ನೀವು ಹಲ್ಲು ಕಡಿಯುತ್ತೀರೊ?
ಪುರಾತನ ಸಮಯಗಳಿಂದಲೂ ಜನರು, ಒತ್ತಡದ ಕೆಳಗಿದ್ದಾಗ ತಮ್ಮ ಹಲ್ಲುಗಳನ್ನು ಕಡಿಯುತ್ತಾ ಬಂದಿದ್ದಾರೆ. ಆಗಿಂದಾಗ್ಗೆ ಬೈಬಲು ಹಲ್ಲು ಕಡಿಯುವುದನ್ನು, ಅಥವಾ ಹಲ್ಲು ಮಸೆಯುವುದನ್ನು, ಕೋಪೋದ್ರೇಕ ಅಥವಾ ಬೇಗುದಿಯನ್ನು ಸೂಚಿಸಲು ಉಪಯೋಗಿಸುತ್ತದೆ. (ಯೋಬ 16:9; ಮತ್ತಾಯ 13:42, 50) ಇಂದಿನ ಕೋಪೋದ್ರಿಕ್ತ ಹಾಗೂ ಒತ್ತಡಭರಿತ ಲೋಕದಲ್ಲಿ, ಅಕ್ಷರಾರ್ಥವಾಗಿ ಕೋಟಿಗಟ್ಟಲೆ ಜನರು ಹಲ್ಲು ಕಡಿಯುತ್ತಾರೆ, ಮತ್ತು ಅಧಿಕಾಂಶ ಮಂದಿಗೆ ಅದನ್ನು ಮಾಡುವುದರ ಅರಿವೇ ಇರುವುದಿಲ್ಲ. ಅವರು ತಮ್ಮ ಹಲ್ಲುಗಳನ್ನು ಸವೆಯಿಸುತ್ತಿರಬಹುದು.
ಕೆಲವು ಜನರು ಏಕೆ ಹಲ್ಲು ಕಡಿಯುತ್ತಾರೆ? ಕಾರಣಗಳು ಜಟಿಲವಾಗಿವೆ ಮತ್ತು ಇದುವರೆಗೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲ್ಪಟ್ಟಿಲ್ಲ. ಆದರೆ ಕೆಲವು ವಿದ್ಯಮಾನಗಳಲ್ಲಿ, ಭಾವನಾತ್ಮಕ ಒತ್ತಡವು ಇದಕ್ಕೆ ಕಾರಣವಾಗಿ ಕಂಡುಬರುತ್ತದೆ. ಯುಸಿ ಬರ್ಕ್‌ಲೀ ವೆಲ್‌ನೆಸ್ ಲೆಟರ್ ಹೀಗೆ ಸೂಚಿಸುತ್ತದೆ: “ತಮ್ಮ ಹಲ್ಲುಗಳನ್ನು ಕಡಿಯುವ ಜನರು, ಅನೇಕವೇಳೆ ತಾವು ವೈವಾಹಿಕ ಅಥವಾ ಆರ್ಥಿಕ ಕಷ್ಟತೊಂದರೆಗಳನ್ನು ಅನುಭವಿಸುತ್ತಿದ್ದೇವೆ, ಅಂತಿಮ ಪರೀಕ್ಷೆಗೆ ಕೂತಿರುತ್ತೇವೆ, ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತೇವೆಂದು ಭಯಗೊಂಡಿದ್ದೇವೆ, ಇಲ್ಲದಿದ್ದಲ್ಲಿ ಒತ್ತಡದ ಕೆಳಗಿದ್ದೇವೆ ಎಂದು ವರದಿಸುತ್ತಾರೆ.” ಇನ್ನಿತರ ಸಂಭಾವ್ಯ ಕಾರಣಗಳು ಹಾಗೂ ನೆರವನ್ನೀಯುವ ಅಂಶಗಳಲ್ಲಿ, ಮೇಲಿನ ಹಾಗೂ ಕೆಳಗಿನ ಹಲ್ಲುಗಳ ತಪ್ಪಾದ ಸಂಪರ್ಕ, ನಿದ್ರೆಯ ತೊಂದರೆಗಳು, ಅಥವಾ ಮದ್ಯಪಾನದ ಸೇವನೆಗಳು ಒಳಗೊಂಡಿವೆ. ಆದುದರಿಂದ, ವೆಲ್‌ನೆಸ್ ಲೆಟರ್ ಸೂಚಿಸುವುದೇನೆಂದರೆ, ಈ ತೊಂದರೆಯಿರುವವರು ಮದ್ಯಪಾನದ ಸೇವನೆಯನ್ನು ಕಡಿಮೆಮಾಡಲು, ನಿದ್ರಿಸುವ ಮೊದಲು ವಿಶ್ರಮಿಸಲು ಸರಳವಾದ ಹೆಜ್ಜೆಗಳನ್ನು—ಅಂದರೆ ಬಿಸಿನೀರಿನ ಸ್ನಾನಮಾಡುವುದು, ಅಥವಾ ಒಬ್ಬ ಮಿತ್ರನೊಂದಿಗೆ ಇಲ್ಲವೆ ಭರವಸಾರ್ಹನಾದ ಒಬ್ಬ ಸಲಹೆಗಾರನೊಂದಿಗೆ ನಿಮಗೆ ಕ್ಷೋಭೆಗೊಳಿಸುವ ಸಮಸ್ಯೆಗಳನ್ನು ಮನಬಿಚ್ಚಿ ಮಾತಾಡುವುದು—ತೆಗೆದುಕೊಳ್ಳಲು ಪ್ರಯತ್ನಿಸಬೇಕು.
