ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 9/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪುಸ್ತಕ ಓದುವಿಕೆ ಜನಪ್ರಿಯವಾಗಿ ಉಳಿಯುತ್ತದೆ
  • “ಅಜ್ಞಾತ ವೈರಿಗಳ” ಬೇಟೆಯಾಡುವುದು
  • “ಪಾವನ” ಕೋತಿಗಳು—ಒಂದು ಪೀಡೆ
  • ಪುನಃ ನೀರಿಗೆ
  • ಈಗ—ಹೆಪಟೈಟಿಸ್‌ ಜಿ
  • “ಸಹಸ್ರ ವರ್ಷದ ಅನಿರೀಕ್ಷಿತ ದೋಷ”
  • ಆನೆ ಲದ್ದಿಯ ಕಾಗದ
  • ಆಹಾರವಾಹಿ ಸೋಂಕುಗಳು
  • ಉಚಿತವಾದ ಕಾಲರ ತಡೆ
  • ಮನುಷ್ಯ ಮತ್ತು ಕಡಲಾಮೆ ಸಂಧಿಸುವ ಸ್ಥಳ
    ಎಚ್ಚರ!—1993
  • ನಮ್ಮ ವಾಚಕರಿಂದ
    ಎಚ್ಚರ!—1998
  • ಪುಟ್ಟನಿಗೆ ಈಗ ಕಂಪ್ಯೂಟರಿನ ಆವಶ್ಯಕತೆ ಇದೆಯೋ?
    ಎಚ್ಚರ!—1990
  • ಜಗತ್ತನ್ನು ಗಮನಿಸುವುದು
    ಎಚ್ಚರ!—1991
ಇನ್ನಷ್ಟು
ಎಚ್ಚರ!—1997
g97 9/8 ಪು. 28-29

ಜಗತ್ತನ್ನು ಗಮನಿಸುವುದು

ಪುಸ್ತಕ ಓದುವಿಕೆ ಜನಪ್ರಿಯವಾಗಿ ಉಳಿಯುತ್ತದೆ

ಧೋರಣೆ ಅಧ್ಯಯನಗಳ (ಪಾಲಿಸಿ ಸ್ಟಡೀಸ್‌) ಸಂಸ್ಥೆಯಿಂದ ನಡೆಸಲ್ಪಟ್ಟ ಒಂದು ಸಮೀಕ್ಷೆಗನುಸಾರ, ಕಂಪ್ಯೂಟರ್‌ ತಂತ್ರಜ್ಞಾನವು ಬ್ರಿಟಿಷ್‌ ಜನರ ಓದುವ ಹವ್ಯಾಸಗಳನ್ನು ಇನ್ನೂ ಬದಲಾಯಿಸಿಲ್ಲ. ದ ಟೈಮ್ಸ್‌ ಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, “ಸಮೀಕ್ಷಿಸಲ್ಪಟ್ಟವರಲ್ಲಿ ಬಹುಮಟ್ಟಿಗೆ ಅರ್ಧದಷ್ಟು ಜನರು ಹೇಳಿದ್ದೇನೆಂದರೆ, ಅವರು ಪ್ರಚಲಿತವಾಗಿ ಒಂದು ಪುಸ್ತಕವನ್ನು ಸುಖಾನುಭವಕ್ಕಾಗಿ ಓದುತ್ತಿದ್ದರು. ಈ ಪ್ರಮಾಣವು 1989ರಿಂದ ಸ್ವಲ್ಪವೇ ಬದಲಾಗಿದೆ.” ಪುರುಷರಿಗಿಂತ ಸ್ತ್ರೀಯರು ಹೆಚ್ಚು ಓದುತ್ತಾರೆ, ಮತ್ತು 55ಕ್ಕಿಂತಲೂ ಹೆಚ್ಚಿನ ಪ್ರಾಯದ ಜನರೇ ಅತಿಯಾಗಿ ಓದುವವರಾಗಿದ್ದಾರೆ. ಪಾಕ ಪುಸ್ತಕಗಳು ಅತ್ಯಂತ ಜನಪ್ರಿಯವಾದ ಪುಸ್ತಕಗಳಾಗಿವೆ. ಅವುಗಳನ್ನು, ಪಾತಕ ಇಲ್ಲವೆ ರೋಮಾಂಚಕಾರಿ ಕಥೆಗಳು, ಪ್ರಣಯ ಕಾದಂಬರಿಗಳು, ಮತ್ತು 20ನೆಯ ಶತಮಾನದ ಕಲ್ಪನಾ ಕಥೆಗಳು ಅನುಸರಿಸುತ್ತವೆ. 30 ಪ್ರತಿಶತದಷ್ಟು ಮನೆವಾರ್ತೆಗಳಲ್ಲಿ ಒಂದು ಕಂಪ್ಯೂಟರ್‌ ಇದ್ದರೂ, 7 ಪ್ರತಿಶತದಷ್ಟು ಕಂಪ್ಯೂಟರ್‌ಗಳು ಮಾತ್ರ ಸಿಡಿ-ರಾಮ್‌—ಪುಸ್ತಕದ ಪ್ರತಿಸ್ಪರ್ಧಿ—ಗಳನ್ನು ಚಲಾಯಿಸಲು ಸುಸಜ್ಜಿತವಾಗಿವೆ. ಮತ್ತು, ಒಂದು ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗೆ ಅಸದೃಶವಾಗಿ, ಸ್ವಾರಸ್ಯಕರವಾದ ಒಂದು ಪುಸ್ತಕವು, ರಜಾಕಾಲದ ಸಮುದ್ರತೀರದ ಉಸುಬು ಒಂದು ಕಂಪ್ಯೂಟರ್‌ನ ಗುರುವರ (ಹಾರ್ಡ್‌ವೇರ್‌)ದೊಳಗೆ ಹೋದ ಕಾರಣ ಕೆಟ್ಟುಹೋಗುವಂತೆ ಕೆಟ್ಟುಹೋಗುವುದಿಲ್ಲ, ಇಲ್ಲವೆ ನೆಲದೊಳಗಿನ ನಿಬಿಡವಾದ ರೈಲುಗಾಡಿಯಲ್ಲಿನ ನೂಕಿಕೊಂಡು ಹೋಗುವ ಜನರ ಗುಂಪುಗಳಿಂದ ಕೆಟ್ಟುಹೋಗುವುದಿಲ್ಲ, ಮತ್ತು ಸುಂದರವಾಗಿ ತಯಾರಿಸಲ್ಪಟ್ಟ ಒಂದು ಪುಸ್ತಕವು, “ಅದರ ಒಳವಿಷಯಗಳು ಪೋಷಿಸುವಂತಹವುಗಳಾಗಿರುವಂತೆ, ಕಲಾತ್ಮಕವಾಗಿ ಪ್ರಸನ್ನಗೊಳಿಸುವಂತಹದ್ದೂ” ಆಗಿರಬಲ್ಲದು.

