ನಮ್ಮ ವಾಚಕರಿಂದ
ನಾವು ನಮ್ಮ ಹವಾಮಾನವನ್ನು ಬದಲಾಯಿಸುತ್ತಿದ್ದೇವೊ? ನನಗೆ 17 ವರ್ಷ ವಯಸ್ಸು ಮತ್ತು ನಾನು ಡಿಪ್ಲೊಮಾ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಆ ಪರೀಕ್ಷೆಯಲ್ಲಿ ಭೂಗೋಲಶಾಸ್ತ್ರವಿದೆ ಮತ್ತು “ನಾವು ನಮ್ಮ ಹವಾಮಾನವನ್ನು ಬದಲಾಯಿಸುತ್ತಿದ್ದೇವೊ?” ಎಂಬ (ಜೂನ್ 8, 1998) ಲೇಖನಮಾಲೆಯು ಪರೀಕ್ಷೆಗೆ ತಯಾರಿ ಮಾಡುವುದರಲ್ಲಿ ತುಂಬ ಸಹಾಯವನ್ನು ನೀಡಿತು. ಪರೀಕ್ಷೆಯು ಮುಗಿದಾದ ನಂತರ, ನನ್ನ ಸಹಪಾಠಿಗಳು ಹವಾಮಾನದ ಕುರಿತಾದ ಈ ಮಾಹಿತಿಯು ನನಗೆ ಎಲ್ಲಿಂದ ಸಿಕ್ಕಿತು ಎಂದು ಕೇಳಿದರು. ಮತ್ತು ಅವರಲ್ಲಿ ಅರ್ಧದಷ್ಟು ಮಂದಿ ತಮಗೆ ಆ ಪ್ರತಿಗಳು ಬೇಕೆಂದು ಕೇಳಿದರು.
ಎ. ಜಿ., ಸ್ವಿಟ್ಸರ್ಲೆಂಡ್
ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ ಕೊಡಲ್ಪಟ್ಟಿರುವ ಹಸಿರುಮನೆಯ ವಿಶ್ಲೇಷಣೆಯಿಂದ ನನಗೆ ತುಂಬ ಆಶ್ಚರ್ಯವಾಯಿತು. ನಾನೊಬ್ಬ ಪಕ್ಕಾ ಪರಿಸರವಾದಿ ಮತ್ತು ಒಬ್ಬ ಕ್ರೈಸ್ತನಾಗಿದ್ದೇನೆ. ಯೆಹೋವನ ಸಾಕ್ಷಿಗಳು ಯಾವಾಗಲೂ ವಾರ್ತಾಮಾಧ್ಯಮದಿಂದ ಟೀಕೆಗೆ ಗುರಿಯಾಗುತ್ತಾರೆ. ಆದರೆ ನಿಮ್ಮ ಪತ್ರಿಕೆಯಲ್ಲಿ ಮೂಡಿಬಂದಿರುವ ವಿಷಯಗಳು ನಿಜವಾಗಿಯೂ ಇದರ ಬಗ್ಗೆ ಆಲೋಚಿಸುವಂತೆ ಮಾಡುತ್ತವೆ. ಪರಿಸರ ಮತ್ತು ನಂಬಿಕೆಯು ನಾಶನದ ಅಂಚಿನಲ್ಲಿವೆ. ಕಟ್ಟಕಡೆಗಾದರೂ, ದೇವರ ಸೃಷ್ಟಿಕಾರ್ಯದಲ್ಲಿ ಆಸಕ್ತರಾಗಿರುವ ಧಾರ್ಮಿಕ ಜನರನ್ನು ಕಂಡುಕೊಳ್ಳಬಹುದೆಂದಾಯಿತು!
