ಹೂವುಗಳು ಯಾವನೊ ಚಿಂತಿಸುತ್ತಾನೆಂಬುದನ್ನು ತೋರಿಸುತ್ತವೆ
ಕೊಲಂಬಿಯದ ಎಚ್ಚರ! ಸುದ್ದಿಗಾರರಿಂದ
ಆಕರ್ಷಿತಳಾದ ಪುಟ್ಟಿಯೊಬ್ಬಳು ತನ್ನ ದುಂಡು ಮುಷ್ಟಿಯಲ್ಲಿ ಕಾಕಪಾದಗಳ ಗೊಂಚಲನ್ನು ಹಿಡಿದುಕೊಂಡು ತನ್ನ ಅಮೂಲ್ಯ ಕಂಡುಹಿಡಿತದೊಂದಿಗೆ ಅಮ್ಮನ ಬಳಿ ಓಡುತ್ತಾಳೆ. ದಾರಿಪಕ್ಕದ ಕಟ್ಟೆಯಿಂದ ಒಬ್ಬ ಪ್ರೀತಿಸುವ ಗಂಡನು, ತನ್ನ ಹೆಂಡತಿಯ ಕುರಿತು ಎಷ್ಟು ಚಿಂತಿಸುತ್ತಾನೆಂದು ತೋರಿಸಲು ಒಂದು ಡಜನ್ ಗುಲಾಬಿ ಹೂವುಗಳನ್ನು ಆರಿಸುತ್ತಾನೆ. ಒಬ್ಬ ಕೃತಜ್ಞನಾದ ಮಗನು ನೆರೆಹೊರೆಯ ಹೂವಿನ ವ್ಯಾಪಾರಿಗೆ ಫೋನ್ ಮಾಡಿ, ತನ್ನ ತಾಯಿಯನ್ನು ಸಂತೋಷಪಡಿಸಲು ಹೊಸದಾಗಿ ಕತ್ತರಿಸಿದ ಪಾಂಪಾನ್ಗಳನ್ನು ಕಳುಹಿಸಲು ಹೇಳುತ್ತಾನೆ. ಶ್ರದ್ಧಾವಂತಳಾದ ಗೃಹಿಣಿಯೊಬ್ಬಳು ವರ್ಣರಂಜಿತ ಕಾರ್ನೇಷನ್ ಹೂವುಗಳನ್ನು ಸೂಪರ್ಮಾರ್ಕೆಟಿನಲ್ಲಿ ತನ್ನ ಷಾಪಿಂಗ್ ಬಂಡಿಯ ಮೇಲಿಡುತ್ತಾಳೆ. ಅವು ಆಕೆಯ ಸುಸಂಸ್ಕೃತವಾಗಿ ಅಲಂಕರಿಸಲ್ಪಟ್ಟ ಮನೆಗೆ ಅಂತಿಮ ಅಲಂಕಾರವನ್ನು ಕೊಡುವುವು.
ಹೂವುಗಳು ಆಬಾಲವೃದ್ಧರ ಹೃದಯಗಳನ್ನು ಸಂತೋಷಿಸುತ್ತವೆ. “ಯಾವನೊ ಚಿಂತಿಸುತ್ತಾನೆ” ಎಂಬ ಭಾವನೆಯನ್ನು ವ್ಯಕ್ತಪಡಿಸಲು ಅವೊಂದು ಸೊಗಸಾದ ಮಾಧ್ಯಮ. ಒಂದು ಸ್ಪ್ಯಾನಿಷ್ ನಾಣ್ಣುಡಿ ಹೇಳುವುದು: “ಒಂದು ಗುಲಾಬಿ ಹೂವಿಗೆ ಕೃತಜ್ಞನಾಗಿರದವನು ಯಾವುದಕ್ಕೂ ಕೃತಜ್ಞನಾಗಿರನು.”