“ಅಜ್ಞಾತ ವೈರಿಗಳ” ಬೇಟೆಯಾಡುವುದು

ಇಸವಿ 1997ರಲ್ಲಿ, ಇಟಲಿಯ ರೋಮ್‌ನಲ್ಲಿ ಜೀವಿಸುತ್ತಿರುವ ಜನರಿಗೆ, ಅಲರ್ಜಿಗಳು ಇಲ್ಲವೆ ಬೇಸಗೆ ಉಬ್ಬಸವು ಸಾಮಾನ್ಯಕ್ಕಿಂತಲೂ ಎರಡು ತಿಂಗಳುಗಳ ಮುಂಚೆ ಆರಂಭಿಸಿತೆಂದು, ಕೊರೀಅರೆ ಡೆಲ್ಲಾ ಸೆರಾ ಹೇಳುತ್ತದೆ. “ಚಳಿಗಾಲದ ಅವಧಿಯನ್ನು ಗಮನಾರ್ಹವಾಗಿ ಕಡಿಮೆಮಾಡಿರುವ, ಗ್ರಹದ ಸರಾಸರಿ ತಾಪಮಾನದಲ್ಲಿನ ಸಾಮಾನ್ಯ ಏರಿಕೆ”ಯಿಂದ ಪುಷ್ಪಧೂಳಿಯ ಈ ಹೊತ್ತಿಗೆ ಮುಂಚಿನ ಆಕ್ರಮಣವು ಉಂಟಾಗಿದೆಯೆಂದು ಒಬ್ಬ ಅಲರ್ಜಿ ಶಾಸ್ತ್ರಜ್ಞನು ನೆನಸುತ್ತಾನೆ. ವಾರ್ತಾಪತ್ರಿಕೆಯು ಗಮನಿಸುವುದೇನೆಂದರೆ, “ಒಳ್ಳೆಯ ಹವಾಮಾನವಿರುವ ದಿನಗಳು ಅಜ್ಞಾತ ಪುಷ್ಪಧೂಳಿಯನ್ನು ತಂದಿವೆ, ಇದನ್ನು ಪ್ರತಿರೋಧಿಸಲು ಕ್ಷೇತ್ರದಲ್ಲಿರುವ ಪರಿಣತರು ಅಶಕ್ತರಾಗಿದ್ದಾರೆ.” ಹೀಗೆ, “ಅಜ್ಞಾತ ಕಾರಣಕ್ಕಾಗಿರುವ ಅನ್ವೇಷಣೆಯು” ಈಗಾಗಲೇ ಆರಂಭಿಸಿದೆ, ಆದರೆ ಈ ಮಧ್ಯೆ, “ರೋಗಿಗಳು—ಯಾವ ಅಲರ್ಜಿಗಳ ಕಾರಣಗಳನ್ನು ನಿರ್ಧರಿಸುವುದು ಸಾಧ್ಯವಾಗಿಲ್ಲವೊ—ಆ ಅಲರ್ಜಿಗಳಿಂದ ಕಷ್ಟಾನುಭವಿಸುತ್ತಿದ್ದಾರೆ.”

