ಹಾವುಗಳ ಕುರಿತು ಸಾಮಾನ್ಯ ತಪ್ಪಭಿಪ್ರಾಯಗಳು
ಭಾರತದ ಎಚ್ಚರ! ಸುದ್ದಿಗಾರರಿಂದ
ಆ ಲೋಳೆಯಾದ ನಾಗರಹಾವು ಆ ಹುಡುಗಿಯೆಡೆಗೆ ಸರಸರನೆ ಹರಿದುಕೊಂಡು ಹೋಯಿತು. ಅವಳು ಮುಡಿದಿದ್ದ ಮಲ್ಲಿಗೆ ಹೂವಿನ ಪರಿಮಳವು ಅದನ್ನು ಆಕರ್ಷಿಸಿತು. ಅದರ ಉದ್ದನೆಯ ಶರೀರವು, ಸಮುದ್ರದ ಅಲೆಯಂತೆ ಚಲಿಸುತ್ತಿತ್ತು. ಅದು ತನ್ನ ವಶೀಕರಣದ ನೆಟ್ಟನೋಟದಿಂದ ಅವಳನ್ನು ಮಂತ್ರಮುಗ್ಧಳನ್ನಾಗಿ ಮಾಡಿದಾಗ, ಅದರ ಹಣೆಯಲ್ಲಿ ಹೊಳಪಿನ ಮಣಿಯಂತಹ ಹೊಳಪನ್ನು ಅವಳು ಕಂಡಳು. ಇದ್ದಕ್ಕಿದ್ದಂತೆ, ಅದು ಗಾಳಿಯಲ್ಲಿ ಮುನ್ನುಗ್ಗಿ, ಆ ಹುಡುಗಿಯ ಕೈಗೆ ತನ್ನ ವಿಷದ ಹಲ್ಲುಗಳಿಂದ ಕಚ್ಚಿತು.
ಇದು ನಿಜವೊ? ಅಥವಾ ತಪ್ಪಭಿಪ್ರಾಯವೊ? ಈ ಮೇಲೆ ಕೊಡಲ್ಪಟ್ಟಿರುವಂತಹ ಇಡೀ ಚಿತ್ರಣವು ತಪ್ಪಾಗಿದೆ, ಸಾಮಾನ್ಯವಾಗಿ ಹೇಳಲ್ಪಡುವ ತಪ್ಪಭಿಪ್ರಾಯಗಳ ಮೇಲಾಧಾರಿತವಾಗಿದೆ. ಈ ತಪ್ಪಭಿಪ್ರಾಯಗಳಲ್ಲಿ ಕೆಲವನ್ನು ಪರಿಗಣಿಸಿರಿ.
1. ಮಲ್ಲಿಗೆ, ಶ್ರೀಗಂಧದ ಮರ, ಮತ್ತು ಇತರ ಪರಿಮಳಗಳಿಗೆ ಹಾವುಗಳು ಆಕರ್ಷಿತವಾಗುತ್ತವೆ. ತಪ್ಪು. ಪರಿಮಳವು ಕೀಟಗಳನ್ನು ಆಕರ್ಷಿಸುತ್ತದೆ, ಕೀಟಗಳು ಕಪ್ಪೆಗಳನ್ನು ಆಕರ್ಷಿಸುತ್ತವೆ, ಕಪ್ಪೆಗಳು ಹಾವಿನ ಆಹಾರವಾಗಿರುವುದರಿಂದ, ಇವು ಹಾವುಗಳನ್ನು ಆಕರ್ಷಿಸುತ್ತವೆ.
