗಿರಿ
ಹಿಂದಿನ ಲೇಖನದಲ್ಲಿ ತಿಳಿಸಿರುವಂತೆ, ಎಲ್ಲ ಅಪರಾಧ ಸಂಘಗಳು ಪಿಶಾಚನಾದ ಸೈತಾನನ ಏಕ ಅದೃಶ್ಯ ಅಧಿಕಾರದೊಳಗಿರುವುದು ಮಾತ್ರವಲ್ಲ, ಇಡೀ ಲೋಕವೇ ಹಾಗಿದೆ. ಜನರು ಇದನ್ನು ಗ್ರಹಿಸುವುದು ಕೂಡ ಇಲ್ಲವಾದರೂ, ಸೈತಾನನು ಈ ಜಗತ್ತನ್ನು, ಅದು ತನ್ನ ಅಪರಾಧದ ಉದ್ದೇಶವನ್ನು ಪೂರೈಸುವಂತೆ ವ್ಯವಸ್ಥಾಪಿಸಿದ್ದಾನೆ. ಅಪರಾಧ ಸಂಘಗಳು ಸಂಪತ್ತನ್ನು ಮತ್ತು ಖೋಟಾ ಕುಟುಂಬ ವ್ಯವಸ್ಥೆಗಳನ್ನು ಒದಗಿಸುವಂತೆಯೇ, ಅವನು ಜನರಿಗೆ ಐಶ್ವರ್ಯಗಳನ್ನು, ಸುಖ ಮತ್ತು ಒಂದಾಗಿರುವ ಭಾವನೆಯನ್ನು ಕೊಟ್ಟು ತಾನು ಧರ್ಮಗುಣದ ಯಜಮಾನನೆಂಬ ಪಾತ್ರವನ್ನು ವಹಿಸುತ್ತಾನೆ. ನೀವು ಇದನ್ನು ಗ್ರಹಿಸದೆ ಇರಬಹುದಾದರೂ, ಅವನ ಕೆಟ್ಟ ಹಂಚಿಕೆಗಳಿಂದ ನೀವು ವಂಚಿಸಲ್ಪಟ್ಟಿರಬಹುದು. (ರೋಮಾಪುರ 1:28-32) “ಇಹಲೋಕಸ್ನೇಹವು ದೇವವೈರ” ಎಂದು ಬೈಬಲ್ ನಮಗನ್ನುತ್ತದೆ. (ಯಾಕೋಬ 4:4) ಸೈತಾನನ ಪ್ರಭಾವದೊಳಗಿರುವ ಲೋಕದೊಂದಿಗೆ ಆತ್ಮೀಯತೆ ಬೆಳೆಸುವುದು ಸುರಕ್ಷಿತವಲ್ಲ. ವಿಶ್ವನಿರ್ಮಾಣಿಕನಲ್ಲಿ, ಸೈತಾನನು ಮತ್ತು ಅವನ ದೆವ್ವಗಳ ದುಷ್ಪ್ರಭಾವದಿಂದ ಲೋಕವನ್ನು ಶುದ್ಧಗೊಳಿಸುವರೆ, ಅವರನ್ನು ಸೆರೆಹಿಡಿಯಲಿಕ್ಕಾಗಿ ಸಜ್ಜಾಗಿರುವ ಯೇಸು ಕ್ರಿಸ್ತನ ಕೆಳಗಿರುವ ದೇವದೂತಸೈನ್ಯವಿದೆ.—ಪ್ರಕಟನೆ 11:18; 16:14, 16; 20:1-3.