ಹೂವಿನ ವ್ಯಾಪಾರವು ಹಿಂದೆಂದಿಗಿಂತಲೂ ಶೀಘ್ರವಾಗಿ ವೃದ್ಧಿಯಾಗುತ್ತಿದೆ. ಶೀಘ್ರ ವಿಮಾನ ಸಾಗಣೆಯ ಈ ಯುಗದಲ್ಲಿ ಹೂವುಗಳನ್ನು, ಎಲ್ಲಿ ಅವು ದಾರಿಹೋಕರನ್ನು ಮುಗ್ಧಗೊಳಿಸುತ್ತವೊ ಅಂತಹ ಅಂಗಡಿ, ಸೂಪರ್ಮಾರ್ಕೆಟ್ ಮತ್ತು ದಾರಿಪಕ್ಕದ ಮಾರುಕಟ್ಟೆಗಳಿಂದ ಬಹುದೂರದಲ್ಲಿ ಬೆಳೆಸಸಾಧ್ಯವಿದೆ. ಹೂವಿನ ಉದ್ಯಮವು, “ಬಿರ್ರನೆ ಬೆಳೆಯುತ್ತಿದ್ದು ಹೆಚ್ಚು ಬಿರುಸಾಗಿ ಪರಿವರ್ತನೆ ಹೊಂದುತ್ತಿದೆ: ಹೆಚ್ಚೆಚ್ಚು ಉತ್ಪನ್ನವು ದಕ್ಷಿಣ ಗೋಳಾರ್ಧದಿಂದ—ಬಹ್ವಂಶ, ಹಾಲೆಂಡ್ನ ನಂತರ ಎರಡನೆಯ ಅತಿ ದೊಡ್ಡ ರಫ್ತುಮಾಡುವ ದೇಶವಾದ ಕೊಲಂಬಿಯದಿಂದ ಬರುತ್ತಿದೆ,” ಎಂದು ಟೈಮ್ ಪತ್ರಿಕೆ ಹೇಳಿತು.
ಪ್ಲ್ಯಾಸ್ಟಿಕ್ ಆವರಿತ ಸಸ್ಯಾಗಾರಗಳು ಮತ್ತು ಕೃತಕ ಸರೋವರಗಳು
ಇಪ್ಪತ್ತೈದಕ್ಕೂ ಹೆಚ್ಚು ವರ್ಷ ವ್ಯಾಪಾರದಲ್ಲಿರುತ್ತ, ಕೊಲಂಬಿಯವು ಕಾರ್ನೇಷನ್ ಹೂವುಗಳ ರಫ್ತಿನಲ್ಲಿ ಲೋಕದಲ್ಲಿ ಮೊದಲಸ್ಥಾನದಲ್ಲಿಯೂ ಮೊತ್ತದ ಹೂವಿನ ಮಾರಾಟದಲ್ಲಿ ಎರಡನೆಯ ಸ್ಥಾನದಲ್ಲಿಯೂ ಇದೆ. ಅಮೆರಿಕದ ಕ್ಯಾಲಿಫಾರ್ನಿಯದ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನು 1964ರಲ್ಲಿ, ವರ್ಷದಾದ್ಯಂತ ಪುಷ್ಪ ಸಾಗುವಳಿಗೆ ಅತಿ ಹಿತಕರವಾದ ಪರಿಸರವಿರುವ ಸ್ಥಳಗಳಾವುವು ಎಂಬುದನ್ನು ನಿರ್ಧರಿಸಲು ಒಂದು ಕಂಪ್ಯೂಟರ್ ಅಧ್ಯಯನವನ್ನು ಮಾಡಿದನು. ಬೋಗಟಾ ನಗರವಿರುವ ಮೇಲ್ತಗ್ಗು ಪ್ರದೇಶದ ಹವಾಮಾನ ಮತ್ತು ಔನ್ನತ್ಯ—ಭೂಮಧ್ಯ ರೇಖೆಯಿಂದ ತುಸು ಉತ್ತರಕ್ಕೆ ಮತ್ತು ಆ್ಯಂಡೆಸ್ ಪರ್ವತಗಳಲ್ಲಿ ಸುಮಾರು 2,800 ಮೀಟರ್ಗಳಷ್ಟು ಎತ್ತರದಲ್ಲಿ—ಆದರ್ಶ ಪರಿಸ್ಥಿತಿಗಳನ್ನು ಒದಗಿಸುತ್ತದೆಂದು ಅವನು ಕಂಡುಹಿಡಿದನು.
