ಜೇನುಸಾಕಣೆ ಒಂದು “ಮಧುರ” ಕಥೆ
ಗ್ರೀಸ್‌ನ ಎಚ್ಚರ! ಸುದ್ದಿಗಾರರಿಂದ
ಮುಂಜಾವಿನ ನಸುಬೆಳಕು, ಅದರ ಲಘು ಪ್ರಕಾಶವನ್ನು ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಿಧಾನವಾಗಿ ಹರಡಿಸುತ್ತದೆ. ಪ್ರಾತಃಕಾಲದ ಚಳಿ ಮತ್ತು ಇಬ್ಬನಿಯ ನಡುವೆ, ಒಂದು ಪಿಕ್‌ಅಪ್ ಟ್ರಕ್ಕು, ಪರ್ವತದ ಇಳಿಜಾರಿನ ತಳದಲ್ಲಿರುವ ರಸ್ತೆಯ ಪಕ್ಕದಲ್ಲಿ ನಿಶ್ಶಬ್ದವಾಗಿ ನಿಲ್ಲುತ್ತದೆ. ಕೈಗವಸುಗಳು, ಬೂಟುಗಳು, ಹತ್ತಿಯ ಮೇಲುಡುಪುಗಳು, ಮತ್ತು ಮುಸುಕುಹಾಕಿದ ಅಗಲ ಅಂಚಿನ ಹ್ಯಾಟ್‌ಗಳನ್ನು ಧರಿಸಿಕೊಂಡಿರುವ ಎರಡು ಮಬ್ಬಾದ ಆಕೃತಿಗಳು ಹೊರಬರುತ್ತವೆ. ಜಾಗರೂಕವಾದರೂ ಉತ್ಸುಕ ಚಲನವಲನಗಳೊಂದಿಗೆ, ಅವರು ಟ್ರಕ್ಕಿನೊಳಗೆ ಅನೇಕ ಮರದ ಪೆಟ್ಟಿಗೆಗಳನ್ನು ತುಂಬುತ್ತಾರೆ. ಇವರು ಸುಲಭವಾಗಿ ಏನನ್ನೋ ಕದಿಯುತ್ತಿರುವ ಕಳ್ಳರೊ? ಇಲ್ಲ, ಇವರು ತಮ್ಮ ಅಮೂಲ್ಯವಾದ ಜೇನುನೊಣಗಳ ಗುಂಪಿನ ಒಳ್ಳೆಯ ಪರಾಮರಿಕೆ ಮಾಡುತ್ತಿರುವ ಜೇನುಗಾರರು. ಅವರು, ಎಲ್ಲಿ ಮಕರಂದ ಉತ್ಪಾದಿಸುವ ಕೇಂದ್ರಗಳಿವೆಯೊ, ಆ ಮತ್ತೊಂದು ಗಮ್ಯಸ್ಥಾನಕ್ಕೆ ಪ್ರಯಾಣಿಸಲು ಸಿದ್ಧರಾಗಿದ್ದಾರೆ.
ಜೇನುಗಾರರು, ಒಂದು ವಿಶೇಷ ರೀತಿಯ ಕೀಟದೊಂದಿಗೆ ಪರಸ್ಪರ ಕಾರ್ಯನಡೆಸುವ ಸಂಬಂಧ ಇರುವುದಾಗಿ ಹೇಳಿಕೊಳ್ಳುವ, ವಿಶೇಷ ರೀತಿಯ ಜನರಾಗಿದ್ದಾರೆ. ಒಂದು ಕಡೆಯಲ್ಲಿ, ಜೇನು ಮತ್ತು ಮೇಣವನ್ನು ಉತ್ಪಾದಿಸುವ ಹಾಗೂ ಹಲವಾರು ಬೆಳೆಗಳಿಗೆ ಪರಾಗಧಾನ ಮಾಡುವ, ಎಲ್ಲ ಕೀಟಗಳಲ್ಲಿ ಬಹುಶಃ ಆರ್ಥಿಕವಾಗಿ ಅತ್ಯಂತ ಅಮೂಲ್ಯವಾದ ಕೀಟವು ಜೇನುನೊಣವಾಗಿದೆ. ಇನ್ನೊಂದು ಕಡೆಯಲ್ಲಿ, ಜೇನುನೊಣಗಳನ್ನು ನೋಡಿಕೊಳ್ಳುತ್ತಾ ಜೀವನ ನಡೆಸುವ ಮತ್ತು ಅದೇ ಸಮಯದಲ್ಲಿ ಆ ಪುಟ್ಟ ಜೀವಿಗಳನ್ನು ಪ್ರೀತಿಸಿ, ಜೇನುಗಾರರಲ್ಲಿ ಒಬ್ಬನು ಹೇಳುವಂತೆ “ಅವುಗಳ ಕುರಿತು ಚೆನ್ನಾಗಿ ತಿಳಿದುಕೊಂಡಿರುವ” ಜನರೂ ಇದ್ದಾರೆ.
