ಸ್ವ-ಚಿಕಿತ್ಸೆ—ಪ್ರಯೋಜನಗಳು ಮತ್ತು ಅಪಾಯಗಳು
ಬ್ರೆಸಿಲ್ನ ಎಚ್ಚರ! ಸುದ್ದಿಗಾರರಿಂದ
“ಲೋಕವ್ಯಾಪಕವಾಗಿ ಸ್ವ-ಚಿಕಿತ್ಸೆಯ ಕ್ಷೇತ್ರವು ವಿಸ್ತರಿಸುತ್ತಿದೆ” ಎಂದು, ಔಷಧವಸ್ತುಗಳನ್ನು ತಯಾರಿಸುವ ಒಂದು ದೊಡ್ಡ ಕಂಪನಿಯ ಅಧ್ಯಕ್ಷರು ಹೇಳುತ್ತಾರೆ. “ಜನರು ತಮ್ಮ ಆರೋಗ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ.” ಇದು ನಿಜವಾಗಿರಬಹುದಾದರೂ, ನೀವು ಅರಿತಿರಬೇಕಾದ ಯಾವುದೇ ಅಪಾಯಗಳು ಇವೆಯೊ?
ಯೋಗ್ಯವಾಗಿ ಬಳಸಲ್ಪಟ್ಟಲ್ಲಿ, ಔಷಧವು ನಿಶ್ಚಯವಾಗಿಯೂ ಉಪಶಮನವನ್ನು ತರಬಲ್ಲದು. ಉದಾಹರಣೆಗೆ, ಇನ್ಸ್ಯುಲಿನ್ ಮತ್ತು ಪ್ರತಿನಿರೋಧಕಗಳು, ಅಷ್ಟೇ ಅಲ್ಲದೆ ಮೌಖಿಕ ಪುನರ್ಜಲೀಕರಣ ಚಿಕಿತ್ಸೆಯಂತಹ ಅಗ್ಗದ ಮತ್ತು ಸರಳ ಸೂತ್ರವು ಸಹ, ಅಸಂಖ್ಯಾತ ಜೀವಗಳನ್ನು ರಕ್ಷಿಸುತ್ತದೆ. ಸ್ವ-ಚಿಕಿತ್ಸೆಯಲ್ಲಿ ನಾವು ಎದುರಿಸುವಂತಹ ಪಂಥಾಹ್ವಾನವು, ಯಾವ ಹಂತದಲ್ಲಿ ಪ್ರಯೋಜನಗಳು ಅಪಾಯಗಳಿಗಿಂತಲೂ ಹೆಚ್ಚಾಗಿವೆ ಎಂಬುದನ್ನು ನಿಶ್ಚಯಿಸುವುದೇ ಆಗಿದೆ.
ಕೆಲವು ದೇಶಗಳಲ್ಲಿ ಯೋಗ್ಯವಾದ ವೈದ್ಯಕೀಯ ಸಹಾಯವು, ಬಹಳ ದೂರದಲ್ಲಿರಬಹುದು ಇಲ್ಲವೆ ಬಹಳ ದುಬಾರಿಯಾಗಿರಬಹುದು ಎಂಬುದು ಒಪ್ಪತಕ್ಕ ವಿಷಯವೇ. ಆದಕಾರಣ, ಚಿಕಿತ್ಸಾವಿಧಾನದ ಕುರಿತ ಮಾಹಿತಿಗಾಗಿ ಅನೇಕ ಜನರು, ಮಿತ್ರರ ಮತ್ತು ಸಂಬಂಧಿಕರ ಅಭಿಪ್ರಾಯಗಳ ಮೇಲೆ ಇಲ್ಲವೆ ಸ್ವಸಹಾಯ ನೀಡುವ ಪುಸ್ತಕಗಳ ಮೇಲೆ ಆತುಕೊಳ್ಳುತ್ತಾರೆ. ಅಲ್ಲದೆ, “ಒಂದು ಸಾದಾ ಕ್ಯಾಪ್ಸ್ಯೂಲ್ನ ಖರೀದಿಯಿಂದ, ಆರೋಗ್ಯವಂತರೂ ಯೋಗಕ್ಷೇಮವುಳ್ಳವರೂ ಆಗಿರಸಾಧ್ಯವೆಂಬ ವಿಚಾರವನ್ನು ಪ್ರಕಟನಾ ಕಾರ್ಯಾಚರಣೆಗಳು