ಬೈಬಲಿನ ದೃಷ್ಟಿಕೋನ
ಒಬ್ಬ ಪ್ರೀತಿಪರ ದೇವರಿಗೆ ನೀವು ಹೇಗೆ ಭಯಪಡಸಾಧ್ಯವಿದೆ?
‘ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನೋ ಅವನೇ ಧನ್ಯನು.’—ಕೀರ್ತನೆ 112:1.
ಬೈಬಲು ವರ್ಣಿಸುವಂತೆ “ದೇವರು ಪ್ರೀತಿಸ್ವರೂಪಿ” ಆಗಿರುವುದಾದರೆ, ಆತನಿಗೆ ಭಯಪಡುವುದು ಏಕೆ ಅಗತ್ಯವಾಗಿರತಕ್ಕದ್ದು? (1 ಯೋಹಾನ 4:16) ಸಾಮಾನ್ಯವಾಗಿ ಪ್ರೀತಿ ಹಾಗೂ ಭಯವನ್ನು ಅಸಂಬದ್ಧವಾದವುಗಳೆಂದು ಪರಿಗಣಿಸಲಾಗುತ್ತದೆ. ಆದುದರಿಂದ, ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಭಯವು ಯಾವ ಪಾತ್ರವನ್ನು ವಹಿಸತಕ್ಕದ್ದು? ಒಬ್ಬ ಪ್ರೀತಿಪರ ದೇವರಿಗೆ ಭಯಪಡಬೇಕೇಕೆ? ಬೈಬಲಿನಲ್ಲಿ “ಭಯ” ಎಂಬ ಪದವು ಹೇಗೆ ಬಳಸಲ್ಪಟ್ಟಿದೆ ಎಂಬುದರ ಕಡೆಗೆ ಒಂದು ನಿಕಟವಾದ ನೋಟವು, ಈ ವಿಷಯದಲ್ಲಿ ನಮಗೆ ಉತ್ತಮವಾದ ತಿಳಿವಳಿಕೆಯನ್ನು ಒದಗಿಸಬಲ್ಲದು.
ಹೆಚ್ಚಿನ ಭಾಷೆಗಳಲ್ಲಿ, ಸಂದರ್ಭವನ್ನವಲಂಬಿಸುತ್ತಾ, ಒಂದೇ ಒಂದು ಪದದ ಅರ್ಥಕ್ಕೆ ಹಲವಾರು ಛಾಯೆಗಳಿರಸಾಧ್ಯವಿದೆ. ಉದಾಹರಣೆಗೆ, ಕೆಲವು ಭಾಷೆಗಳಲ್ಲಿ ಒಬ್ಬನು, “ನನಗೆ ಐಸ್ಕ್ರೀಮ್ ಎಂದರೆ ಪ್ರೀತಿ (ಇಷ್ಟ)” ಎಂದು ಮತ್ತು “ನನ್ನ ಮಕ್ಕಳನ್ನು ನಾನು ಪ್ರೀತಿಸುತ್ತೇನೆ” ಎಂದೂ ಹೇಳಬಹುದು. ವ್ಯಕ್ತಗೊಳಿಸಲ್ಪಡುವ ಪ್ರೀತಿಯ ಪ್ರಕಾರಗಳಲ್ಲಿ ಮತ್ತು ತೀವ್ರತೆಯಲ್ಲಿ ಮಹಾ ವ್ಯತ್ಯಾಸವಿದೆ. ತದ್ರೀತಿಯಲ್ಲಿ, ಬೈಬಲು ವಿಭಿನ್ನ ಪ್ರಕಾರಗಳ ಭಯದ ಕುರಿತು ಮಾತಾಡುತ್ತದೆ. ಅದು ದೇವರನ್ನು ಆರಾಧಿಸುವ ಸಂಬಂಧದಲ್ಲಿ ಆ ಪದವನ್ನು ಬಳಸುವಾಗ, ಭೀತಿ, ಹೆದರಿಕೆ, ಅಥವಾ ಆಸನ್ನವಾಗಿರುವ ದಂಡನೆಯ ಪರಿಜ್ಞಾನಕ್ಕೆ ಸೂಚಿಸುತ್ತಿಲ್ಲ. ಬದಲಿಗೆ, ದೇವರ ಭಯವು ಹಿತಕರ ಅನಿಸಿಕೆಗಳನ್ನು—ಭಯಭಕ್ತಿ, ಪೂಜ್ಯಭಾವನೆ, ಮತ್ತು ಆಳವಾದ ಗೌರವವನ್ನು ತಿಳಿಯಪಡಿಸುತ್ತದೆ. ಈ ಉದಾತ್ತ ಭಾವನೆಗಳು, ದೇವರಿಂದ ಓಡಿಹೋಗುವ ಇಲ್ಲವೆ ಅಡಗಿಕೊಳ್ಳುವ ಪ್ರವೃತ್ತಿಯಿಂದಲ್ಲ, ಬದಲಿಗೆ ಆತನಿಗಾಗಿ ಪ್ರೀತಿ ಮತ್ತು ಆತನ ಕಡೆಗಿನ ಆಕರ್ಷಣೆಯೊಂದಿಗೆ ಸೇರಿಸಲ್ಪಟ್ಟಿವೆ.
