ನಿಮ್ಮ ಶ್ರವಣ ಶಕ್ತಿ ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ
ಗ್ರಾಮೀಣ ಪ್ರದೇಶದಲ್ಲಿ, ನಾಗರಿಕತೆಯ ಗದ್ದಲಗಳಿಂದ ಬಹಳ ದೂರದಲ್ಲಿ ಕಳೆಯುವ ಒಂದು ಪ್ರಶಾಂತ ಸಂಧ್ಯಾಕಾಲವು, ರಾತ್ರಿವೇಳೆಯ ಸೌಮ್ಯವಾದ ಶಬ್ದಗಳಲ್ಲಿ ತಲ್ಲೀನರಾಗುವ ಸಂದರ್ಭವನ್ನು ಒದಗಿಸುತ್ತದೆ. ಮಂದಮಾರುತವು ಎಲೆಗಳನ್ನು ಸೂಕ್ಷ್ಮವಾಗಿ ಅಲುಗಾಡಿಸುತ್ತದೆ. ಕೀಟ, ಪಕ್ಷಿ, ಮತ್ತು ಮೃಗಗಳು ಅದಕ್ಕೆ ತಮ್ಮ ದೂರದ ಕರೆಗಳನ್ನು ಕೂಡಿಸುತ್ತವೆ. ಅಂತಹ ಮೃದು ಶಬ್ದಗಳನ್ನು ಆಲಿಸುವುದು ಎಷ್ಟು ಆಶ್ಚರ್ಯಕರವಾದ ಸಂವೇದನೆಯಾಗಿದೆ! ಅವು ನಿಮಗೆ ಕೇಳಿಸುತ್ತವೆಯೆ?
ಮಾನವ ಶ್ರವಣ ಶಕ್ತಿ ವ್ಯವಸ್ಥೆಯ ಸಾಮರ್ಥ್ಯವು ಚಕಿತಗೊಳಿಸುವಂತಹದ್ದು. ಒಂದು ಪ್ರತಿಧ್ವನಿರಹಿತ ಕೋಣೆಯಲ್ಲಿ, ಧ್ವನಿವೈಜ್ಞಾನಿಕವಾಗಿ ಪ್ರತ್ಯೇಕವಾಗಿದ್ದು, ಎಲ್ಲ ಸದ್ದನ್ನು ಹೀರಿಕೊಳ್ಳುವಂತೆ ವಿನ್ಯಾಸಿಸಲ್ಪಟ್ಟಿರುವ ಮೇಲ್ಮೈಯುಳ್ಳ ಕೋಣೆಯಲ್ಲಿ ಒಂದು ಅರ್ಧ ತಾಸನ್ನು ನೀವು ಕಳೆಯುವಲ್ಲಿ, ನಿಮ್ಮ ಶ್ರವಣ ಶಕ್ತಿಯು ನಿಧಾನವಾಗಿ, ನಿಮ್ಮ ಸ್ವಂತ ದೇಹದಿಂದ ಬರುವ ಅಪರಿಚಿತ ಶಬ್ದಗಳನ್ನು ಕೇಳಲಾರಂಭಿಸುವಷ್ಟು ‘ಧ್ವನಿ ಶಕ್ತಿಯನ್ನು ಏರಿಸುತ್ತದೆ.’ ಧ್ವನಿವಿಜ್ಞಾನಿ ಎಫ್. ಆಲ್ಟನ್ ಎವರೆಸ್ಟ್, ಆ ಅನುಭವವನ್ನು ಧ್ವನಿವಿಜ್ಞಾನದ ಕುಶಲ ಕೈಪಿಡಿ (ಇಂಗ್ಲಿಷ್)ಯಲ್ಲಿ ವರ್ಣಿಸುತ್ತಾರೆ. ಪ್ರಥಮವಾಗಿ, ನಿಮ್ಮ ಸ್ವಂತ ಹೃದಯ ಮಿಡಿತ ಗಟ್ಟಿಯಾಗಿ ಕೇಳಿಸುತ್ತದೆ. ಆ ಕೋಣೆಯಲ್ಲಿ ಅರ್ಧ ತಾಸು ಕಳೆದ ಬಳಿಕ, ನಿಮ್ಮ ರಕ್ತವು ನಾಳಗಳಲ್ಲಿ ಹರಿಯುವ ಶಬ್ದವು ನಿಮಗೆ ಕೇಳಿಸುತ್ತದೆ. ಕೊನೆಯದಾಗಿ, ನಿಮಗೆ ತೀಕ್ಷ್ಣ ಶ್ರವಣ ಶಕ್ತಿಯಿರುವಲ್ಲಿ, “ಹೃದಯ ಮಿಡಿತದ ಮತ್ತು ರಕ್ತದ ಅಪ್ಪಳಿಕೆಯ ಮಧ್ಯೆ ಒಂದು ವಿಚಿತ್ರವಾದ ಹಿಸ್ಸೆನ್ನುವ ಸದ್ದಿನಿಂದ ನಿಮ್ಮ ತಾಳ್ಮೆಗೆ ಪ್ರತಿಫಲ ದೊರೆಯುತ್ತದೆ. ಅದೇನು? ನಿಮ್ಮ ಕರ್ಣಪಟಲಗಳನ್ನು ಹೊಡೆಯುವ ವಾಯುಕಣಗಳ ಧ್ವನಿಯೇ. ಹಿಸ್ಸೆನ್ನುವ ಈ ಸದ್ದಿನಿಂದಾಗುವ ಕರ್ಣಪಟಲ ಚಲನೆಯು ನಂಬಲಾಗದಷ್ಟು ಚಿಕ್ಕದಾಗಿದೆ—ಒಂದು ಸೆಂಟಿಮೀಟರಿನ ಹತ್ತು ಲಕ್ಷ ಭಾಗಗಳಲ್ಲಿ ಒಂದು ಭಾಗದ 1/100 ಅಂಶ ಮಾತ್ರ!” ಎಂದು ಎವರೆಸ್ಟ್ ವಿವರಿಸುತ್ತಾರೆ. ಇದು “ಶ್ರವಣ ಶಕ್ತಿಯ ಹೊಸ್ತಿಲು,” ಸದ್ದನ್ನು ಪತ್ತೆಹಚ್ಚಲು ನಿಮಗಿರುವ ಸಾಮರ್ಥ್ಯದ ಕನಿಷ್ಠ ಮಿತಿ. ಇದಕ್ಕಿಂತ ಹೆಚ್ಚಿನ ಸಂವೇದನ ಶಕ್ತಿ ನಿಮಗೆ ಪ್ರಯೋಜನವಿಲ್ಲದ್ದಾಗುತ್ತದೆ, ಏಕೆಂದರೆ ಅದಕ್ಕಿಂತ ಬಲಹೀನ ಶಬ್ದಗಳು ವಾಯುಕಣಗಳ ಚಲನೆಯಿಂದ ಕೇಳಿಸದೆ ಹೋಗುತ್ತವೆ.
