ನಿಮ್ಮ ಬೆರಳುಗುರುಗಳು—ಅವುಗಳ ಕಾಳಜಿ ವಹಿಸುತ್ತೀರೊ?
ಸ್ವೀಡನ್ನ ಎಚ್ಚರ! ಸುದ್ದಿಗಾರರಿಂದ
ಯಾರಾದರೂ, “ನಿಮ್ಮ ಬೆರಳುಗುರುಗಳನ್ನು ತೋರಿಸುತ್ತೀರೊ?” ಎಂದು ನಿಮ್ಮನ್ನು ಕೇಳುವಲ್ಲಿ, ನಿಮ್ಮ ಪ್ರತಿಕ್ರಿಯೆ ಏನಾಗಿದ್ದೀತು? ಅಂದವಾಗಿಡಲ್ಪಟ್ಟಿರುವ ನಿಮ್ಮ ಉಗುರುಗಳನ್ನು ನೀವು ಸಂತೋಷದಿಂದ ತೋರಿಸುವಿರೊ ಇಲ್ಲವೆ ನಿಮ್ಮ ಕೈಗಳನ್ನು ಒಡನೆ ಬೆನ್ನಹಿಂದೆ ಅಡಗಿಸಿಕೊಳ್ಳುವಿರೊ? ನಿಮ್ಮ ಉಗುರುಗಳನ್ನು ಅಡಗಿಸಿಕೊಳ್ಳಲು ನಿಮಗೆ ಸಕಾರಣವಿರಬಹುದು. ಪ್ರಾಯಶಃ ಅವು ಒಳ್ಳೆಯದಾಗಿ ಕಾಣದಿರಬಹುದು ಅಥವಾ ನೀವು ಉಗುರು ಕಚ್ಚುವವರಾಗಿರಬಹುದು. ನಮ್ಮ ಉಗುರುಗಳ ಅದ್ಭುತಕರವಾದ ರಚನೆಯ ಕುರಿತು ಹೆಚ್ಚು ಜ್ಞಾನವುಳ್ಳವರಾಗಿರುವುದು, ನಾವು ಅವುಗಳನ್ನು ಹೆಚ್ಚು ಮಾನ್ಯಮಾಡುವಂತೆ ಸಹಾಯಮಾಡಿ, ಅವುಗಳ ಉತ್ತಮ ಕಾಳಜಿ ವಹಿಸುವಂತೆ ನೆರವಾಗಬಲ್ಲದು.
ನಿಮ್ಮ ಉಗುರುಗಳು ಮುಖ್ಯವಾಗಿ ತಂತುಯುಕ್ತ ಪ್ರೋಟೀನ್ ಆದ ಕೆರಟಿನ್ ಸೇರಿರುವ ಗಟ್ಟಿಯಾದ ಮೃತಕಣಗಳಿಂದ ಮಾಡಲ್ಪಟ್ಟಿವೆ. ಬೆರಳುಗುರುಗಳು ಬೆಳೆಯುವ ವೇಗಪ್ರಮಾಣವು, ಬೆರಳಿನಿಂದ ಬೆರಳಿಗೂ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿದೆ. ಉಗುರುಗಳು ತಿಂಗಳಿಗೆ ಸರಾಸರಿ ಸುಮಾರು ಮೂರು ಮಿಲಿಮೀಟರುಗಳ ಪ್ರಮಾಣದಲ್ಲಿ ಬೆಳೆಯುತ್ತವೆ. ಕತ್ತರಿಸದೆ ಬೆಳೆಯಲು ಬಿಟ್ಟಿರುವ ಉಗುರುಗಳು ಗಣನೀಯ ಉದ್ದವನ್ನು ಮುಟ್ಟಬಹುದು. ಗಿನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ 1998 ಪುಸ್ತಕಕ್ಕನುಸಾರವಾಗಿ, ಒಬ್ಬ ಭಾರತೀಯನು ತನ್ನ ಎಡಗೈಯ ಐದು ಉಗುರುಗಳನ್ನು ಮೊತ್ತದಲ್ಲಿ 574 ಸೆಂಟಿಮೀಟರುಗಳಷ್ಟು ಉದ್ದ ಬೆಳೆಯುವಂತೆ ಬಿಟ್ಟನು. ಅವನ ಹೆಬ್ಬೆಟ್ಟುಗುರು 132 ಸೆಂಟಿಮೀಟರಗಳಷ್ಟು ಉದ್ದವಿತ್ತು.
ಜಟಿಲವಾದ ರಚನೆ
ಮೊದಲ ದೃಷ್ಟಿಗೆ ಉಗುರು ಕೇವಲ ಒಂದು ತುಂಡಾಗಿ—ಉಗುರು ಫಲಕ—ಕಾಣುತ್ತದೆ. ಆದುದರಿಂದ, ಉಗುರಿನಲ್ಲಿ ಅನೇಕ ದೊಡ್ಡ ದೃಶ್ಯಭಾಗಗಳು ಹಾಗೂ ನಿಮಗೆ ಕಾಣದಿರುವ ಕೆಲವು ಭಾಗಗಳು ಇರುವುದಾಗಿ ಎಣಿಸಲಾಗುತ್ತದೆಂದು ತಿಳಿಯುವುದು ನಿಮಗೆ ಅಚ್ಚರಿಯನ್ನು ಉಂಟುಮಾಡಬಹುದು. ನಾವೀಗ ಉಗುರು ರಚನೆಯನ್ನು ಹೆಚ್ಚು ನಿಕಟವಾಗಿ ನೋಡೋಣ.
1. ಉಗುರು ಫಲಕ. ಇದು ನಾವು ಸಾಧಾರಣವಾಗಿ ಉಗುರೆಂದು ಕರೆಯುವ ಗಟ್ಟಿಯಾದ ರಚನೆಯಾಗಿದೆ. ಉಗುರು ಫಲಕದಲ್ಲಿ ಎರಡು ಪದರಗಳು, ಮೇಲ್ಪದರ ಮತ್ತು ಕೆಳಪದರಗಳಿವೆ. ಈ ಎರಡು ಭಾಗಗಳಲ್ಲಿರುವ ಜೀವಕಣಗಳು ಭಿನ್ನವಾಗಿ ಏರ್ಪಡಿಸಲ್ಪಟ್ಟಿದ್ದು, ಅವುಗಳ ಬೆಳವಣಿಗೆಯ ವೇಗವು ಭಿನ್ನವಾಗಿರುತ್ತದೆ. ಮೇಲ್ಭಾಗವು ನುಣುಪಾಗಿರುವಾಗ, ಅದರ ಕೆಳಭಾಗದಲ್ಲಿ ಉಗುರು ತಳದ ಮೇಲಿರುವ ದಿಂಡುಗಳಿಗೆ ಅನುರೂಪವಾಗಿರುವ ಸಮನಾಂತರವಾದ ಏಣುಗಳಿವೆ. ಈ ದಿಂಡುಗಳು ಪ್ರತಿಯೊಬ್ಬನಲ್ಲಿ ಪ್ರತ್ಯೇಕ ರೀತಿಯದ್ದಾಗಿರುವುದರಿಂದ, ವ್ಯಕ್ತಿಯನ್ನು ಗುರುತಿಸುವ ಮಾಧ್ಯಮವಾಗಿ ಇವು ಕಾರ್ಯವೆಸಗಬಹುದು.
2. ಲೂನ್ಯುಲೀ. ಇದು ಉಗುರು ಫಲಕದ ಬುಡದಲ್ಲಿರುವ ಅರ್ಧಚಂದ್ರಾಕೃತಿಯ ಬೆಳ್ಳಗಿನ ಭಾಗವಾಗಿದೆ. ಎಲ್ಲ ಬೆರಳುಗಳಲ್ಲಿ ದೃಶ್ಯವಾಗಿರುವ ಲೂನ್ಯುಲೀ ಇರುವುದಿಲ್ಲ. ಉಗುರು ಫಲಕದ ಬುಡದಲ್ಲಿ ಮ್ಯಾಟ್ರಿಕ್ಸ್ ಎಂದು ಕರೆಯಲಾಗುವ, ಜೀವಿಸುತ್ತಿರುವ ಕಣಗಳ ಒಂದು ಸಣ್ಣ ಕ್ಷೇತ್ರದಿಂದ ಉಗುರು ಬೆಳೆಯುತ್ತದೆ. ಇದು ಒಂದು ಉಗುರಿನ ಅತಿ ಮಹತ್ವವುಳ್ಳ ಭಾಗವಾಗಿದೆ. ಲೂನ್ಯುಲೀ, ಉಗುರು ಮ್ಯಾಟ್ರಿಕ್ಸ್ನ ಕೊನೆಯ ಭಾಗವಾಗಿದೆ ಮತ್ತು ಆ ಕಾರಣದಿಂದ ಜೀವಿಸುತ್ತಿರುವ ಉಗುರಿನ ದೃಶ್ಯಭಾಗವಾಗಿದೆ. ಉಗುರು ಫಲಕದ ಉಳಿದ ಭಾಗವು ಸತ್ತ ಜೀವಕೋಶಗಳಿಂದ ರಚಿತವಾಗಿದೆ.