ದೇವರ ಭಯವು ವಿಕಾರವಾದ, ಮುದುಡಿಕೊಳ್ಳುವ ಭಯವನ್ನು ಉಚ್ಚಾಟಿಸುತ್ತದೆ. ದೇವರಿಗೆ ಭಯಪಡುವ ಮನುಷ್ಯನ ಕುರಿತು ಕೀರ್ತನೆಗಾರನು ಬರೆದುದು: “ಅವನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವದರಿಂದ ಅವನ ಮನಸ್ಸು ಸ್ಥಿರವಾಗಿರುವದು.” (ಕೀರ್ತನೆ 112:7) ಯೆಹೋವನಿಗಾಗಿರುವ ನಮ್ಮ ಆಳವಾದ ಗೌರವ ಹಾಗೂ ಪೂಜ್ಯಭಾವನೆಯನ್ನು, ದುಷ್ಟ ಜನರಿಂದ ಇಲ್ಲವೆ ಸ್ವತಃ ಸೈತಾನನಿಂದಲೇ ಬರುವ ಯಾವುದೇ ಬೆದರಿಕೆಯು ಅಡಗಿಸಲಾರದು. (ಲೂಕ 12:4, 5) ಇಲ್ಲವೆ ನಾವು ಪ್ರಾರ್ಥನೆಯಲ್ಲಿ ದೇವರನ್ನು ಸಮೀಪಿಸಲೂ ಭಯಪಡಬಾರದು. ಬದಲಿಗೆ, ಈ ಸಂದರ್ಭದಲ್ಲಿ, “ಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ.”—1 ಯೋಹಾನ 4:18.
ಆಕಾಶ ಮತ್ತು ದೇವರ ಮಹೋನ್ನತಿ
ಪ್ರಾಚೀನಕಾಲದ ರಾಜ ದಾವೀದನು ದೇವಭಯವುಳ್ಳ ಮನುಷ್ಯನಾಗಿದ್ದನು. ಸೃಷ್ಟಿಯ ಸೌಂದರ್ಯ ಹಾಗೂ ಸಂಕೀರ್ಣತೆಯ ಕುರಿತು ಆಲೋಚಿಸುವಾಗ ಅವನು ಭಯಭಕ್ತಿಯುಳ್ಳವನಾಗಿದ್ದನು. ಅವನು ಉದ್ಘೋಷಿಸಿದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ರಾತ್ರಿಯ ಆಕಾಶವನ್ನು ದಿಟ್ಟಿಸಿ ನೋಡುತ್ತಾ, ಅವನು ಉದ್ಘೋಷಿಸಿದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ.” (ಕೀರ್ತನೆ 19:1) ಈ ಅನುಭವದಿಂದ ದಾವೀದನು ಭಯಭೀತನಾಗಿದ್ದನೆಂದು ನೀವು ಊಹಿಸಿಕೊಳ್ಳುತ್ತೀರೊ? ಅದಕ್ಕೆ ವಿರುದ್ಧವಾಗಿ, ಯೆಹೋವನಿಗೆ ಸ್ತುತಿಗಳನ್ನು ಹಾಡುವಂತೆ ಅದು ಅವನನ್ನು ಪ್ರಚೋದಿಸಿತು.