ಶ್ರವಣ ಶಕ್ತಿಯು ಸಾಧ್ಯವಾಗುವುದು ಹೊರಗಣ, ಮಧ್ಯದ ಮತ್ತು ಒಳಗಿವಿಯ ಸಹಕಾರದಿಂದ ಮತ್ತು ನಮ್ಮ ನರವ್ಯೂಹ ಮತ್ತು ಮಿದುಳಿನ ಪ್ರಕ್ರಿಯೆ ಮತ್ತು ಗ್ರಹಣ ಶಕ್ತಿಗಳಿಂದಲೇ. ಧ್ವನಿಯು ಗಾಳಿಯಲ್ಲಿ ಒತ್ತಡ ಕಂಪನದ ಅಲೆಗಳಾಗಿ ಚಲಿಸುತ್ತದೆ. ಈ ಅಲೆಗಳು ನಮ್ಮ ಕರ್ಣಪಟಲಗಳನ್ನು ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡುತ್ತವೆ ಮತ್ತು ಇದಕ್ಕೆ ಪ್ರತಿಯಾಗಿ ಈ ಚಲನೆಯು, ಮಧ್ಯಕಿವಿಯ ಮೂಲಕ ಒಳಗಿವಿಗೆ ರವಾನಿಸಲ್ಪಡುತ್ತದೆ. ಅಲ್ಲಿ ಚಲನೆಯು ನರೋದ್ರೇಕದ ತರಂಗಗಳಾಗಿ ಪರಿವರ್ತನೆ ಹೊಂದುತ್ತದೆ. ಇದನ್ನು ಮಿದುಳು ಧ್ವನಿಯಾಗಿ ಅರ್ಥನಿರೂಪಿಸುತ್ತದೆ.a
ನಿಮ್ಮ ಪ್ರಮುಖವಾದ ಹೊರಕಿವಿ
ನಮ್ಯವಾದ, ನುಲುಚಿಕೊಂಡಿರುವ ನಿಮ್ಮ ಕಿವಿಯ ಹೊರಭಾಗವು ಪಿನ ಎಂದು ಕರೆಯಲ್ಪಡುತ್ತದೆ. ಈ ಪಿನವು ಧ್ವನಿಯನ್ನು ಸಂಗ್ರಹಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ. ನಿಮ್ಮ ಕಿವಿಯಲ್ಲಿ ಅಷ್ಟೆಲ್ಲ ಚಿಕ್ಕ ಮಡಿಕೆಗಳು ಏಕಿವೆಯೆಂದು ನೀವು ಎಂದಾದರೂ ಕುತೂಹಲಪಟ್ಟದ್ದುಂಟೊ? ಪಿನದ ವಿವಿಧ ಭಾಗಗಳಿಂದ ಪ್ರತಿಫಲನವಾಗುವ ಧ್ವನಿ ತರಂಗಗಳು, ಅವುಗಳು ಬರುವ ಕೋನಕ್ಕನುಸಾರವಾಗಿ ನವಿರಾಗಿ ನವೀಕರಿಸಲ್ಪಡುತ್ತವೆ. ಮಿದುಳು ಈ ಸೂಕ್ಷ್ಮ ವ್ಯತ್ಯಾಸಗಳನ್ನು ವಿಸಂಕೇತಿಸಿ, ಆ ಧ್ವನಿ ಬರುವ ಮೂಲಸ್ಥಾನವನ್ನು ನಿರ್ಧರಿಸುತ್ತದೆ. ಮಿದುಳು ಅದನ್ನು, ಧ್ವನಿಯು ನಿಮ್ಮ ಕಿವಿಗಳಲ್ಲಿ ಪ್ರತಿಯೊಂದರೊಳಗೆ ಪ್ರವೇಶಿಸುವಾಗ, ಅದರ ಸಮಯ ಮತ್ತು ತೀಕ್ಷ್ಣತೆಯನ್ನು ಹೋಲಿಸುವುದಕ್ಕೆ ಸೇರಿಕೆಯಾಗಿ ಮಾಡುತ್ತದೆ.