ನೀಡುತ್ತವೆ,” ಎಂದು ಬ್ರೆಸಿಲ್ನ ಸಾವೋ ಪೌಲೋ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ಫರ್ನಾನ್ಡೂ ಲಫೆವ್ರ್ ಹೇಳುತ್ತಾರೆ.a ಫಲಸ್ವರೂಪವಾಗಿ, ಮಿತಿಮೀರಿದ ಕೆಲಸ, ಕೆಳಮಟ್ಟದ ಪೋಷಣೆ, ಮತ್ತು ಚಿಕ್ಕಪುಟ್ಟ ಭಾವನಾತ್ಮಕ ಸಮಸ್ಯೆಗಳನ್ನೂ ಜಯಿಸಲು, ಅನೇಕರು ಔಷಧಗಳಿಗೆ ಶರಣುಹೋಗುತ್ತಾರೆ. ಲಫೆವ್ರ್ ಕೂಡಿಸುವುದು: “ಜನರು ತಮ್ಮ ಜೀವಿತದ ಗುಣಮಟ್ಟವನ್ನು ಸುಧಾರಿಸುವ ಬದಲು, ತಾವೇ ಖರೀದಿಸುವ ಔಷಧಗಳಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.” ಮತ್ತು ರೋಗಿಗಳು ಸರಿಯಾದ ರೋಗ ನಿರ್ಣಯವನ್ನು ಮಾಡುತ್ತಾರೊ ಎಂಬುದೂ ಸಂಶಯಾಸ್ಪದವಾಗಿದೆ.
ತಲೆನೋವು, ಅಧಿಕ ರಕ್ತದೊತ್ತಡ, ಮತ್ತು ಹೊಟ್ಟೆ ತೊಳೆಸುವಿಕೆಯಂತಹ ಕಾಯಿಲೆಗಳನ್ನು ಗುಣಪಡಿಸಲು ಔಷಧವನ್ನು ಬಳಸುವುದರ ಜೊತೆಗೆ, ಕಳವಳ, ಭಯ, ಮತ್ತು ಏಕಾಂಗಿತನವನ್ನು ನಿಭಾಯಿಸಲೂ ಅನೇಕರು ಔಷಧವನ್ನು ಬಳಸುತ್ತಾರೆ. “ಮಾತ್ರೆಯೊಂದು ತಮ್ಮ ಸಮಸ್ಯೆಯನ್ನು ಬಗೆಹರಿಸುವುದೆಂದು ಜನರು ನೆನಸುವುದರಿಂದ, ಅವರು ಒಬ್ಬ ವೈದ್ಯನ ಸಹಾಯವನ್ನು ಕೋರುತ್ತಾರೆ,” ಎಂದು ಡಾ. ಆಂಡ್ರೇ ಫೈನ್ಗಾಲ್ಡ್ ಹೇಳುತ್ತಾರೆ. “ವೈದ್ಯರು ಸಹ, ಔಷಧಗಳನ್ನು ಮತ್ತು ಎಣಿಕೆಯಿಲ್ಲದ ಪರೀಕ್ಷೆಗಳನ್ನು ಶಿಫಾರಸ್ಸುಮಾಡುವ ಪ್ರವೃತ್ತಿವುಳ್ಳವರಾಗಿರುತ್ತಾರೆ. ರೋಗಿಯ ವೈದ್ಯಕೀಯ ಹಿನ್ನೆಲೆ—ಹೆಚ್ಚಿನ ಸಂದರ್ಭಗಳಲ್ಲಿ, ಅವನ ಅಸ್ತವ್ಯಸ್ತವೂ ಒತ್ತಡಪೂರ್ಣವೂ ಮತ್ತು ಅಹಿತಕರವಾದ ಜೀವನಶೈಲಿ—ಯನ್ನು ತಿಳಿದುಕೊಳ್ಳಲು ಯಾವ ಪ್ರಯತ್ನವನ್ನು ಮಾಡಲಾಗುವುದಿಲ್ಲ.” ವರ್ಲ್ಡ್ ಕೌನ್ಸಿಲ್ ಫಾರ್ ಪ್ರಿವೆಂಷನ್ ಆಫ್ ದಿ ಎಬ್ಯೂಸ್ ಆಫ್ ಸೈಕೋಟ್ರಾಪಿಕ್ಸ್ (ಗ್ರಹಿಕೆ ಇಲ್ಲವೆ ವರ್ತನೆಯನ್ನು ಬದಲಾಯಿಸುವ ಔಷಧಗಳು) ಸಂಸ್ಥೆಯ ರೋಮಿಲ್ಡೊ ಬ್ವೆನೋ ಒಪ್ಪಿಕೊಳ್ಳುವುದು: “ವೈದ್ಯನಲ್ಲಿ ರೋಗಿಗಳನ್ನು ಪರೀಕ್ಷಿಸಲು ಸಾಕಷ್ಟು ಸಮಯವಿರುವುದಿಲ್ಲ, ಆದುದರಿಂದ ವೈದ್ಯನು ರೋಗಲಕ್ಷಣವನ್ನು ಮಾತ್ರ ಉಪಚರಿಸುತ್ತಾ, ರೋಗಿಯನ್ನು ಬೇಗನೆ ಕಳುಹಿಸಿಬಿಡುತ್ತಾನೆ.” ಔಷಧಗಳನ್ನು ಉಪಯೋಗಿಸುವುದು, “ಸಾಮಾಜಿಕ ಸಮಸ್ಯೆಗಳನ್ನು [ಬಗೆಹರಿಸುವ] ವೈದ್ಯಕೀಯ ವಿಧವಾಗಿದೆ.” ಹಾಗಿದ್ದರೂ, ಹೆಚ್ಚಿನ ರೋಗಿಗಳಿಗೆ, ಜಾಗರೂಕವಾಗಿ ನಿರ್ದೇಶಿಸಲ್ಪಟ್ಟ ಸೈಕೋಟ್ರಾಪಿಕ್ (ಮನಸ್ಸಿನ ಮೇಲೆ ಕಾರ್ಯಮಾಡುವ) ಔಷಧಗಳು ಬೇಕೇ ಬೇಕೆಂದು ಮತ್ತೊಬ್ಬ ವೈದ್ಯನು ಎಚ್ಚರಿಸುತ್ತಾನೆ.
“ಪ್ರೋಸ್ಯಾಕ್ ಗೀಳು” ಎಂಬ ಔಷಧದ ಬಗ್ಗೆ ಚರ್ಚಿಸಿದ ಬಳಿಕ, ಬ್ರೆಸಿಲಿಯನ್ ವಾರ್ತಾಪತ್ರಿಕೆಯಾದ ಓ ಎಸ್ಟಾಡೋ ಡ ಸಾವು ಪೌಲೂ ಹೇಳುವುದು: “ಒಂದು ಪರಿಹಾರವು, ಹೊಸ ಕೇಶಶೈಲಿಯಂತೆ ಒಂದು ಗೀಳಾಗಿ ಪರಿಣಮಿಸುವಾಗ, ಅದು ಖಂಡಿತವಾಗಿಯೂ ವಿಚಿತ್ರವಾದದ್ದಾಗಿದೆ.” ಅದು ಮನಶ್ಶಾಸ್ತ್ರಜ್ಞರಾದ ಆರ್ಥರ್ ಕಾಫ್ಮನ್ ಅವರ ಮಾತುಗಳನ್ನು ಉದ್ಧರಿಸುತ್ತದೆ: “ಜೀವನದಲ್ಲಿ ಯಥಾದೃಷ್ಟಿ ಮತ್ತು ಉದ್ದೇಶದ ಕೊರತೆಯು, ಒಂದು ವಿಚಿತ್ರ ಘಟನೆಯನ್ನು ಸೃಷ್ಟಿಸಿ, ಅದನ್ನು ಎಲ್ಲಾ ಅಸ್ವಸ್ಥತೆಗಳಿಂದ ರಕ್ಷಿಸುವ ಒಂದು ಪರಿಣಾಮಕಾರಿ ಪರಿಹಾರವನ್ನಾಗಿ ಮಾಡುತ್ತದೆ.” ಕಾಫ್ಮನ್ ಕೂಡಿಸುವುದು: “ಮಾನವನು ತತ್ಕ್ಷಣದ ಪರಿಹಾರಗಳ ಕುರಿತು ಹೆಚ್ಚೆಚ್ಚು ಆಸಕ್ತನಾಗುತ್ತಿದ್ದಾನೆ. ಆ ಕಾರಣ, ತನಗಿರುವ ಸಮಸ್ಯೆಗಳ ಕಾರಣಗಳನ್ನು ಕಂಡುಹಿಡಿಯುವುದರಲ್ಲಿ ಆಸಕ್ತನಾಗಿರದೆ, ಅವುಗಳನ್ನು ಬಗೆಹರಿಸಲು ಒಂದು ಮಾತ್ರೆಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾನೆ.” ಆದರೆ ಸ್ವ-ಚಿಕಿತ್ಸೆ ಮಾಡಿಕೊಳ್ಳುವುದು ಸುರಕ್ಷಿತವೊ?
ಸ್ವ-ಚಿಕಿತ್ಸೆ—ಒಂದು ಅಪಾಯವೊ?
“ಇಪ್ಪತ್ತನೆಯ ಶತಮಾನದ ವೈದ್ಯಕೀಯ ಕ್ಷೇತ್ರದಲ್ಲಿನ ಗಮನಾರ್ಹ ವೈಶಿಷ್ಟ್ಯಗಳಲ್ಲೊಂದು, ಹೊಸ ಔಷಧಗಳ ವಿಕಸನವಾಗಿದೆ,” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಆದರೆ ಅದು ಹೀಗೂ ಹೇಳುತ್ತದೆ: “ಬಹುಶಃ ವಿಷಗೊಳಿಸುವಿಕೆಯು, ಬೇರೆ ಯಾವುದೇ ಕಾರಣಕ್ಕಿಂತಲೂ ಹೆಚ್ಚಾಗಿ ಔಷಧಗಳ ದುರುಪಯೋಗದಿಂದಲೇ ಸಂಭವಿಸುತ್ತದೆ.” ಔಷಧವು ಗುಣಪಡಿಸಲು ಸಾಧ್ಯವಿರುವಂತೆಯೇ ಹಾನಿಯನ್ನು ಕೂಡ ಉಂಟುಮಾಡಬಲ್ಲದು. ಆ್ಯನರೆಕ್ಸಿಅ ಪಥ್ಯದ ಮಾತ್ರೆಗಳು, “ನರವ್ಯೂಹ ವ್ಯವಸ್ಥೆಯ ಮೇಲೆ ಕಾರ್ಯನಡೆಸಿ, ನಿರ್ನಿದ್ರತೆ, ವರ್ತನೆಯಲ್ಲಿ ಬದಲಾವಣೆಗಳು, ಮತ್ತು ಕೆಲವು ಸಂದರ್ಭಗಳಲ್ಲಿ ಮಿಥ್ಯಾದರ್ಶನದಂತಹ ಪ್ರತಿಕೂಲ ಲಕ್ಷಣಗಳನ್ನೂ ಕೆರಳಿಸಬಲ್ಲವೆಂದು,” ಬರಹಗಾರ ಸೀಲೆನೆ ಡೆ ಕಾಸ್ಟ್ರೂ ವಿವರಿಸುತ್ತಾರೆ. ಅವರು ಕೂಡಿಸುವುದು: “ಆ್ಯನರೆಕ್ಸಿಅ ಮಾತ್ರೆಗಳು ಹಸಿವನ್ನು ತಡೆಗಟ್ಟಲು ಮಾತ್ರ ಕಾರ್ಯನಡಿಸುತ್ತವೆಂದು ನೆನಸುವ ಒಬ್ಬ ವ್ಯಕ್ತಿಯು ತನನ್ನು ತಾನೇ ವಂಚಿಸಿಕೊಳ್ಳುತ್ತಿದ್ದಾನೆ. ಪ್ರತಿಯೊಂದು ಮಾತ್ರೆಯು ಮತ್ತೊಂದರ ಪರಿಣಾಮವನ್ನು ನಿಷ್ಪರಿಣಾಮವಾಗಿಸುತ್ತಾ, ಹೀಗೆ ಒಂದು ಮಾತ್ರೆಯು ಪರಿಹಾರಗಳ ವಿಷಮಚಕ್ರದ ಆರಂಭವಾಗಿರಬಹುದು.”
ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಅನೇಕ ಔಷಧಗಳು, ಹೊಟ್ಟೆಯಲ್ಲಿ ಕೆರಳಿಕೆಯನ್ನು, ಮತ್ತು ಪಿತ್ತೋದ್ರೇಕವನ್ನು ಸಹ, ವಾಂತಿಯನ್ನು ಮತ್ತು ರಕ್ತಸ್ರಾವವನ್ನು ಉಂಟುಮಾಡಬಲ್ಲವು. ಕೆಲವು ಔಷಧಗಳು ಬೇಗನೆ ಗೀಳಾಗಿ ಪರಿಣಮಿಸಬಲ್ಲವು ಇಲ್ಲವೆ ಮೂತ್ರಜನಕಾಂಗ ಮತ್ತು ಪಿತ್ತಜನಕಾಂಗಕ್ಕೆ ಹಾನಿಯನ್ನು ಉಂಟುಮಾಡಬಲ್ಲವು.
ಜನಪ್ರಿಯ ಆರೋಗ್ಯ ಉತ್ಪನ್ನಗಳು ಸಹ ಸಂಶಯಾಸ್ಪದವಾಗಿವೆ. “ವಿಟಮಿನ್ ಪೂರಕಗಳಿಗಾಗಿರುವ ಈ ಗೀಳು ತುಂಬ ಅಪಾಯಕಾರಿಯಾಗಿದೆ,” ಎಂಬುದಾಗಿ ಬ್ರೆಸಿಲಿಯನ್ ವೈದ್ಯಕೀಯ ಒಕ್ಕೂಟದ ಅಧ್ಯಕ್ಷರಾದ ಡಾ. ಎಫ್ರಾಯಿಮ್ ಓಲ್ಶೇವರ್ ಎಚ್ಚರಿಸುತ್ತಾರೆ. “ಜನಸಾಮಾನ್ಯರು ಸ್ವತಃ ಚಿಕಿತ್ಸೆ ನೀಡಿಕೊಳ್ಳುತ್ತಿದ್ದಾರೆ ಮಾತ್ರವಲ್ಲ, ಮಾಹಿತಿಯಿಲ್ಲದ ಕೆಲವು ವೈದ್ಯರು ಸಹ, ಒಳಗೊಂಡಿರುವ ಅಪಾಯಗಳನ್ನು ಕಡೆಗಣಿಸುತ್ತಾ ಸಂದೇಹಾಸ್ಪದವಾದ ಔಷಧಗಳನ್ನು ಸೇವಿಸುವಂತೆ ನಿರ್ದೇಶಿಸುತ್ತಿದ್ದಾರೆ.” ಆದರೆ ಮತ್ತೊಬ್ಬ ವೈದ್ಯನು, ನಿರ್ದಿಷ್ಟ ಕಾಯಿಲೆಗಳನ್ನು ಮತ್ತು ನ್ಯೂನತೆಗಳನ್ನು ಗುಣಪಡಿಸುವುದರಲ್ಲಿ, ಸೂಕ್ತ ಪ್ರಮಾಣದ ವಿಟಮಿನ್ ಪೂರಕಗಳು ಅಗತ್ಯವಾಗಿರಬಹುದೆಂದು ಹೇಳುತ್ತಾನೆ.