3. ಉಗುರು ನೆರಿಗೆಗಳು, ಕೇಂದ್ರಸ್ಥ ಮತ್ತು ಪಾರ್ಶ್ವಸ್ಥ. ಇವು ಉಗುರು ಫಲಕದ ಸುತ್ತಲಿರುವ ಚರ್ಮವನ್ನು ಸೂಚಿಸುತ್ತವೆ. ಈ ಚರ್ಮವನ್ನು ಉಗುರು ನೆರಿಗೆಯೆಂದು ಕರೆಯಲಾಗುತ್ತದೆ, ಏಕೆಂದರೆ ಇದು ಉಗುರು ಫಲಕದಲ್ಲಿ ಕೊನೆಗೊಳ್ಳುವ ಬದಲಿಗೆ ಅಡಿಭಾಗಕ್ಕೆ ಮಡಿಚಿ, ಹೊರಬರುತ್ತಿರುವ ಉಗುರು ಫಲಕವನ್ನು ಆವರಿಸುತ್ತದೆ. ಈ ಚರ್ಮ ನೆರಿಗೆಗಳು ಉಗುರಿನ ಸುತ್ತಲಿನ ಕ್ಷೇತ್ರಗಳನ್ನು ಸಂರಕ್ಷಿಸಿ ಬೆಂಬಲಿಸುತ್ತವೆ.
4. ಎಪನಿಕೀಯಮ್. ಇದು ಉಗುರು ಫಲಕದ ಬುಡದಲ್ಲಿ ಕೊನೆಯಾಗುತ್ತಿರುವಂತೆ ತೋರುವ ಚರ್ಮ ನೆರಿಗೆಯ ಚಿಕ್ಕ ಪಟ್ಟಿಯಾಗಿದೆ. ಕೆಲವೊಮ್ಮೆ ಇದನ್ನು ಕ್ಯೂಟಿಕಲ್ ಚರ್ಮಭಾಗವೆಂದು ಸೂಚಿಸಲಾಗುತ್ತದೆ.
5. ಕ್ಯೂಟಿಕಲ್. ಎಪನಿಕೀಯಮ್ನ ಕೆಳಭಾಗದಲ್ಲಿರುವ ಒಂದು ಚಿಕ್ಕ ಚಾಚಿಕೆಯೇ ನಿಜವಾದ ಕ್ಯೂಟಿಕಲ್ ಆಗಿದೆ. ಅದು ಏಣಿನಾಕಾರದ ಉಗುರು ಫಲಕದ ಮೇಲ್ಮೈಗೆ ಅಂಟಿಕೊಳ್ಳುವ, ತ್ಯಜಿಸಿದ ಚರ್ಮದ ಬಣ್ಣರಹಿತ ಪದರವಾಗಿದೆ.
6. ಮುಕ್ತ ಅಂಚು. ಬೆರಳಂಚನ್ನು ಮೀರಿ ಬೆಳೆಯುವ ಉಗುರು ಫಲಕದ ಭಾಗ.
7. ಹೈಪನಿಕೀಯಮ್. ಉಗುರಿನ ಮುಕ್ತ ಅಂಚಿನ ಕೆಳಗಡೆ ಇರುವ ಈ ಅಂಗಾಂಶವು, ಉಗುರು ತಳವನ್ನು ರೋಗಸೋಂಕಿನಿಂದ ರಕ್ಷಿಸುವ ನೀರುತಡೆಯುವ ಮುಚ್ಚಿಗೆಯನ್ನು ರಚಿಸುತ್ತದೆ.
