ಚರ್ನೊಬೆಲ್ನ ವಿಷಣ್ಣತೆಯ ನಡುವೆಯೂ ದೃಢವಾದ ನಿರೀಕ್ಷೆ
ಯೂಕ್ರೇನ್ನ ಎಚ್ಚರ! ಸುದ್ದಿಗಾರರಿಂದ
ಎಪ್ರಿಲ್ 26, 1986ರಂದು, ಇತಿಹಾಸದಲ್ಲೇ ಅತಿಕೇಡಿನ ನ್ಯೂಕ್ಲಿಯರ್ ಶಕ್ತಿ ಸ್ಥಾವರದ ಅಪಘಾತವು ಯೂಕ್ರೇನ್ನ ಚರ್ನೊಬೆಲ್ನಲ್ಲಿ ಸಂಭವಿಸಿತು. ತದನಂತರ ಆ ವರ್ಷ, ಆಗಿನ ಸೋವಿಯಟ್ ಅಧ್ಯಕ್ಷರಾದ ಮಿಕಾಯಿಲ್ ಗಾರ್ಬಚೆವ್ ಗಮನಿಸಿದ್ದೇನೆಂದರೆ, ಆ ದುರಂತವು “ಮಾನವಜಾತಿಯು ಕಂಡುಹಿಡಿದಿರುವ ದೈತ್ಯಾಕಾರದ ಶಕ್ತಿಗಳನ್ನು ಇನ್ನೂ ನಿಯಂತ್ರಣದಲ್ಲಿಟ್ಟಿಲ್ಲ” ಎಂಬುದರ ಕ್ರೂರ ಮರುಜ್ಞಾಪನವಾಗಿತ್ತು.
ಚರ್ನೊಬೆಲ್ ವಿಪತ್ತಿನ ಮಹತ್ವವನ್ನು ಒತ್ತಿಹೇಳುತ್ತಾ, ಫೆಬ್ರವರಿ 1987ರ ಸೈಕಾಲಾಜಿ ಟುಡೇ ಪತ್ರಿಕೆಯ ಜರ್ಮನ್ ಮುದ್ರಣವು ವರದಿಸಿದ್ದು: “ಚರ್ನೊಬೆಲ್ನಲ್ಲಾದ ರಿಯಾಕ್ಟರ್ ವಿಪತ್ತು . . . ಆಧುನಿಕ ನಾಗರಿಕತೆಯ ಇತಿಹಾಸದಲ್ಲಿ ಒಂದು ಸಂಧಿಕಾಲವಾಗಿತ್ತು. ಮತ್ತು ಅದು ನಮ್ಮನ್ನು ಶತಮಾನಗಳ ವರೆಗೆ ಗಣನೀಯವಾಗಿ ಬಾಧಿಸಲಿರುವ ಒಂದು ಅನಾಹುತವಾಗಿತ್ತು.” ದ ನ್ಯೂ ಯಾರ್ಕ್ ಟೈಮ್ಸ್ ಹೇಳಿದ್ದೇನೆಂದರೆ, “ಸಕಲ ನ್ಯೂಕ್ಲಿಯರ್ ಪರೀಕ್ಷೆಗಳೂ ವಿಸ್ಫೋಟಗೊಂಡಿರುವ ಎಲ್ಲ ಬಾಂಬುಗಳೂ ಹೊರಸೂಸಿರುವಷ್ಟು ಪ್ರಮಾಣದ ದೀರ್ಘಾವಧಿಯ ವಿಕಿರಣವು ಲೋಕದ ಗಾಳಿ, ಮೇಲ್ಮಣ್ಣು ಮತ್ತು ನೀರಿನೊಳಗೆ [ಹೂರಸೂಸಲ್ಪಟ್ಟಿತ್ತು].”
ಜರ್ಮನ್ ವಾರ್ತಾಪತ್ರಿಕೆ ಹಾನೊಫರ್ಷೆ ಆಲ್ಗೆಮೈನ್ ಭವಿಷ್ಯನುಡಿದದ್ದೇನೆಂದರೆ, “ಮುಂದಿನ 50 ವರ್ಷಗಳಲ್ಲಿ ಲೋಕದಾದ್ಯಂತ ಅಂದಾಜುಮಾಡಲ್ಪಟ್ಟ 60,000 ಜನರು ಸೋವಿಯಟ್ ರಿಯಾಕ್ಟರ್ ಕರಗಿಹೋದ ಕಾರಣ ಕ್ಯಾನ್ಸರ್ನಿಂದ ಸಾಯುವರು . . . ಇನ್ನೂ ಹೆಚ್ಚಿನ 5,000 ಜನರು ಗಂಭೀರವಾದ ಆನುವಂಶೀಯ ಹಾನಿಯನ್ನು ಅನುಭವಿಸುವರು ಮತ್ತು 1,000ದಷ್ಟು ಜನರು, ಜನ್ಮತಃ ಬಂದಿರುವ ಆರೋಗ್ಯ ದೋಷಗಳಿಂದ ಕಷ್ಟಾನುಭವಿಸುವರು.”
