ಚರ್ನೋಬಲ್ಗೆ ಹಗಲುಹೊತ್ತಿನ ಪ್ರವಾಸ
ಯುಕ್ರೇನ್ನ ಎಚ್ಚರ! ಲೇಖಕರಿಂದ
ಇಪ್ಪತ್ತು ವರ್ಷಗಳ ಹಿಂದೆ ಅಂದರೆ 1986ರ ಏಪ್ರಿಲ್ 26ರಂದು ಚರ್ನೋಬಲ್ನ ಪರಮಾಣು ಸ್ಥಾವರದಲ್ಲಿ ಹಿಂದೆಂದೂ ಸಂಭವಿಸಿರದಂಥ ರೀತಿಯ ದೊಡ್ಡ ಅನಾಹುತವು ನಡೆಯಿತು. ಅಂದು, ಆ ನಿವೇಶನದಲ್ಲಿದ್ದ ನಾಲ್ಕು ರಿಯಾಕ್ಟರ್ಗಳಲ್ಲೊಂದರ ಕೇಂದ್ರಭಾಗವು ಅತಿಯಾದ ತಾಪದಿಂದ ಕರಗಿ ಹೋಯಿತು. ಮಾನವರಿಂದಾಗಲಿ ಪ್ರಕೃತಿಯಿಂದಾಗಲಿ ಉಂಟಾಗುವ ಹೆಚ್ಚಿನ ದುರಂತಗಳ ಬಳಿಕ ಆದಂಥ ಹಾನಿಯನ್ನು ಸ್ವಚ್ಛಗೊಳಿಸಿ ಪುನರ್ನಿರ್ಮಾಣಮಾಡುವುದು ಸಾಧ್ಯ. ಆದರೆ ಈ ಅನಾಹುತದಿಂದಾಗಿ, ದೀರ್ಘಕಾಲದ ವರೆಗೆ ಉಳಿದಿರುವ ಕೆಟ್ಟ ಪರಿಣಾಮಗಳಿದ್ದ ಕಶ್ಮಲೀಕರಣವು ಉಂಟಾಯಿತು.
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮೇ 9ರಂದು ಆ ನಿವೇಶನದ ಹತ್ತಿರದಲ್ಲಿದ್ದ ಪಟ್ಟಣಗಳ ಮಾಜಿ ನಿವಾಸಿಗಳು, ಕೆಲವೊಮ್ಮೆ ಅವರ ಬಂಧುಬಳಗದವರು ಸಹ, ಒಂದು ಕಾಲದಲ್ಲಿ ತಮ್ಮ ಬೀಡುಗಳಾಗಿದ್ದ ಆ ಪರಿತ್ಯಕ್ತ ಮನೆಗಳನ್ನು ಸಂದರ್ಶಿಸಲು ಹೋಗಿದ್ದಾರೆ. ಕೆಲವೊಂದು ಸಮಯಗಳಲ್ಲಿ ಅವರು ಶವಸಂಸ್ಕಾರಗಳಿಗಾಗಿ ಹೋಗಿದ್ದಾರೆ. ವಿಜ್ಞಾನಿಗಳು ವಿಕಿರಣದ ಪರಿಣಾಮಗಳನ್ನು ಅಧ್ಯಯನಮಾಡಲು ಅಲ್ಲಿಗೆ ಭೇಟಿನೀಡಿದ್ದಾರೆ. ಅಷ್ಟುಮಾತ್ರವಲ್ಲದೆ, ಇತ್ತೀಚೆಗೆ ಯುಕ್ರೇನಿನ ಪ್ರವಾಸ ಕಂಪೆನಿಗಳು ಒಬ್ಬ ಗೈಡ್ನೊಂದಿಗೆ ಆ ಕ್ಷೇತ್ರಕ್ಕೆ ಒಂದು ದಿನದ ಪ್ರವಾಸಗಳನ್ನು ಏರ್ಪಡಿಸಿವೆ.