ಇದನ್ನು ಪ್ರದರ್ಶಿಸಲಿಕ್ಕಾಗಿ, ಕಣ್ಣುಗಳನ್ನು ಮುಚ್ಚಿರುವ ಒಬ್ಬ ವ್ಯಕ್ತಿಯ ಎದುರಲ್ಲಿ ನಿಮ್ಮ ಕೈಯನ್ನು ಮೇಲೆ ಕೆಳಗೆ ಮಾಡುತ್ತ, ನಿಮ್ಮ ಬೆರಳುಗಳಿಂದ ಚಿಟಿಕೆ ಹೊಡೆಯಿರಿ. ನಿಮ್ಮ ಬೆರಳುಗಳು ಅವನ ಪ್ರತಿಯೊಂದು ಕಿವಿಯಿಂದ ಸಮಾನ ದೂರದಲ್ಲಿ ಇರುತ್ತವಾದರೂ, ಶಬ್ದವು ಮೇಲಿಂದ ಬರುತ್ತದೊ, ಕೆಳಗಿನಿಂದ ಬರುತ್ತದೊ ಅಥವಾ ಇವೆರಡರ ಮಧ್ಯದಿಂದ ಬರುತ್ತದೊ ಎಂದು ಅವನು ಹೇಳಶಕ್ತನಾಗುವನು. ವಾಸ್ತವವಾಗಿ, ಒಂದೇ ಒಂದು ಒಳ್ಳೆಯ ಕಿವಿಯುಳ್ಳವನು ಸಹ, ಧ್ವನಿಗಳನ್ನು ಉತ್ತಮವಾಗಿ ಸ್ಥಳೀಕರಿಸಬಲ್ಲನು.
ನಿಮ್ಮ ಮಧ್ಯಕಿವಿ—ಯಾಂತ್ರಿಕ ಬೆರಗು
ನಿಮ್ಮ ಮಧ್ಯಕಿವಿಯ ಮುಖ್ಯ ಕೆಲಸವು, ನಿಮ್ಮ ಒಳಕಿವಿಯಲ್ಲಿ ತುಂಬಿರುವ ದ್ರವಕ್ಕೆ ನಿಮ್ಮ ಕರ್ಣಪಟಲದ ಚಲನೆಯನ್ನು ಸ್ಥಳಾಂತರಿಸುವುದೇ ಆಗಿದೆ. ಆ ದ್ರವ ಗಾಳಿಗಿಂತ ಹೆಚ್ಚು ಭಾರವುಳ್ಳದ್ದು. ಹೀಗೆ, ಗಿಯರ್ ಇರುವ ಒಂದು ಸೈಕಲ್ನ ಸವಾರನು ಕಡಿದಾದ ಬೆಟ್ಟವನ್ನೇರುವಾಗ ಹೇಗೊ ಹಾಗೆಯೆ, ಶಕ್ತಿಯನ್ನು ಸಾಧ್ಯವಾಗುವಷ್ಟು ಕಾರ್ಯಸಾಧಕವಾಗಿ ರವಾನಿಸಲು ಸರಿಯಾದ ಒಂದು ‘ಗಿಯರ್ ಪ್ರಮಾಣ’ ಅಗತ್ಯವಾಗಿರುತ್ತದೆ. ಮಧ್ಯಕಿವಿಯಲ್ಲಿ, ಕರ್ಣಪಟಲದ ಕಂಪನ ಶಕ್ತಿಯು, ಅವುಗಳ ಆಕಾರದ ಕಾರಣ ಸಾಮಾನ್ಯವಾಗಿ, ಮ್ಯಾಲೀಯಸ್ ಸುತ್ತಿಗೆ, ಇನ್ಕಸ್ ಸ್ಥೂಣಾಸ್ಥಿ ಮತ್ತು ಸ್ಟೇಪೀಸ್ ರಿಕಾಪು ಮೂಳೆ ಎಂದು ಕರೆಯಲ್ಪಡುವ ಮೂರು ಚಿಕ್ಕ ಎಲುಬುಗಳ ಮೂಲಕ ಸ್ಥಳಾಂತರಿಸಲ್ಪಡುತ್ತದೆ. ಈ ಚಿಕ್ಕ ಗಾತ್ರದ ಯಾಂತ್ರಿಕ ಕೊಂಡಿಯು, ಒಳಕಿವಿಗೆ ಹೆಚ್ಚುಕಡಮೆ ಎಷ್ಟು ಬೇಕೊ ಅಷ್ಟು ‘ಗಿಯರ್ ಪ್ರಮಾಣ’ವನ್ನು ಸಾಧಿಸಿ ಒದಗಿಸುತ್ತದೆ. ಇದು ಇಲ್ಲದಿರುವಲ್ಲಿ, ಧ್ವನಿ ಶಕ್ತಿಯಲ್ಲಿ 97 ಪ್ರತಿಶತ ನಷ್ಟಗೊಳ್ಳುವುದೆಂದು ಲೆಕ್ಕ ಹಾಕಲಾಗಿದೆ!