ಸುರಕ್ಷಿತವಾದ ಸ್ವ-ಪರೀಕ್ಷೆ—ಹೇಗೆ?
ಅಸೌಖ್ಯವೆನಿಸಿದಾಗಲೆಲ್ಲ ನಾವು ಒಬ್ಬ ವೈದ್ಯನನ್ನು ಕಾಣಲು ಸಾಧ್ಯವಿಲ್ಲವಾದುದರಿಂದ, ಆರೋಗ್ಯದ ಕುರಿತಾದ ಶಿಕ್ಷಣ ಮತ್ತು ನ್ಯಾಯಯುತವಾದ ಸ್ವ-ಚಿಕಿತ್ಸೆಯು ನಮ್ಮ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿರಬಲ್ಲದು. ಹಾಗಿದ್ದರೂ, ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮೊದಲು, ಸರಿಯಾದ ಮತ್ತು ಪರಿಣಾಮಕಾರಿಯಾದ ಸ್ವ-ಪರೀಕ್ಷೆಯು ಅತ್ಯಾವಶ್ಯಕವಾಗಿದೆ. ವೈದ್ಯನೊಬ್ಬನು ಹತ್ತಿರವಿರದಿದ್ದಲ್ಲಿ ಇಲ್ಲವೆ ಒಬ್ಬನ ಬಳಿಗೆ ಹೋಗಲು ನಿಮಗೆ ಸಾಧ್ಯವಿರದಿದ್ದಲ್ಲಿ, ಸಮರ್ಪಕವಾದ ಒಂದು ವೈದ್ಯಕೀಯ ರೆಫರೆನ್ಸ್ ಪುಸ್ತಕವನ್ನು ಪರಾಮರ್ಶಿಸುವುದು, ಸರಿಯಾದ ರೋಗನಿರ್ಣಯವನ್ನು ಮಾಡುವಂತೆ ನಿಮಗೆ ಸಹಾಯ ನೀಡಬಹುದು. ಉದಾಹರಣೆಗೆ, ಅಮೆರಿಕನ್ ವೈದ್ಯಕೀಯ ಒಕ್ಕೂಟವು, ಕೌಟುಂಬಿಕ ವೈದ್ಯಕೀಯ ಕೈಪಿಡಿಯನ್ನು ಪ್ರಕಟಿಸುತ್ತದೆ. ಅದರಲ್ಲಿ ರೋಗಲಕ್ಷಣ ಚಾರ್ಟುಗಳ, 183 ಪುಟದ ಭಾಗವು ಸೇರಿರುತ್ತದೆ. ಇವು ರೋಗಿಗೆ ಹೌದು ಅಥವಾ ಇಲ್ಲವೆಂದು ಉತ್ತರಿಸಸಾಧ್ಯವಿರುವ ಪ್ರಶ್ನೆಗಳ ಸರಣಿಯನ್ನು ಒಡ್ಡುತ್ತವೆ. ಈ ವಿಧಾನದಿಂದ, ಅನೇಕ ವೇಳೆ ಒಂದು ಸಮಸ್ಯೆಯನ್ನು ಗುರುತಿಸಸಾಧ್ಯವಿದೆ.