ಎಮ್. ಸಿ., ಫ್ರಾನ್ಸ್
ನನಗೆ 14 ವರ್ಷ ವಯಸ್ಸು ಮತ್ತು ನಿಮ್ಮ ಲೇಖನಗಳಿಗಾಗಿ ನಾನು ಧನ್ಯವಾದವನ್ನು ಅರ್ಪಿಸಲು ಇಷ್ಟಪಡುತ್ತೇನೆ. ನಾನು ಹವಾಮಾನದ ಬಗ್ಗೆ ಅಷ್ಟೊಂದು ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ, ಆದರೆ ಈಗ, ನನ್ನ ಜೀವನದಲ್ಲಿ ಮೊದಲ ಬಾರಿ ನಾವು ನಮ್ಮ ಗ್ರಹಕ್ಕೆ ಏನು ಮಾಡುತ್ತಿದ್ದೇವೆಂಬುದರ ಬಗ್ಗೆ ಗಂಭೀರವಾಗಿ ಯೋಚಿಸಿದ್ದೇನೆ. ಈ ಲೇಖನಗಳು ನಿಜವಾಗಿಯೂ ಅನೇಕ ಜನರ ಕಣ್ಣನ್ನು ತೆರೆಸಬೇಕಾಗಿದೆ. ಏಕೆಂದರೆ ನಮ್ಮ ಪರಿಸರವನ್ನು ಹಾಳುಮಾಡಲು ಯಾರು ತಾನೇ ಇಷ್ಟಪಡುವರು? ದೇವರ ಈ ಅಮೂಲ್ಯವಾದ ಕೊಡುಗೆಯನ್ನು ನಾವು ಕಡೆಗಣಿಸಬಾರದು.
ಎಸ್. ಕ್ಯೂ., ಜರ್ಮನಿ
ಜನರು ಧಾರ್ಮಿಕ ಪತ್ರಿಕೆಯೆಂದು ನೆನಸುವ ಈ ಪತ್ರಿಕೆಯಲ್ಲಿ, ಹವಾಮಾನದ ಕುರಿತು ಓದುವುದು ಒಂದು ರೀತಿಯ ಆನಂದವನ್ನು ತಂದಿತು. ಎಚ್ಚರ! ಪತ್ರಿಕೆಯು ಜನರ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇದು ಕೇವಲ ಧಾರ್ಮಿಕವಾಗಿ ಮಾತ್ರವಲ್ಲ ಭೌತಿಕವಾಗಿಯೂ. ನಾವು ಹವಾಮಾನವನ್ನು ಮಾಮೂಲಿಯಾಗಿ ಎಣಿಸುವುದಾದರೂ ಅದು ನಮ್ಮ ಜೀವಿತಗಳ ಮೇಲೆ ಖಂಡಿತವಾಗಿಯೂ ಪರಿಣಾಮವನ್ನು ಬೀರುತ್ತದೆ.
ಎಮ್. ಎಫ್. ಎಮ್., ಜರ್ಮನಿ
ಆದರ್ಶ ವ್ಯಕ್ತಿ ಜೂನ್ 8, 1998, ಎಚ್ಚರ! ಪತ್ರಿಕೆಯ “ಯುವ ಜನರು ಪ್ರಶ್ನಿಸುವುದು . . . ನನ್ನ ಆದರ್ಶ ವ್ಯಕ್ತಿ ಯಾರಾಗಿರಬೇಕು?” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ನಾನು ಓದಿದಾಗ, ನನ್ನ ಜೀವಿತವನ್ನು ಸಂಪದ್ಯುಕ್ತಗೊಳಿಸಿರುವ ಈ ರೀತಿಯ ಲೇಖನಗಳ ಬಗ್ಗೆ ನಾನು ಚಿಂತನೆಮಾಡಿದೆ. ನನ್ನ ಕುಟುಂಬವು ಛಿದ್ರವಾದಾಗ, ಸಹಜವಾಗಿಯೇ ಮೊದಲು ನನ್ನ ಸಮವಯಸ್ಕರಾದ ಮಿತ್ರರಿಗೆ ಹತ್ತಿರವಾದೆ. ಆದರೆ ಆಮೇಲೆ ನನ್ನ ಜೀವಿತದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿದ್ದ ಜನರ ಕುರಿತಾಗಿ—ಪ್ರಾಯಸ್ಥರಾದ ಕ್ರೈಸ್ತ ಸಹೋದರಿಯರ ಕುರಿತಾಗಿ—ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದೆ. ಈಗ ನಾನು ಪೌಲನೂ ತಿಮೊಥೆಯನೂ ಅಥವಾ ರೂತಳೂ ನವೋಮೀಯರಂತಹ ವ್ಯಕ್ತಿಗಳ ಸಂಬಂಧಗಳನ್ನು ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ನನ್ನ ಆಪ್ತ ಸ್ನೇಹಿತೆಯು ಸುಮಾರು 50 ವರ್ಷ ಪ್ರಾಯದವರಾಗಿದ್ದಾರೆ. ಮತ್ತು ಅವರು ನನಗೆ ಸಂತೋಷ, ಪ್ರೀತಿ, ಸಹಾನೂಭೂತಿ, ದಯೆ ಮತ್ತು ಉದಾರಭಾವದದ ಬಗ್ಗೆ ಕಲಿಸಿದರು. ನಾವು ಐಕ್ಯದಿಂದ ಕೆಲಸಮಾಡುತ್ತೇವೆ. ನಾವು ಒಂದೇ ಮನೆಯಲ್ಲಿ ವಾಸಿಸುತ್ತೇವೆ ಮತ್ತು ಪೂರ್ಣಸಮಯದ ಶುಶ್ರೂಷೆಯನ್ನು ಪ್ರಾರಂಭಿಸಿದ್ದೇವೆ. ನೀವು ಕೊಟ್ಟ ಅಮೂಲ್ಯವಾದ ಮಾರ್ಗದರ್ಶನೆಗೆ ತುಂಬ ಧನ್ಯವಾದಗಳು.
ಸಿ. ಎಫ್., ಅಮೆರಿಕ
ಫೈಬ್ರಮೈಆ್ಯಲ್ಜೀಯ “ಫೈಬ್ರಮೈಆ್ಯಲ್ಜೀಯ ರೋಗವನ್ನು ಅರಿತುಕೊಂಡು ಅದನ್ನು ಸಹಿಸಿಕೊಳ್ಳುತ್ತ ಜೀವಿಸುವುದು.” (ಜುಲೈ 8, 1998) ಎಂಬ ಲೇಖನಕ್ಕಾಗಿ ತುಂಬ ಧನ್ಯವಾದಗಳು. ನಾನು ಸುಮಾರು ಆರು ವರ್ಷಗಳಿಂದ ಈ ರೋಗದಿಂದ ಬಳಲುತ್ತಿದ್ದೇನೆ. ಈ ಲೇಖನವು ಸಮಗ್ರವೂ ನಿಷ್ಕೃಷ್ಟವೂ ಆದದ್ದಾಗಿದೆ. ಅಷ್ಟುಮಾತ್ರವಲ್ಲದೆ, ಬಾಕ್ಸ್‌ನಲ್ಲಿರುವ ಶಾಸ್ತ್ರವಚನಗಳು ನನಗೆ ತುಂಬ ಉತ್ತೇಜನವನ್ನು ಕೊಟ್ಟವು.
ಎನ್. ಎಮ್., ಅಮೆರಿಕ
ಈ ಲೇಖನದ ಬಗ್ಗೆ ಅನೇಕರು ಪತ್ರವನ್ನು ಬರೆದಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಇನ್ನೂ ಹೆಚ್ಚಿನ ವಿಷಯಗಳನ್ನು ಒದಗಿಸಲು ನಾವು ಆಶಿಸುತ್ತೇವೆ.—ಸಂಪಾ.