ಜಗತ್ತನ್ನು ಗಮನಿಸುವುದು
ಹಿಂಸಾತ್ಮಕ ಪ್ರಯಾಣಿಕರು
ವ್ಯಾಪಾರೀ ವಿಮಾನಗಳು, ಸಿಟ್ಟಿಗೆದ್ದ ಪ್ರಯಾಣಿಕರ ವತಿಯಿಂದಾಗುವ ಹಿಂಸಾತ್ಮಕ ವರ್ತನೆಯಲ್ಲಿ ಭಾರಿ ಹೆಚ್ಚಳವನ್ನು ವರದಿಸುತ್ತವೆ. ತಡವಾಗಿ ಬಂದ ವಿಮಾನಗಳು ಹಾಗೂ ಲಗೇಜುಗಳು ಕಾಣೆಯಾಗುವುದರಂತಹ ವಿಷಯಗಳಿಂದ ಕ್ಷೋಭೆಗೊಂಡ ಪ್ರಯಾಣಿಕರು, “ವಿಮಾನ ಅನುಚರರ ಮೇಲೆ ಉಗಿಯುತ್ತಾರೆ, ಆಹಾರದ ಟ್ರೇಗಳನ್ನು ಎಸೆಯುತ್ತಾರೆ ಮತ್ತು ಕೆಲವೊಮ್ಮೆ ನೌಕರರನ್ನು ಥಳಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅವರು ವಿಮಾನ ಚಾಲಕರ ಮೇಲೂ ಆಕ್ರಮಣಮಾಡುತ್ತಾರೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಅಂತಹ ಆಕ್ರಮಣಗಳು ವಿಮಾನಗಳು ಹಾರುತ್ತಿರುವಾಗ ಸಂಭವಿಸುತ್ತಿದ್ದು, ಇವು ನೆಲಕ್ಕೆ ಅಪ್ಪಳಿಸುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳು ವಿಶೇಷವಾಗಿ ಚಿಂತಿತರಾಗಿದ್ದಾರೆ. ಒಂದು ವಿಮಾನ ಸಂಸ್ಥೆಯು, ಪ್ರತಿ ತಿಂಗಳು ಶಾಬ್ದಿಕ ಅಥವಾ ಶಾರೀರಿಕ ಹಲ್ಲೆಗಳ ಸುಮಾರು 100 ಕೇಸುಗಳನ್ನು ವರದಿಸುತ್ತದೆ. ಟೈಮ್ಸ್ ಹೇಳುವುದೇನೆಂದರೆ, “ಅಡಚಣೆಯನ್ನೊಡ್ಡುವಂತಹ ಪ್ರಯಾಣಿಕರು ಎರಡೂ ಲಿಂಗಜಾತಿಯವರಾಗಿರುತ್ತಾರೆ, ವಿಭಿನ್ನ ಜಾತಿಯವರಾಗಿರುತ್ತಾರೆ, ಬೇರೆ ಬೇರೆ ವಯೋಮಿತಿಯವರಾಗಿರುತ್ತಾರೆ, ಇಕಾನಮಿ ಕ್ಲಾಸ್, ಬಿಸ್‌ನೆಸ್ ಕ್ಲಾಸ್, ಅಥವಾ ಫಸ್ಟ್ ಕ್ಲಾಸ್‌ಗಳಲ್ಲಿ ಸಮಾನವಾಗಿ ಆಕ್ಷೇಪಣೀಯರಾಗಿರುತ್ತಾರೆ. ಪ್ರತಿ ಮೂವರಲ್ಲಿ ಸುಮಾರು ಒಬ್ಬರು ಕುಡಿದಿರುತ್ತಾರೆ.”