ಆದರೆ ವೈದ್ಯರ ಪಾತ್ರದ ಕುರಿತೇನು? ನಾವು ವೃತ್ತಿಪರ ಸಹಾಯವನ್ನು ಯಾವಾಗ ಕೋರಬೇಕು? ನಮ್ಮ ಆರೋಗ್ಯದ ಕುರಿತು ಬಹಳ ಚಿಂತಿತರೂ ಇಲ್ಲವೆ ಅಲಕ್ಷಿಸುವವರಾಗಿರುವುದರ ಅತಿರೇಕ ಮನೋಭಾವಗಳನ್ನು ನಾವು ಹೇಗೆ ದೂರವಿರಿಸಸಾಧ್ಯವಿದೆ? ಅನಾರೋಗ್ಯ ಮತ್ತು ಮನೋಶಾರೀರಿಕ ಕಾಯಿಲೆಯು ಪ್ರಚಲಿತವಾಗಿರುವ ಒಂದು ಲೋಕದಲ್ಲಿ, ನಾವು ಒಂದಿಷ್ಟು ಉತ್ತಮ ಆರೋಗ್ಯವನ್ನು ಹೇಗೆ ಅನುಭವಿಸಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
a ಅನೇಕ ದೇಶಗಳಲ್ಲಿ, ವೈದ್ಯರು ಬರೆದುಕೊಡುವ ಔಷಧಗಳನ್ನು “ನೇರವಾಗಿ ಬಳಕೆದಾರನಿಗೆ” ಎಂಬುದಾಗಿ ಜಾಹೀರು ಪಡಿಸುವ ಸಂಗತಿಯು, ಇತ್ತೀಚೆಗೆ ಒಮ್ಮಿಂದೊಮ್ಮೆಲೇ ವೃದ್ಧಿಸಿದೆ. ಇದು, ಅನೇಕ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳಿಂದ ಬಂದ ಟೀಕೆಯ ಎದುರಿನಲ್ಲೂ ವೃದ್ಧಿಸಿದೆ.
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ರೋಗಿಯ ವೈದ್ಯಕೀಯ ಹಿನ್ನೆಲೆಯನ್ನು—ಹೆಚ್ಚಿನ ವಿದ್ಯಮಾನಗಳಲ್ಲಿ, ಅವನಿಗೆ ಅಸ್ತವ್ಯಸ್ತವೂ ಒತ್ತಡಪೂರ್ಣವೂ ಮತ್ತು ಅಹಿತಕರವೂ ಆದ ಜೀವನಶೈಲಿಯನ್ನು—ತಿಳಿದುಕೊಳ್ಳಲು ಯಾವ ಪ್ರಯತ್ನವನ್ನೂ ಮಾಡಲಾಗುವುದಿಲ್ಲ.” —ಡಾ. ಆಂಡ್ರೇ ಫೈನ್ಗಾಲ್ಡ್
[ಪುಟ 4 ರಲ್ಲಿರುವ ಚೌಕ]
ಮನೆಯಲ್ಲಿ ತಯಾರಿಸುವ ಗಿಡಮೂಲಿಕೆಯ ಮದ್ದುಗಳು
ಸಾವಿರಾರು ವರ್ಷಗಳಿಂದ, ಅನೇಕ ಸಂಸ್ಕೃತಿಯ ಜನರು, ಹೊಲಗಳು ಮತ್ತು ಕಾಡುಗಳಲ್ಲಿ ಕಂಡುಕೊಳ್ಳಲ್ಪಡುವ ಗಿಡಗಳನ್ನು ಉಪಯೋಗಿಸುತ್ತಾ, ತಮ್ಮ ರೋಗಗಳನ್ನು ಗಿಡಮೂಲಿಕೆಯ ಮದ್ದುಗಳಿಂದ ಉಪಚರಿಸಿದ್ದಾರೆ. ಅನೇಕ ಆಧುನಿಕ ಔಷಧಗಳು ಸಹ ಗಿಡಗಳಿಂದ ಮಾಡಲ್ಪಟ್ಟಿವೆ. ಉದಾಹರಣೆಗೆ, ಡಿಜಿಟೇಲಿಸ್ (ಗಂಟೆ ಹೂಗಿಡ) ಗಿಡ, ಇದನ್ನು ಹೃದ್ರೋಗದ ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ. ಹೀಗೆ, ಗ್ರೇಟ್ ಬ್ರಿಟನ್ನಲ್ಲಿರುವ ವೈದ್ಯಕೀಯ ಮೂಲಿಕೆತಜ್ಞರ ರಾಷ್ಟ್ರೀಯ ಸಂಸ್ಥೆಯ ಒಬ್ಬ ಸದಸ್ಯೆಯಾಗಿರುವ ಪೆನೆಲಪಿ ಓಡೀ ತಮ್ಮ ಪುಸ್ತಕದಲ್ಲಿ ಹೇಳುವುದೇನೆಂದರೆ, “ಸಾಧಾರಣ ಕೆಮ್ಮು, ಶೀತ, ಮತ್ತು ತಲೆನೋವುಗಳಿಂದ ಹಿಡಿದು, ತ್ವಚೆ, ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮತ್ತು ಮಕ್ಕಳ ಕಾಯಿಲೆಗಳಿಗಾಗಿರುವ ವಿಶೇಷ ಚಿಕಿತ್ಸೆಗಳ ವರೆಗೆ, ಸಾಮಾನ್ಯ ರೋಗಗಳನ್ನು ನಿವಾರಿಸಲು ಸಹಾಯಮಾಡುವ, ಸುರಕ್ಷಿತವಾದ 250ಕ್ಕಿಂತಲೂ ಹೆಚ್ಚಿನ ಚಿಕಿತ್ಸೆಗಳು ಲಭ್ಯವಿವೆ.”
ಅವರು ಬರೆಯುವುದು: “ಗಿಡಮೂಲಿಕಾಶಾಸ್ತ್ರವು ಯಾವಾಗಲೂ ‘ಜನಸಾಮಾನ್ಯರ ಔಷಧ’ವೆಂದು ಪರಿಗಣಿಸಲ್ಪಟ್ಟಿದೆ—ಮನೆಯಲ್ಲಿ ಚಿಕ್ಕಪುಟ್ಟ ಕಾಯಿಲೆಗಳಿಗೆ ಇಲ್ಲವೆ ಅಸ್ಥಿಗತ ಮತ್ತು ತೀವ್ರವಾದ ಪರಿಸ್ಥಿತಿಗಳಿಗೆ ವೃತ್ತಿಪರರಿಂದ ಸೂಚಿಸಲ್ಪಡುವ ಹೆಚ್ಚು ತೀಕ್ಷ್ಣವಾದ ಪರಿಹಾರಗಳಿಗೆ ಸಂಪೂರಕವಾಗಿ ಉಪಯೋಗಿಸಸಾಧ್ಯವಿರುವ ಸರಳವಾದ ಪರಿಹಾರಗಳು.” ಅವರು ಮುಂದುವರಿಸುವುದು: “ಹೆಚ್ಚಿನ ಗಿಡಮೂಲಿಕೆಗಳು ಬಹಳಷ್ಟು ಸುರಕ್ಷಿತವಾಗಿರುವುದಾದರೂ, ಅವುಗಳನ್ನು ಜಾಗರೂಕವಾಗಿ ಬಳಸಬೇಕು. ತಿಳಿಸಲ್ಪಟ್ಟ ಪ್ರಮಾಣವನ್ನು ಮೀರಿ ಹೋಗಬೇಡಿರಿ ಇಲ್ಲವೆ ಪರಿಸ್ಥಿತಿಗಳು ಹಾಗೆಯೇ ಇದ್ದು, ಹೆಚ್ಚು ಕೆಡುತ್ತಿರುವುದಾದರೆ, ಇಲ್ಲವೆ ನಿಜವಾದ ರೋಗನಿರ್ಣಯವು ಸಂದೇಹಾಸ್ಪದವಾಗಿರುವುದಾದರೆ, ಮನೆಯ ಪರಿಹಾರಮದ್ದುಗಳನ್ನು ಮುಂದುವರಿಸಬೇಡಿರಿ.”—ದ ಕಂಪ್ಲೀಟ್ ಮೆಡಿಸಿನಲ್ ಹರ್ಬಲ್.