ಇಸವಿ 2005ರ ಜೂನ್ ತಿಂಗಳ, ದ ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯು ಅದರ ಮುಖಪುಟದ ಸುದ್ದಿಯೊಂದರಲ್ಲಿ, ಪ್ರಿಪೆಟ್ ಎಂಬ ಸ್ಥಳಕ್ಕೆ “ಒಬ್ಬ ಗೈಡ್ ಇರುವ ಚಿಕ್ಕ ಪ್ರವಾಸಗಳ” ಬಗ್ಗೆ ತಿಳಿಸಿತು. ಈ ಪ್ರವಾಸದಿಂದ “ಆರೋಗ್ಯಕ್ಕೆ ಯಾವುದೇ ಅಪಾಯಗಳಿಲ್ಲ” ಎಂದು ಹೇಳಲಾಯಿತು.a ಪ್ರಿಪೆಟ್ ನಗರವು ಆ ರಿಯಾಕ್ಟರುಗಳಿಂದ ಸುಮಾರು ಮೂರು ಕಿಲೊಮೀಟರ್ ದೂರದಲ್ಲಿದೆ. ಅದು 1970ರ ದಶಕದಲ್ಲಿ ಸ್ಥಾಪಿಸಲ್ಪಟ್ಟಿತ್ತು ಮತ್ತು ಅದರಲ್ಲಿ ಸುಮಾರು 45,000 ಜನರು ವಾಸಿಸುತ್ತಿದ್ದರು. ಆದರೆ ಆ ಪರಮಾಣು ದುರಂತದ ಸಮಯದಲ್ಲಿ ಬೇರೆ ನಗರಗಳೊಂದಿಗೆ ಪ್ರಿಪೆಟ್ ನಗರವನ್ನು ಖಾಲಿಮಾಡಲಾಯಿತು. ಈ ಎಲ್ಲ ಸ್ಥಳಗಳಿಗೆ ಅಣುವಿಕಿರಣವು ಹರಡಿದ್ದರಿಂದ ಅಲ್ಲಿಗೆ ಹೋಗುವುದನ್ನು ತಡೆಯಲಾಯಿತು. ಆ ರಿಯಾಕ್ಟರ್ ಕರಗಿಹೋದ ಸಮಯದಲ್ಲಿ ಆ್ಯನಾ ಮತ್ತು ವಿಕ್ಟರ್ ರುಡ್ನಿಕ್ ದಂಪತಿಯು ತಮ್ಮ ಮಕ್ಕಳೊಂದಿಗೆ ಪ್ರಿಪೆಟ್ನಲ್ಲಿ ಸುಮಾರು ಒಂದು ವರ್ಷದಿಂದ ವಾಸಮಾಡುತ್ತಿದ್ದರು.b
ಚರ್ನೋಬಲ್ ಎಂಬ ಪಟ್ಟಣವು (ಇದೇ ಹೆಸರು ಪರಮಾಣು ಸ್ಥಾವರಕ್ಕೂ ಇದೆ) ಪ್ರಿಪೆಟ್ಗಿಂತಲೂ ಚಿಕ್ಕದಾಗಿದೆ, ಮತ್ತು ಆ ರಿಯಾಕ್ಟರುಗಳಿಂದ ಸುಮಾರು 15 ಕಿಲೊಮೀಟರ್ ದೂರದಲ್ಲಿದೆ. ಪ್ರಿಪೆಟ್ನಲ್ಲಿ ಹಿಂದೆ ವಾಸಿಸುತ್ತಿದ್ದ ನಿವಾಸಿಗಳಿಗೆ ವರ್ಷಕ್ಕೊಮ್ಮೆ ಅಲ್ಲಿಗೆ ಭೇಟಿನೀಡಲು ಇತ್ತೀಚಿನ ಕೆಲವೊಂದು ವರ್ಷಗಳಿಂದ ಅನುಮತಿಯಿದೆ. ವಾಸ್ತವದಲ್ಲಿ ರುಡ್ನಿಕ್ ಕುಟುಂಬದ ಸ್ವಂತ ಪಟ್ಟಣ ಚರ್ನೋಬಲ್ ಆಗಿರುವುದರಿಂದ ಈ ಎಲ್ಲ ವರ್ಷಗಳಲ್ಲಿ ಅವರು ಅಲ್ಲಿಗೆ ಭೇಟಿನೀಡಿದ್ದಾರೆ. ಹೀಗೆ ಕೆಲವು ವರ್ಷಗಳ ಹಿಂದೆ ಅವರೊಂದಿಗೆ ನಾನೂ ನನ್ನ ಹೆಂಡತಿಯೂ ಮಾಡಿದ ಈ ಪ್ರವಾಸದ ಬಗ್ಗೆ ನಿಮಗೆ ಹೇಳುತ್ತೇನೆ.
ನಮ್ಮ ಕರಾಳ ರಜೆ
ನಾವು ಯುಕ್ರೇನಿನ ರಾಜಧಾನಿಯಾದ ಕೀಯೆವ್ನಿಂದ ಹೊರಟು, ಉತ್ತರದ ದಿಕ್ಕಿನಲ್ಲಿ ಎರಡು ಓಣಿಗಳಿರುವ ರಸ್ತೆಯಲ್ಲಿ ಪ್ರಯಾಣ ಬೆಳೆಸಿದೆವು. ನಾವು ಚಿಕ್ಕ ಪಟ್ಟಣಗಳನ್ನು ದಾಟುತ್ತಾ ಹೋದಂತೆ, ರಸ್ತೆಯ ಎರಡೂ ಬದಿಗಳಲ್ಲೂ ಸಾಲಾಗಿರುವ ಮನೆಗಳನ್ನು, ಮನೆಮುಂದಿನ ಅಂಗಳದಲ್ಲಿ ನಳನಳಿಸುತ್ತಿರುವ ಟ್ಯೂಲಿಪ್ಹೂಗಳನ್ನು ಮತ್ತು ಜನರು ತಮ್ಮ ತರಕಾರಿ ತೋಟಗಳಲ್ಲಿ ಕೆಲಸಮಾಡುತ್ತಿರುವುದನ್ನು ನೋಡಿದೆವು. ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣದ ಮಧ್ಯದಲ್ಲಿ, ಕಣ್ಣು ಹಾಯಿಸುವಷ್ಟು ದೂರದ ದಿಗಂತದ ವರೆಗೂ ಜೋಳ, ಗೋಧಿ ಮತ್ತು ಸೂರ್ಯಕಾಂತಿಯಿಂದ ತುಂಬಿದ್ದ ಹೊಲಗಳಿದ್ದವು.
