ಹಲ್ಲುಕಚ್ಚುನೇರ್ಪಿಕೆ—ಏನೆಲ್ಲ ಒಳಗೊಂಡಿದೆ?
ನಮ್ಮ ಹಲ್ಲುಗಳು ಪ್ರಾಮುಖ್ಯ! ತಿನ್ನಬೇಕಾದರೆ ಮತ್ತು ಮಾತನಾಡಬೇಕಾದರೆ ಅವು ನಿಮಗೆ ಆವಶ್ಯಕ. ಅವು ಹಿತಕರವಾದ ಮಂದಹಾಸ ಅಥವಾ ನಗೆಯ ಪ್ರಮುಖ ಭಾಗವೂ ಹೌದು.
ಡೊಂಕು ಹಲ್ಲುಗಳು ಆಹಾರ ಅಗಿಯುವಿಕೆಯನ್ನು ಕಷ್ಟಕರವನ್ನಾಗಿ ಮಾಡಿ, ಒಸಡಿನ ರೋಗಕ್ಕೆ ಸಹಾಯಮಾಡಿ, ಮಾತಿನಲ್ಲಿನ ದೋಷಗಳಿಗೆ ಕಾರಣವಾಗಿರಸಾಧ್ಯವಿದೆ. ಡೊಂಕು ಹಲ್ಲು ಕೆಲವರಿಗೆ ಸಾಮಾಜಿಕ ನಿರ್ಬಂಧವೂ ಆಗಿರಬಲ್ಲದೆಂದು ಪರಿಣತರು ಗಮನಿಸಿದ್ದಾರೆ. ಏಕೆಂದರೆ ತಮ್ಮ ಹಲ್ಲುಗಳಿಂದ ತಮ್ಮ ನಗೆಯು ವಿಕಾರಗೊಳ್ಳಬಹುದೆಂದು ಅವರು ಅಭಿಪ್ರಯಿಸುವುದರಿಂದ, ಮುಕ್ತವಾಗಿ ಮಾತನಾಡುವುದು ಅವರಿಗೆ ಕಷ್ಟಕರವಾಗಿರಬಹುದು.
ನಿಮ್ಮ ಹಲ್ಲುಗಳು ನೆಟ್ಟಗಿಲ್ಲದಿರುವಲ್ಲಿ ಏನು ಮಾಡಸಾಧ್ಯವಿದೆ? ಯಾರು ನಿಮಗೆ ಸಹಾಯಮಾಡಬಲ್ಲರು? ಯಾವ ಪ್ರಾಯದಲ್ಲಿ? ಯಾವ ರೀತಿಯ ಚಿಕಿತ್ಸೆಯನ್ನು ಉಪಯೋಗಿಸಸಾಧ್ಯವಿದೆ? ಅದು ನೋವುಂಟುಮಾಡುವುದೊ? ಚಿಕಿತ್ಸೆ ಯಾವಾಗಲೂ ಆವಶ್ಯಕವೊ?
ದಂತವೈದ್ಯಶಾಸ್ತ್ರದ ಒಂದು ಶಾಖೆ
ಇಂತಹ ಸಮಸ್ಯೆಗಳೊಂದಿಗೆ ವ್ಯವಹರಿಸುವ ದಂತವೈದ್ಯಶಾಸ್ತ್ರದ ಶಾಖೆಗೆ, ಹಲ್ಲುಕಚ್ಚುನೇರ್ಪಿಕೆ (ಆರ್ಥಡಾಂಟಿಕ್ಸ್) ಎಂದು ಹೆಸರು. ಅದು ಹಲ್ಲಿನ ಲೋಪದೋಷಗಳನ್ನು ಸರಿಪಡಿಸುವ ವಿಷಯಕ್ಕೆ ಸಂಬಂಧಿಸಿದೆ.