ಚರ್ನೊಬೆಲ್ ದುರಂತವು ಲಕ್ಷಾಂತರ ಜೀವಗಳನ್ನು ಮಂಕುಮಾಡಿರುವ ಭಯ, ಕಳವಳ, ಮತ್ತು ಅನಿಶ್ಚಿತತೆಯ ಮೋಡವನ್ನು ಸೃಷ್ಟಿಸಿತು. ಆದರೂ, ದಟ್ಟವಾದ ವಿಷಣ್ಣತೆಯ ನಡುವೆಯೂ ಕೆಲವರು ದೃಢವಾದ ನಿರೀಕ್ಷೆಯನ್ನು ಅನುಭವಿಸುವಂತಾಗಿದೆ. ರುಡ್ನಿಕ್ ಕುಟುಂಬವನ್ನು ಪರಿಗಣಿಸಿರಿ. ಆ ಕುಟುಂಬದಲ್ಲಿ ವಿಕ್ಟರ್ ಮತ್ತು ಆನ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಈಲೆನಾ ಮತ್ತು ಆನ್ಯಾ ಇದ್ದಾರೆ. ಎಪ್ರಿಲ್ 1986ರಲ್ಲಿ ರುಡ್ನಿಕರು ಪ್ರಿಪೆಟ್ನಲ್ಲಿ, ಚರ್ನೊಬೆಲ್ ರಿಯಾಕ್ಟರಿನಿಂದ ಮೂರು ಕಿಲೊಮೀಟರುಗಳಿಗಿಂತಲೂ ಕಡಿಮೆಯಾದ ಅಂತರದಲ್ಲಿ ಜೀವಿಸುತ್ತಿದ್ದರು.
ಅಪಘಾತದ ದಿನ
ಆ ದುರಂತಮಯ ಶನಿವಾರ ಬೆಳಗ್ಗೆ, ದುರ್ಬಲಗೊಂಡ ರಿಯಾಕ್ಟರ್ ನಿವೇಶನದಲ್ಲಿ ಬೆಂಕಿ ಆರಿಸುವವರ ಸಾಹಸಮಯ ಕ್ರಿಯೆಯು ತೀರ ಕೆಟ್ಟದಾಗಿ ಪರಿಣಮಿಸುತ್ತಿದ್ದ ಪರಿಸ್ಥಿತಿಯನ್ನು ತಡೆಗಟ್ಟಿತು. ಕೆಲವೇ ತಾಸುಗಳಲ್ಲಿ ಬೆಂಕಿ ಆರಿಸುವವರಿಗೆ ವಿಕಿರಣ ಅಸ್ವಸ್ಥತೆಯು ತಗಲಿತು ಮತ್ತು ತದನಂತರ ಅವರಲ್ಲಿ ಕೆಲವರು ಸತ್ತುಹೋದರು. 1970ಗಳಲ್ಲಿ ಚರ್ನೊಬೆಲ್ನಲ್ಲಿ ಡೆಪ್ಯೂಟಿ ಚೀಫ್ ಇಂಜಿನಿಯರ್ ಆಗಿದ್ದ ಗ್ರಿಗೊರಿ ಮೆಡ್ವೆಡೆಫ್ ಸುಟ್ಟುಹೋದ ಪ್ರಾಣಗಳು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ವರ್ಣಿಸುವುದು: “ವಿದ್ಯುತ್ ವಿಕಿರಣ ಮೋಡವು, ಪಟ್ಟಣದಿಂದ ರಿಯಾಕ್ಟರ್ ನಿವೇಶನವನ್ನು ಬೇರ್ಪಡಿಸುವ ಚಿಕ್ಕ ಪೈನ್ವುಡ್ ತೋಪಿನಾಚೆ ದಾಟಿ, ಆ ಚಿಕ್ಕ ಕಾಡನ್ನು ವಿದ್ಯುತ್ ವಿಕಿರಣದ ಬೂದಿಯ ಮಳೆಯಿಂದ ಆವರಿಸಿತು.” ಅನೇಕ ಟನ್ಗಳಷ್ಟು ಹಬೆಯಾಗಿಸಲ್ಪಟ್ಟ ವಿದ್ಯುತ್ ವಿಕಿರಣ ಘಟಕಾಂಶವು ವಾಯುಮಂಡಲದಲ್ಲಿ ಬಿಡುಗಡೆಗೊಳಿಸಲ್ಪಟ್ಟಿತೆಂದು ವರದಿ ಮಾಡಲಾಗಿದೆ!
ಗಮನಾರ್ಹವಾಗಿ, 40,000ಕ್ಕಿಂತಲೂ ಹೆಚ್ಚು ನಿವಾಸಿಗಳಿರುವ ನಗರವಾದ ಪ್ರಿಪೆಟ್ನಲ್ಲಿ ಜೀವನವು, ಆ ಶನಿವಾರದಂದು ಎಂದಿನಂತೆಯೇ ಮುಂದುವರಿಯುತ್ತಿರುವಂತೆ ತೋರಿತು. ಮಕ್ಕಳು ಬೀದಿಗಳಲ್ಲಿ ಆಡಿದರು ಮತ್ತು ಜನರು ಮೇ 1ರಂದು ಸೋವಿಯಟ್ ರಜಾದಿನದ ಉತ್ಸವಕ್ಕಾಗಿ ತಯಾರಿನಡೆಸಿದರು. ಅಪಘಾತದ ಪ್ರಕಟನೆಯಾಗಲಿ, ಅಪಾಯದ ಎಚ್ಚರಿಕೆಯಾಗಲಿ ನೀಡಲ್ಪಡಲಿಲ್ಲ. ಆನ ರುಡ್ನಿಕ್ ತನ್ನ ಮೂರು ವರ್ಷ ಪ್ರಾಯದ ಮಗಳು ಈಲೆನಾಳೊಂದಿಗೆ ಹೊರಗೆ ಅಡ್ಡಾಡುತ್ತಿದ್ದಳು. ಆಗ ಅವರು ಆನಳ ಮಲತಂದೆಯನ್ನು ಸಂಧಿಸಿದರು. ಅವನು ಅಪಘಾತದ ಕುರಿತು ಕೇಳಿದ್ದನು. ವಿಕಿರಣದ ಗಂಡಾಂತರದ ಕುರಿತು ಚಿಂತಿಸುತ್ತಾ, ಅವನು ಬೇಗನೆ ಅವರನ್ನು 16 ಕಿಲೊಮೀಟರುಗಳಷ್ಟು ದೂರವಿದ್ದ ತನ್ನ ಮನೆಗೆ ವಾಹನದಲ್ಲಿ ಕರೆದುಕೊಂಡುಹೋದನು.