ಹೀಗೆ ಮುಂದೆ ಹೋಗುತ್ತಾ ಇರುವಾಗ ಒಂದು ಹಂತದಲ್ಲಿ, ನಾವು ಒಂದು ರೀತಿಯ ಅದೃಶ್ಯವಾದ ಗಡಿಯನ್ನು ದಾಟಿದೆವು. ಈ ಗಡಿಯನ್ನು ಸೂಚಿಸುವ ಯಾವುದೇ ಸಂಕೇತಫಲಕವು ರಸ್ತೆ ಪಕ್ಕದಲ್ಲಿರಲಿಲ್ಲ, ಆದರೆ ಇದನ್ನು ನಾವು ಗ್ರಹಿಸಸಾಧ್ಯವಿತ್ತು. ಆ ಮಾರ್ಗದಾದ್ಯಂತವಿದ್ದ ಪಟ್ಟಣಗಳಲ್ಲಿ ವಿಲಕ್ಷಣ ರೀತಿಯ ಮೌನವು ಆವರಿಸಿಕೊಂಡಿತ್ತು. ಅಲ್ಲಿನ ಹಾಳುಬಿದ್ದಿದ್ದ ಮನೆಗಳಲ್ಲಿ ಕಿಟಕಿಗಳ ಗಾಜುಗಳು ಒಡೆದುಹೋಗಿದ್ದವು, ಬಾಗಿಲುಗಳಿಗೆ ಬೀಗಜಡಿಯಲ್ಪಟ್ಟಿದ್ದವು, ಮನೆಮುಂದಿದ್ದ ಅಂಗಳಗಳಲ್ಲಿ ಕಳೆಗಳು ತುಂಬಿಕೊಂಡಿದ್ದವು ಮತ್ತು ತೋಟಗಳಲ್ಲಿನ ಗಿಡಗಳು ಉದ್ದುದ್ದವಾಗಿ ಬೆಳೆದುನಿಂತಿದ್ದವು.
ಇದು ನಾವೀಗ ನಿರ್ಬಂಧಿತ ವಲಯದೊಳಗೆ ಪ್ರವೇಶಿಸಿದ್ದೆವೆಂಬುದನ್ನು ತೋರಿಸಿತು. ಈ ಪ್ರದೇಶವು ಆ ರಿಯಾಕ್ಟರುಗಳಿಂದ ಸರಿಸುಮಾರು 30 ಕಿಲೊಮೀಟರ್ ದೂರದಲ್ಲಿದೆ. “ಈ ಕ್ಷೇತ್ರದೊಳಗಿನ ಪಟ್ಟಣಗಳಲ್ಲಿ ವಿಕಿರಣದ ಮಟ್ಟಗಳು ಉನ್ನತವಾಗಿವೆ. ಇಲ್ಲಿನ ಅನೇಕ ಹಳ್ಳಿಪಟ್ಟಣಗಳಿಂದ 1,50,000ಕ್ಕಿಂತ ಹೆಚ್ಚು ಜನರನ್ನು, ಹಿಂದಿನ ಸೋವಿಯಟ್ ಯೂನಿಯನ್ನಾದ್ಯಂತ ಹೊಸ ಮನೆಗಳಿಗೆ ವರ್ಗಾಯಿಸಲಾಯಿತು” ಎಂದು ಆ್ಯನಾ ನಮಗೆ ಹೇಳಿದಳು.
ನಾವು ಮುಂದೆ ಪ್ರಯಾಣಿಸುತ್ತಾ ಹೋದಂತೆ, ಇನ್ನೊಂದು ವಲಯಕ್ಕೆ ಬಂದು ತಲಪಿದೆವು. ಜಗತ್ತಿನ ಉಳಿದ ಭಾಗದಿಂದ ಇದನ್ನು ಪ್ರತ್ಯೇಕಿಸಲು ತುಂಬ ಎತ್ತರದ ಮುಳ್ಳುಬೇಲಿ ತಂತಿಯನ್ನು ಹಾಕಲಾಗಿತ್ತು. ಹತ್ತಿರದಲ್ಲೇ ಒಂದು ಮರದ ಕಟ್ಟಡದಲ್ಲಿರುವ ಕಾವಲುಗಾರರು, ಕಸ್ಟಮ್ಸ್ ಕಂಟ್ರೋಲ್ ಪಾಯಿಂಟ್ನಲ್ಲಿರುವಂತೆ ಎಲ್ಲ ವಾಹನಸಂಚಾರವನ್ನು ನಿಯಂತ್ರಿಸುತ್ತಿದ್ದರು. ಒಬ್ಬ ಕಾವಲುಗಾರನು ನಮ್ಮ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿ ನಮ್ಮ ವಾಹನವನ್ನು ನೋಂದಾಯಿಸಿದನು ಮತ್ತು ನಂತರವೇ ಆ ಗೇಟನ್ನು ತೆರೆದನು.