ಆರ್ಥಡಾಂಟಿಕ್ಸ್ನ ಮುಖ್ಯ ಕಾರ್ಯಗಳಾವುವು? ಅದಕ್ಕೆ ರೋಗನಿರ್ಣಯ ಮತ್ತು ಸಮಸ್ಯೆಗಳ ತಡೆಗಟ್ಟುವಿಕೆ ಹಾಗೂ ದೋಷನಿವಾರಕ ಸಾಧನಗಳ ರಚನೆಯೊಂದಿಗೆ ಸಂಬಂಧವಿದೆ.
ನಿಬಿಡವಾದ, ಅವ್ಯವಸ್ಥಿತ ಮತ್ತು ಹೊರಚಾಚಿರುವ ಹಲ್ಲುಗಳು ಪ್ರಾಚೀನ ಸಮಯಗಳಲ್ಲೂ ಜನರಿಗೆ ಒಂದು ಸಮಸ್ಯೆಯಾಗಿದ್ದವು ಮತ್ತು ಇದಕ್ಕೆ ಮಾಡಿರುವ ಚಿಕಿತ್ಸೆಯ ಪ್ರಯತ್ನಗಳು ಕಡಮೆ ಪಕ್ಷ ಸಾ.ಶ.ಪೂ. ಎಂಟನೆಯ ಶತಮಾನದಷ್ಟು ಹಿಂದಿನದ್ದಾಗಿದ್ದವು. ಆಶ್ಚರ್ಯಕರವಾಗಿ, ಗ್ರೀಕ್ ಮತ್ತು ಎಟ್ರುಸ್ಕನ್ ಜನರ ಪ್ರಾಕ್ತನಶಾಸ್ತ್ರ ಶೋಧಗಳು, ಆದಿಯ ಸುರಚಿತ ದಂತಬಂಧಗಳನ್ನು ಬೆಳಕಿಗೆ ತಂದವು.
ಇಂದು, ಲೋಕದ ಹೆಚ್ಚಿನ ಭಾಗಗಳಲ್ಲಿ, ಆರ್ಥಡಾಂಟಿಸ್ಟ್ಗಳೆಂದು ಕರೆಯಲ್ಪಡುವ ವಿಶೇಷಜ್ಞ ದಂತಚಿಕಿತ್ಸಕರು ಡೊಂಕು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆನೀಡುತ್ತಾರೆ. ಅವರಿಗೆ ಹಲ್ಲುಗಳ ಮತ್ತು ದವಡೆಗಳ ಮತ್ತು ಸುತ್ತಮುತ್ತಲಿನ ಸ್ನಾಯು ಮತ್ತು ಅಂಗಾಂಶಗಳ ಬೆಳವಣಿಗೆ ಮತ್ತು ವಿಕಸನದ ಉತ್ತಮ ಜ್ಞಾನವು ಬೇಕೇ ಬೇಕು.
ಆರ್ಥಡಾಂಟಿಕ್ಸ್ ಮಾಡುವ ಕೆಲಸ
ಆರ್ಥಡಾಂಟಿಕ್ಸನ್ನು, “ಬೆಳೆಯುತ್ತಿರುವ ಮತ್ತು ಪಕ್ವವಾಗಿರುವ ದಂತಮುಖ ರಚನೆಗಳ ಉಸ್ತುವಾರಿ, ಮಾರ್ಗದರ್ಶನ ಮತ್ತು ತಿದ್ದುವಿಕೆಗೆ ಸಂಬಂಧಿತವಾದ ದಂತವೈದ್ಯಶಾಸ್ತ್ರದ ಕ್ಷೇತ್ರ” ಎಂದು ನಿರೂಪಿಸಬಹುದು. ಅದರಲ್ಲಿ, “ಹಲ್ಲುಗಳ ಮಧ್ಯೆ ಮತ್ತು ಹಲ್ಲುಗಳು ಹಾಗೂ ಮೌಖಿಕ ಎಲುಬುಗಳ ನಡುವಿನ ಸಂಬಂಧಗಳನ್ನು, ಬಲಗಳ ಅನ್ವಯದ ಮೂಲಕ ಮತ್ತು/ಅಥವಾ ಕಪಾಲಮೌಖಿಕ ಸಂಕೀರ್ಣದೊಳಗಿರುವ ಕಾರ್ಯಾತ್ಮಕ ಪ್ರಚೋದನೆ ಮತ್ತು ಪುನರ್ಮಾರ್ಗದಶನದ ಮೂಲಕ ಸರಿಹೊಂದಿಸುವಿಕೆ”ಯು ಸೇರಿದೆ. ಹೌದು, ನಿರೂಪಣೆಯೇನೊ ಪಾರಿಭಾಷಿಕವಾದರೂ ನಿಷ್ಕೃಷ್ಟವಾಗಿದೆ.