“ಪಾವನ” ಕೋತಿಗಳು—ಒಂದು ಪೀಡೆ

ರೀಸಸ್‌ ಕೋತಿಗಳು ಭಾರತದ ವೃಂದಾವನದಲ್ಲಿ ಬಹಳ ಸಮಯದಿಂದಲೂ ವಾಸಿಸಿವೆ ಎಂದು, ಪ್ರಧಾನ ಪ್ರಾಣಿವರ್ಗದ ಶಾಸ್ತ್ರಜ್ಞೆ ಇಕ್ಬಾಲ್‌ ಮಲಿಕ್‌ ಹೇಳುತ್ತಾರೆ. ಕೋತಿಗಳು ಅನೇಕರಿಂದ ಪವಿತ್ರವೆಂದು ಪರಿಗಣಿಸಲ್ಪಡುತ್ತವೆ ಮತ್ತು ಬಂಧನದ ಭಯವಿಲ್ಲದೆ—ಅಂದರೆ, ಈ ವರೆಗೆ—ಹಿಂದೂಗಳ ಆ ಪವಿತ್ರ ನಗರದಲ್ಲಿ ಸುತ್ತಾಡಲು ಅವು ಸ್ವತಂತ್ರವಾಗಿದ್ದವು. ನ್ಯೂ ಸೈಎನ್‌ಟಿಸ್ಟ್‌ ಪತ್ರಿಕೆಗನುಸಾರ, ರೀಸಸ್‌ ಕೋತಿಗಳ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಬಹಳವಾಗಿ ಏರಿದೆ. ಇದು ಏಕೆಂದರೆ, ಅವುಗಳಿಗೆ ತಿಂಡಿ ತಿನ್ನಿಸುವ ತೀರ್ಥಯಾತ್ರಿಕರ ಸಂಖ್ಯೆಯು ಹೆಚ್ಚಾಗಿದೆ. ಕೋತಿಗಳಿಗೆ ಆಹಾರ ನೀಡುವುದು, ಸಮೃದ್ಧಿಯನ್ನು ತರುವುದೆಂದು ನೆನಸಲಾಗಿದೆ. ಆದರೆ ಅನೇಕ ವರ್ಷಗಳಿಂದ, ಕೋತಿಗಳು ಉಪಾದಾನಗಳ ಮೇಲೆ ಬಹುಮಟ್ಟಿಗೆ ಸಂಪೂರ್ಣವಾಗಿ ಅವಲಂಬಿಸಿವೆ, ಏಕೆಂದರೆ ಪಯಿರುಪಚ್ಚೆ ಬಹಳ ಅಲ್ಪಪ್ರಮಾಣದಲ್ಲಿ ದೊರೆಯುತ್ತದೆ. “ಅವು ಶಾಪಿಂಗ್‌ ಚೀಲಗಳನ್ನು ಕದಿಯಲು ಮತ್ತು ಆಹಾರವನ್ನು ಹುಡುಕುತ್ತಾ ಮನೆಗಳನ್ನು ಪ್ರವೇಶಿಸಲು ತೊಡಗಿವೆ.” ಕೋತಿಗಳ ಸಂಖ್ಯೆಯಲ್ಲಿ 60 ಪ್ರತಿಶತದಷ್ಟು ಕೋತಿಗಳನ್ನು ಬಂಧಿಸಲು ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಅವುಗಳನ್ನು ಬಿಟ್ಟುಬಿಡಲು ನಿವಾಸಿಗಳು ಒಪ್ಪಿದ್ದಾರೆ. ಮಲಿಕ್‌ ಹೇಳುವುದು: “ದೇವತೆಗಳು ಪೀಡೆಗಳಾಗಿ ಪರಿಣಮಿಸಿವೆ.”