ಇವುಗಳ ಉಪಯುಕ್ತತೆ
ನಮ್ಮ ಉಗುರುಗಳು ತುರಿಸಿಕೊಳ್ಳಲಿಕ್ಕಾಗುವಂತಹ ಅನೇಕ ವಿಧಗಳಲ್ಲಿ ಉಪಯುಕ್ತವಾಗಿವೆ. ಕಿತ್ತಳೆಯ ಸಿಪ್ಪೆ ತೆಗೆಯಲು, ಗಂಟು ಬಿಚ್ಚಲು ಅಥವಾ ಚಿಕ್ಕದಾದ ವಸ್ತುಗಳನ್ನು ನಿರ್ವಹಿಸಲು ಅವು ಉಪಯುಕ್ತವಾಗಿವೆ. ಇದಲ್ಲದೆ, ಸಂವೇದನಶಕ್ತಿಯುಳ್ಳ ಮತ್ತು ಸೂಕ್ಷ್ಮ ರಚನೆಯವುಗಳಾದ ಬೆರಳಂಚುಗಳನ್ನು, ಉಗುರುಗಳು ಬೆಂಬಲಿಸಿ ಕಾಪಾಡುತ್ತವೆ.
ಉಗುರುಗಳ ಸೌಂದರ್ಯ ಪ್ರಜ್ಞೆಯ ಗಮನಾರ್ಹತೆಯೂ ಅಲಕ್ಷಿಸಬಾರದ ಸಂಗತಿಯಾಗಿದೆ. ನಮ್ಮ ಉಗುರುಗಳು ಉತ್ತಮ ಅಥವಾ ನ್ಯೂನ ನೀಟುಗಾರಿಕೆಯ ಅಭ್ಯಾಸಗಳನ್ನು ಪ್ರತಿಬಿಂಬಿಸಬಹುದು. ಸಾಧಾರಣ ಭಾವಾಭಿನಯಗಳಲ್ಲಿ ಅವು ಪ್ರಮುಖ ಪಾತ್ರವನ್ನು ವಹಿಸುತ್ತವೆ, ಮತ್ತು ಉತ್ತಮವಾಗಿ ಇಟ್ಟುಕೊಳ್ಳುವಲ್ಲಿ ಅವು ನಮ್ಮ ಕೈಗಳನ್ನು ಸುಂದರಗೊಳಿಸಬಹುದು. ಅವುಗಳಿಲ್ಲದೆ, ದೈನಂದಿನ ಜೀವನದಲ್ಲಿ ಅಡಚಣೆಯಾಗುವುದು ಮಾತ್ರವಲ್ಲ, ನಮ್ಮ ಕೈಗಳು ಅಪೂರ್ಣವಾಗಿಯೂ ತೋರುವುವು.
ಯೋಗ್ಯ ಆರೈಕೆಯು ಅವನ್ನು ಹೆಚ್ಚು ಬಲಪಡಿಸುತ್ತದೆ
ನಮ್ಮ ಅದ್ಭುತಕರವಾದ ದೇಹದ ಭಾಗವಾಗಿರುವ ಕಾರಣ, ನಮ್ಮ ಉಗುರುಗಳ ಯೋಗ್ಯ ಆರೈಕೆಯನ್ನು ಮಾಡಬೇಕು. ಗುರುತರವಾದ ಉಗುರು ರೋಗವು ನಿಮಗಿರುವಲ್ಲಿ, ನೀವು ನಿಮ್ಮ ಡಾಕ್ಟರರನ್ನು ವಿಚಾರಿಸಬೇಕು. ವಾಸ್ತವವೇನಂದರೆ, ನಿಮ್ಮ ಬೆರಳುಗಳ ತುದಿಯಲ್ಲಿ ಯಾವುದೊ ಶಾರೀರಿಕ ಸಮಸ್ಯೆಯ ಸೂಚನೆಯು ಇರಬಹುದು. ಹೌದು, ನಿಮ್ಮ ಬೆರಳುಗುರುಗಳನ್ನು ನೋಡುವ ಮೂಲಕ ಕೆಲವು ಶಾರೀರಿಕ ಕಾಯಿಲೆಗಳನ್ನು ನಿರ್ಣಯಿಸಸಾಧ್ಯವಿದೆಯೆಂದು ಪ್ರತಿಪಾದಿಸಲಾಗುತ್ತದೆ.