ವಿದ್ಯುತ್ ವಿಕಿರಣ ಮೋಡವು ವಾಯುಮಂಡಲದಲ್ಲಿ ಏರಿ, ಯೂಕ್ರೇನ್, ಬೆಲೊರಷ್ಯಾ (ಈಗ ಬೆಲಾರಸ್), ರಷ್ಯಾ, ಮತ್ತು ಪೋಲೆಂಡಿನ ಆಚೆ ನೂರಾರು ಕಿಲೊಮೀಟರ್ಗಳು, ಅಷ್ಟೇ ಅಲ್ಲದೆ ಜರ್ಮನಿ, ಆಸ್ಟ್ರಿಯ ಮತ್ತು ಸ್ವಿಟ್ಸರ್ಲೆಂಡ್ನ ಮೇಲೆಯೂ ಚಾಚಿತು. ಮುಂದಿನ ಸೋಮವಾರದಂದು, ಸ್ವೀಡನ್ ಮತ್ತು ಡೆನ್ಮಾರ್ಕ್ನಲ್ಲಿದ್ದ ವಿಜ್ಞಾನಿಗಳು ವಿದ್ಯುತ್ ವಿಕಿರಣ ಕಾರ್ಯಶಕ್ತಿಯ ಉನ್ನತ ಮಟ್ಟಗಳನ್ನು ದಾಖಲು ಮಾಡಿದಾಗ ಕಳವಳಗೊಂಡರು.
ಫಲಾಂತರ
ಸೋವಿಯಟ್ ಸೈನಿಕರು, ಬೆಂಕಿ ಆರಿಸುವವರು, ನಿರ್ಮಾಣ ಪರಿಣತರು, ಮತ್ತು ಇತರರು ಚರ್ನೊಬೆಲ್ಗೆ ಕಳುಹಿಸಲ್ಪಟ್ಟರು. ಈ ಗುಂಪು—ಸುಮಾರು 6,00,000 ನಿರ್ದಿಷ್ಟ ಸಂಖ್ಯೆಯ ಜನರು—“ನಿಗ್ರಹಗಾರರು” (“ಲಿಕ್ವಿಡೇಟರ್ಸ್”) ಎಂಬುದಾಗಿ ಜ್ಞಾತರಾದರು. ಅವರು ಹಾನಿಗೊಂಡ ರಿಯಾಕ್ಟರನ್ನು ಹತ್ತು ಮಾಳಿಗೆಗಳಷ್ಟು ಎತ್ತರ ಮತ್ತು ಎರಡು ಮೀಟರುಗಳಷ್ಟು ದಪ್ಪವಾಗಿರುವ ಉಕ್ಕು ಮತ್ತು ಜಲ್ಲಿಗಾರೆಯ ಶವಸಂಪುಟದಿಂದ ಮುಚ್ಚಿಬಿಡುವ ಮೂಲಕ ಯೂರೋಪಿಗಾಗಲಿದ್ದ ಇನ್ನೂ ಕೆಡುಕಿನ ವಿಪತ್ತನ್ನು ತಡೆಗಟ್ಟಿದರು.
ಮುಂದಿನ ಕೆಲವು ದಿನಗಳೊಳಗೆ ಹತ್ತಿರವಿದ್ದ ಕ್ಷೇತ್ರಗಳಿಂದ ಜನರನ್ನು ಸ್ಥಳಾಂತರಿಸುವ ಕೆಲಸವು ಆರಂಭಿಸಿತು. “ನಾವು ಎಲ್ಲವನ್ನೂ—ಬಟ್ಟೆಗಳು, ಹಣ, ದಾಖಲೆ ಪತ್ರಗಳು, ಆಹಾರ—ನಾವು ಹೊಂದಿದ್ದ ಸಕಲವನ್ನೂ ಬಿಟ್ಟುಬಿಡುತ್ತಾ, ನಮ್ಮ ಮನೆಯನ್ನು ತೊರೆದುಬಿಡಬೇಕಿತ್ತು” ಎಂಬುದಾಗಿ ವಿಕ್ಟರ್ ವಿವರಿಸಿದನು. “ನಾವು ಬಹಳ ಕಳವಳಗೊಂಡಿದ್ದೆವು ಏಕೆಂದರೆ ಆನ ನಮ್ಮ ಎರಡನೆಯ ಮಗುವಿನ ಗರ್ಭಧರಿಸಿದ್ದಳು.”
ಸುಮಾರು 1,35,000 ಜನರು ಸ್ಥಳಾಂತರಿಸಬೇಕಿತ್ತು—ರಿಯಾಕ್ಟರ್ನ ಸುತ್ತಲೂ ಬಹುಮಟ್ಟಿಗೆ 30 ಕಿಲೊಮೀಟರುಗಳಷ್ಟು ದೂರದ ಸ್ಥಳದಲ್ಲಿದ್ದ ಎಲ್ಲ ವಸಾಹತುಗಳು ತೊರೆಯಲ್ಪಟ್ಟವು. ರುಡ್ನಿಕರು ಸಂಬಂಧಿಕರೊಂದಿಗೆ ಇರತೊಡಗಿದರು. ಆದರೆ, ರುಡ್ನಿಕರು ತಮಗೆ ವಿದ್ಯುತ್ ವಿಕಿರಣವನ್ನು ಹಬ್ಬಿಸುವರೆಂದು ಈ ಸಂಬಂಧಿಕರು ಭಯಪಟ್ಟರು. “ಅವರು ಚಿಂತಿತರಾಗಿ, ಕೊನೆಯಲ್ಲಿ ನಾವು ಅಲ್ಲಿಂದ ಹೋಗುವಂತೆ ಕೇಳಿಕೊಂಡರು” ಎಂಬುದಾಗಿ ಆನ ಹೇಳಿದಳು. ಸ್ಥಳಾಂತರಿಸಿದ ಇತರರಿಗೂ ತದ್ರೀತಿಯ ವೇದನಾಮಯ ಅನುಭವಗಳಾದವು. ಕೊನೆಗೆ, ಸೆಪ್ಟೆಂಬರ್ 1986ರಲ್ಲಿ ರುಡ್ನಿಕರು ರಷ್ಯಾ, ಆಗ್ನೇಯ ಮಾಸ್ಕೋವಿನಿಂದ ಸುಮಾರು 170 ಕಿಲೊಮೀಟರುಗಳಷ್ಟು ದೂರದಲ್ಲಿರುವ ಕಾಲುಗಾದಲ್ಲಿ ಪುನಃ ನೆಲಸಿದರು.