ಮೂರ್ಛೆರೋಗಿಗಳಿಗೆ ನಾಯಿಯ ಸಹಾಯ
ಮೂರ್ಛೆರೋಗದ ರೋಗಿಗಳಿಗೆ, ಆಸನ್ನವಾಗುತ್ತಿರುವ ಮೂರ್ಛೆರೋಗದ ಕೆರಳಿಕೆಯ ಕುರಿತಾಗಿ ಎಚ್ಚರಿಕೆ ನೀಡಲಿಕ್ಕಾಗಿ, ಇಂಗ್ಲೆಂಡಿನಲ್ಲಿ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆ ಆಕ್ರಮಣಕ್ಕಾಗಿ ಸಿದ್ಧನಾಗಲು ರೋಗಿಗೆ ಸಾಕಷ್ಟು ಸಮಯವನ್ನು ಇದು ಅನುಮತಿಸುವುದೆಂದು, ಲಂಡನಿನ ದ ಟೈಮ್ಸ್ ವರದಿಸುತ್ತದೆ. ಅಸ್ವಸ್ಥ ಜನರಿಗಾಗಿ ನಾಯಿಗಳನ್ನು ತರಬೇತುಗೊಳಿಸುವುದರಲ್ಲಿ ಪರಿಣತಿ ಪಡೆದಿರುವ ಚ್ಯಾರಿಟಿಯ ಮ್ಯಾನೇಜರರು ವಿವರಿಸುವುದೇನೆಂದರೆ, “ಮೂರ್ಛೆರೋಗದ ಕೆರಳಿಕೆಯ ಸಮಯದಲ್ಲಿ ಬೊಗಳಿದ್ದಕ್ಕಾಗಿ ಆ ನಾಯಿಗೆ ಪ್ರತಿಫಲ ದೊರೆತ ಫಲಿತಾಂಶವಾಗಿ, . . . ಈ ನಾಯಿಯು, ರೋಗದ ಹೊಡೆತಕ್ಕೆ ಸ್ವಲ್ಪ ಮುಂಚೆಯೇ ರೋಗಿಯಿಂದ ತೋರಿಸಲ್ಪಡುವ ಸೂಚನೆಗಳು ಹಾಗೂ ರೋಗಲಕ್ಷಣಗಳಿಗೆ ತನ್ನ ಮನಸ್ಸನ್ನು ಅನುಗೊಳಿಸಿಕೊಂಡಿದೆ. ಅಂತಹ ಒಂದು ಪ್ರತಿಕ್ರಿಯೆಯು ಬಹುಮಾನದಲ್ಲಿ ಫಲಿಸಲಿದೆ ಎಂಬುದನ್ನು ತಿಳಿದುಕೊಂಡಿದ್ದು, ಆ ನಾಯಿಯು ಅಂತಹ ಸೂಚನೆಗಳಿಗೆ ತೀಕ್ಷ್ಣವಾಗಿ ಸಂವೇದನಾತ್ಮಕವಾಗಿರುತ್ತದೆ.”
ಯಾವುದೇ ವೈದ್ಯಕೀಯ “ಯೌವನದ ಚಿಲುಮೆ” ಇಲ್ಲ
ವೃದ್ಧಾಪ್ಯ ವೈದ್ಯಶಾಸ್ತ್ರ ಪರಿಣತರಾದ ಆಂಡ್ರೇಯ ಪ್ರಾಟಸ್‌ರಿಗನುಸಾರ, ಯೌವನಪ್ರಾಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಕೆಲವು ಹಾರ್ಮೋನುಗಳಂತಹ ಹುಚ್ಚು ಔಷಧಗಳನ್ನು ತೆಗೆದುಕೊಳ್ಳುವುದು, “ಒಂದಲ್ಲ ಒಂದು ಪ್ರಯೋಜನವನ್ನು ತರಬಹುದಾದರೂ, ಅದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿಯನ್ನೂ ಉಂಟುಮಾಡ”ಬಹುದು. ವಯಸ್ಸಾಗುವಿಕೆಯ ವಿರುದ್ಧವಾದ ಹೋರಾಟದಲ್ಲಿ, “ಹೊಸ ಔಷಧಕ್ಕಿಂತಲೂ ಹೊಸ ವರ್ತನಾ ಹವ್ಯಾಸಗಳು ಹೆಚ್ಚು ಕಾರ್ಯಸಾಧಕವಾದವುಗಳಾಗಿವೆ” ಎಂದು ಡಾ. ಪ್ರಾಟಸ್ ಸಲಹೆ ನೀಡುತ್ತಾರೆ. ದೀರ್ಘಾಯುಸ್ಸನ್ನು ವರ್ಧಿಸುವ ಒಳ್ಳೆಯ ಹವ್ಯಾಸಗಳಲ್ಲಿ, ಸಾಕಷ್ಟು ನಿದ್ರೆಮಾಡುವುದು, ಶಾಂತ ಪ್ರವೃತ್ತಿಯನ್ನು