ಜಗತ್ತನ್ನು ಗಮನಿಸುವುದು
ಒಂದು ಮಗುವಿನ ಲಿಂಗಜಾತಿಯನ್ನು ಮುಂದಾಗಿಯೇ ನಿಷ್ಕರ್ಷಿಸುವುದು
ಪಾಪ್ಯುಲರ್ ಸೈಯನ್ಸ್ ಎಂಬ ಪತ್ರಿಕೆಗನುಸಾರ, “ವೀರ್ಯಾಣುವಿನ ವಿಧವು ಲಿಂಗವನ್ನು ನಿರ್ಧರಿಸುವುದರಿಂದ, ತಂದೆಯ ವೀರ್ಯಾಣುವನ್ನು ವಿಂಗಡಿಸುವ ಮೂಲಕ ಮಗುವೊಂದರ ಲಿಂಗಜಾತಿಯನ್ನು ಮುಂದಾಗಿಯೇ ನಿಷ್ಕರ್ಷಿಸುವುದು ಈಗ ಸಾಧ್ಯವಾಗಿದೆ.” ಮೊದಲಾಗಿ, ಸ್ಫುರಣಮಾಡುವ ಗುಣವುಳ್ಳ ವರ್ಣದ್ರವ್ಯದಿಂದ ವೀರ್ಯಾಣುವನ್ನು ಬಣ್ಣಗೂಡಿಸಲಾಗುತ್ತದೆ. ತದನಂತರ, Y (ಗಂಡು) ವೀರ್ಯಾಣುವಿನಿಂದ X (ಹೆಣ್ಣು) ವೀರ್ಯಾಣುವನ್ನು ಗುರುತಿಸಲಿಕ್ಕಾಗಿ ಲೇಸರ್ ಬೀಮ್ ಉಪಯೋಗಿಸಲ್ಪಡುತ್ತದೆ. ಒಂದು ಕಂಪ್ಯೂಟರು ಅದರಲ್ಲಿನ ಭಿನ್ನತೆಗಳನ್ನು ತಿಳಿಸುತ್ತದೆ, ಮತ್ತು ಸಾಮಾನ್ಯವಾಗಿ ‘ರಕ್ತ ಪರೀಕ್ಷೆಗಳಿಗಾಗಿ ಉಪಯೋಗಿಸಲ್ಪಡುವ’ ಪ್ರಯೋಗಾಲಯದ ಒಂದು ಉಪಕರಣವು, ‘X ವೀರ್ಯಾಣುವಿಗೆ ಧನಾತ್ಮಕ ವಿದ್ಯುತ್ ಪರಿಪೂರಣವನ್ನೂ Y ವೀರ್ಯಾಣುವಿಗೆ ಋಣಾತ್ಮಕ ವಿದ್ಯುತ್ ಪರಿಪೂರಣವನ್ನೂ ಕೊಡುತ್ತದೆ. ತದನಂತರ ಆ ವೀರ್ಯಾಣುವನ್ನು ಆಕರ್ಷಿಸಲಿಕ್ಕಾಗಿ ವಿರುದ್ಧ ವಿದ್ಯುತ್ ಪರಿಪೂರಣದ ತುದಿಗಳನ್ನು ಉಪಯೋಗಿಸಿ ವೀರ್ಯಾಣುವನ್ನು ವಿಂಗಡಿಸಲಾಗುತ್ತದೆ.’ ಮೂಲತಃ ಪಶುಧನ ಸಂಸ್ಥೆಗಾಗಿ ಈ ತಂತ್ರಜ್ಞಾನವನ್ನು ವಿಕಸಿಸಿದ ವಿಜ್ಞಾನಿಗನುಸಾರವಾಗಿ, ಆ ವಿಂಗಡಿಸುವಿಕೆಯು ಸುಮಾರು 90 ಪ್ರತಿಶತ ನಿಷ್ಕೃಷ್ಟವಾಗಿರುತ್ತದೆ. ತದನಂತರ, ಆಯ್ದ ವೀರ್ಯಾಣುವನ್ನು, ಅಂಡಾಣುಗಳನ್ನು ಫಲವತ್ತಾಗಿ ಮಾಡಲಿಕ್ಕಾಗಿ ಉಪಯೋಗಿಸಲಾಗುತ್ತದೆ, ಮತ್ತು “ಆ ಬಳಿಕ ಅಪೇಕ್ಷಿತ ಲಿಂಗಜಾತಿಯ ಭ್ರೂಣವು ಗರ್ಭಾಶಯದ ಒಳಗೆ ಸೇರಿಸಲ್ಪಡುತ್ತದೆ.” ಹಾಗಿದ್ದರೂ, ಇಷ್ಟರ ತನಕ ಈ ಪ್ರಕ್ರಿಯೆಯಿಂದ ಒಂದೇ ಒಂದು ಮಾನವ ಜನ್ಮವು ಫಲಿಸಿದೆಯಷ್ಟೆ.