“ಅನುದಿನದ ಅದ್ಭುತಕಾರ್ಯಗಳ” ಪಾಲಕ
ಒಬ್ಬ ಜೇನುಗಾರನಾಗುವುದು ಸುಲಭವೆಂದು ತೋರಬಹುದು: ಜೇನುನೊಣ ಸಮುದಾಯಗಳಿಂದ ತುಂಬಿರುವ ಅನೇಕ ಜೇನುಗೂಡುಗಳನ್ನು ಸಂಗ್ರಹಿಸಿ, ಅವುಗಳನ್ನು ಮಕರಂದ ಉತ್ಪಾದಿಸುವ ಸ್ಥಳದಲ್ಲಿಟ್ಟು, ಕೆಲವು ತಿಂಗಳುಗಳ ನಂತರ ಉತ್ಪಾದನೆಗಳನ್ನು ಶೇಖರಿಸಲು ಹಿಂದಿರುಗುವುದು. ಆದರೆ ವಿಷಯವು ಹಾಗಿರುವುದಿಲ್ಲ. ವಾಸ್ತವವಾಗಿ, ಅದರಲ್ಲಿ ಏನು ಒಳಗೂಡಿದೆ ಎಂಬುದನ್ನು ಕಂಡುಹಿಡಿಯಲು, ನಾವು ವೃತ್ತಿಪರ ಜೇನುಗಾರರಾದ ಜಾನ್ ಮತ್ತು ಮಾರೀಆರೊಂದಿಗೆ ಮಾತಾಡಿದೆವು. ಅವರು ತಮ್ಮ ಪ್ರಿಯ ಕಸುಬಿನ ಕುರಿತು ನಮಗೆ ಸಂತೋಷದಿಂದ ಹೇಳಿದರು.
“ಜೇನುಸಾಕಣೆಯು, ನೀವು ಅನುದಿನ ಚಿಕ್ಕಪುಟ್ಟ ಅದ್ಭುತಗಳನ್ನು ಅನುಭವಿಸುವಂತೆ ಬಿಡುತ್ತದೆ,” ಎಂದು ಜಾನ್, ಒಂದು ತೆರೆದ ಗೂಡಿನ ಮೇಲೆ ಒರಗಿಕೊಂಡು ಹೇಳುತ್ತಾನೆ. “ಈ ತನಕ, ಜೇನುನೊಣದ ಉನ್ನತ ಸ್ವರೂಪದ ಸಮಾಜ ಜೀವನವನ್ನು, ಮುಂದುವರಿದ ಸಂವಾದ ಕೌಶಲಗಳನ್ನು, ಮತ್ತು ಅದರ ಪ್ರತಿಭಾಪೂರ್ಣವಾದ ಕೆಲಸದ ಹವ್ಯಾಸಗಳನ್ನು ಯಾರೊಬ್ಬರೂ ಸ್ಪಷ್ಟವಾಗಿ ಅರ್ಥಮಾಡಿಕೊಂಡಿಲ್ಲ.”
ವೃತ್ತಿಪರ ಜೇನುಸಾಕಣೆಯ ಇತಿಹಾಸವನ್ನು ಪತ್ತೆಹಚ್ಚುತ್ತಾ, ಜಾನ್ ಉಲ್ಲೇಖಿಸುವುದೇನೆಂದರೆ, ಟೊಳ್ಳಾದ ಗಿಡಗಳು ಮತ್ತು ಇತರ ಕುಳಿಗಳಲ್ಲಿ ವಾಸಿಸುತ್ತಿದ್ದ ಜೇನುನೊಣ ಸಮುದಾಯಗಳನ್ನು ನಾಶಗೊಳಿಸುವ ಮೂಲಕ, ಗತಕಾಲದಲ್ಲಿನ ಜೇನುಗಾರರು ಜೇನನ್ನು ಶೇಖರಿಸಿದರು. ಆದರೆ, 1851ರಲ್ಲಿ, ಅಮೆರಿಕದ ಜೇನುಕೃಷಿಕನಾದ ಲರನ್ಸೊ ಲರೇನ್ ಲ್ಯಾಂಗ್‌ಸ್ಟ್ರೊತ್, ಜೇನುನೊಣಗಳು ಮೇಣದ ಹಟ್ಟಿಗಳ ನಡುವೆ ಸುಮಾರು ಆರು ಮಿಲಿಮೀಟರ್‌ಗಳಷ್ಟು ಅಂತರವನ್ನು ಬಿಡುತ್ತವೆ ಎಂಬುದನ್ನು ಕಂಡುಹಿಡಿದನು. ಹೀಗೆ, ಯಾವುದರಲ್ಲಿ ಹಟ್ಟಿಯ ಚೌಕಟ್ಟುಗಳ ನಡುವೆ ತದ್ರೀತಿಯ ಅಂತರವನ್ನು ಬಿಡಲಾಗುತ್ತದೊ, ಅಂತಹ ಮಾನವ ನಿರ್ಮಿತ ಮರದ ಗೂಡುಗಳನ್ನು ಉಪಯೋಗಿಸಸಾಧ್ಯವಿತ್ತು. ಒಂದು ಜೇನುಗೂಡಿನಿಂದ ಚೌಕಟ್ಟುಗಳನ್ನು ಒಂದೊಂದಾಗಿ ತೆಗೆದು, ಜೇನುನೊಣ ಸಮುದಾಯವನ್ನು ನಾಶಗೊಳಿಸದೆಯೇ ಜೇನು ಮತ್ತು ಮೇಣವನ್ನು ಶೇಖರಿಸುವುದು ಈಗ ಸಾಧ್ಯವಾಯಿತು.