ಕಾಪಾಡಿಕೊಳ್ಳುವುದು, ಮೈಮುರಿಯುವುದು, ಮತ್ತು ಮಿತವಾಗಿ ವ್ಯಾಯಾಮವನ್ನು ಮಾಡುವುದು, ಸ್ವತಃ ಮಾನಸಿಕವಾಗಿ ಪ್ರಯಾಸಪಡಿಸಿಕೊಳ್ಳುವುದು, ಮತ್ತು ಕೊಬ್ಬುಗಳನ್ನು ತೊರೆಯುವುದು ಸೇರಿದೆ ಎಂದು, ಬ್ರೆಸಿಲ್‌ನ ಸೂಪರೀಂಟೆರಸಾಂಟೆ ಪತ್ರಿಕೆಯು ಟಿಪ್ಪಣಿಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ವಿಟಮಿನ್‌ಗಳು ಹಾಗೂ ಖನಿಜ ಪದಾರ್ಥಗಳನ್ನು ಸೇವಿಸುವುದೂ ಪ್ರಾಮುಖ್ಯವಾದದ್ದಾಗಿದೆ. ವಯಸ್ಸಾಗುವಿಕೆಯಲ್ಲಿ, ದೇಹದಲ್ಲಿರುವ ಎಲ್ಲ ಜೀವಕೋಶಗಳೂ ಸೇರಿವೆ. ಮತ್ತು ಒಂದೇ ಒಂದು ಪದಾರ್ಥವು ದೇಹದ ಎಲ್ಲ ವಿವಿಧ ಅವಯವಗಳಿಗೆ ಏಕಕಾಲದಲ್ಲಿ ಪ್ರಯೋಜನವನ್ನು ಉಂಟುಮಾಡಲಾರದು.
ಅಡಿಗೆ—ಅಳಿದುಹೋಗುತ್ತಿರುವ ಕಲೆಯೊ?
ಆಸ್ಟ್ರೇಲಿಯದ ಕ್ವೀನ್ಸ್‌ಲೆಂಡ್ ಪ್ರಾಂತ್ಯದಲ್ಲಿನ, ತಿನ್ನುವ ಹವ್ಯಾಸಗಳ ಕುರಿತಾದ 12 ತಿಂಗಳ ಒಂದು ಅಧ್ಯಯನಕ್ಕನುಸಾರ, ಅಡಿಗೆ ಮಾಡುವುದು ಅಳಿದುಹೋಗುತ್ತಿರುವ ಒಂದು ಕಲೆಯಾಗಬಹುದು. ದ ಕುರಿಯರ್ ಮೇಲ್ ವರದಿಸುವುದೇನೆಂದರೆ, 25ಕ್ಕಿಂತ ಕಡಿಮೆ ಪ್ರಾಯದ ಅಧಿಕಾಂಶ ಜನರಿಗೆ, ತಮ್ಮ ಸ್ವಂತ ಊಟಗಳನ್ನು ತಯಾರಿಸಿಕೊಳ್ಳಲು ಅಗತ್ಯವಾಗಿರುವ ಕೌಶಲಗಳಿಲ್ಲ. ಸಾರ್ವಜನಿಕ ಆರೋಗ್ಯ ಉಪನ್ಯಾಸಕಿಯೂ ಈ ಅಧ್ಯಯನದ ಕರ್ತೃವೂ ಆದ ಮಾರ್ಗ್‌ರೆಟ್ ವಿಂಗೆಟ್ ಹೇಳಿದ್ದೇನೆಂದರೆ, ಗತ ಸಮಯಗಳಲ್ಲಿ, ಯುವ ಜನರು—ಹೆಚ್ಚಾಗಿ ಹುಡುಗಿಯರು—ಮನೆಯಲ್ಲಿ ತಮ್ಮ ತಾಯಂದಿರಿಂದ ಅಥವಾ ಶಾಲೆಯಲ್ಲಿ ಅಡಿಗೆ ಮಾಡಲು ಕಲಿಯುತ್ತಿದ್ದರು. ಆದರೆ ಈಗೀಗ ಹುಡುಗಿಯರನ್ನೂ ಒಳಗೊಂಡು ಅಧಿಕಾಂಶ ಯುವ ಜನರಿಗೆ, ಅಡಿಗೆ ಮಾಡುವುದೇ ಗೊತ್ತಿಲ್ಲ ಮತ್ತು ಅದನ್ನು ಕಲಿಯುವುದರಲ್ಲಿ ಆಸಕ್ತರಿರುವಂತೆಯೂ ತೋರುವುದಿಲ್ಲ. ಮುಂಚಿತವಾಗಿಯೇ ಪ್ಯಾಕ್‌ಮಾಡಲ್ಪಟ್ಟಿರುವ ಆಹಾರಗಳನ್ನು ಅಥವಾ ಫಾಸ್ಟ್ ಫುಡ್‌ಗಳನ್ನು ಅನೇಕರು ಇಷ್ಟಪಡುತ್ತಾರೆ. ಅಂತಹ ಆಹಾರಪಥ್ಯದ ಹವ್ಯಾಸಗಳು, ಅಧಿಕರಕ್ತದೊತ್ತಡ, ಮಧುಮೂತ್ರರೋಗ, ಮತ್ತು ಹೃದ್ರೋಗದಲ್ಲಿನ ಹೆಚ್ಚಳಕ್ಕೆ ಮುನ್ನಡಿಸಬಲ್ಲದೆಂದು ಕೆಲವರು ನಂಬುತ್ತಾರೆ.
