ಪರ್ವತ ಗೊರಿಲ್ಲಗಳನ್ನು ಸಂದರ್ಶಿಸುವುದು
ಟಾನ್ಸೇನಿಯದ ಎಚ್ಚರ! ಸುದ್ದಿಗಾರರಿಂದ
ರುಆಂಡ ಮತ್ತು ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊವಿನ ಗಡಿಯಲ್ಲಿರುವ ಜ್ವಾಲಾಮುಖಿ ಕ್ಷೇತ್ರದಲ್ಲಿ, ಅವುಗಳಲ್ಲಿ ಸುಮಾರು 320 ಮಾತ್ರ ಜೀವಿಸುತ್ತವೆ. ಇನ್ನೂ 300 ಯುಗಾಂಡದ ಅಭೇದ್ಯ ಕಾಡಿನಲ್ಲಿ ವಾಸಿಸುತ್ತವೆ. ಅವು ಲೋಕದಲ್ಲೇ ಅತ್ಯಂತ ಅಪಾಯಕ್ಕೊಳಗಾಗಿರುವ ಸಸ್ತನಿ ಪ್ರಾಣಿಗಳಲ್ಲಿ ಒಂದಾದ ಪರ್ವತ ಗೊರಿಲ್ಲಗಳಾಗಿವೆ!
ಅಮೆರಿಕದ ಪ್ರಾಣಿಶಾಸ್ತ್ರಜ್ಞೆ ಡೈಆ್ಯನ್ ಫಾಸೀ, ಈ ಜೀವಿಗಳ ಗತಿಯ ಕುರಿತು ಸಾರ್ವಜನಿಕ ಚಿಂತೆಯನ್ನು ಕೆರಳಿಸಲು ಬಹಳಷ್ಟನ್ನು ಮಾಡಿದರು. ಪರ್ವತ ಗೊರಿಲ್ಲಗಳ ಕುರಿತು ಅಧ್ಯಯನ ನಡೆಸಲು ಫಾಸೀ, 1960ಗಳ ಕೊನೆಯ ಭಾಗದಲ್ಲಿ ಆಫ್ರಿಕಕ್ಕೆ ಬಂದರು. ಆ ಸಮಯದಲ್ಲಿ ಕಳ್ಳಬೇಟೆಯ ಕಾರಣ ಅವು ತ್ವರಿತಗತಿಯಲ್ಲಿ ಕಾಣೆಯಾಗುತ್ತಿದ್ದವು. ಆ ಧೈರ್ಯಶಾಲಿ ವಿಜ್ಞಾನಿಯು ವಿರುಂಗಾ ಪರ್ವತಗಳಲ್ಲಿ ಸಂನ್ಯಾಸಿಯಂತಹ ಬದುಕನ್ನು ನಡೆಸಿ, ಅಲ್ಲಿ ಜೀವಿಸಿದ ಗೊರಿಲ್ಲಗಳಿಗೆ ಬೇಗನೆ ಸ್ನೇಹಿತೆಯಾದರು. ಫಾಸೀ ತಮ್ಮ ಕಂಡುಹಿಡಿತಗಳನ್ನು ಪತ್ರಿಕೆಯ ಲೇಖನಗಳು ಮತ್ತು ಮಂಜಿನಲ್ಲಿ ಗೊರಿಲ್ಲಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಸಮಯವು ಗತಿಸಿದಂತೆ, ಅವರು ಕಳ್ಳಬೇಟೆಗಾರರ ವಿರುದ್ಧ ವಾಸ್ತವಿಕ ಯುದ್ಧವನ್ನು ನಡೆಸುತ್ತಾ, ತಮ್ಮ ತುಪ್ಪುಳು ಮಿತ್ರರನ್ನು ಸಂರಕ್ಷಿಸಬೇಕೆಂಬ ಅವರ ನಿರ್ಧಾರವು ದೃಢವಾಗುತ್ತಾ ಹೋಯಿತು. ಆದರೆ, ಅವರು ತಮ್ಮ ಸ್ವಂತ ಚಳುವಳಿಯ ಆಹುತಿಯಾಗಿ, 1985ರಲ್ಲಿ ಒಬ್ಬ ಅಜ್ಞಾತ ಆಕ್ರಮಣಕಾರನಿಂದ ಕೊಲ್ಲಲ್ಪಟ್ಟರು.