ಕೊಲಂಬಿಯದ ರಫ್ತಾಗುವ ಹೂವುಗಾರಿಕೆಯಲ್ಲಿ 92 ಪ್ರತಿಶತ ಬೆಳೆಯುವ ಸಾಂಟಾಫೇ ಡೆ ಬೋಗೋಟಾದ ಆಶ್ಚರ್ಯಕರವಾಗಿ ಹಸುರಾಗಿರುವ ಹುಲ್ಲುಗಾಡು, ಕೃತಕ ಸರೋವರಗಳಿಂದ ಮತ್ತು ಪ್ಲ್ಯಾಸ್ಟಿಕ್ ಆವರಿತ ಸಸ್ಯಾಗಾರಗಳಿಂದ ಹರಡಿದೆ. ಈ ಮರ ಅಥವಾ ಲೋಹದ ಚೌಕಟ್ಟುಗಳಿಂದ ರಚಿಸಿರುವ ಈ ಸಸ್ಯಾಗಾರಗಳೊಳಗೆ, ಜಾಗ್ರತೆಯಿಂದ ನಿಯಂತ್ರಿಸಿರುವ ವಸಂತಕಾಲದ ಪರಿಸರವು, ಬೇಗನೆ ಕತ್ತರಿಸಲ್ಪಟ್ಟು ಉತ್ತರ ಅಮೆರಿಕ, ಯೂರೋಪ್ ಮತ್ತು ಏಷಿಯಕ್ಕೆ ರವಾನಿಸಲು ಪ್ಯಾಕ್ ಮಾಡಲ್ಪಡಲಿರುವ ಲಕ್ಷಗಟ್ಟಲೆ ಕಾರ್ನೇಷನ್, ಪಾಂಪಾನ್, ಗುಲಾಬಿ ಹೂವು, ಸೇವಂತಿಗೆ, ಪೆರು ಲಿಲಿ ಮತ್ತು ಇನ್ನಿತರ ಅನೇಕ ವಿಧದ ಹೂವುಗಳನ್ನು ಪೋಷಿಸುತ್ತದೆ.
ಹೂವಿನ ವ್ಯವಸಾಯಕ್ಕೆ ತಕ್ಕದಾದ ಹವಾಮಾನವು, ಹುಲ್ಲುಗಾಡಿನಲ್ಲಿ ಸಾಮಾನ್ಯವಾಗಿ ವರ್ಷವಿಡೀ ಇರುವ 18ರಿಂದ 20 ಡಿಗ್ರಿ ಸೆಲ್ಸಿಯಸ್ ಆಗಿರುವ ದಿನದ ತಾಪಮಾನವೇ. ಇಲ್ಲಿ ಮಳೆನೀರು ಧಾರಾಳ, ಮಣ್ಣು ಪುಷ್ಟಿಕರ ಮತ್ತು ಕಡಿಮೆ ಸಂಬಳದ ಕೈದುಡಿಮೆ ದೊರೆಯುತ್ತದೆ. ರಾತ್ರಿವೇಳೆ, ತಾಪಮಾನವು ಸುಮಾರು ಘನೀಭವಿಸುವ ಸ್ಥಿತಿಯ ವರೆಗೂ, ಒಮ್ಮೊಮ್ಮೆ ಶೀತಲವಾದ -2 ಡಿಗ್ರಿ ಸೆಲ್ಸಿಯಸ್ ವರೆಗೂ ಕೆಳಗಿಳಿಯುತ್ತದೆ. ಹೊಗೆಬೆಂಕಿ ಪಾತ್ರೆಗಳು, ಹೆಚ್ಚು ಕಾವುಕೊಡುವ ಲೈಟ್ ಬಲ್ಬ್ಗಳು ಅಥವಾ ಸೇಚಕಗಳು ಚಳಿಗೆದುರಾಗಿ ರಕ್ಷಣೆಯನ್ನು ಕೊಡುತ್ತವೆ. ಲೈಟ್ ಬಲ್ಬ್ಗಳು ದಿನದ ಬೆಳಕನ್ನು ಹೆಚ್ಚು ಹೊತ್ತಿನ ತನಕ ಹರವಿ, ಹೀಗೆ ಕೆಲವು ಸಸ್ಯಗಳು ಎಚ್ಚರವಾಗಿರುವಂತೆ ಮತ್ತು ಬೇಗನೆ ಬೆಳೆಯುವಂತೆಯೂ ಮಾಡುತ್ತವೆ.