ಹಾನಿಕರವಾದ ತೊದಲ್ನುಡಿ
ಮಾತಾಡುವುದರ ಕುರಿತಾದ ಮಕ್ಕಳ ಆರಂಭದ ಪ್ರಯತ್ನಗಳು, ಅನೇಕವೇಳೆ ಆಕರ್ಷಕವಾಗಿ ಪರಿಗಣಿಸಲ್ಪಡುತ್ತವೆ, ಮತ್ತು ಅನೇಕ ಹೆತ್ತವರು ತಮ್ಮ ಸ್ವಂತ ತೊದಲ್ನುಡಿಯೊಂದಿಗೆ ಮಮತೆಯಿಂದ ಪ್ರತಿಕ್ರಿಯಿಸುತ್ತಾರೆ. ಆದರೂ ಇದು ಮಗುವಿನ ಮಾತಿನ ವಿಕಸನವನ್ನು ಅಪಾಯಕ್ಕೊಡ್ಡಬಹುದು ಎಂದು, ಬ್ರೆಸಿಲಿನ ವಾಕ್ ವಿಶೇಷಜ್ಞೆಯಾದ ಏಲೀಆನೀ ರೇಜೀನ ಕಾರಾಸ್ಕೂ, ವೇಸಾ ಎಂಬ ಪತ್ರಿಕೆಯಲ್ಲಿ ಬರೆಯುತ್ತಾರೆ. ಹೆತ್ತವರು ಮಗುವಿನ ತಪ್ಪುಚ್ಚಾರಣೆಗಳನ್ನು ಪುನರುಚ್ಚರಿಸುವಾಗ, ಅದು “ಸರಿಯಾಗಿಲ್ಲದ ಒಂದು ಮಾತಿನ ನಮೂನೆಗೆ ಪುಷ್ಟಿನೀಡುತ್ತದೆ” ಎಂದು ಕಾರಾಸ್ಕೂ ಹೇಳುತ್ತಾರೆ. ಇದು ಮಾತಿನ ಸಮಸ್ಯೆಗಳನ್ನು ಉಂಟುಮಾಡಬಹುದೆಂದು ಅವರು ಹೇಳುತ್ತಾರೆ. ಅದು ಒಂದು ಮಗುವಿನ ಸಾಮಾಜಿಕ ಸಂಬಂಧಗಳನ್ನೂ ಬಾಧಿಸಬಲ್ಲದು ಎಂದು ಅವರು ಕೂಡಿಸುತ್ತಾರೆ. “ಅನೇಕವೇಳೆ ಅಂತಹ ಮಕ್ಕಳು ಏಕಾಂತವಾಸಿಗಳೂ, ಅಂಜುಬುರುಕರೂ, ಅಭದ್ರರೂ, ತಮ್ಮನ್ನು [ಅಪಹಾಸ್ಯಕ್ಕೆ] ಒಡ್ಡಿಕೊಳ್ಳಬೇಕಾದ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುವವರೂ ಆಗಿ ಪರಿಣಮಿಸುತ್ತಾರೆ.” ಶಬ್ದಗಳನ್ನು ತಪ್ಪಾಗಿ ಉಚ್ಚರಿಸುವುದು ಚಿಕ್ಕ ಮಕ್ಕಳಿಗೆ ಸಾಮಾನ್ಯವಾದದ್ದಾಗಿದೆ, ಮತ್ತು ಸತತವಾಗಿ ಆ ತಪ್ಪುಚ್ಚಾರಣೆಗಳನ್ನು ಸರಿಪಡಿಸುತ್ತಾ ಇರುವ ಅಗತ್ಯವಿಲ್ಲ ಎಂದು ಕಾರಸ್ಕೂ ಸೂಚಿಸುತ್ತಾರೆ. ಆದರೆ ಅವರೊಂದಿಗೆ ಸರಿಯಾಗಿ ಮಾತಾಡುವುದು ಹಾಗೂ “ಅವರು ಬುದ್ಧಿಜೀವಿಗಳಾಗಿದ್ದು, ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ” ಎಂಬುದನ್ನು ಜ್ಞಾಪಕದಲ್ಲಿಡುವುದು ಪ್ರಾಮುಖ್ಯವಾದದ್ದಾಗಿದೆ.