ಆನ ಗಮನಿಸಿದ್ದು: “ಮನೆಗೆ ಹಿಂದಿರುಗುವ ನಿರೀಕ್ಷೆಯೇ ಇಲ್ಲವೆಂದು ನಮಗೆ ಕೊನೆಗೆ ಅರ್ಥವಾಯಿತು. ನಾವು ಎಲ್ಲಿ ಜನಿಸಿ, ಬೆಳೆಸಲ್ಪಟ್ಟಿದ್ದೆವೊ ಆ ನಮ್ಮ ಪ್ರಿಯ ಕುಟುಂಬದ ಮನೆಯನ್ನು ನಾವು ಕಳೆದುಕೊಂಡಿದ್ದೆವು. ಅದು ಹಳ್ಳದಲ್ಲಿ ನೀರು ಲಿಲಿ ಹೂವುಗಳೊಂದಿಗೆ, ಹೂವುಗಳು ಮತ್ತು ಹುಲ್ಲುಗಾವಲುಗಳಿಂದ ರತ್ನಗಂಬಳಿ ಹಾಸಲ್ಪಟ್ಟ ಒಂದು ಸುಂದರ ಕ್ಷೇತ್ರವಾಗಿತ್ತು. ಬೆರಿ ಹಣ್ಣುಗಳು ಮತ್ತು ಅಣಬೆಗಳಿಂದ ಕಾಡು ತುಂಬಿತ್ತು.”
ಯೂಕ್ರೇನ್ನ ಸೌಂದರ್ಯವು ಮಲಿನಗೊಂಡಿತು ಮಾತ್ರವಲ್ಲ ಸೋವಿಯಟ್ ಒಕ್ಕೂಟದ ಕಣಜದೋಪಾದಿ ಅದರ ಪಾತ್ರವು ಬಾಧಿಸಲ್ಪಟ್ಟಿತು. ಆ ಶರತ್ಕಾಲದ ಯೂಕ್ರೇನ್ನ ಕೊಯ್ಲಿನಲ್ಲಿ ಹೆಚ್ಚಿನಾಂಶವು ಕಲುಷಿತಗೊಂಡಿತ್ತು. ತದ್ರೀತಿಯಲ್ಲಿ ಸ್ಕ್ಯಾಂಡಿನೇವಿಯದಲ್ಲಿ, ಹಿಮಸಾರಂಗ ಮಾಂಸದ 70 ಪ್ರತಿಶತವು ಬಳಕೆಗೆ ಅಯೋಗ್ಯವೆಂದು ಪ್ರಕಟಿಸಲ್ಪಟ್ಟಿತು ಏಕೆಂದರೆ ಆ ಪ್ರಾಣಿಗಳು ವಿಕಿರಣಗೊಂಡ ಕಲ್ಲುಹೂವುಗಳನ್ನು ತಿಂದಿದ್ದವು. ಮತ್ತು ಜರ್ಮನಿಯ ಕೆಲವು ಭಾಗಗಳಲ್ಲಿ, ಮಾಲಿನ್ಯದ ಭಯದಿಂದಾಗಿ ಕಾಯಿಪಲ್ಯಗಳು ಹೊಲಗಳಲ್ಲಿ ಕೊಳೆತುಹೋಗುವಂತೆ ಬಿಡಲ್ಪಟ್ಟವು.
ವಿಕಿರಣದಿಂದಾದ ಆರೋಗ್ಯ ಪರಿಣಾಮಗಳು
ಅಪಘಾತವಾಗಿ ಐದು ವರ್ಷಗಳಾದ ಬಳಿಕ ಬಿಡುಗಡೆಗೊಳಿಸಲ್ಪಟ್ಟ ಅಧಿಕೃತ ಸಂಖ್ಯೆಗಳು ಹೇಳುವುದೇನೆಂದರೆ, 5,76,000 ಜನರು ವಿಕಿರಣಕ್ಕೆ ಒಡ್ಡಲ್ಪಟ್ಟರು. ಇಂತಹ ಜನರಲ್ಲಿ ಕ್ಯಾನ್ಸರಿನಂಥ ಮತ್ತು ಕ್ಯಾನ್ಸರ್ ಇರದಂಥ ರೋಗಗಳು—ಎರಡರ—ಸಂಭವವೂ ಹೆಚ್ಚಾಗಿವೆಯೆಂದು ವರದಿಸಲಾಗಿದೆ. ವಿಶೇಷವಾಗಿ ಯುವ ಜನರು ಬಾಧಿಸಲ್ಪಟ್ಟಿದ್ದಾರೆ. ಡಿಸೆಂಬರ್ 2, 1995ರ ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು ವರದಿಸಿದ್ದೇನೆಂದರೆ, “ತಾವು ಒಂದು ವರ್ಷ ಪ್ರಾಯಕ್ಕಿಂತಲೂ ಚಿಕ್ಕವರಾಗಿದ್ದಾಗ ಚರ್ನೊಬೆಲ್ನ ವಿಷಾನಿಲದ ಅತ್ಯುನ್ನತ ಮಟ್ಟಗಳಿಗೆ ಒಡ್ಡಲ್ಪಟ್ಟ ಮಕ್ಕಳಲ್ಲಿ 40 ಪ್ರತಿಶತದಷ್ಟು ಹೆಚ್ಚು ಮಕ್ಕಳು ವಯಸ್ಕರಾಗಿ ನಿರ್ನಾಳ ಗ್ರಂಥಿಯ ಕ್ಯಾನ್ಸರನ್ನು ವಿಕಸಿಸಿಕೊಳ್ಳುತ್ತಾ ಹೋಗಬಲ್ಲರು” ಎಂಬುದಾಗಿ ಯೂರೋಪಿನ ನಿರ್ನಾಳ ಗ್ರಂಥಿಯ ಪ್ರಮುಖ ಪರಿಣತರಲ್ಲಿ ಒಬ್ಬರು ನಂಬುತ್ತಾರೆ.
