ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 4/8 ಪು. 3
  • ಒತ್ತಡ—“ಮೌನ ಹಂತಕ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡ—“ಮೌನ ಹಂತಕ”
  • ಎಚ್ಚರ!—1998
  • ಅನುರೂಪ ಮಾಹಿತಿ
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
  • ಒತ್ತಡ ಅಂದರೇನು?
    ಎಚ್ಚರ!—2020
  • ಒತ್ತಡ—“ನಿಧಾನವಾಗಿ ಕೊಲ್ಲುವ ವಿಷ”
    ಎಚ್ಚರ!—1998
ಇನ್ನಷ್ಟು
ಎಚ್ಚರ!—1998
g98 4/8 ಪು. 3

ಒತ್ತಡ—“ಮೌನ ಹಂತಕ”

“ನಾನು ಗಮನಿಸಿದ ಮೊದಲ ರೋಗಸೂಚನೆ ತೀವ್ರ ಒತ್ತಡ (ಸ್ಟ್ರೆಸ್‌) ಆಗಿತ್ತು. ಅದು ನನ್ನ ಎದೆಯೆಲುಬಿನಲ್ಲಿ ಆರಂಭಗೊಂಡು, ನನ್ನ ಭುಜಗಳಿಗೆ, ಕತ್ತು ಮತ್ತು ದವಡೆಗಳಿಗೆ ಹರಡಿ, ನನ್ನ ಎರಡೂ ತೋಳುಗಳ ಮೂಲಕ ಪುನಃ ಕೆಳಗಿಳಿಯಿತು. ಆನೆಯೊಂದು ನನ್ನ ಎದೆಯ ಮೇಲೆ ಧಪ್ಪನೆ ಬಿತ್ತೋ ಎಂಬಂತೆ ಅದಿತ್ತು. ನನಗೆ ಉಸಿರಾಡುವುದೇ ಕಷ್ಟಕರವಾಗಿತ್ತು. ನಾನು ಬೆವರತೊಡಗಿದೆ. ನನಗೆ ಹೊಟ್ಟೆ ಸೆಡೆತ ಮತ್ತು ಆ ಬಳಿಕ ವಿಪರೀತ ಪಿತ್ತೋದ್ರೇಕ ಶುರುವಾಯಿತು. . . . ತರುವಾಯ, ನರ್ಸ್‌ಗಳು ನನ್ನನ್ನು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಲು ಸಹಾಯಮಾಡಿದಾಗ, ನಾನು ಬೆರಗಾಗಿ, ‘ನನಗೊಂದು ಹೃದಯಾಘಾತವಾಗುತ್ತಿದೆ’ ಎಂದು ಹೇಳಿದ ನೆನಪು ನನಗಿದೆ. ನನಗೆ ನಲವತ್ತನಾಲ್ಕು ವರ್ಷಪ್ರಾಯವಾಗಿತ್ತು.”

ತಮ್ಮ ಒತ್ತಡದಿಂದ ಶಕ್ತಿಗೆ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಡಾ. ರಾಬರ್ಟ್‌ ಎಸ್‌. ಎಲ್ಯಟ್‌, 20 ವರ್ಷಗಳ ಹಿಂದೆ ಆಗಿದ್ದ, ಮರಣಸಾಮೀಪ್ಯದ ಅನುಭವವನ್ನು ವರ್ಣಿಸುತ್ತಾರೆ. ಹಾಸ್ಯಕರ ವಿಷಯವೇನೆಂದರೆ, ಆ ದಿನದ ಮೊದಲಲ್ಲಿ ಅವರು ಒಂದು ಸಮ್ಮೇಳನಕ್ಕೆ ಹಾಜರಾಗಿ, ಹೃದಯಾಘಾತಗಳ ಕುರಿತು ಒಂದು ಭಾಷಣವನ್ನು ಕೊಟ್ಟಿದ್ದರು. ಹಠಾತ್ತಾಗಿ, ಹೃದಯ ವಿಜ್ಞಾನ ತಜ್ಞರಾಗಿದ್ದ ಡಾ. ಎಲ್ಯಟ್‌, ಅವರೇ ಹೇಳುವಂತೆ, “ಪರಿಧಮನಿ ಚಿಕಿತ್ಸಾಲಯದಲ್ಲಿ, ತಾವು ವೈದ್ಯರಾಗಿರುವ ಬದಲು, ತಮ್ಮನ್ನು ರೋಗಿಯಾಗಿ” ಕಂಡುಕೊಂಡರು. ತಮ್ಮ ಈ ಅನಿರೀಕ್ಷಿತ ಬಿಕ್ಕಟ್ಟಿಗೆ ಯಾವುದು ಕಾರಣವೆಂದು ಅವರು ಹೇಳುತ್ತಾರೆ? “ಒಳಗಿಂದ ಒತ್ತಡದ ಸಲುವಾಗಿ ಆಗುತ್ತಿದ್ದ ನನ್ನ ಸ್ವಂತ ಶಾರೀರಿಕ ಪ್ರತಿಕ್ರಿಯೆಗಳು ನನ್ನನ್ನು ಕೊಲ್ಲುತ್ತಿದ್ದವು” ಎನ್ನುತ್ತಾರೆ ಡಾ. ಎಲ್ಯಟ್‌.a