ಉತ್ಪನ್ನವು ಬಹು ಮುಂದಾಗಿಯೇ ಯೋಜಿಸಲ್ಪಡುತ್ತದೆ
ಕೊಲಂಬಿಯದಲ್ಲಿ 1,20,000ಕ್ಕೂ ಹೆಚ್ಚು ಕೆಲಸಗಾರರು ಪುಷ್ಪ ಉದ್ಯಮದಲ್ಲಿ ಒಂದಲ್ಲ ಒಂದು ಭಾಗದಲ್ಲಿ ಒಳಗೊಳ್ಳುತ್ತಿದ್ದಾರೆ. ಇವರಲ್ಲಿ, ಹುಲ್ಲುಗಾಡಿನಲ್ಲೆಲ್ಲ ಇರುವ ಸಮುದಾಯಗಳಲ್ಲಿ ಜೀವಿಸುತ್ತಿರುವ ಅನೇಕ ಮಂದಿ ಯೆಹೋವನ ಸಾಕ್ಷಿಗಳಿದ್ದಾರೆ. ಫಾಕಾಟಾಟೀವಾದಲ್ಲಿರುವ ಸಭೆಗಳಲ್ಲೊಂದರಲ್ಲಿ ಕ್ರೈಸ್ತ ಹಿರಿಯರಾಗಿರುವ ಬೆನೀಟೋ ಕೀಂಟಾನಾ ಒಂದು ಸಸ್ಯ ಪೋಷಣಾಲಯದಲ್ಲಿ ಉತ್ಪಾದನಾ ಮೇಲ್ವಿಚಾರಕರಾಗಿ ಕೆಲಸಮಾಡುತ್ತಾರೆ. ಅವರು ವಿವರಿಸುವುದು: “ಮಾರ್ಕೆಟಿನ ಕಾಲಿಕ ಕೇಳಿಕೆಗಳನ್ನು ಪೂರೈಸಲು ನಮಗೆ ತಿಂಗಳುಗಳ ಮೊದಲೇ ಉತ್ಪಾದನೆಯನ್ನು ಯೋಜಿಸಬೇಕಾಗುತ್ತದೆ. ಕಾರ್ನೇಷನ್ಗಳ ತಾಯಿಸಸಿಗಳನ್ನು ಹಾಲೆಂಡ್ ಅಥವಾ ಇಟಲಿಯಿಂದ ಮತ್ತು ಪಾಂಪಾನ್ಗಳನ್ನು ಫ್ಲಾರಿಡದಿಂದ ಆಮದುಮಾಡಲಾಗುತ್ತದೆ. ಹೆಂಗಸರು ಸಣ್ಣ ಚಿಗುರುಗಳನ್ನು ಜಾಗ್ರತೆಯಿಂದ ಕತ್ತರಿಸಿ, ಬೆಚ್ಚಗಿನ ಸಸ್ಯಾಗಾರಗಳಲ್ಲಿ ದಂಡೆಕಟ್ಟಿದ ಸಾಲುಗಳಲ್ಲಿ ನೆಡುತ್ತಾರೆ. ಅಲ್ಲಿ ಅವು ಬೇರುಬಿಡುವ ತನಕ ಅವುಗಳಿಗೆ ಮೋಡದಂತಹ ಮಂಜಿನಿಂದ ನೀರು ಹೊಯ್ಯಲಾಗುತ್ತದೆ. ಬೇರುಬಿಡಲು ಪಾಂಪಾನ್ಗಳಿಗೆ 20ರಿಂದ 35 ಡಿಗ್ರಿ ಸೆಲ್ಸಿಯಸ್ (68° ಇಂದ 95°F.) ತಾಪಮಾನದಲ್ಲಿ—ರಾತ್ರಿ ವೇಳೆಯಲ್ಲಿ ಎರಡು ಹೆಚ್ಚು ತಾಸುಗಳ ಬೆಳಕು ಬೇಕು—12 ದಿನಗಳು ಹಿಡಿಯುತ್ತವೆ. ಕಾರ್ನೇಷನ್ಗಳಿಗೆ, 15ರಿಂದ 25 ಡಿಗ್ರಿ ಸೆಲ್ಸಿಯಸ್ (59° ಇಂದ 77°F.) ತಾಪಮಾನದಲ್ಲಿ, ರಾತ್ರಿಯಲ್ಲಿ ಬೆಳಕಿನ ಆವಶ್ಯಕತೆ ಇಲ್ಲದೆ 23 ದಿನಗಳು ಹಿಡಿಯುತ್ತವೆ. ಬಳಿಕ ನಾವು ಈ ಚಿಕ್ಕ ಸಸಿಗಳನ್ನು ಇತರ ಸಸ್ಯಾಗಾರಗಳಲ್ಲಿರುವ ಪಾತಿಗಳಿಗೆ ವರ್ಗಾಯಿಸುತ್ತೇವೆ. ಅಲ್ಲಿ ಆರು ತಿಂಗಳುಗಳ ಬಳಿಕ ಕಾರ್ನೇಷನ್ಗಳು ಮತ್ತು ಮೂರು ತಿಂಗಳುಗಳ ಬಳಿಕ ಪಾಂಪಾನ್ಗಳು ಹೂವು ಬಿಡುವ ತನಕ ಅವುಗಳಿಗೆ ಪೋಷಕಗಳನ್ನು ಸೇರಿಸಿ, ಅವುಗಳ ಮೇಲೆ ಹೊಗೆಯಾಡಿಸಿ, ಅವುಗಳಿಗೆ ನೀರುಹೊಯ್ಯಲಾಗುತ್ತದೆ.”