ಈಗ ನಾವು ಆ ನಿರ್ಬಂಧಿತ ವಲಯದೊಳಗಿದ್ದೆವು. ಚಿಗುರೆಲೆಗಳಿರುವ ಮರಗಳು ರಸ್ತೆಯಾದ್ಯಂತ ಒಂದು ಹಸಿರು ಚಪ್ಪರವನ್ನು ಕಟ್ಟಿದ್ದಂತಿತ್ತು. ಕಾಡಿನ ನೆಲವನ್ನು ದಟ್ಟವಾದ ಕುರುಚಲು ಸಸ್ಯಗಳು ಆವರಿಸಿಬಿಟ್ಟಿದ್ದವು. ನಾನೆಣಿಸಿದಂತೆ ಸುಟ್ಟುಹೋಗಿರುವ ಮರಗಳಾಗಲಿ ಬಾಡಿ ಸುರುಟಿರುವ ಪೊದೆಗಾಡಾಗಲಿ ಇಲ್ಲಿರಲಿಲ್ಲ. ನಾವು ಮುಂದೆ ಹೋದಾಗ, ಕಲ್ಲಿನ ಒಂದು ಬಿಳಿ ಗೋಡೆಯ ಮೇಲೆ ನೀಲಿ ಬಣ್ಣದ ಅಕ್ಷರಗಳು ಆ ಪಟ್ಟಣವು ಚರ್ನೋಬಲ್ ಆಗಿದೆಯೆಂಬುದನ್ನು ಗುರುತಿಸಿದವು.
ಚರ್ನೋಬಲ್ನ ಗಡಿಯಲ್ಲಿ ಒಂದು ಔಷಧದ ಅಂಗಡಿಯಿತ್ತು. ಒಂದು ಕಾಲದಲ್ಲಿ ವಿಕ್ಟರ್ನ ತಾಯಿ ಅಲ್ಲಿ ಕೆಲಸಮಾಡುತ್ತಿದ್ದರು. ಅಂಗಡಿಯ ಕೆಲಸದ ಸಮಯಗಳನ್ನು ಸೂಚಿಸುವ ಒಂದು ಮಾಸಿಹೋಗಿರುವ ಫಲಕವು ಅಂಗಡಿಯ ಧೂಳುತುಂಬಿದ, ಮಸಿಯಾದ ಕಿಟಿಕಿಯಲ್ಲಿ ಈಗಲೂ ನೇತಾಡಿಕೊಂಡಿತ್ತು. ಆ ಪಟ್ಟಣದ ಸೆಂಟ್ರಲ್ ಪಾರ್ಕ್ನಲ್ಲಿ ಒಂದು ಸಾಂಸ್ಕೃತಿಕ ಕಟ್ಟಡವಿತ್ತು. ಕೆಲಸದ ನಂತರ ಅಲ್ಲಿಗೆ ಹೋಗಿ ವಿಭಿನ್ನ ರಂಗ ಕಲಾವಿದರ ಅಭಿನಯವನ್ನು ವೀಕ್ಷಿಸುತ್ತಾ ತಾನು ಮತ್ತು ಇತರ ನಿವಾಸಿಗಳು ವಿಶ್ರಮಿಸುತ್ತಿದ್ದ ಕಾಲವನ್ನು ಆ್ಯನಾ ಜ್ಞಾಪಿಸಿಕೊಂಡಳು. ಹತ್ತಿರದಲ್ಲೇ, ಯೂಕ್ರಾಈನಾ ಎಂಬ ಚಲನಚಿತ್ರ ಮಂದಿರವಿತ್ತು. ಒಂದು ಕಾಲದಲ್ಲಿ ಮಕ್ಕಳು, ಹೊರಗಿನ ಧಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದು ತಂಪಾದ ವಾತಾವರಣದಲ್ಲಿ ಆರಾಮವಾಗಿ ಕುಳಿತುಕೊಂಡು ಹೊಸ ಹೊಸ ಚಲನಚಿತ್ರಗಳನ್ನು ನೋಡುತ್ತಿದ್ದರು. ಕತ್ತಲು ತುಂಬಿರುತ್ತಿದ್ದ ಆ ಸಭಾಂಗಣದಲ್ಲಿ ಕೇಳಿಬರುತ್ತಿದ್ದ ನಗೆಯ ಧ್ವನಿಗಳು ಈಗ ನಿಂತುಹೋಗಿದ್ದವು. ಆ್ಯನಾ ಮತ್ತು ವಿಕ್ಟರ್ ನಮ್ಮನ್ನು ಅವರ ಮನೆಗೆ ಕರೆದೊಯ್ದರು. ಅದು ಪಟ್ಟಣದ ಕೇಂದ್ರ ಭಾಗದಿಂದ ಸ್ವಲ್ಪವೇ ದೂರದಲ್ಲಿತ್ತು. ಮನೆಯ ಮುಂದಿನ ಬಾಗಲಿಗೆ ಹೋಗುವ ದಾರಿಯಲ್ಲಿ ಮರಗಳು ಮಿತಿಮೀರಿ ಬೆಳೆದಿದ್ದದ್ದರಿಂದ ನಮಗೆ ಆ ದಾರಿಯಲ್ಲಿ ಹೋಗಲು ಅಡ್ಡಿಯಾಗುತ್ತಿತ್ತು. ಆದುದರಿಂದ ನಾವು ಹಿಂಬಾಗಿಲನ್ನು ತಲಪಲಿಕ್ಕಾಗಿ, ಉದ್ದುದ್ದವಾಗಿ ಬೆಳೆದಿದ್ದ ಕಳೆಗಳ ಮಧ್ಯದಿಂದ ಒಬ್ಬೊಬ್ಬರಾಗಿ ಸಾಲಿನಲ್ಲಿ ಹೋದೆವು. ಆದರೆ ಹಿಂಬಾಗಿಲಿನ ಬದಲಿಗೆ ಈಗ ಗೋಡೆಯಲ್ಲಿ ಒಡ್ಡೊಡ್ಡಾದ ಒಂದು ದೊಡ್ಡ ರಂಧ್ರ ಮಾತ್ರವಿತ್ತು.
ಮನೆಯೊಳಗೆ ಎಲ್ಲವೂ ಸಂಪೂರ್ಣವಾಗಿ ಹಾಳುಗೆಡವಲ್ಪಟ್ಟಿತ್ತು. ತುಕ್ಕುಹಿಡಿದಿರುವ ಮಂಚದಲ್ಲಿ ಬೂಷ್ಟುಹಿಡಿದು ಹಾಳಾಗಿದ್ದ ಒಂದು ಹಾಸಿಗೆಯು ಜೋತುಬಿದ್ದಿತ್ತು. ವಾಲ್ಪೇಪರ್ ಕಿತ್ತುಹೋಗಿ ತೂಗಾಡುತ್ತಿತ್ತು. ಆ ಕೋಣೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಹರಡಿದ ಕಸಕಡ್ಡಿಯಿಂದ ಆ್ಯನಾ ಒಂದು ಹಳೇ ಫೋಟೋವನ್ನು ಹೆಕ್ಕಿ ತೆಗೆದಳು. ದುಃಖತುಂಬಿದ ಧ್ವನಿಯಲ್ಲಿ ಅವಳು ಹೇಳಿದ್ದು: “ನಾನಿಲ್ಲಿಗೆ ಹಿಂದೆಬರುವಾಗ, ನಾವು ಇಲ್ಲಿಂದ ಹೊರಡುವಾಗ ಹೇಗಿತ್ತೊ ಎಲ್ಲವೂ ಅದೇ ಸ್ಥಿತಿಯಲ್ಲಿ ಇರುವುದನ್ನು ನೋಡಲು ಯಾವಾಗಲೂ ಆಶಿಸುತ್ತಿದ್ದೆ. ಆದರೆ ಈಗ ನಮ್ಮ ಮನೆಯು ಕಸದ ತಿಪ್ಪೆಯಂತೆ ಆಗಿರುವುದನ್ನು ನೋಡಿ ಮತ್ತು ನಮ್ಮ ಎಲ್ಲ ಸ್ವತ್ತುಗಳು ಈ ಎಲ್ಲ ವರ್ಷಗಳಲ್ಲಿ ಕದಿಯಲ್ಪಟ್ಟಿರುವುದನ್ನು ನೋಡಿ ನನಗೆ ತುಂಬ ತುಂಬ ಬೇಸರವಾಗುತ್ತದೆ!”
