ದೇವರು ಅಷ್ಟು ತಾಳ್ಮೆಯಿಂದಿರುವುದೇಕೆ?
ಆ ಹಸಿದ ಮಗುವಿನ ಕಳೆಗುಂದಿದ ಮುಖವನ್ನು ನೋಡಿರಿ. ಅವನ ಬಡಕಲು ದೇಹವನ್ನೂ ಉಬ್ಬಿಹೋದ ಹೊಟ್ಟೆಯನ್ನೂ ದೃಷ್ಟಿಸಿರಿ. ಆಹಾರಕ್ಕಾಗಿ ಅವನ ಹತಾಶೆಯ ಅಗತ್ಯವನ್ನು ಯೋಚಿಸಿರಿ ಮತ್ತು ಅವನು ಒಯ್ಯುತ್ತಿರುವ ಖಾಲಿಯಾದ ಬಟ್ಟಲನ್ನು ಅವಲೋಕಿಸಿರಿ. ಪ್ರಾಯಶಃ ಅವನ ತಾಯಿ ಕುಳಿಬಿದ್ದ ಕಣ್ಣುಗಳಿಂದ ಇದನ್ನು ನೋಡುತ್ತಿರಬಹುದು, ಆಕೆಯ ಸ್ವಂತ ಮೋರೆಯು ಆಶಾಶೂನ್ಯತೆಯ ಕರಾಳ ರೂಪವೇ. ಅನಂತರ, ನಿಮ್ಮ ದು:ಖವನ್ನು ನಿಗ್ರಹಿಸಲು ಪ್ರಯತ್ನಿಸಿರಿ—ಹೌದು, ಕಣ್ಣೀರನ್ನು ತಡೆದಿಡಲು ಪ್ರಯತ್ನಿಸಿರಿ.
ಈ ದೃಶ್ಯವು 2.3 ಮಿಲಿಯ ಚದರ ಮೈಲು [60 ಲಕ್ಷ ಚದರ ಕಿಲೊಮೀಟರ್]ಗಳ ಕ್ಷಾಮ-ಪೀಡಿತ ಪ್ರದೇಶವಾದ ಸಾಹೆಲ್ ಎಂಬಲ್ಲಿ ಲಕ್ಷಾಂತರ ಸಾರಿ ಪುನರಾವರ್ತಿಸಲ್ಪಡುತ್ತದೆ. ಅದು ಸಹರಾ ಮರುಭೂಮಿಯ ದಕ್ಷಿಣಕ್ಕೆ ಆಫ್ರಿಕದ ಆಚೇಕಡೆ, ಅಟ್ಲಾಂಟಿಕ್ ಕರಾವಳಿಯ ಸೆನೆಗಲ್ನಿಂದ ಕೆಂಪು ಸಮುದ್ರದ ಮೇಲಿನ ಇತಿಯೋಪ್ಯದ ತನಕ, 3,000 ಮೈಲು [4,800 ಕಿಲೊಮೀಟರ್] ಗಳಿಗಿಂತಲೂ ಹೆಚ್ಚು ವಿಶಾಲ ಕ್ಷೇತ್ರದಲ್ಲಿ ಚಾಚಿಕೊಂಡಿದೆ. ಬೇರೆ ದೇಶಗಳಲ್ಲೂ ಕ್ಷಾಮವು ಜನಸಮುದಾಯವನ್ನು ಬೆದರಿಸುತ್ತಿದೆ ನಿಶ್ಚಯ. ಭೂಸುತ್ತಲೂ ಇರುವ ಸುಮಾರು 1.1 ಸಾವಿರ ಮಿಲಿಯ [100 ಕೋಟಿ] ಜನರು ಈ ಗಂಭೀರ ಕ್ಲೇಶಕ್ಕೆ ಅಥವಾ ನ್ಯೂನ ಪೋಷಣೆಗೆ ಗುರಿಯಾಗಿದ್ದಾರೆಂದು ಜಾಗತಿಕ ಆರೋಗ್ಯ ಸಂಸ್ಥೆಯು ವರದಿ ಮಾಡಿದೆ.