ಆನ ತನ್ನ ಗರ್ಭಾವಸ್ಥೆಯ ಸಮಯದಲ್ಲಿ ವಿಕಿರಣಕ್ಕೆ ಒಡ್ಡಲ್ಪಟ್ಟಿದ್ದ ಕಾರಣ, ಅವಳು ಗರ್ಭಪಾತವನ್ನು ಮಾಡಿಕೊಳ್ಳುವಂತೆ ವೈದ್ಯರು ಒತ್ತಾಯಿಸಿದರು. ವಿಕ್ಟರ್ ಮತ್ತು ಆನ ನಿರಾಕರಿಸಿದಾಗ, ಮಗುವು ವಿಕಾರವಾಗಿ ಜನಿಸಿದರೂ ಅದರ ಆರೈಕೆಯನ್ನು ಅವರು ಮಾಡುವರೆಂದು ಭರವಸೆಕೊಡುವ ಒಂದು ಪ್ರಕಟನೆಗೆ ಅವರು ಸಹಿ ಹಾಕಬೇಕಿತ್ತು. ಆನ್ಯಾ ವಿಕಾರವಾಗಿ ಜನಿಸದಿದ್ದರೂ, ಅವಳಿಗೆ ಸಮೀಪ ದೃಷ್ಟಿ, ಉಸಿರಾಟದ ಸಮಸ್ಯೆಗಳು ಮತ್ತು ಹೃದ್ರೋಗಗಳಿವೆ. ಇದಕ್ಕೆ ಕೂಡಿಸಿ, ರುಡ್ನಿಕ್ ಕುಟುಂಬದ ಇತರ ಸದಸ್ಯರ ಆರೋಗ್ಯವು ವಿಪತ್ತು ಸಂಭವಿಸಿದ ಸಮಯದಿಂದ ಕ್ಷೀಣಿಸುತ್ತಾ ಬಂದಿದೆ. ವಿಕ್ಟರ್ ಮತ್ತು ಈಲೆನಾ, ಇಬ್ಬರೂ ಹೃದಯದ ಸಮಸ್ಯೆಗಳನ್ನು ವಿಕಸಿಸಿಕೊಂಡರು, ಮತ್ತು ಆನ ಚರ್ನೊಬೆಲ್ ನಿಶ್ಶಕ್ತರಾಗಿ ದಾಖಲಿಸಲ್ಪಟ್ಟ ಅನೇಕರಲ್ಲಿ ಒಬ್ಬಳಾಗಿದ್ದಾಳೆ.
ಬಹಳವಾಗಿ ವಿಕಿರಣಗೊಂಡವರಲ್ಲಿ, ಹಾನಿಗೊಂಡ ರಿಯಾಕ್ಟರ್ ಅನ್ನು ಸೀಲ್ಮಾಡಿದ ಲಿಕ್ವಿಡೇಟರ್ಸ್ ಇದ್ದರು. ಶುಚಿಮಾಡುವುದರಲ್ಲಿ ಸಹಾಯ ಮಾಡಿದ ಸಾವಿರಾರು ಮಂದಿ ಅಕಾಲಿಕವಾಗಿ ಸತ್ತರೆಂದು ಹೇಳಲಾಗಿದೆ. ಬದುಕಿ ಉಳಿದವರಲ್ಲಿ ಅನೇಕರಿಗೆ ನರವ್ಯೂಹ ಸಂಬಂಧಿತ ಹಾಗೂ ಮನೋಶಾರೀರಿಕ ಸಮಸ್ಯೆಗಳಿವೆ. ಖಿನ್ನತೆ ವ್ಯಾಪಕವಾಗಿದೆ ಮತ್ತು ಆತ್ಮಹತ್ಯೆ ಅಸಾಮಾನ್ಯವಾಗಿರುವುದಿಲ್ಲ.
ಬದುಕಿ ಉಳಿದವರಲ್ಲಿ ತೀವ್ರವಾಗಿ ಆರೋಗ್ಯ ಸಮಸ್ಯೆಗಳಿಂದ ಕಷ್ಟಾನುಭವಿಸಲು ತೊಡಗಿದವರಲ್ಲಿ ಆ್ಯನ್ಸೆಲಾ ಒಬ್ಬಳಾಗಿದ್ದಳು. ವಿಪತ್ತಿನ ಸಮಯದಲ್ಲಿ ಅವಳು ಚರ್ನೊಬೆಲ್ನಿಂದ 80ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳ ದೂರದಲ್ಲಿ ಯೂಕ್ರೇನಿನ ರಾಜಧಾನಿಯಾದ ಕಿಯೇವ್ನಲ್ಲಿ ವಾಸಿಸುತ್ತಿದ್ದಳು. ಆದರೆ ತದನಂತರ ಅವಳು ರಿಯಾಕ್ಟರ್ ನಿವೇಶನದಲ್ಲಿ ಲಿಕ್ವಿಡೇಟರ್ಸ್ಗೆ ಸರಬರಾಯಿಗಳನ್ನು ವಿತರಿಸುತ್ತಾ ಸಮಯ ಕಳೆದಳು. ಕಿಯೇವ್ನ ಹತ್ತಿರ ಇರ್ಪಿನ್ನಲ್ಲಿ ವಾಸಿಸುವ, ಬದುಕಿ ಉಳಿದ ಮತ್ತೊಬ್ಬ ಸ್ತ್ರೀ ಸ್ವೆಟ್ಲಾನಾ ಕ್ಯಾನ್ಸರನ್ನು ವಿಕಸಿಸಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾದಳು.