ಪುನಃ ನೀರಿಗೆ

“ಓಸೋನ್‌ ಪದರವನ್ನು ಹಾನಿಗೊಳಿಸದ, ಬೆಂಕಿ ಆರಿಸುವ ಒಂದು ರಾಸಾಯನಕ್ಕಾಗಿ ನಡೆಸಲ್ಪಟ್ಟ ದೀರ್ಘವಾದ ಅನ್ವೇಷಣೆಯು ಕಟ್ಟಕಡೆಗೆ . . . ನೀರಿಗೆ ನಡೆಸಿದೆ,” ಎಂಬುದಾಗಿ ನ್ಯೂ ಸೈಎನ್‌ಟಿಸ್ಟ್‌ ಪತ್ರಿಕೆಯು ಹೇಳುತ್ತದೆ. “ಒಂದು ನೂರು ಪ್ರಯೋಗಾತ್ಮಕ ಬೆಂಕಿಗಳನ್ನು ಆರಿಸಿದ ತರುವಾಯ, ಟ್ರಾಂಡೇಮ್‌ನಲ್ಲಿರುವ ನಾರ್ವೇಜಿಯನ್‌ ಬೆಂಕಿ ಸಂಶೋಧನಾ ಪ್ರಯೋಗಾಲಯವು ಈ ತೀರ್ಮಾನಕ್ಕೆ ಬಂದಿದೆ. ಅದೇನೆಂದರೆ, ನೀರಿನ ಸೂಕ್ಷ್ಮ ತುಂತುರುಗಳು, ಓಸೋನ್‌ ಅನ್ನು ನಾಶಪಡಿಸುವ ಹೇಲೋನ್ಸ್‌—ಅಗ್ನಿ ಶಾಮಕಗಳಲ್ಲಿ ಇವು ಇನ್ನೂ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ—ಗಳಿಗೆ ಯೋಗ್ಯವಾದ ಬದಲಿಗಳಾಗಿವೆ.” ಹೇಲೋನ್ಸ್‌—ಕಾರ್ಬನ್‌, ಬ್ರೋಮೀನ್‌, ಮತ್ತು ಫ್ಲೋರೀನ್‌ನ ಘಟಕಗಳಾಗಿದ್ದು—ಬೆಂಕಿಗಳನ್ನು ಅಡಗಿಸುತ್ತವೆ. ನೀರಿನ ಸಣ್ಣಹನಿಗಳು, ಹಬೆಯಾಗಿಸುತ್ತಾ ಮತ್ತು ಆಮ್ಲಜನಕವನ್ನು ಸ್ಥಾನಾಂತರಿಸಲು ತಮ್ಮ ಮೂಲ ಗಾತ್ರವನ್ನು 1,700 ಬಾರಿ ವಿಸ್ತರಿಸುತ್ತಾ, ಅದನ್ನೇ ಮಾಡುತ್ತವೆ. ಅವು ಹೇಲೋನ್ಸ್‌ಗಳಿಗಿಂತ ಕಡಿಮೆ ಪರಿಣಾಮಕಾರಿಯಾಗಿ ಕಂಡುಬಂದ ಏಕೈಕ ಸಮಯವು ಯಾವುದೆಂದರೆ, ನೀರನ್ನು ಹಬೆಯಾಗಿಸಲು ಸಾಕಷ್ಟು ತಾಪಮಾನವನ್ನು ತಲಪಿರದಿದ್ದ ಚಿಕ್ಕ, ಕನಲುರಿಯುತ್ತಿದ್ದ ಬೆಂಕಿಗಳ ಸಮಯದಲ್ಲಿಯೇ. ಆದರೆ, ಹೇಲೋನ್ಸ್‌ಗಳಿಗೆ ಕೃತಕ ಬದಲಿಗಳನ್ನು ಇನ್ನೂ ಹುಡುಕಲಾಗುತ್ತಿದೆ, ಏಕೆಂದರೆ ನೀರು ಮತ್ತೊಂದು ಸಮಸ್ಯೆಯನ್ನು ಒಡ್ಡುತ್ತದೆ: ನೀರನ್ನು ಮಾರುವುದರಲ್ಲಿ ಹೆಚ್ಚಿನ ಲಾಭವಿರುವುದಿಲ್ಲ.