ನಾವು ರುಡ್ನಿಕ್ ಕುಟುಂಬವು ಹಿಂದೆ ವಾಸಿಸುತ್ತಿದ್ದ ಆ ಮನೆಯಿಂದ ಹೊರಟು ಬೀದಿಯಲ್ಲಿ ನಡೆದುಕೊಂಡು ಬಂದೆವು. ಒಂದು ಮೂಲೆಯಲ್ಲಿ ಜನರ ಗುಂಪೊಂದು ತುಂಬ ಹುರುಪಿನ ಸಂಭಾಷಣೆಯಲ್ಲಿ ತೊಡಗಿರುವುದನ್ನು ನೋಡಿದೆವು. ಸುಮಾರು ಅರ್ಧ ಕಿಲೊಮೀಟರ್ ನಡೆದ ಬಳಿಕ ಆ ರಸ್ತೆಯ ಕೊನೆಯನ್ನು ತಲಪಿದೆವು. ಅಲ್ಲಿ ನದಿಯ ಪ್ರಶಾಂತ ವಿಸ್ತಾರಹರವನ್ನು ನೋಡಸಾಧ್ಯವಿರುವ ಕಡಿದಾದ ಭೂಶಿರದಲ್ಲಿ ಒಂದು ಉದ್ಯಾನವಿತ್ತು. ಅಲ್ಲಿನ ಚೆಸ್ಟ್ನಟ್ ಮರಗಳ ಬಿಳಿ ಹೂವುಗಳು ಗಾಳಿಯಲ್ಲಿ ಹಾರಾಡಿದವು. ಅಲ್ಲಿಂದ ಹಡಗುಕಟ್ಟೆಗೆ ಇಳಿಯುವ ಮೆಟ್ಟಲುಗಳಿದ್ದವು. ಇದೇ ಹಡಗುಕಟ್ಟೆಯಲ್ಲಿ 1986ರಲ್ಲಿ ಸಾವಿರಾರು ಜನರು ದೋಣಿಯನ್ನು ಹಿಡಿದು ಈ ಸ್ಥಳವನ್ನು ಖಾಲಿಮಾಡಲು ಕಾಯುತ್ತಾ ನಿಂತಿದ್ದರು.
ರುಡ್ನಿಕ್ ಕುಟುಂಬದವರು 19 ವರ್ಷಗಳ ಹಿಂದೆ ಪರಮಾಣು ರಿಯಾಕ್ಟರ್ ಕರಗಿದಾಗ ಆ ನಗರವನ್ನು ಬಿಟ್ಟುಹೋಗಿದ್ದರು. ಈಗ ಕಳೆದ ವರ್ಷವೇ ಅವರು ಪ್ರಥಮ ಬಾರಿಗೆ ಪ್ರಿಪೆಟ್ನಲ್ಲಿದ್ದ ಅವರ ಹಿಂದಿನ ನಿವಾಸಕ್ಕೆ ಭೇಟಿನೀಡಿದರು.
ಆ ಘಟನೆಗಳ ಬಗ್ಗೆ ಮನನಮಾಡುವ ಸಮಯ
ಇಸವಿ 2006ರ ಏಪ್ರಿಲ್ ತಿಂಗಳಲ್ಲಿ ಆ ಪರಮಾಣು ದುರಂತದ 20ನೇ ವಾರ್ಷಿಕೋತ್ಸವವನ್ನು ವಿಭಿನ್ನ ಪ್ರಕಾರದ ಆಚರಣೆಗಳ ಮೂಲಕ ಸ್ಮರಿಸಲಾಗುವುದು. ಅನೇಕ ಜನರಿಗೆ ಈ ಎಲ್ಲ ಆಚರಣೆಗಳು, ಮಾನವನು ಎಷ್ಟೇ ಪ್ರಾಮಾಣಿಕ ಪ್ರಯತ್ನಮಾಡಿದರೂ ದೇವರ ಮೇಲ್ವಿಚಾರಣೆಯಿಲ್ಲದೆ ಭೂವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಅವನು ಯಶಸ್ವಿಯಾಗಲಾರನು ಎಂಬುದರ ಬಗ್ಗೆ ಒಂದು ಗಂಭೀರವಾದ ಮರುಜ್ಞಾಪನವನ್ನು ಕೊಡುತ್ತವೆ.—ಯೆರೆಮೀಯ 10:23.
ಆ ದುರಂತದ ಬಗ್ಗೆ ಮಾಡಲಾದ ಮರುಪರಿಶೀಲನೆಯ ವೈಜ್ಞಾನಿಕ ವರದಿಯನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಹೊರಡಿಸಲಾಯಿತು. ವಿಶ್ವಸಂಸ್ಥೆಯಿಂದ ತಯಾರಿಸಲ್ಪಟ್ಟ ಈ ವರದಿಯು, ಆ ಅನಾಹುತದಿಂದಾಗಿ ಆರಂಭದಲ್ಲಿ 56 ಜನರನ್ನು ಕೊಲ್ಲಲ್ಪಟ್ಟರೆಂದು ಹೇಳಿತು ಮತ್ತು ಭವಿಷ್ಯದಲ್ಲಿ ವಿಕಿರಣಕ್ಕೆ ಸಂಬಂಧಪಟ್ಟ ರೋಗಗಳಿಂದಾಗಿ ನೇರವಾಗಿ ಸಂಭವಿಸುವ ಮರಣಗಳು ಕೇವಲ 4,000 ಆಗಿರುವವು ಎಂದು ಮುಂತಿಳಿಸಿತು. ಆದರೆ ಇದಕ್ಕಿಂತಲೂ ಹಿಂದೆ ಕೊಡಲ್ಪಟ್ಟಿದ್ದ ಭವಿಷ್ಯನುಡಿಗಳಲ್ಲಿ ಮರಣಸಂಖ್ಯೆಯು ಸಾಮಾನ್ಯವಾಗಿ 15,000ದಿಂದ 30,000ದ ವರೆಗೆ ಇರಲಿದೆ ಎಂದು ಹೇಳಲಾಗಿತ್ತು. ಆದುದರಿಂದ ವಿಶ್ವಸಂಸ್ಥೆಯ ಆ ವರದಿಯನ್ನು “ಹಲವಾರು ಪರಿಸರ ಗುಂಪುಗಳು ಖಂಡಿಸುತ್ತಾ ಅದನ್ನು, ಪರಮಾಣು ಶಕ್ತಿಯ ಸಂಭಾವ್ಯ ಅಪಾಯಗಳನ್ನು ಮರೆಮಾಡಲಿಕ್ಕಾಗಿರುವ ಒಂದು ಪೂರ್ವಕಲ್ಪಿತ ಪ್ರಯತ್ನವಾಗಿ ಪರಿಗಣಿಸುತ್ತವೆ” ಎಂದು 2005, ಸೆಪ್ಟೆಂಬರ್ 8ರ ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯ ಸಂಪಾದಕೀಯವು ತಿಳಿಸಿತು.
ಆ ದುರಂತದ ಬಳಿಕ ತನ್ನ ಸೃಷ್ಟಿಕರ್ತನಾದ ಯೆಹೋವ ದೇವರ ಬಗ್ಗೆ ಕಲಿತುಕೊಂಡ ವಿಕ್ಟರ್ ರುಡ್ನಿಕ್ ಹೇಳಿದ್ದು: “ಈಗ ನಾವು ಖಿನ್ನರಾಗಿಲ್ಲ ಯಾಕಂದರೆ ದೇವರ ರಾಜ್ಯವು ಬಂದಾಗ ಇಂಥ ಭೀಕರ ಅನಾಹುತಗಳು ನಡೆಯುವುದೇ ಇಲ್ಲವೆಂದು ನಮಗೆ ತಿಳಿದಿದೆ. ಚರ್ನೋಬಲ್ನ ಹತ್ತಿರದಲ್ಲಿರುವ ನಮ್ಮ ಅಚ್ಚುಮೆಚ್ಚಿನ ಮನೆಯ ಸುತ್ತಲಿನ ಪ್ರದೇಶವು ಈಗಿರುವ ಸ್ಥಿತಿಯಿಂದ ಚೇತರಿಸಿಕೊಂಡು, ಅದ್ಭುತಕರವಾದ ಪರದೈಸಿನ ಭಾಗವಾಗುವ ಸಮಯವನ್ನು ನಾವು ಎದುರುನೋಡುತ್ತಿದ್ದೇವೆ.”
ಆರಂಭದಲ್ಲಿ ಭೂಮಿಯ ಮೇಲಿದ್ದ ಪರದೈಸವನ್ನು ಪುನಃ ಸ್ಥಾಪಿಸಲಾಗುವುದು ಮತ್ತು ಅದು ಭೂವ್ಯಾಪಕವಾಗಿ ಹಬ್ಬುವುದೆಂಬ ಬೈಬಲಿನ ವಾಗ್ದಾನವು, ಚರ್ನೋಬಲ್ನ ಆ ದುರಂತವು ನಡೆದಂದಿನಿಂದ ಲಕ್ಷಾಂತರ ಜನರ ನಿಶ್ಚಿತಾಭಿಪ್ರಾಯವಾಗಿ ಪರಿಣಮಿಸಿದೆ. (ಆದಿಕಾಂಡ 2:8, 9; ಪ್ರಕಟನೆ 21:3, 4) ಯುಕ್ರೇನ್ ದೇಶವೊಂದರಲ್ಲೇ ಗತ 20 ವರ್ಷಗಳಲ್ಲಿ 1,00,000ಕ್ಕಿಂತಲೂ ಹೆಚ್ಚು ಜನರು ಆ ನಿರೀಕ್ಷೆಯನ್ನು ತಮ್ಮದಾಗಿಸಿಕೊಂಡಿದ್ದಾರೆ! ದೇವರ ಉದ್ದೇಶಗಳ ಕುರಿತು ಕಲಿಯಲು ಪ್ರಯತ್ನಿಸುವವರಿಗಾಗಿ ವಾಗ್ದಾನಿಸಲ್ಪಟ್ಟಿರುವ ಆ ಉಜ್ವಲ ಭವಿಷ್ಯವನ್ನು ಪರಿಗಣಿಸುವಂತೆ ನೀವೂ ಪ್ರಚೋದಿಸಲ್ಪಡುವಂತಾಗಲಿ. (g 4/06)
[ಪಾದಟಿಪ್ಪಣಿಗಳು]
a ಇಂಥ ಅಲ್ಪಾವಧಿಯ ಭೇಟಿಗಳು ಹಾನಿಕರವಲ್ಲವೆಂದು ವಿಭಿನ್ನ ಅಧಿಕಾರಿಗಳು ಘೋಷಿಸಿರುವುದಾದರೂ, ಎಚ್ಚರ! ಪತ್ರಿಕೆಯು ಆ ಕ್ಷೇತ್ರಕ್ಕೆ ಹೋಗಲು ಯಾವುದೇ ವೈಯಕ್ತಿಕ ಪ್ರಯಾಣದ ಯೋಜನೆಗಳನ್ನು ಶಿಫಾರಸ್ಸು ಮಾಡುವುದೂ ಇಲ್ಲ ಅನುಮೋದಿಸುವುದೂ ಇಲ್ಲ.