“ಯಶ್ವಸಿಕರ ಜೇನುಸಾಕಣೆಗೆ, ನಿಮ್ಮ ಜೇನುನೊಣ ಸಮುದಾಯಗಳಿಗಾಗಿ ನಿಮ್ಮಲ್ಲಿ ಬಲವಾದ ವಾತ್ಸಲ್ಯವಿರಬೇಕು. ನಿಮ್ಮ ಜೇನುನೊಣಗಳಿಗೆ ನೀವು ಒಬ್ಬ ತಂದೆಯಂತಿದ್ದೀರಿ, ಮತ್ತು ಇದನ್ನು ಅವು ಗ್ರಹಿಸುತ್ತವೆ ಮತ್ತು ಅದಕ್ಕನುಸಾರ ಪ್ರತಿಕ್ರಿಯಿಸುತ್ತವೆ ಎಂದು ನಾನು ನಂಬುತ್ತೇನೆ. ನೀವು ಅವುಗಳ ವೈದ್ಯರು, ಪಾಲಕರು, ಚಳಿಗಾಲದ ಕಷ್ಟಕರ ಸಮಯಗಳಲ್ಲಿ ಆಹಾರ ಕೊಡುವವರೂ ಆಗುತ್ತೀರಿ,” ಎಂದು ಜಾನ್ ಮುಂದುವರಿಸಿ ಹೇಳುತ್ತಾನೆ.
ಮಾರೀಆ ಕೂಡಿಸಿ ಹೇಳುವುದು: “ಒಬ್ಬ ಒಳ್ಳೆಯ ಜೇನುಗಾರನು ಒಂದು ಜೇನುಗೂಡಿನ—ಯಾವುದರಲ್ಲಿ ಸಾಮಾನ್ಯವಾಗಿ 8 ಸಾವಿರದಿಂದ 80 ಸಾವಿರದಷ್ಟು ಜೇನುನೊಣಗಳಿರುತ್ತವೊ—ಕಡೆಗೆ ಕೇವಲ ಒಂದು ನೋಟ ಬೀರಿ ಹೆಚ್ಚಿನ ವಿಷಯವನ್ನು ಹೇಳಬಲ್ಲನು. ನೀವು ಅನುಭವಸ್ಥರಾಗಿರುವಲ್ಲಿ, ಗೂಡನ್ನು ತೆರೆದಾಗ ಬರುವ ಝೇಂಕಾರ ಶಬ್ದವು ತಾನೇ, ಸಮುದಾಯವು ಏಳಿಗೆ ಹೊಂದುತ್ತಿದೆಯೊ, ಉತ್ಪನ್ನಕರವಾಗಿದೆಯೊ, ‘ಸಂತೋಷ’ದಿಂದಿದೆಯೊ, ಅದಕ್ಕೆ ಹಸಿವಾಗಿದೆಯೊ, ರಾಣಿಜೇನು ಸತ್ತಿರುವ ಕಾರಣ ಅದು ‘ತಬ್ಬಲಿ’ಯಾಗಿದೆಯೊ, ಅಹಿತಕರವಾದ ಯಾವುದೊ ವಿಷಯದಿಂದ ಅದು ಕೆರಳಿಸಲ್ಪಟ್ಟಿದೆಯೊ ಎಂಬುದನ್ನು ಮತ್ತು ಇನ್ನೂ ಹೆಚ್ಚೆಚ್ಚು ವಿಷಯಗಳನ್ನು ನಿಮಗೆ ತಿಳಿಸುವುದು.”
ಯಶಸ್ವಿಕರ ಜೇನುಸಾಕಣೆಗಾಗಿರುವ ಪ್ರಾಮುಖ್ಯ ಅಂಶಗಳು
ಜಾನ್ ವಿವರಿಸುವುದು: “ಜೇನುಗಾರನೊಬ್ಬನು ತನ್ನ ಗೂಡುಗಳನ್ನು ಇಡುವ ಸ್ಥಳದ ವಿಷಯದಲ್ಲಿನ ಒಂದು ಜಾಗರೂಕವಾದ ಆಯ್ಕೆಯು ನಿರ್ಧಾರಕವಾಗಿದೆ. ಜೇನುನೊಣಗಳು ಎಲ್ಲಿ ಆಹಾರವನ್ನು ಕಂಡುಕೊಳ್ಳಬಲ್ಲವೊ ಅಂತಹ ಹೂಬಿಡುವ ಹುಲ್ಲುಗಾವಲುಗಳನ್ನು ಗುರುತಿಸಲು ನಾವು ಬಹಳಷ್ಟು ಪ್ರಯತ್ನಪಡುತ್ತೇವೆ.