ಈ ಶಾಂತವಾದ ಜೀವಿಗಳನ್ನು ಸ್ವತಃ ನೋಡುವ ನಿರೀಕ್ಷೆಯಿಂದ ಪ್ರಚೋದಿತರಾಗಿ, 1993ರಲ್ಲಿ ನನ್ನ ಹೆಂಡತಿ ಮತ್ತು ನಾನು ಗೊರಿಲ್ಲ ಇರುನೆಲೆಯನ್ನು ಪ್ರವೇಶಿಸುವ ಸಾಹಸಮಾಡಿದೆವು. ನಮ್ಮ ಸಾಹಸಕಾರ್ಯವನ್ನು ನಾವು ಪುನಃ ಅನುಭವಿಸುವಂತೆ ದಯವಿಟ್ಟು ಅನುಮತಿಸಿರಿ.
ನಮ್ಮ ಗೈಡ್ಗಳು ನಮ್ಮನ್ನು, 3,700 ಮೀಟರುಗಳಷ್ಟು ಎತ್ತರವಾದ ವೀಸೋಕೆ ಜ್ವಾಲಾಮುಖಿಯ ಬುಡದಿಂದ ರುಆಂಡದಲ್ಲಿರುವ ವಾಲ್ಕೆನೋಸ್ ನ್ಯಾಷನಲ್ ಪಾರ್ಕಿನ ಅಂಚಿನ ವರೆಗಿನ ಒಂದು ತಾಸಿನ ಆರೋಹಣಕ್ಕೆ ಕರೆದುಕೊಂಡು ಹೋದಂತೆ ನಮ್ಮ ಸಾಹಸಕಾರ್ಯವು ಆರಂಭಗೊಳ್ಳುತ್ತದೆ. ನಾವು ಅಗತ್ಯವಾದ ವಿರಾಮವನ್ನು ತೆಗೆದುಕೊಳ್ಳುತ್ತಿರುವಾಗ, ಗೊರಿಲ್ಲಗಳ ಸುತ್ತಲೂ ನಾವು ಹೇಗೆ ವರ್ತಿಸಬೇಕು ಎಂಬುದನ್ನು ನಮ್ಮ ಗೈಡ್ಗಳು ವಿವರಿಸುತ್ತಾರೆ. ಈ ವಿಶೇಷ ಗುಂಪಿನ ಪ್ರಾಣಿಗಳನ್ನು ಸಂದರ್ಶಿಸಲು, ಪ್ರತಿದಿನ ಎಂಟು ಸಂದರ್ಶಕರು ಮಾತ್ರ ಅನುಮತಿಸಲ್ಪಡುತ್ತಾರೆಂದು ನಮಗೆ ಹೇಳಲಾಯಿತು. ಗೊರಿಲ್ಲಗಳು ರೋಗಗಳಿಗೆ ಒಡ್ಡಲ್ಪಡುವುದರ ಗಂಡಾಂತರವನ್ನು ಇದು ಕಡಿಮೆಗೊಳಿಸುತ್ತದೆ ಮತ್ತು ವರ್ತನಾ ಕ್ಷೋಭೆಗಳನ್ನೂ ತಡೆಯುತ್ತದೆ.
“ನಾವು ಕಾಡನ್ನು ಪ್ರವೇಶಿಸಿದ ಕೂಡಲೇ, ತಗ್ಗಿದ ದನಿಯಲ್ಲಿ ಮಾತಾಡಬೇಕು” ಎಂದು ಒಬ್ಬ ಗೈಡ್ ನಮಗೆ ಜ್ಞಾಪಕಹುಟ್ಟಿಸುತ್ತಾನೆ. “ಇದು ಕಾಡಿನಲ್ಲಿರುವ ಇತರ ಪ್ರಾಣಿಪಕ್ಷಿಗಳನ್ನು ಗಮನಿಸಲು ನಮಗೆ ಸಹಾಯ ಮಾಡುವುದು. ಏಕೆಂದರೆ ಪರ್ವತ ಗೊರಿಲ್ಲಗಳಲ್ಲದೆ, ಸ್ವರ್ಣ ಕೋತಿಗಳು, ಡೈಕರ್ಗಳು, ಪೊದೆಜಿಂಕೆಗಳು, ಆಫ್ರಿಕದ ಆನೆಗಳು ಮತ್ತು ದಕ್ಷಿಣ ಆಫ್ರಿಕದ ಕೋಣಗಳನ್ನೂ ನಾವು ನೋಡಬಹುದು.”