b ಇಸವಿ 1997 ಏಪ್ರಿಲ್ 22ರ ಎಚ್ಚರ! (ಇಂಗ್ಲಿಷ್) ಸಂಚಿಕೆಯಲ್ಲಿ 12-15ನೇ ಪುಟಗಳನ್ನು ನೋಡಿರಿ.
[ಪುಟ 16ರಲ್ಲಿರುವ ಚೌಕ/ಚಿತ್ರ]
ಲಿಕ್ವಿಡೇಟರ್ಗಳಿಗೆ ಸ್ಮಾರಕ
ಈ ಬೃಹತ್ತಾದ ಸ್ಮಾರಕವನ್ನು, ಚರ್ನೋಬಲ್ ದುರಂತದ ನಂತರ ಶುಚಿಗೊಳಿಸುವ ಕೆಲಸಮಾಡಿದ ಕಾರ್ಮಿಕರ ಗೌರವಾರ್ಥವಾಗಿ ಕಟ್ಟಲಾಗಿದೆ. ಈ ಕಾರ್ಮಿಕರನ್ನು ಲಿಕ್ವಿಡೇಟರ್ಗಳೆಂದು ಕರೆಯಲಾಗುತ್ತದೆ. ಈ ಕಾರ್ಮಿಕರು ಚರ್ನೋಬಲ್ ಪರಮಾಣು ಸ್ಥಾವರದಲ್ಲಾದ ಅನಾಹುತದ ಬೆಂಕಿಯನ್ನು ಆರಿಸಿದರು, ಹೊಗೆಯುಗುಳುತ್ತಿದ್ದ ಆ ಪರಮಾಣು ಸ್ಥಾವರವನ್ನು ಮುಚ್ಚುವ ರಚನಾಕಟ್ಟನ್ನು ನಿರ್ಮಿಸಿದರು ಮತ್ತು ಕಶ್ಮಲವನ್ನು ತೆಗೆದುಹಾಕಿದರು. ಈ ಕಾರ್ಮಿಕರ ಸಂಖ್ಯೆ ಲಕ್ಷಗಟ್ಟಲೆಯಾಗಿತ್ತು. ಸುಮಾರು 4,000 ಸಾವುಗಳು ನೇರವಾಗಿ ಈ ಅನಾಹುತಕ್ಕೆ ಸಂಬಂಧಪಟ್ಟ ಕಾರಣಗಳಿಂದಾಗಿ ಆಗಿರುವುದೆಂದು ಮತ್ತು ಇವುಗಳಲ್ಲಿ ಹೆಚ್ಚಿನ ಸಾವುಗಳು ಈ ಕಾರ್ಮಿಕರದ್ದು ಆಗಿರುವವೆಂದು ಮುಂತಿಳಿಸಲಾಗಿದೆ.
[ಪುಟ 15ರಲ್ಲಿರುವ ಚಿತ್ರಗಳು]
ಚರ್ನೋಬಲ್ ಪಟ್ಟಣವನ್ನು ಸೂಚಿಸುವ ಗೋಡೆ, ಮತ್ತು ಚಲನಚಿತ್ರ ಮಂದಿರ
[ಪುಟ 15ರಲ್ಲಿರುವ ಚಿತ್ರಗಳು]
ರುಡ್ನಿಕ್ ಕುಟುಂಬ ಮತ್ತು ಚರ್ನೋಬಲ್ನಲ್ಲಿನ ಅವರ ಮನೆ
[ಪುಟ 16ರಲ್ಲಿರುವ ಚಿತ್ರಗಳು]
ಕರಗುವಿಕೆ ನಡೆದಂಥ ಸ್ಥಾವರ; ಇದು ಪ್ರಿಪೆಟ್ (ಒಳಚಿತ್ರ)ನಲ್ಲಿರುವ ರುಡ್ನಿಕ್ ಕುಟುಂಬದ ಕಟ್ಟಡಮನೆಯಿಂದ ಸುಮಾರು ಮೂರು ಕಿಲೊಮೀಟರ್ ದೂರದಲ್ಲಿದೆ