ಆದಕಾರಣ ಆರ್ಥಡಾಂಟಿಕ್ಸ್ನಲ್ಲಿ, ಹಲ್ಲುಗಳ ಮೇಲೆ ಅಥವಾ ಅವುಗಳ ಸುತ್ತಲಿರುವ ರಚನೆಗಳ ಮೇಲೆ ಶಕ್ತಿಗಳನ್ನು ಪ್ರಯೋಗಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಪ್ರತ್ಯೇಕ ಸಮಸ್ಯೆಗಳನ್ನು ಸರಿಪಡಿಸುವ, ಆದೇಶಾನುಸಾರ ಮಾಡಿದ ಉಪಕರಣಗಳ ಮೂಲಕ, ಹಲ್ಲುಗಳನ್ನು ಮತ್ತು ಎಲುಬುಗಳನ್ನು ಸಹ ಸರಿಯಾದ ಸ್ಥಾನಕ್ಕೆ ದೂಡುತ್ತ ಇದನ್ನು ಮಾಡಲಾಗುತ್ತದೆ.
ಹಲ್ಲುಗಳ ಸುತ್ತಲಿರುವ ಎಲುಬಿನಲ್ಲಿ, ಆಸ್ಟಿಯೊಕ್ಲಾಸ್ಟ್ ಮತ್ತು ಆಸ್ಟಿಯೊಬ್ಲಾಸ್ಟ್ಗಳೆಂದು ಕರೆಯಲ್ಪಡುವ ಅಸ್ಥಿಜೀವಕಣಗಳಿವೆ. ದಂತಬಂಧಗಳು ಉಂಟುಮಾಡುವ ಶಕ್ತಿಗಳ ಫಲವಾಗಿ, ಅಸ್ಥಿಅಂಗಾಂಶಗಳು ಛಿದ್ರವಾಗುವಂತೆ ಆಸ್ಟಿಯೊಕ್ಲಾಸ್ಟ್ಗಳನ್ನು ಒತ್ತಡವಿರುವಲ್ಲಿ ಕೆಲಸಕ್ಕೆ ಉಪಯೋಗಿಸಲಾಗುತ್ತದೆ. ಕರ್ಷಣವಿರುವ ಕ್ಷೇತ್ರಗಳಲ್ಲಿ, ಖಾಲಿ ಸ್ಥಳವು ಆಸ್ಟಿಯೊಬ್ಲಾಸ್ಟ್ಗಳಿಂದ ರಚಿಸಲಾದ ಹೊಸ ಎಲುಬಿನಿಂದ ತುಂಬಲ್ಪಡುತ್ತದೆ. ಈ ವಿಧದಲ್ಲಿ ಹಲ್ಲುಗಳು ನಿಧಾನವಾಗಿ ಚಲಿಸುತ್ತವೆ.
ಸರಿಗೆ, ರಾಳ ಮತ್ತು ಪ್ರಾಯಶಃ ಹಿಗ್ಗುದಾರದಂತಹ ಹೊರವಸ್ತುಗಳನ್ನು ತಿಂಗಳುಗಟ್ಟಲೆ ಬಾಯಿಯಲ್ಲಿಟ್ಟುಕೊಳ್ಳುವುದು ಅಹಿತಕರವಲ್ಲವೊ? ಸಾಧನಗಳನ್ನು ಬಿಗಿದಾಗ ಅಥವಾ ಸರಿಹೊಂದಿಸುವಾಗ, ಆರಂಭದಲ್ಲಿ ಅವು ತುಸು ಅಹಿತವನ್ನು ಉಂಟುಮಾಡಬಹುದು. ಆದರೆ ಸ್ವಲ್ಪ ಸಮಯದಲ್ಲಿ, ಅದು ರೂಢಿಯಾಗುತ್ತದೆ. ತತ್ವಾನುಸಾರ, ಯಾವನೂ ದಂತಬಂಧಗಳನ್ನು ಹಾಕಿಕೊಳ್ಳುವುದನ್ನು ರೂಢಿಮಾಡಿಕೊಳ್ಳಬಲ್ಲನು.
ಒಬ್ಬನಿಗೆ ಯಾವಾಗ ಚಿಕಿತ್ಸೆ ನೀಡಬೇಕು?
ಮಕ್ಕಳಲ್ಲಿ ಕಚ್ಚುವಿಕೆಯು ಅಪಸಾಮಾನ್ಯತೆಗಳನ್ನು, ಅಥವಾ ನ್ಯೂನಕಂಡಿಮುಚ್ಚಿಕೆಗಳನ್ನು ಉಂಟುಮಾಡುತ್ತದ್ದೆಂದು ತೋರಿಬರುವ ಸಕಲ ಸನ್ನಿವೇಶಗಳು, ವಯಸ್ಕತನದ ತನಕ ಉಳಿಯುವುದಿಲ್ಲ. ಕೆಲವು ವಿಧದ ಹಲ್ಲಿನ ನ್ಯೂನ ಭಂಗಿಗಳು ತಾವಾಗಿಯೇ ಸರಿಯಾಗುವ ಪ್ರವೃತ್ತಿಯುಳ್ಳವುಗಳಾಗಿರುತ್ತವೆ. ವಾಸ್ತವವೇನಂದರೆ, ಉದುರುವ ಹಲ್ಲು ಅಥವಾ ಹಾಲು ಹಲ್ಲಿನಿಂದ ಖಾಯಂ ಹಲ್ಲುಗಳಿಗೆ ಆಗುವ ಪರಿವರ್ತನೆಯ ಸಮಯದಲ್ಲಿ, ಬಾಯಿಯ ಎದುರು ಭಾಗದಲ್ಲಿರುವ ಹಲ್ಲುಗಳಿಗೆ ಕಿಕ್ಕಿರಿದು ಬೆಳೆಯುವ ಪ್ರವೃತ್ತಿಯಿರುತ್ತದೆ, ಏಕೆಂದರೆ ಇವು ಉದುರಿಹೋಗಿರುವ ಹಲ್ಲುಗಳಿಗಿಂತ ದೊಡ್ಡದಾಗಿರುತ್ತವೆ.
ಆದರೂ, ಉದುರುವ ಹಲ್ಲುಗಳು ಬಿದ್ದುಹೋಗಿ ಖಾಯಂ ಇಮ್ಮೊನೆಯ ಹಲ್ಲುಗಳು ಭರ್ತಿಯಾದಾಗ, ಹಲ್ಲುಗಳ ಸಾಪೇಕ್ಷ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ. ಉಪಯೋಗದ ಕಾರಣ ಮತ್ತು ಸ್ನಾಯುವಿನ ರಚನೆಯ ಪ್ರಭಾವದ ಕಾರಣ, ಹಲ್ಲುಗಳು ತಮ್ಮನ್ನು ತಾವೇ ನೆಟ್ಟಗಾಗಿಸಿಕೊಳ್ಳಬಹುದು. ಆದಕಾರಣ, ನೀವು ಹೆತ್ತವರಾಗಿರುವಲ್ಲಿ, ನಿಮ್ಮ ಮಗುವಿನ ಖಾಯಂ ಹಲ್ಲುಗಳು ಆರಂಭದಲ್ಲಿ ಡೊಂಕಾಗಿ ಬೆಳೆಯುತ್ತಿರುವಂತೆ ತೋರಿಬರುವಲ್ಲಿ, ಗಾಬರಿಗೊಳ್ಳಬೇಡಿ. ಚಿಕಿತ್ಸೆಯ ಅಗತ್ಯವಿರುವಲ್ಲಿ ಅದನ್ನು ಆರ್ಥಡಾಂಟಿಸ್ಟರು ನಿರ್ಧರಿಸಶಕ್ತರಾಗಿರತಕ್ಕದ್ದು.