“ಜೇನುಗಾರನು ತನ್ನ ಜೇನುನೊಣ ಸಮುದಾಯಗಳನ್ನು ಕಾರ್ಯಮಗ್ನವಾಗಿರಿಸುವ ಸಲುವಾಗಿ, ಕಿತ್ತಿಳೆ ಹಾಗೂ ಬ್ಯಾಸ್‌ವುಡ್ ಪುಷ್ಪರಾಶಿಗಳ ನಿವೇಶನಗಳಿಗಾಗಿ ಹುಡುಕಬಹುದು. ಬೇಸಗೆ ಮತ್ತು ಶರತ್ಕಾಲದಲ್ಲಿ, ಪೈನ್ ಮತ್ತು ಫರ್ ಮರಗಳಿಂದ ತುಂಬಿರುವ ಒಂದು ಕ್ಷೇತ್ರವು, ತಿಳಿಗೆಂಪು ಬಣ್ಣವಿರುವ ಉತ್ತಮ ಗುಣಮಟ್ಟದ ಜೇನನ್ನು ಉತ್ಪಾದಿಸಲು ಸಹಾಯ ಮಾಡುವುದು. ಮಾರುಕಟ್ಟೆಯಲ್ಲಿ ಇದರ ವಿಕ್ರಯ ಚೆನ್ನಾಗಿ ಆಗುತ್ತದೆ. ಕಾಡು ಓಮದ ಪುಷ್ಪರಾಶಿಗಳ ಹೊಲಗಳು, ಅತ್ಯುತ್ತಮ ಜಾತಿಯ ಜೇನನ್ನು—ಜೇನಿನ ದೊರೆ ಎಂದು ಜೇನುಕೃಷಿಕರು ಅದನ್ನು ಕರೆಯುತ್ತಾರೆ—ತಯಾರಿಸುವುದರಲ್ಲಿ ಸಹಾಯ ಮಾಡುವವು. ಜೇನುನೊಣಗಳು ಬಿಳಿಯ ತ್ರಿದಳ ಪರ್ಣಿ, ಹಳದಿ ಬಣ್ಣದ ಸಿಹಿ ತ್ರಿದಳ ಪರ್ಣಿ ಮತ್ತು ಆ್ಯಲ್‌ಫ್ಯಾಲ್ಫದಿಂದಲೂ ಮೇವನ್ನು ಸಂಗ್ರಹಿಸುತ್ತವೆ.”
ಸಾಮಾನ್ಯ ಜ್ಞಾನವು ಪರಮ ಪ್ರಮುಖತೆಯದ್ದಾಗಿದೆ. ಮಾರೀಆ ವಿವರಿಸುವುದು: “ಗೂಡುಗಳನ್ನು ನಾವು ಪರ್ವತಮಯ ಕ್ಷೇತ್ರದಲ್ಲಿಡುವಾಗ, ಅವನ್ನು ಪರ್ವತದ ತಪ್ಪಲಿನಲ್ಲಿ ಇಡುವುದು ಲಾಭಕರ. ಹೀಗೆ ಜೇನುನೊಣಗಳು ಗುಡ್ಡದಮೇಲಕ್ಕೆ ಹಾರಿ, ಹೂವಿನಿಂದ ತುಂಬಿದ ಮರಗಳನ್ನು ಸಂದರ್ಶಿಸಿ, ಅನಂತರ ಮಕರಂದ ತುಂಬಿಕೊಂಡು, ಪುನಃ ತಮ್ಮ ಗೂಡುಗಳಿಗೆ ಸರಳವಾದ, ಇಳಿಜಾರಿನ ಪಥವನ್ನು ಅನುಸರಿಸಿ ಹಾರಿಬರುತ್ತವೆ. ಗೂಡುಗಳು ಮರಗಳ ಮೇಲಿನ ಏರು ನೆಲದ ಮೇಲೆ ದೂರದಲ್ಲಿರುವುದಾದರೆ, ಇದು ಜೇನುನೊಣಗಳನ್ನು ಬಳಲಿಸಿ, ಸಮುದಾಯದ ಉತ್ಪನ್ನವನ್ನು ಪ್ರತಿಕೂಲವಾಗಿ ಬಾಧಿಸುವುದು.”
ಎಳೆಯ ರಾಣಿಜೇನು ಮಧ್ಯದಲ್ಲಿ ಕುಳಿತುಕೊಂಡಿರುವ ಗೂಡಿನ ಚೌಕಟ್ಟುಗಳಲ್ಲೊಂದನ್ನು ಜಾನ್ ಅತ್ಯಂತ ಜೋಕೆಯಿಂದ ಎತ್ತಿಹಿಡಿದು, “ಒಂದು ಸಮುದಾಯದ ಕ್ಷೇಮ ಮತ್ತು ಉತ್ಪನ್ನದಲ್ಲಿ ರಾಣಿಜೇನಿನಿಂದ ವಹಿಸಲ್ಪಡುವ ಅತ್ಯಾವಶ್ಯಕ ಪಾತ್ರವನ್ನು ಪ್ರತಿಯೊಬ್ಬ ಜೇನುಗಾರನು ಅರ್ಥಮಾಡಿಕೊಳ್ಳುತ್ತಾನೆ,” ಎಂದು ಹೇಳುತ್ತಾನೆ. “ಕಡಿಮೆ ಪರಿಮಾಣದ ಸಂತಾನ ಮತ್ತು ಜೇನನ್ನು ಉತ್ಪಾದಿಸುವ ಗೂಡುಗಳಲ್ಲಿ, ರಾಣಿಜೇನನ್ನು ಕೊಂದು, ಸ್ಥಾನಭರ್ತಿಮಾಡಬೇಕು. ಎಳೆಯ ರಾಣಿಜೇನುಗಳಿರುವ ಸಮುದಾಯಗಳು ಅತಿ ಹೆಚ್ಚಿನ ಜೇನನ್ನು ತಯಾರಿಸುತ್ತವೆ. ಹಾಗೂ, ಹೊಸ ಸಮುದಾಯಗಳನ್ನು ನಾವು ರಚಿಸಬಯಸುವಾಗ, ಜೇನುನೊಣಗಳಿಂದ ತುಂಬಿರುವ ಆರೋಗ್ಯವಂತ ಜೋಡಿ ಗೂಡನ್ನು ತೆಗೆದುಕೊಂಡು, ಮೇಲಿನ ಮತ್ತು ಕೆಳಗಿನ ಪೆಟ್ಟಿಗೆಗಳನ್ನು ಬೇರ್ಪಡಿಸುತ್ತೇವೆ. ಮೇಲಿನ ಪೆಟ್ಟಿಗೆಯಲ್ಲಿ ರಾಣಿಜೇನಿರುತ್ತದೆ, ಆದುದರಿಂದ ಕೆಳಗಿನ ಪೆಟ್ಟಿಗೆಯಲ್ಲಿ ನಾವೊಂದು ಎಳೆಯ, ಕೂಡಿದ ರಾಣಿಜೇನನ್ನಿಡುತ್ತೇವೆ. ಹೂವುಗಳು ಅರಳುವ ಸಮಯದೊಳಗೆ, ಹೊಸ ರಾಣಿಜೇನು ಮೊಟ್ಟೆಗಳನ್ನಿಡುತ್ತಾ, ಗೂಡನ್ನು ಎಳೆಯ ಕಾರ್ಮಿಕಜೇನುಗಳಿಂದ ತುಂಬಿಸುತ್ತಿರುತ್ತದೆ.”
ಒಂದು ಜೇನುನೊಣವು ಎಷ್ಟು ಕಾಲ ಜೀವಿಸುತ್ತದೆ? ಕಾರ್ಮಿಕಜೇನಿನ ಜೀವಾವಧಿಯು ಅದರ ಶ್ರಮಶೀಲತೆಗೆ ವಿಲೋಮಪ್ರಮಾಣವಾಗಿದೆ ಎಂದು ನಮಗೆ ಹೇಳಲಾಗಿದೆ. ಬೇಸಿಗೆಯಲ್ಲಿ, ಜೇನುನೊಣವೊಂದು ತಾಸಿಗೆ ಸುಮಾರು 21 ಕಿಲೊಮೀಟರುಗಳಷ್ಟು ವೇಗದಲ್ಲಿ ಹಾರುತ್ತಾ, ದಿನಕ್ಕೆ ಸುಮಾರು 15 ತಾಸುಗಳ ಕಾಲ ಹೂವುಗಳಿಂದ ಮೇವನ್ನು ಸಂಗ್ರಹಿಸುತ್ತಿರುವುದರಿಂದ, ಅದು ಕೇವಲ ಆರು ವಾರಗಳ ಕಾಲ ಜೀವಿಸುತ್ತದೆ. ಚಳಿಗಾಲದಲ್ಲಿ ಜೇನುನೊಣಗಳು ದಿನಕ್ಕೆ ಎರಡರಿಂದ ಮೂರು ತಾಸುಗಳ ವರೆಗೆ ಮಾತ್ರ ಕೆಲಸಮಾಡುವುದರಿಂದ, ಶಾರೀರಿಕವಾಗಿ ಹೆಚ್ಚು ದಣಿಯುವುದಿಲ್ಲ, ಮತ್ತು ಹೀಗೆ ಅವು ಹಲವಾರು ತಿಂಗಳುಗಳ ವರೆಗೆ ಜೀವಂತವಾಗಿರಬಹುದು.
ಬಹುವಿಧದ ಉತ್ಪಾದನೆಗಳು
ಜೇನುಸಾಕಣೆಯ ಕುರಿತು ನಾವು ಮಾತಾಡುವಾಗ ಮನಸ್ಸಿಗೆ ಬರುವ ಮೊದಲ ವಿಷಯವು, ಜೇನು ಎಂಬುದು ನಿಶ್ಚಯ. ಈ ಸಿಹಿಯಾದ, ಅಂಟಂಟಾದ ದ್ರವವು, ಕಾರ್ಮಿಕಜೇನಿನಿಂದ ರೂಪಾಂತರಿಸಲ್ಪಟ್ಟ ಮಕರಂದವಾಗಿದೆ. ಸರಾಸರಿಯಾಗಿ, ಒಂದು ವ್ಯಾಪಾರೀ ಗೂಡು ವರ್ಷಕ್ಕೆ 29 ಕಿಲೊಗ್ರಾಮ್‌ಗಳಷ್ಟು ಜೇನನ್ನು ಉತ್ಪಾದಿಸಬಲ್ಲದು. ಜೇನುನೊಣಗಳ ಚಟುವಟಿಕೆಯ ಮತ್ತೊಂದು ಅಮೂಲ್ಯವಾದ ಉಪೋತ್ಪನ್ನವು ಮೇಣವಾಗಿದೆ. ಒಂದು ಜೇನುಹಟ್ಟಿಯು ಸುಮಾರು ಐದರಿಂದ ಆರು ವರ್ಷಗಳ ವರೆಗೆ ಉಪಯುಕ್ತವಾಗಿದೆ. ಅಷ್ಟರೊಳಗೆ, ಅದರ ಮೇಲೆ ಜೀವಿಸುವ ಹಲವಾರು ಸೂಕ್ಷ್ಮದರ್ಶಕೀಯ ಜೀವಿಗಳು ಮತ್ತು ಪರೋಪಜೀವಿಗಳಿಂದಾಗಿ ಅದರ ಬಣ್ಣವು ಗಾಢವಾಗಿರುತ್ತದೆ ಮತ್ತು ಅದರ ಸ್ಥಾನಭರ್ತಿಮಾಡಬೇಕಾಗುತ್ತದೆ. ತೊರೆಯಲ್ಪಟ್ಟ ಜೇನುಹಟ್ಟಿಗಳು ಮೇಣಕ್ಕಾಗಿ ಸಂಸ್ಕರಿಸಲ್ಪಡುತ್ತವೆ. ಸರಾಸರಿ ವ್ಯಾಪಾರೀ ಉತ್ಪಾದನೆಯು, ಶೇಖರಿಸಲ್ಪಟ್ಟ ಜೇನಿನ ಪ್ರತಿ ಟನ್‌ಗೆ 9ರಿಂದ 18 ಕಿಲೊಗ್ರಾಮ್‌ಗಳಷ್ಟು ಮೇಣವಾಗಿದೆ.
ಪುಷ್ಪಧೂಳಿಯು—ರಾಣಿಜೇನು, ಕಾರ್ಮಿಕಜೇನು ಮತ್ತು ಗಂಡುಜೇನಿನ ವಿಕಸನೆಗಾಗಿರುವ ಸಸಾರಜನಕಗಳು, ಜೀವಸ್ವತಗಳು, ಖನಿಜಗಳು, ಮತ್ತು ಕೊಬ್ಬಿನ ಪ್ರಧಾನ ಮೂಲವಾಗಿದ್ದು—ಅನೇಕ ಶಾರೀರಿಕ ಕಾಯಿಲೆಗಳಿಗೆ ಒಂದು ಉತ್ತಮ ನೈಸರ್ಗಿಕ ಔಷಧವಾಗಿಯೂ ಕೆಲವು ಜನರಿಂದ ಪ್ರಶಂಸಿಸಲ್ಪಡುತ್ತದೆ. ಒಂದು ಗೂಡು ವರ್ಷಕ್ಕೆ ಸುಮಾರು ಐದು ಕಿಲೊಗ್ರಾಮ್‌ಗಳಷ್ಟು ಪುಷ್ಪಧೂಳಿಯನ್ನು ಕೊಡಬಲ್ಲದು. ಜೇನಂಟು—ಜೇನುನೊಣಗಳು ತಮ್ಮ ಗೂಡನ್ನು ದ್ವೀಪೀಕರಿಸಲು ಮತ್ತು ತೆಗೆದುಹಾಕಲು ತುಂಬ ದೊಡ್ಡದಾಗಿರುವ ಯಾವುದೇ ಶತ್ರುವನ್ನು ಆವರಿಸಲು ಉಪಯೋಗಿಸುವ ಒಂದು ಪದಾರ್ಥವಾಗಿದೆ.