ಈಗ—ಹೆಪಟೈಟಿಸ್‌ ಜಿ

ರಕ್ತ ಪೂರಣಗಳನ್ನು ಪಡೆದ ಒಂದು ತಿಂಗಳಿನೊಳಗೆ, ರೋಗಿಗಳು ಹೆಪಟೈಟಿಸ್‌ ಜಿ ವೈರಸ್‌—ಅಮೆರಿಕದಲ್ಲಿ 1995ರಲ್ಲಿ ಗುರುತಿಸಲ್ಪಟ್ಟ ಒಂದು ಹೊಸ ಎಳೆ—ನಿಂದ ಸೋಂಕಿತರಾದರೆಂದು ಜಪಾನಿನ ವೈದ್ಯರು ದೃಢಪಡಿಸಿದ್ದಾರೆ. ಟೋಕಿಯೋದ ಟೊರಾನೊಮಾನ್‌ ಆಸ್ಪತ್ರೆಯಲ್ಲಿ, 1992 ಮತ್ತು 1994ರ ನಡುವೆ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡ ಪಿತ್ತಜನಕಾಂಗ ಕ್ಯಾನ್ಸರಿನ ರೋಗಿಗಳ ರಕ್ತವನ್ನು ಪುನಃ ಪರಿಶೀಲಿಸುವ ಮೂಲಕ, 55 ರೋಗಿಗಳಲ್ಲಿ ಇಬ್ಬರು ಶಸ್ತ್ರಕ್ರಿಯೆಯ ಮೊದಲೇ ಸೋಂಕಿತರಾಗಿದ್ದರೆಂದು ಮತ್ತು ಬೇರೆ 7 ಜನರು ಶಸ್ತ್ರಕ್ರಿಯೆಯ ಅನಂತರ ಸೋಂಕಿತರಾದರೆಂದು ವೈದ್ಯರು ಕಂಡುಹಿಡಿದರು. 7 ರೋಗಿಗಳಲ್ಲಿ ಪ್ರತಿಯೊಬ್ಬರೂ ಪಡೆದ ಕಲುಷಿತ ರಕ್ತವು, ಸರಾಸರಿ 71 ದಾನಿಗಳಿಂದ ಬಂದಿತೆಂದು ವೈದ್ಯರು ಹೇಳಿದರು. ಉಪಯೋಗಿಸಲ್ಪಟ್ಟ ರಕ್ತದ ಸರಬರಾಯಿಯಲ್ಲಿ 1.4 ಪ್ರತಿಶತದಷ್ಟು ರಕ್ತವು ಹೊಸ ವೈರಸ್‌ನಿಂದ ಕಲುಷಿತಗೊಂಡಿತ್ತೆಂದು ಅವರು ಸೂಚಿಸಿದರು. ಹೆಪಟೈಟಿಸ್‌ ಜಿ ವೈರಸ್‌ನ ಬಗ್ಗೆ ಇಲ್ಲವೆ ರೋಗವಾಹಕರಲ್ಲಿ ಎಷ್ಟು ಪ್ರತಿಶತ ಜನರು ಹೆಪಟೈಟಿಸ್‌ ಅಥವಾ ಪಿತ್ತಜನಕಾಂಗದ ಕ್ಯಾನ್ಸರನ್ನು ಮುಂದೆ ವಿಕಸಿಸಿಕೊಳ್ಳುವರೆಂಬುದರ ಬಗ್ಗೆ ಬಹಳ ಕಡಿಮೆ ಅರಿವಿದೆ ಎಂಬುದಾಗಿ ಆಸಾಹಿ ಇವ್ನಿಂಗ್‌ ನ್ಯೂಸ್‌ ಹೇಳುತ್ತದೆ.

“ಸಹಸ್ರ ವರ್ಷದ ಅನಿರೀಕ್ಷಿತ ದೋಷ”