ಎಳೆಯ ರೋಗಿಗಳ ಚಿಕಿತ್ಸೆ ಯಾವಾಗ ನಡೆಯಬೇಕೆಂಬ ವಿಷಯದಲ್ಲಿ ಆರ್ಥಡಾಂಟಿಸ್ಟರು ಒಮ್ಮತದಿಂದಿಲ್ಲ. ಅತಿ ಎಳೆಯ ಪ್ರಾಯ (4-6 ವರ್ಷಗಳು)ದಲ್ಲಿ ಎಂಬುದು ಕೆಲವರ ಹೇಳಿಕೆ. ತರುವಾಯ, ಅಂದರೆ ಬಲಿತಾವಸ್ಥೆಯಲ್ಲಿ (12-15 ವರ್ಷಗಳು) ಬೆಳವಣಿಗೆ ಮುಗಿಯುತ್ತಿರುವಾಗ ಎಂಬುದು ಇತರರ ಹೇಳಿಕೆ. ಇನ್ನು ಕೆಲವರು ಇವೆರಡರ ನಡುವಿನ ಸಮಯವನ್ನು ಆಯ್ದುಕೊಳ್ಳುತ್ತಾರೆ.
ಮಕ್ಕಳಿಗೆ ಮಾತ್ರವಲ್ಲ
ಆದರೆ ಆರ್ಥಡಾಂಟಿಕ್ಸ್ ಸಮಸ್ಯೆಯಿರುವುದು ಮಕ್ಕಳಿಗೆ ಮಾತ್ರವಲ್ಲ. ಡೊಂಕು ಹಲ್ಲುಗಳು ಪ್ರಾಪ್ತವಯಸ್ಸಿನಲ್ಲಿ ಸಹ ಅನೇಕ ಸಮಸ್ಯೆಗಳನ್ನು ತರುತ್ತವೆ. ಹಲ್ಲುಗಳು ಮತ್ತು ಹಲ್ಲುಗಳಿರುವ ಅಸ್ತಿವಾರಗಳು ಸ್ವಸ್ಥವಾಗಿರುವಲ್ಲಿ, ನಿಮ್ಮ ಪ್ರಾಯ ಎಷ್ಟೇ ಆಗಿರಲಿ, ನಿಮ್ಮ ಮಂದಹಾಸದ ಸ್ಥಿತಿಯನ್ನು ಸರಿಪಡಿಸಸಾಧ್ಯವಿದೆ.