ಕ್ಯಾಲ್ಸಿಯಮ್ ಅಥವಾ ಜೀವಾತುಗಳ ಹೆಚ್ಚು ಸೇವನೆಯು, ಉಗುರುಗಳನ್ನು ಹೆಚ್ಚು ಬಲವುಳ್ಳವುಗಳನ್ನಾಗಿ ಮಾಡುವುದೊ? ಈ ಪ್ರಶ್ನೆಯನ್ನು ಉತ್ತರಿಸುತ್ತಾ, ಸ್ವೀಡನ್ನ ಸ್ಟಾಕ್ಹೋಮ್ನ ಕಾರೋಲಿನ್ಸ್ಕ ಇನ್ಸ್ಟಿಟ್ಯೂಟ್ನ ಉಗುರುಗಳ ವಿಷಯದ ಒಬ್ಬ ಸಂಶೋಧಕರಾದ ಪ್ರೊಫೆಸರ್ ಬೋ ಫಾರ್ಸ್ಲಿಂಡ್ ಅವರು, ಎಚ್ಚರ! ಪತ್ರಿಕೆಗೆ ಹೇಳಿದ್ದು: “ಆ ದೃಷ್ಟಿಕೋನವನ್ನು ಬೆಂಬಲಿಸಲು ಯಾವುದೇ ಸಾಕ್ಷ್ಯವು ಲಭ್ಯವಿಲ್ಲ. ಆರೋಗ್ಯಕರವಾದ ಉಗುರುಗಳಲ್ಲಿರುವ ಕ್ಯಾಲ್ಸಿಯಮ್ನ ವಿಶ್ಲೇಷಣೆಗಳು, ಈ ಘಟಕಾಂಶದ ಸುಳಿವನ್ನು ಮಾತ್ರ ತೋರಿಸುತ್ತವೆ.”
ಆದರೆ ನಿಮ್ಮ ಉಗುರುಗಳನ್ನು ಬಲವಾಗಿಯೂ ನಮ್ಯವಾಗಿಯೂ ಇಡುವುದರಲ್ಲಿ ನೀರು ಸಹಾಯಮಾಡುತ್ತದೆಂಬುದು ನಿಶ್ಚಯ. ಈ ಮೊದಲೇ ಹೇಳಿರುವಂತೆ, ಉಗುರುಗಳಲ್ಲಿ ಕೆರಟಿನ್ ಇದೆ. ಈ ಕೆರಟಿನ್ ದಾರಗಳು ನಮ್ಯವಾಗಿರಬೇಕಾದರೆ ನೀರು ಆವಶ್ಯಕ. ಪ್ರೊಫೆಸರ್ ಫಾರ್ಸ್ಲಿಂಡ್ ಒಂದು ಉದಾಹರಣೆಯನ್ನು ಕೊಡುತ್ತಾರೆ: “ನಿಮ್ಮ ಉಗುರಿನ ಒಂದು ತುಂಡನ್ನು ನೀವು ಪ್ರಥಮವಾಗಿ ಕತ್ತರಿಸುವಾಗ ನಮ್ಯವಾಗಿರಬಹುದಾದರೂ, ರಾತ್ರಿಯಿಡೀ ಒಣಗಿದ ಮೇಲೆ ಕತ್ತರಿಸಿದ ಅದೇ ಉಗುರಿನ ತುಂಡು ತೀರ ಭಿದುರವಾಗಿರುತ್ತದೆ.” ತೇವವು ನಿಮ್ಮ ಉಗುರುಗಳನ್ನು ನಮ್ಯವಾಗಿಯೂ ಬಲಾಢ್ಯವಾಗಿಯೂ ಇಡುವುದು. ಆದರೆ ಈ ತೇವವು ಎಲ್ಲಿಂದ ಬರುತ್ತದೆ? ಉಗುರು ಫಲಕವು ಗಟ್ಟಿಯಾಗಿರುವಂತೆ ತೋರುವುದಾದರೂ, ಅದು ವ್ಯಾಪ್ಯವೂ ಆಗಿದೆ. ಉಗುರು ತಳದಲ್ಲಿರುವ ತೇವವು, ಉಗುರು ಫಲಕದ ಮೂಲಕ ಅದರ ಮೇಲ್ಮೈಗೆ ಬಂದು, ಅಲ್ಲಿ ಬಾಷ್ಪೀಕರಣ ಹೊಂದುತ್ತದೆ. ಉಗುರುಗಳನ್ನು ಒಣಗಿಹೋಗುವುದರಿಂದ ತಡೆಯಲು ಮತ್ತು ನಿಮ್ಮ ಉಗುರುಗಳನ್ನು ಗಟ್ಟಿಯಾಗಿಡಲು ಏನು ಮಾಡಸಾಧ್ಯವಿದೆ? “ಪ್ರತಿದಿನ ತೈಲ ಹಚ್ಚುವುದು ಪ್ರಯೋಜನಕರ,” ಎನ್ನುತ್ತಾರೆ ಪ್ರೊಫೆಸರ್ ಫಾರ್ಸ್ಲಿಂಡ್.