ಹಸಿವೆಯು ಮಾನವ ಕಷ್ಟಾನುಭವದ ಕೇವಲ ಒಂದು ಮುಖವೆಂಬದು ನಿಶ್ಚಯ. ಮನುಷ್ಯನು ಭೂಮಿಯನ್ನು ಮಾಲಿನ್ಯಗೊಳಿಸುತ್ತಾನೆ, ಅದರಿಂದ ನಾವೆಲ್ಲರೂ ಬಾಧಿತರಾಗುತ್ತೇವೆ. ಅನೇಕರಿಗೆ ಸಂಕಷ್ಟ ಮತ್ತು ಮರಣವನ್ನು ತರುವ ಯುದ್ಧಗಳಿಗೆ ಮತ್ತು ಅನ್ಯಾಯಗಳಿಗೆ ರಾಜಕೀಯ ವ್ಯವಸ್ಥೆಗಳು ಸಮ್ಮತಿಯನ್ನೀಯುತ್ತಿವೆ. ದೇವರು ಇಂಥವುಗಳಿಗೆ ಅನುಮತಿ ಕೊಡುವದೇಕೆ? ಆತನು ನಮ್ಮನ್ನು ಲಕ್ಷಿಸುತ್ತಾನೋ?
ದೇವರು ಲಕ್ಷಿಸುತ್ತಾನೆ
ನಮ್ಮ ನಿರ್ಮಾಣಿಕನು ನಮ್ಮನ್ನು ಲಕ್ಷಿಸುತ್ತಾನೆಂಬದು ಸತ್ಯ. ಇದಕ್ಕೆ ಬಹಳಷ್ಟು ರುಜುವಾತು ಇದೆ ಮತ್ತು ನಮ್ಮ ಹಿತಕ್ಕಾಗಿ ವಿಷಯಗಳನ್ನು ಕಾರ್ಯಸಿದ್ಧಿ ಮಾಡುವ ಹಾಗೂ ತನ್ನ ಸೃಷ್ಟಿಯೆಲ್ಲಾದರಲ್ಲಿ ಹೊಂದಾಣಿಕೆಯನ್ನು ತರುವ ಶಕ್ತಿ ಆತನಿಗಿದೆ. ದೃಷ್ಟಾಂತಕ್ಕಾಗಿ, ಒಂದು ಫಲವೃಕ್ಷದ ಹೂವನ್ನು ಒಂದು ಜೇನುನೊಣವು ಸಂದರ್ಶಿಸುವುದನ್ನು ಗಮನಿಸಿರಿ. ತನ್ನ ಪೋಷಣೆಗೆ ಬೇಕಾದ ಜೇನಿಗಾಗಿ ಆ ಜೇನು ನೊಣವು ಹೂವಿನ ಮೇಲೆ ಆತುಕೊಂಡಿರುತ್ತದೆ. ಸರದಿಯಲ್ಲಿ, ಇಲ್ಲಿ ಕಾಣುವ ಮರವು, ಜೇನುನೊಣವು ತನ್ನ ಮೈಯಲ್ಲಿ ಒಯ್ಯುವ ತದ್ರೀತಿಯ ವೃಕ್ಷದ ಪರಾಗದ ಮೇಲೆ ಆತುಕೊಂಡಿರುತ್ತದೆ. ಈ ರೀತಿಯಲ್ಲಿ ಹೂವಿನ ಅಂಡಗಳು ಫಲವತ್ತಾಗಿ ಫಲಬಿಡುತ್ತವೆ. ಎಲ್ಲಾ ಫಲವೃಕ್ಷಗಳು ಈ ರೀತಿಯಲ್ಲಿ ಫಲಬಿಡುವದಿಲ್ಲ, ಆದರೆ ದೇವರು ಈ ಕಾರ್ಯವಿಧಾನದಲ್ಲಿ ನಿಶ್ಚಯವಾಗಿಯೂ ಒಂದು ಅಸಾಮಾನ್ಯವಾದ ಸಹಕಾರವನ್ನು ಏರ್ಪಡಿಸಿರುತ್ತಾನೆ. ಮತ್ತು ಆತನ ಒಳ್ಳೇತನವು ನಾವು ಉಲ್ಲಾಸದಿಂದಲೂ, ಪ್ರಯೋಜನಕಾರಿಯಾಗಿಯೂ ತಿನ್ನುವ ಫಲವಾಗಿ ಪರಿಣಮಿಸುತ್ತದೆ.