ಉದ್ಯಾನವನದಲ್ಲಿ ಕುಟುಕುಗೂದಲಿರುವ ತುರುಚಿಯ ಗಿಡಗಳು ಮತ್ತು ಇರುವೆಗಳು ಇವೆಯೆಂದು ಮತ್ತು ಮಂಜುಗವಿದ ಹಾಗೂ ಕೆಸರಾದ ಕಾಡಿನಲ್ಲಿ ನಮಗೆ ನಡೆಯಬೇಕಾಗಬಹುದೆಂದೂ ನಮಗೆ ತಿಳಿಸಲಾಗುತ್ತದೆ. ನನ್ನ ಹೆಂಡತಿ ಮತ್ತು ನಾನು ಪರಸ್ಪರ ನೋಡಿಕೊಳ್ಳುತ್ತೇವೆ. ನಾವು ಅದಕ್ಕಾಗಿ ಸುಸಜ್ಜಿತರಾಗಿಲ್ಲ! ಆದರೆ ಮಳೆಯಂಗಿ ಮತ್ತು ಬೂಟುಗಳನ್ನು ನಮಗೆ ಎರವಲಾಗಿ ಕೊಡುವ ಮೂಲಕ ಆ ಸ್ನೇಹಪರ ಗೈಡುಗಳು ನಮಗೆ ಸಹಾಯ ಮಾಡುತ್ತಾರೆ.
ಗೊರಿಲ್ಲಗಳು ಮಾನವ ರೋಗಗಳಿಗೆ ಬಹಳ ಬೇಗನೆ ಈಡಾಗುತ್ತವೆಂದು ಮತ್ತು ಅವುಗಳನ್ನು ಸಂರಕ್ಷಿಸುವ ಸಲುವಾಗಿ, ಅಸ್ವಸ್ಥನಾಗಿರುವ ಇಲ್ಲವೆ ತನಗೊಂದು ಸಾಂಕ್ರಾಮಿಕ ರೋಗವಿದೆಯೆಂದು ತಿಳಿದಿರುವ ಯಾವನೇ ವ್ಯಕ್ತಿಯು ಹಿಂದುಳಿಯಬೇಕೆಂದು ನಮ್ಮ ಗೈಡ್ ಅನಂತರ ವಿವರಿಸುತ್ತಾನೆ. “ಗೊರಿಲ್ಲಗಳೊಂದಿಗಿರುವಾಗ ಕೆಮ್ಮುವ ಇಲ್ಲವೆ ಸೀನುವ ಪ್ರಚೋದನೆ ನಿಮಗಾಗುವುದಾದರೆ, ದಯವಿಟ್ಟು ಪ್ರಾಣಿಗಳಿಂದ ಮುಖ ತಿರುಗಿಸಿ, ನಿಮ್ಮ ಮೂಗು ಹಾಗೂ ಬಾಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿರಿ,” ಎಂಬುದಾಗಿ ಗೈಡ್ಗಳಲ್ಲಿ ಒಬ್ಬನು ಹೇಳುತ್ತಾನೆ. “ಜ್ಞಾಪಕದಲ್ಲಿಡಿ! ನಾವು ಗೊರಿಲ್ಲಗಳ ಮಂಜುತುಂಬಿದ ಬೀಡಿನಲ್ಲಿ ಅತಿಥಿಗಳಾಗಿದ್ದೇವೆ.”