ಅವುಗಳ ಬೆಳವಣಿಗೆ ಮತ್ತು ಸೌಂದರ್ಯದ ಎಚ್ಚರಿಕೆ ವಹಿಸುವುದು
ಉಗುರು ಮ್ಯಾಟ್ರಿಕ್ಸ್ನಿಂದ ಬೆಳೆಯುವುದರಿಂದ, ಉಗುರಿನ ಈ ಭಾಗದ ಆರೈಕೆಯು ಅತ್ಯಾವಶ್ಯಕ. ಮ್ಯಾಟ್ರಿಕ್ಸನ್ನು ಕ್ರೀಮ್ ಅಥವಾ ತೈಲದಿಂದ ಕ್ರಮವಾಗಿ ನೀವಿ ಉತ್ತೇಜಿಸುವುದು ಉಗುರು ಫಲಕಕ್ಕೆ ಪ್ರಯೋಜನಕಾರಿಯಾಗಬಲ್ಲದು. ಇದಕ್ಕೆ ಕೂಡಿಸಿ, ಉಗುರುಗಳ ಮುಕ್ತ ಅಂಚಿನ ಕೆಳಗೆ ಒಂದು ತೊಟ್ಟು ತೈಲವನ್ನು ಹಾಕುವುದು ಸಹ, ಉಗುರು ಒಣಗುವುದನ್ನು ತಡೆಗಟ್ಟುವುದರಲ್ಲಿ ಸಹಾಯಕಾರಿಯಾಗಬಲ್ಲದು.
ನಿಮ್ಮ ಉಗುರುಗಳನ್ನು ಉಜ್ಜಿ ನಯಮಾಡುವ ಅಥವಾ ಕತ್ತರಿಸುವ ವಿಧವು ಅವನ್ನು ಬಲಗೊಳಿಸಬಲ್ಲದು ಅಥವಾ ಕ್ಷೀಣಿಸಬಲ್ಲದು. ನಿಮ್ಮ ಉಗುರುಗಳನ್ನು ಅರದಿಂದ ಉಜ್ಜುವಾಗ, ಬದಿಯಿಂದ ಮಧ್ಯಭಾಗದ ಕಡೆಗೆ ಉಜ್ಜುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಮೂಲೆಗಳನ್ನು ಉಜ್ಜಿ ತೆಗೆಯುವುದು ಉಗುರನ್ನು ಕ್ಷೀಣಿಸುವುದೆಂಬುದನ್ನು ಮನಸ್ಸಿನಲ್ಲಿಡಿರಿ. ಇದು ಮೊನಚಾದ ಉಗುರನ್ನು ಉಂಟುಮಾಡುತ್ತದೆ. ಇದಕ್ಕೆ ಬದಿಗಳಿಂದ ಆಧಾರವೇ ಇಲ್ಲದಿರುವುದರಿಂದ, ಇದು ಎಲ್ಲವುಗಳಲ್ಲಿ ಅತಿ ಬಲಹೀನವಾದ ಆಕಾರವಾಗಿದೆ. ಗಟ್ಟಿಯಾದ ಗಿಡ್ಡ ಉಗುರುಗಳಿಗಾಗಿ, ನಿಮ್ಮ ಉಗುರುಗಳನ್ನು ನೇರವಾಗಿ, ಬದಿಗಳಲ್ಲಿ ಸುಮಾರು 1.5 ಮಿಲಿಮೀಟರುಗಳಷ್ಟು ಬೆಳೆಯುವಂತೆ ಬಿಟ್ಟು, ಬೆರಳತುದಿಯ ಬಗ್ಗಿದ ಆಕಾರವನ್ನು ಅನುಸರಿಸುವಂತಹ ಉರುಟು ಆಕಾರವಿರಲಿಕ್ಕಾಗಿ ಅರದಿಂದ ಉಜ್ಜಬೇಕೆಂದು ಶಿಫಾರಸ್ಸುಮಾಡಲಾಗುತ್ತದೆ.