“ಸಹಸ್ರ ವರ್ಷದ ಅನಿರೀಕ್ಷಿತ ದೋಷ, ಇಸವಿ 2000ದ ಸಮಸ್ಯೆ, ಅಥವಾ ಸುಮ್ಮನೆ ‘ವೈ2ಕೆ’ ಎಂಬುದಾಗಿ ವಿದಿತವಾಗಿರುವ” ಇದು, “ಆಧುನಿಕ ಎಣಿಕೆಗೆ ಹಾನಿಯುಂಟುಮಾಡುವ ಅತ್ಯಂತ ಸಂಭವನೀಯ ಶಕ್ತಿಗಳಲ್ಲಿ ಒಂದಾಗಿದೆ,” ಎಂಬುದಾಗಿ ಯೂ.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳುತ್ತದೆ. ಅದು 1960ಗಳಲ್ಲಿ ಆರಂಭವಾಯಿತು. ಆಗ ಕಂಪ್ಯೂಟರ್‌ಗಳು ದುಬಾರಿಯಾಗಿದ್ದವು ಮತ್ತು ಅವುಗಳ ಸ್ಮರಣೆಯು ಸೀಮಿತವಾಗಿತ್ತು. ಸ್ಥಳವನ್ನು ಉಳಿಸಲು, ಕಂಪ್ಯೂಟರ್‌ ಪ್ರೋಗ್ರ್ಯಾಮರ್ಸ್‌ ವರ್ಷದ ಕೊನೆಯ ಎರಡು ಸಂಖ್ಯೆಗಳನ್ನು ಮಾತ್ರ ಉಪಯೋಗಿಸಿ, ತಾರೀಖುಗಳನ್ನು ಬರೆದರು. ಕಂಪ್ಯೂಟರಿಗೆ, ಇಸವಿ 1997 ಕೇವಲ “97” ಆಗಿತ್ತು. ಪರಿಣಮಿಸುವ ಸಮಸ್ಯೆಯೇನು? “ಜನ. 1, 2000ದಂದು, ಲೋಕದ ಸುಮಾರು 90 ಪ್ರತಿಶತದಷ್ಟು ಕಂಪ್ಯೂಟರ್‌ ಗುರುವರ (ಹಾರ್ಡ್‌ವೇರ್‌) ಹಾಗೂ ಲಘುವರ (ಸಾಫ್ಟ್‌ವೇರ್‌), ಅದು 1900ರ ಪ್ರಥಮ ದಿನವಾಗಿದೆಯೆಂದು ‘ನೆನಸು’ವವು.” ಈಗಾಗಲೇ ತಪ್ಪುಗಳು ಮಾಡಲ್ಪಟ್ಟಿವೆ. “ರಾಜ್ಯವೊಂದರ ಸೆರೆಮನೆಯಲ್ಲಿ, ಹಲವಾರು ಸೆರೆವಾಸಿಗಳ ಶಿಕ್ಷಾವಧಿಗಳನ್ನು ಕಂಪ್ಯೂಟರ್‌ಗಳು ತಪ್ಪಾಗಿ ಲೆಕ್ಕಮಾಡುವಂತೆ ದೋಷವು ಕಾರ್ಯಮಾಡಿತಾದರಿಂದ, ಅವರನ್ನು ಆಗ ಬಿಡುಗಡೆ ಮಾಡಲಾಯಿತು” ಎಂಬುದಾಗಿ ನ್ಯೂಸ್‌ವೀಕ್‌ ಹೇಳುತ್ತದೆ. “ಕೆಲವು ಕ್ರೆಡಿಟ್‌ ಕಾರ್ಡ್‌ಗಳು, ಅವುಗಳಲ್ಲಿರುವ ‘00’ ಮುಕ್ತಾಯ ತಾರೀಖುಗಳು ಕಂಪ್ಯೂಟರ್‌ಗಳನ್ನು ಗಲಿಬಿಲಿಗೊಳಿಸಿದಾಗ, ಅಂಗಡಿಗಳು ಹಾಗೂ ರೆಸ್ಟೊರಂಟ್‌ಗಳಲ್ಲಿ ನಿರಾಕರಿಸಲ್ಪಟ್ಟಿವೆ. ಮತ್ತು ಹಲವಾರು ರಾಜ್ಯಗಳಲ್ಲಿ, ಸಹಸ್ರ ವರ್ಷವನ್ನು ದಾಟಿರುವ ತಾರೀಖುಗಳನ್ನು ಪಡೆದಿರುವ ನವೀಕರಣ ಅರ್ಜಿಗಳನ್ನು ಕಂಪ್ಯೂಟರ್‌ಗಳು ನಿರ್ವಹಿಸಲು ಅಸಮರ್ಥವಾದಾಗ, ಟ್ರಕ್‌ ಚಾಲಕರು ತಮ್ಮ ಅಂತರ್‌ರಾಜ್ಯ ಲೈಸೆನ್ಸ್‌ಗಳು ರದ್ದುಮಾಡಲ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ.” ತಾರೀಖು ಕೋಡ್‌ಗಳನ್ನು ಬದಲಾಯಿಸಲು, ಲೋಕವ್ಯಾಪಕವಾಗಿ ನಗರಸಭೆಗಳು ಅಂದಾಜುಮಾಡಲ್ಪಟ್ಟ 600 ಅರಬ್‌ ಡಾಲರುಗಳಷ್ಟು ಹಣವನ್ನು ವ್ಯಯಿಸಬೇಕಾಗುವುದು—ಮತ್ತು ಉಳಿದಿರುವ ಎರಡು ವರ್ಷಗಳಲ್ಲಿ ಅದನ್ನು ಮಾಡಸಾಧ್ಯವೆಂದು ಅವರು ನಿರೀಕ್ಷಿಸುತ್ತಾರೆ.