ದಿನದ ಸಮಯದಲ್ಲಿ ನೀವು ಹಲ್ಲುಗಳನ್ನು ಕಡಿಯುತ್ತಿರುವುದನ್ನು ಅಥವಾ ಅವುಗಳನ್ನು ಒಟ್ಟಿಗೆ ಉಜ್ಜುತ್ತಿರುವುದನ್ನು ನೀವು ಗಮನಿಸಬಹುದು. ಆದರೆ ನೀವು ಇದನ್ನು ನಿಮ್ಮ ನಿದ್ರೆಯಲ್ಲಿ ಮಾಡುತ್ತೀರೆಂಬುದು ನಿಮಗೆ ಹೇಗೆ ತಿಳಿಯಸಾಧ್ಯವಿದೆ? ಕೆಲವೊಮ್ಮೆ ಅಸ್ಥಿಗತವಾಗಿ ಹಲ್ಲು ಕಡಿಯುತ್ತಿರುವುದು—ಇದನ್ನು ಕಟಕಟನೆ ಹಲ್ಲುಕಡಿಯುವುದು ಎಂದು ಹೇಳುತ್ತಾರೆ—ಅದೇ ಕೋಣೆಯಲ್ಲಿ ಮಲಗಿರುವ ಇನ್ನೊಬ್ಬರನ್ನು ಎಚ್ಚರಿಸಲು ಸಾಧ್ಯವಾಗುವಷ್ಟು ದೊಡ್ಡದಾದ ಶಬ್ದವನ್ನು ಉಂಟುಮಾಡುತ್ತದೆ. ನಿಮ್ಮ ಕಣತಲೆಗಳಲ್ಲಿ ತಲೆನೋವಿನಿಂದ, ಅಥವಾ ನಿಮ್ಮ ದವಡೆಯು ಕ್ಲಿಕ್ ಶಬ್ದಗಳನ್ನು ಮಾಡುವುದರಿಂದ ನೀವು ಎಚ್ಚರಗೊಳ್ಳಬಹುದು.a ನಿಮ್ಮ ಹಲ್ಲುಗಳು ವಿಪರೀತವಾಗಿ ಸವೆದಿರುವುದನ್ನು ಸಹ ನಿಮ್ಮ ದಂತವೈದ್ಯರು ಗಮನಿಸಬಹುದು. ರಾತ್ರಿಯಲ್ಲಿ ನಿಮ್ಮ ಹಲ್ಲುಗಳ ಮೇಲೆ ಇಡಲಿಕ್ಕಾಗಿ ಒಂದು ಸಾಧನದಂತಹ ಯಾವುದೇ ಪರಿಹಾರವನ್ನು ಒದಗಿಸುವ ಸೂಕ್ತಕ್ರಮಗಳನ್ನು ಅವರು ಶಿಫಾರಸ್ಸು ಮಾಡಸಾಧ್ಯವಿದೆ. ಇದರಂತಹ ಒಂದು ಬಾಯಿ ರಕ್ಷಕವು, ಹಲ್ಲು ಕಡಿಯುವುದರಿಂದ ನಿಮ್ಮನ್ನು ತಡೆಯುವಂತೆ ವಿನ್ಯಾಸಿಸಲ್ಪಟ್ಟಿರುವುದಿಲ್ಲವಾದರೂ, ಇದು ಇನ್ನೂ ಹೆಚ್ಚಿನ ಹಾನಿಯಿಂದ ನಿಮ್ಮ ಹಲ್ಲುಗಳನ್ನು ಅದು ಸಂರಕ್ಷಿಸಬಲ್ಲದು. ವಿಷಯವು ಏನೇ ಆಗಿರಲಿ, ಶಾಂತರಾಗಿರಿ! ನೀವು ಎಷ್ಟು ಕಡಿಮೆ ಚಿಂತೆಮಾಡುತ್ತೀರೋ, ಅಷ್ಟೇ ಕಡಿಮೆ ನೀವು ಹಲ್ಲು ಕಡಿಯುವಿರಿ.
[ಪಾದಟಿಪ್ಪಣಿ]
a ಇನ್ನೂ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅವೇಕ್! ಪತ್ರಿಕೆಯ ಜೂನ್ 22, 1991ರ ಸಂಚಿಕೆಯ, 20-2ನೆಯ ಪುಟಗಳನ್ನು ನೋಡಿರಿ.