ಅವುಗಳನ್ನು ಸ್ಪರ್ಶಿಸುವಷ್ಟು ಹತ್ತಿರ!
ಆರೋಹಣವು ಕಡಿದಾಗುತ್ತಾ ಹೋಗುತ್ತದೆ. ನಾವು 3,000 ಮೀಟರುಗಳ ಎತ್ತರವನ್ನು ತಲಪುತ್ತೇವೆ. ಗಾಳಿಯು ವಿರಳವಾಗಿದೆ, ಇದು ಉಸಿರಾಡುವುದನ್ನು ಕಷ್ಟಕರವಾದದ್ದಾಗಿ ಮಾಡುತ್ತದೆ, ಮತ್ತು ಕಾಲುಹಾದಿಗಳು ಇಕ್ಕಟ್ಟಾಗಿವೆ. ಆದರೆ ನಾವು, ಪಾಚಿ, ಜರೀ ಗಿಡಗಳು, ಮತ್ತು ಆರ್ಕಿಡ್ಗಳ ಹುಲುಸಾದ ಬೆಳವಣಿಗೆಯಿಂದ ತುಂಬಿರುವ, ಸಮತಲವಾಗಿ ಹರಡಿರುವ ಅದರ ಕೊಂಬೆಗಳೊಂದಿಗೆ ಹಜೀನೀಯ ಮರದ ಸೌಂದರ್ಯವನ್ನು ಆಸ್ವಾದಿಸಸಾಧ್ಯವಿದೆ. ಅದು ಕಾಡಿಗೆ ಪ್ರಮೋದವನಸದೃಶ ಸೌಂದರ್ಯವನ್ನು ಕೊಡುತ್ತದೆ.
ಗೊರಿಲ್ಲಗಳು ತಾಜಾ ಆಹಾರಕ್ಕಾಗಿ ಹುಡುಕುತ್ತಾ ಸದಾ ಚಲಿಸುತ್ತಿರುತ್ತವೆಯಾದರೂ, ಹಿಂದಿನ ದಿನ ಗೊರಿಲ್ಲಗಳನ್ನು ಎಲ್ಲಿ ನೋಡಿದರೋ ಆ ಸ್ಥಳಕ್ಕಾಗಿ ಗೈಡ್ಗಳು ಹುಡುಕಲಾರಂಭಿಸುತ್ತಾರೆ. “ಅಗೋ, ಅಲ್ಲಿ ನೋಡಿ!” ಎಂದು ಯಾರೊ ಉದ್ಗರಿಸುತ್ತಾರೆ. ಮೆತ್ತನೆಯ ಸಸ್ಯರಾಶಿಯಲ್ಲಿ ದಪ್ಪವಾಗಿ ಹೆಣೆಯಲ್ಪಟ್ಟಿರುವಂತಹದ್ದು, ಸಿಲ್ವರ್ಬ್ಯಾಕ್ ಗೊರಿಲ್ಲದ ಹಾಸಿಗೆ ಇಲ್ಲವೆ ಗೂಡಾಗಿದೆ.