ಆಕಾಶದ ಕುರಿತು ಇಂದು ನಮಗಿರುವ ಹೆಚ್ಚಿನ ಜ್ಞಾನವು, ಭಯಭಕ್ತಿಯ ಅನಿಸಿಕೆಯುಳ್ಳವರಾಗಿರಲು ನಮಗೆ ಇನ್ನೂ ಬಲವಾದ ಕಾರಣವನ್ನು ಕೊಡುತ್ತದೆ. ಇತ್ತೀಚೆಗೆ, ಹಬ್ಬ್ಲ್ ಸ್ಪೇಸ್ ದೂರದರ್ಶಕವನ್ನು ಉಪಯೋಗಿಸುತ್ತಾ ಖಗೋಳಶಾಸ್ತ್ರಜ್ಞರು, ಈ ಮೊದಲು ಯಾವನೇ ಮಾನವನು ಆಕಾಶದೊಳಕ್ಕೆ ಇಣಿಕಿನೋಡಿರುವುದಕ್ಕಿಂತಲೂ ಹೆಚ್ಚು ಆಳವಾಗಿ ಇಣಿಕಿನೋಡಿದರು. ಅವರು ಭೂಮ್ಯಾಧಾರಿತ ದೂರದರ್ಶಕಗಳಿಗೆ ಬರಿದಾಗಿ ತೋರಿಬಂದ ಆಕಾಶದ ಒಂದು ಭಾಗವನ್ನು ಆರಿಸಿಕೊಂಡು, ಕೈಗೆ ಎಟಕುವಷ್ಟು ದೂರದಲ್ಲಿರುವ, ಉಸುಬಿನ ಕಣದಷ್ಟು ದೊಡ್ಡದಾದ ಕ್ಷೇತ್ರದ ಮೇಲೆ ಮಾತ್ರ ಹಬ್ಬ್ಲ್ ಅನ್ನು ಕೇಂದ್ರೀಕರಿಸಿದರು. ಫಲಿಸಿದ ಚಿತ್ರವು, ಮಾನವನಿಂದ ಈ ಮೊದಲು ಎಂದೂ ನೋಡಲ್ಪಡದ ವ್ಯಕ್ತಿಗತ ನಕ್ಷತ್ರಗಳಿಂದಲ್ಲ, ಆಕಾಶ ಗಂಗೆ—ಕೋಟ್ಯನುಕೋಟಿ ನಕ್ಷತ್ರಗಳುಳ್ಳ ವಿಶಾಲವಾದ ವ್ಯೂಹ—ಗಳಿಂದ ತುಂಬಿತ್ತು!
ವಿಶ್ವಮಂಡಲದ ಬೃಹತ್ತ್ವ, ನಿಗೂಢತೆ, ಮತ್ತು ಅದ್ಭುತವು, ಒಬ್ಬ ತೀಕ್ಷ್ಣಮತಿಯ ವೀಕ್ಷಕನಲ್ಲಿ ಭಯಭಕ್ತಿಯನ್ನು ಮೂಡಿಸುತ್ತದೆ. ಹಾಗಿದ್ದರೂ, ಅಂತಹ ಅದ್ಭುತಗಳು ಸೃಷ್ಟಿಕರ್ತನ ಮಹಿಮೆ ಹಾಗೂ ಶಕ್ತಿಯ ಕೇವಲ ಒಂದು ಪ್ರತಿಬಿಂಬವಾಗಿವೆ. ಬೈಬಲು ಯೆಹೋವ ದೇವರನ್ನು “ಸಕಲವಿಧವಾದ ಬೆಳಕಿಗೂ ಮೂಲಕಾರಣ”ನೆಂದು ಕರೆಯುತ್ತದೆ, ಮತ್ತು ಆತನು “ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ” ಎಂಬುದಾಗಿ ನಮಗೆ ಹೇಳುತ್ತದೆ.—ಯಾಕೋಬ 1:17; ಕೀರ್ತನೆ 147:4.
ಆಕಾಶದ ಘಟನೆಗಳು ಆವರಿಸುವ ಸಮಯದಲ್ಲಿಯೂ ವಿಶ್ವಮಂಡಲದ ಅಗಾಧತೆಯು ತೋರಿಬರುತ್ತದೆ. ಹಬ್ಬ್ಲ್ ಸ್ಪೇಸ್ ದೂರದರ್ಶಕದ ಮೂಲಕ ಚಿತ್ರತೆಗೆಯಲ್ಪಟ್ಟ ಆಕಾಶ ಗಂಗೆಗಳಿಂದ ಬಂದ ಬೆಳಕು, ಕೋಟಿಗಟ್ಟಲೆ ವರ್ಷಗಳಿಂದ ಅಂತರಿಕ್ಷದಲ್ಲಿ ಸಂಚರಿಸುತ್ತಿತ್ತು! ಆಕಾಶದ ಶಾಶ್ವತೆಯೊಂದಿಗೆ ಹೋಲಿಕೆಯಲ್ಲಿ ನಮ್ಮ ಹೊಸತನ ಹಾಗೂ ಸಣ್ಣತನವು, ನಕ್ಷತ್ರಗಳನ್ನು ಉಂಟುಮಾಡಿದಾತನಿಗಾಗಿ ನಮ್ಮಲ್ಲಿ ಭಯಭಕ್ತಿ ಮತ್ತು ಆಳವಾದ ಪೂಜ್ಯಭಾವನೆಯ ಅನಿಸಿಕೆಯನ್ನುಂಟುಮಾಡಬಾರದೊ? (ಯೆಶಾಯ 40:22, 26) ಇದನ್ನೆಲ್ಲ ಸೃಷ್ಟಿಸಿದ ದೇವರು, ‘ಮರ್ತ್ಯ ಮನುಷ್ಯನನ್ನು ಮನಸ್ಸಿನಲ್ಲಿಟ್ಟುಕೊಂಡು ಅವನಿಗಾಗಿ ಚಿಂತಿಸುತ್ತಾನೆ’ ಎಂಬ ಗ್ರಹಿಕೆಯು, ನಮ್ಮ ಸೃಷ್ಟಿಕರ್ತನಿಗಾಗಿರುವ ನಮ್ಮ ಅಭಿಮಾನವನ್ನು ಆಳಗೊಳಿಸಿ, ಆತನನ್ನು ಅರಿತುಕೊಳ್ಳಲು ಮತ್ತು ಮೆಚ್ಚಿಸಲು ನಾವು ಬಯಸುವಂತೆ ಮಾಡುತ್ತದೆ. (ಕೀರ್ತನೆ 8:3, 4) ಅಂತಹ ಉದಾತ್ತ ಗೌರವ ಹಾಗೂ ಗಣ್ಯತೆಯನ್ನೇ ಬೈಬಲು ದೇವರ ಭಯವೆಂದು ಕರೆಯುತ್ತದೆ.