ನಿಮ್ಮ ಮಧ್ಯಕಿವಿಯಲ್ಲಿರುವ ಕೂಡಿಕೆಗೆ ಎರಡು ಕೋಮಲ ಸ್ನಾಯುಗಳು ಜೋಡಿಸಲ್ಪಟ್ಟಿವೆ. ನಿಮ್ಮ ಕಿವಿಯು ಕಡಮೆ ಆವರ್ತನದ (ಲೋ ಫ್ರೀಕ್ವೆನ್ಸಿ) ಒಂದು ದೊಡ್ಡ ಶಬ್ದಕ್ಕೆ ಒಡ್ಡಲ್ಪಟ್ಟಾಗ, ಒಂದು ಸೆಕೆಂಡಿನ ನೂರನೆಯ ಒಂದಂಶ ಸಮಯದೊಳಗೆ, ಈ ಸ್ನಾಯುಗಳು ಸ್ವಯಂಚಾಲಕವಾಗಿ ಬಿಗಿದುಕೊಂಡು, ಕೂಡಿಕೆಯ ಚಲನೆಯನ್ನು ಮಹತ್ತಾಗಿ ನಿರ್ಬಂಧಿಸಿ, ಹೀಗೆ, ಹಾನಿಯಾಗುವ ಯಾವುದೇ ಸಾಧ್ಯತೆಯನ್ನು ಭಗ್ನಗೊಳಿಸುತ್ತವೆ. ಈ ಪ್ರತಿಕ್ರಿಯೆ, ಪ್ರಕೃತಿಯಲ್ಲಾಗುವ, ಕಾರ್ಯತಃ, ಸಕಲ ಗಟ್ಟಿಯಾದ ಶಬ್ದಗಳಿಂದ ನಿಮ್ಮನ್ನು ಕಾಪಾಡಲು ಸಾಕಷ್ಟು ತ್ವರಿತವಾಗಿದೆಯಾದರೂ, ಯಾಂತ್ರಿಕ ಮತ್ತು ಇಲೆಕ್ಟ್ರಾನಿಕ್ ಸಾಧನಗಳು ಉಂಟುಮಾಡುವ ಸಕಲ ಶಬ್ದಗಳಿಂದ ಕಾಪಾಡುವಷ್ಟು ತ್ವರಿತವಾಗಿಲ್ಲ. ಅಲ್ಲದೆ, ಈ ಚಿಕ್ಕ ಸ್ನಾಯುಗಳು ಈ ರಕ್ಷಣಾ ಭಂಗಿಯನ್ನು ಹತ್ತು ನಿಮಿಷಗಳ ವರೆಗೆ ಮಾತ್ರ ಹಿಡಿದುಕೊಂಡಿರಬಲ್ಲವು. ಆದರೆ, ಇದು ನಿಮಗೆ ಆ ಆಕ್ರಮಣಕಾರಕ ಸದ್ದಿನಿಂದ ಪಲಾಯನ ಮಾಡುವರೆ ಸಂದರ್ಭವನ್ನೊದಗಿಸುವುದು. ಆಸಕ್ತಿಕರವಾಗಿ, ನೀವು ಮಾತಾಡುವಾಗ, ನಿಮ್ಮ ಮಿದುಳು ಈ ಸ್ನಾಯುಗಳಿಗೆ ಅವು ನಿಮ್ಮ ಶ್ರವಣ ಸಂವೇದನೆಯನ್ನು ಕಡಮೆ ಮಾಡುವರೆ ಸಂಕೇತಗಳನ್ನು ಕಳುಹಿಸುತ್ತದೆ. ಹೀಗೆ ನಿಮ್ಮ ಸ್ವಂತ ಸ್ವರ ನಿಮಗೆ ತೀರ ಗಟ್ಟಿಯಾಗಿ ಕೇಳಿಸುವುದಿಲ್ಲ.
ನಿಮ್ಮ ಬೆರಗುಗೊಳಿಸುವ ಒಳಕಿವಿ
ಕೇಳಿಸಿಕೊಳ್ಳುವುದರಲ್ಲಿ ಒಳಗೂಡಿರುವ ನಿಮ್ಮ ಒಳಕಿವಿಯ ಒಂದು ಭಾಗವು, ಅದರ ಶಂಬುಕಾಕೃತಿಯ ಕಾರಣ ಹೆಸರಿಡಲ್ಪಟ್ಟ ಕಾಕ್ಲಿಯ ಕರ್ಣಶಂಖದೊಳಗಿದೆ. ಇದರ ಕೋಮಲವಾದ ರಚನೆಯನ್ನು ಕಾಪಾಡುವ ಹೊದಿಕೆಯು, ನಿಮ್ಮ ದೇಹದ ಅತಿ ಗಟ್ಟಿಯಾದ ಎಲುಬಾಗಿದೆ. ಇದರ ಜಟಿಲ ರಚನೆಯೊಳಗೆ, ಕಾಕ್ಲಿಯದ ಉದ್ದವನ್ನು ಕಾಲುವೆಗಳಾಗಿ ವಿಂಗಡಿಸುವ ಅನೇಕ ತಂತುರಚನೆಗಳಲ್ಲಿ ಒಂದಾದ ಬ್ಯಾಸಿಲರ್ ಮೆಂಬ್ರೇನ್ ತಳಪೊರೆಯಿದೆ. ಈ ಪೊರೆಯುದ್ದಕ್ಕೂ ಸಾವಿರಾರು ಕೇಶಕಣಗಳನ್ನು—ಕಾಕ್ಲಿಯವನ್ನು ತುಂಬಿರುವ ದ್ರವದೊಳಕ್ಕೆ ವಿಸ್ತರಿಸಿರುವ ಕೂದಲಿನಂತಹ ತುದಿಗಳಿರುವ ನರಕಣಗಳು—ಬೆಂಬಲಿಸುವ ಕಾರ್ಟೀ ಅಂಗ ಎಂಬ ಧ್ವನಿ ಗ್ರಹಣೇಂದ್ರಿಯವಿದೆ.