“ಅವನನ್ನು ಊಮೂಗೋಮೆ ಎಂದು ಕರೆಯಲಾಗುತ್ತದೆ” ಎಂಬುದಾಗಿ ಗೈಡ್ ವಿವರಿಸುತ್ತಾನೆ. “ಒಂದು ಗಂಡು ಗೊರಿಲ್ಲ ಸುಮಾರು 14 ವರ್ಷ ವಯಸ್ಸಿನದ್ದಾಗುವಾಗ, ಅದರ ಬೆನ್ನು ಬೆಳ್ಳಿಯಂತೆ ಬಿಳಿಯಾಗುತ್ತದೆ. ಆಗ ಅವನು ಆ ಗುಂಪಿನ ನಾಯಕನಾಗಿ ಪರಿಗಣಿಸಲ್ಪಡುತ್ತಾನೆ. ಸಿಲ್ವರ್ಬ್ಯಾಕ್ ಮಾತ್ರ ಎಲ್ಲ ಹೆಣ್ಣು ಗೊರಿಲ್ಲಗಳನ್ನು ಕೂಡುತ್ತದೆ. ಕೂಡಲು ಪ್ರಯತ್ನಿಸುವ ಚಿಕ್ಕ ಗಂಡು ಗೊರಿಲ್ಲಗಳು ಕೂಡಲೇ ತಿರಸ್ಕರಿಸಲ್ಪಡುತ್ತವೆ! ಹಾಗಿದ್ದರೂ, ಸಿಲ್ವರ್ಬ್ಯಾಕನ್ನು ಕೊಲ್ಲುವುದರಲ್ಲಿ ಒಬ್ಬ ಪ್ರತಿಸ್ಪರ್ಧಿ ಸಫಲನಾದರೆ, ಅವನು ಇಡೀ ಸಂತತಿಯನ್ನು ಸಹ ಕೊಲ್ಲುತ್ತಾನೆ. ತದನಂತರ, ಆ ಹೊಸ ನಾಯಕನು ಅಧಿಕಾರ ವಹಿಸಿಕೊಂಡು, ಗುಂಪಿನಲ್ಲಿರುವ ಹೆಣ್ಣುಗಳೊಂದಿಗೆ ಜೊತೆಗೂಡಿ ಸಂತತಿಯನ್ನು ಉತ್ಪಾದಿಸುತ್ತಾನೆ.”
ಒಂದು ಸುಂದರವಾದ ಬಿದಿರಿನ ಕಾಡಿನೊಳಕ್ಕೆ ನಾವು ಗೈಡ್ಗಳನ್ನು ಹಿಂಬಾಲಿಸಿದಂತೆ, “ಒಂದು ಗೊರಿಲ್ಲ ಎಷ್ಟು ಸಮಯದ ವರೆಗೆ ಜೀವಿಸಬಲ್ಲದು?” ಎಂದು ನಮ್ಮ ಗುಂಪಿನಲ್ಲಿರುವ ಯಾರೊ ಒಬ್ಬರು ಕೇಳುತ್ತಾರೆ.
“ಸುಮಾರು 40 ವರ್ಷಗಳ ವರೆಗೆ” ಎಂಬ ಶಾಂತವಾದ ಉತ್ತರವು ದೊರಕುತ್ತದೆ.
ತುಂಬುದನಿಯ ಗುರುಗುಟ್ಟುವಿಕೆಯ ಶಬ್ದವನ್ನು ಕೇಳಿದಾಗ ಯಾರೊ “ಸುಮ್ಮನಿರಿ!” ಎಂದು ಪಿಸುಗುಟ್ಟುತ್ತಾರೆ. “ಅದೇನು? ಒಂದು ಗೊರಿಲ್ಲವೊ?” ಇಲ್ಲ, ನಮ್ಮ ಗೈಡುಗಳಲ್ಲಿ ಒಬ್ಬನು, ಒಂದು ಪ್ರತ್ಯುತ್ತರವನ್ನು ಕೆರಳಿಸಲು ಪ್ರಯತ್ನಿಸುತ್ತಾ ಗೊರಿಲ್ಲದಂತೆ ಗುರುಗುಟ್ಟುತ್ತಿದ್ದಾನೆ. ನಾವು ತೀರ ಹತ್ತಿರವಿರಬೇಕು!
ನಿಶ್ಚಯವಾಗಿಯೂ, ನಮ್ಮಿಂದ ಕೇವಲ 5 ಮೀಟರುಗಳಷ್ಟು ದೂರದಲ್ಲಿ ಸುಮಾರು 30 ಗೊರಿಲ್ಲಗಳಿವೆ! ನೆಲದ ಮೇಲೆ ಕುಳಿತುಕೊಳ್ಳುವಂತೆ ಮತ್ತು ಸುಮ್ಮನಿರುವಂತೆ ನಮಗೆ ಹೇಳಲಾಗುತ್ತದೆ. “ಅವುಗಳ ಕಡೆಗೆ ಬೆರಳು ತೋರಿಸಬೇಡಿ,” ಎಂಬುದಾಗಿ ಒಬ್ಬ ಗೈಡ್ ಬೇಡಿಕೊಳ್ಳುತ್ತಾನೆ, “ಏಕೆಂದರೆ, ಅವುಗಳ ಕಡೆಗೆ ನೀವು ಏನೊ ಎಸೆಯುತ್ತಿದ್ದೀರೆಂದು ಅವು ನೆನಸಬಹುದು. ದಯವಿಟ್ಟು ಕೂಗಾಡಬೇಡಿ. ಛಾಯಾಚಿತ್ರಗಳನ್ನು ತೆಗೆಯುವಾಗ, ನಿಧಾನವಾಗಿಯೂ ಜಾಗರೂಕವಾಗಿಯೂ ಚಲಿಸಿರಿ, ಮತ್ತು ಫ್ಲ್ಯಾಶನ್ನು ಉಪಯೋಗಿಸಬೇಡಿ.”