ನೇರವಾಗಿ ಇಲ್ಲವೆ ಪರೋಕ್ಷವಾಗಿ, ನಾವು ಸೇವಿಸುವ ಆಹಾರದಲ್ಲಿ ಸುಮಾರು ಕಾಲು ಭಾಗದಷ್ಟು ಉತ್ಪಾದನೆಯು, ಬೆಳೆಗಳಿಗೆ ಪರಾಗಧಾನ ಮಾಡುವ ಜೇನುನೊಣದ ಸಾಮರ್ಥ್ಯದ ಮೇಲೆ ಅವಲಂಬಿಸುತ್ತದೆ. ಸೇಬು ಹಣ್ಣುಗಳು, ಬಾದಾಮಿಗಳು, ಕಲ್ಲಂಗಡಿಗಳು, ಪ್ಲಮ್‌ಗಳು, ಪೇರು ಹಣ್ಣುಗಳು, ಸೌತೆಕಾಯಿಗಳು, ಮತ್ತು ವಿಭಿನ್ನ ಪ್ರಕಾರದ ಬೆರಿ ಹಣ್ಣುಗಳೆಲ್ಲವೂ ಪರಾಗಧಾನಕ್ಕಾಗಿ ಜೇನುನೊಣಗಳ ಮೇಲೆ ಅವಲಂಬಿಸುತ್ತವೆ. ಕ್ಯಾರೆಟ್‌ಗಳು, ಈರುಳ್ಳಿಗಳು, ಮತ್ತು ಸೂರ್ಯಕಾಂತಿಗಳನ್ನೂ ಸೇರಿಸಿ, ಬೀಜವುಳ್ಳ ಹಲವಾರು ಬೆಳೆಗಳೂ ಜೇನುನೊಣಗಳ ಮೇಲೆ ಅವಲಂಬಿಸುತ್ತವೆ. ಜಾನುವಾರುಗಳ ಮೇವಾಗುವ ಆ್ಯಲ್‌ಫ್ಯಾಲ್ಫ, ಜೇನುನೊಣಗಳಿಂದ ಪರಾಗಧಾನ ಮಾಡಲ್ಪಡುವುದರಿಂದ, ಮಾಂಸ ಮತ್ತು ಹೈನೋತ್ಪನ್ನಗಳೂ ಅವುಗಳಿಂದ ಪ್ರಭಾವಿಸಲ್ಪಡುತ್ತವೆ.
“ಸಹಜಪ್ರವೃತ್ತಿಯಿಂದ ವಿವೇಕಿಗಳು”
ಜೇನುನೊಣಗಳ ಸಾಮಾಜಿಕ ರಚನೆಯ ಜಟಿಲತೆಗಳನ್ನು, ಒಂದು ಸಂಕೀರ್ಣವಾದ ಸಮುದಾಯ ಜೀವಿತದ ಮರುಳುಗೊಳಿಸುವಂತಹ ವಿಕಸನೆಯನ್ನು, ಮತ್ತು ದಿಕ್ಕರಿವು ಹಾಗೂ ಸಂವಾದದ ವಿಷಯದಲ್ಲಿ ಅವುಗಳ ಅತ್ಯುತ್ಕೃಷ್ಟ ಸಾಮರ್ಥ್ಯಗಳನ್ನು ವಿವರಿಸಲು ನಾವು ಅಸಮರ್ಥರೆಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತಾ, “ಹೆಚ್ಚಿನ ಜೇನುಗಾರರು ದೇವರಲ್ಲಿ ಖಂಡಿತವಾಗಿ ನಂಬಿಕೆಯಿಡುತ್ತಾರೆಂದು ನಾನು ನೆನಸುತ್ತೇನೆ” ಎಂಬುದಾಗಿ ಮಾರೀಆ ಹೇಳುತ್ತಾಳೆ. ಜೇನುನೊಣಗಳ ಕುರಿತು ಅಭ್ಯಾಸಮಾಡುವ ಮತ್ತು ಅವುಗಳ ಆರೈಕೆಮಾಡುವ ಅನೇಕ ಜನರು ಇದೆಲ್ಲವನ್ನು, ಜೇನುನೊಣಗಳು “ಸಹಜಪ್ರವೃತ್ತಿಯಿಂದ ವಿವೇಕಿಗಳು” ಎಂಬ ನಿಜತ್ವಕ್ಕೆ ಕೂಡಲೇ ಆರೋಪಿಸುವರು. ಇಂತಹ ಸಹಜಪ್ರವೃತ್ತಿಯು, ನಮ್ಮ ಮಹಾ ಸೃಷ್ಟಿಕರ್ತನಾದ ಯೆಹೋವ ದೇವರ ಮೂಲಕ ಅವುಗಳಿಗೆ ಧಾರಾಳವಾಗಿ ಅನುಗ್ರಹಿಸಲ್ಪಟ್ಟಿದೆ.—ಜ್ಞಾನೋಕ್ತಿ 30:24ನ್ನು ಹೋಲಿಸಿರಿ.