ಚೀನಾ ದೇಶವು ಜಲ ಮಾಲಿನ್ಯವನ್ನು ಕಡಿಮೆಗೊಳಿಸಲಿದೆ
“ಜಲ ಮಾಲಿನ್ಯವು ಚೀನಾದಲ್ಲಿ ಬಹು ದೊಡ್ಡ ಸಮಸ್ಯೆಯಾಗಿದೆ, ಮತ್ತು ಜಲ ಮಾಲಿನ್ಯವನ್ನು ಕಡಿಮೆಗೊಳಿಸುವುದು ಜರೂರಿಯ ಒಂದು ಕೆಲಸವಾಗಿದೆ” ಎಂದು, ಚೀನಾದ ರಾಷ್ಟ್ರೀಯ ಪರಿಸರೀಯ ರಕ್ಷಣಾ ನಿಯೋಗದ ಪ್ರತಿನಿಧಿಯೊಬ್ಬನು ಹೇಳುತ್ತಾನೆ. ಆದುದರಿಂದ ಚೀನಾದ ಅತ್ಯಂತ ಮಲಿನವಾದ ನದಿಗಳು ಹಾಗೂ ಸರೋವರಗಳಲ್ಲಿ ಜಲ ಮಾಲಿನ್ಯವನ್ನು ಕಡಿಮೆಗೊಳಿಸಲಿಕ್ಕಾಗಿ ಚೀನಾದ ಸರಕಾರವು ಸೂಕ್ತ ಕ್ರಮಗಳನ್ನು ಕೈಕೊಳ್ಳುತ್ತಿದೆ ಎಂದು ಚೈನಾ ಟುಡೇ ಪತ್ರಿಕೆಯು ವರದಿಸುತ್ತದೆ. ಉದಾಹರಣೆಗಾಗಿ, ದೇಶದ ತುಂಬ ವಿಪರೀತವಾಗಿ ಮಲಿನಗೊಂಡಿರುವ ನದಿಗಳಲ್ಲಿ ಒಂದಾದ ಹೂಐಹೆಯೊಳಕ್ಕೆ ತ್ಯಾಜ್ಯವು ಪ್ರವೇಶಿಸುವುದನ್ನು ನಿಯಂತ್ರಿಸಲಿಕ್ಕಾಗಿ, ಸರಕಾರವು “ಹೂಐಹೆ ಕಣಿವೆಯಲ್ಲಿರುವ 999 ಚಿಕ್ಕ ಪೇಪರ್ ತಯಾರಿಕೆಯ ಕಾರ್ಖಾನೆಗಳನ್ನು ಮುಚ್ಚಿಸಿಬಿಟ್ಟಿದೆ.” ಹೆಚ್ಚುಕಡಿಮೆ 154 ಮಿಲಿಯ ಜನರು ಹೂಐಹೆ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಇದು ಚೀನಾದ ಪ್ರಮುಖ ದವಸಧಾನ್ಯ ಹಾಗೂ ಶಕ್ತಿ ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ.
ವಾಚನ ಕಾರ್ಯಕ್ರಮವು ಪಾತಕವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ
ಇಂಗ್ಲೆಂಡಿನ ಬ್ರಾಡ್‌ಫೋರ್ಡ್‌ನಲ್ಲಿ, ಶಾಲಾ ಮಕ್ಕಳ ವಾಚನ ಸಾಮರ್ಥ್ಯವನ್ನು ಉತ್ತಮಗೊಳಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟು, ಸರಕಾರದಿಂದ ನಿಧಿಯೊದಗಿಸಲ್ಪಟ್ಟಿರುವ ಒಂದು ಕಾರ್ಯಕ್ರಮವು, ನಾಟಕೀಯವಾದ ಫಲಿತಾಂಶಗಳನ್ನು ಪಡೆಯುತ್ತಿದೆ ಎಂದು, ದಿ ಇಂಡಿಪೆಂಡೆಂಟ್ ಎಂಬ ಬ್ರಿಟಿಷ್ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ವಾಚನ ಕಾರ್ಯಕ್ರಮವು, ವಾಚನ ಕೌಶಲಗಳನ್ನು ಉತ್ತಮಗೊಳಿಸಿದೆ ಮಾತ್ರವಲ್ಲ, ಪಾತಕವನ್ನು ಕಡಿಮೆಗೊಳಿಸಲು ಸಹಾಯ ಮಾಡಿರುವುದಕ್ಕಾಗಿ ಮನ್ನಣೆಯನ್ನು ಸಹ ಪಡೆದುಕೊಂಡಿದೆ! “ಕನ್ನಗಳ್ಳತನವನ್ನು ಮಾಡುತ್ತಿದ್ದ ಯುವ ಜನರ ಸಂಖ್ಯೆಯು, ಶಾಲೆಗಳ್ಳರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಸರಿಯಾಗಿ ಸಂಬಂಧಹೊಂದಿರುವುದನ್ನು ನಾವು ಪ್ರಮಾಣೀಕರಿಸಿದ್ದೇವೆ” ಎಂದು, ಬೆಟರ್ ರೀಡಿಂಗ್ ಪಾರ್ಟ್‌ನರ್‌ಶಿಪ್‌ನ ಮುಖ್ಯಸ್ಥರಾದ ಜಾನ್ ವಾಟ್ಸನ್ ಹೇಳುತ್ತಾರೆ. “ಮಕ್ಕಳು ಓದಲು ಶಕ್ತರಾಗಿರುವುದಾದರೆ, ಶಾಲೆಯಲ್ಲಿ ಏನು ಸಂಭವಿಸುತ್ತದೆ ಎಂಬ ವಿಷಯದಲ್ಲಿ ಅವರು ಹೆಚ್ಚು ಆಸಕ್ತರಾಗಿರುವುದು ಸಂಭವನೀಯ ಮತ್ತು ಶಾಲೆಗಳ್ಳರಾಗಿರುವ ಸಂಭವನೀಯತೆಯು ಕಡಿಮೆಯಾಗಿದೆ. ಅವರು ಪುಂಡರಾಗಿರದ ಕಾರಣ, ಅವರು ಕನ್ನಗಳ್ಳತನ ಮಾಡುವ ಸಂಭವನೀಯತೆಯು ತೀರ ಕಡಿಮೆ.”
ಒಲಿಂಪಿಕ್ ಪಂದ್ಯಗಳು ಹಾಗೂ ಬಡತನ
“ಕೆಲವು ದೇಶಗಳು ಒಲಿಂಪಿಕ್ ಪಂದ್ಯಗಳಲ್ಲಿ ಗೆಲ್ಲುವ ಸ್ಮಾರಕಪದಕಗಳ ಸಂಖ್ಯೆ ಹಾಗೂ ಆ ಪಂದ್ಯಗಳಲ್ಲಿನ ಸೌಕರ್ಯಗಳಿಗಾಗಿಯೂ ಪ್ರಾಯೋಜಕತೆಯನ್ನು ಸಂಸ್ಥಾಪಿಸಲಿಕ್ಕಾಗಿಯೂ ಬಂಡವಾಳವಾಗಿ ಹಾಕಲ್ಪಟ್ಟ ಹಣದ ಪ್ರಮಾಣವು, ಬಡತನವನ್ನು ಕೊನೆಗೊಳಿಸಲಿಕ್ಕಾಗಿರುವ ಲೋಕದ ಒಪ್ಪಂದದ ಕುರಿತು ಪ್ರಶ್ನೆಗಳನ್ನು ಎಬ್ಬಿಸುತ್ತದೆ” ಎಂದು ಸ್ವಿಟ್ಸರ್ಲೆಂಡ್‌ನ ಈಎನ್‌ಐ ಬುಲೆಟಿನ್ ವರದಿಸುತ್ತದೆ. “ಇದು, ಮಾನವ ಕೌಶಲ ಹಾಗೂ ತಾಳ್ಮೆಯ ಹೆಚ್ಚುಗಾರಿಕೆಯನ್ನು ಪ್ರಸಿದ್ಧಗೊಳಿಸಬಾರದು ಅಥವಾ ಅಸಾಧಾರಣವಾದ ಸಾಹಸಕಾರ್ಯಗಳನ್ನು ನಾವು ಶ್ಲಾಘಿಸಬಾರದು ಎಂಬುದನ್ನು ಅರ್ಥೈಸುವುದಿಲ್ಲ” ಎಂದು, ಆಸ್ಟ್ರೇಲಿಯದ ವಿಶ್ವ ವೀಕ್ಷಣ ನಿಯೋಗದ ಗ್ರೆಗ್ ಫೂಟ್ ಹೇಳುತ್ತಾರೆ. ಅವರು ಕೂಡಿಸುವುದು, “ಆದರೆ, ನಮ್ಮ ನೆರೆಹೊರೆಯವರಲ್ಲಿ ಕೋಟಿಗಟ್ಟಲೆ ಜನರಿಗೆ ನಡೆಯಲು ಶಕ್ತರಾಗಲು ಸಾಕಾಗುವಷ್ಟು ಆಹಾರವೂ ಇಲ್ಲದಿರುವಾಗ, ನಮ್ಮ ಗಣ್ಯ ಕ್ರೀಡಾಪಟುಗಳ ಆಹಾರಪಥ್ಯವನ್ನು ಸಾಂಗವಾಗಿ ಪೂರೈಸಲಿಕ್ಕಾಗಿ ನಾವು ಅಷ್ಟೊಂದು ಹಣವನ್ನು ಖರ್ಚುಮಾಡುವಾಗ, ನಮಗೆ ಸೂಕ್ತವಾದ ಪ್ರಾಧಾನ್ಯಗಳಿವೆಯೊ ಇಲ್ಲವೊ ಎಂದು ನಾವು ಕೇಳಿಕೊಳ್ಳಬೇಕು.” ಅಟ್ಲ್ಯಾಂಟದಲ್ಲಿ ಒಲಿಂಪಿಕ್ ಪಂದ್ಯಗಳು ನಡೆಸಲ್ಪಟ್ಟ ಎರಡು ವಾರಗಳಲ್ಲಿ, ಲೋಕವ್ಯಾಪಕವಾಗಿ ಹಸಿವೆಯಿಂದಲೂ ತಡೆಗಟ್ಟಸಾಧ್ಯವಿರುವ ರೋಗಗಳಿಂದಲೂ 4,90,000 ಮಕ್ಕಳು ಸತ್ತರೆಂದು ಅಂದಾಜುಮಾಡಲಾಗಿದೆ.