ನಾವು ಅವುಗಳನ್ನು ಸ್ಪರ್ಶಿಸುವಷ್ಟು ಹತ್ತಿರದಲ್ಲಿದ್ದೇವೆ! ಆದರೆ ಯಾರಾದರು ಹಾಗೆ ಮಾಡುವ ಮೊದಲು, “ಅವುಗಳನ್ನು ಮುಟ್ಟಬೇಡಿ!” ಎಂಬುದಾಗಿ ಒಬ್ಬ ಗೈಡ್ ಪಿಸುಗುಟ್ಟುತ್ತಾನೆ. ಅದನ್ನು ಹೇಳಿಯಾದ ಕೂಡಲೇ, ಒಂದೆರಡು ಚಿಕ್ಕ ಗೊರಿಲ್ಲಗಳು ನಮ್ಮನ್ನು ಪರಿಶೀಲಿಸಲು ಹತ್ತಿರ ಬರುತ್ತವೆ. ಒಂದು ಚಿಕ್ಕ ಕೊಂಬೆಯಿಂದ ಗೈಡು ಅವುಗಳನ್ನು ಮೃದುವಾಗಿ ಹೊಡೆಯುತ್ತಾನೆ, ಮತ್ತು ಆ ಕುತೂಹಲಕಾರಿ ಎಳೆಯ ಗೊರಿಲ್ಲಗಳು ಚಿಕ್ಕ ಮಕ್ಕಳಂತೆ ಗುದ್ದಾಡುತ್ತಾ ಇಳಿಜಾರಿನ ಕೆಳಗೆ ಉರುಳುತ್ತವೆ. ಆಟವು ತೀರ ಒರಟಾದಾಗ, “ಅಮ್ಮ” ಅಡ್ಡಬರುತ್ತಾಳೆ.
ಸಿಲ್ವರ್ಬ್ಯಾಕ್ ನಮ್ಮನ್ನು ದೂರದಿಂದ ನೋಡುತ್ತಿದ್ದಾನೆ. ಇದ್ದಕ್ಕಿದ್ದಹಾಗೆ, ಅವನು ನಮ್ಮ ಕಡೆಗೆ ಚಲಿಸಿ, ನಾವು ಕುಳಿತುಕೊಂಡಿರುವ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ಕುಳಿತುಕೊಳ್ಳುತ್ತಾನೆ. ಅವನು ಬೃಹದಾಕಾರವುಳ್ಳವನಾಗಿದ್ದು, ಸುಮಾರು 200 ಕಿಲೊಗ್ರಾಮ್ಗಳಷ್ಟು ತೂಕದವನಾಗಿರಬೇಕು! ಅವನು ನಮ್ಮ ಮೇಲೆ ಒಂದು ಕಣ್ಣಿಟ್ಟಿರುವುದಾದರೂ, ನಮ್ಮ ಕಡೆಗೆ ಹೆಚ್ಚಿನ ಗಮನಕೊಡಲಾಗದಷ್ಟು ತಿನ್ನುವುದರಲ್ಲಿ ತೀರ ಕಾರ್ಯಮಗ್ನನಾಗಿದ್ದಾನೆ. ವಾಸ್ತವದಲ್ಲಿ, ತಿನ್ನುವುದೇ ಗೊರಿಲ್ಲದ ಒಂದು ಮುಖ್ಯ ಚಟುವಟಿಕೆಯಾಗಿದೆ! ಒಂದು ಸಿಲ್ವರ್ಬ್ಯಾಕ್ ದಿನಕ್ಕೆ 30 ಕಿಲೊಗ್ರಾಮ್ಗಳಷ್ಟು ಆಹಾರವನ್ನು ತಿನ್ನಬಹುದು. ಮತ್ತು ಗುಂಪಿನಲ್ಲಿರುವ ಪ್ರತಿಯೊಂದು ಗೊರಿಲ್ಲ ಬೆಳಗ್ಗಿನಿಂದ ಸಂಜೆಯ ವರೆಗೆ ಆಹಾರಕ್ಕಾಗಿ ಹುಡುಕುವುದರಲ್ಲಿ ಕಾರ್ಯಮಗ್ನವಾಗಿರುತ್ತದೆ. ಕೆಲವೊಮ್ಮೆ ಅವುಗಳು ಕಂಡುಕೊಂಡಿರುವ “ಒಳ್ಳೆಯ ಆಹಾರ”ಗಳಿಗಾಗಿ ಹೊಡೆದಾಡುವುದನ್ನು ಒಬ್ಬನು ನೋಡಸಾಧ್ಯವಿದೆ.
ಅವುಗಳ ಅಚ್ಚುಮೆಚ್ಚಿನ ಆಹಾರವು, ದೈತ್ಯ ಸಿನೀಷೀಯೊ ಮರದ ತಿರುಳಾಗಿದೆ. ಅವು ಟೇಪ್ ಹುಲ್ಲು (ಸೆಲೆರಿ), ಕೆಲವೊಂದು ಗಿಡಗಳ ಬೇರುಗಳು, ಮತ್ತು ಬಿದಿರಿನ ಚಿಗುರುಗಳನ್ನೂ ಬಹಳವಾಗಿ ಇಷ್ಟಪಡುತ್ತವೆ. ಕೆಲವೊಮ್ಮೆ ಬಿದಿರಿನ ಚಿಗುರುಗಳನ್ನು ಮುಳ್ಳುಗಿಡ, ತುರುಚಿಯ ಗಿಡ, ಮತ್ತು ಬೆಡ್ಸ್ಟ್ರಾ ಗಿಡಗಳ ಹಸಿರು ಎಲೆಗಳು ಮತ್ತು ವಿವಿಧ ಬೇರುಗಳು ಹಾಗೂ ಬಳ್ಳಿಗಳೊಂದಿಗೆ ಸೇರಿಸುತ್ತಾ, ಅವು “ಸ್ಯಾಲಡ್” ಅನ್ನೂ ಮಾಡುತ್ತವೆ. “ಗೊರಿಲ್ಲಗಳು ಹಿಡಿದು ಸ್ವಚ್ಛಮಾಡುವ ತುರುಚಿಯ ಗಿಡಗಳಿಂದ ಕುಟುಕಲ್ಪಡುವುದಿಲ್ಲವೇಕೆ?” ಎಂದು ಯಾರೊ ಒಬ್ಬರು ಕೇಳುತ್ತಾರೆ. “ತಮ್ಮ ಅಂಗೈಯ ಮೇಲೆ ಅವುಗಳಿಗೆ ದಪ್ಪ ಪದರವುಳ್ಳ ಚರ್ಮವಿದೆ,” ಎಂಬುದಾಗಿ ಒಬ್ಬ ಗೈಡ್ ವಿವರಿಸುತ್ತಾನೆ.