ಆ ಜೇನುನೊಣ ತಾನೇ 30,000ಕ್ಕಿಂತಲೂ ಹೆಚ್ಚಿನ ಸು-ಸಂಸ್ಥಾಪಿತ ಜೇನುನೊಣಗಳ ಹಿಂಡಿನ ಒಂದು ಭಾಗವು. ಕೆಲವು ಜೇನುಗೂಡನ್ನು ಕಾಯುತ್ತವೆ, ಇನ್ನು ಕೆಲವು ಅದನ್ನು ಶುದ್ಧಿಗೊಳಿಸುತ್ತವೆ ಅಥವಾ ವಾತಾಯನಿಸುತ್ತವೆ. ಮತ್ತೂ ಕೆಲವು ಜೇನನ್ನು ಮತ್ತು ಪರಾಗವನ್ನು ಸಂಗ್ರಹಿಸುತ್ತವೆ, ಮರಿಹುಳುಗಳನ್ನು ಉಣಿಸುತ್ತವೆ ಅಥವಾ ಹೊಸ ಜೇನಿನ ಮೂಲಗಳಿಗಾಗಿ ಹುಡುಕುತ್ತವೆ. ಇಂಥ ಕಾರ್ಯಮಗ್ನ ನೊಣಗಳು ನಮ್ಮ ರಸನೇಂದ್ರಿಯವನ್ನು ಸವಿಗೊಳಿಸುವ ಮಧುರವೂ ಪೋಷಕವೂ ಆದ ಜೇನನ್ನು ಉತ್ಪಾದಿಸುವಾಗ, ದೇವರು ತಾನೇ ವಿಷಯಗಳನ್ನು ಈ ರೀತಿ ಏರ್ಪಡಿಸಿದ್ದು ನಮ್ಮ ಪ್ರಯೋಜನಕ್ಕಾಗಿಯೇ.
ಜೇನುನೊಣಗಳ ಮತ್ತು ಸಸ್ಯಗಳ ನಡುವಣ ಮತ್ತು ಕೀಟಗಳ ನಡುವೆಯೂ ಇರುವ ಈ ರೀತಿಯ ಸಹಕಾರವು, ಸಜೀವ ಜೀವಿಗಳು ಒಂದರೊಂದಿಗೊಂದು ಸಹಕರಿಸುವಂತೆ ಮಾಡಲು ನಿರ್ಮಾಣಿಕನು ಪರಿಪೂರ್ಣವಾಗಿ ಶಕ್ತನು ಎಂಬದಕ್ಕೆ ಇರುವ ಅನೇಕ ರುಜುವಾತುಗಳಲ್ಲಿ ಕೇವಲ ಒಂದು. ಈ ವಿಷಯದಲ್ಲಂತೂ, “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಹೀಗಿರಲಾಗಿ, ಮಾನವ ಕುಲವನ್ನು ಇಷ್ಟೊಂದು ವೈಷಮ್ಯದಲ್ಲಿ ಜೀವಿಸುವಂತೆ ಬಿಟ್ಟು, ಇಷ್ಟೊಂದು ಮಂದಿಗೆ ದುರವಸ್ಥೆಯನ್ನು ತರುವಂತೆ ದೇವರು ಬಿಟ್ಟಿರುವುದೇಕೆ? ದೇವರು ನಮ್ಮನ್ನು ಲಕ್ಷಿಸುತ್ತಾನಾದರೆ, ವಿಷಯಗಳನ್ನು ಸರಿಪಡಿಸಲು ಇಷ್ಟೊಂದು ಕಾಲದ ತನಕ ಕಾದದ್ದೇಕೆ? ನಿಶ್ಚಯವಾಗಿಯೂ ದೇವರೇಕೆ ಅಷ್ಟು ತಾಳ್ಮೆ ತೋರಿಸಿದ್ದಾನೆ?
ದೇವರ ವಾಕ್ಯವಾದ ಬೈಬಲು ಅಂಥ ಪ್ರಶ್ನೆಗಳನ್ನು ಉತ್ತರಿಸುತ್ತದೆ. ಒಂದು ಸಕಾರಣಕ್ಕಾಗಿಯೇ ದೇವರು ಬಹು ತಾಳ್ಮೆಯುಳ್ಳವನಾಗಿದ್ದಾನೆಂದು ಈ ಗಮನಾರ್ಹ ಗ್ರಂಥವು ನಮಗೆ ತಿಳಿಸುತ್ತದೆ. ಅದ್ಯಾವ ಕಾರಣ? ಮತ್ತು ಇನ್ನೆಷ್ಟು ಕಾಲ ದೇವರ ತಾಳ್ಮೆಯು ಬಾಳುವದು? (w91 10/1)
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover photo: Frilet/Sipa