ಡಾ. ಎಲ್ಯಟ್‌ರ ಅನುಭವವು ಚಿತ್ರಿಸುವಂತೆ, ಒತ್ತಡವು ಜೀವಾಪಾಯ ಪರಿಣಾಮಗಳನ್ನು ಹೊಂದಿರಬಲ್ಲದು. ಅಮೆರಿಕದಲ್ಲಿ ಇದನ್ನು ಮರಣದ ಕೆಲವು ಪ್ರಮುಖ ಕಾರಣಗಳಿಗೆ ಸಂಬಂಧಿಸಲಾಗಿದೆ ಎಂಬುದು ನಿಶ್ಚಯ. ಒತ್ತಡದ ಪರಿಣಾಮಗಳು ಸಮಯವು ದಾಟಿದಂತೆ ಒಟ್ಟುಗೂಡುತ್ತ ಹೋಗಿ, ಬಳಿಕ ಎಚ್ಚರಿಕೆಯಿಲ್ಲದೆ ಮೇಲೆದ್ದುಬರಬಲ್ಲವು. ಹೀಗೆ ಸಕಾರಣದಿಂದಾಗಿಯೆ, ಒತ್ತಡವನ್ನು “ಮೌನ ಹಂತಕ”ನೆಂದು ಕರೆಯಲಾಗಿದೆ.

ಆಶ್ಚರ್ಯಕರವಾಗಿ, ಎ ಟೈಪಿನ ವ್ಯಕ್ತಿತ್ವಗಳು—ಅಸಹನೆ, ಜಗಳವಾಡುವ ಮನೋಭಾವ ಮತ್ತು ಪೈಪೋಟಿತನ ಗುಣಗಳು—ಇರುವವರು ಮಾತ್ರ ಒತ್ತಡ ಸಂಬಂಧಿತ ವಿಪತ್ತುಗಳಿಗೆ ಸುಲಭಭೇದ್ಯರಾಗಿರುವುದಿಲ್ಲ. ಶಾಂತ ಸ್ವಭಾವಿಗಳೆಂದು ತೋರುವವರೂ—ವಿಶೇಷವಾಗಿ ಅವರ ಶಾಂತಭಾವವು, ಪ್ರೆಷರ್‌ ಕುಕ್ಕರ್‌ನ ಮೇಲಿರುವ ಬಿಗಿಯಾಗಿರದ ಮುಚ್ಚಳದಂತೆ ಕೇವಲ ದುರ್ಬಲ ಮುಖಭಾಗವಾಗಿರುವಲ್ಲಿ—ಅಪಾಯಕ್ಕೊಳಗಾಗಬಹುದು. ತನ್ನ ಸಂಬಂಧದಲ್ಲಿ ಇದು ಸತ್ಯವೆಂದು ಡಾ. ಎಲ್ಯಟ್‌ ಭಾವಿಸುತ್ತಾರೆ. ಈಗ ಅವರು ಇತರರಿಗೆ ಎಚ್ಚರಿಕೆ ಕೊಡುವುದು: “ಇಷ್ಟು ವರ್ಷಗಳ ಕಾಲ ನಿಮ್ಮ ಹೃದಯಕ್ಕೆ ಟೈಮ್‌ ಬಾಂಬ್‌ ಕಟ್ಟಲ್ಪಟ್ಟಿತ್ತೆಂಬ ಅರಿವೇ ಇಲ್ಲದವರಾಗಿ, ನೀವು ಸಹ ಇಂದೇ ಸತ್ತುಹೋಗಸಾಧ್ಯವಿದೆ.”

ಆದರೆ, ಮುಂದಿನ ಲೇಖನವು ತಿಳಿಸುವಂತೆ, ಒತ್ತಡಕ್ಕೆ ಸಂಬಂಧಿಸಿರುವ ಸಮಸ್ಯೆಗಳು, ಕೇವಲ ಹೃದಯಾಘಾತ ಮತ್ತು ಹಠಾತ್ತಾದ ಮರಣಗಳು ಮಾತ್ರ ಆಗಿರುವುದಿಲ್ಲ.

[ಪಾದಟಿಪ್ಪಣಿ]

a ಒತ್ತಡವು ಒಂದು ಸಹಾಯಕ ಸಂಗತಿಯಾಗಿರಬಲ್ಲದಾದರೂ, ಹೃದಯಾಘಾತದ ಹೆಚ್ಚಿನ ವಿದ್ಯಮಾನಗಳಲ್ಲಿ, ಅಪಧಮನಿಕಾಠಿಣ್ಯದ ಕಾರಣ ಪರಿಧಮನಿಗಳಿಗೆ ಗಮನಾರ್ಹವಾದ ಹಾನಿಯಾಗುತ್ತದೆ. ಆದಕಾರಣ, ಹೃದ್ರೋಗಸೂಚನೆಗಳನ್ನು ಒಬ್ಬನು ಲಘುವಾಗಿ ತೆಗೆದುಕೊಳ್ಳುವುದು, ಅಂದರೆ ಪ್ರಾಯಶಃ ಕೇವಲ ಒತ್ತಡವನ್ನು ಕಡಮೆಮಾಡುವುದರಿಂದ ರೋಗವಾಸಿಯಾಗುವುದೆಂದು ಅಭಿಪ್ರಯಿಸುವುದು ಮೂರ್ಖತನವಾಗಿದೆ. ಡಿಸೆಂಬರ್‌ 8, 1996ರ ಎಚ್ಚರ! ಪತ್ರಿಕೆಯ 3-13ನೆಯ ಪುಟಗಳನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