ಜಿರಲೆ ಅಲರ್ಜಿ
ಯೂನಿವರ್ಸಿಟಿ ಆಫ್ ಕ್ಯಾಲಿಫೊರ್ನಿಯ ಎಟ್ ಬರ್‌ಕ್ಲೀ ವೆಲ್‌ನೆಸ್ ಲೆಟರ್‌ಗನುಸಾರ, ಅಮೆರಿಕದಲ್ಲಿರುವ 1 ಕೋಟಿ ಮತ್ತು 1.5 ಕೋಟಿಯಷ್ಟು ಜನರು ಜಿರಲೆಗಳ ಅಲರ್ಜಿಯನ್ನು ಹೊಂದಿದ್ದಾರೆ ಎಂದು ಅಂದಾಜುಮಾಡಲ್ಪಟ್ಟಿದೆ. ಜಿರಲೆಗಳಿಗೆ ಒಡ್ಡಲ್ಪಡುವಾಗ, ಅಲರ್ಜಿಯಿರುವ ವ್ಯಕ್ತಿಯೊಬ್ಬನು “ಚರ್ಮದ ನವೆ, ಹೇ ಜ್ವರ, ಅಥವಾ ಉಬ್ಬಸ ರೋಗಲಕ್ಷಣಗಳ”ನ್ನು ಅನುಭವಿಸಬಹುದು. ಆ ವಾರ್ತಾಪತ್ರವು ಗಮನಿಸಿದ್ದೇನೆಂದರೆ, “ಉಬ್ಬಸ ರೋಗವಿರುವ ಎಲ್ಲ ಮಕ್ಕಳಲ್ಲಿ 80% ಮಂದಿ ಜಿರಲೆಗಳಿಗೆ ಸೂಕ್ಷ್ಮಸಂವೇದಿಗಳಾಗಿದ್ದಾರೆ.” ಜಿರಲೆಗಳು ಕೊಳಕಾದ ಅಡಿಗೆಮನೆಯ ಒಂದು ಸೂಚನೆಯಾಗಿರಬೇಕೆಂದೇನಿಲ್ಲ. “ಅತ್ಯಂತ ಸ್ವಚ್ಛವಾಗಿರುವ ಅಡಿಗೆಮನೆಯಲ್ಲಿ ಸಹ ಅವು ತಳವೂರಬಲ್ಲವು” ಎಂದು ವೆಲ್‌ನೆಸ್ ಲೆಟರ್ ಪ್ರತಿಪಾದಿಸುತ್ತದೆ. ಒಂದೊಂದು ಜಿರಲೆಗಳು ಗೋಚರವಾಗಬಹುದಾದರೂ, ಮನೆಯ ತುಂಬ ಸುಳಿದಾಡುತ್ತಿರುವ 1,000ದಷ್ಟು ತೋರಿಬರದ ಜಿರಲೆಗಳು ಇರಸಾಧ್ಯವಿದೆ ಎಂದು ಅಂದಾಜುಮಾಡಲ್ಪಟ್ಟಿದೆ. ಒಂದು ಜೊತೆ ಜಿರಲೆಗಳು, ಕೇವಲ ಒಂದು ವರ್ಷದಲ್ಲಿ ಸುಮಾರು 1,00,000 ವಂಶಜರನ್ನು ಉತ್ಪಾದಿಸಬಲ್ಲವು.