ಡೊಂಕು ಹಲ್ಲುಗಳು ಯಾವ ಸಮಸ್ಯೆಗಳನ್ನು ಉಂಟುಮಾಡುತ್ತವೆ? ಕಡಮೆಪಕ್ಷ ಮೂರು ವಿಧದ ಸಮಸ್ಯೆಗಳನ್ನು ಉಂಟುಮಾಡುತ್ತವೆ: (1) ತೋರಿಕೆಗೆ ಸಂಬಂಧಿಸಿದ ಸಮಸ್ಯೆಗಳು; (2)ದವಡೆಯ ಚಲನೆಯಲ್ಲಿರುವ ಸಮಸ್ಯೆಗಳು (ನೋವು ಮತ್ತು ಸ್ನಾಯು ಸುಸಂಘಟನೆಯ ಕೊರತೆ), ಅಗಿಯುವುದರಲ್ಲಿನ ಸಮಸ್ಯೆಗಳು ಮತ್ತು ಉಚ್ಚಾರಣೆ ಮತ್ತು ಮಾತಿನ ಉತ್ಪಾದನೆಯ ಸಮಸ್ಯೆಗಳು ಸೇರಿರುವ ಕಾರ್ಯಾತ್ಮಕ ಸಮಸ್ಯೆಗಳು; (3) ಮುಂದೆ ಚಾಚಿರುವ ಹಲ್ಲುಗಳ ಕಾರಣ ಘಾಸಿಯಾಗುವ ಹೆಚ್ಚಿನ ಅಪಾಯ ಮತ್ತು ಒಸಡಿನ ರೋಗ ಹಾಗೂ ಹಲ್ಲು ಹುಳುಕಾಗುವಿಕೆ, ಇದರೊಂದಿಗೆ ನ್ಯೂನಕಂಡಿಮುಚ್ಚಿಕೆಯ ಕಾರಣ ಬರುವ ದಂತಕ್ಷಯ ಮತ್ತು ಸವೆತ.
ಇದಕ್ಕೆ ಕೂಡಿಸಿ, ನ್ಯೂನಕಂಡಿಮುಚ್ಚಿಕೆಗಳನ್ನು ಕೆಲವು ಪರಿಣತರು ಕಶೇರುಕಾಂಗಭಾಗದ (ವಿಶೇಷವಾಗಿ ಕತ್ತಿನ ಕ್ಷೇತ್ರದಲ್ಲಿ) ಭಂಗಿಯ ಸಮಸ್ಯೆಗಳೊಂದಿಗೂ ಶರೀರದ ಬೇರೆ ಭಾಗಗಳ ಸ್ನಾಯುಕಾರ್ಯದ ಸಮಸ್ಯೆಗಳೊಂದಿಗೂ ಜೋಡಿಸುತ್ತಾರೆ. ಆದರೆ ಚಿಕಿತ್ಸೆ ಹೇಗೆ ಕೊಡಲ್ಪಡುತ್ತದೆ? ಮತ್ತು ಅದಕ್ಕೆ ಎಷ್ಟು ಸಮಯ ಹಿಡಿಯುತ್ತದೆ?
ಚಿಕಿತ್ಸಾವಧಿ ಮತ್ತು ವಿಧಾನಗಳು
ನಿಮಗೆ ಇಲ್ಲವೆ ನಿಮ್ಮ ಮಕ್ಕಳಲ್ಲಿ ಒಬ್ಬರಿಗೆ ಆರ್ಥಡಾಂಟಿಸ್ಟರ ಆವಶ್ಯಕತೆಯಿದೆಯೆಂದು ಅನಿಸುವಲ್ಲಿ, ನಿಮಗೆ ಭರವಸವಿಡಸಾಧ್ಯವಿರುವ ಒಬ್ಬರನ್ನು ನೀವು ಆರಿಸಿಕೊಳ್ಳಬೇಕು. ಚಿಕಿತ್ಸಾವಧಿಯು, ಸಮಸ್ಯೆಯ ಗಂಭೀರತೆ ಮತ್ತು ಉಪಯೋಗಿಸಲ್ಪಡುವ ವಿಧಾನದ ಮೇಲೆ ವ್ಯತ್ಯಾಸವಾಗುವುದಾದರೂ, ಅದು ಕೆಲವು ತಿಂಗಳುಗಳಷ್ಟು, ಪ್ರಾಯಶಃ ವರ್ಷಗಳಷ್ಟು ದೀರ್ಘಕಾಲವನ್ನು ತೆಗೆದುಕೊಳ್ಳಬಹುದು.