ತುಂಬ ವ್ಯಾಪಾರದ ಕಾಲದಲ್ಲಿ ಕಷ್ಟದ ಕೆಲಸ
ಕತ್ತರಿಸುವ ಕಾಲ ಬರುವಾಗ, ಇಷ್ಟಕರವಾಗಿ ಕೈಚೀಲಗಳಿಲ್ಲದೆ ಮತ್ತು ಪೂರ್ತಿ ಶುದ್ಧಕೈಗಳಲ್ಲಿ ಅತ್ಯುತ್ತಮ ಕೆಲಸ ಮಾಡುವವರು ಹೆಂಗಸರು. ಹೂವಿನ ಗುಣಮಟ್ಟವನ್ನು ನಿರ್ಧರಿಸುವ ಅಂಶಗಳಾದ, ಮೊಗ್ಗೆಗಳು ಎಷ್ಟರ ಮಟ್ಟಿಗೆ ತೆರೆದಿವೆ ಮತ್ತು ದಂಟುಗಳು ಎಷ್ಟು ನೀಟಾಗಿವೆ ಎಂಬುದನ್ನು ತೀರ್ಮಾನಿಸಲು ಯಂತ್ರಗಳಿಗೆ ಸಾಮರ್ಥ್ಯವಿಲ್ಲ.
ಫಾಕಾಟಾಟೀವಾದ ಹೂಡೀಟ್ ಕಾರೆಡೋರ್ ವಿವರಿಸುವುದು: “ಹೆಂಗಸರಿಗೆ ತಾಳ್ಮೆ ಮತ್ತು ಕೋಮಲ ಸ್ಪರ್ಶವಲ್ಲದೆ ಬೇಕಾಗಿರುವ ವೇಗವೂ ಕೌಶಲವೂ ಇವೆ. ನಾವು ಮುಂಜಾನೆ ಸಸ್ಯಾಗಾರಗಳನ್ನು ಪ್ರವೇಶಿಸುವಾಗ,” ಜೂಡಿತ್ ಮುಂದುವರಿಸುವುದು “ಹುಲ್ಲುಗಾಡಿನಲ್ಲಿ ಅನೇಕ ವೇಳೆ ಮಂಜು ಕವಿದಿರುತ್ತದೆ. ಅಲ್ಲಿ ಘನೀಭವಿಸುವಷ್ಟೂ ತುಂಬ ಚಳಿ ಇರಬಲ್ಲದು. ಹೆಂಗಸರಲ್ಲಿ ಅನೇಕರು ಕಂಠವಸ್ತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ದಿನದ ಸಮಯದಲ್ಲಿ ಶಾಖ ಹೆಚ್ಚಾಗಿ, ಕೆಲವು ಬಾರಿ 32 ಡಿಗ್ರಿ ಸೆಲ್ಸಿಯಸ್ಗಿಂತಲೂ ಮೇಲೇರಿ ಹೋಗುತ್ತದೆ. ಭರಾಟಿಯಿರುವ ತುಂಬ ವ್ಯಾಪಾರದ ಸಮಯದಲ್ಲಿ ಕೆಲಸವು ಕಷ್ಟಕರ ಮತ್ತು ನಮಗೆ ಪಾಳಿಮೀರಿ ಕೆಲಸಮಾಡಬೇಕಾಗುತ್ತದೆ.”