ಬೆಳೆದ ಸಸ್ತನಿಯ ಪ್ರಪ್ರಥಮ ಕ್ಲೋನ್ (ಅಬೀಜ ಸಂತಾನ)
ಕಳೆದ ಫೆಬ್ರವರಿ ತಿಂಗಳಿನಲ್ಲಿ, ಸ್ಕಾಂಟ್ಲೆಂಡ್‌ನಲ್ಲಿನ ಸಂಶೋಧಕರು, ಬೆಳೆದ ಸಸ್ತನಿಯೊಂದರ ಡಿಎನ್‌ಎ ಇಂದ ಕ್ಲೋನ್‌ನಿಂದಾದ ಕುರಿಮರಿಯೊಂದನ್ನು ಉತ್ಪಾದಿಸಿದ್ದರೆಂಬ ಪ್ರಕಟನೆಯ ಮೂಲಕ ಜಗತ್ತನ್ನೇ ಬೆರಗುಗೊಳಿಸಿದರು. ಅನೇಕ ವರ್ಷಗಳಿಂದ ಭ್ರೂಣವುಳ್ಳ ಜೀವಕೋಶಗಳ ಅಬೀಜ ಸಂತಾನವನ್ನು ಉಂಟುಮಾಡಲಾಗಿತ್ತಾದರೂ, ಇಷ್ಟರ ವರೆಗೆ ಬೆಳೆದ ಸಸ್ತನಿಯೊಂದರ ಆನುವಂಶೀಯ ಅವಳಿಗಳನ್ನು ಉತ್ಪಾದಿಸುವುದು ಅಸಾಧ್ಯವೆಂದು ಅನೇಕ ವಿಜ್ಞಾನಿಗಳು ಅಭಿಪ್ರಯಿಸಿದ್ದರು. ಆ ಸಂಶೋಧಕರು ಹೇಳಿದ್ದೇನೆಂದರೆ, ಸಿದ್ಧಾಂತದಲ್ಲಿ, ಅದೇ ತಂತ್ರಕೌಶಲವನ್ನು ಮಾನವರಿಗೂ ಅನ್ವಯಿಸಸಾಧ್ಯವಿದೆ—ವಯಸ್ಕನೊಬ್ಬನಿಂದ ತೆಗೆಯಲ್ಪಟ್ಟ ಜೀವಕೋಶವೊಂದರ ಡಿಎನ್‌ಎಯನ್ನು, ಆನುವಂಶೀಯವಾಗಿ ತದ್ರೂಪವುಳ್ಳದ್ದಾದರೂ, ಸ್ವಲ್ಪ ಎಳೆಯ ಅವಳಿಯನ್ನು ಉತ್ಪಾದಿಸಲು ಉಪಯೋಗಿಸಸಾಧ್ಯವಿದೆ. ಹಾಗಿದ್ದರೂ, ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್‌ಗನುಸಾರ, ಈ ಕ್ಲೋನಿಂಗ್ ಕಾರ್ಯಯೋಜನೆಯನ್ನು ನಡೆಸಿದ ವಿಜ್ಞಾನಿಯಾದ ಇಯಾನ್ ವಿಲ್ಮಟ್, ಈ ಕಲ್ಪನೆಯನ್ನು ನೈತಿಕವಾಗಿ ಅನಂಗೀಕೃತವೆಂದು ಪರಿಗಣಿಸುತ್ತಾರೆ. ಮಾನವ ಕ್ಲೋನಿಂಗನ್ನು ‘ಪ್ರಯೋಗ ನಡೆಸುವಿಕೆಯ ತೀರ ವಿಪರೀತ ರೂಪ’ವೆಂದು ವಿರೋಧಿಸುತ್ತಾ, ವಿಶ್ವಾರೋಗ್ಯ ಸಂಸ್ಥೆಯು ಇದನ್ನು ಒಪ್ಪುತ್ತದೆ ಎಂದು, ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ವರದಿಸುತ್ತದೆ.