ಸರಳತೆಗಾಗಿ, ನಾವು ಚಿಕಿತ್ಸಾಸಾಧನಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಸಾಧ್ಯವಿದೆ: ತೆಗೆಯಸಾಧ್ಯವಿರುವ ಸಾಧನಗಳು ಮತ್ತು ತೆಗೆಯಸಾಧ್ಯವಿರದ ಸಾಧನಗಳು. ತೆಗೆಯಸಾಧ್ಯವಿರುವ ಸಾಧನಗಳನ್ನು ರೋಗಿಯು ತಾನೇ ಹೊರತೆಗೆದು ಪುನಃ ಜೋಡಿಸಿಕೊಳ್ಳಬಹುದಾದರೂ, ತೆಗೆಯಸಾಧ್ಯವಿರದ ಸಾಧನಗಳು ಹಲ್ಲುಗಳಿಗೆ ಪದಶಃ ಅಂಟಿಸಲ್ಪಟ್ಟವುಗಳಾಗಿದ್ದು, ಹೆಚ್ಚು ಜಟಿಲವಾದ ಹಲ್ಲುಚಲನೆಗಳನ್ನು ನಡೆಸುತ್ತವೆ.
ಸೌಂದರ್ಯ ಮೀಮಾಂಸೆಯ ಕ್ಷೇತ್ರದಲ್ಲಿ ಸಂಶೋಧನೆಯು ಮಹಾ ಪ್ರಗತಿಯನ್ನು ಮಾಡಿರುವುದರಿಂದ, ಇಂದು “ಸಹಜವಾಗಿ ಕಾಣುವ” ಅನೇಕ ಸಾಧನಗಳಿವೆ. ಕೆಲವು ಸಾಧನಗಳು ಹಲ್ಲುಗಳ ಬಣ್ಣದ್ದೇ ಆಗಿರುವುದರಿಂದ ಅದೃಶ್ಯವಾಗಿರುವಾಗ, ಇನ್ನು ಕೆಲವು ನಾಲಗೆಯ ಪಕ್ಕದಲ್ಲಿ ಜಿಹ್ವೀಯ ಸ್ಥಾನವೆಂದು ಜ್ಞಾತವಾಗಿರುವ ಸ್ಥಳದಲ್ಲಿ ಹಲ್ಲುಗಳ ಹಿಂಭಾಗದಲ್ಲಿ ಜೋಡಿಸಲ್ಪಟ್ಟು ಮರೆಯಾಗಿರುತ್ತವೆ. ಇಂತಹ ವಿಧಾನಗಳನ್ನು ಅದೃಶ್ಯ ಹಲ್ಲುಕಚ್ಚಿನೇರ್ಪಿಕೆ ಎಂದು ಕರೆಯಲಾಗುತ್ತದೆ.
ಅತ್ಯಂತ ಕಷ್ಟಕರವಾದ ವಿದ್ಯಮಾನಗಳಲ್ಲಿ, ಆರ್ಥಡಾಂಟಿಸ್ಟರು ದಂತಬಂಧಗಳಿಂದ ಅಪೇಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಅಶಕ್ತರಾಗಿರುವಾಗ, ಬಾಯಿ ಮತ್ತು ಮುಖದ ಸಮಸ್ಯೆಗಳಲ್ಲಿ ವಿಶೇಷತೆಯನ್ನು ಪಡೆದಿರುವ ಶಸ್ತ್ರಚಿಕಿತ್ಸಕನೊಬ್ಬನ ಸಹಾಯವನ್ನು ಪಡೆದುಕೊಳ್ಳಲು ಸಹ ಅವರು ಪ್ರಯತ್ನಿಸಬಹುದು. ಮುಖವನ್ನು ರೂಪಿಸುವ ಮೂಳೆಗಳನ್ನು ಅಕ್ಷರಶಃ ಸ್ಥಳಾಂತರಿಸುವಂತೆ ಮಾಡುವ ಒಂದು ಶಸ್ತ್ರಚಿಕಿತ್ಸೆಯನ್ನು ಅವನು ಮಾಡಸಾಧ್ಯವಿದೆ.