ಆನೆ ಲದ್ದಿಯ ಕಾಗದ

ಮೈಕ್‌ ಬೂಗಾರಾ ತನ್ನ ಹಿತ್ತಲಿನಲ್ಲಿ ಆನೆ ಲದ್ದಿಯ ರಾಶಿಯನ್ನು ಕುದಿಸುತ್ತಿರುವುದನ್ನು ನೆರೆಯವರು ಗಮನಿಸಿದಾಗ, ಅವರು ಬಹಳ ಚಿಂತಿತರಾದರೆಂಬುದು ಗ್ರಾಹ್ಯವೇ. ಅವನು ಮಾಟಮಾಡುತ್ತಿದ್ದಾನೆಂದು ಕೆಲವರು ನೆನಸಿದರು, ಆದರೆ ವಾಸ್ತವದಲ್ಲಿ ಅವನು ಕಾಗದ ತಯಾರಿಸುತ್ತಿದ್ದನು. ಶ್ರೀ. ಬೂಗಾರಾ ಕಾಗದವನ್ನು ಪ್ರಥಮವಾಗಿ ಬಾಳೆ, ಮುಸುಕಿನ ಜೋಳ, ಮತ್ತು ನೀಲಗಿರಿ ಎಲೆಗಳಿಂದ ಮಾಡಿದನು. ಆದರೆ ಕೆನ್ಯದ ಆನೆಗಳಿಂದ ಬಂದ, ಹೆಚ್ಚಿನ ನಾರು ಪದಾರ್ಥವುಳ್ಳ ಲದ್ದಿಯ ಹೇರಳವಾದ ಸರಬರಾಯಿಗಳು, ಕಾಗದವನ್ನು ತಯಾರಿಸಲು ಅದನ್ನು ಉಪಯೋಗಿಸುವುದರ ಕುರಿತು ಆ ಅತ್ಯುತ್ಸಾಹಿ ಸಂಗೋಪನಕಾರನು ಆಲೋಚಿಸುವಂತೆ ಮಾಡಿತು. “ಈ ಜಾತಿಯನ್ನು ಸಜೀವವಾಗಿ ಇಡುವ ಮೌಲ್ಯದ ಬಗ್ಗೆ ಜನರ ಅರಿವನ್ನು” ಹೆಚ್ಚಿಸಲು ಇದೊಂದು ಉತ್ತಮವಾದ ವಿಧವಾಗಿರುವುದೆಂದು ಅವನು ತೀರ್ಮಾನಿಸಿದನು ಎಂಬುದಾಗಿ ನ್ಯೂ ಸೈಎನ್‌ಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಈಗ, ಈ ವರ್ಷ ಜರುಗಲಿರುವ ಕೆನ್ಯ ಅರಣ್ಯಜೀವಿ (ವೈಲ್ಡ್‌ಲೈಫ್‌) ಸೇವೆಯ 50ನೆಯ ವಾರ್ಷಿಕೋತ್ಸವಕ್ಕಾಗಿ, ಅವನ ಆನೆ ಲದ್ದಿ ಕಾಗದವನ್ನು ಆಮಂತ್ರಣ ಕಾರ್ಡುಗಳಿಗಾಗಿ ಉಪಯೋಗಿಸಲಾಗುತ್ತಿದೆ.

ಆಹಾರವಾಹಿ ಸೋಂಕುಗಳು

“ವರ್ಷ ಪೂರ್ತಿ ವೈವಿಧ್ಯಮಯವಾದ ತಾಜಾ ಉತ್ಪನ್ನ”ಕ್ಕಾಗಿರುವ ಬಳಕೆದಾರರ ಹೆಚ್ಚಿನ ಬೇಡಿಕೆಯ ಜೊತೆಗೆ, “ಹಗಲು ರಾತ್ರಿಯಾಗುವುದರೊಳಗೆ ಉತ್ಪನ್ನಗಳನ್ನು ಲೋಕದ ಸುತ್ತಲೂ ರವಾನಿಸಬಲ್ಲ ಒಂದು ಭೌಗೋಲಿಕ ಮಾರುಕಟ್ಟೆಯು,” ಅಮೆರಿಕದಲ್ಲಿ ಹೊಸ ಆಹಾರವಾಹಿ ಅನಾರೋಗ್ಯಗಳ ಉದಯಕ್ಕೆ ನೆರವು ನೀಡುತ್ತಿದೆ ಎಂಬುದಾಗಿ ಜೆಎಎಮ್‌ಎ (ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೊಸಿಯೇಷನ್‌) ವರದಿಸುತ್ತದೆ. ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ನಡೆಸಲ್ಪಟ್ಟ ಅಧ್ಯಯನಗಳ ಮೇಲೆ ಆಧರಿಸಿ, ವಿಜ್ಞಾನಿಗಳು ಅಂದಾಜು ಮಾಡುವುದೇನೆಂದರೆ, ಆಹಾರವಾಹಿ ಸೂಕ್ಷ್ಮದರ್ಶಕೀಯ ಜೀವಿಗಳು “65 ಲಕ್ಷದಿಂದ 8.1 ಕೋಟಿ ಜನರನ್ನು ಅಸ್ವಸ್ಥಗೊಳಿಸುತ್ತವೆ ಮತ್ತು ಅಮೆರಿಕದಲ್ಲಿ ವಾರ್ಷಿಕವಾಗಿ ಸುಮಾರು 9,000 ಮರಣಗಳನ್ನುಂಟುಮಾಡುತ್ತವೆ.” ಗೊಬ್ಬರ ಹಾಕಿ ಬೆಳೆಸಲ್ಪಟ್ಟ ಆಹಾರಗಳ (ಪ್ರಾಣಿ ಗೊಬ್ಬರದಿಂದ ಫಲೀಕೃತ ಆಹಾರಗಳು) ಹೆಚ್ಚಿನ ಸೇವನೆಯು, ಸಮಸ್ಯೆಗೆ ನೆರವು ನೀಡಬಹುದೆಂದು ಕೂಡ ಕೆಲವು ಪರಿಣತರು ನಂಬುತ್ತಾರೆ. ಜೆಎಎಮ್‌ಎ ವರದಿಗನುಸಾರ, “ಈ ಕೋಲಿ, ಆಕಳಿನ ಗೊಬ್ಬರದಲ್ಲಿ 70 ದಿನಗಳ ವರೆಗೆ ಬದುಕಿ ಉಳಿಯಬಲ್ಲವು ಮತ್ತು ಸೂಕ್ಷ್ಮದರ್ಶಕೀಯ ಜೀವಿಗಳನ್ನು ಕೊಲ್ಲಲು ಉಷ್ಣ ಇಲ್ಲವೆ ಉಪ್ಪಿನಂತಹ ಸಂಯೋಜನೀಯಗಳನ್ನು ಅಥವಾ ರಕ್ಷಕ ವಸ್ತುಗಳನ್ನು ಉಪಯೋಗಿಸದ ಹೊರತು, ಅವು ಗೊಬ್ಬರದಿಂದ ಬೆಳೆಸಲ್ಪಟ್ಟ ಆಹಾರಗಳಲ್ಲಿ ವೃದ್ಧಿಯಾಗಬಲ್ಲವು.”