ಜಿರಲೆಗಳು ಬಾಲ್ಯಾವಸ್ಥೆಯ ಉಬ್ಬಸರೋಗಕ್ಕೆ ಸಂಬಂಧಿಸಿವೆ
ಯು.ಎಸ್. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಐದು ವರ್ಷದ ಅಧ್ಯಯನವೊಂದು, ನಗರದ ಕೇಂದ್ರ ಭಾಗದಲ್ಲಿರುವ ಮಕ್ಕಳ ನಡುವಿನ ಉಬ್ಬಸರೋಗದ ಸಂಭವಪ್ರಮಾಣವು ಹೆಚ್ಚುತ್ತಿರುವುದಕ್ಕೆ ಜಿರಲೆಗಳೇ ಕಾರಣವೆಂದು ಹೇಳುತ್ತಿದೆಯೆಂದು, ನ್ಯೂ ಯಾರ್ಕಿನ ಡೇಲಿ ನ್ಯೂಸ್ ವರದಿಸುತ್ತದೆ. ಏಳು ನಗರಗಳಲ್ಲಿ ಅಧ್ಯಯನ ನಡೆಸಲ್ಪಟ್ಟ 1,528 ಉಬ್ಬಸಪೀಡಿತ ಮಕ್ಕಳಲ್ಲಿ, 37 ಪ್ರತಿಶತ ಮಕ್ಕಳಿಗೆ ಜಿರಲೆಗಳ ಅಲರ್ಜಿ ಪ್ರಬಲವಾಗಿತ್ತು. ಯಾರಿಗೆ ಅಲರ್ಜಿಯಿದ್ದು, ತಮ್ಮ ಬೆಡ್‌ರೂಮ್‌ಗಳಲ್ಲಿ ಜಿರಲೆಗಳ ದೊಡ್ಡ ಪ್ರಮಾಣಕ್ಕೆ ಒಡ್ಡಲ್ಪಟ್ಟಿದ್ದರೊ ಅವರಿಗೆ, ಇತರ ಉಬ್ಬಸಪೀಡಿತ ಮಕ್ಕಳಿಗಿಂತ ಆಸ್ಪತ್ರೀಕರಣದ ಅಗತ್ಯವು ಮುಮ್ಮಡಿ ಹೆಚ್ಚಾಗಿರುವುದು ಸಂಭವನೀಯವಾಗಿತ್ತು. ಆ ಅಧ್ಯಯನದ ಮುಖ್ಯಸ್ಥರಾದ ಡಾ. ಡೇವಿಡ್ ರಾಸನ್‌ಟ್ರೈಕ್, ಜಿರಲೆಗಳನ್ನು ಜಿರಲೆ ಬೋನುಗಳು, ಕೀಟನಾಶಕಗಳು, ಬೋರಿಕ್ ಆಮ್ಲ, ಮತ್ತು ಸ್ವಚ್ಛತೆಯ ಮೂಲಕ ಹೊಡೆದೋಡಿಸುವುದನ್ನು ಉತ್ತೇಜಿಸಿದರು. ಇಡೀ ಮನೆಯ ವ್ಯಾಕ್ಯೂಮ್ ಕ್ಲೀನ್ ಮಾಡುವುದು, ಧೂಳಿನಲ್ಲಿ ಒಳಗೂಡಿರುವ ಜಿರಲೆ ಹಿಕ್ಕೆಗಳನ್ನು ನಿರ್ಮೂಲಮಾಡುವಂತೆ ಸಹಾಯ ಮಾಡುತ್ತದೆ. “ನೀವು ಆಹಾರ ಮತ್ತು ನೀರಿನ ಯಾವುದೇ ಮೂಲಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕು . . . ವಿಶೇಷವಾಗಿ ನೀರು ಸೋರುವುದನ್ನು ಅಥವಾ ತೊಟ್ಟಿಕ್ಕುವುದನ್ನು ಇಲ್ಲವಾಗಿಸಬೇಕು. ಬದುಕಿ ಉಳಿಯಲಿಕ್ಕಾಗಿ ಜಿರಲೆಗಳು ನೀರನ್ನು ಕುಡಿಯಲೇಬೇಕು” ಎಂದು ಡಾ. ರಾಸನ್‌ಟ್ರೈಕ್ ಕೂಡಿಸುತ್ತಾರೆ.