ಕ್ಷಮಿಸುವ ದೇವರು
ನಾವೆಲ್ಲರೂ ಅಪರಿಪೂರ್ಣರು. ಸರಿಯಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಿರುವಾಗಲೂ ನಾವು ಉದ್ದೇಶರಹಿತವಾಗಿ ಪಾಪಮಾಡುತ್ತೇವೆ. ಅದು ಸಂಭವಿಸುವಾಗ, ದೇವರ ಅನುಗ್ರಹವನ್ನು ಕಳೆದುಕೊಳ್ಳುವ ವಿಷಯವಾಗಿ ನಾವು ಭಯಪಡಬೇಕೊ? ಕೀರ್ತನೆಗಾರನು ಬರೆದುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.” (ಕೀರ್ತನೆ 130:3, 4) “ಸೃಷ್ಟಿಕರ್ತನು” ಇಷ್ಟೊಂದು ದಯಾಪರನೂ ಕ್ಷಮಿಸುವಾತನೂ ಆಗಿರುವುದು ಆತನ ಆರಾಧಕರಲ್ಲಿ ಆಳವಾದ ಗಣ್ಯತೆ ಹಾಗೂ ಪೂಜ್ಯಭಾವನೆಯನ್ನು ಪ್ರಚೋದಿಸುತ್ತದೆ.—ಯೆಶಾಯ 54:5-8.
ದೇವರ ಭಯವು ಒಳ್ಳೆಯದನ್ನು ಮಾಡುವಂತೆ ಮತ್ತು ಕೆಟ್ಟದ್ದೆಂದು ದೇವರು ಹೇಳುವ ವಿಷಯದಿಂದ ದೂರವಿರುವಂತೆಯೂ ನಮ್ಮನ್ನು ಪ್ರಚೋದಿಸುತ್ತದೆ. ನಮ್ಮ ಸ್ವರ್ಗೀಯ ತಂದೆಯೊಂದಿಗಿನ ನಮ್ಮ ಸಂಬಂಧವನ್ನು, ಒಬ್ಬ ಒಳ್ಳೆಯ ಮಾನವ ಪಿತನಿಗೆ ತನ್ನ ಮಕ್ಕಳೊಂದಿಗೆ ಇರುವ ಸಂಬಂಧಕ್ಕೆ ಹೋಲಿಸಬಹುದು. ರಸ್ತೆಯಲ್ಲಿ ಆಟವಾಡುವುದನ್ನು ತಮ್ಮ ತಂದೆ ನಿಷೇಧಿಸುವುದು ಏಕೆಂಬುದನ್ನು ಕೆಲವೊಮ್ಮೆ ಮಕ್ಕಳು ಮರೆತುಬಿಡಬಹುದು. ಆದರೂ, ವಾಹನಗಳ ಎದುರಿನಲ್ಲಿ ಹೋಗುತ್ತಿರುವ ಚೆಂಡನ್ನು ಬೆನ್ನಟ್ಟುವ ಪ್ರಚೋದನೆ ಅವರಿಗಾಗುವಾಗ, ತಮ್ಮ ತಂದೆಯ ನಿಷೇಧದ ಆಲೋಚನೆಯು ಅವರನ್ನು—ಬಹುಶಃ ಮರಣದಿಂದ ರಕ್ಷಿಸುತ್ತಾ—ತಡೆಯುತ್ತದೆ. ತದ್ರೀತಿಯಲ್ಲಿ, ವಯಸ್ಕನೊಬ್ಬನಲ್ಲಿರುವ ಯೆಹೋವನ ಭಯವು, ತನ್ನ ಸ್ವಂತ ಹಾಗೂ ಇತರರ ಜೀವಗಳನ್ನು ನಾಶಪಡಿಸಬಲ್ಲ ಕೃತ್ಯವನ್ನು ಮಾಡುವುದರಿಂದ ತಡೆಯಬಹುದು.—ಜ್ಞಾನೋಕ್ತಿ 14:27.