ಉಚಿತವಾದ ಕಾಲರ ತಡೆ

ಕಾಲರ ರೋಗವನ್ನು ತಡೆಗಟ್ಟುವ ಒಂದು ಉಚಿತವಾದ ವಿಧಾನವನ್ನು ತಾವು ಕಂಡುಕೊಂಡಿದ್ದೇವೆಂದು ವಿಜ್ಞಾನಿಗಳು ನಂಬುತ್ತಾರೆ—ಕುಡಿಯುವ ನೀರನ್ನು ಸೀರೆಗಳ ಮೂಲಕ ಸೋಸುವುದು! ಅಮೆರಿಕದಲ್ಲಿರುವ ಮೇರಿಲ್ಯಾಂಡ್‌ ವಿಶ್ವವಿದ್ಯಾನಿಲಯ, ಮತ್ತು ಬಾಂಗ್ಲಾದೇಶದ ಡಾಕಾದಲ್ಲಿರುವ ಅತಿಸಾರ ರೋಗ ಸಂಶೋಧನೆಗಾಗಿರುವ ಅಂತಾರಾಷ್ಟ್ರೀಯ ಕೇಂದ್ರದಲ್ಲಿನ ಸಂಶೋಧಕರು ಕಂಡುಕೊಂಡಿದ್ದೇನೆಂದರೆ, ಕಾಲರ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಗಳು, ನೀರಿನಲ್ಲಿ ಜೀವಿಸುವ ಜಲಚರ ಚಿಪ್ಪುಜೀವಿಗಳು, ತೇಲಿಹೋಗುತ್ತಿರುವ ವಲ್ಕವಂತ ಪ್ರಾಣಿಗಳ ಅನ್ನನಾಳದಲ್ಲಿರುತ್ತವೆ. ನೀರನ್ನು ಸೀರೆಯ ನಾಲ್ಕು ಪದರಗಳ ಮೂಲಕ ಸುರಿಯುವುದರಿಂದ, 99ಕ್ಕಿಂತಲೂ ಹೆಚ್ಚಿನ ಪ್ರತಿಶತದಷ್ಟು ಕಾಲರದ ಬ್ಯಾಕ್ಟೀರಿಯವನ್ನು ತೆಗೆದುಬಿಡಸಾಧ್ಯವಿದೆ. ಸೀರೆಯನ್ನು ಅನಂತರ, ನೇರವಾದ ಸೂರ್ಯನ ಬೆಳಕಿನಲ್ಲಿ ಎರಡು ತಾಸುಗಳ ವರೆಗೆ ಒಡ್ಡುವುದರಿಂದ, ಇಲ್ಲವೆ, ಮಳೆಗಾಲದಲ್ಲಿ ಅಗ್ಗವಾದ ಸೋಂಕು ನಿವಾರಕದಿಂದ ಶುಚಿಗೊಳಿಸುವ ಮೂಲಕ ಅದನ್ನು ನಿರ್ಮಲಗೊಳಿಸಸಾಧ್ಯವಿದೆ. ಲಂಡನ್‌ನ ವಾರ್ತಾಪತ್ರಿಕೆಯಾದ ದಿ ಇಂಡಿಪೆಂಡೆಂಟ್‌ ವರದಿಸುವುದೇನೆಂದರೆ, ಕ್ಷೇತ್ರದ ಪರೀಕ್ಷೆಗಳು ಈ ವರ್ಷ ಆರಂಭಿಸುವವು. ಆಗ ಬಾಧಿಸಲ್ಪಟ್ಟ ಕ್ಷೇತ್ರಗಳಲ್ಲಿ ಜೀವಿಸುವ ಜನರಿಗೆ ಈ ಕಾರ್ಯವಿಧಾನವನ್ನು ಹೇಗೆ ಕಾರ್ಯರೂಪಕ್ಕೆ ತರುವುದೆಂದು ಕಲಿಸಲಾಗುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