ಬಡತನದ ಹೆಚ್ಚಳ
ಲೋಕವ್ಯಾಪಕವಾಗಿ ಈಗ ತೀರ ಬಡತನದಲ್ಲಿ—ಒಂದು ವರ್ಷಕ್ಕೆ 370 ಡಾಲರುಗಳಿಗಿಂತಲೂ ಕಡಿಮೆ ಹಣಸಂಪಾದನೆ ಮಾಡುವವರೆಂದು ನಿರೂಪಿಸಲ್ಪಟ್ಟಿದ್ದಾರೆ—ಜೀವಿಸುತ್ತಿರುವ ಜನರ ಸಂಖ್ಯೆಯು, ಸುಮಾರು 130 ಕೋಟಿಯಾಗಿದೆ, ಲೋಕದ ಜನಸಂಖ್ಯೆಯಲ್ಲಿ ಬಹುಮಟ್ಟಿಗೆ ಮೂರನೆಯ ಒಂದು ಭಾಗ. ಹೆಚ್ಚಿನವರು ವರ್ಧಿಷ್ಣು ಲೋಕದಲ್ಲಿ ಜೀವಿಸುತ್ತಾರೆ. ಪ್ರಾತಿನಿಧಿಕವಾಗಿ ಈ ಜನರಿಗೆ ಸಾಕಷ್ಟು ಆಹಾರ, ಶುದ್ಧವಾದ ನೀರು, ಆರೋಗ್ಯ ಆರೈಕೆ, ಸಾಕಷ್ಟು ವಸತಿ, ಶಿಕ್ಷಣ, ಮತ್ತು ಉದ್ಯೋಗವು ಸುಲಭಲಭ್ಯವಾಗಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ತಾವು ಜೀವಿಸುವ ಸಮಾಜಗಳಲ್ಲಿ ಅವರು ಕೀಳಾಗಿ ಪರಿಗಣಿಸಲ್ಪಡುತ್ತಾರೆ ಮತ್ತು ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿಕೊಳ್ಳುವ ಅಧಿಕಾರ ಅವರಿಗಿರುವುದಿಲ್ಲ. ಸಂಯುಕ್ತ ರಾಷ್ಟ್ರಗಳ ವಿಕಾಸ ಕಾರ್ಯಕ್ರಮಕ್ಕನುಸಾರ, ತೀರ ಬಡತನದಲ್ಲಿ ಜೀವಿಸುತ್ತಿರುವ ಜನರ ಸಂಖ್ಯೆಯು ಪ್ರತಿ ವರ್ಷ ಬಹುಮಟ್ಟಿಗೆ 2.5 ಕೋಟಿಗಳಷ್ಟು ಹೆಚ್ಚುತ್ತಿದೆ.
ನಿತ್ಯವೂ ಹಣ್ಣು ತಿನ್ನಿರಿ
ಬ್ರಿಟಿಷ್ ವೈದ್ಯಕೀಯ ಪತ್ರಿಕೆ (ಇಂಗ್ಲಿಷ್)ಯಲ್ಲಿ ಪ್ರಕಟಿಸಲ್ಪಟ್ಟ, 11,000 ಜನರ 17 ವರ್ಷ ಕಾಲದ ಒಂದು ಅಧ್ಯಯನಕ್ಕನುಸಾರ, ನಿತ್ಯವೂ ತಾಜಾ ಹಣ್ಣನ್ನು ತಿನ್ನುವುದು ಹೃದ್ರೋಗಗಳ ಅಪಾಯದಲ್ಲಿನ ಕಡಿತದೊಂದಿಗೆ ಸಂಬಂಧಿಸಿದೆ. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಯಾರು ಪ್ರತಿದಿನ ತಾಜಾ ಹಣ್ಣನ್ನು ತಿಂದರೊ, ಅವರಲ್ಲಿ ಹೃದಯಾಘಾತಗಳಿಂದ 24 ಪ್ರತಿಶತ ಕಡಿಮೆ ಮರಣಗಳು ಮತ್ತು ಪಾರ್ಶ್ವವಾಯುವಿನ ಹೊಡೆತಗಳಿಂದ 32 ಪ್ರತಿಶತ ಕಡಿಮೆ ಮರಣಗಳು ಸಂಭವಿಸಿದವು. ನಿತ್ಯವೂ ಹಣ್ಣನ್ನು ತಿಂದವರನ್ನು ವಿರಳವಾಗಿ ಹಣ್ಣು ತಿಂದವರೊಂದಿಗೆ ಹೋಲಿಸುವಾಗ 21 ಪ್ರತಿಶತದಷ್ಟು ಕಡಿಮೆ ಜನರು ಸತ್ತರು. ತಾಜಾ ಹಣ್ಣಿನ ಕೊರತೆಯಿರುವ ಆಹಾರಪಥ್ಯಗಳು ನಿರ್ದಿಷ್ಟ ಜನಸಂಖ್ಯೆಗಳಲ್ಲಿ ಪಾರ್ಶ್ವವಾಯುವಿನ ಹೊಡೆತ ಮತ್ತು ಹೃದ್ರೋಗದಂತಹ ನಾಳಗಳ ವ್ಯಾಧಿಗಳಲ್ಲಿನ ಅಭಿವೃದ್ಧಿಗಳಿಗೆ ನೆರವು ನೀಡಬಹುದೆಂದು ಬ್ರಿಟಿಷ್ ಹಾಗೂ ಸ್ಪ್ಯಾನಿಷ್ ವಿಜ್ಞಾನಿಗಳ ಒಂದು ತಂಡವು ಗಮನಿಸುತ್ತದೆ. ಅತಿ ಹೆಚ್ಚಿನ ಆರೋಗ್ಯ ಪ್ರಯೋಜನಕ್ಕಾಗಿ, ಪ್ರತಿದಿನ ಕಡಿಮೆ ಪಕ್ಷ ಐದು ಬಾರಿಯಾದರೂ ಕಾಯಿಪಲ್ಯ ಹಾಗೂ ಹಣ್ಣುಗಳ ತಿನ್ನುವಿಕೆಯನ್ನು ಸಂಶೋಧಕರು ಈಗ ಶಿಫಾರಸ್ಸು ಮಾಡುತ್ತಾರೆ. ಬ್ರಿಟಿಷ್ ವೈದ್ಯಕೀಯ ಪ್ರತಿಕೆಗನುಸಾರ ತಾಜಾ ಹಣ್ಣುಗಳು ಮತ್ತು ಕಾಯಿಪಲ್ಯಗಳು ಲಭ್ಯವಿರದಿದ್ದಲ್ಲಿ, ಘನೀಭವಿಸಿದ ಹಣ್ಣುಗಳು ಮತ್ತು ಕಾಯಿಪಲ್ಯಗಳು ತದ್ರೀತಿಯ ಪ್ರಯೋಜನಗಳನ್ನು ಒದಗಿಸಬಹುದು.
ಜೀವನಪರ್ಯಂತರದ ಮಿತ್ರ
ತಮಗೆ ಜೀವನಪರ್ಯಂತರದ ಮಿತ್ರನಿದ್ದಾನೆಂದು ಜರ್ಮನಿಯಲ್ಲಿನ 10 ಜನರಲ್ಲಿ 9 ಜನರು ಹೇಳುತ್ತಾರೆಂದು ನಾಸೌಇಶಿ ನಾಯಿ ಪ್ರೆಸಿ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಇದು ಪ್ರಯೋಗವಾದಿ ವೈಜ್ಞಾನಿಕ ಸಮಾಜ ಸಂಶೋಧನೆಗಾಗಿರುವ ಸಂಸ್ಥೆಯಿಂದ ನಡೆಸಲ್ಪಟ್ಟ ಒಂದು ಸಮೀಕ್ಷೆಯಿಂದ ಪ್ರಕಟವಾಯಿತು. ಈ ಸಂಸ್ಥೆಯು 16ರಿಂದ 60 ವರ್ಷದ ನಡುವಿನ ವಯಸ್ಸಿನ 1,000ಕ್ಕಿಂತಲೂ ಹೆಚ್ಚು ಜನರನ್ನು ಪ್ರಶ್ನಿಸಿತು. ದೀರ್ಘಕಾಲ ಬಾಳುವ ಮಿತ್ರತ್ವದಲ್ಲಿನ ಅಂಶಗಳಲ್ಲಿ, ಸಂವಾದ ಮತ್ತು ಪ್ರಾಮಾಣಿಕತೆಯು ಆದ್ಯ ಪ್ರಮುಖತೆಯ ವಿಷಯಗಳಾಗಿ ಪರಿಗಣಿಸಲ್ಪಟ್ಟವು. ಇಂಟರ್‌ವ್ಯೂ ಮಾಡಲ್ಪಟ್ಟವರಲ್ಲಿ ಬಹುಮಟ್ಟಿಗೆ ಎಲ್ಲರು ಒಪ್ಪಿಕೊಂಡದ್ದೇನೆಂದರೆ, ಇಂತಹ ಮಿತ್ರತ್ವಗಳಿಗೆ ನಿಷ್ಠಾಹೀನತೆ ಮತ್ತು ವಿಶ್ವಾಸಘಾತುಕತೆಯು ನಿಶ್ಚಯವಾಗಿಯೂ ಅಂತ್ಯವನ್ನು ತರುವವು. ವಾರ್ತಾಪತ್ರಿಕೆಗನುಸಾರ, “ಒಬ್ಬ ಒಳ್ಳೆಯ ಮಿತ್ರನು [ತಮಗೆ] ಒಂದು ತುರ್ತುಪರಿಸ್ಥಿತಿಯಲ್ಲಿ ಸಾಲಕೊಡುವ ನಿರೀಕ್ಷೆ ಕೇವಲ 16 ಪ್ರತಿಶತ ಜನರಿಗಿದೆ.” ಇನ್ನೊಂದು ಕಡೆಯಲ್ಲಿ, ಕಾಯಿಲೆಯ ಸಮಯಗಳಲ್ಲಿ ಒಬ್ಬ ಮಿತ್ರನ ಬೆಂಬಲವಿರುವುದು ಮಹತ್ತರವಾದ ಸಂಗತಿಯೆಂದು ಹೆಚ್ಚಿನ ಜನರು ನೆನಸಿದರು.