ಕೆಲವು ಮಂದಿ ಸ್ತ್ರೀಯರು ತಮ್ಮ ಉಗುರುಗಳನ್ನು ಸ್ವಲ್ಪ ಹೆಚ್ಚು ಉದ್ದ ಇಡಲು ಮನಸ್ಸುಮಾಡಬಹುದು. ಆದರೆ ಒಂದು ಎಚ್ಚರಿಕೆಯ ಮಾತು ಇಲ್ಲಿದೆ. ತೀರ ಉದ್ದವಾಗಿರುವ ಉಗುರುಗಳು ಅನಾವಶ್ಯಕವಾದ ಗಮನವನ್ನು ಸೆಳೆಯಬಹುದಲ್ಲದೆ, ಸಾಮಾನ್ಯ ಕೆಲಸಗಳನ್ನು ಮಾಡುವುದರಿಂದಲೂ ನಿಮ್ಮನ್ನು ತಡೆಯಬಹುದು. ಆದುದರಿಂದ ನಿಮ್ಮ ಉಗುರುಗಳು ಎಷ್ಟು ಉದ್ದವಿರಬೇಕೆಂಬ ವಿಷಯದಲ್ಲಿ ಸಮತೆಯ ವೀಕ್ಷಣವನ್ನಿಡಿರಿ. ಹಾಗೆ ಇಡುವಲ್ಲಿ, ನಿಮ್ಮ ಉಗುರುಗಳು ಉಪಯುಕ್ತ ಸ್ವತ್ತಾಗಿದ್ದು, ಇತರರಲ್ಲಿ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವುವು.
ಮೊನಚಾದ ಉಪಕರಣದಿಂದ ನಿಮ್ಮ ಉಗುರುಗಳನ್ನು ಎಂದಿಗೂ ಸ್ವಚ್ಛಮಾಡಬೇಡಿರಿ, ಎನ್ನುತ್ತಾರೆ ಪರಿಣತರು. ಇದು ಉಗುರಿನ ಮುಕ್ತ ಅಂಚಿನ ಅಡಿಯಲ್ಲಿರುವ ಅಂಗಾಂಶವಾದ ಹೈಪನಿಕೀಯಮ್ಗೆ ಹಾನಿಯನ್ನು ಉಂಟುಮಾಡಬಲ್ಲದು. ಈ ಅಂಗಾಂಶವು ಅಡಿಭಾಗದಲ್ಲಿರುವ ಉಗುರಿಗೆ ಬಿಗಿಯಾದ ಮುಚ್ಚಿಗೆಯನ್ನು ರಚಿಸಿ ಅದನ್ನು ಕಾಪಾಡುತ್ತದೆ. ಈ ಕ್ಷೇತ್ರಕ್ಕೆ ಹಾನಿಯಾಗುವಲ್ಲಿ, ಉಗುರು ಅದರ ತಳದಿಂದ ಪ್ರತ್ಯೇಕವಾಗಿ, ಸೋಂಕಿತಗೊಳ್ಳಸಾಧ್ಯವಿದೆ. ಉಗುರಿನ ಅಡಿಯನ್ನು ಸ್ವಚ್ಛಮಾಡಲು ಅತಿ ಮೃದುವಾದ ಬ್ರಷನ್ನು ಉಪಯೋಗಿಸಿರಿ.