ವರ್ಣರಂಜಿತವಾದ ಮತ್ತು ಪರಿಮಳದ ಸಂದೇಶ
ಕತ್ತರಿಸಿದ ಬಳಿಕ ಹೂವುಗಳನ್ನು ತುಂಬ ಗಾಳಿ ಮತ್ತು ಬೆಳಕಿರುವ ವಿಶೇಷ ಕೋಣೆಯೊಳಗೆ ಕೊಂಡೊಯ್ಯಲಾಗುತ್ತದೆ. ಇಲ್ಲಿ ಹೆಂಗಸರು ಅವುಗಳನ್ನು ಅವುಗಳ ಅರಳುವಿಕೆ, ನೇರವಾಗಿರುವಿಕೆ, ದಪ್ಪವಾಗಿರುವಿಕೆ, ಕಾಂಡದ ಉದ್ದ—ಇವುಗಳ ಗುಣಮಟ್ಟಕ್ಕನುಸಾರವಾಗಿ ಆರಿಸಿ ವರ್ಗೀಕರಿಸುತ್ತಾರೆ. ಆ ಬಳಿಕ ಹೂವುಗಳನ್ನು, ಒಂದು ಗೊಂಚಲಿನಲ್ಲಿ 25ರಂತೆ ಪಾರದರ್ಶಕ ಪ್ಲ್ಯಾಸ್ಟಿಕ್ನಲ್ಲಿ ಸುತ್ತಿ ಪ್ಯಾಕಿಂಗ್ಗೆ ಸಿದ್ಧಮಾಡಲಾಗುತ್ತದೆ. ರಫ್ತಿಗಾಗಿ, ಅತ್ಯುತ್ತಮವಾಗಿರುವುದನ್ನು ಮಾತ್ರ ಆರಿಸಲಾಗುತ್ತದೆ.
ಪುರುಷರು ಹೂವುಗಳನ್ನು ಸಸ್ಯಪೋಷಣಾಲಯದ ಹೆಸರಿರುವ ತರಂಗಿತ ರಟ್ಟಿನ ಡಬ್ಬಿಗಳಲ್ಲಿ ಪ್ಯಾಕ್ ಮಾಡುತ್ತಾರೆ—ಒಂದು ಡಬ್ಬಿಯಲ್ಲಿ 24 ಗೊಂಚಲು ಕಾರ್ನೇಷನ್ಗಳು. ಪ್ಯಾಕಿಂಗ್ನಲ್ಲಿ ಕೆಲಸಮಾಡುವ, ಬೆನೀಟೋನ ಸೋದರ ಅಲೇಹಾಂಡ್ರೋ ಕೀಂಟಾನಾ ಹೇಳುವುದು: “ಹೂವುಗಳು ಎಲ್ಲ ಬೆಳೆಗಳಲ್ಲಿ ಅತಿ ಬೇಗನೆ ಕೆಟ್ಟುಹೋಗುವವುಗಳಾಗಿರುವುದರಿಂದ ನಾವು ಬೇಗನೆ ಕೆಲಸಮಾಡಬೇಕಾಗುತ್ತದೆ. ಡಬ್ಬಿಗಳಿಂದ ಬೆಚ್ಚಗಿನ ಗಾಳಿಯನ್ನು ಒಮ್ಮೆಗೆ 112 ಡಬ್ಬಿಗಳಂತೆ ಬರಿದುಮಾಡುವ ಮತ್ತು ಅದೇ ಸಮಯದಲ್ಲಿ, ಎರಡು ತಾಸು ಶೀತಲ ಗಾಳಿಯನ್ನು ತುಂಬುವ ಎರಡು ಪಂಪ್ಗಳು ನಮ್ಮ ಕಂಪೆನಿಯಲ್ಲಿವೆ. ಹೀಗೆ ಘನೀಭವಿಸುವ ಮಟ್ಟಕ್ಕಿಂತ ಕೆಲವು ಡಿಗ್ರಿ ಮೇಲಕ್ಕೆ ತಾಪಮಾನವನ್ನು ಇಳಿಸಲಾಗುತ್ತದೆ. ಬಳಿಕ ಡಬ್ಬಿಯಲ್ಲಿರುವ ತೂತುಗಳನ್ನು ಮುಚ್ಚಲಾಗಿ, ಹೂವುಗಳು, ವಿಮಾನ ನಿಲ್ದಾಣಕ್ಕೆ ರವಾನಿಸುವ ಟ್ರಕ್ಕುಗಳಿಗೆ ತುಂಬಿಸಲ್ಪಡುವ ತನಕ ಶೀತ ಶೇಖರಣೆಯಲ್ಲಿಡಲ್ಪಡುತ್ತವೆ.”