ದೇವರ ನ್ಯಾಯತೀರ್ಪಿಗೆ ಭಯಪಡುವುದು
ತದ್ವಿರುದ್ಧವಾಗಿ, ಯಾರ ಮನಸ್ಸಾಕ್ಷಿಯು ದೇವರನ್ನು ಅಪ್ರಸನ್ನಗೊಳಿಸುವುದರಿಂದ ಒಬ್ಬ ವ್ಯಕ್ತಿಯನ್ನು ತಡೆಯುವುದಿಲ್ಲವೊ ಅಂತಹವನಿಗೆ, ಬಹು ಭಿನ್ನವಾದ ವಿಧದಲ್ಲಿ ಭಯಪಡಲು ಕಾರಣವಿದೆ. ಮಾನವ ಸರಕಾರಗಳು ಪಾತಕಿಗಳನ್ನು ದಂಡಿಸುವಂತೆಯೇ, ದೇವರಿಗೆ ಉದ್ದೇಶಪೂರ್ವಕವಾದ, ಪಶ್ಚಾತ್ತಾಪಪಡದ ತಪ್ಪಿತಸ್ಥರ ವಿರುದ್ಧ ಕಾರ್ಯವೆಸಗಲು ಹಕ್ಕಿದೆ. ದುಷ್ಟತನಕ್ಕೆ ದೇವರು ನೀಡಿರುವ ತಾತ್ಕಾಲಿಕ ಅನುಮತಿಯು, ಕೆಲವರು ತಪ್ಪಾದ ಮಾರ್ಗಕ್ರಮದಲ್ಲಿ ಬೇರೂರುವಂತೆ ಮಾಡಿದೆ. ಆದರೆ ಬೇಗನೆ ಒಂದು ದಿನ ಆತನು ಭೂಮಿಯಿಂದ ಎಲ್ಲ ದುಷ್ಟ ಪ್ರಭಾವಗಳನ್ನು ತೆಗೆದುಬಿಡುವನೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. (ಕೀರ್ತನೆ 37:9, 10; ಪ್ರಸಂಗಿ 8:11; 1 ತಿಮೊಥೆಯ 5:24) ಪಶ್ಚಾತ್ತಾಪಪಡದ ದುಷ್ಟರಿಗೆ ದೇವರಿಂದ ಬರುವ ದಂಡನೆಯ ವಿಷಯವಾಗಿ ಭಯಪಡಲು ಕಾರಣವಿದೆ. ಆದರೂ, ಈ ರೀತಿಯ ಭಯವು, ಬೈಬಲು ಶಿಫಾರಸ್ಸು ಮಾಡುವ ರೀತಿಯ ಭಯವಲ್ಲ.
ಬದಲಿಗೆ, ಬೈಬಲು ಯೆಹೋವನ ಭಯವನ್ನು ಜೀವನದ ಸುಂದರ ವಿಷಯಗಳೊಂದಿಗೆ—ಹಾಡುವಿಕೆ, ಆನಂದ, ವಿಶ್ವಾಸ, ವಿವೇಕ, ದೀರ್ಘಾಯುಷ್ಯ, ಭರವಸೆ, ಏಳಿಗೆ, ನಿರೀಕ್ಷೆ, ಮತ್ತು ಶಾಂತಿ, ಇತ್ಯಾದಿ—ಸಂಬಂಧಿಸುತ್ತದೆ.a ನಾವು ಯೆಹೋವನ ಭಯದಲ್ಲಿ ನಡೆಯುತ್ತಾ ಇರುವಲ್ಲಿ, ಅಂತಹ ಆಶೀರ್ವಾದಗಳನ್ನು ಸದಾ ಅನುಭವಿಸುವೆವು.—ಧರ್ಮೋಪದೇಶಕಾಂಡ 10:12-14.
[ಪಾದಟಿಪ್ಪಣಿ]
a ನೋಡಿ ವಿಮೋಚನಕಾಂಡ 15:11; ಕೀರ್ತನೆ 34:11, 12; 40:3; 111:10; ಜ್ಞಾನೋಕ್ತಿ 10:27; 14:26; 22:4; 23:17, 18; ಅ. ಕೃತ್ಯಗಳು 9:31.
[ಪುಟ 27 ರಲ್ಲಿರುವ ಚಿತ್ರ ಕೃಪೆ]
Courtesy of Anglo-Australian Observatory, photograph by David Malin