ಮಧ್ಯಕಿವಿಯ ಎಲುಬುಗಳ ಚಲನೆಯು ಕಾಕ್ಲಿಯದ ಅಂಡಾಕಾರದ ಕಿಟಕಿಯನ್ನು ಕಂಪಿಸುವಾಗ, ಅದು ದ್ರವದಲ್ಲಿ ತರಂಗಗಳನ್ನು ನಿರ್ಮಿಸುತ್ತದೆ. ಈ ತರಂಗಗಳು ಪೊರೆಗಳನ್ನು, ಕೊಳದಲ್ಲಿ ತೇಲುತ್ತಿರುವ ಎಲೆಗಳನ್ನು ಕಿರುತೆರೆಗಳು ಮೇಲೆ ಕೆಳಗೆ ಚಲಿಸುವ ಹಾಗೆ ಮಾಡುವಂತೆಯೇ ಅಲುಗಾಡಿಸುತ್ತವೆ. ಆ ತರಂಗಗಳು ನಿರ್ದಿಷ್ಟ ಆವರ್ತನಗಳಿಗೆ ಅನುರೂಪವಾಗಿರುವ ಸ್ಥಳಗಳಲ್ಲಿ ಬ್ಯಾಸಿಲರ್ ತಳಪೊರೆಯನ್ನು ಬಗ್ಗಿಸುತ್ತವೆ. ಆಗ ಆ ಸ್ಥಳಗಳಲ್ಲಿರುವ ಕೇಶ ಕಣಗಳು ಮೇಲಿರುವ ಟೆಕ್ಟೋರಿಯಲ್ ತಳಪೊರೆಯನ್ನು ಸ್ಪರ್ಶಿಸುತ್ತವೆ. ಈ ಸಂಪರ್ಕವು ಕೇಶ ಕಣಗಳನ್ನು ವಿಯೋಜಿಸುತ್ತದೆ ಮತ್ತು ಅವು ಸರದಿಯಾಗಿ, ಕಂಪನಗಳನ್ನುಂಟುಮಾಡಿ, ಅವನ್ನು ನಿಮ್ಮ ಮಿದುಳಿಗೆ ಕಳುಹಿಸುತ್ತವೆ. ಶಬ್ದವು ಎಷ್ಟು ಹೆಚ್ಚು ತೀಕ್ಷ್ಣವೊ ಅಷ್ಟು ಹೆಚ್ಚು ಕೇಶ ಕಣಗಳು ಉದ್ರೇಕಿಸಲ್ಪಡುತ್ತವೆ ಮತ್ತು ಹೆಚ್ಚು ವೇಗವಾಗಿ ಉದ್ರೇಕಿಸಲ್ಪಡುತ್ತವೆ. ಹೀಗೆ, ಮಿದುಳು ಹೆಚ್ಚು ಗಟ್ಟಿಯಾದ ಶಬ್ದವನ್ನು ಗ್ರಹಿಸುತ್ತದೆ.
ನಿಮ್ಮ ಮಿದುಳು ಮತ್ತು ಶ್ರವಣ ಶಕ್ತಿ
ಮಿದುಳು ನಿಮ್ಮ ಶ್ರವಣ ವ್ಯವಸ್ಥೆಯ ಅತಿ ಪ್ರಮುಖ ಭಾಗವಾಗಿದೆ. ಅದಕ್ಕೆ ತಾನು ನರೋದ್ರೇಕದ ಅಲೆಗಳ ರೂಪದಲ್ಲಿ ಪಡೆಯುವ ದತ್ತಾಂಶಗಳ ಪ್ರವಾಹವನ್ನು ಧ್ವನಿಯ ಮಾನಸಿಕ ಗ್ರಹಣ ಶಕ್ತಿಗೆ ಪರಿವರ್ತಿಸುವ ಮಹತ್ತಾದ ಸಾಮರ್ಥ್ಯವಿದೆ. ಈ ಪ್ರಧಾನ ಕಾರ್ಯವು ಚೈತನ್ಯ ಧ್ವನಿವಿಜ್ಞಾನ (ಸೈಕೊಅಕೂಸ್ಟಿಕ್ಸ್) ಎಂದು ಜ್ಞಾತವಾಗಿರುವ ಕ್ಷೇತ್ರದಲ್ಲಿ ಅಧ್ಯಯನಿಸಲಾಗುತ್ತಿರುವ ಆಲೋಚನೆ ಮತ್ತು ಶ್ರವಣ ಶಕ್ತಿಯ ಮಧ್ಯೆ ಇರುವ ವಿಶೇಷ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ, ಜನರಿಂದ ಕಿಕ್ಕಿರಿದು ತುಂಬಿರುವ ಕೋಣೆಯಲ್ಲಿ ನಡೆಯುವ ಅನೇಕ ಸಂಭಾಷಣೆಗಳಲ್ಲಿ ಒಂದನ್ನು ನೀವು ಆಲಿಸುವರೆ ನಿಮ್ಮ ಮಿದುಳು ಸಾಧ್ಯಮಾಡುತ್ತದೆ. ಒಂದು ಧ್ವನಿವರ್ಧಕಕ್ಕೆ ಈ ಸಾಮರ್ಥ್ಯವಿರುವುದಿಲ್ಲ, ಆದುದರಿಂದ ಅದೇ ಕೋಣೆಯಲ್ಲಿ ಮಾಡಲ್ಪಡುವ ಒಂದು ಟೇಪ್ ರೆಕಾರ್ಡಿಂಗ್ ಹೆಚ್ಚುಕಡಮೆ ಅಗ್ರಾಹ್ಯವಾಗಿರಬಹುದು.
ಅನಪೇಕ್ಷಿತ ಶಬ್ದಗಳಿಂದ ನಮಗಾಗುವ ಕಿರುಕುಳವು ಈ ಸಂಬಂಧದ ಇನ್ನೊಂದು ಅಂಶವನ್ನು ತೋರಿಸುತ್ತದೆ. ಒಂದು ಧ್ವನಿಯ ಆವರ್ತನವು ಎಷ್ಟೇ ಕನಿಷ್ಠವಾಗಿರಲಿ, ನಿಮಗೆ ಬೇಡವಾಗಿರುವಾಗ ಅದು ಕೇಳಿಸುವಲ್ಲಿ, ಅದು ಕಿರಿಕಿರಿಯನ್ನುಂಟುಮಾಡಬಲ್ಲದು. ಉದಾಹರಣೆಗೆ, ನಲ್ಲಿಯಿಂದ ತೊಟ್ಟಿಕ್ಕುವ ನೀರು ಉಂಟುಮಾಡುವ ಧ್ವನಿಯ ತೀಕ್ಷ್ಣತೆಯು ತೀರ ಕಡಮೆ. ಆದರೆ, ಮಧ್ಯರಾತ್ರಿಯಲ್ಲಿ ಅದು ನಿಮ್ಮನ್ನು ಎಚ್ಚರವಾಗಿಡುವುದಾದರೆ, ಅದು ತೀರ ಆಕ್ಷೇಪಣೀಯವೆಂದು ನೀವು ಕಂಡುಕೊಳ್ಳುವಿರಿ!