[Box/Pictures on page 16]
ಹೂವಿನಿಂದ ನಿಮ್ಮ ಮೇಜಿನ ವರೆಗೆ
1 ಸಂಚಾರಿಜೇನು ಹೂವೊಂದನ್ನು ಸಂದರ್ಶಿಸಿ, ಮಕರಂದವನ್ನು ಶೇಖರಿಸುತ್ತದೆ
ಜೇನುನೊಣಗಳು ಹೂವುಗಳನ್ನು ಸಂದರ್ಶಿಸಿದಂತೆ, ಅವು ತಮ್ಮ ಜೇನುಚೀಲ—ಅದು ಅವುಗಳ ಅನ್ನನಾಳದ ವಿಸ್ತರಣವಾಗಿದೆ—ದಲ್ಲಿ ಮಕರಂದವನ್ನು ಶೇಖರಿಸುತ್ತವೆ. ಈ ಚೀಲವನ್ನು ತುಂಬಲು, ಜೇನುನೊಣವು ಪ್ರತಿಯೊಂದು ಸಣ್ಣ ಹೂವನ್ನು 1,000ರಿಂದ 1,500 ಸಲ ಸಂದರ್ಶಿಸಬೇಕು
2 ಹಿಂದೆ ಗೂಡಿನಲ್ಲಿ, ಮಕರಂದವು ಜೇನುಹಟ್ಟಿಯಲ್ಲಿ ಸಂಗ್ರಹಿಸಿ ಇಡಲ್ಪಡುತ್ತದೆ
ಗೂಡನ್ನು ಪ್ರವೇಶಿಸಿದ ತರುವಾಯ, ಸಂಚಾರಿಜೇನು ತನ್ನ ಜೇನುಚೀಲದಲ್ಲಿರುವುದನ್ನು ಒಂದು ಎಳೆಯ ಕಾರ್ಮಿಕಜೇನಿನ ಬಾಯೊಳಗೆ ಕಕ್ಕುತ್ತದೆ. ಅನಂತರ ಕಾರ್ಮಿಕಜೇನು ಮಕರಂದವನ್ನು ಒಂದು ಕೋಶದಲ್ಲಿ ಶೇಖರಿಸಿ, ಮಕರಂದವನ್ನು ಜೇನಾಗಿ ಪರಿವರ್ತಿಸಲು ಅಗತ್ಯವಿರುವ ಕೆಲಸಗಳನ್ನು ನಡೆಸುತ್ತದೆ
3 ಜೇನುಗಾರನು ಜೇನನ್ನು ಶೇಖರಿಸುತ್ತಾನೆ
ಒಂದು ಕಾಯ್ದ ಬ್ಲೇಡನ್ನು ಉಪಯೋಗಿಸುತ್ತಾ, ಅವನು ಪ್ರತಿಯೊಂದು ಚೌಕಟ್ಟಿನೊಳಗಿರುವ ಕೋಶಗಳನ್ನು ಆವರಿಸಿಕೊಂಡಿರುವ ಮೇಣವನ್ನು ತೆಗೆದುಬಿಡುತ್ತಾನೆ. ಅನಂತರ ಅವನು ಚೌಕಟ್ಟುಗಳನ್ನು ಒಂದು ಯಂತ್ರದೊಳಗೆ (ಜೇನನ್ನು ಹೊರತೆಗೆಯುವ ಯಂತ್ರ) ಹಾಕುತ್ತಾನೆ, ಆ ಯಂತ್ರವು ಜೇನನ್ನು ಕೇಂದ್ರಾಪಗಾಮಿ ಬಲದಿಂದ ತೆಗೆಯುತ್ತದೆ
4 ಜೇನನ್ನು ಜಾಡಿಗಳಲ್ಲಿ ಇಲ್ಲವೆ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್‌ಮಾಡಲಾಗುತ್ತದೆ
ಜೇನು ಜಾಡಿಗಳ ಮೇಲಿರುವ ಹೆಸರುಪಟ್ಟಿಗಳು, ಯಾವ ಗಿಡಗಳಿಂದ ಜೇನುನೊಣಗಳು ಮೇವನ್ನು ಸಂಗ್ರಹಿಸಿದವು ಎಂಬುದನ್ನು ಹೇಳುತ್ತವೆ. ಜಾಡಿಯು ಪಾರದರ್ಶಕವಾಗಿರುವುದಾದರೆ, ಜೇನಿನ ಬಣ್ಣದಿಂದ ನೀವು ಅದರ ಗುಣಮಟ್ಟವನ್ನು ಪರಿಶೀಲಿಸಲು ಶಕ್ತರಾಗಿರಬಹುದು
5 ಜೇನು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು!
ದೇಹವು ಜೇನನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ ಮತ್ತು ಕ್ಷಿಪ್ರವಾಗಿ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಸುಡುಗಾಯಗಳು ಮತ್ತು ಹಲವಾರು ರೀತಿಯ ದೇಹದ ಗಾಯಗಳ ಚಿಕಿತ್ಸೆಗಾಗಿ ಅದನ್ನು ಉಪಯೋಗಿಸಸಾಧ್ಯವೆಂದು ವರದಿಗಳು ತೋರಿಸುತ್ತವೆ