ಬೋಗಟಾದ ಎಲ್ ಡೊರಾಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಹೂವುಗಳು ರಫ್ತು ಪರೀಕ್ಷೆಗೊಳಗಾಗಿ ಬಳಿಕ ಕೆಲವು ತಾಸು, ಆ ಸರಕನ್ನು ದೊಡ್ಡ ಜೆಟ್ ವಿಮಾನಗಳಲ್ಲಿ ಹಾಕಿ ವಿದೇಶಗಳಲ್ಲಿ ಅವುಗಳ ವಿತರಣಾ ಸ್ಥಳಗಳಿಗೆ ರವಾನಿಸಲ್ಪಡುವ ತನಕ, ಶೀತ ಶೇಖರಣೆಯಲ್ಲಿಡಲ್ಪಡುತ್ತವೆ. ಕೆಲವೇ ದಿನಗಳೊಳಗೆ ಈ ಹೂವುಗಳು ಮನೆಗಳಲ್ಲಿ, ಆಫೀಸುಗಳಲ್ಲಿ, ರೋಗಕೋಣೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ತಮ್ಮ ಎಸಳುಗಳನ್ನು ತೆರೆದು, ಯಾರೊ ಚಿಂತಿಸುತ್ತಾರೆಂಬ ವರ್ಣರಂಜಿತ ಮತ್ತು ಪರಿಮಳದ ಸಂದೇಶವನ್ನು ವ್ಯಕ್ತಪಡಿಸುವುವು.
ನಿಜವಾಗಿಯೂ ಚಿಂತಿಸುವ ಒಬ್ಬಾತನು
ಭೂಮಿಯ ಮೇಲೆ ನಾವೆಲ್ಲಿಯೇ ಹೋಗಲಿ, ನಮಗೆ ಸಂತೋಷ ತರುವ ಹೂವುಗಳನ್ನು ನಾವು ಕಂಡುಕೊಳ್ಳುತ್ತೇವೆ. ಅವನ್ನು ಎತ್ತರದ ಪರ್ವತಗಳಲ್ಲಿಯೂ ಹಿಮಮೈದಾನಗಳ ಮತ್ತು ನೀರ್ಗಲ್ಲ ನದಿಗಳ ಅಂಚಿನಲ್ಲಿಯೂ, ಕಾಡು, ಹುಲ್ಲುಗಾವಲುಗಳಲ್ಲಿಯೂ, ತೋಡು ಮತ್ತು ನದಿಗಳ ಪಕ್ಕದಲ್ಲಿಯೂ, ಸಮುದ್ರ ತೀರದಲ್ಲಿಯೂ, ಬಿಸಿಯಾಗಿರುವ ಒಣ ಮರುಭೂಮಿಯಲ್ಲಿಯೂ ನಾವು ಕಾಣಬಹುದು. ಮನುಷ್ಯನು ಭೂಮಿಗೆ ಬರುವುದಕ್ಕೆ ದೀರ್ಘಕಾಲ ಮೊದಲೇ ಹೂವುಗಳು ಇಲ್ಲಿ ಅಸ್ತಿತ್ವದಲ್ಲಿದ್ದವು. ‘ಹೂವುಬಿಡುವ ಸಸ್ಯಗಳು ಸಕಲ ಪ್ರಾಣಿ ಮತ್ತು ಮಾನವ ಜೀವಕ್ಕೆ ಆಧಾರ. ಅವಿಲ್ಲದಿರುವಲ್ಲಿ ಪ್ರಾಣಿಗಳೂ ಮನುಷ್ಯನೂ ಅಸ್ತಿತ್ವದಲ್ಲಿರಶಕ್ತರಲ್ಲ,’ ಎಂದು ಸಸ್ಯಶಾಸ್ತ್ರಜ್ಞರು ಪ್ರತಿಪಾದಿಸುತ್ತಾರೆ.