2. ಹಾವುಗಳ ಶರೀರವು ಸಮುದ್ರದ ಅಲೆಗಳಂತೆ ಲಂಬವಾಗಿ ಚಲಿಸುತ್ತದೆ. ತಪ್ಪು. ಹಾವುಗಳು ದೊಡ್ಡ ಕಲ್ಲುಗಳ ಮೇಲೆ ಹರಿದುಹೋಗುತ್ತಿರುವಾಗ ಹೀಗೆ ಅನಿಸುತ್ತದೆ. ಸಾಮಾನ್ಯವಾಗಿ ನಾಗರಹಾವುಗಳು ಹಾಗೂ ನೆಲದ ಮೇಲೆ ಜೀವಿಸುವ ಇನ್ನಿತರ ಹಾವುಗಳು, ನೆಲದ ಮೇಲೆ ನೇರವಾಗಿ, ಅಂದರೆ ಸಮತಲವಾಗಿ ಚಲಿಸುತ್ತವೆ. ಅವು ತಮ್ಮ ದೇಹದ ಮುಂಭಾಗವನ್ನು ಸ್ವಲ್ಪ ಮುಂದೆ ಚಾಚಿ, ಹಿಂಭಾಗವನ್ನು ಎಳೆದುಕೊಳ್ಳುತ್ತವೆ, ಅಥವಾ ನೆಲದ ಮೇಲಿರುವ ಯಾವುದೇ ವಸ್ತುವಿನ ಸಹಾಯದಿಂದ ಅದು ಪಕ್ಕಕ್ಕೆ ಚಲಿಸಿ, ಮುಂದೆ ಸಾಗುತ್ತದೆ. ಅದು S ಅಕ್ಷರದಂತೆ ಕಾಣುತ್ತದೆ.
3. ಕೆಲವು ಹಾವುಗಳಿಗೆ ಹಣೆಯಲ್ಲಿ ಅಮೂಲ್ಯ ಮಣಿಯಿದೆ. ತಪ್ಪು. ಇದು ಒಂದು ದಂತಕಥೆಯಾಗಿದೆ. ಪುರಾತನ ಭಾರತದಲ್ಲಿ ಮಹಾನ್ ವ್ಯಕ್ತಿಗಳು ನಾಗರಹಾವುಗಳಿಂದ ಸಂರಕ್ಷಿಸಲ್ಪಟ್ಟಿದ್ದರು ಎಂಬುದು ಸಹ ದಂತಕಥೆಯಾಗಿದೆ.
4. ನಾಗರಹಾವುಗಳು ತಮ್ಮ ಬೇಟೆಯನ್ನು ವಶೀಕರಣಕ್ಕೊಳಪಡಿಸುತ್ತವೆ. ತಪ್ಪು. ಹಾವುಗಳು ಭಯಗೊಂಡಾಗ ಸಾಮಾನ್ಯವಾಗಿ ಒಂದೇ ಕಡೆ ದಿಟ್ಟಿಸುತ್ತವೆ. ಆದುದರಿಂದ ಮಾನವರು ಒಂದು ಹಾವನ್ನು ಎದುರಿಸಿದಾಗ, ಅದು ನೆಟ್ಟನೋಟದಿಂದ, ಅಥವಾ ವಶೀಕರಿಸುವಂತಹ ದಿಟ್ಟನೋಟದಿಂದ ತಮ್ಮನ್ನೇ ನೋಡುತ್ತಿರುವಂತಹ ಅನಿಸಿಕೆ ಅವರಿಗಾಗುತ್ತದೆ. ಆದರೂ, ಹಾವುಗಳು ತಮ್ಮ ಬೇಟೆಯನ್ನು ಹಿಡಿಯಲು ಈ ವಿಧಾನವನ್ನು ಉಪಯೋಗಿಸುವುದಿಲ್ಲ.
5. ನಾಗರಹಾವುಗಳು ಆಹಾರಪ್ರಾಣಿಯನ್ನು ಹಿಡಿಯುವಾಗ ಅವುಗಳ ಮೇಲೇ ಬೀಳುತ್ತವೆ. ತಪ್ಪು. ಆಹಾರವನ್ನು ಹಿಡಿಯಲಿಕ್ಕಾಗಿ ನಾಗರಹಾವು, ತನ್ನ ದೇಹದ ಮುಂಭಾಗವನ್ನು ಮುಂದೆ ಚಾಚುತ್ತದೆ, ಆದರೆ ದೇಹಕ್ಕೆ ಆಸರೆಯನ್ನು ಒದಗಿಸಲಿಕ್ಕಾಗಿ ಅದರ ದೇಹದ ಹೆಚ್ಚಿನ ಭಾಗವು ನೆಲದ ಮೇಲೆಯೇ ಇರುತ್ತದೆ. ಹೆಚ್ಚೆಂದರೆ, ದೇಹದ ಮೂರನೇ ಒಂದು ಭಾಗವು ಮಾತ್ರ ಮೇಲೆತ್ತಲ್ಪಟ್ಟು, ತನ್ನ ಬೇಟೆಯ ಮೇಲೆ ಆಕ್ರಮಣಮಾಡುತ್ತದೆ.