ಹಿನ್ನೋಟ ಬೀರುವುದು
ಎಪ್ರಿಲ್ 1996ರಲ್ಲಿ, ಆ ಮಹಾ ದುರ್ಘಟನೆಯ ಹತ್ತು ವರ್ಷಗಳ ನಂತರ, ಮಿಕಾಯಿಲ್ ಗಾರ್ಬಚೆವ್ ಒಪ್ಪಿಕೊಂಡದ್ದು: “ಆ ರೀತಿಯ ಸನ್ನಿವೇಶಕ್ಕೆ ನಾವು ಸಿದ್ಧರಾಗಿರಲೇ ಇಲ್ಲ.” ಅದೇ ಸಮಯದಲ್ಲಿ, ರಷ್ಯಾದ ಅಧ್ಯಕ್ಷರಾದ ಯಲ್ಸಿನ್ ಹೇಳಿಕೆ ನೀಡಿದ್ದು: “ಈ ಗಾತ್ರದ ಅನಾಹುತವನ್ನು ಮಾನವಜಾತಿಯು ಎಂದೂ ಅನುಭವಿಸಿಲ್ಲ; ಅದರ ಪರಿಣಾಮಗಳು ಬಹಳಷ್ಟು ಗಂಭೀರವಾಗಿದ್ದು, ನಿರ್ಮೂಲ ಮಾಡಲು ಬಹಳ ಕಷ್ಟಕರವಾದದ್ದಾಗಿವೆ.”
ಮಹತ್ತರವಾಗಿ ಸೈಎನ್ಟಿಫಿಕ್ ಅಮೆರಿಕನ್ ಪತ್ರಿಕೆಯ ಜರ್ಮನ್ ಮುದ್ರಣವು ಚರ್ನೊಬೆಲ್ ವಿಪತ್ತಿನ ಫಲಾಂತರವನ್ನು ಮಧ್ಯಮ ಗಾತ್ರದ ಅಣುಯುದ್ಧದಿಂದ ಫಲಿಸಿರಬಹುದಾದ ಸನ್ನಿವೇಶಕ್ಕೆ ಹೋಲಿಸಿತು. ದುರಂತದ ಕಾರಣ ಸತ್ತವರ ಸಂಖ್ಯೆಯನ್ನು ಕೆಲವರು ಸುಮಾರು 30,000 ಮಂದಿಯೆಂದು ಅಂದಾಜುಮಾಡುತ್ತಾರೆ.
ಕಳೆದ ವರ್ಷದ ಒಂದು ವಾರ್ತಾ ವರದಿಗನುಸಾರ, ಅಪಘಾತದ ಹತ್ತನೆಯ ವರ್ಷೋತ್ಸವದ ನಂತರವೂ ಸ್ಥಾವರದ ಸುತ್ತಲೂ 29 ಕಿಲೊಮೀಟರುಗಳಷ್ಟು ಕ್ಷೇತ್ರವು ಮಾನವ ಜೀವನಕ್ಕಾಗಿ ಇನ್ನೂ ಅಯೋಗ್ಯವಾಗಿತ್ತು. ಹಾಗಿದ್ದರೂ, ವರದಿಯು ಗಮನಿಸಿದ್ದೇನೆಂದರೆ, “ದೃಢಸಂಕಲ್ಪದ 647 ನಿವಾಸಿಗಳು ಆ ಕ್ಷೇತ್ರದೊಳಗೆ ಕಳ್ಳತನದಿಂದ ನುಸುಳಿದ್ದಾರೆ, ಅಧಿಕಾರಿಗಳಿಗೆ ಲಂಚಕೊಟ್ಟು ಹೋಗಿದ್ದಾರೆ ಇಲ್ಲವೆ ಮುಕ್ತವಾಗಿ ನಡೆದುಹೋಗಿದ್ದಾರೆ.” ಅದು ಗಮನಿಸಿದ್ದು: “ಸ್ಥಾವರದ 10 ಕಿಲೊಮೀಟರ್ ವೃತ್ತಕ್ಷೇತ್ರದೊಳಗೆ ಯಾರೂ ಜೀವಿಸುವುದೇ ಇಲ್ಲ. ಆ 10 ಕಿಲೊಮೀಟರ್ ಅಗಲದ ಕ್ಷೇತ್ರವನ್ನಾವರಿಸಿದ ಮತ್ತೊಂದು 20 ಕಿಲೊಮೀಟರ್ ಅಗಲದ ಕ್ಷೇತ್ರದಲ್ಲಿ ಹಿಂದಿರುಗಿದ ಒಂದಿಷ್ಟು ನೂರು ಜನರನ್ನು ಕಂಡುಕೊಳ್ಳಬಹುದು.”