ಇಂದು ಆರ್ಥಡಾಂಟಿಕ್ಸ್, ಹಲ್ಲು ಮತ್ತು ದವಡೆಯ ಸಮಸ್ಯೆಗಳಿರುವವರ—ತಮ್ಮ ಹಲ್ಲುಗಳ ಕುರಿತು ಸ್ವಪ್ರಜ್ಞೆಯುಳ್ಳವರಾಗಿರದೆ ಮಂದಹಾಸವನ್ನು ಬೀರಬಯಸುವವರನ್ನು ಸೇರಿಸಿ—ಅನೇಕ ಅಗತ್ಯಗಳನ್ನು ತೃಪ್ತಿಗೊಳಿಸಬಲ್ಲದು. ಹೌದು, ಒಬ್ಬನು ಆರ್ಥಡಾಂಟಿಕ್ಸನ್ನು ಬಳಸಲು ಆಯ್ದುಕೊಳ್ಳುತ್ತಾನೊ ಇಲ್ಲವೊ ಎಂಬುದು ಆ ವ್ಯಕ್ತಿಯ ವೈಯಕ್ತಿಕ ನಿರ್ಣಯವಾಗಿದೆ.
ಸದ್ಯಕ್ಕೆ, ಮಾನವಕುಲವು ತನ್ನ ಶಾರೀರಿಕ ಅಪೂರ್ಣತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ. ಇವುಗಳಲ್ಲಿ ಕೆಲವನ್ನು ಸರಿಪಡಿಸುವ ಕ್ರಮಗಳ ಮೂಲಕ ಉಪಶಮನ ಮಾಡಬಹುದು. ಆದರೂ, ದೇವರ ನೂತನ ಲೋಕದಲ್ಲಿ ಆತನು ಅಪೂರ್ಣತೆಯ ಪರಿಣಾಮಗಳನ್ನು—ಬಾಯಿಯವುಗಳನ್ನೂ—ಪೂರ್ತಿಯಾಗಿ ಮತ್ತು ಖಾಯಂ ಆಗಿ ನಿವಾರಿಸುವ ಸಮಯವನ್ನು ನಾವು ಮುನ್ನೋಡಬಲ್ಲೆವು. ಆಗ, ಪರಿಪೂರ್ಣಾರೋಗ್ಯದ ಆ ನೂತನ ವ್ಯವಸ್ಥೆಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ನಾವು ಸಂಧಿಸುವ ಎಲ್ಲರಿಗೂ ಹೃದಯೋಲ್ಲಾಸದ, ಸ್ನೇಹಪ್ರವೃತ್ತಿಯ ನಸುನಗೆಯನ್ನು ಭರವಸೆಯಿಂದ ನೀಡಬಲ್ಲೆವು.
ಆ ಸಮಯದ ಕುರಿತು, ಬೈಬಲು ಮುಂತಿಳಿಸುವುದು: “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಹರ್ಷಧ್ವನಿಗೈಯುತ್ತಾರೆ.” (ಯೆಶಾಯ 14:7) ಅಂತಹ ಹರ್ಷಾನಂದವು ಸೊಗಸಾದ ಮಂದಹಾಸಗಳೊಂದಿಗೆ ಜೊತೆಗೊಂಡಿರುವುದು ನಿಶ್ಚಯ!
[ಪುಟ 15 ರಲ್ಲಿರುವ ಚಿತ್ರ]
(1) ಅರೆಯುವ ಹಲ್ಲುಗಳನ್ನು ಹಿಂದಕ್ಕೆ ದೂಡಲಿಕ್ಕಾಗಿ ಮತ್ತು (2) ದವಡೆಯ ಬೆಳವಣಿಗೆಯನ್ನು ಪ್ರಚೋದಿಸಲಿಕ್ಕಾಗಿ ವಿನ್ಯಾಸಿಸಿರುವ ದಂತಬಂಧಗಳ ಪ್ರದರ್ಶನ
1
2
[ಪುಟ 16 ರಲ್ಲಿರುವ ಚಿತ್ರ]
ಹಲ್ಲುಕಚ್ಚು ಮುಚ್ಚುವಂತೆ ವಿನ್ಯಾಸಿಸಿರುವ ದಂತಬಂಧಗಳು