ಧೂಮಪಾನಕ್ಕಿಂತ ಹೆಚ್ಚು ಅಪಾಯಕರವೊ?
ಸ್ಟ್ಯಾಟಿಸ್ಟಿಕ್ಸ್ ಕೆನಡಗನುಸಾರ, “ಕುಳಿತೇ ಕೆಲಸಮಾಡುವ ಜೀವನಶೈಲಿಯು, ಆರೋಗ್ಯಕ್ಕೆ ಧೂಮಪಾನಕ್ಕಿಂತ ಇಮ್ಮಡಿಯಾದ ಅಪಾಯವನ್ನು ಒಡ್ಡುತ್ತದೆ,” ಎಂದು ದ ಮೆಡಿಕಲ್ ಪೋಸ್ಟ್ ವರದಿಸುತ್ತದೆ. ಕೆನಡದ ಸುಮಾರು ಎಪ್ಪತ್ತು ಲಕ್ಷ ಜನರು ಧೂಮಪಾನ ಮಾಡುವುದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಮತ್ತು ಶೀಘ್ರ ಮರಣವನ್ನು ಅನುಭವಿಸುವ ಸಾಧ್ಯತೆ ಇರುವುದಾದರೂ, 1.4 ಕೋಟಿಯಿಂದ 1.7 ಕೋಟಿಗಳಷ್ಟು ಜನರು ವ್ಯಾಯಾಮದ ಕೊರತೆಯ ಕಾರಣ ತದ್ರೀತಿಯ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಕ್ರಮವಾದ ವ್ಯಾಯಾಮವನ್ನು ಅಡ್ಡೈಸುವ ಪ್ರಧಾನ ಅಂಶಗಳಲ್ಲಿ ಸಮಯ, ಶಕ್ತಿ, ಮತ್ತು ಪ್ರಚೋದನೆಯ ಕೊರತೆ ಉಲ್ಲೇಖಿಸಲ್ಪಟ್ಟಿವೆ. ಕುಳಿತೇ ಕೆಲಸಮಾಡುವ ಜನರು ಹೆಚ್ಚಿನ ಕೊಬ್ಬನ್ನು ಮತ್ತು ಕಡಿಮೆ ಹಣ್ಣುಗಳು ಹಾಗೂ ಕಾಯಿಪಲ್ಯಗಳನ್ನು ಸೇವಿಸುವ ಹೆಚ್ಚು ಸಾಧ್ಯತೆಯೂ ಇದೆ. “ಹೃದಯದ ತೃಪ್ತಿದಾಯಕ ಪ್ರಯೋಜನಗಳನ್ನು ಗಳಿಸಲಿಕ್ಕಾಗಿರುವ ಸದ್ಯದ ಗುರಿಯು, ಜನರು . . . ಮಿತವಾದ ಇಲ್ಲವೆ ಉನ್ನತ ತೀವ್ರತೆಯಲ್ಲಿ, ಒಂದು ದಿನ ಬಿಟ್ಟು ಒಂದು ದಿನ—ಕಡಿಮೆ ಪಕ್ಷ 30 ನಿಮಿಷಗಳ ವರೆಗೆ ವ್ಯಾಯಾಮ ಮಾಡುವಂತೆ ಕಾರ್ಯನಡಿಸುವುದಾಗಿದೆ” ಎಂದು ಪೋಸ್ಟ್ ಪತ್ರಿಕೆ ಹೇಳುತ್ತದೆ.