ಗಟ್ಟಿಯಾದದ್ದೂ ಆರೋಗ್ಯಕರವೂ ಆದ ಉಗುರುಗಳು ಸ್ವಲ್ಪಮಟ್ಟಿಗೆ ವಂಶಾನುಕ್ರಮದ ಸಂಗತಿಗಳಿಂದಾಗಿ ಬಂದಿರುತ್ತವೆ. ಈ ಕಾರಣದಿಂದಲೇ, ಕೆಲವರಿಗೆ ಗಟ್ಟಿಯಾದ ಮತ್ತು ನಮ್ಯವಾದ ಉಗುರು ಫಲಕಗಳಿರುವಾಗ, ಇತರರಿಗೆ ಒಣಗಿಹೋದ ಅಥವಾ ಭಿದುರವಾದ ಉಗುರುಗಳಿರುತ್ತವೆ. ನಿಮ್ಮ ಉಗುರುಗಳು ಯಾವುದೇ ಸ್ಥಿತಿಯಲ್ಲಿರಲಿ, ಮಿತವಾದ ಮತ್ತು ಕ್ರಮವಾದ ಆರೈಕೆಯಿಂದ ನೀವು ಅವುಗಳ ತೋರಿಕೆಗಳನ್ನು ಉತ್ತಮಗೊಳಿಸಲು ಸಾಧ್ಯವಿದೆ. ಹೌದು, ಒಂದು ಸಂಪೂರ್ಣ ಉಗುರಿನ ರಚನೆ, ಕಾರ್ಯ ಮತ್ತು ಯೋಗ್ಯ ಆರೈಕೆಯ ತಿಳಿವಳಿಕೆಯು ನಿಮಗೆ ಪ್ರಾಯೋಗಿಕ ಜ್ಞಾನವನ್ನು ಕೊಡುತ್ತದೆ. ಇಂತಹ ಮಾಹಿತಿಯನ್ನು ವಿವೇಕದಿಂದ ಉಪಯೋಗಿಸುವುದು, ಉತ್ತಮ ಫಲಿತಾಂಶಗಳನ್ನು ಉಂಟುಮಾಡುವುದು.
ಬೆರಳುಗುರುಗಳು ಮಾನವ ದೇಹದ ಒಂದು ಅದ್ಭುತಕರವಾದ ಭಾಗವೆಂಬುದು ನಿಶ್ಚಯ. ಅವುಗಳ ರಚನೆಯೂ ಕಾರ್ಯವೂ ಅವುಗಳ ಹಿಂದಿರುವ ಚಾತುರ್ಯದ ಪ್ರಜ್ಞಾಶಾಲಿಗೆ ಸಾಕ್ಷಿ ನೀಡುತ್ತದೆ. ಪುರಾತನ ಸಮಯಗಳ ರಾಜನಾದ ದಾವೀದನು ತನ್ನ ಸೃಷ್ಟಿಕರ್ತನಿಗಾಗಿದ್ದ ಪ್ರಶಂಸೆಯನ್ನು, ಕೀರ್ತನೆ 139:14ರಲ್ಲಿ ದಾಖಲಿಸಿರುವಂತೆ ದೈನ್ಯದಿಂದ ವ್ಯಕ್ತಪಡಿಸಿದನು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”
[ಪುಟ 23ರಲ್ಲಿರುವಚಿತ್ರ]
(For fully formatted text, see publication)
1. ಉಗುರು ಫಲಕ;
2. ಲೂನ್ಯುಲೀ;
3. ಉಗುರು ನೆರಿಗೆಗಳು, ಕೇಂದ್ರಸ್ಥ ಮತ್ತು ಪಾರ್ಶ್ವಸ್ಥ;
4. ಎಪನಿಕೀಯಮ್;
5. ಕ್ಯೂಟಿಕಲ್;
6. ಮುಕ್ತ ಅಂಚು;
7. ಹೈಪನಿಕೀಯಮ್;
8. ಮ್ಯಾಟ್ರಿಕ್ಸ್;
9. ಉಗುರು ತಳ