ನಿಶ್ಚಯ, ನಮ್ಮ ಭಾವುಕತೆಗಳು ನಮ್ಮ ಶ್ರವಣ ಪ್ರಜ್ಞೆಗೆ ಒತ್ತಾಗಿ ಸಂಬಂಧವುಳ್ಳದ್ದಾಗಿವೆ. ಹಾರ್ದಿಕ ನಗೆಯ ವ್ಯಾಪಕ ಪರಿಣಾಮವನ್ನು ಅಥವಾ ಮಮತೆ ಅಥವಾ ಪ್ರಶಂಸೆಯ ಯಥಾರ್ಥ ಮಾತಿನಿಂದ ಉಂಟಾಗುವ ಹೃದಯೋಲ್ಲಾಸವನ್ನು ತುಸು ಯೋಚಿಸಿರಿ. ತದ್ರೀತಿ, ನಾವು ಬೌದ್ಧಿಕವಾಗಿ ಕಲಿತುಕೊಳ್ಳುವ ಹೆಚ್ಚಿನ ವಿಷಯಗಳನ್ನು ನಾವು ನಮ್ಮ ಕಿವಿಗಳ ಮೂಲಕ ಕಲಿಯುತ್ತೇವೆ.
ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ
ನಮ್ಮ ಶ್ರವಣ ಶಕ್ತಿಯ ಆಕರ್ಷಕ ರಹಸ್ಯಗಳಲ್ಲಿ ಅನೇಕ ರಹಸ್ಯಗಳನ್ನು ಇನ್ನೂ ಕಂಡುಹಿಡಿಯಲಾಗಿರುವುದಿಲ್ಲ. ಆದರೆ ಸಂಪಾದಿಸಲಾಗಿರುವ ವೈಜ್ಞಾನಿಕ ತಿಳಿವಳಿಕೆಯು, ಅದರಲ್ಲಿ ಕಂಡುಬರುವ ಬುದ್ಧಿಶಕ್ತಿ ಮತ್ತು ಪ್ರೀತಿಗೆ ನಮ್ಮ ಗುಣಗ್ರಹಣವನ್ನು ಆಳವಾಗಿಸುತ್ತದೆ. ಧ್ವನಿವಿಜ್ಞಾನ ಸಂಶೋಧಕ, ಎಫ್. ಆಲ್ಟನ್ ಎವರೆಸ್ಟ್ ಬರೆಯುವುದು: “ಮಾನವ ಶ್ರವಣ ವ್ಯವಸ್ಥೆಯನ್ನು ಎಷ್ಟೇ ಸಮಗ್ರವಾಗಿ ಪರಿಗಣಿಸುವುದಾದರೂ, ಅದರ ಜಟಿಲ ಕಾರ್ಯಗಳು ಮತ್ತು ರಚನೆಗಳು ಅದರ ವಿನ್ಯಾಸದಲ್ಲಿ ಯಾವುದೊ ಉಪಕಾರಿ ಹಸ್ತವನ್ನು ಸೂಚಿಸುತ್ತದೆಂಬ ತೀರ್ಮಾನದಿಂದ ತಪ್ಪಿಸಿಕೊಳ್ಳುವುದು ಕಷ್ಟಕರ.”
ಪುರಾತನ ಇಸ್ರಾಯೇಲಿನ ದಾವೀದ ರಾಜನಿಗೆ, ನಮ್ಮ ಶ್ರವಣ ಶಕ್ತಿಯ ಆಂತರಿಕ ಕಾರ್ಯಗಳ ಕುರಿತಾದ ಪ್ರಸ್ತುತ ದಿನದ ವೈಜ್ಞಾನಿಕ ಜ್ಞಾನದ ಕೊರತೆಯಿತ್ತು. ಆದರೂ ಅವನು ತನ್ನ ಸ್ವಂತ ದೇಹ ಮತ್ತು ಅದರ ಅನೇಕ ವರಗಳ ಕುರಿತು ಯೋಚಿಸಿ, ತನ್ನ ನಿರ್ಮಾಣಿಕನಿಗೆ ಹಾಡಿದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆ.” (ಕೀರ್ತನೆ 139:14) ಶ್ರವಣ ಶಕ್ತಿಯನ್ನು ಕೂಡಿಸಿ, ನಮ್ಮ ಶರೀರದ ಬೆರಗುಗಳ ಮತ್ತು ರಹಸ್ಯಗಳ ಕುರಿತ ವೈಜ್ಞಾನಿಕ ಸಂಶೋಧನೆಯು, ದಾವೀದನು ಸರಿಯೆಂಬುದಕ್ಕೆ, ನಾವು ವಿವೇಕಿಯೂ ಪ್ರೀತಿಪೂರ್ಣನೂ ಆಗಿರುವ ಸೃಷ್ಟಿಕರ್ತನೊಬ್ಬನಿಂದ ಆಶ್ಚರ್ಯಕರವಾಗಿ ವಿನ್ಯಾಸಿಸಲ್ಪಟ್ಟಿದ್ದೇವೆಂಬುದಕ್ಕೆ ರುಜುವಾತನ್ನು ಕೂಡಿಸುತ್ತಿದೆ!
[ಅಧ್ಯಯನ ಪ್ರಶ್ನೆಗಳು]
a ಜನವರಿ 22, 1990ರ ಅವೇಕ್! ಪುಟಗಳು 18-21ನ್ನು ನೋಡಿ.