6. ನಾಗರಹಾವುಗಳನ್ನೂ ಸೇರಿಸಿ ಬೇರೆ ಹಾವುಗಳ ಚರ್ಮವು ಲೋಳೆಯಾಗಿರುತ್ತದೆ ಮತ್ತು ಯಾವಾಗಲೂ ತಣ್ಣಗಿರುತ್ತದೆ. ತಪ್ಪು. ಹಾವುಗಳ ಚರ್ಮದ ಮೇಲೆ ಒತ್ತೊತ್ತಾಗಿರುವ ಪೊರೆಗಳಿದ್ದು, ಅದು ಒಣಗಿರುತ್ತದೆ ಮತ್ತು ಮೃದುವಾದ ಚರ್ಮದಂತಿರುತ್ತದೆ. ಹಾವುಗಳು ಶೀತರಕ್ತ ಜೀವಿಗಳಾಗಿವೆ; ಅವುಗಳ ದೇಹದ ಉಷ್ಣತೆಯು ಬಾಹ್ಯ ಉಷ್ಣತೆಯಲ್ಲಿನ ಬದಲಾವಣೆಯೊಂದಿಗೆ ಪ್ರತಿಕ್ರಿಯಿಸುತ್ತದೆ.
7. ನಾಗರಹಾವುಗಳಿಗೆ ಕಿವಿಕೇಳಿಸುವುದಿಲ್ಲ. ತಪ್ಪು. ಹೀಗೆಂದು ಅನೇಕರು ಅಪಾರ್ಥಮಾಡಿಕೊಳ್ಳುತ್ತಾರೆ. ನೆಲದಲ್ಲಾಗುವ ಕಂಪನಗಳು, ಹಾವುಗಳ ದೇಹದ ಮೂಲಕ ಅವುಗಳಿಗೆ ಕೇಳಿಸುತ್ತವೆ ಎಂದು ಅವರು ನೆನಸುತ್ತಾರೆ. ಬೈಬಲು ಕೀರ್ತನೆ 58:4, 5ರಲ್ಲಿ (NW), ನಾಗರಹಾವುಗಳಿಗೆ ಕಿವಿಕೇಳಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ನಾಗರಹಾವುಗಳು ಗಾಳಿಯ ಮೂಲಕ ಸಾಗಿಸಲ್ಪಡುವ ಧ್ವನಿಗಳನ್ನು ಕೇಳಿಸಿಕೊಳ್ಳಬಲ್ಲವು ಮತ್ತು ಹಾವಾಡಿಗರ ಪುಂಗಿಯ ನಾದಕ್ಕೆ ಅವು ಪ್ರತಿಕ್ರಿಯಿಸುತ್ತವೆ ಎಂದು ಇತ್ತೀಚೆಗೆ ನಡೆಸಲ್ಪಟ್ಟ ಸಂಶೋಧನೆಯು ತೋರಿಸಿದೆ.—1993, ನವೆಂಬರ್ 8ರ ಎಚ್ಚರ! ಪತ್ರಿಕೆಯ, 19ನೆಯ ಪುಟವನ್ನು ಸಹ ನೋಡಿರಿ.
[ಪುಟ 29 ರಲ್ಲಿರುವ ಚಿತ್ರ ಕೃಪೆ]
ಮೇಲಿರುವ ಹಾವು: Animals/Jim Harter/Dover Publications, Inc.