ನಾವು ಈ ಶಾಂತಿಭರಿತ ದೃಶ್ಯದಲ್ಲಿ ಆನಂದಿಸುತ್ತಿರುವಾಗ, ಹಠಾತ್ತಾಗಿ ಆ ಬೃಹದಾಕಾರದ ಗಂಡು ತನ್ನ ಹಿಂಗಾಲುಗಳ ಮೇಲೆ ನಿಂತು, ತನ್ನ ಎದೆಯನ್ನು ತನ್ನ ಮುಷ್ಟಿಗಳಿಂದ ಹೊಡೆದುಕೊಂಡು, ಭಯಾನಕವಾಗಿ ಚೀರುತ್ತದೆ! ಗೈಡ್ಗಳಲ್ಲಿ ಒಬ್ಬನ ಕಡೆಗೆ ರಭಸದಿಂದ ನುಗ್ಗಿ, ಅವನನ್ನು ಸಮೀಪಿಸುವ ಮುಂಚೆ ಏಕಾಏಕಿಯಾಗಿ ನಿಂತುಬಿಡುತ್ತಾನೆ. ಅವನು ಗೈಡನ್ನು ಉಗ್ರವಾಗಿ ದಿಟ್ಟಿಸಿನೋಡುತ್ತಾನೆ! ಆದರೆ ನಮ್ಮ ಗೈಡ್ ಹೆದರುವುದಿಲ್ಲ. ಬದಲಿಗೆ, ಅವನು ಕುಳಿತುಕೊಂಡು, ಗುರುಗುಟ್ಟಿ, ನಿಧಾನವಾಗಿ ಹಿಮ್ಮೆಟ್ಟುತ್ತಾನೆ. ಸಿಲ್ವರ್ಬ್ಯಾಕ್ ತನ್ನ ಬಲ ಹಾಗೂ ಶಕ್ತಿಯನ್ನು ನಮಗೆ ತೋರಿಸಲು ಬಯಸಿದನಷ್ಟೇ ಎಂಬಂತೆ ತೋರುತ್ತದೆ. ನಿಶ್ಚಯವಾಗಿಯೂ ಅವನು ಅದರಲ್ಲಿ ಸಫಲನಾದನು!
ಅಲ್ಲಿಂದ ಹೊರಡಲು ಸಿದ್ಧರಾಗುವಂತೆ ಗೈಡ್ಗಳು ನಮಗೆ ಸೂಚನೆ ನೀಡುತ್ತಾರೆ. “ಮಂಜಿನಲ್ಲಿ” ಅತಿಥಿಗಳಂತೆ, ನಾವು ಈ ಅದ್ಭುತವಾದ, ಶಾಂತಿಭರಿತ ಜೀವಿಗಳೊಂದಿಗೆ ಒಂದು ತಾಸಿಗಿಂತಲೂ ಸ್ವಲ್ಪ ಹೆಚ್ಚಿನ ಸಮಯವನ್ನು ವ್ಯಯಿಸಿದ್ದೇವೆ. ಸಂಕ್ಷಿಪ್ತವಾಗಿದ್ದರೂ, ನಮ್ಮ ಸಂದರ್ಶನವು ಮರೆಯಲಸಾಧ್ಯವಾದ ಅನುಭವಗಳಲ್ಲಿ ಒಂದಾಗಿದೆ. ಬರಲಿರುವ ಹೊಸ ಲೋಕದ—ಎಲ್ಲಿ ಮನುಷ್ಯನೂ ಪ್ರಾಣಿಯೂ ಶಾಶ್ವತವಾಗಿ ಒಬ್ಬರು ಇನ್ನೊಬ್ಬರೊಂದಿಗೆ ಶಾಂತಿಯಲ್ಲಿರುವರೊ—ಆ ಬೈಬಲಿನ ವಾಗ್ದಾನದ ಕುರಿತು ನಾವು ಯೋಚಿಸದೆ ಇರಸಾಧ್ಯವಿಲ್ಲ!—ಯೆಶಾಯ 11:6-9.
[ಪುಟ 24ರಲ್ಲಿರುವಚಿತ್ರ]
ಪರ್ವತ ಗೊರಿಲ್ಲದ ಶ್ರೇಣಿ
ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ
ಲೇಕ್ ಕಿವೂ
ಯುಗಾಂಡ
ರುಆಂಡ
ಆಫ್ರಿಕ
ವಿಸ್ತರಿಸಲ್ಪಟ್ಟ ಕ್ಷೇತ್ರ
[ಪುಟ 24 ರಲ್ಲಿರುವ ಚಿತ್ರ ಕೃಪೆ]
Mountain High Maps® Copyright © 1997 Digital Wisdom, Inc.