ವ್ಯಾಪಕವಾದ ಭಯದ ನಡುವೆಯೂ ಭರವಸೆ
ಚರ್ನೊಬೆಲ್ ಬಳಿ ಒಮ್ಮೆ ಜೀವಿಸಿದ ಅನೇಕ ಸಾವಿರಾರು ಜನರಿಗೆ, ಜೀವನವು ಕಷ್ಟಕರವಾಗಿತ್ತು ಮತ್ತು ಈ ತನಕವೂ ಬಹಳ ಕಷ್ಟಕರವಾಗಿದೆ. ಸ್ಥಳಾಂತರಿಸಿದವರ ಒಂದು ಅಧ್ಯಯನವು ಪ್ರಕಟಪಡಿಸಿದ್ದೇನೆಂದರೆ, ಅವರಲ್ಲಿ 80 ಪ್ರತಿಶತದಷ್ಟು ಜನರು ತಮ್ಮ ಹೊಸ ಮನೆಗಳಲ್ಲಿ ಸಂತೋಷಿತರಾಗಿಲ್ಲ. ಅವರಿಗೆ ದುಃಖ, ಬಳಲಿಕೆ, ಅಹಿತ, ಸಿಡುಕು, ಮತ್ತು ಒಂಟಿತನದ ಅನಿಸಿಕೆ ಆಗುತ್ತದೆ. ಚರ್ನೊಬೆಲ್ ಕೇವಲ ಒಂದು ನ್ಯೂಕ್ಲಿಯರ್ ಅಪಘಾತವಾಗಿರಲಿಲ್ಲ—ಅದೊಂದು ಅತಿಶಯಿಸುವ ಪ್ರಮಾಣಗಳ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ವಿಷಮಸ್ಥಿತಿಯಾಗಿತ್ತು. ಅನೇಕರು ಘಟನೆಗಳನ್ನು ಚರ್ನೊಬೆಲ್ ಪೂರ್ವ ಇಲ್ಲವೆ ಚರ್ನೊಬೆಲ್ ನಂತರವೆಂದು ಸೂಚಿಸಿ ಮಾತಾಡುವುದು ಆಶ್ಚರ್ಯಕರವೇನೂ ಅಲ್ಲ.
ಇತರ ಅನೇಕರಿಗೆ ವ್ಯತಿರಿಕ್ತವಾಗಿ, ರುಡ್ನಿಕ್ ಕುಟುಂಬದವರು ಸನ್ನಿವೇಶವನ್ನು ಎದ್ದುಕಾಣುವ ರೀತಿಯಲ್ಲಿ ಚೆನ್ನಾಗಿ ನಿಭಾಯಿಸುತ್ತಾರೆ. ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ತೊಡಗಿದರು ಮತ್ತು ಫಲಸ್ವರೂಪವಾಗಿ, ನೀತಿಯ ಹೊಸ ಲೋಕದ ಕುರಿತಾಗಿ ದೇವರ ವಾಕ್ಯದಲ್ಲಿ ಕಂಡುಕೊಳ್ಳಲ್ಪಡುವ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯನ್ನು ವಿಕಸಿಸಿಕೊಂಡರು. (ಯೆಶಾಯ 65:17-25; 2 ಪೇತ್ರ 3:13; ಪ್ರಕಟನೆ 21:3, 4) ಅನಂತರ, 1995ರಲ್ಲಿ ವಿಕ್ಟರ್ ಮತ್ತು ಆನ ದೇವರಿಗೆ ಮಾಡಿದ ತಮ್ಮ ಸರ್ಮಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿಕೊಂಡರು. ತದನಂತರ ಅವರ ಮಗಳಾದ ಈಲೆನಾ ಸಹ ದೀಕ್ಷಾಸ್ನಾನ ಪಡೆದುಕೊಂಡಳು.
ವಿಕ್ಟರ್ ವಿವರಿಸುವುದು: “ಬೈಬಲನ್ನು ಅಧ್ಯಯನಿಸುವುದು, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಮತ್ತು ಭೂಮಿಯ ಮೇಲೆ ಮಾನವಜಾತಿಗಾಗಿರುವ ಆತನ ಉದ್ದೇಶಗಳನ್ನು ತಿಳಿದುಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿಮಾಡಿತು. ನಾವು ಇನ್ನು ಮುಂದೆ ಖಿನ್ನರಾಗಿರುವುದಿಲ್ಲ ಏಕೆಂದರೆ ದೇವರ ರಾಜ್ಯವು ಬರುವಾಗ ಇಂತಹ ಭಯಂಕರ ಅಪಘಾತಗಳು ಇನ್ನೆಂದಿಗೂ ಸಂಭವಿಸುವುದಿಲ್ಲವೆಂದು ನಮಗೆ ಗೊತ್ತಿದೆ. ಚರ್ನೊಬೆಲ್ ಹತ್ತಿರವಿದ್ದ ನಮ್ಮ ನೆಚ್ಚಿನ ಮನೆಯ ಸುತ್ತಲೂ ಇದ್ದ ಗ್ರಾಮಪ್ರದೇಶವು ಅದರ ಬರಿದುಮಾಡಲ್ಪಟ್ಟ ಸ್ಥಿತಿಯಿಂದ ಚೇತರಿಸಿಕೊಂಡು, ಅದ್ಭುತಕರ ಪ್ರಮೋದವನದ ಭಾಗವಾಗುವ ಸಮಯಕ್ಕಾಗಿ ನಾವು ಎದುರು ನೋಡುತ್ತೇವೆ.”
