ವೇಗದಲ್ಲಿ ಕುಲೀನ
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಈ ಬಿರುದು ಯಾರಿಗಿದೆ? ಅಲ್ಪಾಂತರಗಳನ್ನು ಕ್ರಮಿಸುವುದರಲ್ಲಿ ಲೋಕದ ಅತ್ಯಂತ ವೇಗದ ಪ್ರಾಣಿಯಾಗಿರುವ ಚಿರತೆಗೆ. ಪ್ರತಿಯೊಂದು ಚಿರತೆಗೆ ತನ್ನದೇ ಆದ ಮಚ್ಚೆಗಳ ಅಪೂರ್ವ ಮಾದರಿಯಿದೆ—ಹೀಗೆ, ಚಿರತೆ ಎಂಬ ಹೆಸರು, “ಸಣ್ಣ ಮಚ್ಚೆಗಳಿರುವ ದೇಹ” ಎಂಬರ್ಥವನ್ನು ಕೊಡುವ ಸಂಸ್ಕೃತ ಶಬ್ದದಿಂದ ಬರುತ್ತದೆ.
ಮೊದಲ ನೋಟದಲ್ಲಿ ಒಬ್ಬನು ಗಮನಿಸುವುದು, ಚಿರತೆಗಳ ಅತ್ಯಂತ ಪ್ರಧಾನ ವೈಶಿಷ್ಟ್ಯವಾಗಿರುವ ಕಾಲುಗಳನ್ನೇ ಎಂದು ಕೆಲವರು ಹೇಳುತ್ತಾರೆ. ಅದರ ಹಿಂಭಾಗವು ಕೆಳಕ್ಕೆ ಬಾಗಿದೆ ಮತ್ತು ಅದರ ತಲೆಯು ಬಹಳ ಚಿಕ್ಕದಾಗಿದೆಯೆಂದು ಇತರರು ಹೇಳುತ್ತಾರೆ. ಆದರೆ ಈ ವಿಶಿಷ್ಟ ಲಕ್ಷಣಗಳೇ ಚಿರತೆಗೆ ಪ್ರಯೋಜನಕರವಾಗಿವೆ. ಉದ್ದವಾದ ಹಿಂಗಾಲುಗಳು ಸಾಧನೋಪಾಯವನ್ನು ಒದಗಿಸುತ್ತವೆ; ಇವು ಚಿರತೆಯನ್ನು ಬೆಡಗಿನಿಂದ ನಡೆಯಲು ಹಾಗೂ ಸೊಬಗಿನಿಂದ ಓಡಲು ಶಕ್ತವಾಗುವಂತೆ ಮಾಡುತ್ತವೆ. ಮತ್ತು ಈ ಪ್ರಾಣಿಯು ನಿಜವಾಗಿಯೂ ಬಹಳ ವೇಗವಾಗಿ ಓಡಬಲ್ಲದು! ನಿಂತಿರುವ ಸ್ಥಳದಿಂದ, ಕೆಲವಾರು ಸೆಕೆಂಡುಗಳೊಳಗೆ ಚಿರತೆಯೊಂದು ಒಂದು ತಾಸಿಗೆ ಸುಮಾರು 110 ಕಿಲೊಮೀಟರ್‌ಗಳಷ್ಟು ದೂರವನ್ನು ತಲಪಬಲ್ಲದು.
ಚಿರತೆಯು ಅತ್ಯುತ್ತಮ ವೇಗವನ್ನು ಕ್ರಮಿಸಲಿಕ್ಕಾಗಿ ಚೆನ್ನಾಗಿ ವಿನ್ಯಾಸಿಸಲ್ಪಟ್ಟಿದೆ. ಅದರ ತೀರ ಹಗುರವಾದ ಅಸ್ಥಿಪಂಜರವು ಅಸಾಮಾನ್ಯವಾಗಿ ಮೆದುವಾದ ಬೆನ್ನೆಲುಬನ್ನು ಒಳಗೊಂಡಿದ್ದು, ಅದು ಒಂದು ಸ್ಪ್ರಿಂಗ್‌ನಂತೆ ಸುರುಳಿಸುತ್ತಬಲ್ಲದು ಮತ್ತು ಬಿಚ್ಚಿಕೊಳ್ಳಬಲ್ಲದು. ಹರವಾದ ಒಂದು ಎದೆ, ವಿಶಾಲವಾದ ಶ್ವಾಸಕೋಶಗಳು, ಒಂದು ಬಲವಾದ ಹೃದಯ, ಸಮತೂಕವನ್ನೊದಗಿಸುವ ಬಾಲ, ಮತ್ತು ತೀವ್ರಗತಿಯ ಉಸಿರಾಟವನ್ನು ಅನುಮತಿಸುವ ದೊಡ್ಡ ನಾಸಿಕ ರಂಧ್ರಗಳು ಸಹ ಚಿರತೆಗೆ ಕೊಡಲ್ಪಟ್ಟಿವೆ—ಇವೆಲ್ಲವೂ ಈ ಪ್ರಾಣಿಯ ಅಸಮಾನ ಚುರುಕುತನಕ್ಕೆ ಸಹಾಯವನ್ನೀಯುತ್ತವೆ. ಹಾಗಿದ್ದರೂ, ಚಿರತೆಯ ಶಕ್ತಿಯ ಆವೇಶವು ಅಲ್ಪಕಾಲ ಉಳಿಯುವಂತಹದ್ದಾಗಿದೆ. ಸಂಪೂರ್ಣ ವೇಗದಲ್ಲಿ ಕೇವಲ 400 ಮೀಟರ್‌ಗಳಷ್ಟು ಓಡಿದ ಬಳಿಕ, ವಿಶ್ರಮಿಸಿಕೊಳ್ಳಲಿಕ್ಕಾಗಿ ಅದು ನಿಲ್ಲಲೇಬೇಕು.
ಸಾಮಾನ್ಯವಾಗಿ ಚಿರತೆಗಳು ಮಾನವರಿಗೆ ಒಂದು ಬೆದರಿಕೆಯಾಗಿರುವುದಿಲ್ಲ. ಅನೇಕ ವರ್ಷಗಳಿಂದ ಚಿರತೆಗಳನ್ನು ಸಾಕುತ್ತಿರುವ ಆ್ಯನ್ ವ್ಯಾನ್ ಡೈಕ್, ದ ಚೀಟಾಸ್ ಆಫ್ ಡಿ ವಿಲ್‌ಡ್ಟ್ ಎಂಬ ತನ್ನ ಪುಸ್ತಕದಲ್ಲಿ ಬರೆಯುವುದು: “ಉಣಿಸುವಿಕೆಯು ಪೂರ್ಣಗೊಂಡ ಬಳಿಕ, ಕತ್ತಲೆಯಾಗುವುದಕ್ಕೆ ಮೊದಲು, ನನ್ನ ಬೆಕ್ಕುಗಳ ಕುಟುಂಬದೊಂದಿಗೆ ಆ ಕೊನೆಯ ಕೆಲವು ಕ್ಷಣಗಳನ್ನು ಕಳೆಯುವುದನ್ನು ನಾನು ಇಷ್ಟಪಟ್ಟೆ. ನಮ್ಮ ನಡುವೆ ಭರವಸೆಯ ಒಂದು ಭಾವನೆಯು ವಿಕಸಿಸಿತ್ತು, ಮತ್ತು ಅವು ಪಳಗಿಸಿಲ್ಲದವುಗಳಾಗಿದ್ದರೂ, ಅವು ನನಗೆ ಹಾನಿಯನ್ನುಂಟುಮಾಡವೆಂಬುದು ನನಗೆ ತಿಳಿದಿತ್ತು.”
ಆದರೂ, ಮಾನವರು ಯಾವಾಗಲೂ ಚಿರತೆಯ ಕಡೆಗೆ ಅಷ್ಟೊಂದು ದಯಾಪೂರ್ಣರಾಗಿದ್ದಿಲ್ಲ. ಉದಾಹರಣೆಗಾಗಿ, ಆಫ್ರಿಕದಲ್ಲಿರುವ ಬೇಟೆಗಾರರು ಅದರ ಅಸಾಧಾರಣವಾದ ಚರ್ಮಕ್ಕಾಗಿ ದುರಾಸೆಪಟ್ಟರು ಮತ್ತು ಚಿರತೆಗಳು ಓಡಸಾಧ್ಯವಿರುವಂತಹ ಸ್ಥಳವನ್ನು ವಸಾಹತುಗಾರಿಕೆಯು ಪರಿಮಿತಗೊಳಿಸಿದೆ. ಇದು ಚಿರತೆಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಹೇರಳವಾಗಿದ್ದ ಚಿರತೆಗಳು, 1952ರಲ್ಲಿ ಸಂಪೂರ್ಣವಾಗಿ ಅಳಿದುಹೋದವು. ಪೂರ್ವ ಮೆಡಿಟರೇನಿಯನ್‌ನ ತೀರದಲ್ಲಿರುವ ಕೆಲವು ದೇಶಗಳಲ್ಲಿಯೂ ಅವು ಇನ್ನುಮುಂದೆ ಕಂಡುಬರುವುದಿಲ್ಲ.
ದೇವರ ಹೊಸ ಲೋಕದಲ್ಲಿ, ಪ್ರಾಣಿಗಳು ಲೋಭಿಗಳಾದ ಮಾನವರಿಂದ ಇನ್ನೆಂದಿಗೂ ಬೆದರಿಕೆಗೊಳಗಾಗವು ಎಂಬ ಸಂಗತಿಯಿಂದ ನಾವೆಷ್ಟು ಸಂತೋಷಿತರಾಗಿರಸಾಧ್ಯವಿದೆ! (ಯೆಶಾಯ 11:6-9) ಬಹುಶಃ ಆ ಸಮಯದಲ್ಲಿ, ಈ ಅದ್ಭುತಕರವಾಗಿ ವಿನ್ಯಾಸಿಸಲ್ಪಟ್ಟಿರುವ, ವೇಗದಲ್ಲಿ ಕುಲೀನವಾಗಿರುವ ಚಿರತೆಯನ್ನು ನೋಡುವ ಸುಯೋಗವು ನಿಮಗಿರುವುದು.