[ಪುಟ 38 ರಲ್ಲಿರುವ ಚೌಕ/ಚಿತ್ರಗಳು]
ಹಾನಿಗೊಂಡಿರುವ ಶ್ರವಣ ಶಕ್ತಿಯಿರುವವರಿಗೆ ಸಹಾಯ
ಗಟ್ಟಿಯಾದ ಸದ್ದಿಗೆ ಲಂಬಿಸಿದ ಒಡ್ಡಲ್ಪಡುವಿಕೆಯು ಖಾಯಂ ಶ್ರವಣ ಹಾನಿಯನ್ನು ಮಾಡುತ್ತದೆ. ವಿಪರೀತ ಗಟ್ಟಿಯಾದ ಸಂಗೀತಕ್ಕೆ ನಿಮ್ಮನ್ನು ಒಡ್ಡಿಕೊಳ್ಳುವುದು ಅಥವಾ ಗಟ್ಟಿ ಶಬ್ದಮಾಡುವ ಸಾಧನಗಳ ನಡುವೆ ಕಾಪು ಇಲ್ಲದೆ ಕೆಲಸಮಾಡುವುದು ಇಂತಹ ನಷ್ಟಕ್ಕೆ ಅರ್ಹವಾದ ಬೆಲೆಯಾಗಿರುವುದಿಲ್ಲ. ನ್ಯೂನ ಶ್ರವಣ ಶಕ್ತಿಯಿರುವವರಿಗೆ ಮತ್ತು ಕೆಲವು ಹುಟ್ಟುಕಿವುಡರಿಗೆ ಕೂಡ ಶ್ರವಣ ಸಾಧನಗಳು ಸ್ವಲ್ಪಮಟ್ಟಿಗೆ ಸಹಾಯವನ್ನು ಒದಗಿಸಬಲ್ಲವು. ಅನೇಕರಿಗೆ ಇಂತಹ ಉಪಕರಣಗಳು ಶ್ರವಣಾನುಭವದ ಇಡೀ ಜಗತ್ತನ್ನೇ ಭರ್ತಿಮಾಡುತ್ತವೆ. ಪ್ರಥಮ ಬಾರಿ ಶ್ರವಣ ಸಾಧನವನ್ನು ತೊಟ್ಟ ಬಳಿಕ, ಒಬ್ಬ ಸ್ತ್ರೀಗೆ ಆಕೆಯ ಅಡುಗೆಮನೆಯ ಕಿಟಕಿಯ ಹೊರಗಿಂದ ಒಂದು ವಿಚಿತ್ರ ಧ್ವನಿ ಕೇಳಿಬಂತು. “ಅದು ಪಕ್ಷಿಗಳ ಸ್ವರ!” ಎಂದು ಉದ್ಗರಿಸಿದಳವಳು. “ಎಷ್ಟೋ ವರ್ಷಗಳಿಂದ ನಾನು ಪಕ್ಷಿಗಳ ಸ್ವರವನ್ನು ಕೇಳಿರಲಿಲ್ಲ!”
ವಿಪರೀತ ಹಾನಿಯಾಗಿರದಿದ್ದರೂ, ವಯಸ್ಸಾಗುವಿಕೆಯು ಉಚ್ಚಸ್ಥಾಯಿಯ ಧ್ವನಿಗಳನ್ನು ಪತ್ತೆಹಚ್ಚಲು ನಮಗಿರುವ ಸಾಮರ್ಥ್ಯವನ್ನು ಸಾಮಾನ್ಯವಾಗಿ ಕುಂದಿಸುತ್ತದೆ. ಅಹಿತಕರವಾಗಿ, ಇದರಲ್ಲಿ ವ್ಯಂಜನಾಕ್ಷರದ ಆವರ್ತನಗಳು—ಮಾತನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅನೇಕ ವೇಳೆ ಅತಿ ನಿರ್ಧಾರಕವಾಗಿರುವ ಧ್ವನಿಗಳು ಸೇರಿರುತ್ತವೆ. ಆದಕಾರಣ ವೃದ್ಧರು, ಸುರಿಯುತ್ತಿರುವ ನೀರು ಅಥವಾ ಕಾಗದದ ಪರ ಪರ ಶಬ್ದದಂತಹ ಸಾಮಾನ್ಯ ಮನೆವಾರ್ತೆಯ ಶಬ್ದಗಳಿಂದ ಮಾತುಸಂಪರ್ಕ ನಿಂತುಹೋಗಸಾಧ್ಯವಿದೆಯೆಂದು ಕಂಡುಕೊಂಡಾರು. ಏಕೆಂದರೆ ಅವುಗಳಲ್ಲಿ ವ್ಯಂಜನಾಕ್ಷರಗಳಿಗೆ ತೊಡಕುಂಟುಮಾಡುವ ಉಚ್ಚಾವರ್ತನಗಳಿವೆ. ಶ್ರವಣ ಸಾಧನಗಳು ಆಂಶಿಕ ಪರಿಹಾರವನ್ನು ಒದಗಿಸಬಹುದಾದರೂ, ಅವುಗಳಿಗೆ ತಮ್ಮದೇ ಆದ ನ್ಯೂನತೆಗಳಿವೆ. ಒಂದು ಸಂಗತಿಯೇನಂದರೆ, ಗುಣಮಟ್ಟದ ಶ್ರವಣ ಸಾಧನಗಳು ತೀರ ದುಬಾರಿಯಾಗಿರಬಲ್ಲವು; ಅನೇಕ ದೇಶಗಳ ಸಾಧಾರಣ ವ್ಯಕ್ತಿಯ ಕೊಳ್ಳುವ ಸಾಮರ್ಥ್ಯಕ್ಕೆ ತೀರ ಮೀರಿದ್ದಾಗಿರಬಲ್ಲವು. ಮತ್ತು ಹೇಗಿದ್ದರೂ, ಸಹಜ ಸ್ಥಿತಿಯ ಶ್ರವಣ ಶಕ್ತಿಯನ್ನು ಯಾವ ಶ್ರವಣ ಸಾಧನವೂ ನಿಮಗೆ ಪೂರ್ತಿಯಾಗಿ ಹಿಂದಿರುಗಿಸಲಾರದು. ಹಾಗಾದರೆ, ಏನು ಮಾಡಸಾಧ್ಯವಿದೆ?