ನೀತಿಯ ಹೊಸ ಲೋಕದ ಕುರಿತಾಗಿರುವ ದೇವರ ವಾಗ್ದಾನಗಳಲ್ಲಿ ಭರವಸೆಯನ್ನಿಡುವ ಆ್ಯನ್ಸೆಲಾ ಮತ್ತು ಸ್ವೆಟ್ಲಾನಾರಿಗೂ, ವಿಕಿರಣದಿಂದ ಉಂಟಾದ ಅಸ್ವಸ್ಥತೆಗಳ ಎದುರಿನಲ್ಲಿಯೂ ಅದೇ ಉಲ್ಲಾಸಕರ ಹೊರನೋಟವಿದೆ. “ಸೃಷ್ಟಿಕರ್ತನ ಮತ್ತು ಆತನ ಉದ್ದೇಶಗಳ ಕುರಿತ ಜ್ಞಾನವಿಲ್ಲದೆ, ಜೀವನವು ಕಷ್ಟಕರವಾಗಿರುವುದು. ಆದರೆ ಯೆಹೋವನೊಂದಿಗೆ ಒಂದು ನಿಕಟ ಸಂಬಂಧವನ್ನು ಪಡೆದಿರುವುದು ಸಕಾರಾತ್ಮಕವಾಗಿ ಉಳಿಯಲು ನನಗೆ ಸಹಾಯ ಮಾಡುತ್ತದೆ. ಬೈಬಲಿನ ಪೂರ್ಣ ಸಮಯದ ಪ್ರಚಾರಕಿಯಾಗಿ ಆತನ ಸೇವೆ ಮಾಡುತ್ತಾ ಮುಂದುವರಿಯುವುದು ನನ್ನ ಅಪೇಕ್ಷೆಯಾಗಿದೆ,” ಎಂದು ಆ್ಯನ್ಸೆಲಾ ಗಮನಿಸಿದಳು. ಸ್ವೆಟ್ಲಾನಾ ಕೂಡಿಸಿದ್ದು: “ನನ್ನ ಕ್ರೈಸ್ತ ಸಹೋದರ ಸಹೋದರಿಯರು ನನಗೆ ತುಂಬ ಸಹಾಯಮಾಡಿದ್ದಾರೆ.”
“ಕಾಲ ಮತ್ತು ಮುಂಗಾಣದ ಸಂಭವ”ದಿಂದ (NW) ಉಂಟಾಗುವ ಅಪಘಾತಗಳು ಜನರು ಎಲ್ಲೇ ಜೀವಿಸಲಿ, ಅವರು ಯಾರೇ ಆಗಿರಲಿ ಬಾಧಿಸುತ್ತದೆ ಎಂದು ಇಂತಹವರಿಗೆ ಬೈಬಲಿನ ಅಧ್ಯಯನವು ಪ್ರಕಟಪಡಿಸಿದೆ. (ಪ್ರಸಂಗಿ 9:11) ಆದರೆ ಅವರ ತೊಂದರೆ ಎಷ್ಟೇ ವಿಧ್ವಂಸಕವಾಗಿರಲಿ, ಯೆಹೋವ ದೇವರು ದುರಸ್ತುಮಾಡಲಾಗದ ಯಾವ ಹಾನಿಯಾಗಲಿ, ಆತನು ಗುಣಪಡಿಸಲಾಗದ ಯಾವ ಗಾಯವಾಗಲಿ, ಮತ್ತು ಆತನು ನಷ್ಟಭರ್ತಿಮಾಡಲಾಗದ ಯಾವ ನಷ್ಟವಾಗಲಿ ಇರುವುದಿಲ್ಲವೆಂದು ಸಹ ಬೈಬಲ್ ವಿದ್ಯಾರ್ಥಿಗಳು ಕಲಿತಿದ್ದಾರೆ.
ದೇವರ ವಾಗ್ದಾನಗಳಲ್ಲಿ ನೀವು ಸಹ ಭರವಸೆಯನ್ನು ವಿಕಸಿಸಿಕೊಂಡು, ಹೀಗೆ ಒಂದು ಉಜ್ವಲ ನಿರೀಕ್ಷೆಯಲ್ಲಿ ಹೇಗೆ ಆನಂದಿಸಸಾಧ್ಯವಿದೆ? ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯ ಬರಹಗಾರನು ಉತ್ತರಿಸುವುದು: “ನೀನು ಯೆಹೋವನಲ್ಲಿ ಭರವಸವಿಡಬೇಕೆಂದು ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.” (ಜ್ಞಾನೋಕ್ತಿ 22:19) ಹೌದು, ಕ್ರಮವಾದ ಬೈಬಲ್ ಅಧ್ಯಯನದ ಮೂಲಕ ಜ್ಞಾನವನ್ನು ಪಡೆದುಕೊಳ್ಳುವ ಅಗತ್ಯ ನಿಮಗಿದೆ. ಇದನ್ನು ಮಾಡುವಂತೆ ನಿಮಗೆ ಸಹಾಯ ಮಾಡಲು, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುವರು. ನಿಮಗೆ ಅನುಕೂಲಕರವಾಗಿರುವ ಸಮಯ ಮತ್ತು ಸ್ಥಳದಲ್ಲಿ ಒದಗಿಸಲ್ಪಡುವ ಒಂದು ಉಚಿತವಾದ ಬೈಬಲ್ ಅಧ್ಯಯನದ ಕಾರ್ಯಕ್ರಮವನ್ನು ಅವರು ನೀಡುತ್ತಾರೆ.
[ಪುಟ 31 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಈ ಗಾತ್ರದ ಅನಾಹುತವನ್ನು ಮಾನವಜಾತಿಯು ಎಂದೂ ಅನುಭವಿಸಿಲ್ಲ; ಅದರ ಪರಿಣಾಮಗಳು ಬಹಳಷ್ಟು ಗಂಭೀರವಾಗಿದ್ದು, ನಿರ್ಮೂಲ ಮಾಡಲು ಬಹಳ ಕಷ್ಟಕರವಾದದ್ದಾಗಿವೆ.” ರಷ್ಯಾದ ಅಧ್ಯಕ್ಷರಾದ ಯಲ್ಸಿನ್
[ಪುಟ 32 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಚರ್ನೊಬೆಲ್ ಕೇವಲ ಒಂದು ನ್ಯೂಕ್ಲಿಯರ್ ಅಪಘಾತವಾಗಿರಲಿಲ್ಲ—ಅದೊಂದು ಅತಿಶಯಿಸುವ ಪ್ರಮಾಣಗಳ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ವಿಷಮಸ್ಥಿತಿಯಾಗಿತ್ತು
[Picture Credit Line on on page 18]
Tass/Sipa Press