ಅಂತರ್ದೃಷ್ಟಿಯುಳ್ಳವನಾಗಿ, ಸೊಲೊಮೋನ ರಾಜನು ಪ್ರಕಟಿಸಿದ್ದು: ‘ದೇವರು ಸಕಲವನ್ನೂ ಸಮಯಕ್ಕೆ ತಕ್ಕಹಾಗೆ ಅಂದವಾಗಿ ನಿರ್ಮಿಸಿದ್ದಾನೆ.’ (ಪ್ರಸಂಗಿ 3:11) ಇದರಲ್ಲಿ ಸಕಲ ವೈವಿಧ್ಯ ಮತ್ತು ಸೊಗಸಿನಲ್ಲಿರುವ ದೇವರ ಕೊಡುಗೆಯಾದ ಹೂವುಗಳು ಸೇರಿವೆ. ಅನಾದಿಕಾಲದಿಂದಲೂ ಅವು ಆಬಾಲವೃದ್ಧರ ಹೃದಯಗಳನ್ನು ಉಲ್ಲಾಸಿಸಿವೆ. ಹೌದು, ದೇವರು ನಿಜವಾಗಿಯೂ ಚಿಂತಿಸುತ್ತಾನೆ!
[ಪುಟ 28 ರಲ್ಲಿರುವ ಚೌಕ]
ಹೂವುಗಳನ್ನು ಹೆಚ್ಚು ಬಾಳಿಕೆ ಬರಿಸುವ ವಿಧ
• ಹೂದಾನಿಯಲ್ಲಿ ಹೂವುಗಳನ್ನು ಇಡುವ ಮೊದಲು ದಂಟುಗಳನ್ನು ನೀರೊಳಕ್ಕೆ ಇಟ್ಟು ಓರೆಯಾಗಿ ಕತ್ತರಿಸಿ. ದಂಟುಗಳ ತುದಿಗೆ ಅಂಟಿರುವ ನೀರಿನ ಹನಿಗಳು, ಗಾಳಿ ಪ್ರವೇಶಿಸದಂತೆ ನೋಡಿಕೊಂಡು, ಹೀಗೆ ಮುಂದಕ್ಕೆ ಅವು ನೀರನ್ನು ಮತ್ತು ಪೋಷಕಗಳನ್ನು ಒಳಗೆ ತೆಗೆದುಕೊಳ್ಳುವುದನ್ನು ತಡೆಯುವವು.
• ಗೇಓಮುಂಡೋ ಪತ್ರಿಕೆಯು, ಕೊಲಂಬಿಯದ ತೋಟಗಾರಿಕೆ ತಜ್ಞರು ಹೇಳಿದರೆಂಬುದನ್ನು ಉಲ್ಲೇಖಿಸುತ್ತ, ನೀರಿಗೆ ಒಂದು ಆ್ಯಸ್ಪಿರಿನ್ ಮಾತ್ರೆ, ಒಂದು ಟೀಸ್ಪೂನ್ ಸಕ್ಕರೆ, ಅಥವಾ ಸ್ವಲ್ಪ ಕೋಲ ಪಾನೀಯ ಸೇರಿಸಿದರೆ ಹೂವುಗಳು ಹೆಚ್ಚು ದೀರ್ಘಕಾಲ ತಾಜಾವಾಗಿ ಉಳಿಯುತ್ತವೆಂದು ಹೇಳುತ್ತದೆ. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ, ಕೋಣೆಯ ತಾಪಮಾನದಲ್ಲಿರುವ ಹೊಸ ನೀರನ್ನು ಹಾಕಿ ನೀರನ್ನು ಬದಲಾಯಿಸಿರಿ. ಮೊಗ್ಗುಗಳು ಹೆಚ್ಚು ಬೇಗನೆ ತೆರೆಯುವಂತೆ ಮಾಡಲು ಬೆಚ್ಚಗಿನ ನೀರನ್ನೂ ಉಪಯೋಗಿಸಬಹುದು.
• ತುಸು ಬಾಡಿರುವ ಹೂವುಗಳನ್ನು ಅನೇಕ ವೇಳೆ, ಅವುಗಳ ದಂಟುಗಳನ್ನು ಹತ್ತು ನಿಮಿಷಗಳ ವರೆಗೆ ಬಿಸಿನೀರಿನಲ್ಲಿ ಮುಳುಗಿಸಿಡುವಾಗ ಎಸಳುಗಳ ಮೇಲೆ ತಣ್ಣೀರು ಚಿಮುಕಿಸುವುದಾದರೆ ಚೇತರಿಸಸಾಧ್ಯವಿದೆ. ಹೂವುಗಳನ್ನು ಕಾವು, ಗಾಳಿ ಮತ್ತು ನೇರವಾದ ಸೂರ್ಯಬೆಳಕಿನಿಂದ ದೂರವಿಡಿರಿ.