ಪರಿಗಣನೆಯನ್ನು ತೋರಿಸುವುದು ಅತಿ ಸಹಾಯಕರವಾಗಿರಬಲ್ಲದು. ಶ್ರವಣನಷ್ಟವಾಗಿರುವ ಒಬ್ಬನೊಂದಿಗೆ ಮಾತನಾಡುವ ಮೊದಲು, ನೀವು ಏನನ್ನೊ ಹೇಳಲಿಕ್ಕಿದ್ದೀರೆಂದು ಅವನು ತಿಳಿದಿದ್ದಾನೆಂಬುದನ್ನು ಖಾತ್ರಿಮಾಡಿಕೊಳ್ಳಿರಿ. ಅವನಿಗೆ ನಿಮ್ಮ ಮುಖ ತೋರಿಸಲು ಪ್ರಯತ್ನಿಸಿ. ಅವನು ನಿಮ್ಮ ದೇಹ ಮತ್ತು ತುಟಿ ಚಲನೆಯನ್ನು ನೋಡುವಂತೆ ಮತ್ತು ನಿಮ್ಮ ಮಾತುಗಳಲ್ಲಿರುವ ವ್ಯಂಜನಾಕ್ಷರಗಳ ಪೂರ್ಣ ಶಕ್ತಿಯನ್ನು ಅವನು ಪಡೆದುಕೊಳ್ಳುವಂತೆ ಇದು ಅನುಮತಿಸುತ್ತದೆ. ಸಾಧ್ಯವಿರುವಲ್ಲಿ, ಆ ವ್ಯಕ್ತಿಯ ಸಮೀಪ ಸರಿದು, ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತಾಡಿರಿ; ಬೊಬ್ಬೆ ಹೊಡೆಯಬೇಡಿ. ಗಟ್ಟಿ ಧ್ವನಿಗಳು ಅನೇಕ ಶ್ರವಣ ಶಕ್ತಿ ಕುಂದಿರುವ ಜನರಿಗೆ ವಾಸ್ತವವಾಗಿ ನೋವು ಕೊಡುತ್ತವೆ. ಒಂದು ಹೇಳಿಕೆ ತಿಳಿಯದಿದ್ದಲ್ಲಿ, ಅದನ್ನೇ ಆವರ್ತಿಸಿ ಹೇಳುವ ಬದಲು ಬೇರೆ ರೀತಿಯಲ್ಲಿ ಹೇಳಲು ಪ್ರಯತ್ನಿಸಿರಿ. ಅದೇ ರೀತಿ, ನಿಮ್ಮ ಶ್ರವಣ ಶಕ್ತಿ ಮೊದಲಿನಷ್ಟು ಉತ್ತಮವಾಗಿಲ್ಲದಿರುವುದಾದರೆ, ಮಾತಾಡುತ್ತಿರುವವನ ಬಳಿ ಸರಿದು, ತಾಳ್ಮೆಯಿಂದಿರುವುದರಿಂದ ನಿಮ್ಮೊಂದಿಗೆ ಮಾತಾಡುವುದನ್ನು ನೀವು ಇತರರಿಗೆ ಹೆಚ್ಚು ಸುಲಭ ಮಾಡಬಲ್ಲಿರಿ. ಈ ಹೆಚ್ಚುವರಿಯ ಪ್ರಯತ್ನಗಳು ಉತ್ತಮಗೊಂಡ ಸಂಬಂಧಗಳಲ್ಲಿ ಪರಿಣಮಿಸಬಹುದು ಮತ್ತು ನಿಮ್ಮ ಪರಿಸರಕ್ಕೆ ನೀವು ಅಳವಡಿಸಿಕೊಂಡಿರಲು ಸಹಾಯಮಾಡಬಲ್ಲದು.
[ಚಿತ್ರ]
ಶ್ರವಣ ನಷ್ಟವಾಗಿರುವ ಒಬ್ಬ ವ್ಯಕ್ತಿಯನ್ನು ಸಂಬೋಧಿಸುವಾಗ, ಅವನಿಗೆ ಮುಖಮಾ ಡಿ, ನಿಧಾನವಾಗಿಯೂ ಸ್ಪಷ್ಟವಾಗಿಯೂ ಮಾತಾಡಿರಿ
[ಪುಟ 37 ರಲ್ಲಿರುವ ಚಿತ್ರ]
(For fully formatted text, see publication)
ನಿಮ್ಮ ಕಿವಿ
ಪಿನ
ಅಂಡಾಕಾರದ ಕಿಟಕಿ
ಶ್ರವಣನರ
ಸುತ್ತಿಗೆ (ಮ್ಯಾಲೀಯಸ್)
ಸ್ಥೂಣಾಸ್ಥಿ (ಇನ್ಕಸ್)
ರಿಕಾಪು ಮೂಳೆ (ಸ್ಟೇಪೀಸ್)
ಶ್ರವಣನಾಳ
ಕರ್ಣಪಟಲ
ಕಾಕ್ಲಿಯ
ಕಾರ್ಟೀ ಅಂಗ
ಗುಂಡಾದ ಕಿಟಕಿ
ಶ್ರವಣನರ
ಕೇಶಕಣಗಳು
ತಳಪೊರೆ
ನರತಂತುಗಳು
ಬ್ಯಾಸಿಲರ್ ತಳಪೊರೆ