ಹಾಗಾದರೆ, ಸೈತಾನನ ಲೋಕದ ಪ್ರಭಾವದೊಳಗಿಂದ ನೀವು ಹೇಗೆ ಹೊರಗೆ ಬರಬಲ್ಲಿರಿ? ವಿರಕ್ತನಂತೆ ಜೀವಿಸಿಯಲ್ಲ, ಬದಲಾಗಿ ಇಂದು ಲೋಕದಲ್ಲಿ ಪ್ರಮುಖವಾಗಿರುವ ಮನೋಭಾವಗಳು ಮತ್ತು ಯೋಚನಾ ನಮೂನೆಗಳಿಂದ ಸ್ವತಂತ್ರರಾಗಿ ಹೊರಬರುವ ಮೂಲಕವೇ. ಹಾಗೆ ಮಾಡಬೇಕಾದರೆ, ಸೈತಾನನ ಭಯಹುಟ್ಟಿಸುವ ಉಪಾಯಗಳೊಂದಿಗೆ ಹೋರಾಡಿ ಜನರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅವನು ನೀಡುವ ಉತ್ತೇಜಕಗಳನ್ನು ನೀವು ಪ್ರತಿಭಟಿಸಬೇಕಾಗುತ್ತದೆ. (ಎಫೆಸ 6:11, 12) ಇದರಲ್ಲಿ ತ್ಯಾಗಗಳು ಸೇರಿರುವುದಾದರೂ, ದೃಢನಿರ್ಧಾರದಿಂದಿರುವುದಾದರೆ ಮತ್ತು ಯೆಹೋವನ ಸಾಕ್ಷಿಗಳು ನೀಡುವ ಸಹಾಯದ ಪ್ರಯೋಜನವನ್ನು ಪಡೆದುಕೊಳ್ಳುವುದಾದರೆ ಇತರರಂತೆಯೇ ನೀವು ಸ್ವತಂತ್ರರಾಗಬಲ್ಲಿರಿ.
ಈ ಅಸ್ತವ್ಯಸ್ತವಾದ ಅಪರಾಧ ಜಗತ್ತನ್ನು ಶುದ್ಧೀಕರಿಸುವ ದೇವರ ಕ್ರಿಯೆಯನ್ನು ಯಾವುದು ಅನುಸರಿಸಿಬರುವುದು? “ದುಷ್ಟರ ಸಂತತಿ ತೆಗೆದುಹಾಕಲ್ಪಡುವದು,” ಎಂದು ಹೇಳುತ್ತ ಬೈಬಲು ಮುಂದುವರಿಸುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:28, 29) ಆಗ, ಮೃಗಸದೃಶ ಗುಣಗಳಿದ್ದ ಜನರಿಗೆ ಭಯಪಟ್ಟು ನಡುಗಲು ಯಾವ ಕಾರಣವೂ ಇರದು, ಏಕೆಂದರೆ ಅವರು ಭೂಮಿಯಲ್ಲಿ ತುಂಬಿರುವ “ಯೆಹೋವನ ಜ್ಞಾನ”ದಿಂದ ಪರಿವರ್ತಿತರಾಗಿರುವರು.—ಯೆಶಾಯ 11:9; ಯೆಹೆಜ್ಕೇಲ 34:28.
ಇಂದು ಅಂತಹ ಪರಿವರ್ತನೆಯು, ಈ ಸಂಚಿಕೆಯ ಪುಟ 26ರಲ್ಲಿ ಉಲ್ಲೇಖಿಸಲ್ಪಟ್ಟ ಜಪಾನಿನ ಮಾಜಿ ಯಾಕೂಸಾ ಸದಸ್ಯನೊಬ್ಬನ ಆತ್ಮ ಕಥೆಯು ತೋರಿಸುವಂತೆ, ಆಗಲೇ ವಾಸ್ತವಿಕತೆಯಾಗಿದೆ.
[ಪುಟ 21 ರಲ್ಲಿರುವ ಚಿತ್ರ]
ದೇವರ ನೂತನ ಲೋಕದಲ್ಲಿ, ಎಲ್ಲರೂ ತಮ್ಮ ಕೈಕೆಲಸಗಳಲ್ಲಿ ಆನಂದಿಸುವರು